ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮರುಬಳಕೆಯ ಮೆರುಗು!

ಹವ್ಯಾಸ
Last Updated 9 ಜುಲೈ 2018, 20:06 IST
ಅಕ್ಷರ ಗಾತ್ರ

ಹಳೆ ಚಮಚ, ತಟ್ಟೆಗಳು ಬಣ್ಣಗಳಿಂದ ಹೊಸ ರೂಪದಲ್ಲಿ ಗೋಡೆಯನ್ನು ಅಲಂಕರಿಸಿವೆ. ಮೊಬೈಲ್‌ ಪೌಚ್‌ಗೆ ಹೊಸ ವಿನ್ಯಾಸದಿಂದ ಮೆರುಗು ಬಂದಿದೆ. ಬಳಸಲು ಯೋಗ್ಯವಲ್ಲದ ತವಾ ಪ್ರಕೃತಿಯ ಮೈಸೊಬಗಿನಲ್ಲಿ ಮೈದಳೆದು, ಸುಂದರ ಗಡಿಯಾರವಾಗಿ ನೋಡುಗರು ಹುಬ್ಬೇರಿಸಿ ನೋಡುವಂತಾಗಿದೆ!

ಮನೆಯಲ್ಲಿ ಬಳಸಿ ಸವೆದು ಹೋದ ವಸ್ತುಗಳನ್ನು ಬಿಸಾಕುವುದು ಸಾಮಾನ್ಯ. ಕೆಲ ವಸ್ತುಗಳ ಹಿಂದೆ ನೆನಪಿಸಿರುತ್ತದೆ. ಅದರ ಜೊತೆ ಭಾವನಾತ್ಮಕ ನಂಟು ಇರುತ್ತದೆ. ಅಂತಹ ವಸ್ತುಗಳನ್ನು ಹಾಳಾಗಿದ್ದರೂ ಎಸೆಯಲು ಮನಸೇ ಬರುವುದಿಲ್ಲ. ಹಳೆಯದಾದ, ಬಳಸಲು ಯೋಗ್ಯವಲ್ಲದ ವಸ್ತುಗಳನ್ನು ಮರುಬಳಕೆ ಮಾಡಿ ಕಣ್ಮನ ಸೆಳೆಯುವಂತೆ ಪೂಜಾ ಗುಪ್ತ ಹೊಸ ರೂಪ ನೀಡುತ್ತಾರೆ. ಕಸದಿಂದ ರಸ ಎಂಬುದನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನು ನಮ್ಮೆಲ್ಲರಿಗೂ ಪರಿಚಯಿಸುತ್ತಿದ್ದಾರೆ ಅವರು.

ಇವರ ಕೈಚಳಕದಿಂದಾಗಿ ಹತ್ತು ವರ್ಷಗಳಿಂದ ಬಳಸುತ್ತಿರುವ ಹಳೆ ಹೊಲಿಗೆ ಯಂತ್ರವು ಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ. ಒಡೆದು ಹೋದ ಪಿಂಗಾಣಿ ಬಟ್ಟಲು, ತಟ್ಟೆ ಹೀಗೆ ಪ್ರತಿಯೊಂದು ವಸ್ತುವೂ ಮತ್ತೊಂದು ರೂಪ ಪಡೆದು ಅದರೊಂದಿಗಿನ ನಮ್ಮ ನೆನಪುಗಳು ಸದಾ ಹಚ್ಚ ಹಸಿರಾಗಿ ಉಳಿಯುವಂತೆ ಮಾಡುತ್ತಿವೆ.

ಚಿಕ್ಕಂದಿನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಪೂಜಾ ಅವರು ವಿಭಿನ್ನವಾಗಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊತ್ತಿದ್ದವರು. ಸ್ವ ಪ್ರಯತ್ನದಿಂದಲೇ ಹಳೆಯದಾದ ವಸ್ತುಗಳಿಗೆ ಕಲಾತ್ಮಕ ರೂಪ ನೀಡುವ ಭಿನ್ನವಾಗಿ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ಮೂಲತಃ ರಾಜಸ್ಥಾನದ ಜೈಪುರದವರಾದ ಇವರು ಎಂಜಿನಿಯರಿಂಗ್‌ ಮತ್ತು ಎಂಬಿಎ ಪದವೀಧರೆ. ಆದರೆ ಈಗ ಇವರ ವೃತ್ತಿ ಮತ್ತು ಪ್ರವೃತ್ತಿ ಚಿತ್ರಕಲೆಯೇ ಆಗಿದೆ. ಯಾವುದೇ ವಸ್ತು ಸಿಕ್ಕರೂ ಅದರ ಮೇಲೆ ಚಿತ್ರ ರಚಿಸುವುದು ಅವರ ಹವ್ಯಾಸವಾಗಿದೆ.

‘ಆರ್ಟ್‌ ಸ್ಕೂಲ್‌ ಆಫ್‌ ಪ್ಯಾರಿಸ್‌ನ ಶಿಕ್ಷಕರಿಂದ ಪರಿಚಯವಾದ ಈ ಕಲೆಯನ್ನು ಸ್ವ ಆಸಕ್ತಿಯಿಂದಲೇ ಕಲಿತೆ. ನಾನು ಯಾವ ರೀತಿಯ ಚಿತ್ರ ಬಿಡಿಸಬೇಕು ಎಂಬುದರ ಬಗ್ಗೆ ಮೊದಲೇ ಯೋಜನೆ ಹಾಕಿಕೊಂಡಿರುವುದಿಲ್ಲ. ವಸ್ತುವನ್ನು ನೋಡಿ ಆ ಕ್ಷಣಕ್ಕೆ ನನಗೆ ಅನ್ನಿಸಿದ್ದನ್ನು ಚಿತ್ರವಾಗಿ ಮೂಡಿಸುತ್ತೇನಷ್ಟೆ’ ಎನ್ನುತ್ತಾರೆ ಪೂಜಾ.

ಪೂಜಾ ಗುಪ್ತ

‘ನಾನು ಚಿತ್ರ ಬಿಡಿಸಲು ಸಮಯದ ಮಿತಿ ಹಾಕಿಕೊಳ್ಳುವುದಿಲ್ಲ. ವಸ್ತುವಿನ ಗಾತ್ರ, ಹಾಗೂ ಚಿತ್ರದ ಅನುಗುಣವಾಗಿ ಸಮಯ ತೆಗೆದುಕೊಳ್ಳುತ್ತೇನೆ. ಆಕ್ರೆಲಿಕ್‌ ಬಣ್ಣ, ಫೆವಿಕಲ್‌, ಕ್ಯಾನ್ವಸ್‌ ಬಳಸುತ್ತೇನೆ. ಚಿತ್ರ ಬಿಡಿಸಿದ ನಂತರ ಅದು ಒಣಗಲು ಸಮಯ ಬೇಕಾಗುತ್ತದೆ. ಅದಕ್ಕಾಗಿ ಸ್ವಲ್ಪ ಸಮಯವನ್ನು ಕಾದಿರಿಸುತ್ತೇನೆ. 4 ವರ್ಷಗಳಿಂದ ಬೆಂಗಳೂರು, ಕೋಲ್ಕತ್ತ, ದೆಹಲಿ ಮತ್ತು ಮುಂಬೈನಲ್ಲಿ ಈ ಕಲೆಗೆ ಸಂಬಂಧಿಸಿದಂತೆ ಕಾರ್ಯಾಗಾರ ನಡೆಸುತ್ತಿದ್ದೇನೆ. ಎರಡು ದಿನಗಳ ಕಾರ್ಯಾಗಾರದಲ್ಲಿ ಈ ಕಲೆಯನ್ನು ಸಂಪೂರ್ಣವಾಗಿ ಕಲಿಯಲು ಸಾಧ್ಯವಿಲ್ಲ. ಇದಕ್ಕೆ ತನ್ನದೇ ಆದ ಶ್ರದ್ಧೆಯ ಅಗತ್ಯವಿದೆ. ಕಾರ್ಯಾಗಾರದಲ್ಲಿ ಈ ಕಲೆಯ ಕುರಿತು ಕೆಲವು ಪ್ರಮುಖ ಸಲಹೆಗಳನ್ನು ನೀಡುತ್ತೇನೆ. ಇದರಿಂದಾಗಿ ಕಲಿಯುವವರಿಗೂ ಈ ಕಲೆಯ ಬಗ್ಗೆ ಆಸಕ್ತಿ ಮೂಡುತ್ತದೆ’ ಎಂದು ವಿವರಿಸುತ್ತಾರೆ.

ಫೇಸ್‌ಬುಕ್‌ ಕೊಂಡಿ:https://www.facebook.com/dhandhania.pooja.g

ಸಂಪರ್ಕ: 97392 93993

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT