ಅದೇನೋ ಪಕ್ಕಾ ಸಿಮೆಂಟ್ ರಸ್ತೆ. ಆದರೆ, ತೀರಾ ಇಕ್ಕಟ್ಟು. ಎರಡೂ ಬದಿ ನೀರಿನ ಹೊಂಡಗಳಿದ್ದ ಆ ದಾರಿಯಲ್ಲಿ ಒಂದು ಸೈಕಲ್‍ಗೆ ಜಾಗ ಬಿಡಬೇಕೆಂದರೆ ಪಕ್ಕದ ಹೊಂಡದಲ್ಲಿ ಬೀಳುವ ಅಪಾಯ! ಇಕ್ಕಟ್ಟಾದ ಬೀದಿಗಳಲ್ಲಿ ಅಷ್ಟೇನೂ ಜನರು ಕಾಣುತ್ತಿರಲಿಲ್ಲ. ಆಗಾಗ್ಗೆ ಗರಗಸ ಹಾಗೂ ಉಳಿ ಸದ್ದು ಕೇಳುತ್ತಿದ್ದುದನ್ನು ಬಿಟ್ಟರೆ ಉಳಿದಂತೆ ಮೌನ.

‘ಅದೆಷ್ಟೋ ವೀಣೆ, ತಾನ್ಪುರ, ಸಿತಾರ್, ಸಂತೂರ್‌ಗಳು ಈ ರಸ್ತೆಯ ಮೂಲಕ ದೇಶದ ಮೂಲೆ ಮೂಲೆಗೂ ಹೋಗಿವೆ, ಗೊತ್ತೇ’ ಎಂದು ಅನುಪಮ್ ಪಾಲ್ ಕೇಳಿದರು. ಜತೆಗಿದ್ದ ಶಾಮ್ ಬಾರವಿ, ‘ಅದೆಷ್ಟೋ ಸಂಗೀತಗಾರರು ದೇಶ- ವಿದೇಶದಲ್ಲಿ ಖ್ಯಾತಿ ಪಡೆಯಲು ಈ ಹಳ್ಳಿಯಲ್ಲಿ ತಯಾರಾದ ಸಂಗೀತ ವಾದ್ಯಗಳೇ ಕಾರಣ ಎನ್ನುವುದೂ ಗೊತ್ತೇ?’ ಎಂದು ದನಿಗೂಡಿಸಿದರು. ಇಷ್ಟು ಸಣ್ಣ ಹಳ್ಳಿಯು ದೇಶದ ಪ್ರಖ್ಯಾತ ವಾದಕರಿಗೆ ಸಂಗೀತ ವಾದ್ಯಗಳನ್ನು ಕೊಟ್ಟಿರುವ ಕುರಿತು ಚಕಿತಗೊಳ್ಳುತ್ತಾ ಮುಂದೆ ಸಾಗುತ್ತಲೇ ಇದ್ದೆವು.

ವಾಸ್ತವವಾಗಿ ನಾವು ಹೋಗಿದ್ದು ಸೋರೆಕಾಯಿ ಬೆಳೆ ನೋಡಲು! ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆ ಪಾಶ್ಪುರ ಗ್ರಾಮದಲ್ಲಿ ಶಾಮ್ ಬಾರವಿ ಕುಟುಂಬವು ಮೂರು ತಲೆಮಾರುಗಳಿಂದ ಸೋರೆಕಾಯಿ ಬೆಳೆಯುತ್ತಿದೆ. ಕೃಷಿ ವಿಜ್ಞಾನಿ ಅನುಪಮ್ ಪಾಲ್ ಜತೆಗೂಡಿ ಶಾಮ್ ಹೊಲಕ್ಕೆ ತೆರಳಿ ಅಲ್ಲಿನ ಸೋರೆಕಾಯಿಯ ಅಗಾಧ ಗಾತ್ರ ನೋಡಿ ಅಚ್ಚರಿಪಟ್ಟು, ‘ಇದರ ಮುಂದಿನ ಗತಿ ಏನು’ ಎಂದು ಪ್ರಶ‍್ನಿಸಿದೆವು. ‘ಇಲ್ಲಿಂದ ಎರಡು ತಾಸು ದೂರದ ದಾದಪುರ್ ಗ್ರಾಮದಲ್ಲಿ ಇವು ಬಗೆಬಗೆಯ ವಾದ್ಯಗಳಾಗುತ್ತವೆ’ ಎಂದು ಶಾಮ್ ಉತ್ತರಿಸಿದರು. ಅವರನ್ನೂ ಕರೆದುಕೊಂಡು ಹೌರಾ ಜಿಲ್ಲೆಯ ದಾದಪುರ್ ತಲುಪಿದಾಗ ಸಂಜೆಯಾಗಿತ್ತು. ಕಿರುದಾರಿಯಲ್ಲಿ ಉದ್ದಕ್ಕೂ ನಡೆದು ಸುಕಾಂತೊ ಹಲ್ದಾರ್ ಮನೆ ಕಂ ವರ್ಕ್‌ಶಾಪ್ ತಲುಪಿದಾಗ ಬೆರಗು ಮೂಡಿಸುವ ಹೊಸ ಲೋಕವೊಂದು ಕಣ್ಣೆದುರು ನಿಂತಿತ್ತು.

ಅಸ್ತಿಪಂಜರದಂತೆ ಇಳಿಬಿದ್ದ ವಿದ್ಯುತ್ ತಂತಿಗಳು. ಅದಕ್ಕೇ ಜೋಡಿಸಿದ ಟ್ಯೂಬ್‍ಲೈಟು, ಹಳೆಯ ರೇಡಿಯೊ ಸೆಟ್ ಜತೆಗೆ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದ ವಿವಿಧ ವಾದ್ಯ ಪರಿಕರಗಳು. ಇದೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ತನ್ಮಯರಾಗಿ ಕೆಲಸ ಮಾಡುತ್ತಿದ್ದ ಕುಶಲಕರ್ಮಿಗಳು. ಮಂದ ಬೆಳಕಿನಲ್ಲಿ ಈ ಸಣ್ಣ ಜಾಗದಲ್ಲಿ ಮೈದಳೆಯುತ್ತಿದ್ದ ವೀಣೆ, ಸಿತಾರ್, ತಾನ್ಪುರಗಳು ದೇಶ- ವಿದೇಶಗಳನ್ನು ತಲುಪಿ ಲಕ್ಷಾಂತರ ಸಂಗೀತ ಪ್ರೇಮಿಗಳ ಮನತಣಿಸುವ ಕಲ್ಪನೆಯೇ ‘ಥ್ರಿಲ್’ ಕೊಟ್ಟಿತು. ‘ಇರಬಹುದು...ಆದರೆ ವಾಸ್ತವದಲ್ಲಿ ಅದರಿಂದ ಇಲ್ಲಿನ ಕುಶಲಕರ್ಮಿಗಳಿಗೆ ಹೆಚ್ಚೇನೂ ಪ್ರಯೋಜನವಿಲ್ಲ. ಈ ಊರಿನ ಮೂರು ವರ್ಕ್‌ಶಾಪ್‌ಗಳನ್ನು ನೋಡಿದರೆ ಅದೆಲ್ಲ ಅರ್ಥವಾದೀತು’ ಎಂದರು ಶಾಮ್.

‘ಪಿತಾಮಹ’ ಹಲ್ದಾರ್

ಹೊರಜಗತ್ತಿಗೆ ಹೆಚ್ಚು ಪರಿಚಿತವಲ್ಲದ ದಾದಪುರ್‌ನಲ್ಲಿ ಅರ್ಧ ಶತಮಾನದಿಂದಲೂ ವಾದ್ಯಗಳ ತಯಾರಿಕೆ ನಡೆಯುತ್ತಿದೆ. ಇದಕ್ಕೆಲ್ಲ ಮೂಲ ಕಾರಣ- ದಿವಂಗತ ತಾರಾಪಾದ್ ಹಲ್ದಾರ್. ಈಗ ಈ ಹಳ್ಳಿಯಲ್ಲಿ ವಾದ್ಯ ತಯಾರಿಸುವವರು ಬಹುತೇಕ ಅವರ ಶಿಷ್ಯರೇ ಆಗಿದ್ದಾರೆ.

ಕಳೆದ ಶತಮಾನದ ಮಧ್ಯಭಾಗದಲ್ಲಿ ಪಶ್ಚಿಮ ಬಂಗಾಳದಲ್ಲಿ ಭೀಕರ ಕ್ಷಾಮ ತಲೆದೋರಿತ್ತು. ಆಗ ತಾರಾಪಾದ್‍ಗೆ ಹತ್ತು ವರ್ಷ ವಯಸ್ಸು. ದಾದಪುರ್‌ದಿಂದ ಕೋಲ್ಕತ್ತಗೆ ಅವರ ಕುಟುಂಬ ವಲಸೆ ಬಂದಿತು. ಹೊಟ್ಟೆಪಾಡಿಗಾಗಿ ರಾಧಾಕಿಶನ್ ಎಂಬುವವರ ಅಂಗಡಿಯಲ್ಲಿ ತಾರಾಪಾದ್ ಕೆಲಸಕ್ಕೆ ಸೇರಿದರು. ಅದು ತಂತಿವಾದ್ಯ ಪರಿಕರಗಳ ಮಾರಾಟ ಮಳಿಗೆ. ವಾದ್ಯಗಳ ತಯಾರಿ ಬಗ್ಗೆ ಅವರಿಗೆ ಆಸಕ್ತಿ ಮೂಡಿದ್ದು ಅಲ್ಲಿಯೇ. ಕೆಲ ವರ್ಷಗಳ ಬಳಿಕ ಹುಟ್ಟೂರಿಗೆ ವಾಪಸಾಗಿ, ಅಲ್ಲೇ ವಾದ್ಯಗಳ ತಯಾರಿಕೆ ಶುರು ಮಾಡಿದರು. ಗ್ರಾಮದ ಹಲವರು ಕೆಲಸಕ್ಕೆಂದು ಅವರಲ್ಲಿಗೆ ಬಂದು ಸೇರಿಕೊಂಡರು. ದಾದಪುರ್ ಸಂಗೀತ ವಾದ್ಯಗಳ ಊರಾಗಿದ್ದು ಹೀಗೆ.

ತಾರಾಪಾದ್ ಹಲ್ದಾರ್ ಮೊಮ್ಮಗ ಸುಕಾಂತೊ ತಂತಿವಾದ್ಯಗಳ ತಯಾರಿಕೆಯಲ್ಲಿ ಪ್ರವೀಣ. ನಾಲ್ಕೈದು ಜನರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದ್ದಾರೆ. ಕಳೆದ ಹನ್ನೆರಡು ವರ್ಷಗಳಿಂದ ಇವರ ಬಳಿ ಕೆಲಸ ಮಾಡುತ್ತಿರುವ ತಪನ್ ಕಾಯಲ್, ಒಣಗಿದ ಸೋರೆ ಬುರುಡೆಗಳನ್ನು ಕತ್ತರಿಸಿ, ತಿದ್ದಿ ತೀಡುತ್ತಾರೆ. ಹೀಗೆ ಸಿದ್ಧಗೊಂಡ ಬುರುಡೆಗೆ ಅಭಿಜಿತ್ ಬಣ್ಣ ಲೇಪಿಸುತ್ತಾರೆ. ಸುಕಾಂತೊ ಮತ್ತಷ್ಟು ಅಲಂಕಾರ ಮಾಡುತ್ತಾರೆ. ಮತ್ತೊಬ್ಬ ಯುವಕ ಸಿರಾಜ್ ತಂತಿಗಳನ್ನು ಬಿಗಿದು ತಮ್ಮ ಪ್ರಾಥಮಿಕ ಜ್ಞಾನದ ನೆರವಿನಿಂದ ಶ್ರುತಿಯನ್ನು ತಕ್ಕಮಟ್ಟಿಗೆ ಹೊಂದಿಸುತ್ತಾರೆ. ಎಲ್ಲ ಪೂರ್ಣಗೊಂಡ ಬಳಿಕ, ಸುಕಾಂತೊ ಅದರ ಶ್ರುತಿಯನ್ನು ಇನ್ನಷ್ಟು ನಿಖರಗೊಳಿಸುತ್ತಾರೆ. ಒಂದು ಸೋರೆಯು ವಾದ್ಯವಾಗಲು ಏಳೆಂಟು ದಿನ ಬೇಕು!

ಹೆಚ್ಚೆಂದರೆ ನೂರೈವತ್ತು ಚದರಡಿ ವಿಸ್ತಾರದ ಕಾರ್ಯಾಗಾರದಲ್ಲಿ ಸುಕಾಂತೊ ಹಾಗೂ ಜತೆಗಾರರು ಏಕಕಾಲಕ್ಕೆ ಹಲವು ಬಗೆಯ ಕೆಲಸಗಳನ್ನು ನಿರ್ವಹಿಸುತ್ತಿದ್ದುದು ಅಚ್ಚರಿಗೊಳಿಸುವಂತಿತ್ತು. ನಮ್ಮ ಮಾತುಕತೆಯತ್ತ ಗಮನ ಹರಿಸುತ್ತಲೇ ಸರೋದ್ ಶ್ರುತಿಯನ್ನು ಸಿರಾಜ್ ಕಿವಿಗೊಟ್ಟು ಆಲಿಸುತ್ತ ಸರಿಪಡಿಸುತ್ತಿದ್ದರೆ, ಸೋರೆಬುರುಡೆಯನ್ನು ತಂಬೂರಿಗೆ ಸರಿಹೊಂದುವಂತೆ ತಪನ್ ಕತ್ತರಿಸುತ್ತಿದ್ದರು. ‘ಹೀಗೆ ಮಾಡುವಾಗ ಕೆಲವು ಸಲ ಸೋರೆಕಾಯಿಗಳು ಒಡೆದುಬಿಡುತ್ತವೆ. ಅವುಗಳನ್ನು ಸರಿಯಾಗಿ ನೆನೆಸಿರುವುದಿಲ್ಲ ಎಂಬುದು ಇದಕ್ಕೆ ಕಾರಣ. ಶಾಮ್ ಬಾರವಿ ಅವರು ಕಾಯಿಗಳನ್ನು ಚೆನ್ನಾಗಿ ಸಂಸ್ಕರಿಸುತ್ತಾರೆ. ನನ್ನ ತಂದೆಯು ಶಾಮ್ ತಂದೆಯಿಂದ ಸೋರೆ ಖರೀದಿಸುತ್ತಿದ್ದರು. ಆ ನಂಟು ಈವರೆಗೂ ತಪ್ಪಿಲ್ಲ’ ಎಂದು ಶಾಮ್ ಗುಣಗಾನ ಮಾಡುತ್ತಾರೆ ಸುಕಾಂತೊ.

ಅಪರೂಪಕ್ಕೆ ರುದ್ರವೀಣೆ ಬೇಕೆಂಬ ಮನವಿ. ದಾದಪುರ್ ತಲುಪಿದಾಗ, ಅದನ್ನು ಪೂರೈಸುವುದು ಇದೇ ಗ್ರಾಮದ ಅನುಭವಿ ಸನತ್ ಹಲ್ದಾರ್. ‘ನಾನು ಇತರ ವಾದ್ಯಗಳನ್ನು ಸಹ ಮಾಡುತ್ತೇನೆ. ಆದರೆ ಒಮ್ಮೆ ಅತಿ ದೊಡ್ಡ ಸೋರೆಕಾಯಿ ನೋಡಿದೆ. ಅದನ್ನು ಸೀಳಿ ಎರಡು ವಾದ್ಯಕ್ಕೆ ಬಳಸುವ ಬದಲಿಗೆ ರುದ್ರವೀಣೆ ತಯಾರಿಸಲು ಮುಂದಾದೆ. ಅದರ ಶ್ರುತಿ ಹಾಗೂ ನೋಟ ಬಲು ವಿಭಿನ್ನ. ಆ ವೀಣೆ ತಯಾರಿಕೆ ನನಗೆ ಹೆಚ್ಚು ಖುಷಿ ಕೊಡುತ್ತದೆ’ ಎನ್ನುತ್ತಾರೆ ಸನತ್. ಇದೇ ರೀತಿ, ‘ದೋತಾರ್’ ತಯಾರಿಕೆಯಲ್ಲಿ ವಿಶ್ವನಾಥ ಕಾಯಲ್ ಪ್ರಸಿದ್ಧ. ‘ಇದನ್ನು ನಾನು ಕಲಿತಿದ್ದು ತಾರಾಪಾದ್ ಅವರಿಂದ. ಬೇರೆಲ್ಲ ಕೆಲಸಗಳನ್ನೂ ಬೆಳಿಗ್ಗೆ- ಸಂಜೆ ಮುಗಿಸಿ, ನಸುಕಿನಲ್ಲಿ ಶ್ರುತಿ ಸರಿಪಡಿಸುತ್ತಿದ್ದೆವು. ಕಿವಿಯಿಂದ ಮಾತ್ರವಲ್ಲ; ತಂತಿ ಚಲನೆಯನ್ನು ನೋಡಿ, ಕಣ್ಣಿಂದಲೇ ಶ್ರುತಿ ಸರಿಪಡಿಸುವ ಜಾಣ್ಮೆ ನಿಮ್ಮಲ್ಲಿರಬೇಕು ಎಂದು ಗುರುಗಳು ಹೇಳುತ್ತಿದ್ದರು. ಅಂಥ ರಹಸ್ಯಗಳನ್ನು ಅವರು ನಮಗೆ ಕಲಿಸಿಕೊಟ್ಟರು’ ಎಂದು ಸ್ಮರಿಸಿಕೊಳ್ಳುತ್ತಾರೆ ವಿಶ್ವನಾಥ.

ವಾದ್ಯ ತಯಾರಿಕೆಯ ಸಂದರ್ಭದಲ್ಲಿ ಅದಕ್ಕೆ ಅಲಂಕಾರ ಮಾಡುವುದೂ ಒಂದು ಕಲೆ. ವಾದ್ಯದಿಂದ ವಾದ್ಯಕ್ಕೆ ಅದು ಬದಲಾಗುತ್ತದೆ. ಇದಕ್ಕೆ ಸಂಗೀತ ಜ್ಞಾನ ಇರಲೇಬೇಕಿಲ್ಲ. ಆದರೆ, ತಂತಿ ಹೆಣೆಯುವಾಗ ಸಂಗೀತ ಕಲಿತವರೇ ಆಗಿರಬೇಕು. ‘ವಾದ್ಯ ತಯಾರಿಕೆಯು ಒಂದು ತೂಕದ್ದಾದರೆ ಅದರಿಂದ ಹೊರಬರಬೇಕಾದ ಶ್ರುತಿಗಳ ಜೋಡಣೆ ಇನ್ನೊಂದು ತೂಕ. ಒಂದಕ್ಕೊಂದು ಪೂರಕ’ ಎನ್ನುತ್ತಾರೆ ಸಮರೇಶ್ ಹಲ್ದಾರ್. ಶ್ರುತಿ ತಪ್ಪಿರುವ ವಾದ್ಯಗಳು ಕೋಲ್ಕತ್ತದ ಸಂಗೀತ ಪರಿಕರಗಳ ಮಳಿಗೆಯ ಮೂಲಕ ಸಮರೇಶ್ ಅವರತ್ತ ಬರುವುದೂ ಇದೆ. ‘ಒಂದೇ ಒಂದು ತಂತಿಯನ್ನು ಮೀಟಿದರೆ ಸಾಕು; ಎಲ್ಲಿ ಹದ ತಪ್ಪಿದೆ? ಎಲ್ಲಿ ಸಡಿಲವಾಗಿದೆ? ಯಾವ ತಂತಿಯನ್ನು ಎಷ್ಟು ಬಿಗಿ ಮಾಡಬೇಕು ಎಂಬುದೆಲ್ಲ ತಿಳಿಯುತ್ತದೆ’ ಎನ್ನುತ್ತ ಒಂದು ಸಿತಾರ್ ತೆಗೆದುಕೊಂಡು ಮೀಟಿದರು. ನಮ್ಮ ಸಂಗೀತ ಜ್ಞಾನ ಅಷ್ಟಕ್ಕಷ್ಟೇ ಇದ್ದುದರಿಂದ ನಮಗೇನೂ ತಿಳಿಯಲಿಲ್ಲ. ಆದರೆ ಅಲ್ಲಿದ್ದ ಒಂದಿಬ್ಬರು ಆ ‘ಬೇಸೂರ್’ ಗುರುತಿಸಿದರು.

ಕಲಿಯುವವರೇ ಕಡಿಮೆ!

ಪ್ರತಿ ವಾದ್ಯದ ತಯಾರಿಕೆ ಒಂದೇ ತರಹ: ಸೋರೆಕಾಯಿ ಸಂಸ್ಕರಣೆ, ಒಣಗಿಸುವಿಕೆ, ಕತ್ತರಿಸಿ ವಾದ್ಯದ ‘ಶರೀರ’ ತಯಾರಿಕೆ, ಬಣ್ಣ ಲೇಪನ, ಕಲೆ ಸಂಯೋಜನೆ, ಶ್ರುತಿ ಸರಿಪಡಿಸುವಿಕೆ. ಇದೆಲ್ಲ ಸುದೀರ್ಘ ಕೆಲಸ. ‘ವರ್ಷಕ್ಕೆ ಸುಮಾರು ನೂರರಿಂದ ಇನ್ನೂರು ವಾದ್ಯಗಳನ್ನು ತಯಾರಿಸುತ್ತೇವೆ. ಮೀರಜ್, ಲಖನೌ ಸೇರಿದಂತೆ ದೇಶದೆಲ್ಲೆಡೆಯಿಂದ ಬೇಡಿಕೆ ಸಾಕಷ್ಟಿದೆ. ಆದರೆ ನುರಿತ ಕೆಲಸಗಾರರ ಕೊರತೆ ಕಾಡುತ್ತಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಸುಕಾಂತೊ. ಮೊದಲೆಲ್ಲ ಕೋಲ್ಕತ್ತದಲ್ಲಿನ ಕೆಲವು ವಾದ್ಯ ಕಂಪನಿಗಳು ದಾದಪುರ್‌ನಲ್ಲಿ ಕೆಲಸ ಕಲಿತವರನ್ನೇ ನಿಯೋಜಿಸಿಕೊಳ್ಳುತ್ತಿದ್ದವು. ಆದರೆ, ಈಗ ಆ ಸಂಖ್ಯೆ ಕಡಿಮೆಯಾಗಿದೆ. ‘ಇಲ್ಲಿಂದ ಹತ್ತು ಕಿಲೋ ಮೀಟರ್ ದೂರದಲ್ಲಿರುವ ಮಾಲಿಗಾಚಿ ಗ್ರಾಮದ ಹಲವರು ನಮ್ಮಲ್ಲೇ ತರಬೇತಿ ಪಡೆದಿದ್ದಾರೆ. ಕಚ್ಚಾ ಸಾಮಗ್ರಿ ಒಯ್ದು, ಅಲ್ಲಿ ವಾದ್ಯ ತಯಾರಿಸಿ ನಮಗೇ ವಾಪಸು ಕೊಡುತ್ತಾರೆ. ಇಂತಿಷ್ಟು ಹಣ ಎಂದು ಪಾವತಿ ಮಾಡುತ್ತೇವೆ. ತಂತಿ ಜೋಡಿಸಿ, ಶ್ರುತಿ ಸಂಯೋಜಿಸುವುದು ಮಾತ್ರ ನಮ್ಮ ಕೆಲಸ’ ಎಂದು ಹೊಸ ವಹಿವಾಟಿನ ವಿವರ ಕೊಡುತ್ತಾರೆ ಶ್ರುತಿ ಸಂಯೋಜಕ ಹಿಮಾನ್ ಸೇನ್.

ಹೆಚ್ಚು ಅವಧಿ ತೆಗೆದುಕೊಳ್ಳುವ ವಾದ್ಯ ತಯಾರಿಕೆಗೆ ತಗಲುವ ವೆಚ್ಚದಲ್ಲೂ ವ್ಯತ್ಯಾಸ ಕಾಣಿಸುತ್ತದೆ. ಸಾಮಾನ್ಯ ಗುಣಮಟ್ಟದ ಸಿತಾರ್‌ಗೆ ₹ 10 ಸಾವಿರ ದರ ಇದ್ದರೆ, ವೀಣೆಗೆ ₹ 1 ಲಕ್ಷದವರೆಗೂ ಇದೆ! ವಿಶೇಷ ಸಂತೂರ್‌ಗೆ ₹ 15 ಸಾವಿರ. ಕಂಪನಿಗಳು ಇಲ್ಲಿಂದ ವಾದ್ಯಗಳನ್ನು ಖರೀದಿ ಮಾಡಿ ತಮ್ಮ ಬ್ರ್ಯಾಂಡ್ ಹಾಕಿಕೊಂಡು, ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತವೆ. ‘ನಿಮ್ಮದೇ ಬ್ರ್ಯಾಂಡ್ ಮಾಡಿಕೊಳ್ಳಿ ಎಂಬ ಸಲಹೆ ಬರುತ್ತವೆ. ಆದರೆ ಅದಕ್ಕೆಲ್ಲ ನಮಗೆ ಶಕ್ತಿಯಿಲ್ಲ’ ಎಂಬ ಅಸಹಾಯಕ ನುಡಿ ಅನಿಲ್ ಅವರದು.

ವಾದ್ಯಗಳಿಗೆ ಬೇಕಾಗುವ ವಿಶೇಷ ಬಿಡಿ ಭಾಗಗಳನ್ನು ಬೇರೆ ಕಡೆಯಿಂದ ತರಿಸುತ್ತಾರೆ. ಉದಾಹರಣೆಗೆ: ತಂತಿ ಬಿಗಿಯುವ ‘ಕಾನ್’ಗಳನ್ನು ಕೋಣದ ಎಲುಬಿನಿಂದ ತಯಾರಿಸುತ್ತಿದ್ದು, ಅವು ಲಖನೌದಿಂದ ಬರುತ್ತವೆ. ‘ಮೇಲ್ನೋಟಕ್ಕೆ ವಾದ್ಯ ಚೆಂದ ಕಾಣಲು ಎಷ್ಟು ಸಾಧ್ಯವೋ ಅಷ್ಟು ಅಲಂಕಾರ ಮಾಡುತ್ತೇವೆ. ಇದಂತೂ ಬಲು ತಾಳ್ಮೆ ಹಾಗೂ ಕೌಶಲವನ್ನು ಬೇಡುತ್ತದೆ. ವಾರಗಟ್ಟಲೇ ಸತತ ಕೆಲಸ ಮಾಡಿದರೆ ಮಾತ್ರ ಒಂದು ವಾದ್ಯ ತಯಾರಾಗುತ್ತದೆ. ಕುಟುಂಬ ನಿರ್ವಹಣೆಗೆ ಹೆಚ್ಚೇನೂ ಹಣ ಗಿಟ್ಟುವುದಿಲ್ಲ. ಆದರೆ ನಮ್ಮಲ್ಲಿಗೆ ವಾದ್ಯಗಳ ಖರೀದಿಗೆಂದು ಬರುವವರು ಇದನ್ನೆಲ್ಲ ಲೆಕ್ಕ ಹಾಕುವುದಿಲ್ಲ’ ಎಂದು ಬೇಸರದಿಂದ ನುಡಿಯುತ್ತಾರೆ ಸಮರೇಶ್.

ಕತ್ತಲು ಕವಿಯುತ್ತಿದ್ದಂತೆ ಯಾವುದೋ ಎರಡು ವೈರ್‌ಗಳನ್ನು ಪ್ರತಿಮಾ ಜೋಡಿಸಿದರು. ಬುರುಡೆ ಬಲ್ಬ್, ಟ್ಯೂಬ್ ಲೈಟ್ ಮಂದ ಬೆಳಕು ಬೀರತೊಡಗಿದವು. ಆ ದೀಪಗಳು ಅಂಥ ವ್ಯತ್ಯಾಸವನ್ನೇನೂ ಮಾಡುವಂತಿರಲಿಲ್ಲ. ಒಬ್ಬರ ಪಕ್ಕ ಇನ್ನೊಬ್ಬರು ಆರಾಮವಾಗಿ ಕೂರಲು ಅವಕಾಶವಿಲ್ಲದ ಆ ಸ್ಥಳದಲ್ಲಿ ಏಕಕಾಲಕ್ಕೆ ನಾಲ್ಕಾರು ಕೆಲಸಗಳು ನಡೆಯುತ್ತಿದ್ದವು. ಸೋರೆಬುರುಡೆಯನ್ನು ತಪನ್ ಗರಗಸದಿಂದ ಕತ್ತರಿಸುತ್ತಿದ್ದರೆ, ಸುಕಾಂತೊ- ಸಿರಾಜ್ ತಮ್ಮ ಮುಂದಿದ್ದ ಸಂತೂರ್- ಸಿತಾರ್ ಶ್ರುತಿ ಸರಿಪಡಿಸುತ್ತಿದ್ದರು.

‘ಒಂದೊಂದು ವಾದ್ಯದ ಹಿಂದೆಯೂ ನಮ್ಮ ಪರಿಶ್ರಮ ಸಾಕಷ್ಟಿದೆ. ಆದರೆ ಸಾವಿರಾರು ಜನರು ಸಂಗೀತ ಸಭೆಯಲ್ಲಿ ಕಲಾವಿದನ ಪ್ರತಿಭೆಗೆ ಚಪ್ಪಾಳೆ ತಟ್ಟುತ್ತಾರೆಯೇ ಹೊರತೂ ಅದರ ಮೂಲಸೃಷ್ಟಿಕರ್ತನ ಕೌಶಲಕ್ಕೆ ಅಲ್ಲವಲ್ಲ?’ ಎಂಬ ಅಗೋಚರ ದನಿ ಕೇಳಿಬಂತು.

ಮಂದ ಬೆಳಕಲ್ಲಿ ಸುರ ವಾದ್ಯಗಳ ಮಂದ್ರ ಸ್ವರಗಳ ಮಧ್ಯೆ ಆ ವಿಷಾದದ ಮಾತನ್ನು ಯಾರು ಹೇಳಿದರೋ? ನಮಗಂತೂ ಗೊತ್ತಾಗಲಿಲ್ಲ. ಆದರೆ, ಅದರ ಶ್ರುತಿಯಲ್ಲಿ ತಪ್ಪಿರಲಿಲ್ಲ, ಅಷ್ಟೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.