ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳದ ಕಳರಿ ಕಲೆಗೆ ಒಲಿದವರು...

Published : 24 ಆಗಸ್ಟ್ 2024, 23:30 IST
Last Updated : 24 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ರಂಜಿತಾ, ಬೆಂಗಳೂರಿನ ಪ್ರತಿಷ್ಠಿತ ಮಾಹಿತಿ ಮತ್ತು ತಂತ್ರಜ್ಞಾನ ಕಂಪನಿಯ ಉದ್ಯೋಗಿ. ದಿನವೂ ಧಾವಂತದ ಬದುಕು. ಸಂಜೆ, ರಾತ್ರಿ ಶಿಫ್ಟ್‌ಗಳಲ್ಲಿ ದುಡಿಯುವುದು. ಬೆಳಿಗ್ಗೆ ತಡವಾಗಿ ಏಳುವುದು. ಒಂದಿಷ್ಟು ತಿಂಡಿ, ಊಟ ಮಾಡಿಕೊಂಡು ಕೆಲಸಕ್ಕೆ ಧಾವಿಸುವುದು. ಸಂಬಳವೇನೋ ದೊಡ್ಡ ಮೊತ್ತದ್ದು. ಆದರೂ ಮನಸ್ಸು, ದೇಹವನ್ನು ಅದೇನೋ ಜಡತ್ವ ಆವರಿಸಿದ ಭಾವ. ಉದ್ಯೋಗ ಆರಂಭಿಸಿ ಐದು ವರ್ಷವೂ ಕಳೆದಿಲ್ಲ. ಆಗಲೇ ‘ಸಾಕಪ್ಪಾ ಸಾಕು’ ಎನ್ನುವಂತಾಗಿತ್ತು ಬದುಕು. ದೂರದ ಊರಿನಿಂದ ಬಂದು ಇಲ್ಲಿ ದುಡಿಮೆ ಮಾಡುತ್ತಿರುವುದೇ ದೊಡ್ಡ ಸಾಧನೆ ಎಂಬಂತಹ ಸ್ಥಿತಿ. 

ಸುಮಿತ್ ಹೈದರಾಬಾದ್‌ನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರು. ಶಾಲೆಗೆ ಹೋಗುವ ತಮ್ಮ ಮಕ್ಕಳಿಬ್ಬರಿಗೂ ಕೋವಿಡ್ ಸಮಯದಲ್ಲಿ ಆನ್‌ಲೈನ್ ಕ್ಲಾಸ್‌ಗಳಿಂದಾಗಿ ಮೊಬೈಲ್‌ ಗೀಳು ಅಂಟಿಕೊಂಡ ಚಿಂತೆ ಆವರಿಸಿತ್ತು. ದೈಹಿಕ ಮತ್ತು ಮಾನಸಿಕವಾಗಿ ದುಷ್ಪರಿಣಾಮ ಬೀರುವ ಲಕ್ಷಣಗಳು ಕಂಡುಬಂದಿದ್ದವು. ಆಗ ಮಕ್ಕಳನ್ನು ಯೋಗ ಅಥವಾ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿದರು. ಆದರೆ ಕೆಲವು ದಿನಗಳ ನಂತರ ಮಕ್ಕಳು ಆಸಕ್ತಿ ಕಳೆದುಕೊಂಡರು. ಆದರೂ ಛಲ ಬಿಡದ ತಂದೆ ಅಂತೂ ಇಂತೂ ಒಂದು ದಾರಿ ಕಂಡುಕೊಂಡರು.

ಇವರಿಬ್ಬರಷ್ಟೇ ಅಲ್ಲ, ಇಂತಹ ಹಲವರು ‘ಮೆಟ್ರೊ ನಗರಿ’ಯ ಬದುಕಿನ ತಲ್ಲಣಗಳು, ಉದ್ಯೋಗ, ವೈಯಕ್ತಿಕ ಜೀವನದ ತೊಳಲಾಟಗಳಿಂದ ಪಾರಾಗಲು ಕೇರಳ ರಾಜ್ಯದ ‘ಕಳರಿಪಯಟ್ಟು’ ಎಂಬ ಸಮರ ಕಲೆಯನ್ನು ಅಪ್ಪಿಕೊಂಡಿದ್ದಾರೆ.

ಐಟಿ ಕಂಪನಿಗಳ ಉದ್ಯೋಗಿಗಳೇ ಬಹುಪಾಲು ಸಂಖ್ಯೆಯಲ್ಲಿರುವ ಎಚ್‌ಎಸ್‌ಆರ್‌ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳರಿಯ ಕಲರವ ಮೆಲ್ಲಗೆ ಆವರಿಸುತ್ತಿದೆ. ಇಲ್ಲಿಯ ಎರಡನೇ ಸೆಕ್ಟರ್‌ನಲ್ಲಿರುವ ಚಂದ್ರಾಜಿಸ್ ವಲ್ಲಭಟ್ಟ ಕಳರಿ ಸಂಘಂ ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಕೇರಳದ ಹಿರಿಯ ಕಳರಿ ಕೋಚ್ ಚಂದ್ರಮೋಹನ್ ಇದರ ಮುಖ್ಯಸ್ಥರು. ಇವರು ಕುಟುಂಬವು ತಲೆತಲಾಂತರದಿಂದ ಕಳರಿ ಕಲೆಯನ್ನು ಪೋಷಿಸುತ್ತ ಬಂದಿದೆ.

‘ಇದು ಪಾರಂಪರಿಕ ಸಮರ ಕಲೆಯಾಗಿದೆ. ನಮ್ಮ ಪೂರ್ವಜರು ಕಲಿಸಿದ ಜೀವನಶೈಲಿಯೂ ಇದಾಗಿದೆ. ದೈಹಿಕವಾಗಿ, ಮಾನಸಿಕವಾಗಿ ನಮ್ಮ ವ್ಯಕ್ತಿತ್ವವನ್ನು ಸದೃಢವಾಗಿಸುವ ಕಲೆ ಇದಾಗಿದೆ. ಕೇರಳದ ಕೆಲವು ಭಾಗಗಳಲ್ಲಿ ಇದು ಇಂದಿಗೂ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯಲ್ಲಿಯೇ ನೀಡಲಾಗುತ್ತದೆ. ಅಪ್ಪಟ ದೇಶಿ ಕಲೆ ಇದು. ಇಲ್ಲಿ ಬರಿಗೈನಲ್ಲಿ ಹೋರಾಟ ಮಾಡುವ ಕಲೆಯ ಜೊತೆಗೆ, ದೊಣ್ಣೆ, ಕೊಂಬು, ಖಡ್ಗ, ಭರ್ಜಿ ಮತ್ತಿತರ ಆಯುಧಗಳನ್ನು ಬಳಸಿ ಹೋರಾಡುವುದನ್ನೂ ಕಲಿಸಲಾಗುತ್ತದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ದೇಹವನ್ನು ಹುರಿಗೊಳಿಸಿ, ಆ ಮೂಲಕ ಮಾನಸಿಕ ಸಬಲತೆಯನ್ನು ಸ್ಥಾಪಿಸುವುದು ಮೂಲ ಉದ್ದೇಶ. ಇದರಲ್ಲಿ ಯೋಗವೂ ಇದೆ, ಪೈಲ್ವಾನರ ಕಸರತ್ತುಗಳೂ ಇವೆ. ಆದರೆ ಜಿಮ್‌ಗಳಲ್ಲಿರುವಂತೆ ಮಸಲ್‌ ಬಿಲ್ಡಿಂಗ್ ಇಲ್ಲ. ಆದರೆ ಅದರಷ್ಟೇ ಬಲಾಢ್ಯವಾದ ದೇಹವನ್ನು ಕಟ್ಟುವ ಕೆಲಸ ಇದಾಗಿದೆ’ ಎಂದು ಚಂದ್ರಮೋಹನ್ ವಿವರಿಸುತ್ತಾರೆ.

ಕಾಲ ಬದಲಾದಂತೆ ಕಳರಿ ಕಲೆಯು ಕೇವಲ ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಫಿಟ್‌ನೆಸ್ ಮತ್ತು ಕ್ರೀಡೆಯಾಗಿಯೂ ರೂಪಾಂತರಗೊಳ್ಳುತ್ತಿದೆ. ಅದರ ಫಲವಾಗಿಯೇ ಕೇರಳದ ಗಡಿ ದಾಟಿ ದೇಶದುದ್ದಕ್ಕೂ ಪಸರಿಸುತ್ತಿದೆ. ಬೆಂಗಳೂರಿನಲ್ಲಿಯೂ ನೆಲೆ ಕಂಡಿದೆ.

ಚಂದ್ರಮೋಹನ್ ಅವರ ಅಕಾಡೆಮಿ 7 ರಿಂದ 45 ವರ್ಷದೊಳಗಿನವರು ಇದ್ದಾರೆ. ಅವರಲ್ಲಿ ಐವರು ಮಹಿಳೆಯರು ಇದ್ದಾರೆ. ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಐಟಿ ಕ್ಷೇತ್ರದ ಉದ್ಯೋಗಿಗಳಾಗಿದ್ದಾರೆ. 

‘ಕಳರಿಯಲ್ಲಿ ಪಾರಂಪರಿಕ ಮತ್ತು ಆಧುನಿಕ ಎಂಬ ತಾರತಮ್ಯ ಏನಿಲ್ಲ. ಮೂಲದಲ್ಲಿ ಏನಿತ್ತೋ ಅದೇ ಇದೆ. ಇದು ದೇಹದೊಳಗಿನ ಶಕ್ತಿಯನ್ನು ವೃದ್ಧಿಸುವ ಮತ್ತು ಪಂಚೇಂದ್ರಿಯಗಳ ಸಾಮರ್ಥ್ಯ ವೃದ್ಧಿಸಿ ಏಕಾಗ್ರತೆ ಸಾಧಿಸುವುದು ಮೂಲ ಉದ್ದೇಶ. ಅದರ ಮೂಲಕ ಎದುರಾಳಿಯನ್ನು ಎದುರಿಸುವ ಸಮರ ಕಲೆ ಕರಗತವಾಗುತ್ತದೆ. ದೇಹದ ಚುರುಕುತನಕ್ಕೆ ಇಲ್ಲಿ ಪ್ರಾಧಾನ್ಯತೆ ಇದೆ. ದೇಹದಾರ್ಢ್ಯಪಟುಗಳನ್ನಾಗಿ ರೂಪಿಸುವುದು ಇದರ ಉದ್ದೇಶವಲ್ಲ. ಆದರೆ ದೇಹದಾರ್ಢ್ಯಪಟುವಿನಷ್ಟೇ ತಾಕತ್ತು ದೇಹದೊಳಗೆ ತುಂಬಿಕೊಳ್ಳುವುದರ ಜೊತೆಗೆ ಜಿಮ್ನಾಸ್ಟ್‌ ಪಟುಗಳಷ್ಟೇ ಚುರುಕುತನವನ್ನೂ ರೂಢಿಸಿಕೊಂಡಾಗ ಪರಿಪೂರ್ಣತೆ ಲಭಿಸುತ್ತದೆ. ಅದಕ್ಕಾಗಿಯೇ ಮಹಿಳೆಯರು ತಮ್ಮ ಫಿಟ್‌ನೆಸ್ ಹಾಗೂ ಸ್ವರಕ್ಷಣೆಯ ಉದ್ದೇಶದಿಂದ ಇತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದು ಚಂದ್ರಮೋಹನ್ ಹೇಳುತ್ತಾರೆ.

ಇತ್ತೀಚೆಗೆ ಕಳರಿಪಯಟ್ಟು, ಪಂಜಾಬ್‌ ಜನಪದ ಸಮರ ಕಲೆ ಘಾಟ್ಕಾ ಮತ್ತು ಮಣಿಪುರದ ತಾಂಗ್ತಾಗೆ ಕ್ರೀಡಾ ಮಾನ್ಯತೆಯನ್ನು ನೀಡಲಾಗಿದೆ. ಖೇಲೊ ಇಂಡಿಯಾದಲ್ಲಿಯೂ ಸೇರ್ಪಡೆ ಮಾಡಲಾಗಿದೆ. ಈ ಮೂರರಲ್ಲಿಯೂ ಒಂದು ಸಾಮ್ಯತೆ ಎಂದರೆ ನೃತ್ಯ. ಮೊದಲಿನಿಂದಲೂ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಈ ಕಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದೀಗ ತಮ್ಮ ಮುಂಬರುವ ಚಿತ್ರಕ್ಕಾಗಿ ನಟ ರಿಷಬ್‌ ಶೆಟ್ಟಿಯವರೂ ಕಳರಿ ಅಭ್ಯಾಸ ಮಾಡುತ್ತಿದ್ದಾರೆಂಬ ಸುದ್ದಿಯೂ ಸದ್ದು ಮಾಡುತ್ತಿದೆ. 

ಅದಿರಲಿ; ಕ್ರೀಡೆಯಾಗಿ ಕಲಿಯುವವರಿಗಾಗಿಯೇ ರಾಷ್ಟ್ರೀಯ ಕಳರಿ ಫೆಡರೇಷನ್ ಪಠ್ಯಕ್ರಮವನ್ನು ಸಿದ್ಧಪಡಿಸಿದೆ. ಅದಕ್ಕಾಗಿಯೂ ಇಲ್ಲಿ ತರಬೇತಿ ನೀಡಲಾಗುತ್ತಿದೆ.

‘ಇವತ್ತು ನಗರಗಳಲ್ಲಿ ಒಬ್ಬಂಟಿ ಮಹಿಳೆಯರಾಗಲೀ, ಪುರುಷರಾಗಲೀ ಹೆಚ್ಚು ಸುರಕ್ಷಿತವಾಗಿಲ್ಲ. ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಇಂತಹದೊಂದು ಕಲೆ ಕಲಿಯುವುದು ಸೂಕ್ತ. 6ನೇ ವಯಸ್ಸು ದಾಟಿದವರು ಯಾರೇ ಆದರೂ ಕಲಿಯಬಹುದು’ ಎಂದು ಚಂದ್ರಮೋಹನ್ ಹೇಳುತ್ತಾರೆ. 

ವಿದ್ಯಾರ್ಥಿಗಳು ಮೊದಲಿಗೆ ಅಭ್ಯಾಸ ಆರಂಭಿಸುತ್ತಾರೆ. ವಾರ್ಮ್‌ ಅಪ್ ವ್ಯಾಯಾಮಗಳನ್ನು ಮುಗಿಸುವಷ್ಟರಲ್ಲಿಯೇ ಮೈಪೂರಾ ಬೆವರು ಬಸಿಯುತ್ತದೆ. ಅಷ್ಟು ಪರಿಣಾಮಕಾರಿ ವ್ಯಾಯಾಮಗಳು ಅವು. ನಂತರ ಸಣ್ಣ ಅಳತೆ, ಮಧ್ಯಮ ಅಳತೆ ಮತ್ತು ದೊಡ್ಡ ಅಳತೆಯ ದೊಣ್ಣೆ ವರಸೆಯ ಕೌಶಲಗಳನ್ನು ಅಭ್ಯಾಸ ಮಾಡುತ್ತಾರೆ. ಒಂದೊಂದೇ ಹಂತಗಳಲ್ಲಿ ಕಲಿಯುತ್ತಾ 4–5 ವರ್ಷಗಳ ಸತತ ಅಭ್ಯಾಸದಿಂದ ಆಯುಧಗಳ ಪ್ರಯೋಗವನ್ನೂ ಕರಗತ ಮಾಡಿಕೊಳ್ಳಬಹುದು.

ದೇಶದ ಪ್ರಮುಖ ನಗರಗಳಲ್ಲಿ ಈಗ ಕಳರಿ ಜನಪ್ರಿಯತೆಯತ್ತ ನಡೆಯುತ್ತಿದೆ. ಕೇರಳದ ಮಲೆಗಳಲ್ಲಿ ಹುಟ್ಟಿ ಬೆಳೆದ ಸಾಂಪ್ರದಾಯಿಕ ಕಲೆ ಮಹಾನಗರಗಳಿಗೆ ಕಾಲಿಟ್ಟಿದೆ. ಈ ನಗರಗಳ ಜನರ ಜೀವನಶೈಲಿಗೆ ಸರಿಹೊಂದುವಂತಹ ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಬೆಳೆಯುತ್ತ ನಡೆದಿದೆ. ಅದರಿಂದಾಗಿಯೇ ಇಂದಿನ ಯುವಕ–ಯುವತಿಯರಿಗೂ ಆಕರ್ಷಣೀಯವಾಗಿದೆ.

ಕಳರಿಪಯಟ್ಟು
ಕಳರಿಪಯಟ್ಟು
 ಮಾರ್ಷಲ್ ಆರ್ಟ್ ಬಗ್ಗೆ ವಿಶೇಷ ವರದಿ.ಚಿತ್ರ ಕಿಶೋರ್ ಕುಮಾರ್ ಬೋಳಾರ್  
 ಮಾರ್ಷಲ್ ಆರ್ಟ್ ಬಗ್ಗೆ ವಿಶೇಷ ವರದಿ.ಚಿತ್ರ ಕಿಶೋರ್ ಕುಮಾರ್ ಬೋಳಾರ್  
ಕಳರಿಪಯಟ್ಟು
ಕಳರಿಪಯಟ್ಟು
ಕಳರಿಪಯಟ್ಟು
ಕಳರಿಪಯಟ್ಟು
ಕಳರಿಪಯಟ್ಟು
ಕಳರಿಪಯಟ್ಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT