ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷ ಪ್ರಸಂಗಕ್ಕೆ ಕನಕನ ರಂಗ ಪ್ರವೇಶ

ಎಂ.ಎನ್‌.ಸುಂದರರಾಜ್
Published 17 ಡಿಸೆಂಬರ್ 2023, 0:30 IST
Last Updated 17 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ದತ್ತಮೂರ್ತಿ ಭಟ್ಟರು ಕನಕ ಜಯಂತಿಯ ದಿನ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕನಕದಾಸರ ಚರಿತೆಯ ಮೊದಲ ಯಕ್ಷ ಪ್ರಯೋಗ ಸಾದರಪಡಿಸಿದರು. ಈ ಪ್ರಯೋಗ ಸಹೃದಯರ ಮೆಚ್ಚುಗೆಗೆ ಪಾತ್ರವಾಯಿತು.

ಯಕ್ಷಗಾನವನ್ನು ಪ್ರಯೋಗಗಳಿಗೆ ಒಡ್ಡಿ ನಾಡಿನ ಸಾಂಸ್ಕೃತಿಕ ವೀರರಾದ ಬಸವಣ್ಣ, ಅಕ್ಕಮಹಾದೇವಿ, ಕಾಲಬೈರವೇಶ್ವರ, ಬೀರಲಿಂಗೇಶ್ವರರ ಕಥನಗಳನ್ನು ಪ್ರಸಂಗಗಳಲ್ಲಿ ಅಳವಡಿಸಿದ್ದವರು ಶಿವಮೊಗ್ಗದ ನಾಟ್ಯಶ್ರೀ ಕಲಾತಂಡದ ಸೂತ್ರಧಾರ ವಿದ್ವಾನ್ ದತ್ತಮೂರ್ತಿ ಭಟ್ಟರು. ಈಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿ ದಾಸ ಶ್ರೇಷ್ಠ ಕನಕದಾಸರನ್ನು ಯಕ್ಷರಂಗಕ್ಕೆ ಕರೆತಂದಿದ್ದಾರೆ.

ಕನಕರ ಆಶಯಗಳನ್ನು ನಾಡಿನಾದ್ಯಂತ ಪಸರಿಸಲು ಸಿದ್ಧರಾಗಿರುವ ದತ್ತಮೂರ್ತಿ ಭಟ್ಟರು ಕನಕ ಜಯಂತಿಯ ದಿನ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕನಕದಾಸರ ಚರಿತೆಯ ಮೊದಲ ಯಕ್ಷ ಪ್ರಯೋಗ ಸಾದರಪಡಿಸಿದರು. ಇದು ಕನಕರ ಅನುಯಾಯಿಗಳು, ಯಕ್ಷಗಾನ ಪ್ರಿಯರ ಮೆಚ್ಚುಗೆಗೂ ಪಾತ್ರವಾಯಿತು.

ಶಿವಮೊಗ್ಗದ ಡಿವಿಎಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕ ದತ್ತಮೂರ್ತಿ ಭಟ್ಟರಿಗೆ ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ. ಅದರ ಫಲವಾಗಿ 25 ವರ್ಷಗಳ ಹಿಂದೆ ಹುಟ್ಟಿಕೊಂಡದ್ದು ನಾಟ್ಯಶ್ರೀ ಕಲಾತಂಡ. ಅದಕ್ಕೀಗ ರಜತ ಸಂಭ್ರಮ. ಈ ಹೊತ್ತಿನಲ್ಲಿ ಕನಕದಾಸರ ಕಥನವನ್ನು ಯಕ್ಷರಂಗಕ್ಕೆ ಕರೆತರುವ ಸಾರ್ಥಕ ಕಾರ್ಯ ನಡೆದಿದೆ.  ಆರಂಭದ ದಿನಗಳಲ್ಲಿ ಪೌರಾಣಿಕ ಪ್ರಸಂಗಗಳ ಸಪ್ತಾಹ ಆರಂಭಿಸಿ ಮನೆಮಾತಾಗಿದ್ದ ನಾಟ್ಯಶ್ರೀ ಸಂಸ್ಥೆ ನಂತರ ತನ್ನನ್ನು ಪ್ರಯೋಗಗಳಿಗೆ ತೆರೆದುಕೊಂಡಿತ್ತು. ಅದರ ಫಲವಾಗಿ ನಾಡಿನ ಸಾಂಸ್ಕೃತಿಕ ವೀರರು ಪ್ರಸಂಗದ ಹಾದಿಯಲ್ಲಿ ಸಾಗಿಬಂದಿದ್ದರು.

ಅದೇ ಹಾದಿಯಲ್ಲಿ ಕನಕದಾಸರ ಚರಿತೆ ಕೂಡ ಯಕ್ಷಪ್ರಿಯರ ಗಮನ ಸೆಳೆಯಿತು. ಯುದ್ಧದಲ್ಲಿ ಹೋರಾಟ ಮಾಡಿ ಸೋತ ತಿಮ್ಮಪ್ಪ ‘ಬದುಕಿದೆನು ಬದುಕಿದೆನು’ ಎನ್ನುವ ಪದ್ಯದೊಡನೆ ರಂಗ ಪ್ರವೇಶಿಸಿದಾಗ ಭಟ್ಟರ ಅಭಿನಯ ವೇಷಭೂಷಣ, ಭಾವಾಭಿವ್ಯಕ್ತಿ, ಧಾರಾಕಾರವಾಗಿ ಸುರಿಯುವ ಕಣ್ಣೀರು ನಿಜ ಕನಕನನ್ನು ನೆನಪಿಸಿತು. ವ್ಯಾಸತೀರ್ಥರೊಂದಿಗೆ ಸಂವಾದ, ಹನುಮಜ್ಜನಲ್ಲಿ ತಂದೆಯ ಪ್ರೀತಿ, ಪತ್ನಿ ಶ್ರೀವಧುವಿನ ಆಶಯದಂತೆ ಮೋಹನ ತರಂಗಿಣಿ ಕಾವ್ಯ ರಚನೆ, ಉಡುಪಿಗೆ ಬಂದಾಗ ಶ್ರೀಕೃಷ್ಣನ ದರುಶನಕ್ಕೆ ಹಾತೊರೆಯುವ ಕನಕರ ಭಕ್ತಿಯ ಪರಾಕಾಷ್ಠೆ, ಕಾಗಿನೆಲೆಯಲ್ಲಿ ಕಳೆದ ಕೊನೆಯ ದಿನಗಳು ನೋಡುಗರನ್ನು ಹಿಡಿದಿಟ್ಟಿತು. ಉಡುಪಿಯಲ್ಲಿ ಶ್ರೀ ಕೃಷ್ಣ ಮೈದೋರಿದ ಆ ಕ್ಷಣ ಭಾಗವತ ಕೊಳಗಿ ಅವರ ಭಕ್ತಿ ಮಾಧುರ್ಯದ ಪದ್ಯ ಹಾಗೂ ಕನಕರ ತನ್ಮಯತೆ ಜೀವನದ ಸಾಫಲ್ಯತೆ ನೋಡುಗರ ಭಾವಕೋಶಕ್ಕೆ ಕನಕ–ಕೃಷ್ಣರ ಮುಖಾಮುಖಿಯನ್ನು ಸ್ಥಾಯಿಯಾಗಿಸುತ್ತದೆ.

ಪ್ರಸಂಗಕ್ಕೆ ಬರುವ ಶ್ರೀವಧು, ಕೃಷ್ಣದೇವರಾಯ, ಆದಿಲ್‌ಶಾಹಿ ಸುಲ್ತಾನ, ವ್ಯಾಸತೀರ್ಥರು, ಶ್ರೀಕೃಷ್ಣನ ಪಾತ್ರಗಳ ನಿರ್ವಹಿಸಿದ ಕಲಾವಿದರು ಪಾತ್ರಕ್ಕೆ ಕಳೆತಂದರು.

ಪೌರಾಣಿಕ ಸಂಗತಿಗಳನ್ನು ಪ್ರಸಂಗಕ್ಕೆ ತಂದಷ್ಟು ಸುಲಭವಾಗಿ ಚಾರಿತ್ರಿಕ ವೀರರ ಪಾತ್ರಗಳನ್ನು ತರಲು ಆಗುವುದಿಲ್ಲ. ಇಲ್ಲಿ ಪ್ರಯೋಜನಕ್ಕಿಂತ ಪರಿಣಾಮಕ್ಕೆ ಹೆಚ್ಚು ಒತ್ತು ಕೊಡಬೇಕಿದೆ. ತಾತ್ವಿಕತೆಗೆ ಒಳಪಟ್ಟು ಮೂಲ ಆಶಯಗಳಿಗೆ ಎಲ್ಲಿಯೂ ಧಕ್ಕೆಯಾಗದೇ ಯಕ್ಷಗಾನದಂತಹ ಕಲೆಗೆ ಅಪಚಾರವಾಗದೇ ಪ್ರೇಕ್ಷಕರನ್ನು ತಲುಪುವುದು ಅಷ್ಟು ಸುಲಭವಲ್ಲ. ಆಯಾ ಜಾತಿ–ಜನಾಂಗದ ದೇವರ ಮಹಾತ್ಮೆಯನ್ನು ಅವರ ಸಂಪ್ರದಾಯ ಪರಂಪರೆಯನ್ನು ಎತ್ತಿಹಿಡಿದು, ಸಮಾಜಕ್ಕೊಂದು ಸಂದೇಶ ನೀಡುವ ಈ ಕಾಯಕ ಸಾಮಾನ್ಯವಾದದ್ದು ಅಲ್ಲ. ಇಲ್ಲಿ ಬರುವ ಸವಾಲುಗಳಿಗೆ, ಸಮಸ್ಯೆಗಳಿಗೆ ಉತ್ತರವನ್ನು ಕೊಡಬೇಕಾದ ಗುರುತರ ಜವಾಬ್ದಾರಿ ಹೊತ್ತುಕೊಂಡೇ ಭಟ್ಟರು ಪ್ರಸಂಗವನ್ನು ಮುನ್ನಡೆಸಿದ್ದಾರೆ.

ಕನಕದಾಸರು, ಬಸವಣ್ಣ ಮಾತ್ರವಲ್ಲದೇ ಗವಿ ಗಂಗಾಧರೇಶ್ವರರು, ಅಕ್ಕನ ಪ್ರಸಂಗದಲ್ಲಿ ಕೌಶಿಕ ಮಹಾರಾಜ, ಬೀರಲಿಂಗೇಶ್ವರ ಪಾತ್ರಗಳಿಗೆ ಜೀವ ತುಂಬುವ ದತ್ತಮೂರ್ತಿ ಭಟ್ಟರು, ಈಗ ಯಕ್ಷ ಬಸವ, ಗಾನ ಬೈರವ, ದಾಸ ಕನಕ, ಶರಣೆ ಅಕ್ಕ, ದೇವ ಬೀರಪ್ಪನ ಕಥನದೊಂದಿಗೆ ಬೀದರ್‌ನಿಂದ ಚಾಮರಾಜ ನಗರದವರೆಗೂ ಯಕ್ಷ ಭಾವೈಕ್ಯ ಯಾತ್ರೆ ಹೊರಡುವ ಆಶಯ ಹೊಂದಿದ್ದಾರೆ.

ನಾಟ್ಯಶ್ರೀ ಕಲಾ ಸಂಘದಲ್ಲಿ ಈಗ 16 ಮಂದಿ ಕಲಾವಿದರು ಇದ್ದಾರೆ. ವೃತ್ತಿ ರಂಗವನ್ನು ಬಿಟ್ಟು ಹವ್ಯಾಸಿ ರಂಗದಲ್ಲಿ ಸಾಕಾರಗೊಳ್ಳುತ್ತಿರುವ ಕಲಾವಿದರನ್ನು ಇಟ್ಟುಕೊಂಡು ಭಟ್ಟರು ಮೇಳ ರೂಪಿಸಿದ್ದಾರೆ. ಈ ಎಲ್ಲ ಯಶಸ್ಸುಗಳ ಹಿಂದೆ ಭಟ್ಟರೇ ಹೇಳುವಂತೆ ‘ನಾನಷ್ಟೇ ಕಾರಣವಲ್ಲ. ನನ್ನ ಕಲಾ ತಂಡದ ಶ್ರೇಷ್ಠ ಭಾಗವತರಾದ ಕೊಳಗಿ ಕೇಶವ ಹೆಗಡೆ, ಸುರೇಶ ಶೆಟ್ಟಿ, ಹಿಮ್ಮೇಳದವರು, ಮುಮ್ಮೇಳದ ಕಲಾವಿದರಾದ ಅಶೋಕ ಭಟ್, ಪ್ರಭಾಕರ ಹೆಗಡೆ, ಸಂಜಯ ಬೆಳೆಯೂರು, ಸದಾಶಿವ ಭಟ್, ಶ್ರೀಧರ ಹೆಗಡೆ ಚಪ್ಪರದಮನೆ, ವೆಂಕಟೇಶ ಹೆಗಡೆ, ಇಟಗಿ ಮಹಾಬಲೇಶ್ವರ, ಪ್ರಣವಭಟ್ ಮುಂತಾದ ಹಿರಿಕಿರಿಯ ಕಲಾವಿದರು ಇದ್ದಾರೆ’ ಅನ್ನುತ್ತಾರೆ. ಆಗಾಗ ಪೌರಾಣಿಕ ಪ್ರಸಂಗಗಳ ಪ್ರದರ್ಶನಕ್ಕೆ ಅತಿಥಿ ಕಲಾವಿದರನ್ನು ಆಮಂತ್ರಿಸಿ ಪ್ರದರ್ಶನ ನೀಡುತ್ತಾರೆ.

ವಿದ್ವಾನ್ ದತ್ತಮೂರ್ತಿ ಭಟ್ಟ
ವಿದ್ವಾನ್ ದತ್ತಮೂರ್ತಿ ಭಟ್ಟ

ಯಕ್ಷಗಾನ ಸೀಮೋಲ್ಲಂಘನೆಯ ಶ್ರೇಯ...

ಯಕ್ಷಗಾನ ವಲಯದ ವಿಸ್ತಾರ ವ್ಯಾಪ್ತಿಯಲ್ಲಿ ಅಪಾರ ಪ್ರೇಕ್ಷಕ ವಲಯ ಇದ್ದರೂ ಅದನ್ನು ನಿಜಾರ್ಥದಲ್ಲಿ ದತ್ತಮೂರ್ತಿ ಭಟ್ಟರು ಸೀಮೋಲ್ಲಂಘನೆಗೊಳಿಸಿದ್ದಾರೆ. ಈ ಮೊದಲು ಅವರು ವಚನ ವೈಭವವನ್ನು ಹಿಮ್ಮೇಳದೊಂದಿಗೆ ಸಮ್ಮಿಳಿತಗೊಳಿಸಿದ್ದ ಫಲವಾಗಿ ಬಸವೇಶ್ವರ ಚರಿತ್ರೆ ಯಕ್ಷಗಾನ ಪ್ರಸಂಗವಾಗಿ ಬದಲಾಗಿತ್ತು. ಅದು ಇಲ್ಲಿಯವರೆಗೆ 350ಕ್ಕೂ ಹೆಚ್ಚು ಪ್ರಯೋಗಗಳ ಕಂಡಿದೆ. ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿ ಆಶಯದಂತೆ 2015ರಲ್ಲಿ ಕಾಲಭೈರವೇಶ್ವರ ಮಹಾತ್ಮೆಯನ್ನು ಪ್ರಸಂಗಕ್ಕೆ ಅಳವಡಿಸಲಾಗಿತ್ತು. ನಾಥ ಪರಂಪರೆ ಹಾಗೂ ಒಕ್ಕಲಿಗರ ಸಂಸ್ಕೃತಿಯ ರೂಪಕ ಆದಿಚುಂಚನಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗ ಇಲ್ಲಿಯವರೆಗೆ 97 ಪ್ರಯೋಗಗಳ ಕಂಡಿದೆ. ಈಗ ಭಟ್ಟರು ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ದಿವಂಗತ ಎಂ.ಎ.ಹೆಗಡೆ ಅವರು ಪ್ರಸಂಗಕ್ಕಾಗಿ ಬರೆದಿದ್ದ ಕನಕದಾಸರ ಚರಿತ್ರೆಯನ್ನು ಯಕ್ಷಗಾನದ ಆವರಣದೊಳಗೆ ಅನಾವರಣಗೊಳಿಸಿದ್ದಾರೆ. ಕನಕರ ಬದುಕಿನ ಘಟನೆಗಳು ಹಾಗೂ ದಾಸ ಸಾಹಿತ್ಯವನ್ನು ಯಕ್ಷ ಪ್ರಸಂಗದ ಮೂಲಕ ಜನರೆದುರು ತಂದು ಸಮಾಜಕ್ಕೊಂದು ಸ್ವಾಸ್ಥ್ಯ ಸಂದೇಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT