ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರ ಸಾಹಿತ್ಯ ಅಕಾಡೆಮಿ: ಶ್ರುತಿಗೆ ಯುವ, ಕೃಷ್ಣಮೂರ್ತಿಗೆ ಬಾಲ ಪುರಸ್ಕಾರ

Published 15 ಜೂನ್ 2024, 9:42 IST
Last Updated 15 ಜೂನ್ 2024, 9:42 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ‘ಯುವ ಪುರಸ್ಕಾರ’ ಶ್ರುತಿ ಬಿ.ಆರ್. ಅವರ ಕವನ ಸಂಕಲನ ‘ಜೀರೋ ಬ್ಯಾಲೆನ್ಸ್‌’ಗೆ ಹಾಗೂ ‘ಬಾಲ ಸಾಹಿತ್ಯ ಪುರಸ್ಕಾರ’ ಕೃಷ್ಣಮೂರ್ತಿ ಬಿಳಿಗೆರೆ ಅವರ ‘ಛೂಮಂತ್ರಯ್ಯನ ಕತೆಗಳು’ ಕೃತಿಗೆ ಲಭಿಸಿದೆ.

ಪ್ರಶಸ್ತಿ ಪುರಸ್ಕೃತರು ತಲಾ ₹ 50 ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ಶ್ರುತಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರು. ತಹಶೀಲ್ದಾರ್ ಆಗಿರುವ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಪ್ರಥಮ ರ‍್ಯಾಂಕ್ ಹಾಗೂ ಐದು ಚಿನ್ನಗಳೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌.ಡಿ ಪಡೆದಿದ್ದಾರೆ. ಅವರ ಹಲವು ಲೇಖನಗಳು ಹಾಗೂ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೃಷ್ಣಮೂರ್ತಿ ಬಿಳಿಗೆರೆ ಅವರು ಹುಳಿಯಾರಿನ ಬಿಎಂಎಸ್‌ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಯವ ಕೃಷಿ ಹಾಗೂ ಮಳೆನೀರು ಸಂಗ್ರಹ ಚಳವಳಿಗಳಲ್ಲಿ ಸಕ್ರಿಯರಾಗಿದ್ದಾರೆ. ‘ಸಾವಿರ ಕಣ್ಣಿನ ನವಿಲು’, ‘ಕಿಂಚಿತ್ತು ಪ್ರೀತಿಯ ಬದುಕು’, ‘ದಾಸಯ್ಯ ಇದು ಕನಸೇನಯ್ಯ’, ‘ಧರೆ ಮೇಲೆ ಉರಿಪಾದ ಇವು’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಹಲವು ಮಕ್ಕಳ ಕತೆಗಳನ್ನು ಬರೆದಿದ್ದಾರೆ.

ಯುವ ಪುರಸ್ಕಾರಕ್ಕೆ ಕನ್ನಡದ ಲೇಖಕರಾದ ಪ್ರೊ.ಬಸವರಾಜ ಪಿ.ಡೋಣೂರ, ಡಾ.ಆರತಿ ಎಚ್‌.ಎನ್‌. ಹಾಗೂ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತೀರ್ಪುಗಾರರಾಗಿದ್ದರು. ಬಾಲ ಸಾಹಿತ್ಯ ಪುರಸ್ಕಾರಕ್ಕೆ ಹಿರಿಯ ಸಾಹಿತಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ಡಾ.ಅಪ್ಪಗೆರೆ ಸೋಮಶೇಖರ್ ಹಾಗೂ ಶಂಕರ್ ಸಿಹಿಮೊಗೆ ತೀರ್ಪುಗಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT