ಕರ್ನಾಟಕದ ವಿಶಿಷ್ಟ ಹಾಗೂ ವೈವಿಧ್ಯಮಯ ವಾಙ್ಮಯದಲ್ಲಿ ಮಹಿಳಾ ಹರಿದಾಸರ ಪಾತ್ರ ಮತ್ತು ಕೊಡುಗೆಗೆಳು ಅಪೂರ್ವವಾಗಿವೆ. ಮಹಿಳಾ ಹರಿದಾಸರ ಪದಗಳಲ್ಲಿ ಜೀವನದ ಸಾರ ಸರ್ವಸ್ವ ಜಗಜ್ಜಾಹಿರಗೊಳ್ಳುತ್ತದೆ. ಅವು ದೈನಂದಿನ ಜೀವನ ಕನ್ನಡಿ. ಕೇವಲ ಪ್ರಾಸಬದ್ಧ ಪದಜೋಡಣೆಗಳಲ್ಲ. ಹಾಗಾಗಿ ವಾಸ್ತವದೊಂದಿಗೆ ಮುಖಾಮುಖಿ. ಮಾನವ ಜೀವನದ ಸತ್ಯ ದರ್ಶನವೂ ಲಭ್ಯ.
ಮಹಿಳಾ ಹರಿದಾಸ ಶಿರೋಮಣಿಗಳ ಸಾಹಿತ್ಯದ ಕಲಾತ್ಮಕ ಅಭಿವ್ಯಕ್ತಿಯನ್ನು ಕರ್ನಾಟಕ ಸಂಗೀತದ ಸೌಂದರ್ಯದೊಂದಿಗೆ ಮೇಳೈಸಿ ಅದರ ಆಸ್ವಾದದ ವೈಶಿಷ್ಟ್ಯವನ್ನು ಪ್ರತಿಭಾ ಸಂಪನ್ನ ಗಾಯಕಿಯರಾದ ಡಾ.ಶುಭಮಂಗಳ ರಘುನಂದನ್, ಡಾ. ಉಮಾ ಕುಮಾರ್, ಸಂಶೋಧಕಿ ಡಾ.ವಿದ್ಯಾರಾವ್‌ಅವರು ಇತರೆ ಪಕ್ಕವಾದ್ಯಗಾರರೊಂದಿಗೆ ಸಾಂಘಿಕ ಪ್ರದರ್ಶನದಲ್ಲಿ ಸೆರೆ ಹಿಡಿದರು.
“ಮಹಿಳಾ ಹರಿದಾಸ ಸಂಪದ” ಎಂಬ ಹೆಸರಿನಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬದ್ಧತೆ ಮತ್ತು ಅರ್ಪಣಾ ಭಾವದಿಂದ ತಮ್ಮ ಕಲೆಯಲ್ಲಿ ನೈಪುಣ್ಯ ಸಾಧಿಸಿ ವಿವಿಧತೆಯ ಯಶಸ್ಸು ನಿರಂತರವಾಗಿ ಸಾಧಿಸುತ್ತಿರುವ ಡಾ.ಶುಭಮಂಗಳಾ ಮತ್ತು ಡಾ.ಉಮಾ ಮಹಿಳಾ ಹರಿದಾಸರ ಕೃತಿಗಳ ಹಿರಿಮೆ-ಗರಿಮೆಗಳನ್ನು ಸೊಗಸಾದ ಯುಗಳ ಗಾಯನ ಕಾರ್ಯಕ್ರಮದಲ್ಲಿ ಸೆರೆ ಹಿಡಿದರು.
ಡಾ.ವಿದ್ಯಾ ರಾವ್ ತಮ್ಮ ಸಂಶೋಧನೆಯ ಫಲವನ್ನು ತಮ್ಮ ಪರಿಚಯಾತ್ಮಕ ಟಿಪ್ಪಣಿಗಳೊಂದಿಗೆ ಹಂಚಿದರು. ಅವುಗಳ ಆಶಯವನ್ನು ಗಾಯಕಿಯರು ರಾಗಬದ್ಧಗೊಳಿಸಿ ನಿಬದ್ಧ ಮತ್ತು ಸನಿಬದ್ಧವಾಗಿ ಸೊಗಸಾದ ಅಲಂಕರಣಗಳೊಂದಿಗೆ ದಾಖಲಿಸಿ ತಮ್ಮ ಪಾರಮ್ಯ ಮೆರೆದರು.
ರಾಗಾಲಾಪನೆಯ ತುಣುಕುಗಳು, ನುರಿತ ಗಾಯಕಿರಿಬ್ಬರೂ ಹಂಚಿಕೊಂಡು ಕೈಗೊಂಡ ರಾಗ ಮತ್ತು ಸಾಹಿತ್ಯ ಭಾವದ ವಿಸ್ತರಣೆಗಳು, ಸಾಹಿತ್ಯದ ಬಂಧಕ್ಕೆ ಅನುಗುಣವಾದ ಲಯ ಪ್ರಯೋಗಗಳು, ಅಲ್ಲಲ್ಲಿ ಸ್ವರಕಲ್ಪನೆಗಳ ಜೋಡಣೆಗಳು, ಕೊಳಲು, ರಿದಂ ಪ್ಯಾಡ್(ರಾಕೇಶ್ ದತ್ತ ಮತ್ತು ಸುಮಧುರ್ ಆನೂರ್) ಪಕ್ಕವಾದ್ಯಗಾರರ ಮಾಧರ್ಯ ಪ್ಯಾಡಿಂಗ್‌ಗಳು, ಜಿ.ಎಸ್. ಅಶ್ವಥನಾರಾಯಣಾರವರ ಮೃದಂಗ ಮತ್ತು ತಬಲಾ ಸಾಥ್ ಆಯ್ದ ರಚನೆಗಳನ್ನು ರಸಾನಂದದವರೆಗೆ ಕೊಂಡೊಯ್ದವು. ಯುಗಳ ಸಂಗೀತ ಕಛೇರಿಯನ್ನು ಪರಿಭಾಷಿಸಿದ ಕಾರ್ಯಕ್ರಮವಾಗಿ ಅದು ರೂಪುಗೊಂಡಿದ್ದು ಸಹಜವೇ ಸರಿ.
ಗಣೇಶನ ಕೃತಿಗಯೊಂದಿಗೆ (ಹಂಸ ಧ್ವನಿ) ಆರಂಭವಾದ ಕಛೇರಿಯಲ್ಲಿ ಗಲಿಗಲಿ ಅವ್ವನ ಮುಯ್ಯಿಪದಗಳು(ರಾಗಮಾಲಿಕೆ, ತಾಳಮಾಲಿಕೆ), ಹೆಳವನಕಟ್ಟಿ ಗಿರಿಯಮ್ಮನ ಎರಡು ರಚನೆಗಳು, ಹರಪನಹಳ್ಳಿ ಭೀಮವ್ವ(ದಶಾವತಾರ, ಆರತಿ ಹಾಡು, ನರಸಿಂಹನ ಕೃತಿ) ಮುಂತಾದ ನಿರೂಪಣೆಗಳು ಹೃನ್ಮನಗಳನ್ನು ಗೆದ್ದವು. ಸೌಮಂಗಲ್ಯ, ಸರ್ವಸಂಪತ್ತನ್ನ್ನೇ ಬೇಡುವಂತಹ ಮಂಗಳದೊಂದಿಗೆ ಅಂದಿನ ಕಾರ್ಯಕ್ರಮ ಸಮಾಪ್ತವಾಯಿತು.
ಲಯ ಲಾಸ್ಯ: ಮಹಿಳಾ ಹರಿದಾಸ ಸಾಹಿತ್ಯದ ವೈಭವ ದರ್ಶನ
ಮಿಂಚಿದ ನಿರುಪ ರಾವ್...
ಬಹುಮುಖ ಪ್ರತಿಭೆಯ ಯುವ ನೃತ್ಯಾಕಾಂಕ್ಷಿ ನಿರುಪ ಆರ್.ರಾವ್ ಭರತನಾಟ್ಯ ಕಲೆಯಲ್ಲೂ ತಮ್ಮ ವಿಶಿಷ್ಟ ಪರಿಣತಿಯನ್ನು ಎಡಿಎ ರಂಗಮಂದಿರದಲ್ಲಿ ಪ್ರದರ್ಶಿಸಿದರು. ಯುವ ಗುರು ಹಾಗೂ ದೊಡ್ಡಮ್ಮ ಡಾ. ಫಣಿಮಾಲಾ ಅವರಲ್ಲಿ ಶಿಸ್ತಿನ ತರಬೇತಿಯನ್ನು ಹೊಂದಿರುವ ನಿರುಪ ಅತ್ಯಂತ ಪ್ರಾಮಾಣಿಕ ಹಾಗೂ ಪ್ರಬುದ್ಧ ಅಭಿನಯದಿಂದ ನೋಡುಗರ ಮನ ಸೆಳೆದರು. ಕಲೆಯ ಬಗೆಗಿನ ಅವರಿಗಿರುವ ಅನುರಾಗ ಅಭಿನಂದನೀಯ. ಕಾವ್ಯ ಪ್ರತಿಭಾ ಸಂಪನ್ನೆಯೂ ಆಗಿರುವ ನಿರುಪ ಅಭಿನಯದ ಸೊಗಸನ್ನು ಎತ್ತಿತೋರುವ ಸಾತ್ವಿಕಾಭಿನಯದಲ್ಲೂ ಮಿಂಚಿದರು.
ನಿರುಪ ರಾವ್
ಗುರು ಫಣಿಮಾಲಾ ಅವರ ಸಮರ್ಥ ನಟುವಾಂಗದ ನೇತೃತ್ವದಲ್ಲಿ ಎನ್.ಎಸ್. ರಾಮಬ್ರಹ್ಮಾ ಅವರ ಆತ್ಮೀಯ ಗಾಯನ, ಮಧುಸೂದನ್(ಪಿಟೀಲು), ಸ್ಕಂದಕುಮಾರ್(ಕೊಳಲು) ಮತ್ತು ಜಿ.ಎಸ್.ನಾಗರಾಜ್(ಮೃದಂಗ) ಸಕ್ರಿಯ ಸಹಕಾರದೊಂದಿಗೆ ಆಕೆಯ ಅಭಿನಯ ಉತ್ಕೃಷ್ಟತೆ ಕ್ಷೇತ್ರಜ್ಞನ ಪದ (ಎಂದೆಂದುಒಚ್ಚಿತಿವಿರಾ, ಸುರುಟಿರಾಗ) ಭಾವ, ಅರ್ಥ, ಭಕ್ತಿ, ಪ್ರೇಮ, ವಿಪ್ರಲಂಭ ಶೃಂಗಾರ ಇತ್ಯಾದಿಗಳ ಸಾರ್ಥಕ ಅಭಿವ್ಯಕ್ತಿಯಿಂದ ಜೀವಂತಗೊಂಡಿತು. ಖಂಡಿತಾ ನಾಯಕಿಯ ಸ್ಥಿತಿಗತಿಗಳು ಹಾಗೂ ವಿಷ್ಣುವಿನ ನಾನಾ ರೂಪಗಳ ಚಿತ್ರಣ ವಿಳಂಬ ಕಾಲದಲ್ಲಿ ರಂಜಿಸಿದವು. ಕೊನೆಯ ಫರಜ್ಞ ತಿಲ್ಲಾನ ಕಾರ್ಯಕ್ರಮಕ್ಕೆ ಸಶಕ್ತವಾದ ಉಪಸಂಹಾರವನ್ನು ಒದಗಿಸಿತು.
-ಡಾ. ಎಂ. ಸೂರ್ಯ ಪ್ರಸಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.