ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ್ಲಿರೇನಯ್ಯಾ, ನಾನೊಬ್ಬಳೇ ಪದ್ಮಾವತಿ!

Last Updated 4 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಸಂಪೂರ್ಣ ಸ್ತ್ರೀ ಪ್ರಧಾನವನ್ನಾಗಿಸಿ ಪ್ರಸಂಗವನ್ನು ಹೆಣೆದ ಒಂದು ವಿಭಿನ್ನ ಪ್ರಯೋಗಾತ್ಮಕ ತಾಳಮದ್ದಳೆಯೊಂದು ಇತ್ತೀಚೆಗೆ ನಡೆಯಿತು. ಪ್ರತೀ ಮಾತನ್ನೂ ಪದ್ಯವನ್ನೂ ಸ್ತ್ರೀ ಪ್ರಧಾನವನ್ನಾಗಿಸುವುದಷ್ಟೇ ಅಲ್ಲ, ಕನ್ನಡದಲ್ಲಿ ಬರುವ ಸಿದ್ಧಮಾದರಿಯ ನಾಣ್ನುಡಿಗಳನ್ನು, ಮಾತುಗಳನ್ನು ಮಹಿಳಾ ಪರವಾಗಿ ಕಟ್ಟುವ ಪ್ರಯತ್ನವನ್ನೂ ಇದರಲ್ಲಿ ಮಾಡಲಾಗಿದೆ.

‘ಬಲ್ಲಿರೇನಯ್ಯಾ, ಕಮಲಾಪುರದ ರಾಣಿ ಪದ್ಮಾವತಿ ನಾನು. ನಾವೇ ಸರಿ, ನನ್ನ ರಾಜ್ಯದಲ್ಲಿ ಎಲ್ಲವೂ ಸುಭಿಕ್ಷವಾಗಿದೆ. ನಮ್ಮಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲ. ಗಂಡಿಗೆ ಇಂಥದ್ದೇ ಸಮಯಕ್ಕೇ ಮನೆಗೆ ಬರಬೇಕು, ಇಂಥದ್ದೇ ಸಮಯಕ್ಕೆ ಮನೆ ಬಿಡಬೇಕೆಂಬ ಯಾವ ಕಟ್ಟುಪಾಡುಗಳಿಲ್ಲ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನಾವು ಕೊಟ್ಟಿದ್ದೇವೆ. ಮಕ್ಕಳ ಲಾಲನೆ, ಪಾಲನೆ, ಮನೆಯ ಉಸ್ತುವಾರಿಯೆಲ್ಲ ಅವರಿಗೆ ಸಂತೋಷಕೊಡುವ ಸಂಗತಿ. ಹಾಗಾಗಿ ಅವರನ್ನು ಅವರ ಪಾಡಿಗೆ ಬಿಟ್ಟಿದ್ದೇವೆ. ಆದರೆ, ಕೆಲವು ಕಡೆ ಗಂಡು ಮಕ್ಕಳನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಇದು ಸಲ್ಲದು, ಚಕ್ರವರ್ತಿನಿಯಾಗಿ, ನನ್ನ ರಾಜ್ಯದಲ್ಲಿ ಮಾತ್ರವಲ್ಲ, ಎಲ್ಲ ರಾಜ್ಯಗಳಲ್ಲೂ ಧರ್ಮ ಪರಿಪಾಲನೆ ನಡೆಯಬೇಕೆಂಬ ಕಾರಣಕ್ಕೆ ಅಶ್ವಮೇಧಯಾಗ ಮಾಡಿ, ಯುದ್ಧಕ್ಕೆ ಹೊರಟಿದ್ದೇನೆ. ಜೊತೆಗೆ ನನ್ನ ಮಗಳನ್ನೂ ಕರೆದುಕೊಂಡು ಹೊರಟಿದ್ದೇನೆ...’

ಹೀಗೆ ಒಬ್ಬ ಶೂರನಾದ ರಾಜ ಹೇಳುವಂತೆ ಒಬ್ಬ ರಾಣಿ ಹೇಳುವಂತಹ ಈ ಸಂಭಾಷಣೆ, ಸಂಪೂರ್ಣ ಮಹಿಳಾ ಪ್ರಧಾನ ತಾಳಮದ್ದಳೆಯಾದ ಪದ್ಮಾವತಿ ಕಾಳಗದಲ್ಲಿ ಪದ್ಮಾವತಿ ಹೇಳುವ ಮಾತುಗಳು.

ಈ ತಾಳಮದ್ದಳೆ ಇದುವರೆಗೆ ತಲೆತಲಾಂತರದಿಂದ ಬಂದ ಸಾಂಪ್ರದಾಯಿಕ ಚೌಕಟ್ಟನ್ನೇ ಮುರಿದು ಕಟ್ಟುವ ಒಂದು ಹೊಸ ಪ್ರಯೋಗ. ಇಲ್ಲಿ ಗಂಡಿನ ಜಾಗದಲ್ಲಿ ಹೆಣ್ಣು ನಿಲ್ಲುತ್ತಾಳೆ. ಹೆಣ್ಣಿಗೆ ಲಾಗಾಯ್ತಿನಿಂದ ಹೊರಿಸುತ್ತ ಬಂದ ಎಲ್ಲ ಮಾತುಗಳನ್ನೂ ಇಲ್ಲಿ ಪುರುಷನಿಗೆ ಅನ್ವಯಿಸಲಾಗುತ್ತದೆ.

ಹೇಗೆಂದರೆ, ಮಕ್ಕಳನ್ನು ಹೆರುವವಳು ಹೆಣ್ಣು, ಅವುಗಳ ಲಾಲನೆ ಪಾಲನೆ, ಮನೆಯ ಅಷ್ಟೂ ಜವಾಬ್ದಾರಿ ಪುರುಷನದ್ದು. ಹೆಂಗಸರನ್ನು ಆಡಿಕೊಳ್ಳಲೆಂದೇ ಇರುವ ಪ್ರತೀ ನುಡಿಗಟ್ಟೂ ಇಲ್ಲಿ ಪುರುಷರಿಗಾಗಿಯೇ ಇದೆಯೆಂಬಂತೆ ಬದಲಾಗುತ್ತದೆ. ‘ಪುರುಷ ಸಮಾಜದ ಹರುಷ’, ‘ಗಂಡಿನ ಬುದ್ಧಿ ಮಂಡಿಯತನಕ’, ‘ಎಷ್ಟೆಂದರೂ ತಂದೆಗರುಳಲ್ಲವೇ...?’ ಇತ್ಯಾದಿ ಮಾತುಗಳು ಪ್ರಸಂಗದುದ್ದಕ್ಕೂ ಬರುತ್ತವೆ.

ಹೆಣ್ಣು ಯಾವಾಗಲೂ ಇರುವಂತೆ ಸೌಂದರ್ಯಕ್ಕೆ ಹೆಸರಾಗಿ, ನಾಚಿಕೆಯೇ ಮೈದಳೆದಂತೆ ಇಲ್ಲಿ ನಿಲ್ಲುವುದಿಲ್ಲ. ಬದಲಾಗಿ ಅವಳಿಲ್ಲಿ ಶೂರೆ, ಧೀರೆ, ಘನಗಂಭೀರೆ. ರಾಜ್ಯವನ್ನಾಳುವ ಒಡತಿಯವಳು, ಯುದ್ಧಕ್ಕೆ ಹೋಗುವವಳು, ಅವಳ ಮಗಳೂ ಯುದ್ಧಕ್ಕೆ ಹೊರಡುವವಳೇ. ಪದ್ಮಾವತಿಯ ಮಗಳು ಶೂರಮತಿ ಯುದ್ಧಕ್ಕೆ ಹೊರಟು ನಿಂತು ಅಪ್ಪನ ಆಶೀರ್ವಾದವನ್ನು ಪಡೆಯಲು ಅಪ್ಪನ ಬಳಿ ಬರುತ್ತಾಳೆ.

ಅಲ್ಲಿನ ಶೂರಮತಿಯ ಮಾತುಗಳು ಹೀಗಿವೆ: ‘ನನ್ನ ತಂದೆಗೆ ನಾನೆಂದೆರೆ ತುಂಬಾ ಪ್ರೀತಿ. ನಾನು ಯುದ್ಧಕ್ಕೆ ಹೊರಡುತ್ತೇನೆಂದರೆ ಅವನು ಖಂಡಿತಾ ಒಪ್ಪಲಾರ. ಎಷ್ಟಾದರೂ ತಂದೆಗರುಳಲ್ಲವೇ...? ಅಪ್ಪಾ, ನನಗೆ ಗೊತ್ತು, ನೀನು ರಣರಂಗವನ್ನು ನೋಡಿದವನಲ್ಲ, ಅದಕ್ಕೇ ಹೀಗೆ ಹೆದರುತ್ತಾ ಇದ್ದೀಯ. ನನ್ನಂತಹ ಕುವರಿಯರಿಗೆ ರಣರಂಗವೆಂದರೆ ಆಟದ ಮೈದಾನವಿದ್ದ ಹಾಗೆ. ಬಳೆ ತೊಡುವ ಕೈಗಳ ಬಲಾಢ್ಯವನ್ನು ಪ್ರದರ್ಶಿಸುವ ಸಮಯವಿದು ಅಪ್ಪಾ, ಹೊರಡುತ್ತೇನೆ...’

ಜನಪ್ರಿಯ ಕಲಾ ಪ್ರಕಾರಗಳಲ್ಲಿಯೇ ಇಂಥದ್ದೊಂದು ಪ್ರಯತ್ನವನ್ನು ನಾವು ನೋಡಿದ ಉದಾಹರಣೆಯಿಲ್ಲ. ನಮ್ಮ ಸಿನಿಮಾರಂಗದಲ್ಲಿ ಕೂಡ ಕತೆ, ಸಂಭಾಷಣೆ, ಹಾಡು ಪ್ರತಿಯೊಂದರಲ್ಲೂ ಹೆಣ್ಣನ್ನು ಹೀಗಳೆಯುವಂತಹ ಸಂದರ್ಭ ಅಥವಾ ಅರ್ಪಣಾ ಮನೋಭಾವದ ಉದಾಹರಣೆಗಳನ್ನೇ ನೋಡುತ್ತೇವೆ. ‘ನಾನೇನು ಬಳೆ ತೊಟ್ಟಿಲ್ಲ’, ‘ಮೀಸೆ ಹೊತ್ತ ಗಂಡಸು ನಾನು’, ‘ಸೀರೆ ಉಟ್ಟುಕೊಂಡಿಲ್ಲ ಇಲ್ಲಿ’, ‘ಪಾಪ ಹೆಣ್ಣುಹೆಂಗಸು ಅವಳು, ಅವಳಿಗೇನಯ್ಯ ತಿಳಿಯುತ್ತದೆ’... ಇಂತಹ ಸಂಭಾಷಣೆಗಳನ್ನೇ ಕೇಳುತ್ತಾ ಬಂದಿದ್ದೇವೆ.

ಅದೇ ರೀತಿ ಗಂಡು ಕಲೆಯೆಂದೇ ಖ್ಯಾತವಾದ ಯಕ್ಷಗಾನವೂ ಇದಕ್ಕಿಂತ ಭಿನ್ನವಾಗಿಲ್ಲ. ಹಾಗೆ ನೋಡಿದರೆ ತುಂಬಾ ತರ್ಕವನ್ನು ಬೇಡುವಂತಹ ಕಲೆ ಯಕ್ಷಗಾನ ಮತ್ತು ತಾಳಮದ್ದಳೆ. ಇಲ್ಲಿ ಮಹಿಳೆಯೂ ಪುರುಷನ ತರ್ಕದಂತೆ ಸಾಗುವವಳು. ಹಾಗಾಗಿ ನಮಗೆ ಒಮ್ಮೊಮ್ಮೆ ಇಲ್ಲಿನ ಸ್ತ್ರೀ ಪಾತ್ರಗಳು ಅದೆಷ್ಟು ಸ್ವತಂತ್ರ ವ್ಯಕ್ತಿತ್ವದವು ಎಂದೆನಿಸಿಬಿಡುತ್ತದೆ. ಅದು ಅಂಬೆ, ಶೂರ್ಪನಖಿ, ಪ್ರಭಾವತಿ, ದೇವಯಾನಿ, ದ್ರೌಪದಿ, ಸೀತೆ... ಹೀಗೆ ಯಾರೇ ಇರಲಿ, ಸ್ವತಂತ್ರ ಮನೋಭಾವದ ಒಬ್ಬಳು ಹೆಣ್ಣಾಗಿ ನಮಗೆ ತೋರುವುದು ಪುರುಷರ ವಾಕ್‌ ಚಾತುರ್ಯದ ಫಲ. ಆದರೆ, ಕಡೆಯಲ್ಲಿ ಅವರನ್ನೆಲ್ಲ ಮತ್ತೆ ಅದೇ ಸಂಪ್ರದಾಯದ ಚೌಕಟ್ಟಿನೊಳಗೇ ಸಿಲುಕಿಸಲಾಗುತ್ತದೆಯೇ ಹೊರತು ಅವರ ಸ್ವತಂತ್ರ ವ್ಯಕ್ತಿತ್ವವನ್ನು ಇವೆಲ್ಲ ಹೇಳುವುದಿಲ್ಲ. ಇಂಥ ಎಲ್ಲ ಸಿದ್ಧ ಮಾದರಿಗಳನ್ನು ಮುರಿಯುವಂತಹ ಪ್ರಯತ್ನವನ್ನು ಮಾಡಿದವರು ತಮ್ಮದೇ ಆದ ಮಹಿಳಾ ತಾಳಮದ್ದಳೆಯನ್ನು ಕಟ್ಟಿಕೊಂಡು, ಸ್ವತಃ ಭಾಗವತಿಕೆಯನ್ನೂ ಮಾಡುವ ಕೃತಿ ಆರ್.ಪುರಪ್ಪೆಮನೆಯವರು.

‘ಪದ್ಮಾವತಿ ಕಾಳಗ’ವೆಂಬ ತಾಳಮದ್ದಳೆಯನ್ನು ರೂಪಿಸಿ ರಂಗದಲ್ಲಿ ಪ್ರಯೋಗ ಮಾಡಿದವರು ಇವರೇ. ಸ್ಥಳೀಯ ಮಹಿಳೆಯರನ್ನೊಳಗೊಂಡು, ಕೆಲವು ಹೊರಗಿನ ಕಲಾವಿದರನ್ನೂ ಸೇರಿಸಿಕೊಂಡು ನಡೆಸಿದ ಪ್ರಯೋಗವಿದು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಸಿಜಿಕೆ ರಂಗೋತ್ಸವದಲ್ಲಿ ಈ ತಾಳಮದ್ದಳೆಯೂ ಪ್ರದರ್ಶಿಸಲ್ಪಟ್ಟಿತು.

‘ಸ್ತ್ರೀ-ಪುರುಷರಿಬ್ಬರೂ ಸಮಾನರು ಎಂದು ನೇರವಾಗಿ ಹೇಳಿದರೆ ಯಾರೂ ಕೇಳಲು ಸಾಧ್ಯವಿಲ್ಲ ಅಥವಾ ಅದು ಒಳಗಿಳಿಯುವುದಿಲ್ಲ. ಇದನ್ನೆಲ್ಲ ಚರ್ಚೆ ಮಾಡುವುದಕ್ಕೆ ತಾಳಮದ್ದಳೆ ಸೂಕ್ತ ಜಾಗವೆನಿಸಿತು. ಇದೇ ಹೊತ್ತಿನಲ್ಲಿ ‘ಪವರ್’ ಎನ್ನುವ ಇಂಗ್ಲಿಷ್ ಕಾದಂಬರಿಯನ್ನು ಓದಿದೆ. ಅದರಲ್ಲಿ ಎಲ್ಲಿಯೂ ವಾದ ಮಾಡುವುದಿಲ್ಲ. ಬದಲಾಗಿ ವಿಷಯಗಳನ್ನು ಹಿಮ್ಮುಖವಾಗಿ ಪ್ರಸ್ತುತಿ ಮಾಡುತ್ತ ಹೋಗುತ್ತಾರೆ ಲೇಖಕಿ. ಅದರಿಂದ ಪ್ರೇರೇಪಣೆ ಪಡೆದು ಈ ರೀತಿಯ ಪ್ರಸಂಗ ಕಟ್ಟಿದೆ’ ಎನ್ನುತ್ತಾರೆ ಕೃತಿ.

‘ಹೌದು, ಯಕ್ಷಗಾನ, ತಾಳಮದ್ದಳೆಗಳಲ್ಲಿ ತರ್ಕಕ್ಕೆ, ಚರ್ಚೆಗೆ ಬಹುದೊಡ್ಡ ಅವಕಾಶವಿದೆ. ಆದರೆ, ಯಕ್ಷಗಾನ ಪ್ರಸಂಗಗಳ ರಂಗನಡೆಯಲ್ಲಿ ಇಬ್ಬರು ಮಹಿಳೆಯರು ಅಥವಾ ಅಕ್ಕತಂಗಿಯರ ಸಾಂಗತ್ಯದ ಸನ್ನಿವೇಶಗಳು ಅಥವಾ ದಶರಥ, ಭೀಷ್ಮರಂತಹ ಘನತೆವೆತ್ತ ವ್ಯಕ್ತಿಗಳು ಅಥವಾ ಸಮಾನ ಪಾತ್ರಗಳು ಸ್ತ್ರೀಯರಲ್ಲಿ ಅನಾವರಣಗೊಂಡಿಲ್ಲ. ಅಂದರೆ, ಸಾಹಿತ್ಯದ ಪಠ್ಯದಲ್ಲಿ ಪುರಾಣ ಕತೆಗಳು ಮರು ನಿರೂಪಿತವಾದಂತೆ ಯಕ್ಷಗಾನದಲ್ಲಿ ಆಗಲಿಲ್ಲ. ಬಹುಶಃ ಪುರಾಣಕ್ಕೆ ನಿಷ್ಠವಾಗಿರಬೇಕು ಅನ್ನೋ ಹಂಬಲವೇ ಇದಕ್ಕೆ ಕಾರಣವಾಗಿರಬೇಕು’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಯಕ್ಷಗಾನದಲ್ಲಿ ಶೂರ್ಪನಖಿಗೊ, ಅಂಬೆಗೊ ಮರು ಮದುವೆ ಮಾಡುವುದು ಕಷ್ಟ. ರಾಮ, ವಾಲಿ ಎಷ್ಟೇ ಚರ್ಚಿಸಿದರೂ ವಾಲಿ ಕೊನೆಗೆ ಸಾಯಲೇಬೇಕು. ಇದು ಸಮಾಜಕ್ಕೆ ಏನನ್ನು ಹೇಳುತ್ತದೆ? ಈ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಿದ್ದೇ ಈ ಥರ ಹೊಸ ಪ್ರಯೋಗಕ್ಕೆ ಇಳಿಯುವಂತಾಯಿತು’ ಎಂದು ವಿವರಿಸುವ ಕೃತಿ, ಈ ಪ್ರಸಂಗದಲ್ಲಿ ಪ್ರತೀ ಪದ್ಯ, ಪ್ರತೀ ನಾಣ್ನುಡಿ, ಪ್ರತೀ ಮಾತು ಎಲ್ಲವನ್ನೂ ಮಹಿಳಾ ಪ್ರಧಾನವಾಗಿಸಿರುವುದನ್ನು ಕಾಣುತ್ತೇವೆ.

ಪದ್ಮಾವತಿ ಕಾಳಗದಲ್ಲೂ ಒಬ್ಬ ಪುರುಷರಾಜ ಬರುತ್ತಾನೆ. ಅವನಿಗೊಬ್ಬ ಪರಿಚಾರಕ. ಅವನ ಪದ್ಯ ಹೀಗಿದೆ...

ಪರಾಕು ಒಡೆಯ ಪರಾಕು. ಹಮ್ಮಿನ ಅರಸ ಪರಾಕು,
ಹೊರಹೊಸ್ತಿಲಲಿ, ನೀರೆಯೋರ್ವಳು
ಮೂರು ಲೋಕಕೂ ಹೆಂಡತಿಯಂತೆ...
ತುರುಗವಕಟ್ಟಿ, ಚಿತ್ತ ಶುದ್ಧಿಯಲಿ ಕಪ್ಪವನ್ನು ಕೊಡಬೇಕಂತೆ...

ಅಂದರೆ ಮೂರು ಲೋಕದಗಂಡ ಎಂಬ ಪದವನ್ನು ಇಲ್ಲಿ ಮೂರುಲೋಕದ ಹೆಂಡತಿಯಂತೆ ಎಂದು ಮರು ಸೃಷ್ಟಿಸಲಾಗಿದೆ.

‘ಪದ್ಮಾವತಿ’ಯ ವನಿತಾ ಒಡ್ಡೋಲಗ –ಚಿತ್ರಗಳು: ತಾಯಿ ಲೋಕೇಶ್
‘ಪದ್ಮಾವತಿ’ಯ ವನಿತಾ ಒಡ್ಡೋಲಗ –ಚಿತ್ರಗಳು: ತಾಯಿ ಲೋಕೇಶ್

ಮುಂದೆ ಪದ್ಮಾವತಿಯ ಮಗಳು ಶೂರಮತಿಯು ಅಶ್ವವ ಹಿಡಿದು ಯುದ್ಧ ಮಾಡುತ್ತಾ ಒಂದು ದಟ್ಟ ಕಾನನಕ್ಕೆ ಬರುತ್ತಾಳೆ. ಅಲ್ಲಿ ಸ್ವಲ್ಪಹೊತ್ತು ವಿಶ್ರಮಿಸುತ್ತಾಳೆ. ಆಗ ಅಲ್ಲೊಬ್ಬ ಅಪ್ಸರ ಕುವರ ಭೂಮಿಗೆ ಬಂದು ಮಲಗಿರುವ ಶೂರಮತಿಯನ್ನು ನೋಡಿ, ‘ಇಂದ್ರಾಣಿಯ ಸಭೆಯಲ್ಲಿರುವ ಧೀರೆಯರು, ಶೂರೆಯರು, ಮುನಿಪೆಯರ ಸಭೆಯಿಂದ ಬಂದವ ನಾನು, ನನ್ನ ಹೆಸರು ಮೋಹನ’ ಅಂತ, ಎಂದು ನಾಚುತ್ತ ತನ್ನ ಪರಿಚಯಿಸಿಕೊಳ್ಳುವ ಹೊತ್ತಿಗೆ ಶೂರಮತಿಗೆ ಎಚ್ಚರವಾಗಿ ಅವನನ್ನು ನೋಡುತ್ತಾಳೆ. ಶೂರಮತಿ ಅವನನ್ನು ವರ್ಣಿಸುವ ಪರಿ ಹೀಗಿದೆ.

ಯಾರು ಪೇಳೆಲೋ ಚದುರ ಶೋಕಿಲಾಲ
ಚಂದ್ರಬಿಂಬನೆ ನಿನ್ನ ಮೋಡಿಜಾಲ
ನರಪೋರರಲ್ಲಿ ಕಾಣೆ ಗುಣಶೀಲ ಅಬಲ ಗುಣಶೀಲ
ನಿನ್ನ ವಧುಯಾರೋ/ ಮಾತೆಯ ಪೆಸರೇನೋ ಬಾಲ
ಪೆಸರೇನೋ ಅಬಲ
ರತಿಯಕಾಂತನೊ ನೀನು ಕೋಮಲಾಂಗ ಆಹಾ ಸುಂದರಾಂಗ

ಎಂದು ಪರಿಪರಿಯಾಗಿ ಅವನನ್ನು ವರ್ಣಿಸಿ, ಇನ್ನು ತಡಮಾಡೋದು ಸರಿಯಲ್ಲ, ನಾನಂತೂ ಸಂಪೂರ್ಣವಾಗಿ ಸೋತುಹೋಗಿದ್ದೇನೆ. ಗಂಧರ್ವ ರೀತಿಯಲ್ಲಿ ವಿವಾಹವಾಗೋಣ... ಎಂದು ಅವನನ್ನು ಮದುವೆಯಾಗಿ ಅವನಿಗೊಂದು ಮಗುವನ್ನು ಹೆತ್ತುಕೊಟ್ಟುಹೊರಡುತ್ತಾಳೆ. ಇದೊಂಥರದಲ್ಲಿ ಭೀಮ, ಹಿಡಿಂಬೆಯ ದಾಂಪತ್ಯದ ಹಾಗೆ.

ಕೃತಿ ಆರ್. ಪುರಪ್ಪೆಮನೆ
ಕೃತಿ ಆರ್. ಪುರಪ್ಪೆಮನೆ

‘ಈ ಪ್ರಸಂಗದ ಲೋಕದಲ್ಲಿ ನಮ್ಮ ಪುರಾಣ, ಚರಿತ್ರೆ, ದಂತಕತೆ, ಆಚರಣೆ ರೂಢಿ ಎಲ್ಲವೂ ಅದಲು ಬದಲಾಗಿರುತ್ತವೆ. ಹಾಗೆ ನೋಡಿದರೆ, ಹೆಣ್ಣಿನ ದೇಹವನ್ನು ವಸ್ತುವಾಗಿಸಿ ವರ್ಣಿಸಿದ ಸ್ತರದಲ್ಲೇ ಗಂಡನ್ನು ವರ್ಣಿಸುವುದು ಅಷ್ಟು ಸುಲಭವಲ್ಲ. ಆದರೂ ಒಂದು ಪ್ರಯತ್ನವನ್ನು ಮಾಡಿದ್ದೇನೆ. ಆದರೆ ನನಗಿರುವ ಕುತೂಹಲವೆಂದರೆ ನಮ್ಮ ಯಕ್ಷಗಾನದ ನೆಲದಲ್ಲಿ ಈ ಪ್ರಯೋಗವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು. ಮೊದಲ ಪ್ರದರ್ಶನ ನಮ್ಮೂರಲ್ಲೇ ಆಗಿದೆ. ಅದಕ್ಕೆ ಬಂದವರೊಬ್ಬರು ಸ್ವಲ್ಪ ಗಂಡಸರಿಗೆ ಸಿಟ್ಟು ಬರುವ ಹಾಗಿದೆ, ಆದರೆ ಪಿನ್ ಡ್ರಾಪ್ ಸೈಲೆನ್ಸ್‌ನಲ್ಲಿ ಎಲ್ಲರೂ ಕೇಳೊ ಹಾಗೆ ಮಾಡಿತು ಅಂದರು. ಮಳೆಗಾಲದ ಮೊದಲು ಯಕ್ಷಗಾನದ ಕೆಲವು ಸ್ಥಳಗಳಲ್ಲಿ ಪ್ರಯೋಗ ಮಾಡುವ ಯೋಜನೆ ಮಾಡಿಕೊಂಡಿದ್ದೇವೆ’ ಎಂದು ವಿವರಿಸುತ್ತಾರೆ ಕೃತಿ.

ನಿಜ, ಸಾಂಪ್ರದಾಯಿಕ ಕಲೆ ಯಕ್ಷಗಾನದಲ್ಲಿ ಇದೊಂದು ವಿಭಿನ್ನ ಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ತ್ರೀಯ ಕುರಿತಾದ ಚರ್ವಿತಚರ್ವಣವಾದ ಎಲ್ಲ ಮಾದರಿಗಳನ್ನೂ ಮುರಿಯುವಂತಹ ಒಂದು ಯಶಸ್ವಿ ಪ್ರಯೋಗವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT