ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು ಮೀರಿ ಬಣ್ಣವ ನೆಚ್ಚಿ

Transgender's art
Last Updated 10 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಲಿಂಗತ್ವ ಅಲ್ಪಸಂಖ್ಯಾತರು, ಹಿಜಡಾ, ಟ್ರಾನ್ಸ್‌ಜೆಂಡರ್... ಪದಗಳು ಕಿವಿಗೆ ಬೀಳುತ್ತಲೇ ಭಿನ್ನವಾಗಿ ಚಪ್ಪಾಳೆ ತಟ್ಟುವ ಕೈಗಳು ಥಟ್ಟನೆ ನೆನಪಾಗುತ್ತವೆ. ಒಪ್ಪವಾಗಿ ಸೀರೆಯುಟ್ಟು, ನೆರಿಗೆ ಚಿಮ್ಮಿಸುತ್ತಾ.. ಅಕ್ಕಾ, ಅಣ್ಣಾ... ಅನ್ನುತ್ತಾ ದೃಷ್ಟಿ ತೆಗೆದು ಲಟಿಕೆ ಮುರಿಯುವ ಸದ್ದು ಕೇಳಿಬರುತ್ತದೆ... ಅತ್ತ ಹೆಣ್ಣೂ ಅನಿಸಿಕೊಳ್ಳದ ಇತ್ತ ಗಂಡೂ ಅಂತಲೂ ಹೇಳಿಕೊಳ್ಳದ ಉಭಯ ಸಂಕಟದೊಳಗೆ ನರಳುವ ಈ ಜೀವಗಳಿನ್ನೂ ಸಾಮಾಜಿಕ ಅಸ್ಪೃಶ್ಯತೆಯೊಳಗೆ ಬಳಲುತ್ತಿವೆ.

ಇಂಥ ಬೇಗುದಿಯ ಬದುಕಿನೊಳಗೊಂದು ಬಣ್ಣದ ಬೆಳ್ಳಿರೇಖೆ ನಿಧಾನವಾಗಿ ಮೂಡಿದೆ. ನಿತ್ಯವೂ ಹೊಟ್ಟೆಪಾಡಿಗಾಗಿ ಎಲ್ಲೆಲ್ಲೋ ಅಲೆಯುತ್ತಿದ್ದ ಕೆಲ ಲಿಂಗತ್ವ ಅಲ್ಪಸಂಖ್ಯಾತರೀಗ ಚಿತ್ರಕಲಾವಿದೆಯರಾಗಿ ರೂಪುಗೊಂಡಿದ್ದಾರೆ. ಬೆಂಗಳೂರು, ಮುಂಬೈ, ಚೆನ್ನೈ ಮೀರಿ ದೂರದ ಕ್ಯಾಲಿಫೋರ್ನಿಯಾದ ಫೇಸ್‌ಬುಕ್ ಕಚೇರಿಯ ಅಂಗಳದೊಳಗೆ ಇವರ ಕಲೆಯ ಕುಸುಮ ಪರಿಮಳ ಬೀರುವಂತಾಗಿದೆ.

ಇದೆಲ್ಲಾ ಸಾಧ್ಯವಾಗಿದ್ದು ಪೂರ್ಣಿಮಾ ಸುಕುಮಾರ್ ಅವರ ‘ಅರ್ವಾಣಿ ಆರ್ಟ್ ಪ್ರಾಜೆಕ್ಟ್‌’ನಿಂದಾಗಿ.

ಲಂಡನ್ ಮೂಲದ ಫಿಲಂ ಮೇಕರ್‌ ಒಬ್ಬರಿಗೆ ಸಾಕ್ಷ್ಯಚಿತ್ರ ನಿರ್ಮಿಸಲು ಪೂರ್ಣಿಮಾ ಸಹಾಯ ಮಾಡುತ್ತಿದ್ದರು. ಆ ಸಮಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಅರಿತ ಅವರಿಗೆ, ಸಾಕ್ಷ್ಯಚಿತ್ರ ಮುಗಿದ ಬಳಿಕ ಆ ಸಮುದಾಯವನ್ನು ಕೈಬಿಡಲು ಮನಸ್ಸಾಗಲಿಲ್ಲ. ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಕಲೆಯೇ ಸೂಕ್ತ ಎಂದು ಭಾವಿಸಿದ ಪೂರ್ಣಿಮಾ, ತಮ್ಮ ಸಂಪರ್ಕದಲ್ಲಿದ್ದ ಲಿಂಗತ್ವ ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ ಚಿತ್ರಕಲೆಯ ತರಬೇತಿ ನೀಡಲು ಯೋಜನೆ ರೂಪಿಸಿದರು.

‘ಚಪ್ಪಾಳೆ ತಟ್ಟುವ ಕೈಗಳಿಗೆ ಬ್ರಶ್ ಹಿಡಿಸಲು ಆರಂಭದಲ್ಲಿ ಕಷ್ಟವಾಯಿತು. ಶಾಲೆಯಲ್ಲಿ ಮಕ್ಕಳಿಗೆ ಡ್ರಾಯಿಂಗ್ ಹೇಳಿಕೊಡುವ ಮಾದರಿಯಲ್ಲೇ ಆರಂಭಿಸಿದೆ. ನಿಧಾನವಾಗಿ ಬ್ರಶ್‌ ಅನ್ನು ಹಿಡಿತಕ್ಕೆ ಪಡೆದುಕೊಂಡವರು ಈಗ ತಾವೇ ಸ್ವಂತವಾಗಿ ಆಲೋಚಿಸಿ ಗೋಡೆಗಳ ಮೇಲೆ ಸೊಗಸಾಗಿ ಚಿತ್ರ ಬಿಡಿಸುವಂತಾಗಿವೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಪೂರ್ಣಿಮಾ.

ಪೂರ್ಣಿಮಾ ಅವರ ಬಳಿ ತರಬೇತಿ ಪಡೆದ 10 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ನಗರದ ಕೆ.ಆರ್. ಮಾರುಕಟ್ಟೆ ಬಳಿ, ಹಲಸೂರು, ಚಾಮರಾಜಪೇಟೆ ಮತ್ತು ಜಾಲಹಳ್ಳಿಯ ಸರ್ಕಾರಿ ಶಾಲೆಗಳ ಗೋಡೆಗಳು, ಸ್ವಾತಂತ್ರ್ಯ ಉದ್ಯಾನ, ಧನ್ವಂತರಿ ಫ್ಲೈಓವರ್, ಪ್ರಥಮ್ ಬುಕ್ಸ್, ದ ಹಮ್ಮಿಂಗ್ ಟ್ರೀ, ಐಐಎಚ್‌ಎಸ್‌ನ ಗೋಡೆಗಳ ಮೇಲೆ ಬಣ್ಣ ಬಣ್ಣದ ಕಲಾಕೃತಿಗಳನ್ನು ರೂಪಿಸಿದ್ದಾರೆ. ದಟ್ಟ ಬಣ್ಣಗಳಲ್ಲಿ ಮೂಡಿಬಂದಿರುವ ಈ ಚಿತ್ರಗಳನ್ನು ಆ ಸಮುದಾಯದ ಕುರಿತು ಜಾಗೃತಿ ಮೂಡಿಸುವಂತೆ ರೂಪಿಸಲಾಗಿದೆ.

‘ನಮಗೂ ಕನಸುಗಳಿವೆ’, ‘ನಾವೂ ಇದ್ದೇವೆ’ ಎನ್ನುವ ಶೀರ್ಷಿಕೆಗಳು ಸಾರ್ವಜನಿಕರ ಮನ ಸೆಳೆಯುವಂತಿವೆ. ಸಾರ್ವಜನಿಕ ಸ್ಥಳಗಳಲ್ಲಿರುವ ಗೋಡೆಗಳ ಮೇಲೆ ಚಿತ್ರ ಬರೆಯುವಾಗ ಅನೇಕರು ಈ ಸಮುದಾಯದ ಬಗ್ಗೆ ಅರಿತು ಮೆಚ್ಚುಗೆ ಸೂಚಿಸಿದ್ದಾರೆ.

ಎನ್‌ಜಿಒವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಿ, ತಾವೂ ಚಿತ್ರ ಕಲಾವಿದೆಯಾಗಿ ರೂಪುಗೊಳ್ಳುತ್ತೇನೆ ಎಂದು ಊಹಿಸಿರಲಿಲ್ಲವಂತೆ. ಅದರಲ್ಲೂ ಕ್ಯಾಲಿರ್ಫೋನಿಯಾದ ’ಫೇಸ್‌ಬುಕ್’ ಕಚೇರಿಯ ಗೋಡೆಗಳ ಮೇಲೆ ಚಿತ್ರ ಬರೆಯುತ್ತೇನೆ ಎನ್ನುವ ಕನಸೂ ಕಂಡಿರಲಿಲ್ಲ. ಮೊದಲ ಬಾರಿಗೆ ಪಾಸ್‌ಪೋರ್ಟ್‌ ಪಡೆದು ಕ್ಯಾಲಿರ್ಫೋನಿಯಾಕ್ಕೆ ಹೋದಾಗ ಅವರಿಗೆ ತಮ್ಮ ಸಮುದಾಯದ ಬಗ್ಗೆ ಸಾರ್ಥಕ್ಯದ ಭಾವ ಮೂಡಿತಂತೆ.

ತಮ್ಮ ಕಲಾಯಾನದ ಕುರಿತು ಭಾವುಕವಾಗಿ ಮಾತನಾಡುವ ಚಂದ್ರಿ,‘ಫೇಸ್‌ಬುಕ್ ಕಚೇರಿಗೆ ಜಗತ್ತಿನ ನೂರಾರು ಚಿತ್ರ ಕಲಾವಿದರು ಬಂದಿದ್ದರು. ಆದರೆ, ನಮ್ಮ ಕಲೆಯ ಬಗ್ಗೆ ಅಲ್ಲಿದ್ದವರೆಲ್ಲಾ ಮೆಚ್ಚುಗೆ ಸೂಚಿಸಿ ಮಾತನಾಡಿದಾಗ ತಾವೂ ಎಲ್ಲರಂತಿದ್ದೇವೆ ಎನಿಸಿತು. ಕಲೆಗೆ ಯಾವುದೇ ತಾರತಮ್ಯವಿಲ್ಲ’ ಎಂಬ ಭಾವ ಮೂಡಿತು ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

‘ನಮ್ಮ ಸಮುದಾಯದವರು ಬೆಂಗಳೂರು, ಕೊಯಮತ್ತೂರು, ಮುಂಬೈ, ಚೆನ್ನೈ ಎಲ್ಲೆಡೆ ಮಾಡಿದ್ದೇವೆ. ನನ್ನ ಸ್ನೇಹಿತೆಯರು ಫೇಸ್‌ಬುಕ್ ಕಂಪನಿಯ ಗೋಡೆಗಳ ಮೇಲೆ ಚಿತ್ರ ಬಿಡಿಸಿದ್ದಾರೆ.ಇದು ನಮಗೆ ಹೆಮ್ಮೆಯ ಸಂಗತಿ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಲಿಂಗತ್ವ ಅಲ್ಪಸಂಖ್ಯಾತೆ ಪುರುಷಿ (ಪುರುಷೋತ್ತಮ್)

‘ನಮ್ಮನ್ನು ನೋಡಿದವರು ಚೆನ್ನಾಗಿದ್ದಾಳೆ. ಭಿಕ್ಷೆ ಬೇಡಲು, ಸೆಕ್ಸ್ ಮಾಡಲು ಮಾತ್ರ ಲಾಯಕ್ ಅಂತ ಭಾವಿಸುತ್ತಿದ್ದರು. ಇದರಿಂದ ಬೇಸತ್ತು ‘ಸಮರ’ ಅನ್ನುವ ಎನ್‌ಜಿಒಗೆ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿಗೆ ಬಂದ ಪೂರ್ಣಿಮಾ ಚಿತ್ರಕಲೆಯ ಬಗ್ಗೆ ಹೇಳಿದರು. ಮೊದಲ ಬಾರಿಗೆ ನಮ್ಮ ‘ಸಮರ’ ಕಚೇರಿಗೆ ಪೇಂಟ್ ಮಾಡಿದೆವು. ಅಲ್ಲಿಂದ ಆತ್ಮವಿಶ್ವಾಸ ಮೂಡಿತು. ಎಲ್ಲೆಡೆಯೂ ಚಿತ್ರಕಲೆ ಮೂಲಕ ನಮ್ಮ ಭಾವನೆಗಳನ್ನು ಅಭಿವ್ಯಕ್ತಿ ಪಡಿಸಲು ಸಾಧ್ಯವಾಗಿದೆ. ಈಚೆಗೆ ಎಂ.ಜಿ.ರಸ್ತೆಯ ಗ್ಯಾಲಕ್ಸಿ ಕಟ್ಟಡಕ್ಕೆ ಪೇಂಟ್ ಮಾಡಿದೆವು. ಅಲ್ಲಿನವರು ನಮ್ಮನ್ನು ತುಂಬಾ ಪ್ರೀತಿ ಮತ್ತು ಗೌರವದಿಂದ ನಡೆಸಿಕೊಂಡರು’ ತಮ್ಮ ಕಲಾನುಭೂತಿಯನ್ನು ಬಿಚ್ಚಿಡುತ್ತಾರೆ ಲಿಂಗತ್ವ ಅಲ್ಪಸಂಖ್ಯಾತೆ ಜ್ಯೋತಿ.

2016ರಲ್ಲಿ ಆರಂಭವಾದ ಅರ್ವಾಣಿ ಆರ್ಟ್ ಪ್ರಾಜೆಕ್ಟ್‌ ಅಡಿ ದೇಶದ 12ಕ್ಕೂ ಹೆಚ್ಚು ಮಂದಿ ಲಿಂಗತ್ವ ಅಲ್ಪಸಂಖ್ಯಾತರು ತರಬೇತಿ ಪಡೆದಿದ್ದಾರೆ. ಕಲೆಯ ಮೂಲಕ ತಮ್ಮ ನೋವುಗಳನ್ನು ಮರೆಯುತ್ತಿರುವ ಈ ಸಮುದಾಯ ಚಿತ್ರಗಳ ಮೂಲಕವೇ ಜನಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯ ಮಾಡುತ್ತಿದೆ.

ಪೂರ್ಣಿಮಾ ಬಗ್ಗೆ ಒಂದಿಷ್ಟು...

ಚಿತ್ರಕಲಾ ಪರಿಷತ್‌ನ ಪದವೀಧರೆಯಾಗಿರುವ ಪೂರ್ಣಿಮಾ ಸುಕುಮಾರ್, ಸಮುದಾಯದ ಕುರಿತು ಚಿತ್ರಕಲೆ ಮಾಡುವುದರಲ್ಲಿ ಆಸಕ್ತರು. ಸಾಮಾಜಿಕ ಸಂಗತಿಗಳ ಕುರಿತು ಚಿತ್ರ ರಚಿಸಲು ಆಸಕ್ತಿ ತೋರುವ ಪೂರ್ಣಿಮಾ, ತಮ್ಮ ಕಲಾಭಿವ್ಯಕ್ತಿಗೆ ರೆಸ್ಟೊರೆಂಟ್, ಶಾಲೆಯ ಗೋಡೆಗಳನ್ನು ಕ್ಯಾನ್‌ವ್ಯಾಸ್ ಮಾಡಿಕೊಂಡವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT