ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯಭಾಷೆಯ ವ್ಯಾಖ್ಯಾನಕಾರ ವಿ.ಕೆ.ಮೂರ್ತಿ

Last Updated 15 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಭಾರತೀಯ ಚಲನಚಿತ್ರ ಜಗತ್ತು ಕಂಡ ಅಪ್ರತಿಮ ಸಾಧಕರಲ್ಲೊಬ್ಬರು ವಿ.ಕೆ. ಮೂರ್ತಿ. ಮತ್ತೋರ್ವ ಅಸದೃಶ ಛಾಯಾಗ್ರಾಹಕ ಸುಬ್ರೊತೊ ಮಿತ್ರ ಅವರೊಂದಿಗೆ ಒಡಗೂಡಿ ಆಧುನಿಕ ಭಾರತೀಯ ಚಲನಚಿತ್ರ-ಛಾಯಾಗ್ರಹಣಕ್ಕೆ ಭದ್ರ ಬುನಾದಿಯನ್ನು ಕಟ್ಟಿಕೊಟ್ಟವರು; ಖ್ಯಾತ ನಿರ್ದೇಶಕ ಗುರುದತ್ ಅವರ ಸಹಯೋಗದಲ್ಲಿ ದೃಶ್ಯಭಾಷೆಯ ಅನುಸಂಧಾನವನ್ನು ಕೈಗೊಂಡು, ಚಲನಚಿತ್ರಗಳಲ್ಲಿ ನೆರಳು-ಬೆಳಕಿನ ಆಟಕ್ಕೆ ಮಹತ್ತ್ವದ ಸ್ಥಾನವನ್ನು ದೊರಕಿಸಿಕೊಟ್ಟವರು; ದೃಶ್ಯ ಸಂಯೋಜನೆಯ ಮೂಲೋದ್ದೇಶ, ಮೂಲಾಧಾರ ಹಾಗೂ ಸಂಸಿದ್ಧಿಗಳೆಲ್ಲವೂ ಒಂದೇ ಆಗಿದೆ–ಅದುವೇ ’ಭಾವಸ್ಫುರಣ’ ಎನ್ನುವುದನ್ನು ಮನೋಜ್ಞ ಕೃತಿಗಳ ಮೂಲಕ ನಿರೂಪಿಸಿದ್ದಷ್ಟೇ ಅಲ್ಲದೆ ಚಿತ್ರರಸಿಕರಿಗೆ, ನಿರ್ಮಾತೃಗಳಿಗೆ ಹಾಗೂ ತಂತ್ರಜ್ಞರಿಗೆ ಅದನ್ನು ಮನದಟ್ಟು ಮಾಡಿಸುವಂತಹ ದೃಶ್ಯ ಸಂಯೋಜನೆಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದು ಗುರುದತ್-ಮೂರ್ತಿ ಜೋಡಿಯ ಮಹತ್ಸಾಧನೆ.

ಭಾರತೀಯ ಚಿತ್ರರಂಗದ ವಿಕಸನದಲ್ಲಿ ಸತ್ಯಜಿತ್ ರಾಯ್-ಸುಬ್ರೊತೊ ಮಿತ್ರ ಜೋಡಿಯು ನಿರ್ವಹಿಸಿದಷ್ಟೇ ಮಹತ್ತ್ವದ ಭೂಮಿಕೆಯನ್ನು ಈ ಜೋಡಿಯೂ ನಿರ್ವಹಿಸಿತು. ಪಾತ್ರಗಳ ಮಾನಸಿಕ ತುಮುಲಗಳನ್ನು, ಒಳತೋಟಿಯನ್ನು ನೆರಳು-ಬೆಳಕಿನ ವಿವಿಧ ಪದರಗಳಲ್ಲಿ ಬಿಡಿಸಿಟ್ಟು, ದೃಶ್ಯಭಾಷೆಯ ಮೂಲಕ ಪ್ರೇಕ್ಷಕನ ಅಂತಃಕರಣದೊಂದಿಗೆ ಸುಪ್ತಮನದ ಸಂವಾದವನ್ನು ಸಿದ್ಧಿಸಿಕೊಂಡ ಗಾರುಡಿಗನಾಗಿದ್ದರು ವಿ.ಕೆ. ಮೂರ್ತಿ. ‘ಕಾಗಜ್‌ ಕೆ ಫೂಲ್’ ಎನ್ನುವ ಮಹೋನ್ನತ ದೃಶ್ಯಕಾವ್ಯದ ಮೂಲಕ ‘ಸಿನಿಮಾಸ್ಕೋಪ್’ ಎಂದು ಸುಪರಿಚಿತವಾಗಿರುವ ವಿಸ್ತೃತ ಸಿನಿ-ಚೌಕಟ್ಟನ್ನು ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದವರು ಅವರು; ಇದೇ ಚಿತ್ರದಲ್ಲಿನ ‘ವಖ್ತ್ ನೆ ಕಿಯಾ..’ ಎನ್ನುವ ಹಾಡಿನ ಚಿತ್ರೀಕರಣದಲ್ಲಿ ದಿವ್ಯರಶ್ಮಿಯ ಅನುಸಂಧಾನವನ್ನು ಕೈಗೊಂಡು ಅಪ್ರತಿಮ ಯಶಸ್ಸನ್ನೂ, ಕೀರ್ತಿಯನ್ನೂ ತಮ್ಮದಾಗಿಸಿಕೊಂಡವರು. ಅತ್ಯಂತ ಜನಪ್ರಿಯವಾಗಿರುವ ‘ಚೌದವಿ ಕಾ ಚಾಂದ್‌ಹೊ..’ಎನ್ನುವ ಹಾಡನ್ನುಕಪ್ಪು-ಬಿಳುಪು ಹಾಗೂ ವರ್ಣಚಿತ್ರಗಳೆರಡರಲ್ಲೂ ಪ್ರತ್ಯೇಕವಾಗಿ ಚಿತ್ರೀಕರಿಸಿ, ಭಾರತೀಯ ಚಿತ್ರರಂಗದಲ್ಲಿ ವರ್ಣರಂಜಿತ ಚಲನಚಿತ್ರಗಳ ಯುಗಕ್ಕೆ ಅವರು ನಾಂದಿ ಹಾಡಿದರು. ವಿ.ಕೆ.ಮೂರ್ತಿಯವರ ಈ ಎಲ್ಲ ಸಾಧನೆಗಳನ್ನೂ ಗಮನದಲ್ಲಿರಿಸಿಕೊಂಡು ಭಾರತ ಸರ್ಕಾರವು 2008ರಲ್ಲಿ ಅವರಿಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಸುಮಾರು ನಲವತ್ತು ವರ್ಷಗಳ ಪ್ರಶಸ್ತಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಓರ್ವ ಛಾಯಾಗ್ರಾಹಕನಿಗೆ ಈ ಸರ್ವೋಚ್ಚ ಪ್ರಶಸ್ತಿಯು ಸಂದಿತು ಎನ್ನುವುದು ಹಾಗೂ ಆ ಖ್ಯಾತ ಛಾಯಾಗ್ರಾಹಕನು ಓರ್ವ ಕನ್ನಡಿಗ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯವಾಗಿದೆ. (ಇಂದಿನವರೆವಿಗೂ ಮತ್ತಾವ ತಂತ್ರಜ್ಞನೂ ದಾದಾಫಾಲ್ಕೆ ಪ್ರಶಸ್ತಿಗೆ ಭಾಜನನಾಗಿಲ್ಲ ಎನ್ನುವುದು ಗಮನಾರ್ಹ.) ಹಿಂದಿ ಚಿತ್ರರಂಗದ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಎರಡು ಬಾರಿ ತಮ್ಮದಾಗಿಸಿಕೊಂಡಿದ್ದಷ್ಟೇ ಅಲ್ಲದೆ ಜೀವಮಾನ ಸಾಧನೆಗಾಗಿ ನೀಡಲಾಗುವ IIFA ಪ್ರಶಸ್ತಿಗೆ ಭಾಜನರಾದ ಹೆಗ್ಗಳಿಕೆಯನ್ನು ಹೊಂದಿದ್ದ ವಿ.ಕೆ.ಮೂರ್ತಿ ಭಾರತದ ಸ್ವಾತಂತ್ರ್ಯ-ಸಂಗ್ರಾಮದಲ್ಲಿ ಪಾಲ್ಗೊಂಡು ಬ್ರಿಟಿಷ್ ಸರ್ಕಾರ ವಿಧಿಸಿದ್ದ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿರದ ಸಂಗತಿಯಾಗಿದೆ.

ಇಂತಹ ಸಾಧಕನಿಗೆ ರಾಜ್ಯ ಸರ್ಕಾರವು ಯಥೋಚಿತ ರೀತಿಯಲ್ಲಿ ಆದರಿಸಲಿಲ್ಲವೆಂಬ ವ್ಯಥೆಯು ಚಿತ್ರರಸಿಕರಲ್ಲಿ ಇದುವರೆವಿಗೂ ಮನೆಮಾಡಿತ್ತು. ಅವರು ನಿಧನರಾದ ದಿನ ಅಂದಿನ ಆಳುವ ಪಕ್ಷದ ಮುಖ್ಯಸ್ಥರು ಹಾಗೂ ಮುಖ್ಯಮಂತ್ರಿಯನ್ನೂ ಒಳಗೊಂಡಂತೆ ಸಕಲ ಸರ್ಕಾರಿ ಆಡಳಿತ ಯಂತ್ರವೇ ಮೂರ್ತಿಯವರ ಪಾರ್ಥಿವ ಶರೀರವನ್ನಿರಿಸಿದ್ದ ಸ್ಥಳದಿಂದ ಕೇವಲ 500 ಮೀ. ದೂರದಲ್ಲಿ ಹಾಜರಿದ್ದರೂ ಅವರಲ್ಲಿ ಯಾರೊಬ್ಬರೂ ಅಂತಿಮ ನಮನವನ್ನು ಸಲ್ಲಿಸುವ ಕನಿಷ್ಠ ಔದಾರ್ಯವನ್ನೂ ತೋರಿರಲಿಲ್ಲ. ಸ್ವತಂತ್ರಸೇನಾನಿಯೊಬ್ಬನಿಗೆ ಸಲ್ಲಿಸಬೇಕಿದ್ದ ಸಾಂಪ್ರದಾಯಿಕ ಗನ್-ಸಲ್ಯೂಟ್ ಅನ್ನು ಸಮರ್ಪಿಸುವಲ್ಲಿ ಅಂದಿನ ಸರ್ಕಾರವು ವಿಫಲವಾಗಿತ್ತು ಎನ್ನುವುದು ಸಭ್ಯ ಸಮಾಜವೊಂದನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿತ್ತು. ಈ ಬಗೆಯ ಅಕ್ಷಮ್ಯ ಔದಾಸೀನ್ಯಕ್ಕೆ ಪ್ರಾಯಶ್ಚಿತ್ತವೆಂಬಂತೆ ಇತ್ತು, ವಿಧಾನಸೌಧದ ಮಹಾದ್ವಾರದ ಮುಂಭಾಗದಲ್ಲಿ 2023ರ ಮಾರ್ಚ್ 23ರ ಸಂಜೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ಆಯೋಜಿಸಲಾಗಿದ್ದ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ.

ಮೈಸೂರಿನಲ್ಲಿ ಹುಟ್ಟಿ, ಬೆಳೆದು ಭಾರತೀಯ ಚಿತ್ರರಂಗವು ಕಂಡ ಅಸದೃಶ ಛಾಯಾಗ್ರಾಹಕನಾಗಿ ಹಲವು ದಶಕಗಳ ಕಾಲ ಚಿತ್ರರಸಿಕರ ಹೃನ್ಮನಗಳನ್ನು ಬೆಳಗಿದ ವಿ.ಕೆ.ಮೂರ್ತಿಯವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಚಿತ್ರೋತ್ಸವವನ್ನು ಆಚರಿಸಿದ್ದು ಔಚಿತ್ಯಪೂರ್ಣವಾಗಿತ್ತು.

ವಿ.ಕೆ.ಮೂರ್ತಿಯವರ ಬಾಲ್ಯದ ದಿನಗಳು ಕಡುಬಡತನದಿಂದ ಕೂಡಿದ್ದವು. ಕೇವಲ ಒಂಬತ್ತನೆಯ ವಯಸ್ಸಿನಲ್ಲಿ ಅವರು ತಮ್ಮ ತಾಯಿಯನ್ನು ಕಳೆದುಕೊಂಡರು. ಮೂಕಿ-ಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನು ಒದಗಿಸುತ್ತಿದ್ದ ಸೋದರ ಸಂಬಂಧಿಯೋರ್ವನಿಂದಾಗಿ ಹಲವಾರು ಬಾರಿ ಸಿನಿಮಾ ಮಂದಿರಗಳಲ್ಲಿ ಚಲನಚಿತ್ರಗಳನ್ನು ನೋಡುವ ಅವಕಾಶ ಅವರಿಗೆ ಒದಗಿತು. ಇದರಿಂದಾಗಿ, ಸಿನಿಮಾ ಕುರಿತಂತೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ಅವರಲ್ಲಿ ಹೆಚ್ಚಾಯಿತು. ಸಿನಿ-ಶಿಕ್ಷಣವನ್ನು ನೀಡುವ ಸಂಸ್ಥೆಯ ಜಾಹೀರಾತೊಂದನ್ನು ದಿನಪತ್ರಿಕೆಯಲ್ಲಿ ಕಂಡ ವಿ.ಕೆ.ಮೂರ್ತಿ ಮನೆಯಲ್ಲಿದ್ದ ಪುಡಿಗಾಸೆಲ್ಲವನ್ನೂ ಒಟ್ಟುಗೂಡಿಸಿ ಬೊಂಬಾಯಿಗೆ (ಇಂದಿನ ಮುಂಬೈ) ಪ್ರಯಾಣ ಬೆಳೆಸಿದರು!

ತಾವು ನೋಡಿದ್ದು ಪೊಳ್ಳು ಜಾಹೀರಾತು; ಅಸಲಿಗೆ ಆ ಹೆಸರಿನ ಸಂಸ್ಥೆಯೇ ಇಲ್ಲ ಎನ್ನುವುದು ಅವರ ಅರಿವಿಗೆ ಬರುವ ಹೊತ್ತಿಗೆ ಕಿಸೆಯಲ್ಲಿದ್ದ ಹಣವೆಲ್ಲವೂ ಖರ್ಚಾಗಿತ್ತು! ರೈಲ್ವೇ ಟಿಕೆಟ್ ಕಲೆಕ್ಟರ್‌ ಕೃಪೆಯಿಂದ, ಎಂತೋ ಏನೋ, ಮೈಸೂರಿಗೆ ವಾಪಸ್ ಆದರು. ಆ ನಂತರದಲ್ಲಿ ತಮ್ಮ ಬಿಡುವಿನ ವೇಳೆಯನ್ನೆಲ್ಲ ಅವರು ವಯೊಲಿನ್ ಅಭ್ಯಾಸಕ್ಕೆ ಮೀಸಲಿಟ್ಟರು. ಈ ವಾದ್ಯದ ನುಡಿಸಾಣಿಕೆಯಲ್ಲಿ ಅವರು ಪಡೆದುಕೊಂಡ ಪರಿಣತಿಯು ಮೈಸೂರು ಮಹಾರಾಜರ ಹಸ್ತಲಾಘವವನ್ನು ದೊರಕಿಸಿಕೊಟ್ಟಿತಷ್ಟೇ ಅಲ್ಲದೆ ಮುಂದೆ ಬೊಂಬಾಯಿಯ ಚಿತ್ರರಂಗವನ್ನು ಪ್ರವೇಶಿಸಿದಾಗ ಅವರಿಗೆ ಮೊಟ್ಟಮೊದಲ ಸಂಭಾವನೆಯನ್ನೂ ತಂದುಕೊಟ್ಟಿತು.

ಸರ್ ಎಂ.ವಿಶ್ವೇಶ್ವರಯ್ಯನವರ ದೂರಗಾಮಿ ಚಿಂತನೆಯ ಫಲವಾಗಿ 1943ರಲ್ಲಿ ರೂಪು ತಳೆದ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್(SJP)ನಲ್ಲಿ ಸಿನಿಮಾಟೊಗ್ರಫಿ, ಎಂದರೆ, ಚಲನಚಿತ್ರ-ಛಾಯಾಗ್ರಹಣದಲ್ಲಿ ತರಬೇತಿಯನ್ನು ನೀಡುವ ಕೋರ್ಸ್ ಒಂದನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಾಗ ವಿ.ಕೆ. ಮೂರ್ತಿ ಅವರಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ನೆರೆಮನೆಯವರಿಂದ ರೈಲು ಚಾರ್ಜಿಗೆಂದು ಒಂದು ರೂಪಾಯಿ ಎರವಲು ಪಡೆದು, ಮೈಸೂರಿನ ಗಣ್ಯವಕ್ತಿಯೋರ್ವರಿಂದ ಅರ್ಹತಾಪತ್ರಕ್ಕೆ ಸಹಿ ಹಾಕಿಸಿಕೊಂಡ ಹದಿಹರೆಯದ ವಿ.ಕೆ. ಮೂರ್ತಿ SJPಯಲ್ಲಿ ಮೌಖಿಕ ಪರೀಕ್ಷೆಗೆ ಹಾಜರಾಗಿಯೇಬಿಟ್ಟರು. “You have done well, young man. Congratulations. Pay your admission fee and join the classes tomorrow itself.” ಎಂದು ಪ್ರಿನ್ಸಿಪಾಲರು ನುಡಿದಾಗ, ಉಚಿತ ವಿದ್ಯಾಭ್ಯಾಸದ ಕನಸನ್ನು ಹೊತ್ತು ಬಂದಿದ್ದ ಮೂರ್ತಿ ಅವರಿಗೆ ಕಾಲಬುಡವೇ ಕುಸಿದಂತಹ ಅನುಭವವಾಯಿತು.

ಅಂದು ಸಂಜೆ ಬಾಲ್ಯದ ಗೆಳೆಯ ಶ್ರೀನಿವಾಸನ್ ಅವರನ್ನು ಭೇಟಿಯಾದಾಗ ಅವರೊಂದಿಗೆ ಇದೆಲ್ಲವನ್ನೂ ಹೇಳಿಕೊಂಡ ವಿ.ಕೆ.ಮೂರ್ತಿ ದುಃಖವನ್ನು ತಡೆಯಲಾರದೆ ಗಳಗಳನೆ ಅತ್ತುಬಿಟ್ಟರು. ‘ಇಲ್ಲಿಗೆ ನನ್ನ ಕನಸುಗಳೆಲ್ಲವೂ ಪರಿಸಮಾಪ್ತವಾದುವು. ಇನ್ನು ಊರಿಗೆ ಹಿಂದಿರುಗಿ ದೈವನಿಯಾಮಕದಂತೆ ಜೀವನವನ್ನು ಸಾಗಿಸುತ್ತೇನೆ’ ಎಂದಂದು ಕೈಚೆಲ್ಲಿ ಕೂತ ಗೆಳೆಯನಿಗೆ ಶ್ರೀನಿವಾಸನ್ ಸಾಂತ್ವನದ ನುಡಿಗಳನ್ನು ಹೇಳಿದರು. ಅಂದು ಅವರು ಮಾಡಿದ ಮಹೋನ್ನತ ಉಪಕಾರವು ಸರಿಸುಮಾರು ಅರವತ್ತು ವರ್ಷಗಳ ನಂತರ ಕನ್ನಡನಾಡಿಗೆ ಎರಡನೇ ದಾದಾ ಫಾಲ್ಕೆ ಪ್ರಶಸ್ತಿಯನ್ನು ತಂದುಕೊಟ್ಟಿತು. ಶ್ರೀನಿವಾಸನ್ ಅವರು ಪ್ರವೇಶ-ಶುಲ್ಕವನ್ನು ಭರಿಸಿದ್ದಷ್ಟೇ ಅಲ್ಲದೆ ತರಬೇತಿಯುದ್ದಕ್ಕೂ ಅಭ್ಯಾಸದ ಖರ್ಚು-ವೆಚ್ಚವನ್ನು ತಾವೇ ನಿರ್ವಹಿಸುವುದಾಗಿ ಭರವಸೆಯನ್ನಿತ್ತರು. ಈ ಬಗೆಯ ಅಲೌಕಿಕ ಸ್ನೇಹಕ್ಕೆ ನಾಡಿನ ಜನತೆ ಕೃತಜ್ಞತಾಪೂರ್ವಕವಾಗಿ ಸಲ್ಲಿಸಿದ ನಮನವು 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ವಿ.ಕೆ.ಮೂರ್ತಿ ಶತಮಾನೋತ್ಸವದ ಸಂಭ್ರಮವಾಗಿ ರೂಪುಗೊಂಡು ಸಾರ್ಥಕ್ಯವನ್ನು ಕಂಡಿತು. ಬಿಂಬ ನಿರ್ಮಿತಿಯಲ್ಲಿ ದಾಪುಗಾಲಿಡುತ್ತಿರುವ ಡಿಜಿಟಲ್ ತಂತ್ರಜ್ಞಾನದಿಂದಾಗಿ ಇತ್ತೀಚಿನವರೆಗೂ ಬಿಂಬ ಸಾಮ್ರಾಜ್ಯದ ಅನಭಿಷಿಕ್ತ ದೊರೆಯಾಗಿ ಮೆರೆದ ಚಲನಚಿತ್ರ ಛಾಯಾಗ್ರಾಹಕನ ಕಾರ್ಯಕ್ಷೇತ್ರದ ಪರಿಧಿಯು ತೀವ್ರಗತಿಯಲ್ಲಿ ಸಂಕುಚಿತಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಓರ್ವ ಅಸಾಮಾನ್ಯ ಚಲನಚಿತ್ರ-ಛಾಯಾಗ್ರಾಹಕನ ಸಾಧನೆಯನ್ನು ಈ ಪರಿಯಾಗಿ ಸಂಭ್ರಮಿಸಿದ್ದು ನಿಜಕ್ಕೂ ಅರ್ಥಪೂರ್ಣವಾಗಿತ್ತಷ್ಟೇ ಅಲ್ಲದೆ ಚೇತೋಹಾರಿಯೂ ಆಗಿತ್ತು.

(ಲೇಖಕರು ಸಿನಿಮಾ–ಛಾಯಾಗ್ರಹಣಕಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT