ನಿರ್ದಿಷ್ಟ ಸ್ಥಳವೊಂದರ ಜತೆ ಒಡನಾಡುವ ಕಲೆಯ ಹೆಸರು ‘ಸೈಟ್ ಸ್ಪೆಸಿಫಿಕ್ ಆರ್ಟ್’. ಪರಿಸರವೇ ಇಲ್ಲಿ ಕ್ಯಾನ್ವಾಸ್. ನಿಸರ್ಗದತ್ತವಾಗಿ ದೊರೆಯುವ ವಸ್ತುಗಳೇ ಕಲಾ ಸಾಮಗ್ರಿಗಳು. ಪ್ರಕೃತಿಯ ಸಾಂಗತ್ಯದಲ್ಲಿ ಕಲಾವಿದನ ಐಡಿಯಾ ಬೆರೆತು ಅಲ್ಲಿ ಕಲಾಸೃಷ್ಟಿ ನಡೆಯುತ್ತದೆ. ಈ ಸೃಷ್ಟಿಯಲ್ಲಿ ಸ್ಥಳೀಯ ಜನರ ಜೀವನ ವಿಧಾನ, ನಂಬಿಕೆ ಆಚರಣೆಗಳೂ ಕಲೆಗೆ ಎರಕ ಹುಯ್ಯುತ್ತವೆ. ಅಮೆರಿಕದ ಕಲಾವಿದ ರಾಬರ್ಟ್ ಇರ್ವಿನ್ ಮೊದಲು ಈ ಬಗೆಯ ಕಲಾಕೃತಿಯನ್ನು ಸೃಷ್ಟಿಸಿದ. 70ರ ದಶಕದಲ್ಲಿ ಈ ಕಲೆ ನಿಧಾನಕ್ಕೆ ಜನಪ್ರಿಯಗೊಂಡಿತು.

ಸೈಟ್ ಸ್ಪೆಸಿಫಿಕ್ ಆರ್ಟ್‌ಗೂ ‘ಪರಿಸರ ಕಲೆ’ಗೂ ಹತ್ತಿರದ ಸಂಬಂಧಗಳಿವೆ. ಪರಿಸರ ನಾಶ, ಮಾಲಿನ್ಯ, ಜೀವ ಸಂಕುಲಗಳ ಉಳಿವು ಇತ್ಯಾದಿ ಜ್ವಲಂತ ವಿಷಯಗಳಿಗೆ ಕಲಾವಿದನ ಸ್ಪಂದಿಸುವಿಕೆಯನ್ನು ಪರಿಸರ ಕಲೆ ಬಿಂಬಿಸುತ್ತದೆ. ಪರಿಸರ ಕಲೆ ಕೂಡ ಅಮೆರಿಕದ ಕೊಡುಗೆ. ಸಾಂಪ್ರದಾಯಿಕ ಶಿಲ್ಪಕಲೆ ಹಾಗೂ ಚಿತ್ರಕಲೆಯ ಚಿಂತನೆಗಳ ಆಚೆಗೆ ಈ ಬಗೆಯ ಕಲಾ ಪ್ರಕಾರಗಳು ಹುಟ್ಟಿಕೊಂಡವು.ಹೀಗೆ ಪ್ರಕೃತಿ ಕಲೆಯಲ್ಲಿ ತೊಡಗುವ ಕಲಾವಿದರು ಕಲಾಕೃತಿ ನಿರ್ಮಾಣದ ವೇಳೆ ಸುತ್ತಲಿನ ಪರಿಸರಕ್ಕೆ ಧಕ್ಕೆಯಾಗದಂತೆ ವರ್ತಿಸುವ ಸಂಕಲ್ಪ ತೊಟ್ಟಿರುತ್ತಾರೆ.

ಇಂಥದೊಂದು ಪ್ರಯೋಗ, ಕಳೆದ ಸಂಕ್ರಾಂತಿ ಸಂದರ್ಭದಲ್ಲಿ ರಾಮನಗರದ ಸಮೀಪ ನಡೆಯಿತು. ಪ್ರಕೃತಿಯನ್ನು ತೆಕ್ಕೆಗೆ ತಗೆದುಕೊಂಡು ಹೊಸ ಕಲಾಕೃತಿ ಸೃಷ್ಟಿಸುವ ಹದಿನೈದು ಮಂದಿ ಕಲಾವಿದರು ಅವರು. ರಾಮನಗರ ಜಿಲ್ಲೆಯ ಕಣ್ವ ಜಲಾಶಯದ ಸುತ್ತಮುತ್ತಲಿನ ಹಚ್ಚ ಹಸುರಿನ ತಾಣವೇ ಅವರಿಗೆ ಪ್ರಯೋಗಶಾಲೆ. ಅಲ್ಲಿಗೆ ಹೊರಟಾಗ ಏನೊಂದೂ ಅವರ ಮನಸ್ಸಿನಲ್ಲಿರಲಿಲ್ಲ.ಹೀಗೆಯೇ ಆಗಬೇಕು, ಇಂಥದ್ದೇ ನಡೆಯಬೇಕು ಎಂಬ ಮಹತ್ವಾಕಾಂಕ್ಷೆ ಹೊತ್ತು ಹೊರಟವರೂ ಅವರಲ್ಲ. ಆದರೆ, ತಲೆತುಂಬ ಪುಟ್ಟ ಪುಟ್ಟ ಕನಸುಗಳಿದ್ದವು. ಗಿಡ ಮರ ಬಳ್ಳಿಗಳೊಡನೆ ‘ಮಾತನಾಡುವ’ ಬಯಕೆಗಳಿದ್ದವು.

ಮೊದಲ ದಿನ...
ನಾಲ್ಕು ದಿನಗಳ ಶಿಬಿರ ಆರಂಭವಾಗುತ್ತಿದ್ದಂತೆ ಕಲಾವಿದರ ನಿಸರ್ಗ ಸಂಚಾರವೂ ಶುರುವಾಗಿತ್ತು. ಕಲಾವಿದರಾದ ಎಸ್.ಶಿವಪ್ರಸಾದ್, ರಘು ಒಡೆಯರ್, ನಂದೀಶ್, ಅನಿಲ್, ರಘು ಕೊಂಡೂರು, ಸುಬ್ರಮಣ್ಯ, ಎಸ್.ಮಂಜುನಾಥ್, ಶೈಲೇಶ್, ಸುಬ್ಬಣ್ಣ, ಮಿಥಿಲಾ, ಲಕ್ಷ್ಮೀಪತಿ, ಭರತೇಶ್, ವೆಂಕಟೇಶ್, ಆಂಟೊನಿ ಒಗ್ಗೂಡಿದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಜಾಗವನ್ನು ಸುತ್ತಿದರು. ಸುತ್ತಾಟಕ್ಕೆ ಸಾಥ್ ನೀಡಿದ್ದು ಎತ್ತಿನಗಾಡಿಗಳು.ಎದುರಿಗೆ ಜಲಾಶಯದ ಹಿನ್ನೀರು. ಹಿನ್ನೆಲೆಗೆ ತಲೆ ಎತ್ತಿನಿಂತ ಬೆಟ್ಟ ಸಾಲು. ತಣ್ಣನೆ ತಂಗಾಳಿ. ಜುಳು ಜುಳು ಹರಿಯುವ ಹೊಳೆ, ಹಿಕ್ಕೆ ಹಾಕುವ ಹಕ್ಕಿಗಳ ಮರ, ಬಾವಲಿಗಳ ಬಿಡಾರ. ಹತ್ತಿರದ ಕೆಂಗಲ್‌ನಲ್ಲಿ ನಡೆಯುತ್ತಿದ್ದ ದನಗಳ ಜಾತ್ರೆ. ಮನಸ್ಸು ಗರಿ ಬಿಚ್ಚಿತ್ತು.

ಮರು ದಿನ...
ಕಾಡೆಂದರೆ ಕಾಡಲ್ಲ ಊರೆಂದರೆ ಊರಲ್ಲ ಎನ್ನುವಂಥ ಜಾಗದಲ್ಲಿ ಟೆಂಟ್ ಕಟ್ಟಿ ನಕ್ಷತ್ರ ನೋಡುತ್ತ ಕುಳಿತವರು ತಾವು ಕಂಡ, ಕೇಳಿದ ಸಂಗತಿಗಳನ್ನೆಲ್ಲಾ ಕಲೆಹಾಕಿದರು. ಎದುರಿಗೆ ಉರಿಯುತ್ತಿದ್ದ ಬೆಂಕಿ ಅವರ ಚರ್ಚೆಗೆ ಇಂಬು ನೀಡುತ್ತಿತ್ತು. ಮರುದಿನ ಸ್ಥಳೀಯವಾಗಿ ಸಿಗುವ ಪರಿಕರಗಳ ಹುಡುಕಾಟದಲ್ಲಿ ತೊಡಗಿದರು.

ಹಕ್ಕಿಯ ಹಾಡು
ಸತ್ತ ಹಕ್ಕಿಯೊಂದು ಅನಿಲ್ ಮನ ಕಲಕಿತ್ತು. ಪ್ರವಾಸಿಗರು ಎಸೆದು ಹೋದ ಪ್ಲಾಸ್ಟಿಕ್ ಅವರ ಪಾಲಿಗೆ ಗಂಭೀರ ವಿಷಯವಾಗಿತ್ತು.ಪ್ಲಾಸ್ಟಿಕ್ ತ್ಯಾಜ್ಯವನ್ನು ಸುತ್ತಿ ಹಕ್ಕಿಗಳ ಆಕಾರ ಕೊಟ್ಟರು. ಪ್ರವಾಸಿಗರು ಓಡಾಡುತ್ತಿದ್ದ ಜಾಗವನ್ನೇ ಆಯ್ದುಕೊಂಡರು. ಮರದ ಟೊಂಗೆಗಳಿಗೆ ಪ್ಲಾಸ್ಟಿಕ್‌ನಿಂದ ಮಾಡಿದ ಹಕ್ಕಿಗಳನ್ನು ತೂಗುಬಿಟ್ಟರು. ‘ಪರಿಸರ ಉಳಿಸಿ’ ಎಂದು ಅನಿಲ್ ಕಳಕಳಿಯಿಂದ ಮಾಡಿದ ಮನವಿ ಇದು. ಮನುಷ್ಯ ಪರಿಸರದ ಮೇಲೆ ಮಾಡಿದ ದಾಳಿ ಅದೇ ಕಾಲಕ್ಕೆ ಆತ ಪ್ರಕೃತಿಯ ಬಗ್ಗೆ ಹೊಂದಿರುವ ಕಾಳಜಿ ಎರಡೂ ಅಲ್ಲಿ ಮೇಳೈಸಿದ್ದವು.

‘ತುಂಬಾ ವರ್ಷಗಳಿಂದ ಇಂಥ ಕಲಾ ಶಿಬಿರ ಹಮ್ಮಿಕೊಳ್ಳಬೇಕು ಅನ್ನೋದು ನಮ್ಮ ಕನಸಾಗಿತ್ತು. ಕೆಂಗಲ್ ಮತ್ತು ಕಣ್ವದಲ್ಲಿ ಸಂಕ್ರಮಣ ಎಂಬ ಹೆಸರಲ್ಲಿ ಶಿಬಿರ ಆರಂಭಿಸಿದೆವು. ಹೀಗೇ ಮಾಡಿ ಎಂದು ಯಾವ ಕಲಾವಿದರಿಗೂ ಸೂಚಿಸಿರಲಿಲ್ಲ. ಅವರನ್ನು ಅವರ ಪಾಡಿಗೆ ಬಿಡಲಾಗಿತ್ತು. ಹಾಡು ಹರಟೆಯ ಮೂಲಕವೇ ಕಲೆ ಹುಟ್ಟಲಿ ಎಂಬುದು ನಮ್ಮ ಬಯಕೆಯಾಗಿತ್ತು. ಕೊನೆಗೆ ಅದು ಸಾಕಾರಗೊಂಡಿತು’ ಎನ್ನುತ್ತಾರೆ ಶಿಬಿರದ ಸಂಚಾಲಕ ಎಸ್.ಶಿವಪ್ರಸಾದ್.

ಶಾಶ್ವತವಲ್ಲದ ಗುರುತುಗಳು...
ಡ್ಯಾಂ ನಿರ್ಮಾಣಕ್ಕೆ ಉಪಯೋಗಿಸಿದ್ದ ಕಬ್ಬಿಣದ ಹಲಗೆಯೊಂದನ್ನು ಕ್ಯಾನ್‌ವಾಸ್‌ನಂತೆ ಬಳಸಿದ್ದು ಕಲಾವಿದ ಸುಬ್ರಮಣ್ಯ. ಅದರ ಮೇಲೆ ಶಿಬಿರಕ್ಕೆ ಬಂದವರು ಹಾಗೂ ಊರಿನವರ ಸಹಿ ಪಡೆಯುವ ಉತ್ಸಾಹ ಅವರದ್ದು. ಕ್ಷಣಾರ್ಧದಲ್ಲಿ ಅಳಿಸಿ ಹೋಗುವ ಯಃಕಶ್ಚಿತ್ ಪೆನ್ಸಿಲ್‌ನಿಂದ ಯಾಕೆ ಇವರು ಸಹಿ ಪಡೆಯುತ್ತಿದ್ದಾರೆ ಎಂಬ ಕುತೂಹಲ ಅನೇಕರಿಗೆ. ಪಕ್ಕದಲ್ಲಿದ್ದ ಗೆಳೆಯರು ಕವಿ ಕೆ.ಬಿ.ಸಿದ್ದಯ್ಯ ಅವರ ಕಾವ್ಯದ ಸಾಲುಗಳನ್ನು ಉಸುರಿದರು.

‘ಈ ದೇಹ ನನ್ನ ದೇಹ ಇಡೀದೇಹ
ಭವದ ಸಾಲ
ತೀರಿ ಹೋಗಲೆಂದು ಸಾಲ
ಇಡೀ ದೇಹ ಮಾರಿಬಿಟ್ಟೆ’

ಸುಬ್ರಮಣ್ಯ ಅವರು ಬರೆಸಿದ ಸಹಿ ಹೊಸ ಅರ್ಥವನ್ನು ಪಡೆದುಕೊಳ್ಳತೊಡಗಿತು. ‘ಕಬ್ಬಿಣದ ಕ್ಯಾನ್‌ವಾಸ್’ ಕಾವ್ಯದ ವಿಸ್ತಾರಕ್ಕೆ ಹಿಗ್ಗಿತ್ತು.

ಜಾತ್ರೆಯಲ್ಲಿ ಜಂಗಮರು
ಜಾತ್ರೆಯಲ್ಲಿ ದೊರೆಯುವ ಎತ್ತುಗಳನ್ನೇ ಆಂಟೊನಿ ಬಣ್ಣಗಳಲ್ಲಿ ಮೂಡಿಸಿ, ಅಡ್ಡಾದಿಡ್ಡಿ ನಿಂತ ಪಶುಗಳಿಗೆ ಅಮೂರ್ತ ಆಕಾರ ನೀಡಿದರು. ಜತೆಗೆ, ಬೆಂಗಳೂರು ಮತ್ತು ಮೈಸೂರಿನ ನಡುವೆ ರೋಡ್‌ಮ್ಯಾಪ್ ಬರೆದು ಕೆಂಗಲ್ ಜಾತ್ರೆಯ ಮಹತ್ವ ಸಾರಿದರು.ಮತ್ತೊಬ್ಬ ಕಲಾವಿದ ಲಕ್ಷ್ಮೀಪತಿ ಜಾತ್ರೆಯಲ್ಲಿ ಕಟ್ಟಿದ್ದ ಗೂಟ ಹಾಗೂ ಹಗ್ಗವನ್ನೇ ತಮ್ಮ ಇನ್‌ಸ್ಟಾಲೇಷನ್‌ನಲ್ಲಿ ಮರುಸೃಷ್ಟಿಸಿದರು. ಒಂದು ಮರಕ್ಕೆ ಹಲವಾರು ಆಂಗಲ್‌ಗಳಲ್ಲಿ ದಾರ ಕಟ್ಟಿ ಜಾತ್ರೆಯ ಸನ್ನಿವೇಶ ಕಟ್ಟಿಕೊಟ್ಟರು.

ಸುಬ್ಬಣ್ಣ ಮತ್ತು ಸುಬ್ರಮಣ್ಯ ಕ್ಯಾಮರಾ ಹೊತ್ತು ಜಾತ್ರೆಯ ಚಿತ್ರೀಕರಣಕ್ಕೆ ಅಣಿಯಾದರು. ವೀಡಿಯೊ ಹಾಗೂ ಛಾಯಾಚಿತ್ರ ಎರಡರಲ್ಲೂ ಜಾತ್ರೆಯನ್ನು ಶೂಟ್ ಮಾಡಲಾಯಿತು. ಆ ಚಿತ್ರಗಳನ್ನು ಕಲಾತ್ಮಕ ರೀತಿಯಲ್ಲಿ ಸಂಕಲನ ಮಾಡಿ ವೀಡಿಯೊ ಕಲೆ ತಯಾರಿಸುವ ಉತ್ಸಾಹ ಅವರಿಬ್ಬರದ್ದು.

ಕಲಾವಿದರು ಬಂದದ್ದು ಹಳ್ಳಿಗರಲ್ಲಿ ಹೊಸ ಖದರ್ ತುಂಬಿತ್ತು. ‘ಇವರೇನು ಮಾಡ್ತಾರೆ’ ಎಂದು ಕಣ್ಣಗಲಿಸಿ ನೋಡುತ್ತ ಖುಷಿಪಟ್ಟರು. ಹೀಗಲ್ಲವೇ ಜನಸಾಮಾನ್ಯರ ಬಳಿಗೆ ಕಲೆಯನ್ನು ಒಯ್ಯುವುದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.