ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ನಡಿಗೆ ಮೀರಿದ ಸಾಧನೆ

Last Updated 28 ಜನವರಿ 2019, 19:45 IST
ಅಕ್ಷರ ಗಾತ್ರ

ಸಹಜವಾಗಿ ನಡೆದಾಡುವುದಕ್ಕೆ ಆಗುವುದಿಲ್ಲ ಅಷ್ಟೇ ತಾನೆ? ಹಾಗಂತ ಆತ್ಮವಿಶ್ವಾಸಕ್ಕ ಅಡ್ಡಿಯಾಗುವಂಥದ್ದು ಯಾವುದೂ ಇಲ್ಲ. ಕೊರತೆ ಎನ್ನುವುದು ಹೆಚ್ಚಾಗಿ ಮಾನಸಿಕ ಸ್ಥಿತಿ. ಅದನ್ನು ಮೀರಿ ನಿಲ್ಲುವ ಛಾತಿ ಇರುವವರಿಗೆ ಎಂಥ ದೌರ್ಬಲ್ಯಗಳ ನಡುವೆಯೂ ಎತ್ತರಕ್ಕೇರಲು ಸಾಧ್ಯವಿದೆ. ಇದನ್ನು ಅಕ್ಷರಶಃ ಸಾಧಿಸಿದವರೂ ಇದ್ದಾರೆ. ನಿರಂಜನ್‌ ವಿ ನೇರ್ಲಿಗೆ ಇದಕ್ಕೊಂದು ಉತ್ತಮ ನಿದರ್ಶನ.

ನಗರದಲ್ಲಿ ‘ಎಕ್ಸೆಲ್‌ಪ್ಲಸ್‌ ಸರ್ವೀಸ್‌’ ಕನ್ಸಲ್ಟೇಷನ್‌ ಸಂಸ್ಥೆ ನಡೆಸುತ್ತಿರುವ ನಿರಂಜನ್‌ ವಿ. ನೇರ್ಲಿಗೆ ಮುಂಬೈನ ‌ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ)ಯಲ್ಲಿ ಉನ್ನತ ಶಿಕ್ಷಣ ಪಡೆದವರು. ತಮ್ಮ 29ನೇ ವಯಸ್ಸಿನ ನಂತರದಲ್ಲಿ ಅಂಗವಿಕಲರಾದವರು. ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡರೂ ಅವರ ಸಾಧನೆಗೆ ಅದೊಂದು ಅಡ್ಡಿಯಾಗಲೇ ಇಲ್ಲ. ಹಾಗಾಗದಂತೆ ಅವರು ನೋಡಿಕೊಂಡಿದ್ದಾರೆ. ಅದು ಮುಖ್ಯ.

ಅವರು ದೇಶ, ವಿದೇಶಗಳ ಕಾರ್ಪೋರೇಟ್‌ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೆ ವಿವಿಧ ಬಗೆಯ ಕೌಶಲ ತರಬೇತಿ ನೀಡುತ್ತಾರೆ. ಅಷ್ಟೇ ಅಲ್ಲ, ಅವರೊಬ್ಬ ಯಶಸ್ವಿ ಮಾರ್ಗದರ್ಶಕರು ಎನಿಸಿಕೊಂಡಿದ್ದಾರೆ.

ಆ ದಿನಗಳು...:

ನಿರಂಜನ್‌ ಅವರುದಾವಣಗೆರೆಯ ನೇರ್ಲಿಗೆ ಊರಿನವರು. ಬೆಳೆದದ್ದು ದಾವಣಗೆರೆಯಲ್ಲಿ. ಅಲ್ಲಿಯೇ ಬಿ.ಇ (ಸಿವಿಲ್‌) ಪದವೀಧರರಾದ ಅವರು ಹೆಚ್ಚಿನ ಓದಿಗೆ ಮುಂಬೈನ ಐಐಟಿ ಸೇರಿದರು. ಬಳಿಕ ಅವರಿಗೆ ಅಲ್ಲಿನ ‘ಬಾಂಬೆ ಫೋರ್ಟ್‌’ನಲ್ಲಿ ಕೆಲಸ ಸಿಕ್ಕಿತು. ಆ ನಂತರ ಫಿಲಿಪ್ಸ್‌ ಕಂಪನಿಯ ‘ಹಾರಿಜನ್‌ ಟೆಕ್ನಾಲಜಿಸ್’ನಲ್ಲಿ ಕೆಲಸವೂ ಸಿಕ್ಕಿತು.

ಇದೇ ಕಂಪನಿಯು ಅವರನ್ನು ಅಮೆರಿಕದಲ್ಲಿದ್ದ ತನ್ನ ಶಾಖೆಗೆ ಕಳುಹಿಸಲು ನಿರ್ಧರಿಸಿತ್ತು. ಇದರಿಂದ ಖುಷಿಯಾಗಿದ್ದ ನಿರಂಜನ್‌ ಅವರಿಗೆ, 1994ರ ನವೆಂಬರ್‌ 13ರಂದು ಆಘಾತ ಎದುರಾಯಿತು. ಅಂದು ಅವರು ವಾಸವಿದ್ದ ಮನೆಯ ನಾಲ್ಕನೇ ಮಹಡಿಯ ಮೊಗಸಾಲೆಯಿಂದ ಅರಿವಿಲ್ಲದೆ ನೆಲಕ್ಕೆ ಬಿದ್ದರು. ಈ ಆಪಘಾತ ಅವರ ಎರಡೂ ಕಾಲುಗಳ ಸ್ವಾಧೀನವನ್ನೇ ಕಸಿದುಕೊಂಡಿತು. ಬಲಗೈ ಮೂಳೆ ಎರಡು- ಮೂರು ಜಾಗದಲ್ಲಿ ಮುರಿದಿತ್ತು. ಅದೃಷ್ಟವಷಾತ್‌ ಅವರ ತಲೆಗೆ ಯಾವುದೇ ಪೆಟ್ಟು ಬಿದ್ದಿರಲಿಲ್ಲ.

ಈ ಭೀಕರ ಸ್ಥಿತಿಯಿ೦ದ ಒ೦ದು ಘಟ್ಟದ ಪರಿಹಾರ ಕಾಣಲು ಅವರಿಗೆ ಬರೋಬ್ಬರಿ ಎರಡು ವರ್ಷಗಳೇ ಬೇಕಾಯಿತು. ನ೦ತರದ ಅವಧಿಯಲ್ಲಿ ಅವರ ಜೀವನ ಕೇವಲ ಗಾಲಿ ಕುರ್ಚಿಗೆ ಸೀಮಿತವಾಗಿತ್ತು. ಕನಸೆಲ್ಲ ನುಚ್ಚುನೂರಾಗಿತ್ತು. ಆದರೆ ಮನದಲ್ಲಿನ ಅಚಲವಾದ ನಿಲುವು ಜೀವ೦ತವಾಗಿತ್ತು. ಬೆಂಗಳೂರಿಗೆ ಆಗಮನ: ಬೆ೦ಗಳೂರಿನಲ್ಲಿ ಕಂಪನಿಯೊಂದರಲ್ಲಿ ನೌಕರಿ ಗಿಟ್ಟಿಸುವಲ್ಲಿ ಅವರು ಯಶಸ್ವಿಯಾದರು. ಕ್ರಮೇಣ ಅಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿಭಾಯಿಸುವ ಅವಕಾಶ ದೊರಕಿತ್ತು. ಸುಮಾರು ಎ೦ಟು- ಹತ್ತು ಮ೦ದಿಯನ್ನೊಳಗೊ೦ಡ ಒ೦ದು ತಾ೦ತ್ರಿಕ ತ೦ಡವನ್ನು ಮುನ್ನಡೆಸುವ ಜವಾಬ್ದಾರಿಯೂ ಅವರಿಗೊಲಿಯಿತು. 2009ರಲ್ಲಿ ಅವರು ಇಲ್ಲಿಯೇ ‘ಎಕ್ಸೆಲ್‌ಪ್ಲಸ್‌ ಸರ್ವೀಸ್‌’ ಕನ್ಸಲ್ಟೇಷನ್‌ ಸಂಸ್ಥೆ ಆರಂಭಿಸಿದರು. ಇದೀಗ ಅವರು 18 ವರ್ಷದ ಸಾಕು ಮಗನೊಂದಿಗೆ ನೆ೦ಟರ, ಬ೦ಧುಗಳ ನೆರವಿನಿಂದ ಯಶಸ್ವಿ ಜೀವನ ಸಾಗಿಸುತ್ತಿದ್ದಾರೆ.

ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದಂತೆ ಅವರು ದೇಶ, ವಿದೇಶಗಳ 75ಕ್ಕೂ ಹೆಚ್ಚು ಕಂಪನಿಗಳು ಹಾಗೂ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾರೆ. ಅಮೆರಿಕ, ಯುರೋಪಿನ ವಿವಿಧ ದೇಶಗಳ ಕಂಪನಿಗಳು ಇವರನ್ನು ಕರೆಸಿ ತಮ್ಮ ಸಿಬ್ಬಂದಿಗೆ ತರಬೇತಿ ಕೊಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT