ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲದ ಕನ್ನಡಿಯಲ್ಲಿ ಅಂಬೇಡ್ಕರ್‌

ಸಂದರ್ಶನ: ಶ್ರೇಯಸ್ ಶ್ರೀನಾಥ್
Published 21 ಜನವರಿ 2024, 0:09 IST
Last Updated 21 ಜನವರಿ 2024, 0:09 IST
ಅಕ್ಷರ ಗಾತ್ರ

‘ಬಿ.ಆರ್. ಅಂಬೇಡ್ಕರ್: ನೌ ಆ್ಯಂಡ್‌ ದೆನ್’ ಕಿರುಚಿತ್ರ ಮಾಡಲು ನಿಮಗೆ ಪ್ರೇರಣೆ ಏನು?

ಅನೇಕ ಸಂಗತಿಗಳಿವೆ. ಜನಪ್ರಿಯ ಸಂಸ್ಕೃತಿಯು ನಮ್ಮನ್ನು ಹೇಗೆ ಬಿಂಬಿಸುತ್ತಿದೆ ಎನ್ನುವುದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಏನಾದರೂ ಮಾಡಬೇಕು ಎಂದು ಅನ್ನಿಸಿತು. ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದರೂ ಅಂಬೇಡ್ಕರ್ ಪರಂಪರೆಯನ್ನು ಕಡೆಗಣಿಸುತ್ತಿರುವುದಾದರೂ ಏಕೆ ಎಂದು ಅರ್ಥ ಮಾಡಿಕೊಳ್ಳುವ ಮಾರ್ಗವಾಗಿ ನನಗೆ ಈ ಚಿತ್ರ ಮಾಡುವ ಕೆಲಸ ತೋರಿತು. ಅಂಬೇಡ್ಕರ್ ಅವರನ್ನು ಕುರಿತು ಜಬ್ಬಾರ್ ಪಟೇಲ್‍ ಮಾಡಿದ್ದ ಸಿನಿಮಾದ ಬಗೆಗೆ ಕೇಳಿದ್ದೆ. ‘ಜೈ ಭೀಮ್ ಕಾಮ್ರೇಡ್’ ಎಂಬ ಸಾಕ್ಷ್ಯಚಿತ್ರವನ್ನು ಆನಂದ್ ಪಟವರ್ಧನ್ ಮಾಡಿದ್ದುದೂ ಗೊತ್ತಿತ್ತು. ಅವರ ರಾಜಕೀಯ ನಿಲುವುಗಳನ್ನು ನಾನು ಒಪ್ಪುವುದಿಲ್ಲ. ಹೀಗಾಗಿ ನನ್ನಂಥವಳೇ ಅಂಬೇಡ್ಕರ್ ಪರಂಪರೆಯನ್ನು ಹೇಳುವ ಚಿತ್ರದೊಟ್ಟಿಗೆ ನೇರವಾಗಿ ಸಂಬಂಧ ಇರಿಸಿಕೊಳ್ಳಬೇಕು ಅನಿಸಿತು.

ಅಷ್ಟೇ ಅಲ್ಲದೆ, ದೇಶದಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ದೊಡ್ಡ ಮಟ್ಟದ ಬದಲಾವಣೆಗಳಾದವು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಪರ್ಯಾಯವಾಗಿ ನನ್ನ ವಾರಗೆಯವರು ಹಾಗೂ ಯುವಕ-ಯುವತಿಯರು ‘ಅಂಬೇಡ್ಕರೈಟ್ ರಾಜಕೀಯ’ದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಜಿಗ್ನೇಶ್ ಮೇವಾನಿ, ಚಂದ್ರಶೇಖರ್ ಆಜಾದ್, ತೆನ್‌ಮೋಳಿ ಸೌಂದರರಾಜನ್, ರಾಯಾ ಸರ್ಕಾರ್ ಇವರೆಲ್ಲ ಅದಕ್ಕೆ ಉದಾಹರಣೆ. ರೋಹಿತ್ ವೇಮುಲ ಮರಣದ ದುರಂತವನ್ನೂ ಕಂಡೆವು. ಅವರು ಎತ್ತಿಹಿಡಿದಿದ್ದ ‘ಅಂಬೇಡ್ಕರಿಸಂ’, ಪ್ರಾರಂಭಿಸಿದ್ದ ಹೋರಾಟಕ್ಕೆ ಅವರ ಮರಣದಿಂದ ಕಿಚ್ಚು ಹಚ್ಚಿದಂತಾಯಿತು. ಅಧಿಕಾರಸ್ಥರ ನಡಾವಳಿಗಳನ್ನು ಖಂಡಿಸುವ ಯುವದನಿ ಹೆಚ್ಚಾಗಿ ‘ಜೈ ಭೀಮ್’ ಎಂಬ ಘೋಷಣೆ ಕೇಳಿದೆವು. ಯಾವುದೋ ಮಹತ್ತರವಾದುದು ಘಟಿಸುತ್ತಿದ್ದು, ಅದನ್ನು ಹಿಡಿದಿಡಬೇಕು ಎಂದು ನನಗೆ ಅನ್ನಿಸಿತು.

ಸಿನಿಮಾ ಮಾಡಲು ವೈಯಕ್ತಿಕ ಕಾರಣಗಳೂ ನನಗಿವೆ. ಜಾತಿ ವಿರೋಧಿ ಚಳವಳಿಯಲ್ಲಿ ತೊಡಗಿದ್ದ ಕುಟುಂಬದವಳಾದ ನನಗೆ ಅಂಬೇಡ್ಕರ್ ಬಗೆಗೆ ಗೌರವವಿದೆ. ನನ್ನ ಮನೆಯ ಆಚೆಗಿನ ಜಗತ್ತಿನಲ್ಲಿ ಏಕೆ ಅಂಬೇಡ್ಕರ್ ಪರಂಪರೆಯನ್ನು ಜನಪ್ರಿಯವಾಗಿ ಬಿಂಬಿಸಿಲ್ಲ ಎನ್ನುವುದು ಕಾಡತೊಡಗಿತು.    

ಗತಕಾಲದ ಅಂಬೇಡ್ಕರ್ ಹಾಗೂ ಈ ಕಾಲದ ಅಂಬೇಡ್ಕರ್ ಇಬ್ಬರ ನಡುವಿನ ಸಂವಾದದ ರೂಪದಲ್ಲಿ ಈ ಚಿತ್ರವನ್ನು ಮಾಡಬೇಕು ಎಂದು ನಿಮಗೆ ಯಾಕೆ ಅನ್ನಿಸಿತು? ಚಳವಳಿಯ ಸೂಕ್ಷ್ಮಗಳನ್ನು ಅದರ ಮೂಲಕ ಅನಾವರಣಗೊಳಿಸಿದ್ದು ಹೇಗೆ? ನಿಮ್ಮ ಚಿತ್ರದ ಮೂಲಕ ಭವಿಷ್ಯದ ಅಂಬೇಡ್ಕರ್ ಅವರನ್ನು ಹೇಗೆ ಕಂಡುಕೊಳ್ಳುವಿರಿ?

ನನ್ನ ಸುತ್ತಮುತ್ತ ತೆರೆದುಕೊಳ್ಳುತ್ತಿದ್ದ  ಈ ಹೊತ್ತಿನ ಘಟನೆಗಳು ಹಿಂದೆ ನಡೆದ ಘಟನೆಗಳ ಬಲವಾದ ಅನುರಣನ ಎಂದೇ ನನ್ನ ಭಾವನೆ. ಚಳವಳಿಗಳನ್ನು ವಿಸ್ತೃತವಾಗಿ ದಾಖಲಿಸಿರುವ ‘ದಲಿತ್ ಕ್ಯಾಮೆರಾ’ ತರಹದ ಇತರ ಮಾಧ್ಯಮ ಸಂಸ್ಥೆಗಳ ನೆರವನ್ನು ಪಡೆದುಕೊಂಡೆ. ನನ್ನ ತೃಪ್ತಿಗಷ್ಟೇ ಈ ಚಿತ್ರ ಮಾಡದೆ, ಬಹುಜನರು ಹಾಗೂ ಅವರ ಕಳಕಳಿಯ ಪ್ರಾತಿನಿಧಿಕತೆಯ ಬಗೆಗೆ ತಿಳಿವಳಿಕೆ ನೀಡಿ, ಆ ಕುರಿತು ಮೂಡಿದ್ದ ತಪ್ಪು ಭಾವನೆಗಳನ್ನು ಸರಿಪಡಿಸುವ ಉದ್ದೇಶವನ್ನೂ ಇಟ್ಟುಕೊಂಡೆ. ಹೀಗಾಗಿ ಹಿಂದೆ ನಮ್ಮ ಜನರು ಜಾತಿಯ ಕಾರಣಕ್ಕೆ ತುಳಿತಕ್ಕೆ ಒಳಗಾದ ಸಂದರ್ಭವನ್ನು ಹೇಗೆ ಎದುರಿಸಿರಬಹುದು ಎಂದು ಕಲ್ಪಿಸಿಕೊಳ್ಳಲಿಕ್ಕೆ ಸಾಧ್ಯವಾಯಿತು. 

ಈ ಚಿತ್ರ ನನ್ನ ವೈಯಕ್ತಿಕ ಪಯಣವೂ ಹೌದು. ಅದೊಂದು ಸಹಾನುಭೂತಿಯ ಕಾರ್ಯ. ವೈಯಕ್ತಿಕ ತತ್ತ್ವದ ಅಭಿವ್ಯಕ್ತಿ ಎನ್ನುವುದೂ ಸತ್ಯ. ಚಿತ್ರ ತಯಾರಿಕೆಯ ಮೂಲಕ, ನನ್ನಂತಹ ಸಮುದಾಯದಿಂದ ಬಂದವರು ಹೇಗೆ ಕಲಾವಿದರಾಗಬಹುದು, ಚಿಂತಕರಾಗಬಹುದು, ಸಾರ್ವಜನಿಕ ಸಂಸ್ಕೃತಿಗೆ ಕೊಡುಗೆ ನೀಡಬಹುದು ಎಂಬುದನ್ನು ಅರಿಯುವ ಪ್ರಯತ್ನವೇ ಆದಂತಾಯಿತು. ನಾನು ಚಿತ್ರಿಸಲು ಹೊರಟ ಚಳವಳಿಗಳಿಗೂ ನಾನು ಓದಿದ್ದ ಇತರ ಚಳವಳಿಗಳು, ಚಿಂತಕರಿಗೂ ಹೇಗೆಲ್ಲ ಸಂಬಂಧವಿದೆ ಎನ್ನುವುದನ್ನೂ ತಿಳಿದೆ. ಜ್ಯೋತಿಬಾ ಫುಲೆ ಆಗಿರಲಿ, ಅಮೆರಿಕದಲ್ಲಿ ದಮನಿತರ ಪರವಾಗಿ ಹೋರಾಡಿದ ಮಾರ್ಟಿನ್‍ ಲೂಥರ್ ಕಿಂಗ್ ಆಗಿರಲಿ ಅಥವಾ ಮಾಲ್ಕಂ ಎಕ್ಸ್‌ ಆಗಿರಲಿ, ಸ್ಯಾಂಡ್ರಾ ಹಾರ್ಡಿಂಗ್, ಬೆಲ್‍ ಹುಕ್ಸ್ ಅಥವಾ ಲೂಯಿ ಆಲ್ತುಸರ್ ಅವರ ಕೆಲಸಗಳಿರಲಿ; ಚಿತ್ರ ತಯಾರಿಕೆಯಿಂದ ಅಂಬೇಡ್ಕರಿಸಂ ಅನ್ನು ವಿಶ್ವದ ಅಂತಹ ವಿವಿಧ ಚಳವಳಿಗಳ ಜೊತೆಗೆ ಸಮೀಕರಿಸಿಕೊಂಡು ನೋಡುವುದು ಸಾಧ್ಯವಾಯಿತು; ಅದೂ ಎಲ್ಲ ಭೇದಗಳ ಎಲ್ಲೆ ಮೀರಿ, ಮನುಷ್ಯಳಾಗಿ.

ಈ ಚಿತ್ರವು ಸಮುದಾಯದ ಇನ್ನಷ್ಟು ಮಹಿಳಾ ಕಲಾವಿದೆಯರು ಮುಂದೆ ಬರಲು ಇಂಬುಗೊಟ್ಟೀತು ಎನ್ನುವ ನಂಬಿಕೆ ಇದೆ. ಮಹಿಳೆಯರ ಕಿರುಚಿತ್ರಗಳು ಆಗೀಗ ಬರುವುದನ್ನಷ್ಟೇ ಕೇಳಿದ್ದೇನೆ. ಈ ಸಂಖ್ಯೆ ಇನ್ನೂ ಹೆಚ್ಚಬೇಕು.

ನಿಮ್ಮ ಹಿಂದಿನ ‘ಬಹುಜನ ವೀಕ್ಷಣೆ’ಯ ಪರಿಕಲ್ಪನೆಯ ಚೌಕಟ್ಟೇ ಈ ಚಿತ್ರಕ್ಕೆ ಇದೆ. ಈ ಪರಿಕಲ್ಪನೆಯನ್ನು ಸಂಕ್ಷಿಪ್ತವಾಗಿ ತಿಳಿಸಿ. ಬಹುಜನ ಎನ್ನುವ ರಾಜಕೀಯ ಸಮುದಾಯವನ್ನು ಹೇಗೆ ವಿವರಿಸುವಿರಿ?

ಉತ್ತರ ಭಾರತದಲ್ಲಿ ಬೆಳೆದ ನಾನು ಕಾನ್ಶಿ ರಾಮ್‍ ಪರಂಪರೆಯಲ್ಲಿ ಮುಳುಗೆದ್ದವಳು. ಆಧುನಿಕ ರಾಜಕೀಯವನ್ನು ಸಹಿಸಿಕೊಳ್ಳಲು ‘ಬಹುಜನ’ ಎನ್ನುವ ಪರಿಕಲ್ಪನೆಯನ್ನು ರೂಪಿಸಿದವರು ಅವರು. ನನ್ನ ಸಹೋದದರಿಗೆ ಬಾಬಾಸಾಹೇಬ್ ಕಾನ್ಶಿ ರಾಮ್‍ ಅವರ ತತ್ತ್ವದಲ್ಲಿ ಆಸಕ್ತಿ ಇತ್ತು. ‘ಬಹುಜನ ಹಿತಾಯ ಬಹುಜನ ಸುಖಾಯ’ ಎಂಬ ಬುದ್ಧಪ್ರಜ್ಞೆಯೂ ಇದರಲ್ಲಿದೆ ಎಂದು ನಾನು ಭಾವಿಸಿರುವೆ. ಒಂದು ಸಮುದಾಯದ ಬಹುಜನರ ಕುರಿತು ಯೋಚಿಸುವುದು ನನಗಿಷ್ಟ. ಅಂದರೆ, ನಲುಗಿದವರ ಇತಿಹಾಸದಲ್ಲಿನ ಬಹುಜನ. ಪ್ರತಿ ಸಮುದಾಯಕ್ಕೂ ಇತಿಹಾಸದೊಡನೆ ಬೇರೆ ಬೇರೆಯದೇ ಸಂಬಂಧ ಇದ್ದಿರಬಹುದು. ಶೂದ್ರರು, ಶೂದ್ರೇತರರ ನಡುವಿನ ವಿಭಜನೆ ಅಥವಾ ಮತಾಂತರಗೊಂಡ ಅಲ್ಪಸಂಖ್ಯಾತರ ಸಂಕಷ್ಟಗಳನ್ನು ಗಮನಿಸಿ. ಜಾತಿ ವ್ಯವಸ್ಥೆಯು ಉಪಜಾತಿಗಳನ್ನೂ ಸೃಷ್ಟಿಸಿ, ಶೋಷಿಸಲು ಬಯಸುತ್ತದೆ ಎನ್ನುವುದು ಗೊತ್ತಾಗುತ್ತದೆ. ‘ಬಹುಜನ’ ಎನ್ನುವುದು ದಲಿತ ಪ್ರಜ್ಞೆಯನ್ನೂ ಮೀರಿದ ರಾಜಕೀಯ ಸಮೂಹವನ್ನು ಸೂಚಿಸುತ್ತದೆ. ಹೀಗಾಗಿ ನಾನು ಬಹುಜನ ಪರಿಕಲ್ಪನೆಯನ್ನು ಬಳಸಿಕೊಂಡೆ.

‘ಸ್ಪೆಕ್ಟೇಟರ್‌ಶಿಪ್’ನ ಪರಿಕಲ್ಪನೆಯು ಬೆಲ್‌ ಹುಕ್ಸ್‌ ಅವರ ಓದಿನಿಂದ ಲಭಿಸಿತು. ದಮನಿತರ ಪ್ರತಿರೋಧದ ನೋಟವನ್ನು ಕಾಣಿಸಿದವರು ಅವರು. ಅಮೆರಿಕದಲ್ಲಿ ಜೀತಕ್ಕಿದ್ದ ಕಪ್ಪು ಜನರು, ಬಿಳಿಯರು ತಮ್ಮನ್ನು ಹೇಗೆ ನೋಡುತ್ತಿದ್ದಾರೆ ಎಂದಷ್ಟೇ ಗ್ರಹಿಸಿದ್ದರು. ಆದರೆ, ಬಿಳಿಯರು ತಮ್ಮ ಜಗತ್ತನ್ನು ಹೇಗೆ ಕಟ್ಟಿಕೊಂಡಿದ್ದಾರೆ ಎನ್ನುವುದನ್ನು ಕರಿಯರು ಗ್ರಹಿಸಬೇಕು. ಇದು ಪ್ರತಿರೋಧದ ನೋಟಕ್ಕೆ ಇಂಬುಗೊಟ್ಟೀತು ಎನ್ನುವುದು ಬೆಲ್‌ ಹುಕ್ಸ್‌ ಬಯಕೆಯಾಗಿತ್ತು. ಮಹಾರಾಷ್ಟ್ರದಲ್ಲಿ ಪೇಶ್ವೆಗಳು ತಳವರ್ಗದವರನ್ನು ಅಮೆರಿಕನ್ ಬಿಳಿಯರು ಕರಿಯರನ್ನು ನಡೆಸಿಕೊಂಡಂತೆಯೇ ನಡೆಸಿಕೊಂಡಿದ್ದರು. ಇವತ್ತಿನ ಸೃಜನಶೀಲ ಕೆಲಸಗಳನ್ನು ಗಮನಿಸಿದರೆ, ದಮನಿತರನ್ನು ಬಹುಜನರಾಗಿ ಬಿಂಬಿಸುವುದು ಕಾಣದೆ ಅವರು ತುಳಿತಕ್ಕೆ ಒಳಗಾದ ಅಂಶ ಮಾತ್ರ ಕಾಣಿಸುತ್ತದೆ. ಸಮಕಾಲೀನ ಸಿನಿಮಾ ಹಾಗೂ ಮಾಧ್ಯಮ ಸಂಕೇತಗಳು, ರೂಪಕಗಳು, ಪಾತ್ರಗಳ ವಿನ್ಯಾಸದಿಂದ ಜಾತಿ ಸಿದ್ಧಾಂತವನ್ನು ಹೇಳುತ್ತಿವೆ. ನನ್ನ ಚಿತ್ರ ಇದಕ್ಕೆ ಭಿನ್ನವಾದ ಇನ್ನೊಂದು ಮಾರ್ಗದಲ್ಲಿ ಸಾಗಿದೆ. ಸಿನಿಮಾ ಪಾರದರ್ಶಕ ಮಾಧ್ಯಮವಾದುದರಿಂದ ಜನರಿಗೆ ಬೇಗ ನಾಟುತ್ತದೆ.

‘ಡಾ. ಬಿ.ಆರ್. ಅಂಬೇಡ್ಕರ್: ನೌ ಆ್ಯಂಡ್ ದೆನ್’ ಕಿರುಚಿತ್ರದ ದೃಶ್ಯ
‘ಡಾ. ಬಿ.ಆರ್. ಅಂಬೇಡ್ಕರ್: ನೌ ಆ್ಯಂಡ್ ದೆನ್’ ಕಿರುಚಿತ್ರದ ದೃಶ್ಯ
ಜ್ಯೋತಿ ನಿಶಾ
ಜ್ಯೋತಿ ನಿಶಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT