ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಂದಿರ ದಿನ: ಸಪ್ಪೆ ಅನ್ಬೇಡ ಒಂದ್ಕಲ್ ಉಪ್ಪಾಕು ಅನ್ನು– ಎಂ.ಎಸ್. ಆಶಾದೇವಿ ಲೇಖನ

ಈ ಪ್ರಸಂಗಗಳಿಂದ ಓದುಗರನ್ನು ಭಾವುಕಗೊಳಿಸುವ ಇರಾದೆ ನನಗಿಲ್ಲ. ತಾಯ್ತನಕ್ಕೆ ಮಾತ್ರ ಸಾಧ್ಯವಿರುವ ಶಕ್ತಿ ವಿಶೇಷಗಳನ್ನು ಇದು ಚಂದವಾಗಿ ಹೇಳುತ್ತದೆ ಎನ್ನುವ ಕಾರಣಕ್ಕೆ ಹೇಳಿದ್ದೇನೆ.
Published 14 ಮೇ 2023, 1:18 IST
Last Updated 14 ಮೇ 2023, 1:18 IST
ಅಕ್ಷರ ಗಾತ್ರ

ಅದೆಷ್ಟೋ ಮನೆಗಳಲ್ಲಾಗುವಂತೆ ಅಪ್ಪ ಮಗನಿಗೆ ಸಂಘರ್ಷವೊಂದು ಆರಂಭವಾಯಿತು. ಯಥಾಪ್ರಕಾರ ಮಗ ಮನೆ ಬಿಟ್ಟುಹೋದ. ಅಕಾರಣ ಅಹಂಕಾರ ಪುರುಷರಂತೇ ಆ ಅಪ್ಪನೂ ಹೆಂಡತಿಯನ್ನು ಅಂದರೆ ಮಗನ ಅಮ್ಮನನ್ನು ಇನ್ನಿಲ್ಲದಂತೆ ಹಳಿದು, ಅದಕ್ಕೆಲ್ಲ ಆಕೆಯೇ ಕಾರಣ ಎಂದು, ತಾನು ಹೊಣೆಗಾರಿಕೆಯಿಂದ ಪಾರಾಗಲು ಯತ್ನಿಸಿ ಸುಮ್ಮನಾದ. ಆ ತಾಯಿಯೋ ಮಾತು , ಜಗಳ ಈ ಯಾವುದಕ್ಕೂ ಈತ ಯೋಗ್ಯನಲ್ಲ ಎನ್ನುವ ಪರಿಯಲ್ಲಿ ಮೌನಯೋಗಕ್ಕೆ ಸಂದಳು. ಪ್ರತಿದಿನ ರಾತ್ರಿ ಊಟದ ತಾಟೊಂದನ್ನು ಸಿದ್ಧ ಮಾಡಿ ಅದರ ಮೇಲೊಂದು ತಟ್ಟೆ ಮುಚ್ಚಿಟ್ಟು ಮಲಗುವಳು. ಕೆಲವು ದಿನಗಳ ಮೇಲೆ ಗಂಡನ ಗಮನಕ್ಕೆ ಅದು ಬಂತು. ಕಷ್ಟಪಟ್ಟು ದುಡಿದ ನನ್ನ ದುಡಿಮೆಯನ್ನು ಹೀಗೆ ವ್ಯರ್ಥ ಮಾಡುವುದನ್ನು ಹಂಗಿಸಿದ. ತಾಯಿ ತನ್ನ ರಾತ್ರಿಯ ಊಟವನ್ನು ಬಿಟ್ಟಳೇ ಹೊರತು ತಾಟು ಸಿದ್ಧ ಮಾಡುವುದನ್ನಲ್ಲ. ಮಗರಾಯನಿಗೆ ಜ್ಞಾನೋದಯವಾಯಿತೋ, ಅಸಹಾಯಕತೆಯೋ ಅಂತೂ ಒಂದು ರಾತ್ರಿ ಹಿಂದಿರುಗಿದ. ಬಾಗಿಲು ತೆರೆದ ಅಮ್ಮ ಊಟದ ತಾಟು ತಂದಿಟ್ಟು ಊಟ ಮಾಡಿ ಮಲಗು ಎಂದು ರೂಮಿಗೆ ಹೋದಳು. ಬೆಪ್ಪನಂತಾದರೂ ಮಗ ಉಂಡು ಮಲಗಿದ. ಬೆಳಿಗ್ಗೆ ಮನೆಯ ಸಭೆ ಆರಂಭವಾಯಿತು. ಮಗನಿಗೆ ದುಃಖ, ಕೋಪ, ಸ್ವಮರುಕವೆಲ್ಲ ಉಕ್ಕಿ ನಾನು ಬಂದದ್ದು ಯಾರಿಗೂ ಬೇಕಾಗಿರಲಿಲ್ಲವೇನೋ. ಕೊನೆಗೆ ಅಮ್ಮನಿಗಾದರೂ ಸಂತೋಷವಾಗುತ್ತದೆ ಎಂದು ಕೊಂಡಿದ್ದೆ ಎಂದು ಉಮ್ಮಳಿಸಿದ. ಆಗಲೂ ಅಮ್ಮನದು ಮಾತಿಲ್ಲ. ಇಷ್ಟು ದಿನಗಳಲ್ಲಿ ಹೆಂಡತಿಯ ‘ತಾಯ್ತನ’ದ ಶಕ್ತಿಯನ್ನು ಅರ್ಥ ಮಾಡಿಕೊಂಡಿದ್ದ ಅಪ್ಪ ಈಗ ಮಾತನಾಡಿದ. ‘ನೀನು ಬರಬೇಕು ಅನ್ನುವುದು ನಮ್ಮೆಲ್ಲರ ಆಸೆಯೂ ಆಗಿತ್ತು ಮಗನೇ, ನೀನು ಬಂದೇ ಬರುತ್ತಿ ಎಂದು ನಂಬಿ ಕಾದವಳು, ಕಾದು ಬೆಂದವಳು ನಿಮ್ಮಮ್ಮ ಕಣೋ.’

ಇಂಥ ಸಂಗತಿಗಳು ಈ ಕಾಲದ ಅಮ್ಮಂದಿರ ಹೊಣೆಗಾರಿಕೆಯನ್ನು ಇನ್ನೂ ಹೆಚ್ಚಿಸುತ್ತವೆ. ಹೆಣ್ಣಿನ ಬಹುಪಾತ್ರಗಳಲ್ಲಿ ನಿರ್ಣಾಯಕವಾದುದು ತಾಯ್ತನದ ಪಾತ್ರವೇ. ಕಾಲ ಬದಲಾಗುತ್ತಿದೆ, ಅಪ್ಪಂದಿರು ಹೊಣೆಗಾರಿಕೆಯನ್ನು ಹೊರುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅದನ್ನು ಸಾಮಾನ್ಯೀಕರಿಸಲು ಸಾಧ್ಯವೇ ಇಲ್ಲ. ಅದು ಮನೆ ಮನೆಯ ಬದಲಾವಣೆ ಎಂದು ಹೇಳಲಾಗುವುದಿಲ್ಲ.

ಮಾಸ್ತಿಯವರ ಕೊನೆಯ ಮಗಳು ಅಂತರ್‌ಧರ್ಮೀಯ ಮದುವೆಯೊಂದನ್ನು ಮಾಡಿಕೊಂಡಿದ್ದರು. ಸಹಜವಾಗಿಯೇ ಮನೆಯಲ್ಲಿ ಅದಕ್ಕೆ ವಿರೋಧವಿತ್ತು. ಕೆಲವು ಕಾಲದ ನಂತರ ಆಕೆ ರಜೆಗಾಗಿ ಗಂಡನ ಜೊತೆ ಮನೆಗೆ ಬರುತ್ತೇನೆ ಎಂದು ಕಾಗದ ಬರೆದರು. ಮಾಸ್ತಿ ಮತ್ತು ಪಂಕಜಮ್ಮನವರ ನಡುವೆ ಮಾತುಕತೆ ನಡೆಯಿತು. ಮಾಸ್ತಿ ಹೇಳಿದರು, ‘ನಾನು ಮನಸ್ಸನ್ನು ಸಿದ್ಧ ಮಾಡಿಕೊಂಡಿದ್ದೇನೆ, ಮನೆಗೆ ಅತಿಥಿಗಳು ಬಂದರೆ, ಹೇಗೆ ಅವರಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇನೋ ಹಾಗೆಯೇ ಇವರ ಬಗೆಗೂ ನಡೆದುಕೊಳ್ಳುತ್ತೇನೆ.’ ಪಂಕಜಮ್ಮ ಹೇಳಿದರು, ‘ನಾನಂತೂ ಮನೆಗೆ ಮಗಳು ಅಳಿಯ ಬಂದರೆ ಹೇಗೆ ನೋಡ್ಕೋಬೇಕೋ ಹಾಗೆ ನೋಡ್ಕೋತೀನಿ.’ ಈ ಪ್ರಸಂಗವನ್ನು ಮಾಸ್ತಿ ಮೂರ್ತಿರಾಯರ ಹತ್ತಿರ ಹೇಳಿದಾಗ ಅವರು, ‘ನಿಮ್ಮ ಹೆಂಡತಿ ಎಷ್ಟು ದೊಡ್ಡವರು ನೋಡಿ, ಬದಲಾವಣೆ, ಜೀವನದಲ್ಲಿ ಎದುರಾಗೋ ಸವಾಲುಗಳನ್ನ ಅದೆಷ್ಟು ಸಹಜವಾಗಿ, ಪ್ರಬುದ್ಧತೆಯಿಂದ ಎದುರಿಸ್ತಾ ಇದ್ದಾರೆ’ ಎನ್ನುತ್ತಾರೆ.

ಈ ಪ್ರಸಂಗಗಳಿಂದ ಓದುಗರನ್ನು ಭಾವುಕಗೊಳಿಸುವ ಇರಾದೆ ನನಗಿಲ್ಲ. ತಾಯ್ತನಕ್ಕೆ ಮಾತ್ರ ಸಾಧ್ಯವಿರುವ ಶಕ್ತಿ ವಿಶೇಷಗಳನ್ನು ಇದು ಚಂದವಾಗಿ ಹೇಳುತ್ತದೆ ಎನ್ನುವ ಕಾರಣಕ್ಕೆ ಇದನ್ನು ಹೇಳಿದ್ದೇನೆ.


ಆ ಕಾಲ ಮತ್ತು ಈ ಕಾಲದ ಅಮ್ಮಂದಿರು ಎನ್ನುವುದಿದೆಯೆ? ತಾಯಿಯನ್ನು ಕುರಿತಂತೆ ನಾವು ಕಟ್ಟಿಕೊಂಡ ವ್ಯಾಖ್ಯಾನಗಳೆಲ್ಲ ತಾಯಿಯನ್ನು ಕಾಲಾತೀತ ನೆಲೆಯಲ್ಲಿ ನಿಲ್ಲಿಸುತ್ತಲೇ ಆ ತಾಯಿಯ ವ್ಯಕ್ತಿತ್ವದ ಗುಣ ಧಾತುಗಳೆಲ್ಲ ಸಾರ್ವಕಾಲಿಕ ಎನ್ನುವುದನ್ನೇ ಎತ್ತಿಹಿಡಿಯುತ್ತವೆ. ‘ತಾಯಿ’ಯ ಬಗ್ಗೆ ಇನ್ನು ಮುಂದೆ ಶಬ್ದವಿಲ್ಲ ಎನ್ನುವಷ್ಟು ಮಾತುಗಳನ್ನು ಆಡಿಯಾಗಿದೆ. ಆಡಿದ್ದು ಮುಗಿದಿಲ್ಲ, ಮುಗಿಯುವುದೂ ಇಲ್ಲ. ಆಡಿ ದಣಿಯದು ಮನವು ಕೇಳಿ ದಣಿಯದು ಮನವು.


ಮಾನವ ಜೀವ ಪಡೆಯಬಹುದಾದ ಅತ್ಯುನ್ನತ ಸ್ಥಿತಿಯನ್ನು ತಾಯ್ತನ ಎಂದು ಕರೆಯಬಹುದು . ಸಂತನಾಗುವುದು ಮತ್ತು ತಾಯಿಯಾಗುವುದು ಎರಡೂ ಒಂದೇ, ಆದರೆ ಅದಕ್ಕೆ ಸಿದ್ಧತೆ ಎನ್ನುವಂತೆ ಮಾನವರು ಹೆಣ್ಣಾಗಬೇಕು, ಹೆಣ್ಣಿನ ಗುಣಗಳನ್ನು ಒಳಗೊಳ್ಳಬೇಕು ಎಂದು ತತ್ವಜ್ಞಾನಿಯೊಬ್ಬ ಹೇಳುತ್ತಾನೆ. ತಾಯ್ತನ ಎನ್ನುವುದು ಜೈವಿಕವಾದುದೆಷ್ಟೋ ಅಷ್ಟೇ ಮನೋವಿನ್ಯಾಸದ್ದೂ ಹೌದು. ಅಮ್ಮಂದಿರ ದಿನವನ್ನು ಸಂಭ್ರಮಿಸುವ ಈ ಹೊತ್ತು ಅಮ್ಮಂದಿರಾದ, ಆಗಬಲ್ಲ ಅಪ್ಪಂದಿರಿಗೂ ಸೇರಬೇಕು ನಿಜ, ಆದರೆ ಅದು ಸುಲಭಕ್ಕೆ ಸಿದ್ಧಿಸುವಂಥದ್ದಲ್ಲ ಎನ್ನುವುದೂ ಅಷ್ಟೇ ನಿಜ.

ದೇವರನ್ನು ಬಿಟ್ಟರೆ ತಾಯಿಯನ್ನು ಆರಾಧಿಸಿರುವಷ್ಟು ಮಾನವ ಮನಸ್ಸು ಮತ್ತಾವ ವ್ಯಕ್ತಿಯನ್ನೂ, ವ್ಯಕ್ತಿತ್ವದ ಮಾದರಿಯನ್ನೂ ಆರಾಧಿಸಿಲ್ಲ. ಕಣ್ಣಿಗೆ ಕಾಣುವ ದೇವರು ಎನ್ನುವುದೇ ಈ ಎಲ್ಲ ದೃಷ್ಟಿಕೋನ ಮತ್ತು ವಿಚಾರಗಳ ಮೂಲಭಾವ. ತಾಯ್ತನಕ್ಕೆ ಮಾತ್ರ ಸಾಧ್ಯವಿರುವ ಹಲವು ಅಸಾಧಾರಣ ಶಕ್ತಿಸಾಧ್ಯತೆಗಳನ್ನು ಮಾನವರಿಗೆ ಅಸಾಧ್ಯವಾದುದನ್ನೆಲ್ಲ ಪಡೆದುಕೊಂಡಿದೆ ಎಂದು ನಂಬಲಾಗುವ ದೈವಕ್ಕೆ ಹೋಲಿಸುವುದು ತಾಯ್ತನದ ಅನನ್ಯತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿರುವುದಂತೂ ಹೌದು.

ತಾಯ್ತನದ ಆರಾಧನೆಯ ನೆಲೆಯು ತಾಯ್ತನವನ್ನು ದುರ್ಬಲಗೊಳಿಸಿದೆ ಮತ್ತು ಅದನ್ನು ಕರಾರಿನ ರೂಪಕ್ಕೆ ತಂದು ಬಿಟ್ಟಿದೆ. ತಾಯ್ತನದಲ್ಲಿ ಅಷ್ಟೇ ಹೊಣೆಗಾರಿಕೆಯನ್ನು ಹೊರಬೇಕಾದ ಗಂಡು ಮತ್ತು ಅಪ್ಪಂದಿರನ್ನು ಅದು ಅದರಿಂದ ಬಹುತೇಕ ಹೊರಗೇ ಇಟ್ಟುಬಿಡುತ್ತದೆ. ಇದರಿಂದ ಪಾರಾಗಲು ಹವಣಿಸುತ್ತಿರುವವರಿಗೆ ಇದು ರಹದಾರಿಯನ್ನು ಕೊಟ್ಟು ಬಿಡುತ್ತದೆ. (ಇಂದಿಗೂ ಅದೆಷ್ಟೋ ಕುಟುಂಬಗಳಲ್ಲಿ ಅಪ್ಪಂದಿರಿಗೆ ಮಕ್ಕಳು ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎನ್ನುವುದೂ ಗೊತ್ತಿರುವುದಿಲ್ಲ!) ‘ಏನೋ ಸಾರ್ ಎಲ್ಲಾ ಅವರಮ್ಮನೇ ನೋಡ್ಕೊಳ್ಳೋದು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರು ನಮ್ಮ ಸುತ್ತಮುತ್ತಲೂ ಅದೆಷ್ಟು ಜನ ಇದ್ದಾರಲ್ಲ. ಇಂಥ ಸಂಗತಿಗಳು ಈ ಕಾಲದ ಅಮ್ಮಂದಿರ ಹೊಣೆಗಾರಿಕೆಯನ್ನು ಇನ್ನೂ ಹೆಚ್ಚಿಸುತ್ತವೆ. ಹೆಣ್ಣಿನ ಬಹುಪಾತ್ರಗಳಲ್ಲಿ ನಿರ್ಣಾಯಕವಾದುದು ತಾಯ್ತನದ ಪಾತ್ರವೇ. ಕಾಲ ಬದಲಾಗುತ್ತಿದೆ, ಅಪ್ಪಂದಿರು ಹೊಣೆಗಾರಿಕೆಯನ್ನು ಹೊರುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅದನ್ನು ಸಾಮಾನ್ಯೀಕರಿಸಲು ಸಾಧ್ಯವೇ ಇಲ್ಲ. ಅದು ಮನೆ ಮನೆಯ ಬದಲಾವಣೆ ಎಂದು ಹೇಳಲಾಗುವುದಿಲ್ಲ.

ಆ ಕಾಲದ ಅಮ್ಮಂದಿರಿಗೆ ಆರೋ ಹತ್ತೋ ಕೈಗಳಿದ್ದವೇನೋ ಈ ಕಾಲದ ಅಮ್ಮಂದಿರಿಗೆ ಇಪ್ಪತ್ತು ಕೈಗಳಿದ್ದರೂ ಸಾಲದು. ಈ ಕಾಲದ ಅಮ್ಮಂದಿರು ಆ ಕಾಲದವರಿಗಿಂತ ಮಹತ್ವಾಕಾಂಕ್ಷಿಗಳು. ಅವರಿಗೆ ಮಕ್ಕಳು ‘ಯಶಸ್ವಿ’ಯಾಗಬೇಕು ಎನ್ನುವ ಗುರಿ. ಅದು ಅವರ ನಿರ್ಣಯವೋ ಆಯ್ಕೆಯೋ ಆಗದಿರಬಹುದು, ಅದು ಈ ಕಾಲದ ಚಲನೆಯೇ ಇರಬಹುದು, ಆದರೆ ಈ ಒತ್ತಡ ಅವರ ಮೇಲೆ ಇರುವುದಂತೂ ನಿಜ. ಅವರನ್ನು ಎಲ್ಲ ಸಾಧ್ಯತೆಗಳಿಗೆ ಒಡ್ಡಿ ಅವರ ಆಯ್ಕೆಗೆ ಅವರನ್ನು ಬಿಡಬೇಕು ಎನ್ನುವ ನಂಬಿಕೆ ಅವರ ಕಾರ‍್ಯಭಾರವನ್ನು ಇನ್ನಿಲ್ಲದಂತೆ ಹೆಚ್ಚಿಸುತ್ತದೆ. ಸಂಗೀತ, ನೃತ್ಯ, ಅಬಾಕಸ್, ಈಜು, ಕ್ರಿಕೆಟ್, ಟೆನಿಸ್ ...ಈ ಪಟ್ಟಿ ಮುಗಿಯಲಾರದು. ಈ ಎಲ್ಲದಕ್ಕೂ ಅವರನ್ನು ತಾವೇ ಕಳಿಸಬೇಕು, ಇಲ್ಲವೇ ವ್ಯವಸ್ಥೆ ಮಾಡಬೇಕು, ಇಲ್ಲವೇ ಅಯ್ಯೋ ಯಾಕೆ ರಜಾದಲ್ಲೂ ಮಗೂನ ಮನೇಲಿ ಕೊಳೆ ಹಾಕಿದೀರಿ ಸೇರಿಸಿ ಎನ್ನುವ ಉಪದೇಶ ಕೇಳಬೇಕು. ಈ ಯಾವುದರ ಪರ, ವಿರುದ್ಧ ನನ್ನ ವಾದವಿಲ್ಲ. ತಾಯಿಯ ಅವಸ್ಥೆಯನ್ನು ಗುರುತಿಸುವ ಪ್ರಯತ್ನ ಮಾತ್ರ. ಇವತ್ತಿನ ಯಶಸ್ವಿ ವ್ಯಕ್ತಿತ್ವ ಮತ್ತು ಬದುಕಿನ ಮಾದರಿಗೆ ತಾಯಿಯಾದವಳು ಪಡಬೇಕಾದ ಪಾಡು ಇದು. ಈ ಎಲ್ಲವನ್ನೂ ತಾಯಂದಿರು ಶಕ್ತವಾಗಿ ಮಾಡಿ ಮುಗಿಸುವುದರ ಬಗೆಗಾಗಲೀ, ಅದರಿಂದ ಅವಳು ಪಡುವ ಸಂತೋಷವನ್ನಾಗಲೀ ನಾನು ಅಲ್ಲಗಳೆಯುತ್ತಿಲ್ಲ. ಆದರೆ ಎಲ್ಲವನ್ನೂ ನಿಭಾಯಿಸಿಯೂ ಅವಳಿಗೆ ಸಿಗಬೇಕಾದ ಅಧಿಕೃತತೆ, ಗೌರವ ಸಿಗದೇ ಇರುವುದು ಮಾತ್ರ ವಿಷಾದವನ್ನು ಹುಟ್ಟಿಸುತ್ತದೆ. ಭಾರತದ ಅನೇಕ ಮಧ್ಯ ವಯಸ್ಸಿನ ತಾಯಂದಿರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನುತ್ತದೆ ಅಧ್ಯಯನವೊಂದು. ಅದರ ಮೂಲ ಈ ಅತಿ ಒತ್ತಡವೇ ಇರಬಹುದು. ಇನ್ನೂ ಒಂದು ಅಂಶವಿದೆ. ಉದ್ಯೋಗಸ್ಥ ಅಮ್ಮಂದಿರು ಏನೆಲ್ಲ ಮಾಡಿಯೂ ಅವರಲ್ಲಿ ಅಕಾರಣವಾದ ಪಾಪಪ್ರಜ್ಞೆಯೂ ಇರುತ್ತದೆ. ಕ್ವಾಲಿಟಿ ಸಮಯವೂ ಸೇರಿದಂತೆ , ಊಟೋಪಚಾರ, ಶಿಕ್ಷಣ ಎಲ್ಲವನ್ನೂ ತಮ್ಮ ಶಕ್ತಿ ಮೀರಿ ನಿಭಾಯಿಸದ ಮೇಲೂ ನಮ್ಮಿಂದ ಏನೋ ಕೊರತೆಯಾಯಿತೇನೋ ಎನ್ನುವ ಭಾವವೊಂದು ಈ ಕಾಲದ ಅನೇಕ ಅಮ್ಮಂದಿರಲ್ಲಿ ಅಕಾರಣವಾಗಿ ಉಳಿದು ಅವರನ್ನು ಸತತವಾಗಿ ಕಾಡುತ್ತದೆ. ಇರಬೇಕಿಲ್ಲ, ಇದು ಅಕಾರಣ ಎಂದು ನಮ್ಮ ಬುದ್ಧಿ ಎಷ್ಟು ಹೇಳಿದರೂ ಅನೇಕ ಬಾರಿ ನಮ್ಮ ಮನಸ್ಸು ಇದನ್ನು ಒಪ್ಪುವುದಿಲ್ಲ. ಆ ಮಕ್ಕಳು ಯಶಸ್ವಿಯಾಗದೇ ಹೋದರಂತೂ ಸಾಯುವವರೆಗೂ ಅದು ಉಳಿಯುತ್ತದೆ. ಇದನ್ನೇ ನಾನು ಕರಾರು ಎಂದು ಹೇಳುತ್ತಿರುವುದು. ಗಂಡಾಳಿಕೆಯು ಅಗೋಚರವಾದ ಒಪ್ಪಂದಗಳಲ್ಲಿ ಹೆಣ್ಣನ್ನು ಕಟ್ಟಿ ಹಾಕುವುದರಲ್ಲಿ ನಿಸ್ಸೀಮ, ಅದರಲ್ಲಿ ಮುಖ್ಯವಾದುದು ತಾಯ್ತನದ್ದು. ಇದರಿಂದ ಪಾರಾಗಲು ಅಮ್ಮಂದಿರೂ ಮುಂದಾಗಬೇಕು. ಮತ್ತದೇ ಕಷ್ಟದ ಹಾದಿಯ ಪಯಣ ಇದು ಕೂಡ.

’ತಾಯ್ತನ’ ಎನ್ನುವುದು ಒಂದು ಮನಃಸ್ಥಿತಿ ಮಾತ್ರವಲ್ಲ ಇದೊಂದು ಬದುಕಿನ ವಿನ್ಯಾಸ. ಅಮ್ಮಂದಿರ ದಿನದಂದು ನಾವು ಹೆಚ್ಚು ಯೋಚಿಸಬೇಕಾಗಿರುವುದು ಈ ಸಂಗತಿಯ ಬಗ್ಗೆ. ತಾಯ್ತನವೆಂದರೆ, ಅದೊಂದು ಅದಮ್ಯ ಜೀವನ ಪ್ರೀತಿ. ಜೀವ ಪ್ರೀತಿ. ತಾಯ್ತನವು ಎಂದಿಗೂ ಜೀವಿಗಳನ್ನು ದ್ವೇಷಿಸುವುದಿಲ್ಲ, ಬದುಕನ್ನು ನಿರಾಕರಿಸುವುದಿಲ್ಲ. ಏನೆಂಥ ಬಿಕ್ಕಟ್ಟಿರಲಿ ಅದನ್ನು ದಾಟಿ, ಈಜಿ, ಮೀರಿ, ಪಕ್ಕಕ್ಕಿರಿಸಿ ಬದುಕನ್ನು ಪ್ರೀತಿಸಬೇಕು ಎನ್ನುವ ಜೀವನ ಪಾಠವನ್ನು ಅಮ್ಮ, ಅಮ್ಮತನ ಕಲಿಸುವಂತೆ ಮತ್ತಾವುದೂ ಕಲಿಸಲಾರದು.

‘ಸಪ್ಪೆ ಅನ್ಬೇಡ ಒಂದ್ಕಲ್ ಉಪ್ಪಾಕು ಅನ್ನು’

ಇದು ತಾಯ್ತನದ ಜೀವನ ಮೀಮಾಂಸೆ. ಎಷ್ಟು ಸರಳವಾದ ಆದರೆ ಘನವಾದ ನಡೆ ಮತ್ತು ನುಡಿ. ಸಪ್ಪೆ ಎನ್ನುವ ನೈರಾಶ್ಯಕ್ಕಿಂತ ಒಂದೇ ಒಂದು ಕಲ್ಲು ಉಪ್ಪು ಹಾಕಿಕೊಂಡು ಬದುಕನ್ನು ರುಚಿ ಮಾಡಿಕೊಳ್ಳುವ ದಾರಿ ಬದುಕಿಗೆ ನಾವು ಸಲ್ಲಿಸುವ ಗೌರವ. ಬದುಕು ಎಷ್ಟೇ ಕಷ್ಟಗಳನ್ನು ಎದುರಿಗೆ ತಂದು ನಿಲ್ಲಿಸಲಿ, ಬದುಕು ಹೆಣ್ಣಿಗೆ ಹುಟ್ಟುಗುಣವಾದ ಜೀವನ ಪ್ರೀತಿಯು ಮೀಮಾಂಸೆಯಾಗಿ ಬದುಕಿನ ದಾರಿಯಾಗಿ ರೂಪುಗೊಳ್ಳುವುದು ಅವಳ ತಾಯ್ತನದ ವಿಸ್ತಾರದಲ್ಲಿ. ಮತ್ತೆ ಹೇಳುತ್ತೇನೆ, ಇದನ್ನು ಕೇವಲ ಜೈವಿಕತೆಗೆ ಸೀಮಿತವಾಗಿಸುವ ಅಗತ್ಯವಿಲ್ಲ. ‘ನಾನು ಅರ್ಧ ಹೆಣ್ಣು’ ಎಂದ ಗಾಂಧಿ ತಾಯಾಗುವ ದಾರಿಯನ್ನು ತನ್ನ ಬದುಕಿನ ಕೊನೆಯ ದಿನಗಳ ಪರಮ ಗುರಿಯಾಗಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಅತ್ಯಾಧುನಿಕ ಮನೆ ಕಟ್ಟಿಸಿಯೂ ಹಿಂದೆ ನೀರೊಲೆ ಉಳಿಸಿಕೊಂಡು, ನಾನು ರಜಾಕ್ಕೆ ಬಂದಾಗಲೆಲ್ಲ ಒಲೆಗೆ ಉರಿ ಹಾಕಿ , ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಮ್ಮ ಎನ್ನುತ್ತಿದ್ದ ನನ್ನ ಅಪ್ಪಾಜಿ, ಎಷ್ಟೇ ಹೊತ್ತಿನಲ್ಲಿ ಸಿಕ್ಕರೂ ‘ಊಟ ಆತೇನು’ ಎಂದು ಕೇಳುತ್ತಿದ್ದ ಕಲಬುರಗಿ ಮೇಷ್ಟ್ರು, ನನಗಾಗದಿದ್ದ ಒಂದು ಸಂದರ್ಭದಲ್ಲಿ ನನ್ನ ತಂದೆ ತಾಯಿಯನ್ನು ವೈದ್ಯರ ಬಳಿ ಕರೆದೊಯ್ದ, ಅವರ ಮನೆಗೆ ಹೋದಾಗಲೆಲ್ಲ ಏನಾದರು ಕೊಟ್ಟೇ ಕೊಡುತ್ತಿದ್ದ, ಒಮ್ಮೆ ಏನೂ ಇರದಾಗ ಮನೆಯಲ್ಲಿದ್ದ ರಾಗಿ ಹಿಟ್ಟನ್ನು ಕೊಟ್ಟು ಬರೀ ಕೈಯಲ್ಲಿ ಕಳಿಸಬಾರದು ಎಂದ ಕಿ.ರಂ ಇವರಲ್ಲಿಯೂ ಇದ್ದ ಅಮ್ಮಂದಿರನ್ನು ಇವತ್ತು ನಾವು ನೆನೆಯಬೇಕು. ಎಲ್ಲರ ಬದುಕಿನಲ್ಲಿಯೂ ಇಂಥ ಕೆಲವು ಅಮ್ಮಂದಿರು ಇದ್ದೇ ಇರುತ್ತಾರೆ. ಇಂಥವರ ಸಂತತಿ ಸಾವಿರ, ಲಕ್ಷ, ಕೋಟಿಯಾಗಬೇಕು.

ಒಡಲಾಳದ ಸಾಕವ್ವನೋ, ಲಂಕೇಶರ ಅವ್ವನೋ, ಗರ‍್ಕಿಯ ತಾಯಿಯೋ ಇವರೆಲ್ಲರೂ ಜಗತ್ತಿನ ಎಲ್ಲ ಕಾಲದ ಅಮ್ಮಂದಿರು. ಕೆಎಸ್‌ನ ಅವರ ‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ’ ಕವಿತೆಯಲ್ಲಿನ ಅಮ್ಮ ಮಾತ್ರ ನಾವು ಆಶಿಸುತ್ತಿರುವ, ಕನಸುತ್ತಿರುವ ಅಮ್ಮ. ಆ ಅಮ್ಮನನ್ನು ಗುರುತಿಸುತ್ತಿರುವುದು ಮಗ ಎನ್ನುವುದು ಈ ನಮ್ಮ ಕಾಲದ ಅಗತ್ಯವನ್ನು ಇನ್ನೂ ಒತ್ತಿ ಹೇಳುತ್ತದೆ. ಅಪ್ಪತನವನ್ನು ಬೇಕಾದಾಗ ತನ್ನ ಸವಲತ್ತಾಗಿ ಬಳಸಿಕೊಳ್ಳುವ, ತನ್ನ ಉತ್ತರಾಧಿಕಾರಿಯ ಆಮಿಷ ತೋರಿಸಿ ಅಮ್ಮನನ್ನು ಬಿಟ್ಟು ಮಗನನ್ನು ಮಾತ್ರ ಸೆಳೆದುಕೊಳ್ಳುವ ಗಂಡಾಳಿಕೆಯ ಸ್ವಾರ್ಥ, ಕ್ರೌರ‍್ಯವನ್ನು ಮಗ ಧಿಕ್ಕರಿಸಿ ಹೇಳುತ್ತಾನೆ,

ಪರ್ವತಾರಣ್ಯಗಳ ಸಿಂಹ ಶಿಬಿರಗಳಲ್ಲಿ

ನನ್ನ ಬೆಳೆಸಿದಳಂತೆ ಅಗ್ನಿ ಕುವರಿ

ಆ ವಸುಂಧರೆಯ ಮಗ ನಾನು

ಪೊರೆದಳಂತಮೃತವನೆ ಸೂಸಿ

ತಾಯಿಯನ್ನು ಒಪ್ಪದ ನಿನ್ನ ಸಿಂಹಾಸನ ಕಸಕ್ಕಿಂತ ಕಡೆ ಎನ್ನುವ ಮೂಲಕ ಇಲ್ಲಿನ ಮಗ ತಾಯ್ತನದ ಕಡೆಗೆ ಚಲಿಸುತ್ತಾನೆ. ತಾಯ ಅಮೃತದ ಎದುರಿಗೆ ಅಧಿಕಾರ ಅವನಿಗೆ ವಿಷವಾಗಿ ಕಾಡುತ್ತದೆ.

ತಾಯ್ತನದ ಅಪೂರ್ವ ಶಕ್ತಿಯನ್ನೂ, ಯಾರ, ಯಾವುದರ ಹಂಗಿಲ್ಲದ ಅದರ ಸ್ವಯಂಪೂರ್ಣತೆಯನ್ನೂ ಕಾಣ್ಕೆಯಂತೆ ಕಟ್ಟಿಕೊಟ್ಟಿದ್ದಾರೆ ಕೆಎಸ್‌ನ ಇಲ್ಲಿ. ಈ ಸ್ವಯಂಪೂರ್ಣ, ಸ್ವಯಂದೀಪ್ತ ತಾಯ್ತನವನ್ನು ಲೋಕ ಆವಾಹಿಸಿಕೊಳ್ಳಲಿ, ತಾಯ ಪ್ರೀತಿಯ ಸಹಿಷ್ಣುತೆಯ, ಸಹಬಾಳ್ವೆಯ ದಾರಿ ದಕ್ಕಲಿ ಎಲ್ಲರಿಗೂ.

ಬಂದ ಬಾಗಿಲು ಮಣ್ಣು : ಬಿಡುವ ಬಾಗಿಲು ಮಣ್ಣು

ನಡುವೆ ಕಾಪಾಡುವುದು ತಾಯ ಕಣ್ಣು (ಕೆಎಸ್‌ನ ಸಾಲುಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT