ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Father's Day 2024: ಅಪ್ಪನಿಗೇನು ಕೊಡಬಹುದು?

Published 14 ಜೂನ್ 2024, 23:30 IST
Last Updated 14 ಜೂನ್ 2024, 23:30 IST
ಅಕ್ಷರ ಗಾತ್ರ

ಬದುಕಿನಲ್ಲಿ ಎಲ್ಲ ನೀಡುವ ಅಪ್ಪನಿಗೆ ನಾವೇನು ಕೊಡುವುದು? ನಾವೇನು ಕೊಡಬಹುದು? ಈ ಪ್ರಶ್ನೆ ಎರಡು ದಶಕಗಳ ಹಿಂದೆ ಮಹತ್ವದ್ದು ಅಂತನಿಸುತ್ತಲೇ ಇರಲಿಲ್ಲ. ಆದರೆ ಈಗ ಫಾದರ್ಸ್‌ ಡೇ ಬಂದಾಗಲೆಲ್ಲ ಮಕ್ಕಳು ಏನು ಕೊಡಬಹುದು ಎಂಬ ಪ್ರಶ್ನೆಗೆ ಜಿದ್ದಾಜಿದ್ದಿಗೆ ಬಿದ್ದು ಉಡುಗೊರೆಗಳ ಪಟ್ಟಿ ಮಾಡುತ್ತಾರೆ.

ನನಗೆ ಕೊಟ್ಟಿದ್ದೆಲ್ಲವೂ ಅಪ್ಪನೇಆದರೂ ಅಪ್ಪನಿಗೇನು ಕೊಡಬೇಕು ಎಂದು ಯೋಚಿಸುವವರಿಗೆ ಇಲ್ಲಿದೆ ಪಟ್ಟಿ.ಮನೆ, ಮಕ್ಕಳ ಜವಾಬ್ದಾರಿಯನ್ನು ನೆರವೇರಿಸುವಲ್ಲಿ ತನ್ನ ಕಾಳಜಿಯನ್ನೇ ಮರೆತಿದ್ದರೆ ಅವರಿಗೆ ಒಂದು ಸ್ಮಾರ್ಟ್‌ ವಾಚ್‌ ನೀಡಿ. ನಿನ್ನ ಆರೋಗ್ಯವೇ ನಮ್ಮ ಭಾಗ್ಯ ಎಂಬುದು ಮನವರಿಕೆಯಾಗಲಿ.

ಅಪ್ಪನ ಬೆವರ ಮಳೆಯಲ್ಲಿ ಮಿಂದು ಬೆಳೆಯುವ ನಮಗೆ ಆ ಬೆವರಿನ ಮಾಧುರ್ಯವೇ ಒಂದು ಸುರಕ್ಷಿತ ಭಾವ ನೀಡುತ್ತದೆ. ಆ ಬೆವರಿನ ಮೌಲ್ಯವನ್ನು ಅರಿತವರಂತೆ, ಅಪ್ಪನಿಗೆ ಘಮ್ಮೆನ್ನುವ ಒಂದು ಪರ್ಫ್ಯೂಮ್‌ ನೀಡಬಹುದು.

ಅಪ್ಪನೆಂದರೆ ಬನೀನಿಲ್ಲಿರುವ ತೂತುಗಳು ಎಂಬ ಚಿತ್ರಣವೇ ನಿಮಗೂ ನೆನಪಾಗುತ್ತಿದ್ದಲ್ಲಿ, ಈ ಮಳೆಗಾಲದ ಋತುವಿಗೆ ಅನುಕೂಲವಾಗುವಂತೆ ಒಂದು ರೇನ್‌ಕೋಟ್‌, ವಿಂಡ್‌ಶೀಟ್‌, ನೀನೆಂದರೆ ಬೆಚ್ಚನೆಯ ಪ್ರೀತಿ ಎಂದು ಹೇಳಬಹುದಾದ ಜಾಕೆಟ್‌ ನೀಡಬಹುದು.

ದಶಕದ ಹಿಂದಿನಿಂದ ಬಳಸುವ ಬೆಲ್ಟ್‌ನಲ್ಲಿ ಯಾವ ತೂತು ಕೊನೆಯದಾಗಿತ್ತು, ಅದ್ಹೇಗೆ ಬೆಳೀತಾ ಬಂತು ಎಂಬುದನ್ನು ಹೇಳುತ್ತ ಕೂರುವ ಅಪ್ಪನಿಗೆ ಚಂದದ ಲೆದರ್‌ ಬೆಲ್ಟ್‌ ಸಹ ಉಡುಗೊರೆಯಾಗಿ ನೀಡಬಹುದು.

ಅಪ್ಪನ ಜೋಬಿಗೆ ಸದಾ ತೂತು ಎಂದು ದೂರುವ ನಾವು, ಅಪ್ಪನ ಕಾಸಿಗೆ, ಅಪ್ಪನ ಕಾರ್ಡುಗಳಿಗೆ ಬೆಚ್ಚನೆಯ ತಾವು ನೀಡಬಹುದಾದ ಚಂದನೆಯ ವಾಲೆಟ್‌ ಅನ್ನೂ ಕೊಡುಗೆಯಾಗಿ ನೀಡಬಹುದು.

ಇವೆಲ್ಲವೂ ನೀಡಿದ್ದಾಗಿದೆ. ನಿವೃತ್ತರಾಗಿರುವ ಅಪ್ಪನಿಗೆ ಕೊಡುವುದೇನು ಎಂಬ ಗೊಂದಲವಿದ್ದರೆ ಓಟಿಟಿಗಳ ಚಂದಾದಾರರಾಗಿಸಬಹುದು. ಬಿಡುವಿನ ಸಮಯ ಮನರಂಜನೆಯಿಂದ ಕೂಡಿರಲಿ ಎಂಬ ಆಶಯದೊಂದಿಗೆ.. 

ಅಪ್ಪ–ಮಕ್ಕಳು ಸ್ಪಾಗೆ ಹೋಗಿ ಮಸಾಜು ಮಾಡಿಸಿಕೊಂಡು, ಹಳೆಯ ನೆನಪುಗಳಲ್ಲಿಯೂ ಮಿಂದೆದ್ದು, ಮಜ್ಜನವನ್ನು ಅನುಭವಿಸಬಹುದು. ಒಂದೆರಡೇ ದಿನಗಳಿಗೆ ಆಗುವಂತೆ ಪ್ರವಾಸವನ್ನೂ ಆಯೋಜಿಸಬಹುದು. 

ಇದೀಗ ಅಪ್ಪನಿಗೆ ಕೊಡುವ ಗ್ಯಾಜೆಟ್‌ಗಳ ಬಗ್ಗೆಯೂ ಗಮನವಿರಲಿ. ಕಿವಿಮೊಗ್ಗುಗಳನ್ನು, ಎಲೆಕ್ಟ್ರಿಕ್‌ ಬ್ರಷ್‌, ಟ್ರಿಮ್ಮರ್‌, ಪವರ್‌ಬ್ಯಾಂಕ್‌ ಇವನ್ನೆಲ್ಲ ನಿಮ್ಮ ಗ್ಯಾಜೆಟ್‌ ಪಟ್ಟಿಯಲ್ಲಿ ಸೇರಿಸಿ ಇಡಬಹುದು. ನಿವೃತ್ತಿಗೆ ಸಮೀಪ ಬಂದಿರುವ ಅಪ್ಪ ನಿಮಗಿದ್ದರೆ ಅವರಿಗೆ ಚಂದದ ಆರ್ಗನೈಸರ್‌ಗಳನ್ನೂ ನೀಡಿ. ಅವೆಲ್ಲವೂ ಅವರ ಬಳಕೆಗೆ ಅಗತ್ಯ ಇರುವಂಥವು. 

ಮಕ್ಕಳು ನೀಡಿದಾಗ ಇನ್ನಷ್ಟು ಮುಚ್ಚಟೆಯಿಂದ ಬಳಸುತ್ತಾರೆ. ಪ್ರೀತಿಯಿಂದ ಬಳಸುತ್ತಾರೆ.

ಇವೆಲ್ಲ ಕೊಡದೇ ಇದ್ದರೂ, ಅಪ್ಪನೊಂದಿಗೆ ಒಂದಷ್ಟು ಸಮಯ ಕಳೆಯಿರಿ. ಹಳೆಯ ಕಾಲದ್ದು ಅಂತನಿಸಿದರೂ ಪರವಾ ಇಲ್ಲ, ಚಂದನೆಯ ಪತ್ರ ಬರೆಯಿರಿ. ಹಳೆಯಹಾಡುಗಳ ಸಂಗ್ರಹ ನೀಡಿರಿ. ಮತ್ತು ಹಳೆಯ ನೆನಪುಗಳೊಂದಿಗೆ ಒಂದಷ್ಟು ತಾಜಾ ಸಮಯ ಕಳೆಯಿರಿ.

ಅಪ್ಪನೆಂದರೆ... ಬರೀ ಒಂದು ಜೀವವಲ್ಲ.. ನಮಗಾಗಿ ಸವೆದ, ನಾವು ಸವಿದ ಜೀವನವೂ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT