ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲ ನೆಲದ ‘ನವ್ಯ’ ದನಿ ರಾಜಶೇಖರ ನೀರಮಾನ್ವಿ

Published 17 ಆಗಸ್ಟ್ 2024, 23:36 IST
Last Updated 17 ಆಗಸ್ಟ್ 2024, 23:36 IST
ಅಕ್ಷರ ಗಾತ್ರ

70 ರ ದಶಕದ ಕನ್ನಡ ಸಾಹಿತ್ಯದಲ್ಲಿ ಗೋಪಾಲಕೃಷ್ಣ ಅಡಿಗ ನವ್ಯಕ್ಕೆ ನಾಂದಿ ಹಾಡಿದರು. ಇಂಗ್ಲಿಷ್ ಸಾಹಿತ್ಯದ ಪ್ರೇರಣೆಯಿಂದ ಮುಕ್ತಛಂದಸ್ಸಿನ ಪ್ರಯೋಗ ಮಾಡಿದರು. ಸ್ವಾತಂತ್ರ್ಯ ನಂತರದ ಭ್ರಮನಿರಸನ ಮನಸಿನ ಒಳತೋಟಿ, ಹೊಯ್ದಾಟಗಳನ್ನು ತೆರೆದಿಟ್ಟರು. ಅದೇ ಕಾಲಘಟ್ಟದಲ್ಲಿ ಶಾಂತಿನಾಥ ದೇಸಾಯಿ, ಯು.ಆರ್‌.ಅನಂತಮೂರ್ತಿ, ಪಿ.ಲಂಕೇಶರ ಹಾಗೆಯೇ ರಾಜಶೇಖರ ನೀರಮಾನ್ವಿ ಅವರು ಸಣ್ಣಕಥೆಯಲ್ಲಿ ನವ್ಯದ ದನಿಯನ್ನು ತಂದು ಕಥನ ಪ್ರಪಂಚವನ್ನು ವಿಸ್ತರಿಸಿದರು. ಹೊಸ ಸಂವೇದನೆಯ ಕಥೆಗಳಿಂದ ಶ್ರೇಷ್ಠ ಕಥೆಗಾರರ ಸಾಲಿಗೆ ಸೇರಿದರು.

ನವ್ಯದ ವಿಕ್ಷಿಪ್ತತೆ, ಲೈಂಗಿಕ ಅರಾಜಕತೆ, ಸ್ತ್ರೀ ಸಂಕಟ, ಸಣ್ಣತನ, ಕ್ರೌರ್ಯವನ್ನು ಕಣ್ಣಿಗೆ ಕಟ್ಟುವ ಹಾಗೆ ರೂಪಕನಿಷ್ಠವಾಗಿ ಕಥೆ ಹೆಣೆಯುವ ಕಲೆಗಾರಿಕೆ ನೀರಮಾನ್ವಿಯವರಿಗೆ ಸಿದ್ಧಿಸಿತ್ತು .1978 ರಲ್ಲಿ ಪ್ರಕಟವಾದ ‘ಹಂಗಿನರಮನೆಯ ಹೊರಗೆ’ ಸಂಕಲನ ಸಾಹಿತ್ಯಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಗ್ರಾಮ್ಯ ಜಗತ್ತಿನ ಭಾಷೆಯ ಸೊಗಡು, ವ್ಯಕ್ತಿಪ್ರಜ್ಞೆ ಮತ್ತು ಪ್ರಜ್ಞಾ ಪ್ರವಾಹ ತಂತ್ರ, ಸಾತ್ವಿಕ ವ್ಯಂಗ್ಯ, ವಿಶಿಷ್ಟ ಶೈಲಿ ಮತ್ತು ಬದುಕಿನ ಪರಿಧಿಯನ್ನು ದುಡಿಸಿಕೊಂಡ ಬಗೆ ಅನನ್ಯ.

1990ರಲ್ಲಿ ಪ್ರಕಟವಾದ ‘ಕರ್ಪೂರದ ಕಾಯದಲ್ಲಿ’ ಕಥೆಯಲ್ಲಿ ವ್ಯವಸ್ಥೆಯ ವೈರುಧ್ಯ, ದಟ್ಟವಾದ ತಿರಸ್ಕಾರ, ಸವಾಲುಗಳ ಸಾಂದ್ರತೆಯಿದೆ. ರಾಜಕೀಯ ಸಂಘರ್ಷ, ಅಮಾನವೀಯವೆನಿಸುವ ವೈದೃಶ್ಯಗಳಿವೆ. ಕಥೆಗಾರ ಆಪ್ತತೆ, ತೀವ್ರತೆ ಮತ್ತು ಅನುಭವನಿಷ್ಠರಾಗಿ ಬರೆದಿರುವುದರಿಂದ ಅಲ್ಲಿನ ವೈಯಕ್ತಿಕ ಸಂಬಂಧಗಳ ಚಿತ್ರಣ ಸಾಮಾಜಿಕ ಆಯಾಮವನ್ನು ಪಡೆದುಕೊಂಡಿದೆ. ಕಥೆಗಳ ಭಿತ್ತಿಯಲ್ಲಿ ಆಧುನಿಕ ಬದುಕಿನ ತಲ್ಲಣ, ಮನುಷ್ಯನ ಅಸ್ತಿತ್ವ, ಸಾಮಾಜಿಕ ಸ್ಥಿತ್ಯಂತರ, ಬಿರುಕು ಬಿಟ್ಟ ಬದುಕು, ಜಾಗತೀಕರಣ ಒಡ್ಡಿದ ಸವಾಲು, ಹತಾಶೆ, ತಣ್ಣನೆಯ ಪ್ರತಿರೋಧದ ವಿನ್ಯಾಸಗಳಿವೆ. ಭೂತ, ವರ್ತಮಾನ ಸಂಕೀರ್ಣತೆಗೆ ಎಡೆ ಮಾಡಿಕೊಡದಂತೆ ಕಥೆ ಕಟ್ಟಿದ ರೀತಿ ಚೇತೋಹಾರಿಯಾಗಿದೆ.

ಅವರ ಮೊದಲ ಕಥೆ ‘ವೃತ್ತ’ ಪ್ರಕಟವಾದದ್ದು ‘ಸಂಕ್ರಮಣ’ ಪತ್ರಿಕೆಯಲ್ಲಿ ‘ಭೂತ’ ‘ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ’ಯಲ್ಲಿ ತೀರ್ಪುಗಾರರ ಮೆಚ್ಚುಗೆ ಗಳಿಸಿತ್ತು. ಅಡಿಗರ ‘ಸಾಕ್ಷಿ’ಯಲ್ಲಿ ‘ಹಂಗಿನರಮನೆಯ ಹೊರಗೆ’ ಕಥೆಯನ್ನು ಓದಿ ಮೆಚ್ಚಿಕೊಂಡ ಗೆಳೆಯ ಸಿ.ಚನ್ನಬಸವಣ್ಣ ಇನ್ನಷ್ಟು ಕಥೆಗಳನ್ನು ಬರೆಯಲು ಒತ್ತಾಯಿಸಿದರು. ಐದಾರು ತಿಂಗಳ ನಂತರ ಇಬ್ಬರು ಚಹಾ ಸೇವಿಸುತ್ತ ಮಾತಿಗಿಳಿದಾಗ, ‘ಸಂಕಲನಕ್ಕಾಗುವಷ್ಟು ಕಥೆಗಳನ್ನು ಬರೆದಿರಾ?’ ಎಂದು ಕೇಳಿದರು. ‘ನಿನ್ನ ಮಾತು ಕೇಳಿ ಕಥೆಗಳನ್ನು ಬರೆದೀನಿ. ಈಗ ಯಾವನು ಪುಸ್ತಕ ಪ್ರಿಂಟ್ ಮಾಡ್ತಾನ?’ ನೀರಮಾನ್ವಿಯ ಈ ಮಾತಿಗೆ ‘ಅಣ್ಣಾ ನಾನು ಪ್ರಕಟಿಸ್ತೀನಿ’ ಎಂದು ಚನ್ನಬಸವಣ್ಣ ನಗುತ್ತ ಮುಂದೆ ಬಂದರು. ಆಗ ಹುಟ್ಟಿಕೊಂಡಿದ್ದೇ ಲೋಹಿಯಾ ಪ್ರಕಾಶನ. ಹೊಗೆಯಾಡುವ ಚಹಾದ ಬಟ್ಟಲಿನೊಂಗಿನ ಮಾತುಕತೆಯ ಗಳಿಗೆ ಒಂದು ಪ್ರಮುಖ ಪ್ರಕಾಶನದ ಹುಟ್ಟಿಗೆ ಕಾರಣವಾಯಿತು.

ರಾಯಚೂರಿನ ಬಿಸಿಲನೆಲದ ಜಮೀನ್ದಾರಿಕೆಯ ಅಟ್ಟಹಾಸ, ತಳ ಸಮುದಾಯಗಳ ಕಿತ್ತು ತಿನ್ನುವ ಬಡತನ, ನಿಜಾಂಶಾಹಿ ಆಡಳಿತ ಉಂಟು ಮಾಡಿದ ತಲ್ಲಣ, ಸಾಮಾಜಿಕ ಕೇಡು, ಮಾನವೀಯತೆಯ ಶೋಧ ಮತ್ತು ಅದರಾಚೆಗೆ ಬರವಣಿಗೆಯ ಬೇರುಗಳು ನಿರ್ವಚನೆಗೊಂಡ ರೀತಿ ವಿಶಿಷ್ಟವಾಗಿದೆ. ಲೇಖಕರು ನಿರ್ಲಿಪ್ತರಾಗಿದ್ದುಕೊಂಡೇ ಶೋಷಣೆಯ ಮುಖಗಳನ್ನು ಬಿಡಿಸಿದ್ದಾರೆ. ಪ್ರಧಾನವಾಗಿ ಅಲ್ಲಿನ ಅಭಿವ್ಯಕ್ತಿಯಲ್ಲಿ ಲೋಹಿಯಾ ಸಮಾಜವಾದದ ಪ್ರಭಾವವಿದೆ. ತಾತ್ವಿಕ, ಪ್ರಗತಿಪರ ಧೋರಣೆಯ ಸೂಕ್ಷ್ಮ ಎಳೆಗಳಿವೆ. ಸಾಮಾಜಿಕ ಸಂಬಂಧಗಳು ವಿಘಟನೆಯಾಗದಂತೆ ಎಚ್ಚರಿಕೆಯ ಪ್ರಜ್ಞೆಯಿಂದ ಬರೆಯುತ್ತಿದ್ದ, ಸಾಂಸ್ಕೃತಿಕ ಚಹರೆಯ ಬದಲಾವಣೆಗೆ ಹಂಬಲಿಸುತ್ತಿದ್ದ ನೀರಮಾನ್ವಿ ಎಲ್ಲ ಕಾಲಕ್ಕೂ ಸಲ್ಲುವ ಕಥೆಗಾರರಾಗಿದ್ದಾರೆ. ಹೊಸ ತಲೆಮಾರಿನ ಬರೆಹಗಾರರು ಅವರ ಕಥೆಗಳನ್ನು ಗಂಭೀರವಾಗಿ ಗಮನಿಸಬೇಕು.

ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್‌, ಜಿ.ಎಚ್.ನಾಯಕರಿಗೆ ‘ಕನ್ನಡ ಸಣ್ಣಕಥೆಗಳು’ ಸಂಪಾದಿಸುವ ಜವಾಬ್ದಾರಿ ನೀಡಿತ್ತು. ಅದರಲ್ಲಿ ಸೇರಿದ್ದ ರಾಜಶೇಖರ ನೀರಮಾನ್ವಿಯವರ ‘ಹಂಗಿನರಮನೆಯ ಹೊರಗೆ’ ಕಥೆಯನ್ನು ಸಂಕಲನದಿಂದ ಕೈ ಬಿಡಬೇಕೆಂದು ಗೋಪಾಲಕೃಷ್ಣ ಅಡಿಗರು ನೆಹರೂ ಕುಟುಂಬದ ಆಪ್ತ ವಲಯಕ್ಕೆ ಸೇರಿದ ಕನ್ನಡಿಗ ಎಚ್.ವೈ.ಶಾರದಾಪ್ರಸಾದರಿಂದ ನಾಯಕರಿಗೆ ದೂರವಾಣಿ ಕರೆ ಮಾಡಿಸಿದರು. ಆಗ ಜಿ.ಎಚ್.ನಾಯಕರು ‘ನನ್ನ ಹೊಣೆಗಾರಿಕೆಯ ವಿಚಾರದಲ್ಲಿ ಯಾರೂ ತಲೆ ಹಾಕಲು ಅವಕಾಶ ಇಲ್ಲ’ ಎಂದರು. ಅಡಿಗರು ‘ಸಾಕ್ಷಿ’ಯಲ್ಲಿ ತಾವೇ ಪ್ರಕಟಿಸಿದ್ದ  ಆ ಕಥೆಯನ್ನು ಪ್ರಕಟಿಸಬಾರದೆಂದು ಯಾಕೆ ಹೇಳಿದರು? ಇದು ಇಂದಿಗೂ ಸೋಜಿಗ. ಈ ಪ್ರಸಂಗವನ್ನು ರಾಜಶೇಖರ ನೀರಮಾನ್ವಿಯವರು ತಮ್ಮ ಸಮಗ್ರ ಕಥಾ ಸಂಕಲನದ ಲೇಖಕರ ನುಡಿಯಲ್ಲಿ ದಾಖಲಿಸಿದ್ದಾರೆ.

ಖ್ಯಾತ ನಿರ್ದೇಶಕ ಬಸು ಚಟರ್ಜಿ 2007 ರಲ್ಲಿ ಭಾರತ ದೇಶದ 27 ಭಾಷೆಗಳ ಕಥೆಗಳನ್ನು ಹಿಂದಿ ಭಾಷೆಯಲ್ಲಿ ದೆಹಲಿ ದೂರದರ್ಶನಕ್ಕೆ ನಿರ್ಮಿಸಿಕೊಡಲು ಒಪ್ಪಂದ ಮಾಡಿಕೊಂಡಿದ್ದರು. ಕನ್ನಡ ಭಾಷೆಯ ಕಥೆಯನ್ನು ಸೂಚಿಸಲು ನಾಗತಿಹಳ್ಳಿ ಚಂದ್ರಶೇಖರರನ್ನು ಸಂಪರ್ಕಿಸಿದರು. ಆಗ ‘ಹಂಗಿನರಮನೆಯ ಹೊರಗೆ’ ಒಪ್ಪಿಗೆಯಾಯಿತು. ಅದು ‘ಮೆಹರಬಾನೋಂಕೆ ಘರ್ ಕೆ ಬಾಹರ್’ ಎನ್ನುವ ಹೆಸರಿನಲ್ಲಿ ಪ್ರಸಾರವಾಗಿ ಜನ ಮೆಚ್ಚುಗೆ ಗಳಿಸಿತು.

ನೀರಮಾನ್ವಿಯವರ ಕಥೆಗಳು ಭಾರತೀಯ ಭಾಷೆಗಳಿಗೆ ಅನುವಾದಗೊಂಡು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಚಾರ ಸಂಕಿರಣದಲ್ಲಿ ಚರ್ಚೆಗೆ ಒಳಗಾಗಿವೆ. ಇವುಗಳನ್ನು ಹೊರತುಪಡಿಸಿ ನೋಡಿದರೆ ನಿರೀಕ್ಷಿಸಿದ ಮಟ್ಟದಲ್ಲಿ ಸಂವಾದ, ವಿಮರ್ಶೆಗಳಾಗಿಲ್ಲ. ಅದಕ್ಕೆ ವಿಮರ್ಶಕರ ಉದಾಸೀನತೆ, ಪ್ರಾದೇಶಿಕ ಅಸಮಾನತೆ, ಮಾಧ್ಯಮಗಳ ನಿರ್ಲಕ್ಷ್ಯ ಧೋರಣೆ ಕೂಡ ಕಾರಣವಿರಬಹುದು.

30 ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ನೀರಮಾನ್ವಿಯವರ ತಲೆಗೆ ತೀವ್ರವಾದ ಪೆಟ್ಟಾಗಿತ್ತು. ವರ್ಷವಿಡೀ ನೆನಪಿನಶಕ್ತಿ ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಡಿದರು. ನಿಧಾನಕ್ಕೆ ನೆನಪಿನಶಕ್ತಿ ಮರುಕಳಿಸಿತು. ಇದು ಬರೆವಣಿಗೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಆಗದಿರುವುದಕ್ಕೆ ಬಲವಾದ ಕಾರಣವಿರಬಹುದು. ಗೌಡ ಮನೆತನದಲ್ಲಿ ಜನಿಸಿದ್ದರೂ ಗೌಡಿಕೆಯ ಅಹಮಿಕೆ ಎಳ್ಳಷ್ಟೂ ಇರಲಿಲ್ಲ. ಸರಳ ಮತ್ತು ಸಹಜವಾಗಿ ಬದುಕಿದರು. ಅದಮ್ಯ ಜೀವನ ಪ್ರೀತಿಯ ಅವರಲ್ಲಿ ಸದಾ ಹಾಸ್ಯ ಪ್ರಜ್ಞೆ ಮನೆ ಮಾಡಿತ್ತು. ಅದು ತಂದೆ ವೀರನಗೌಡ ನೀರಮಾನ್ವಿಯಿಂದ ಬಂದ ಬಳುವಳಿ. ಪ್ರಶಸ್ತಿ ಪುರಸ್ಕಾರಗಳಿಂದ ಬಹು ದೂರವಿದ್ದ ಅವರಿಗೆ ಪ್ರಶಸ್ತಿಗಳೇ ಅರಸಿ ಬಂದಿದ್ದವು. ಅವುಗಳಲ್ಲಿ ರಾಜ್ಯೋತ್ಸವ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳು ಪ್ರಮುಖವಾದವು. ಇವರು ಆಗಸ್ಟ್‌ 8ರಂದು ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT