ವೈದ್ಯಕೀಯ, ಸಾಹಿತ್ಯ ಕ್ಷೇತ್ರ ಮತ್ತು ತಾಳಮದ್ದಳೆ ವಲಯದಲ್ಲಿ ಅತ್ಯುನ್ನತ ಸಾಧನೆ ಮಾಡಿ ಜನಮಾನಸದಲ್ಲಿ ಉಳಿದವರು ಡಾ.ರಮಾನಂದ ಬನಾರಿಯವರು.

ಪ್ರಬಂಧ ಸಂಕಲನ, ಚಿಂತನ ಬರಹ, ಕವನ ಸಂಕಲನ, ವೈದ್ಯಕೀಯ ಕವನ ಸಂಕಲನ, ಹನಿಗವನಗಳ ಸಂಕಲನ, ವೈದ್ಯಕೀಯ ಲೇಖನ, ಆತ್ಮವೃತ್ತಾಂತ, ಸಂಪಾದಿತ ಕೃತಿ, ವ್ಯಕ್ತಿಚಿತ್ರ -ಹೀಗೆ ಅವರು ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಆರವೆ’ (ತೋಟ, ಉದ್ಯಾನ) ಅನ್ನುವುದು ಅವರ ಚಿಂತನ ಪ್ರಬಂಧ. ಇಪ್ಪತ್ತು ಲೇಖನಗಳ ಗುಚ್ಛ ಇದು. ಇದರಲ್ಲಿರುವ ಬಹುಪಾಲು ಲೇಖನಗಳು ಯಕ್ಷಗಾನ ಮತ್ತು ತಾಳಮದ್ದಳೆ ವಿಮರ್ಶೆಗೇ ಮೀಸಲಾದರೂ ಐದಾರು ಮಂದಿ ಸಾಹಿತಿಗಳ ಬಗ್ಗೆಯೂ ಇದೆ. ಕವಿ ಗೋವಿಂದ ಪೈ, ಮಹಾಬಲ ಭಂಡಾರಿ, ಅವರ ತಂದೆ ಕಿರೀಕ್ಕಾಡು ವಿಷ್ಣು ಭಟ್, ದೇರಾಜೆ ಸೀತಾರಾಮಯ್ಯ, ಸ್ವಾಮಿ ಕೇಶವಾನಂದ ಭಾರತೀ ಮೊದಲಾದವರ ಬಗ್ಗೆ ವ್ಯಕ್ತಿಚಿತ್ರಗಳಿವೆ.

‘ಜೀವವೃಕ್ಷ’ ಅವರ ಕುರಿತಾದ ಒಂದು ಅಭಿನಂದನಾ ಕೃತಿ. ಅವರ ಅಭಿಮಾನಿಗಳು, ಸಾಹಿತಿಗಳು, ಲೇಖಕರು, ಅವರ ಕುಟುಂಬದವರು, ಸ್ನೇಹಿತರು ಹೀಗೆ-72 ಮಂದಿ ಅದರ ಮೈತುಂಬಿಸಿದ್ದಾರೆ. ಅವರ ಅಭಿನಂದನ ಕೃತಿ ‘ಜೀವವೃಕ್ಷ’ ಒಂದು ‘ಜೀವ’ ಅಥವಾ ಒಬ್ಬ ‘ವ್ಯಕ್ತಿ’ ವೃಕ್ಷವಾಗಿ, ಕೊಂಬೆ-ರೆಂಬೆಗಳಾಗಿ ಟಿಸಿಲೊಡೆದು, ಹೂವಾಗಿ, ಹಣ್ಣಾಗಿ ಜನೋಪಯುಕ್ತವಾದುದನ್ನು ಸಂಕೇತಿಸುತ್ತದೆ. ಬಹೂಪಯೋಗಿ ವೃಕ್ಷದಂತೆ ಬನಾರಿಯವರು ಲೋಕಕ್ಕೆ ಬೇಕಾದವರಾಗಿ ಬಾಳಿದರು ಎಂಬುದನ್ನು ಈ ಶೀರ್ಷಿಕೆ ಅತ್ಯಂತ ಹೃದಯಂಗಮವಾಗಿ ಧ್ವನಿಸುತ್ತದೆ.

ಅವರ ಕವನ ಸಂಕಲನಗಳಲ್ಲಿ ‘ಮುತ್ತು ನೀರಾಗದು’ ಎಂಬುದು ಒಂದು. ಇದರಲ್ಲಿ 44 ಕವನಗಳಿವೆ. ಒಂದೊಂದೂ ಚಿಂತನಪೂರ್ಣ ಕವನವೇ ಆಗಿದೆ. ಅವರ ಚಿಂತನ ಶೈಲಿ ಅದಾವ ಬಗೆಯದು, ಅದು ಹೇಗೆ ನಮ್ಮ ಮನವನ್ನು ಮುಟ್ಟುತ್ತದೆ, ತಟ್ಟುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ: ಭಾಷೆಯ ಬಗ್ಗೆ ಅವರು ಹೇಳುತ್ತಾರೆ- ‘ಮಾತಾಡುವ ಭಾಷೆಗಳು ಕೆಲವಾದರೆ ಮಾತೇ ಇಲ್ಲದ ಭಾಷೆಗಳು ಹಲವು. ಕಣ್ಣಿನ ಭಾಷೆ, ಹುಬ್ಬಿನ ಭಾಷೆ, ಉಗುರಿನ ಭಾಷೆ, ಕೈಸನ್ನೆಯ ಭಾಷೆ. ಇನ್ನು ಎಲ್ಲವನ್ನೂ ಮೀರಿದ ಪ್ರೀತಿಯ ಭಾಷೆ, ಹೃದಯದ ಭಾಷೆ, ವ್ಯಾಕರಣವೇ ಇಲ್ಲದ ಅಂತಃಕರಣದ ಭಾಷೆ. ವೈದ್ಯರ ಭಾಷೆ, ರೋಗಿಗಳ ಭಾಷೆ, ರಾಜಕೀಯದ ಭಾಷೆ, ಕಿವಿಯಲ್ಲಿ ಪಿಸುಗುಟ್ಟುವ ಪ್ರಣಯಿಗಳ ಭಾಷೆ. ಹೊರಗೊಂದು ಭಾಷೆ, ಒಳಗೊಂದು ಭಾಷೆ, ಅರ್ಥವಾಗಿಯೂ ಅರ್ಥವಾಗದ ಭಾಷೆ..ಹೀಗೆ ಬೆಳೆಯುತ್ತಲೇ ಹೋಗುವ ಭಾಷಾವತರಾದಲ್ಲಿ ಕೊನೆಗೂ ಉಳಿಯುವುದು ಒಂದೇ ಒಂದು ಭಾಷೆ ಕಣ್ಣ ಕರುಳಿನ ಭಾಷೆ”.

ಹೀಗೆ ಅತ್ಯಂತ ಕಡಿಮೆ ಅಕ್ಷರಗಳಲ್ಲಿ ಭಾಷೆಯ ವಿವಿಧ ಮಜಲುಗಳ ಬಗ್ಗೆ ಒಂದು ರೋಚಕ ಉಪನ್ಯಾಸವನ್ನೇ ಕೊಟ್ಟುಬಿಡುತ್ತಾರೆ. ಇದರಲ್ಲಿ ಅವರ ಅನುಭವ, ಲೋಕಾನುಭವ, ವೃತ್ತಿ ಅನುಭವ, ಚಿಂತನೆ, ವ್ಯಂಗ್ಯ, ವಿಡಂಬನೆ, ಕೊಂಕು, ಪ್ರೇಮ, ಕಾಮ ಎಲ್ಲವೂ ಒಳಗೊಂಡು ಓದುಗನನ್ನು ಒಂದು ಹೊಸ ಲೋಕಕ್ಕೆ ಒಯ್ಯುತ್ತದೆ. ಇಂಥಹ ಚಿಂತನಪೂರ್ಣ, ಆಹ್ಲಾದಕ ಕವನಗಳು ಇಲ್ಲಿ ನೂರಾರು ಮುತ್ತಾಗಿ ಕಂಗೊಳಿಸಿವೆ.

ಬನಾರಿಯವರ ಇನ್ನೊಂದು ಕೃತಿ ‘ಸವೆಯದ ದಾರಿ’. ಇದು ಅವರ ಆತ್ಮವೃತ್ತಾಂತ. ಮೊದಲ ಪರ್ವ, ಉದ್ಯೋಗ ಪರ್ವ, ಕುಟುಂಬ ಪರ್ವ, ಸಾಹಿತ್ಯ ಪರ್ವ, ಕಲಾ ಪರ್ವ, ಸಂಕೀರ್ಣ ಪರ್ವ -ಹೀಗೆ ಒಟ್ಟು ಆರು ಪರ್ವಗಳುಳ್ಳ, 296 ಪುಟಗಳ ಈ ಕೃತಿ ಅವರ ಸಮಗ್ರ ಜೀವನ ಪರ್ವವನ್ನು ಹೇಳುವ ಒಂದು ಆತ್ಮಕಥನವಾಗಿದೆ. ಅವರೇ ಹೇಳುವಂತೆ “ಇದು ಸಹೃದಯರ ಮುಂದೆ ಒಂದು ನಿವೇದನೆ ಮಾತ್ರ. ಬಗೆದದ್ದು ಮೊಗೆದದ್ದು ಪಡೆದದ್ದು ನಡೆದದ್ದು ಕಂಡದ್ದು ಕೊಂಡದ್ದು ಈ ಎಲ್ಲಾ ಸೇರಿ ನಿರ್ಮಾಣವಾಗಿದೆ” ಎಂದಿದ್ದಾರೆ.

ಬನಾರಿಯವರು ತಮ್ಮ ಬರಹ, ತಾಳಮದ್ದಳೆ ಅರ್ಥಗಾರಿಕೆಗೆ ಎಷ್ಟು ಮಹತ್ವವನ್ನು ನೀಡಿದರೋ ಅಷ್ಟೇ ಮಹತ್ವವನ್ನು ತಮ್ಮ ವೈದ್ಯಕೀಯ ವೃತ್ತಿಗೂ ನೀಡಿದ್ದಾರೆ. ಅದನ್ನು ಅವರು ಎಂದೂ ನಿರ್ಲಕ್ಷಿಸಿದ್ದಿಲ್ಲ. ರೋಗಿಗಳೆಲ್ಲರ ದೃಷ್ಟಿಯಲ್ಲಿ ಅವರು ಗುಣವಂತ ವೈದ್ಯರಾಗಿ ಇಂದಿಗೂ ಸ್ಮರಣೀಯರೇ ಆಗಿದ್ದಾರೆ. ರೋಗಗಳ ಬಗ್ಗೆ ಅರಿವು ಮೂಡಲಿ ಎಂಬ ಕಾರಣಕ್ಕೆ ಅವರು ತಮ್ಮ ಕವಿ ಹೃದಯದ ಸ್ಫೂರ್ತಿಯಿಂದ ನಲವತ್ತು ಕಾಯಿಲೆಗಳ ಬಗ್ಗೆ ಕವನ ರಚಿಸಿ ಸಂಕಲನವನ್ನೇ ಹೊರತಂದಿದ್ದಾರೆ. ಅದಕ್ಕೆ ‘ಆರೋಗ್ಯ ಗೀತೆ’ಯೆಂದು ಹೆಸರಿಸಿದ್ದಾರೆ. ರೋಗಗಳ ಬಗ್ಗೆ ಸಂದೇಹ ಉಂಟಾದರೆ ಅವುಗಳ ನಿವಾರಣೆಗಾಗಿ ‘ಅನುಬಂಧ’ದಲ್ಲಿ ಒಂದಿಷ್ಟು ಟಿಪ್ಪಣಿಯನ್ನೂ ದಾಖಲಿಸಿದ್ದಾರೆ. ಇದು ಅವರಿಗೆ ರೋಗ-ರೋಗಿಗಳ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ.

ಡಾ. ಬನಾರಿಯವರು ತಮ್ಮ ಜೀವನವನ್ನು ತಮ್ಮ ವೃತ್ತಿ-ಪ್ರವೃತ್ತಿಗಳಿಗೇ ಮೀಸಲಾಗಿರಿಸಿಕೊಂಡವರಲ್ಲ. ಸಾರ್ವಜನಿಕ ಜೀವನದಲ್ಲೂ ತೊಡಗಿಸಿಕೊಂಡವರು. ಇಂದು ಕಾಸರಗೋಡು ನಮ್ಮದಾಗಿ ಉಳಿದಿಲ್ಲ, ಕಾಸರಗೋಡು ಕರ್ನಾಟಕದಲ್ಲಿ ವಿಲೀನಗೊಳ್ಳಬೇಕು ಎಂಬ ಚಳವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಬನಾರಿಯವರೂ ಕೂಡಾ ತಮ್ಮ ಆಸ್ಪತ್ರೆ ಕೆಲಸವನ್ನು ಬದಿಗೊತ್ತಿ ಆ ಚಳವಳಿಯಲ್ಲಿ ಭಾಗವಹಿಸಿದ್ದಿದೆ. ಆರ್ಥಿಕ ಬೆಂಬಲ ನೀಡಿದ್ದೂ ಇದೆ. ಕಾಸರಗೋಡಿನ ಬಗ್ಗೆ ಅವರಿಗಿರುವ ಅಭಿಪ್ರಾಯ ಹೀಗಿದೆ-“ಇದು ಭಾಷಾ ಸಮಸ್ಯೆ ಅನ್ನುವುದಕ್ಕಿಂತ ಸಂಸ್ಕೃತಿಯ ಸಮಸ್ಯೆ ಎನ್ನುವುದೇ ಹೆಚ್ಚು ಸಮಂಜಸವಾದದ್ದು. ಈ ಸಂಸ್ಕೃತಿ ಹಲವು ಭಾಷೆಗಳ ಸಂಗಮದಿಂದ ಉಂಟಾದದ್ದು ಮತ್ತು ಕನ್ನಡಕ್ಕೆ ಅತ್ಯಂತ ನಿಕಟವಾದದ್ದು” ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.