ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲೂರಲ್ಲಿ ಹಚ್ಚಹಸುರಿನ ಕಾನನ!

Published 26 ಮೇ 2024, 0:04 IST
Last Updated 26 ಮೇ 2024, 3:42 IST
ಅಕ್ಷರ ಗಾತ್ರ

ಬಿಜಾಪುರದ ರಾಜ ಮೊಹಮ್ಮದ್‌ ಆದಿಲ್‌ ಶಾಹಿಯ ಪುತ್ರಿ ಬೇಸಿಗೆಯಲ್ಲಿ ಮಹಾರಾಷ್ಟ್ರದ ಪ್ರಸಿದ್ಧ ಗಿರಿಧಾಮ ಮಹಾಬಲೇಶ್ವರಕ್ಕೆ ಭೇಟಿ ನೀಡುತ್ತಾಳೆ. ಸಹ್ಯಾದ್ರಿಯ ಮನಮೋಹಕ ಪರಿಸರಕ್ಕೆ ಮಾರುಹೋಗುತ್ತಾಳೆ. ಅಷ್ಟೇ ಅಲ್ಲ, ಆ ಗಿರಿಶೃಂಗದ ಪರಿಸರದಲ್ಲೇ ಹಾಯಾಗಿ ಇರಬೇಕೆಂದು ತೀರ್ಮಾನಿಸುತ್ತಾಳೆ. ‘ನೀರು, ನೆರಳಿಲ್ಲದ ಬಿಜಾಪುರಕ್ಕೆ ಮರಳುವುದಿಲ್ಲ’ ಎಂಬ ಸಂದೇಶವನ್ನು ತಂದೆಗೆ ಕಳುಹಿಸುತ್ತಾಳೆ.

ರಾಜಕುಮಾರಿಯನ್ನು ಮರಳಿ ಬಿಜಾಪುರಕ್ಕೆ ಕರೆತರಲು ರಾಜ ಉಪಾಯ ಹೂಡುತ್ತಾನೆ. ‘ಮಗಳೇ, ಬಿಜಾಪುರದಲ್ಲೇ ನಿನಗಾಗಿ ಮಹಾಬಲೇಶ್ವರಕ್ಕೆ ಸರಿಸಮನಾದ ಪರಿಸರವನ್ನು ಸೃಷ್ಟಿಸುತ್ತೇನೆ, ಮರಳಿ ಬಾ’ ಎಂದು ಆಹ್ವಾನಿಸುತ್ತಾನೆ. ಅಂತೆಯೇ, ರಾಜಕುಮಾರಿಗಾಗಿ 1633ರಲ್ಲಿ ಬಬಲೇಶ್ವರ ಸಮೀಪ ಮಮದಾಪುರ ಎಂಬ ಹಳ್ಳಿಯಲ್ಲಿ ಅತೀ ದೊಡ್ಡದಾದ ಎರಡು ಕೆರೆಗಳನ್ನು ನಿರ್ಮಿಸಿ, ಸುತ್ತಲೂ ಗಿಡಮರಗಳನ್ನು ಬೆಳೆಸಿ, ಮಲೆನಾಡನ್ನು ಹೋಲುವಂತ ಪರಿಸರವನ್ನು ಪುತ್ರಿಗಾಗಿ ಸೃಷ್ಟಿಸುತ್ತಾನೆ.

ಅಷ್ಟೇ ಅಲ್ಲದೇ, ಮಲೆನಾಡಿನಲ್ಲಿ ಬೆಳೆಯುವ ‘ಬಾಸುಮತಿ’ ಅಕ್ಕಿ ಸಹಿತ ಎಲ್ಲ ಬಗೆಯ ಬೆಳೆಯನ್ನು ಬೆಳೆಯಲು ಅನುಕೂಲ ಮಾಡುತ್ತಾನೆ. ಮಮದಾಪುರ ಸಸ್ಯಶ್ಯಾಮಲೆಯಿಂದ ಕಂಗೊಳಿಸುವಂತೆ ಮಾಡುತ್ತಾನೆ ಎನ್ನುವುದು ಇತಿಹಾಸದ ಪುಟಗಳಿಂದ ತಿಳಿಯುತ್ತದೆ.

ಆದಿಲ್‌ಶಾಹಿಗಳ ನಂತರ ನೀರಿಲ್ಲದೇ ಕೆರೆಗಳು ಬರಿದಾದವು, ಜಾಲಿ ಬೆಳೆದು ನಿಂತಿತು. ಗಿಡಮರಗಳು ಇದ್ದವೆಂಬುದಕ್ಕೆ ಯಾವುದೇ ಕುರುಹುಗಳಿಲ್ಲದೇ ಇಡೀ ಪರಿಸರ ನೂರಾರು ವರ್ಷಗಳಿಂದ ಬರದ ಬೆಂಗಾಡಾಗಿ ಉಳಿಯಿತು. ಆದರೆ, ಇದೀಗ ಅದೇ ಕೆರೆ ತುಂಬಿ ತುಳುಕುತ್ತಿದೆ. 1560 ಎಕರೆಯ ಅರ್ಧದಷ್ಟು ಪ್ರದೇಶದಲ್ಲಿ ಗಿಡಗಳು ಬೆಳೆದು ಪ್ರಾಣಿಪಕ್ಷಿಗಳಿಗೆ ಆಸರೆಯಾಗುತ್ತಿವೆ.

ಕಾನನ ಚಿಗುರೊಡೆದ ಕಥೆ

2013–18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ಕೆರೆ ತುಂಬುವ ಯೋಜನೆಯಡಿ ಮಮದಾಪುರ ಕೆರೆಗಳ ಹೂಳು ತೆಗೆಸಿ, ಭರ್ತಿ ಮಾಡಿಸಿದ್ದರು. ಪರಿಣಾಮ ಸುತ್ತಮುತ್ತಲಿನ ಪರಿಸರದಲ್ಲಿ ಅಂತರ್ಜಲ ಹೆಚ್ಚಾಯಿತು. ರೈತರ ಹೊಲಗಳಲ್ಲಿ ಬೆಳೆ ಸಮೃದ್ಧವಾಯಿತು. ಆದರೆ, ಕೆರೆಯ ಸುತ್ತ ಹೆಸರಿಗಷ್ಟೇ ಇದ್ದ ಅರಣ್ಯ ಪ್ರದೇಶದಲ್ಲಿ ಬಳ್ಳಾರಿ ಜಾಲಿ ಆವರಿಸಿತ್ತು. ಜಾಲಿ ಬಿಟ್ಟರೆ ಅಲ್ಲಿ ಮತ್ತೇನೂ ಇರಲಿಲ್ಲ. ಹಗಲಿನಲ್ಲೇ ಜನ ಹೋಗಲು ಭಯಪಡುವಂತಹ ವಾತಾವರಣವಿತ್ತು.

ಪಾಳು ಬಿದ್ದಿರುವ ಪ್ರದೇಶದಲ್ಲಿ ‘ಕಿರು ಅರಣ್ಯ’ ಬೆಳೆಸಬೇಕು ಎಂಬ ಮಹಾದಾಸೆ ಸಚಿವ ಎಂ.ಬಿ.ಪಾಟೀಲ ಅವರದು. ರಾಜ್ಯದಲ್ಲೇ ಅತೀ ಕಡಿಮೆ ಅರಣ್ಯ ಪ್ರದೇಶ (ಶೇ 0.11) ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಅರಣ್ಯೀಕರಣಕ್ಕಾಗಿ ‘ಕೋಟಿ ವೃಕ್ಷ ಅಭಿಯಾನ’ ಆರಂಭಿಸಿದರು. ಈ ಅಭಿಯಾನಕ್ಕೆ ಅರಣ್ಯ ಅಧಿಕಾರಿ ಸಂತೋಷ ಆಜೂರ ಹೆಚ್ಚು ಒತ್ತು ಕೊಟ್ಟು ಅನುಷ್ಠಾನಕ್ಕಾಗಿ ಶ್ರಮಿಸಿದರು.

ಪಾಳುಬಿದ್ದಿದ್ದ 623 ಹೆಕ್ಟೇರ್‌ ಅರಣ್ಯ ಭೂಮಿಯಲ್ಲಿ ಆವರಿಸಿದ್ದ ಬಳ್ಳಾರಿ ಜಾಲಿಯನ್ನು ಜೆಸಿಬಿ ಮೂಲಕ ತಿಂಗಳಾನುಗಟ್ಟಲೇ ಸ್ವಚ್ಛಗೊಳಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯರಿಗೆ ಸುಮಾರು 15 ಸಾವಿರ ಮಾನವ ದಿನ ಉದ್ಯೋಗ ಒದಗಿಸಿ, ಗಿಡಗಳನ್ನು ಹಚ್ಚಲು ಗುಂಡಿಗಳನ್ನು ತೋಡಿಸಿದರು. 2022ರ ಮಳೆಗಾಲದಿಂದ ನೆಡುತೋಪು ಬೆಳೆಸಲು ಆದ್ಯತೆ ನೀಡಲಾಯಿತು. ಕೂಡಗಿ ಎನ್‌ಟಿಪಿಸಿ ಸಹಭಾಗತ್ವದಲ್ಲಿ 53 ಸಾವಿರ ಸಸಿಗಳನ್ನು ನೆಟ್ಟು ಅರಣ್ಯೀಕರಣ ಕಾರ್ಯ ಆರಂಭಿಸಲಾಯಿತು. ಬಳಿಕ 2023ರ ಮಳೆಗಾಲದಲ್ಲಿ 44 ಸಾವಿರ ಗಿಡಗಳನ್ನು ನೆಡಲಾಯಿತು.  

ವಿಜಯಪುರದ ಗಾಢ ಬಿಸಿಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಬೇವು, ಆಲ, ಅರಳಿ, ಅತ್ತಿ, ಬಸರಿ, ಸಿಹಿಹುಣಸೆ, ಹೊಂಗೆ, ತಪಸ್ಸಿ, ಬಿದಿರು, ಸೀತಾಫಲ, ನೆಲ್ಲಿ, ಶ್ರೀಗಂಧ, ರಕ್ತಚಂದನ, ಮಾವು, ನೇರಳೆ ಸೇರಿದಂತೆ ವಿವಿಧ ಹಣ್ಣಿನಗಿಡಗಳನ್ನು ನೆಡಲಾಯಿತು. ಗಿಡ ನೆಡುವುದು ಮಾತ್ರವಲ್ಲ, ಅವುಗಳಿಗೆ ಬೇಸಿಗೆಯಲ್ಲಿ ಹನಿ ನೀರಾವರಿ ವ್ಯವಸ್ಥೆ ಮತ್ತು ಟ್ಯಾಂಕರ್‌ ಮೂಲಕ ನೀರು ಹರಿಸಿ, ಸದಾ ಹಸಿರಾಗಿರುವಂತೆ ನೋಡಿಕೊಳ್ಳಲಾಯಿತು.

ಎರಡೇ ವರ್ಷದಲ್ಲಿ ಗಿಡಗಳು ಹಸಿರುಹೊದ್ದು ತೊನೆಯ ತೊಡಗಿದವು. ಈ ನೆಡುತೋಪು ಸಂರಕ್ಷಣೆಗಾಗಿ ಅರಣ್ಯ ಇಲಾಖೆಯು 22 ಕಿಲೊಮೀಟರ್‌ ಸುತ್ತುವರಿದು ತಂತಿಬೇಲಿಯನ್ನು ನಿರ್ಮಿಸಿ ಯಾರೂ ಈ ಕಿರುಕಾಡೊಳಗೆ ಪ್ರವೇಶಿಸದಂತೆ ಮಾಡಿದೆ.  

ಮಮದಾಪುರದ ಐತಿಹಾಸಿಕ ಎರಡು ಕೆರೆಗಳ ಜೊತೆಗೆ, ಅರಣ್ಯ ಇಲಾಖೆ ತೋಡಿರುವ ನಾಲ್ಕು ಬಾವಿಗಳಲ್ಲಿ ಸಿಗುತ್ತಿರುವ ಹೇರಳ ನೀರು ಬೇಸಿಗೆ, ಬರಗಾಲದಲ್ಲೂ ಆಸರೆಯಾಗಿದೆ. ಆಜೂರ ಅವರ ವಿಶೇಷ ಪ್ರಯತ್ನದಿಂದ ಅರಣ್ಯ ಇಲಾಖೆಯು ಮಮದಾಪುರದ ನೆಡುತೋಪು ಬೆಳೆಸಲು ರಾಜ್ಯದಲ್ಲೇ ಮೊದಲ ಬಾರಿಗೆ ಹನಿ ನೀರಾವರಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿರುವುದು ವಿಶೇಷ. ಈಗ ಸೃಷ್ಟಿಯಾಗಿರುವ ಕಿರುಕಾಡಿಗೆ ಸುತ್ತಮುತ್ತಲಿನಿಂದ ಬಗೆ ಬಗೆ ಪಕ್ಷಿಗಳು, ನವಿಲು, ಮೊಲ, ನರಿಗಳು ಹೆಚ್ಚಿನಸಂಖ್ಯೆಯಲ್ಲಿ ಆವಾಸಸ್ಥಾನವಾಗಿಸಿಕೊಂಡಿವೆ. 

ಮಮದಾಪುರದಲ್ಲಿ ಅರಣ್ಯೀಕರಣಕ್ಕಾಗಿ ಕೂಡಗಿ ಎನ್‌ಟಿಪಿಸಿ ₹ 6 ಕೋಟಿ ಸಿಎಸ್‌ಆರ್‌ ಅನುದಾನವನ್ನು ನೀಡಿದೆ. ಅರಣ್ಯ ಇಲಾಖೆ ₹ 1 ಕೋಟಿ ಅನುದಾನ ನೀಡಿದೆ. ಜೊತೆಗೆ ಸಚಿವ ಎಂ.ಬಿ.ಪಾಟೀಲ ಅವರು ವಿವಿಧ ಕಂಪನಿಗಳಿಂದ ₹ 50 ಲಕ್ಷ ಸಿಎಸ್‌ಆರ್‌ ಅನುದಾನ ಕೊಡಿಸಿದ್ದಾರೆ.  

‘ಮಮದಾಪುರದ 623 ಹೆಕ್ಟೇರ್‌ ಅರಣ್ಯ ‍ಪ್ರದೇಶದಲ್ಲಿ 250 ಹೆಕ್ಟೇರ್‌ ಅನ್ನು ಕಿರುಅರಣ್ಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಇನ್ನುಳಿದ ಪ್ರದೇಶದಲ್ಲೂ ಹಂತ, ಹಂತವಾಗಿ ನೆಡುತೋ‍ಪು ಅಭಿವೃದ್ಧಿಗೆ ಯೋಜನೆ ರೂಪಿಸಿಕೊಳ್ಳಲಾಗಿದೆ' ಎನ್ನುತ್ತಾರೆ ಆಜೂರ.‌

ಸಿದ್ದೇಶ್ವರ ಶ್ರೀ ಮೀಸಲು ಅರಣ್ಯ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ತಮ್ಮ ಕೊನೆಯ ದಿನಗಳಲ್ಲಿ ‘ನಿಸರ್ಗದಲ್ಲಿ ನನ್ನನ್ನು ಕಾಣಿ’ ಎಂಬ ಆಶಯ ವ್ಯಕ್ತಪಡಿಸಿದ್ದರು. ಅವರ ನೆನಪಿನಲ್ಲಿ ಒಂದು ಸಾವಿರ ಎಕರೆ ಅರಣ್ಯ ಬೆಳೆಸಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಮದಾಪುರ ಕಿರು ಅರಣ್ಯವನ್ನು ‘ಸಿದ್ದೇಶ್ವರ ಶ್ರೀಗಳ ಮೀಸಲು ಅರಣ್ಯ’ ಎಂದು ನಾಮಕರಣ ಮಾಡಲು ಯೋಜಿಸಲಾಗಿದೆ’ ಎನ್ನುತ್ತಾರೆ ಸಚಿವ ಎಂ.ಬಿ.ಪಾಟೀಲ.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಸಾಧಿಸುವ ಇಚ್ಛಾಶಕ್ತಿ, ಗ್ರಾಮಸ್ಥರ ಸಹಕಾರ ಇದ್ದರೆ ಬರಡುಭೂಮಿಯಲ್ಲೂ ಹಚ್ಚಹಸಿರು, ನೀರನ್ನು ಕಾಣಬಹುದು ಎನ್ನುವುದಕ್ಕೆ ಮಮದಾಪುರ ಕಿರುಕಾಡು ನಿದರ್ಶನವಾಗಿದೆ.

ಬಿಜಾಪುರದ ಆದಿಲ್‌ ಶಾಹಿಗಳು ನಿರ್ಮಿಸಿರುವ ಮಮದಾಪುರ ಕೆರೆಯ ವಿಹಂಗಮ ನೋಟ–ಪ್ರಜಾವಾಣಿ ಚಿತ್ರ
ಬಿಜಾಪುರದ ಆದಿಲ್‌ ಶಾಹಿಗಳು ನಿರ್ಮಿಸಿರುವ ಮಮದಾಪುರ ಕೆರೆಯ ವಿಹಂಗಮ ನೋಟ–ಪ್ರಜಾವಾಣಿ ಚಿತ್ರ
ಮಮದಾಪುರದಲ್ಲಿ ಅರಣ್ಯ ಇಲಾಖೆ ಬೆಳೆಸಿರುವ ನೆಡುತೋಪಿಗೆ ನೀರುಣಿಸಲು ಅಳವಡಿಸಿರುವ ಹನಿ ನೀರಾವರಿ ವ್ಯವಸ್ಥೆ ಫಿಲ್ಟರ್‌ –ಪ್ರಜಾವಾಣಿ ಚಿತ್ರ
ಮಮದಾಪುರದಲ್ಲಿ ಅರಣ್ಯ ಇಲಾಖೆ ಬೆಳೆಸಿರುವ ನೆಡುತೋಪಿಗೆ ನೀರುಣಿಸಲು ಅಳವಡಿಸಿರುವ ಹನಿ ನೀರಾವರಿ ವ್ಯವಸ್ಥೆ ಫಿಲ್ಟರ್‌ –ಪ್ರಜಾವಾಣಿ ಚಿತ್ರ
ಮಮದಾಪುರದಲ್ಲಿ ನಳನಳಿಸುತ್ತಿರುವ ನೆಡುತೋಪು –ಪ್ರಜಾವಾಣಿ ಚಿತ್ರ
ಮಮದಾಪುರದಲ್ಲಿ ನಳನಳಿಸುತ್ತಿರುವ ನೆಡುತೋಪು –ಪ್ರಜಾವಾಣಿ ಚಿತ್ರ
ಮಮದಾಪುರದಲ್ಲಿ ಅರಣ್ಯ ಇಲಾಖೆ ನೆಡುತೋಪು ಬೆಳೆಸುವ ಮೊದಲು ಕಾಣುತ್ತಿದ್ದ ಬಟಾಬಯಲು 
ಮಮದಾಪುರದಲ್ಲಿ ಅರಣ್ಯ ಇಲಾಖೆ ನೆಡುತೋಪು ಬೆಳೆಸುವ ಮೊದಲು ಕಾಣುತ್ತಿದ್ದ ಬಟಾಬಯಲು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT