ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ: ಕಳೆದ ಕಾಲದ ಸಾಕ್ಷಿ

ಡಾ. ಎಚ್. ಎಸ್. ಅನುಪಮಾ
Published 6 ಜನವರಿ 2024, 23:31 IST
Last Updated 6 ಜನವರಿ 2024, 23:31 IST
ಅಕ್ಷರ ಗಾತ್ರ

ಋತು ಹೊರಳುತ್ತಿದೆ. ಪ್ರತಿ ಬಾರಿ ಒಂದಷ್ಟು ಹೊಸದನ್ನು ಹೊತ್ತು ತರುತ್ತಿದೆ. ಹಳೆಯದರ ಕುರುಹು ಉದುರಿದ ಎಲೆಯ ತೊಟ್ಟು ಅಂಟಿದ ಗುರುತಿನಲ್ಲಿ, ಮರದ ಕಾಂಡದೊಳಗೆ ಸೇರಿಹೋದ ವರ್ತುಲದಲ್ಲಿ ಕಾಣದಂತೆ ಅಡಗಿರುತ್ತವೆ. ಕಾಣದ ಕಾಲ ಸಾಕ್ಷಿಗಳ ಕಾಣುವ ಹಂಬಲದಿಂದ ಚರಿತ್ರೆಯ ಪುಟಗಳಲ್ಲಿ ನಡೆದಾಡಿ ಬಂದೆ. ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಬಳಿಯಿರುವ ‘ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ’ ಅಥವಾ ‘ಛತ್ರಪತಿ ಶಿವಾಜಿ ಮಹಾರಾಜ ವಸ್ತುಸಂಗ್ರಹಾಲಯ’ದ ನೆಲದೈವಗಳ ಭೇಟಿ ಮಾಡಿದೆ. ‘ಹೇಗಿದ್ದ ನಾವು ಹೀಗಾದ’ ಚರಿತ್ರೆಯ ಅರುಹುತ್ತ, ಬಾಳಿಹೋದ ಕಾಲದ ವೈಭವ, ಸವಾಲು, ಅಚ್ಚರಿ, ದುಃಖಕ್ಕೆ ಸಾಕ್ಷಿಯಾದ 70 ಸಾವಿರ ವಸ್ತುಗಳನ್ನು ಒಡಲುಗೊಂಡ ವಸ್ತುಸಂಗ್ರಹಾಲಯವನ್ನು ಒಮ್ಮೆ ಸುತ್ತಿ ಬರಲು ದಿನವಿಡೀ ಬೇಕು. ಬರಿದೆ ನೋಡಲು ವಾರಗಳೇ ಬೇಕಾದಾವು. ಅದು ರೂಪುಗೊಂಡ ಕಥನವು ಇತಿಹಾಸದ ಒಂದು ಅಧ್ಯಾಯಕ್ಕೆ ಸರಿ ಮಿಗಿಲು.

ಕ್ರಿ. ಶ. 1905ರಲ್ಲಿ ವೇಲ್ಸ್ ರಾಜಕುವರ ಮುಂಬೈಗೆ ಬಂದ ನೆನಪಿಗೆ ವಸ್ತುಸಂಗ್ರಹಾಲಯವನ್ನು ತೆರೆಯಬೇಕೆಂದು ನಾಗರಿಕರು ಯೋಚಿಸಿದರು. ಫಿರೋಜ್ ಶಾ ಮೆಹ್ತಾ, ಬದ್ರುದ್ದೀನ್ ತ್ಯಾಬ್ಜಿ, ಜಸ್ಟಿಸ್ ಚಂದಾವರ್ಕರ್, ಸಸೋನ್ ಡೇವಿಡ್, ನರೋತ್ತಮದಾಸ್ ಗೋಕುಲದಾಸ್ ಮುಂತಾದವರು ‘ರಾಯಲ್ ವಿಸಿಟ್ ಮೆಮೊರಿಯಲ್ ಫಂಡ್’ ಸ್ಥಾಪಿಸಿದರು. ಸಾರ್ವಜನಿಕ ದೇಣಿಗೆ ಮತ್ತು ಬಾಂಬೆ ಪ್ರೆಸಿಡೆನ್ಸಿ ಸರ್ಕಾರದ ನೆರವಿನಿಂದ ಯೋಜನೆ ಸಿದ್ಧವಾಯಿತು. ವಿನ್ಯಾಸ ರೂಪಿಸಲು ಮುಕ್ತ ಸ್ಪರ್ಧೆ ನಡೆದು (ಮುಂದೆ ಗೇಟ್ ವೇ ಆಫ್ ಇಂಡಿಯಾ ವಿನ್ಯಾಸಗೊಳಿಸಿದ) ಸ್ಕಾಟಿಶ್ ವಾಸ್ತುಶಿಲ್ಪಿ ಜಾರ್ಜ್ ವಿಟೆಟ್ ಯಶಸ್ವಿಯಾದನು. ದ್ವೀಪನಗರದ ತುತ್ತತುದಿಯಲ್ಲಿ ನಿವೇಶನ ದೊರೆಯಿತು. ವಿಜಯಪುರದ ಗೋಲ್‌ಗುಂಬಜ್, ಗೋಲ್ಕೊಂಡ ಕೋಟೆ, ಮುಘಲ್-ಮರಾಠಾ-ಜೈನ ವಾಸ್ತುಶಿಲ್ಪಗಳ ಮಿಶ್ರಣವಾದ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ಕಟ್ಟಡ ಕಟ್ಟಲಾಯಿತು.

1915ರ ಹೊತ್ತಿಗೆ ಸಿದ್ಧವಾದರೂ ಮೊದಲ ಮಹಾಯುದ್ಧದ ಕಾರಣ ಮಕ್ಕಳ ಕಲ್ಯಾಣ ಕೇಂದ್ರವಾಗಿ, ಮಿಲಿಟರಿ ಆಸ್ಪತ್ರೆಯಾಗಿ ಕಟ್ಟಡ ಬಳಕೆಯಾಯಿತು. 1920ರಲ್ಲಿ ಟ್ರಸ್ಟಿನ ಸುಪರ್ದಿಗೆ ಬಂತು. ಮುಂಬೈನ ಸಿರಿವಂತರು, ಕಲಾಸಕ್ತರು, ಸ್ಥಳೀಯ ನಿವಾಸಿಗಳು, ಪಾರ್ಸಿ ವ್ಯಾಪಾರಸ್ಥರು ದೇಣಿಗೆ, ತಮ್ಮ ಸಂಗ್ರಹದಲ್ಲಿದ್ದ ವಸ್ತುಗಳನ್ನು ಉದಾರವಾಗಿ ನೀಡಿದರು. 1922ರಲ್ಲಿ ವೇಲ್ಸ್‌ನ ರಾಜಕುವರ ವಸ್ತುಸಂಗ್ರಹಾಲಯ ಉದ್ಘಾಟಿಸಿದನು.

ಅಲ್ಲಿ ಕಲೆ, ಪುರಾತತ್ವ, ನ್ಯಾಚುರಲ್ ಹಿಸ್ಟರಿಯ ಮೂರು ವಿಭಾಗಗಳಿವೆ. ಆರು ಭಾಷೆಗಳಲ್ಲಿ ಆಡಿಯೊ ವಿವರಣೆ ವ್ಯವಸ್ಥೆಯಿದೆ. ರಾಜ್ಯ ಸರ್ಕಾರ ಮತ್ತು ಮುಂಬೈ ಮುನಿಸಿಪಲ್ ಕಾರ್ಪೊರೇಶನ್ ಧನಸಹಾಯದೊಂದಿಗೆ ನಡೆಯುತ್ತಿದ್ದು, 1998ರಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯ’ ಎಂದು ಹೆಸರು ಬದಲಾಗಿದೆ.

ಅಲೌಕಿಕ ಆವರಣ

ಒಳಹೊಕ್ಕ ಕೂಡಲೇ 9ನೆಯ ಶತಮಾನದ ಮಧ್ಯಪ್ರದೇಶದ ಬೃಹತ್ ಯಜ್ಞ ವರಾಹ ಎದುರುಗೊಳ್ಳುತ್ತದೆ. ಮುಖ್ಯ ಗುಂಭದ ಕೆಳಗಿನ ವಿಶಾಲ ಆವರಣದ ಮೂರು ಮೂಲೆಗಳಲ್ಲಿ ಬೋಧಿಸತ್ವ ಮೈತ್ರೇಯ ಮತ್ತು ಗ್ರೀಸ್‌ನ ಡಯೋನಿಸಸ್; ಈಜಿಪ್ಟಿನ ನದಿದೇವತೆ ಹಾಪಿ ಮತ್ತು ಭಾರತದ ಗಂಗೆ; ಈಜಿಪ್ಟಿನ ಸಿಂಹಮುಖಿ ದೇವ ಸೆಖ್ಮೆಟ್ ಮತ್ತು ಭಾರತದ ನರಸಿಂಹರು ವಿವರ, ವರ್ಣನೆ, ತುಲನೆಗಳೊಂದಿಗೆ ಜೊತೆಜೊತೆ ಕಾಣಿಸುತ್ತಾರೆ. ನಾಸಿಕ್‌ನ ಬೃಹತ್ ವಾಡೆಯೊಂದರ ಮರದ ಕಟಾಂಜನವನ್ನು ಅದಿರುವ ಹಾಗೆಯೇ ಆಕರ್ಷಕವಾಗಿ ಬಳಸಿ ಹತ್ತಿಹೋಗುವ ವ್ಯವಸ್ಥೆ ಮಾಡಲಾಗಿದೆ. ಮೂರು ಮಹಡಿಗಳಲ್ಲಿ ವಸ್ತುಗಳಿವೆ. ವಸ್ತುಗಳ ಹಿನ್ನೆಲೆ ಬಣ್ಣ, ಸ್ಥಳ, ಮೌನ ಎಲ್ಲವೂ ಅವುಗಳ ಪ್ರಾಚೀನತೆ, ಗಹನತೆ, ಮೌಲ್ಯವನ್ನು ತಿಳಿಸುವಂತಿವೆ. ಪುರಾತನ ಶಿಲ್ಪಗಳಿರುವ ಕಡೆ ಕತ್ತಲನ್ನು ಸೃಷ್ಟಿಸಿ, ಶಿಲ್ಪಗಳ ಮೇಲಷ್ಟೇ ಬೆಳಕು ಬೀಳುವಂತೆ ಮಾಡಿ ದೇಶಕಾಲದಾಚೆಯ ಅಲೌಕಿಕ ಆವರಣದ ಭಾಸವಾಗುತ್ತದೆ.

ಶಿಲಾಯುಗದಿಂದ ಇಂದಿನವರೆಗೆ ಭಾರತ ರೂಪುಗೊಂಡ ಚರಿತ್ರೆಯನ್ನು ಪ್ರಸ್ತುತಪಡಿಸುವ ಶಿಲೆ, ಟೆರ‍್ರಾಕೋಟಾ, ಕಂಚು, ಮರದ ಸಾವಿರಾರು ವಿಗ್ರಹಗಳು; ಜಪಾನ್, ಚೀನಾದ ಆನೆದಂತ ಹಾಗೂ ಪಿಂಗಾಣಿ ವಸ್ತುಗಳು; ಗುಪ್ತ, ಮೌರ್ಯ, ಚಾಲುಕ್ಯ, ರಾಷ್ಟ್ರಕೂಟರ ವಸ್ತುಗಳು; ಕರ್ನಾಟಕದ ದುರ್ಗಾ, ಶೇಷಶಾಯಿ ವಿಷ್ಣು, ಉಮಾಮಹೇಶ್ವರ, ಬ್ರಹ್ಮ, ನಾಗರ, ವರುಣ; ಸ್ಥಳೀಯ ದೈವಗಳು, ವೈದಿಕ-ಬೌದ್ಧ-ಜೈನ-ಆದಿವಾಸಿ ಶಿಲ್ಪಗಳು; ಸಿಂಧೂ ನಾಗರಿಕತೆಯ ಉತ್ಖನನದ ವಸ್ತುಗಳು; ಆಲಂಕಾರಿಕ ಕಲಾಪ್ರಕಾರಗಳು, ಕಿರುವರ್ಣ ಚಿತ್ರಗಳು; ಅಕ್ಬರನ ಶಿರಸ್ತ್ರಾಣ, ಕವಚ; ಹಲವು ರಾಜ್ಯ-ದೇಶ-ಕಾಲಮಾನದ ನಾಣ್ಯಗಳು; ಖ್ಯಾತನಾಮರ ವರ್ಣಚಿತ್ರಗಳು; ಓಲೆಗರಿ, ಶಿಲ್ಪದ ಪ್ರತಿಕೃತಿಗಳು; ನ್ಯಾಚುರಲ್ ಹಿಸ್ಟರಿ ವಿಭಾಗದಲ್ಲಿ ಮೈದುಂಬಿಕೊಂಡ ಜೀವಿಗಳು; ಮುಂಬಾದೇವಿಯ ಮುಂಬಯಿಯು ಬಂಬಯ್ (ಪೋರ್ಚುಗೀಸ್ ಭಾಷೆಯಲ್ಲಿ ಗುಡ್ ಹಾರ್ಬರ್) ಆಗಿ ಮತ್ತೀಗ ಮುಂಬೈ ಮಹಾನಗರವಾಗಿ ಬೆಳೆದ ಪರಿ; ಮನುಷ್ಯ ಸಮಾಜವನ್ನು ಬಾಧಿಸಿದ ರೋಗರುಜಿನ ಯುದ್ಧಗಳ ಚಿತ್ರ – ಓಹ್, ಏನುಂಟು ಏನಿಲ್ಲ!

ಬುದ್ಧ ಸಂಬಂಧಿ ವಸ್ತುವಿಷಯಗಳು

ಸಾವಿರಾರು ವಸ್ತುಗಳಲ್ಲಿ ಬುದ್ಧ ಸಂಬಂಧಿ ವಸ್ತುವಿಷಯಗಳು ಗಮನ ಸೆಳೆಯುತ್ತವೆ. ಪ್ರವೇಶ ದ್ವಾರದಲ್ಲೇ ಹಸಿರು ಹುಲ್ಲುಹಾಸಿನ ಮೇಲೆ ಮಲಗಿರುವ ಬುದ್ಧನ ತಲೆಯ ಬೃಹತ್ ಶಿಲ್ಪ ಕೈಬೀಸಿ ಕರೆಯುತ್ತದೆ. ಕೆಳಮಹಡಿಯಲ್ಲಿ ಪತನಗೊಂಡ/ನಾಶಗೊಳಿಸಲಾದ ಸ್ತೂಪಗಳ ಉತ್ಖನನದಲ್ಲಿ ದೊರೆತ ಪ್ರಾಚೀನ ಬೌದ್ಧ ಶಿಲ್ಪಗಳ ನೆರವಿಯೇ ಇದೆ. ಜಾನ್ ಲಾಕ್‌ವುಡ್ ಕಿಪ್ಲಿಂಗ್ (ರುಡ್ಯಾರ್ಡ್ ಕಿಪ್ಲಿಂಗ್ ತಂದೆ) ರೂಪಿಸಿದ, ಪಾಕಿಸ್ತಾನದ ತಖ್ತ್-ಇ-ಬಹಿಯ ಗಾಂಧಾರ ಶೈಲಿಯ ಮೀಸೆಯಿರುವ ಬುದ್ಧನ (ಕ್ರಿ.ಶ. 1-3ನೆಯ ಶತಮಾನ) ತದ್ರೂಪವಿದೆ. ಆಂಧ್ರದ ಅಮರಾವತಿಯ 2ನೆಯ ಶತಮಾನದ ಸ್ತೂಪವೊಂದರ ಪದ್ಮಪೀಠವಿದೆ. ಕನ್ಹೇರಿ ಗುಹೆಯ ಕ್ರಿ.ಶ. 1ನೆಯ ಶತಮಾನದ ಮಹಾಸುತಸೋಮ ಜಾತಕ ಶಿಲ್ಪವಿದೆ. ಮಹಾರಾಷ್ಟ್ರದ ಭಂಢಾರಾ ಜಿಲ್ಲೆಯ ಪೌನಿಯಲ್ಲಿ ದೊರೆತ ಕ್ರಿ. ಶ. 1ನೆಯ ಶತಮಾನದ ಸ್ತೂಪವೊಂದರ ಸುಂದರ ಶಿಲಾಸ್ತಂಭವು ಬುದ್ಧನನ್ನು ಚಕ್ರ, ಸ್ತೂಪ, ಬೋಧಿವೃಕ್ಷದಿಂದ ಚಿತ್ರಿಸಿ ಹೀನಾಯಾನದ ಪ್ರಭಾವವನ್ನು ತಿಳಿಸುತ್ತದೆ. 3ನೆಯ ಶತಮಾನದ ಗಾಂಧಾರದ ಬೋಧಿಸತ್ವ, 5ನೆಯ ಶತಮಾನದ ಕಿರೀಟವಿರುವ ಚಕ್ರವರ್ತಿ ಬುದ್ಧರಿದ್ದಾರೆ. ಒಡಿಶಾದ 12ನೆಯ ಶತಮಾನದ ‘ಭೂಮಿಸ್ಪರ್ಶ ಮುದ್ರೆ’ಯ ಕರಿಕಲ್ಲ ಬುದ್ಧನಿದ್ದಾನೆ. ಬಲಗೈಯಲ್ಲಿ ಭೂಮಿ ಮುಟ್ಟುವಂತೆ ಪದ್ಮಾಸನದಲ್ಲಿ ಕುಳಿತ ಶಿಲ್ಪವು ಬುದ್ಧ ಸಾಕ್ಷಾತ್ಕಾರ ಪಡೆದ ಕ್ಷಣವನ್ನು ಪ್ರತಿನಿಧಿಸುವ ಭಂಗಿಯಾಗಿದೆ.

ಮಹಾರಾಷ್ಟ್ರದ ನಾಲಾಸೊಪಾರಾದಲ್ಲಿ ದೊರೆತ ಮೌರ್ಯ ಬ್ರಾಹ್ಮಿಲಿಪಿಯಲ್ಲಿ ಕೆತ್ತಲಾಗಿರುವ ಅಶೋಕನ ಒಂಬತ್ತನೆಯ ಶಿಲಾಶಾಸನವಿದೆ. ಎಲ್ಲ ದಮ್ಮಗಳನ್ನೂ ಗೌರವಿಸಿ ಪ್ರೋತ್ಸಾಹಿಸುತ್ತಿದ್ದ ಸಾಮ್ರಾಟ ಅಶೋಕನು ದಮ್ಮ ಮತ್ತು ವಿನಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ 12 ಭಿಕ್ಕುಗಳನ್ನು ಕಾಶ್ಮೀರ-ಗಾಂಧಾರ, ಮಹಿಷ ಮಂಡಲ(ಮೈಸೂರು), ಬನವಾಸಿ, ಅಪರಾಂತಕ(ಪಶ್ಚಿಮ ಭಾರತದ ಗುಜರಾತ್, ಕಛ್, ಸಿಂಧ್), ಮಹಾರಾಷ್ಟ್ರ, ಯವನ(ಗ್ರೀಸ್), ಹಿಮಾಲಯ(ಟಿಬೆಟ್), ಸುವರ್ಣಭೂಮಿ(ಥೈಲ್ಯಾಂಡ್, ಬರ್ಮಾ) ಮತ್ತು ಶ್ರೀಲಂಕಾ ಎಂಬ ಒಂಬತ್ತು ದೇಶಗಳಿಗೆ ಕಳಿಸಿದ. ಕೊಂಕಣ ಪ್ರದೇಶದ ಮುಖ್ಯ ಬಂದರು ಸೊಪಾರಾ (ಶೂರ್ಪರಕ, ಈಗ ನಾಲಾಸೋಪಾರಾ)ಗೆ ದಮ್ಮರಖ್ಖಿತ ಎಂಬ ಭಿಕ್ಕುವನ್ನು ಕಳಿಸಿದ್ದ. ನಾಲಾಸೊಪಾರಾದಲ್ಲಿ ಕುಸಿದ ಬೌದ್ಧ ಸ್ತೂಪದ ಅವಶೇಷಗಳಿವೆ. ಜಗನ್ನಾಥ ಮಂದಿರದ ಅಡಿಪಾಯ, ಸುತ್ತಮುತ್ತೆಲ್ಲ ಬೌದ್ಧ ವಸ್ತುಗಳು ಸಿಕ್ಕಿವೆ. ಸನಿಹದ ಹಳ್ಳಿಯೊಂದರ ಮುಸ್ಲಿಂ ರುದ್ರಭೂಮಿಯಲ್ಲಿ ಅಶೋಕನ 8, 9ನೇ ಶಿಲಾಶಾಸನಗಳು ದೊರೆತಿವೆ.

ಫ್ರಾನ್ಸಿಸ್ ಬೇಕನ್, ‘ಇತಿಹಾಸವೆಂದರೆ ತೇಲುವ ಹಲಗೆಯ ಕಂಡು ಮುಳುಗಿದ ಹಡಗನ್ನು ಕಲ್ಪಿಸುವುದು’ ಎನ್ನುತ್ತಾನೆ. ತೇಲುವ ಹಲಗೆಗಳನ್ನು ಅವಿರುವಂತೆ ನೋಡುವುದು, ಎಲ್ಲಿ ಹೇಗೆ ಯಾವ ಸ್ಥಿತಿಯಲ್ಲಿ ಸಿಕ್ಕಿದವೆಂದು ಅರಿಯುವುದು ಹಡಗನ್ನು ಕಲ್ಪಿಸಲು, ಅದರಲ್ಲಿ ಕಾಲಯಾನ ಕೈಗೊಳ್ಳಲು ತುಂಬ ಮುಖ್ಯ ಅಲ್ಲವೇ? ಎಂದೇ, ಹೊರಡಿ ಮುಂಬೈಗೆ. ವಸ್ತುಸಂಗ್ರಹಾಲಯದ ದಾರಿ ಮರೆಯದಿರಿ ಮತ್ತೆ.

ಯಜ್ಞ ವರಾಹ
ಯಜ್ಞ ವರಾಹ
ಕಿರೀಟವಿರುವ ಗಾಂಧಾರ ಬುದ್ಧ
ಕಿರೀಟವಿರುವ ಗಾಂಧಾರ ಬುದ್ಧ
ಗಾಂಧಾರ ಬುದ್ಧ
ಗಾಂಧಾರ ಬುದ್ಧ

- ಉತ್ಖನದ ವಸ್ತುಗಳ ಹೊಸಲೋಕ

5-6ನೆಯ ಶತಮಾನದ ಸಿಂಧ್ ಪ್ರಾಂತ್ಯದ ‘ಕಹುಜೊದಾರೊ ಸ್ತೂಪ’ (ಇಂದಿನ ಪಾಕಿಸ್ತಾನದ ಮಿರ್‌ಪುರ್‌ಖಾಸ್) ಉತ್ಖನನದ ವಸ್ತುಗಳು ಹೊಸಲೋಕಕ್ಕೆ ಕರೆದೊಯ್ಯುತ್ತವೆ. 30 ಎಕರೆ ಜಾಗದಲ್ಲಿ ಗುಪ್ಪೆಬಿದ್ದ ಇಟ್ಟಿಗೆ ರಾಶಿಯನ್ನು ಸಿಂಧ್‌ನ ರೈಲುರಸ್ತೆ ಕಾಮಗಾರಿ ನಡೆಯುವಾಗ ಗಮನಿಸಲಾಯಿತು. ಬ್ರಿಟಿಷ್ ಕಮಿಷನರ್ ಜಾನ್ ಜೇಕಬ್ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಸೂಪರಿಂಟೆಂಡೆಂಟ್ ಹೆನ್ರಿ ಕಸಿನ್ಸ್‌ಗೆ ವಿಷಯ ತಿಳಿಸಿದ. ಮಿರ್‌ಪುರ್‌ಖಾಸ್‌ಗೆ ಬಂದ ಕಸಿನ್ಸ್ ದಿಬ್ಬದ ಉತ್ಖನನ ವಸ್ತುಗಳ ದಾಖಲೀಕರಣದಲ್ಲಿ ಮುಳುಗಿಯೇಹೋದ. ಸ್ಥಳದ ಚಿತ್ರ ನಕಾಶೆ ಫೋಟೊ ವರದಿಗಳನ್ನು ಪ್ರಕಟಿಸಿ ಸಿಂಧ್ ಪ್ರಾಂತ್ಯದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ. ಅದೇ ಹೆನ್ರಿ ಕಸಿನ್ಸ್ ಮುಂಬೈ ವಸ್ತುಸಂಗ್ರಹಾಲಯದ ಆರಂಭದ ಬುನಾದಿ ರೂಪಿಸಿದವರಲ್ಲಿ ಒಬ್ಬ. ಎಂದೇ ಅಲ್ಲೀಗ ಮಿರ್‌ಪುರ್‌ಖಾಸ್‌ನ ಕುಳಿತ ಭಂಗಿಯ ಐದು ಬುದ್ಧ ಶಿಲ್ಪಗಳು ಅನುಯಾಯಿಯ ಶಿಲ್ಪ ಜಾಂಭುಲ ಕುಬೇರ ಮೊದಲಾಗಿ 297 ಅಚ್ಚಿನ ಚಿತ್ರಗಳ ಹೊಂದಿದ ಟೆರ‍್ರಾಕೋಟ ಇಟ್ಟಿಗೆಗಳು ಜಾತಕ ಕತೆಗಳಿರುವ ಕಲ್ಲಿನ ತುಂಡುಗಳಿವೆ. ಗುಪ್ತ-ಕುಶಾನರ ಕಾಲದ ಭಾರತ ಬೌದ್ಧ ಧರ್ಮ ಅರಬ್-ಗ್ರೀಸ್-ಸಿಂಧೂ ಸಂಸ್ಕೃತಿಗಳ ಕೊಡುಕೊಳ್ಳುವಿಕೆಗಳನ್ನು ಅರ್ಥ ಮಾಡಿಕೊಳ್ಳಲು ಅವು ಸಹಕಾರಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT