ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೆನ್ಯೂ ರಸ್ತೆಯ ಪುಸ್ತಕ ಲೋಕ

Last Updated 22 ಏಪ್ರಿಲ್ 2019, 12:55 IST
ಅಕ್ಷರ ಗಾತ್ರ

ಇದು ಅವೆನ್ಯೂ ರಸ್ತೆ. ಇಲ್ಲಿ ಇಂಥ ವಿಷಯದ ಪುಸ್ತಕ ಸಿಗುವುದಿಲ್ಲ ಎನ್ನುವ ಹಾಗೇ ಇಲ್ಲ. ನರ್ಸರಿ, ಶಾಲಾ ಪಠ್ಯ ಪುಸ್ತಕಗಳಿಂದ ಹಿಡಿದು ಐಎಎಸ್‌, ಕೆಎಎಸ್‌, ಸಿಇಟಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರ ಅಗತ್ಯ ಪುಸ್ತಕಗಳ ಹುಡುಕಾಟ ಕೊನೆಗೊಳ್ಳುವುದು ಇಲ್ಲಿಯೇ. ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ನಿಂತು ಯಾವ ದಿಕ್ಕಿಗೆ ಕಣ್ಣಾಡಿಸಿದರೂ ಪಾದಚಾರಿ ರಸ್ತೆಯುದ್ದಕ್ಕೂ ‘ಕಮ್ಮಿ ಬೆಲೆಗೆ ಸಿಗುವ’ ಪುಸ್ತಕಗಳದ್ದೇ ಲೋಕ.

ಪಾದಚಾರಿ ಮಾರ್ಗದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಪುಸ್ತಕಗಳ ಮಾರಾಟ ಮಾಡಿ ಬದುಕನ್ನು ರೂಪಿಸಿಕೊಂಡವರಿದ್ದಾರೆ. ಒಂದು ಜನರೇಶನ್‌ ಕಂಡ ಈ ವ್ಯಾಪಾರ ವಹಿವಾಟು ಪುಸ್ತಕ ಶೋರೂಂಗಳಿಗೆ ಸವಾಲೊಡ್ಡುವಂತಿವೆ. ಪಠ್ಯಪುಸ್ತಕಗಳ ಜೊತೆಗೆ ತುಂಬ ಅಪರೂಪದ, ಹಳೆಯ ಮತ್ತು ಈಗಷ್ಟೇ ಮಾರುಕಟ್ಟೆಗೆ ಬಿಡುಗಡೆಯಾದ ಇತರ ಪುಸ್ತಕಗಳು ಕೈಗೆಟುಕುವ ಬೆಲೆಗೆ ದಕ್ಕುತ್ತವೆ. ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೊಡ್ಡ ವ್ಯಾಪಾರ ನಡೆಯುವ ತಾಣವೇ ಅವೆನ್ಯೂ ರಸ್ತೆ.

‘ಇಡೀ ಮಲ್ಲೇಶ್ವರಂ ಸುತ್ತಿದರೂ ಪಠ್ಯಪುಸ್ತಕ ಸಿಗಲಿಲ್ಲ. ಕೊನೆಗೆ ಅವೆನ್ಯೂ ರಸ್ತೆಗೆ ಬಂದ್ವಿ. ಇಲ್ಲಿ ಸಿಕ್ತು. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂಥ ಪುಸ್ತಕಗಳೂ ಇಲ್ಲಿ ಸಿಗುತ್ತವೆ. ಇಲ್ಲಿರುವಷ್ಟು ವೈವಿಧ್ಯತೆ ಬೇರೆಲ್ಲೂ ಇಲ್ಲ’ ಎನ್ನುವ ಕುಮಾರಿ ಅವರ ಅನುಭವವೇ ಅವೆನ್ಯೂ ರಸ್ತೆಯ ಮಹತ್ವವನ್ನು ಹೇಳುತ್ತದೆ. ಕುಮಾರಿ ಅವರುಮಲ್ಲೇಶ್ವರಂ ಕೇಂದ್ರಿಯ ವಿದ್ಯಾಲಯದಲ್ಲಿ 9ನೇ ತರಗತಿ ಓದುತ್ತಿರುವ ಮಗಳಿಗೆ ಪಠ್ಯಪುಸ್ತಕ ಖರೀದಿಸಲು ಈ ರಸ್ತೆಗೆ ಬಂದಿದ್ದರು.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಅಂಜೂಟಗಿಯವರಾದ ರಾಜ್‌ಕುಮಾರ್, ನಗರದ ಐಸಿಎಸ್‌ಸಿ ಶಾಲೆಯಲ್ಲಿ ಸಂದರ್ಶನಕ್ಕೆ ಬಂದಿದ್ದರು. ಡೆಮೊ ಮಾಡಲು ಬೇಕಾದ ಅಗತ್ಯ ಪುಸ್ತಕಗಳ ಹುಡುಕಾಟದಲ್ಲಿದ್ದರು. ‘ಅವೆನ್ಯೂ ರಸ್ತೆಯಲ್ಲಿ ವೆರೈಟಿ ಪುಸ್ತಕಗಳು ಇರ್ತವೆ. ಅದಕ್ಕೆ ಇಲ್ಲಿಗೆ ಬಂದೆ. ನನಗೆ ಬೇಕಾದ ಪುಸ್ತಕ ಇಲ್ಲಿ ಸಿಕ್ಕಿತು’ ಎನ್ನುವ ಖುಷಿ ಅವರದು.

ಪ್ರಿನರ್ಸರಿಯಿಂದ ಎಂಜಿನಿಯರಿಂಗ್, ಮೆಡಿಕಲ್, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ದೊರೆಯುವ ಏಕೈಕ ಸ್ಥಳ ಈ ಅವೆನ್ಯೂ ರಸ್ತೆ ಎಂದರೆ ಅತಿಶಯೋಕ್ತಿ ಅಲ್ಲ. ಇದು ವಿದ್ಯಾರ್ಥಿಗಳ, ಸ್ಪರ್ಧಾಕಾಂಕ್ಷಿಗಳ, ಶಿಕ್ಷಕರ, ಗೃಹಿಣಿಯರ ನೆಚ್ಚಿನ ತಾಣ.

ವಿಂಡೋಸ್ ಹೋಯ್ತು ಸಿಇಟಿ ಬಂತು!

‘ಕಂಪ್ಯೂಟರ್ ಬಂದ ಹೊಸತರಲ್ಲಿ ವಿಂಡೋಸ್‌ಗೆ ಸಂಬಂಧಿಸಿದ ಪುಸ್ತಕಗಳಿಗೆ ಭಾರಿ ಬೇಡಿಕೆ ಇತ್ತು. ಆಗ ‘ಸಿ’ ಲಾಂಗ್ವೇಜ್ ಪುಸ್ತಕಗಳೂ ಹೆಚ್ಚು ಮಾರಾಟವಾಗುತ್ತಿದ್ದವು. ಆ ಕಾಲ ಹೋಯ್ತು. ಈಗ ಸಿಇಟಿ, ಎಂಜಿನಿಯರಿಂಗ್, ಮೆಡಿಕಲ್ ಪುಸ್ತಕಗಳಿಗೆ ಹೆಚ್ಚು ಬೇಡಿಕೆ’ ಅನ್ನುತ್ತಾರೆ ಸುಭಾಷ್ ಸ್ಟೋರ್ಸ್ ಎದುರಿನ ಫುಟ್‌ಪಾತ್‌ನಲ್ಲಿ 28 ವರ್ಷಗಳಿಂದ ಪುಸ್ತಕ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿ ಮೋಹನ್.

‘ತುಂಬ ಹಿಂದಿನಿಂದಲೂ ರಸ್ತೆಯ ಎರಡೂ ಬದಿಗಳಲ್ಲಿ ಪುಸ್ತಕ ವ್ಯಾಪಾರಿಗಳಿರುತ್ತಿದ್ದರು. ಈಗ ಮಧ್ಯೆ ಬೇರೆ ಅಂಗಡಿಗಳು ಬಂದಿವೆ. ನಮ್ಮ ವ್ಯಾಪಾರ ಮತ್ತು ಬದುಕು ಎರಡೂ ಫುಟ್‌ಪಾತ್ ಮೇಲೆ ಇವೆ. ಎಂಜಿನಿಯರಿಂಗ್, ಬಿ.ಕಾಂ, ಎಂ.ಕಾಂ, ಎಂಜಿನಿಯರಿಂಗ್, ಮೆಡಿಕಲ್ ಯಾವ ಥರ ಪುಸ್ತಕ ಬೇಕು ಕೇಳಿ.. ಕೊಡ್ತೀನಿ. ಅದೂ ಕಮ್ಮಿ ಬೆಲೆಗೆ. ಭಾನುವಾರ ಜನ ಜಾಸ್ತಿ. ಮೂಲ ಬೆಲೆಗಿಂತ ಕಡಿಮೆ ಬೆಲೆಗೂ ಮಾರಾಟ ಮಾಡ್ತೀನಿ’ ಎನ್ನುತ್ತಾರೆ.

ಶಾಲಾ ಮಾಫಿಯಾ

ಸಿಬಿಎಸ್‌ಸಿ, ಐಸಿಎಸ್‌ಸಿ ಪುಸ್ತಕಗಳನ್ನು ಖರೀದಿಸುವವರು ಅವೆನ್ಯೂ ರಸ್ತೆಯ ಪುಸ್ತಕದ ಮಳಿಗೆಗಳಿಗೆ ದಾಂಗುಡಿ ಇಡುತ್ತಾರೆ. 9, 10ನೇ ತರಗತಿ ಮತ್ತು ಪಿಯುಸಿ ಪುಸ್ತಕಗಳಿಗೂ ಇಲ್ಲೇ ಹುಡುಕಾಟ ನಡೆಸುತ್ತಾರೆ.

ನಗರದ ಕೆಲ ಪ್ರತಿಷ್ಠಿತ ಶಾಲೆಗಳು, ತಮ್ಮಲ್ಲೇ ಪುಸ್ತಕ ಖರೀದಿಸಬೇಕೆನ್ನುವ ನಿಯಮವನ್ನುವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಹೇರಿವೆ. ನಮ್ಮಲ್ಲಿ ಅರ್ಧ ಬೆಲೆಗೆ ಸಿಗುವ ಪುಸ್ತಕಗಳನ್ನು ಪೋಷಕರು ದುಬಾರಿ ಬೆಲೆ ತೆತ್ತುಶಾಲೆಗಳಲ್ಲಿ ಖರೀದಿಸುತ್ತಾರೆ. ಕೆಲವೊಮ್ಮೆ ಸಿಗದೇ ಇರುವ ಪುಸ್ತಕಗಳನ್ನೇ ಪಠ್ಯಕ್ಕೆ ಇಡುವುದುಂಟು ಎನ್ನುತ್ತಾರೆ ಕರ್ನಾಟಕ ಮುದ್ರಕರು ಮತ್ತು ಪುಸ್ತಕ ವ್ಯಾಪಾರಿಗಳ ಅಸೋಸಿಯೇಷನ್ ಅಧ್ಯಕ್ಷ ಎ. ರಮೇಶ್.

ಆನ್‌ಲೈನ್‌ನಿಂದ ವ್ಯಾಪಾರ ಡಲ್‌

ಅಮೆಜಾನ್, ಫ್ಲಿಫ್‌ ಕಾರ್ಟ್‌ ಕಂಪನಿಗಳು ಆನ್‌ಲೈನ್‌ನಲ್ಲಿ ರಿಯಾಯ್ತಿ ದರದಲ್ಲಿ ಪುಸ್ತಕದ ವ್ಯಾಪಾರ ಶುರು ಮಾಡಿರುವುದರಿಂದ ರಿಟೇಲ್ ಪುಸ್ತಕದ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ.

ಓದುಗರು ತಮಗೆ ಬೇಕಾದ ಪುಸ್ತಕವನ್ನು ಮೊಬೈಲ್‌ನಲ್ಲೇ ಆ್ಯಪ್ ಮೂಲಕ ಬುಕ್ ಮಾಡಿ ನೇರವಾಗಿ ಮನೆಬಾಗಿಲಿಗೇ ತರಿಸಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಒಂದು ಏರಿಯಾದಿಂದ ಮತ್ತೊಂದು ಏರಿಯಾಕ್ಕೆ ಪ್ರಯಾಣಿಸಬೇಕೆಂದರೆ ಸಮಯ ಮತ್ತು ಹಣ ಎರಡೂ ವ್ಯರ್ಥ. ಜನರಿಗೂ ಅಷ್ಟು ತಾಳ್ಮೆ ಇಲ್ಲ. ಹಾಗಾಗಿ, ಬಹುತೇಕ ಓದುಗರು ಆನ್‌ಲೈನ್ ಮೊರೆ ಹೋಗುತ್ತಾರೆ ಅನ್ನುವುದು ಅವೆನ್ಯೂ ರಸ್ತೆಯ ಪುಸ್ತಕ ವ್ಯಾಪಾರಿಗಳ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT