ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡು ವನವಾಸಿ ಆದಾಗ...

Last Updated 16 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ಬೆಕ್ಕು, ನಾಯಿ, ದನಕರುಗಳೆಲ್ಲ ನಮ್ಮ ಜೊತೆ ಇದ್ದಾಗ ಅದೊಂದು ತುಂಬಿದ ಮನೆ ಎನ್ನುವ ಭಾವನೆಯ ಬಂಧನದಲ್ಲಿ ಹಳ್ಳಿಯ ಅವಿಭಕ್ತ ಕುಟುಂಬದಲ್ಲಿ ಬೆಳೆದವರು ನಾವು. ಅವುಗಳು ಅಸುನೀಗಿದಾಗಲೂ ಮನೆಯ ಸದಸ್ಯರೇ ಇನ್ನಿಲ್ಲವಾದಾಗಿನ ನೋವುಂಡು ಬೆಳೆದ ಬದುಕು ನಮ್ಮದು. ಈಗಲೂ ಬೆಕ್ಕು, ನಾಯಿ, ದನಕರುಗಳನ್ನು ಸಾಕುವುದೆಂದರೆ ಪಂಚಪ್ರಾಣ.

ನಮ್ಮ ಯಲ್ಲಾಪುರ ನಗರದ ಮನೆಯಲ್ಲಿ ಬೆಕ್ಕೇ ಇಲ್ಲದ ಸಮಯ. ಎಲ್ಲಾದರೂ ಹಳ್ಳಿಗೆ ಹೋಗಿ ಬೆಕ್ಕಿನ ಹೆಣ್ಣು ಮರಿಯೊಂದನ್ನು ತರುವ ಹಂಬಲಕ್ಕೆ ಇಂಬೊಡೆಯುವ ಹೊತ್ತು. ಹೆಣ್ಣು ಬೆಕ್ಕು ಮನೆ ಬಿಟ್ಟು ಹೋಗುವುದಿಲ್ಲ ಎಂಬ ನಂಬಿಕೆ ಇರುವುದರಿಂದ ಹೆಣ್ಣು ಮರಿಗೇ ಹೆಚ್ಚು ಕಾಯೀಸು. ಇಂತಹ ಸಂದರ್ಭದಲ್ಲಿ ಒಂದು ಸಿಹಿ ಘಟನೆ ಸಂಭವಿಸಿತು.

ಅದು ಮಳೆಗಾಲದ ಸಮಯ. ನಮ್ಮ ಮನೆಯ ತೋಟದಲ್ಲಿ ಒಂದು ನರಪೇತಲ ಬೆಕ್ಕಿನ ಮರಿಯೊಂದು ಗೋಚರಿಸಿತು. ಅದು ಹೇಗೆ ನಮ್ಮ ಮನೆಯ ಕಂಪೌಂಡು ಏರಿಳಿಯಿತೆಂಬುದೆ ಪರಮಾಶ್ಚರ್ಯ. ಅಥವಾ ಯಾರಾದರೂ ಎತ್ತಿ ಇಳಿಸಿರಬೇಕು! ಮೈತುಂಬಾ ಕೆಸರಿನ ರಾಡಿ. ಮುಟ್ಟಲು ಅಸಹ್ಯ. ನನ್ನ ಪತ್ನಿ ಅದನ್ನು ಎತ್ತಿಕೊಂಡು ನಾಣಿಗೆಕೊಟ್ಟಿಗೆ (ಬಚ್ಚಲು ಮನೆ) ಹೋಗಿ ಬಿಸಿನೀರಿನ ಸ್ನಾನ ಮಾಡಿಸಿ ಬೆಚ್ಚಗಿನ ಹಾಲು ನೀಡಿದಳು. ಆಗಲೇ ಗೊತ್ತಾದದ್ದು ಅದು ಮಾಸಲು ಬಣ್ಣದ ಹೆಣ್ಣು ಮರಿ ಎಂದು.

ಅದು ಯಾರ ಮನೆಯ ಬೆಕ್ಕಿನ ಮರಿ ಇರಬಹುದೆಂದು, ಸುತ್ತಲಿನ ಎಲ್ಲ ಮನೆಯವರನ್ನು ಕೇಳಿದರೂ ‘ಅದು ನಮ್ಮ ಮನೆಯ ಬೆಕ್ಕಿನ ಮರಿ ಅಲ್ಲ’ ಎಂಬ ಉತ್ತರ ಬಂತು. ಅದೇ ಉತ್ತರ ನಮಗೂ ಬೇಕಾಗಿತ್ತು! ಹಾಲು, ಮೀನು, ಮಾಂಸ, ಮಾಂಸಾಹಾರಿ ಸಾರಿನಲ್ಲಿ ಕಲಿಸಿದ ಕುಚಲಕ್ಕಿ ಅನ್ನ ತಿಂದು ಶುದ್ಧ ಮಾಂಸಾಹಾರಿಯಾಗಿ ಚೆನ್ನಾಗಿ ಮೈ ತುಂಬಿಕೊಂಡಿತು. ಅಂದು ಅಸಹ್ಯವಾಗಿ ಕಂಡ ಬೆಕ್ಕಿನಮರಿ ಮುದ್ದು ಮುದ್ದಾಗಿ ಎಲ್ಲರನ್ನೂ ಆಕರ್ಷಿಸುವ ಮಟ್ಟಿಗೆ ಬೆಳೆಯಿತು. ಒಂದು ಶುಭ ದಿನ ನಾಮಕರಣೋತ್ಸವ ನಡೆದು ಮಂಡು ಎಂದು ಹೆಸರಿಡಲಾಯಿತು.

ಹೋದಲ್ಲಿ ಬಂದಲ್ಲಿ ಬೆನ್ನಿಗೆ ಬರುವ, ಮರ ಏರಿ ಸರ್ಕಸ್ ಮಾಡುವ, ವಿಶ್ರಾಂತಿ ಪಡೆಯುವಾಗ ಪಕ್ಕದಲ್ಲಿಯೆ ಬಂದು ಮಲಗುವ, ಕಾರನ್ನು ಚಾಲು ಮಾಡಿದಾಗ ಮುಂದೆ ಬಂದು ಉರುಳುವ, ಯಾರಾದರೂ ಅಪರಿಚಿತರು ಭಯಗೊಳಿಸಿದಾಗ ಓಡಿ ಬಂದು ನಮ್ಮ ಮಡಿಲೇರುವ, ಹಸಿವೆ ಆದಾಗ ಬಾಲವನ್ನು ಲಂಬಕೋನ ಮಾಡಿ ನಮ್ಮನ್ನು ಸುತ್ತುವ, ಆಗಾಗ ಇಲಿ, ಜಿರಲೆಗಳನ್ನು ಬೇಟೆಯಾಡಿ ಸಂತಸ ಪಡೆವ, ತೋಟದಲ್ಲಿ ಹಾವು ಕಂಡರೆ ತಾನು ಹೆದರುತ್ತಲೆ ಬೆದರಿಸುವ, ಬೇರೆ ಬೆಕ್ಕುಗಳು ನಮ್ಮ ತೋಟಕ್ಕೆ ಬಂದರೆ ಅವುಗಳೊಡನೆ ಕಾದಾಡಿ ಓಡಿಸುವ, ‘ಮಂಡು’ ಎಂದು ಕರೆದರೆ ಓಡೋಡಿ ಬರುವ, ರಾತ್ರಿ ಅದಕ್ಕಾಗಿಯೆ ತಯಾರು ಮಾಡಿದ ಗೋಣಿ ಚೀಲ ಹಾಸಿದ ಬುಟ್ಟಿಯಲ್ಲಿ ಮಲಗುವ ಮಂಡು ಎಲ್ಲರ ಪ್ರೀತಿಯ ಪ್ರಾಣಿ ಆಯಿತು. ಮನೆಯ ಎಲ್ಲಾ ಸದಸ್ಯರು ತಮಗರಿವಿಲ್ಲದಂತೆ ಮಂಡುವಿನ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದರು. ನಾವೆಲ್ಲ ಮನೆಯಲ್ಲಿದ್ದು ಒಂದೆರಡು ತಾಸು ಮಂಡು ಕಾಣಿಸದಿದ್ದಾಗ ಏನೋ ದುಗುಡ. ಅವಳು ಕಾಣುವವರೆಗೂ ಹುಡುಕುವುದೇ ಕೆಲಸ.

ಒಂದು ದಿನ ನಾಲ್ಕು ಗಂಟೆಯ ಸುಮಾರಿಗೆ ಏಳು ಕಿ.ಮೀ ದೂರದ ನಂದೊಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ನನ್ನ ಪತ್ನಿಯನ್ನು ಕರೆತರಲು ಕಾರಿನಲ್ಲಿ ಹೊರಡುತ್ತಿದ್ದಂತೆ ಮಂಡು ಕಾರನ್ನೇರಿ ಕುಳಿತೇಬಿಟ್ಟಳು. ಅವಳನ್ನು ಇಳಿಸುವ ಪ್ರಯತ್ನದಲ್ಲಿ ಸೋತಾಗ ಮಂಡುವನ್ನು ಕರೆದುಕೊಂಡೇ ಹೊರಟೆ. ನಾಲ್ಕು ಕಿ.ಮೀ ಹೋಗಿರಬಹುದು. ಮಂಡು ಕಿರುಚಾಡಲು ಪ್ರಾರಂಭಿಸಿ, ಕಾರಿನ ಎಲ್ಲ ಕಡೆ ಓಡಾಡಲು ಶುರು ಮಾಡಿದಾಗ ಕಾರನ್ನು ನಿಲ್ಲಿಸಿದೆ. ಎಡ ಬಲಗಳಲ್ಲಿ ಮಲೆನಾಡಿನ ದಟ್ಟವಾದ ಅರಣ್ಯ. ಮಂಡುವಿನ ಕೂಗಾಟ ಜೋರಾಗಿಯೆ ಇತ್ತು. ಏನೂ ತೋಚದೇ ಹಿಂಬದಿಯ ಕದ ತೆರೆದೆ. ಮಂಡು ಕ್ಷಣ ಮಾತ್ರದಲ್ಲಿ ಕಾಡಿನಲ್ಲಿ ಮಾಯವಾಯಿತು.

ಮನೆಯವರೆಲ್ಲ ಸೇರಿ ಕಾಡಿನಲ್ಲಿ ಮಂಡುವಿನ ಹುಡುಕಾಟ ನಡೆಸಿದೆವು. ಕತ್ತಲಾಗುತ್ತಿದ್ದಂತೆ ಬರಿಗೈಯಲ್ಲಿ ಮನೆಗೆ ಮರಳಿದೆವು. ರಾತ್ರಿ ಊಟವಿಲ್ಲದೆ ಸೂರ್ಯೋದಯ ಕಂಡೆವು. ಮತ್ತೆ ಕಾಡಿನ ಎಲ್ಲಾ ಮಜಲುಗಳನ್ನು ಬಲ್ಲ ಕೆಲ ಗೆಳೆಯರೊಂದಿಗೆ ಮಂಡುವಿನ ಹುಡುಕಾಟ ನಡೆಸಿ, ಕಾಡಿನಂಚಿನಲ್ಲಿರುವ ಮನೆಗಳಿಗೂ ತೆರಳಿ ಶೋಧ ನಡೆಸಿದೆವು. ಪ್ರಯೋಜನ ಮಾತ್ರ ಸೊನ್ನೆ. ದಿನವೂ ಮನೆಯಲ್ಲಿ ಮಂಡುವಿನ ಬಗ್ಗೆ ಚರ್ಚೆ. ಮಂಡು ಕಾಡು ಸೇರಲು ನಾನೇ ಕಾರಣ ಎಂಬ ಅಪವಾದ ಬೇರೆ. ಮಂಡುವಿನ ಗತಿ ಏನಾಗಿರಬಹುದು ಎಂಬುದನ್ನು ಊಹಿಸಿಯೇ ಮನೆಯಲ್ಲಿ ಎಲ್ಲರೂ ಒಂದೊಂದು ತೆರನಾದ ಕಥೆ ಹೇಳುವುದು ಸಾಮಾನ್ಯವಾಯಿತು. ಹೀಗೆ ಏಳು ದಿನ ಉರುಳಿ ಹೋದವು. ಮಂಡು ಮತ್ತೆ ಸಿಗುವ ಆಸೆ ಎಲ್ಲರಲ್ಲಿಯೂ ಕ್ಷೀಣಿಸಿತು.

ಮಂಡು ವನವಾಸಿಯಾಗಿ ಒಂಬತ್ತನೇ ದಿನ. ಸಂಜೆ ಮನೆಯವರೆಲ್ಲ ಸೇರಿ ಒಣಹಾಕಿದ ಕಾಳುಮೆಣಸನ್ನು ಅಂಗಳದಲ್ಲಿ ಸ್ವಚ್ಛ ಮಾಡುತ್ತಿದ್ದೆವು. ಕಾಂಪೌಂಡ್‌ ಮೇಲಿಂದ ಏನೋ ಕೆಳಗೆ ಬಿದ್ದ ಸದ್ದು. ನೋಡಿದರೆ ನಮ್ಮ ಪ್ರೀತಿಯ ಮಂಡು! ಎಲ್ಲರ ಮುಖದಲ್ಲೂ ಮತ್ತೆ ಚಂದ್ರೋದಯ. ಮಂಡುವಿಗೆ ಮೃಷ್ಟಾನ್ನ ಭೋಜನ. ಅದು ನಮಗೂ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT