ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲು ದಾರಿಯಲ್ಲಿ ಒಕ್ಕೂಟ ಧರ್ಮ

Last Updated 23 ಜನವರಿ 2021, 19:30 IST
ಅಕ್ಷರ ಗಾತ್ರ

ನಮ್ಮ ಗಣತಂತ್ರದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆಂಬ ಎರಡು ಪ್ರಮುಖ ಸಾಧನಗಳಿವೆ. ಒಗ್ಗೂಡಿ ಮುಂದೆ ಸಾಗಬೇಕಾದ ಈ ಎರಡು ವ್ಯವಸ್ಥೆಗಳ ನಡುವೆ ‘ಕಂದಕ’ ನಿರ್ಮಾಣವಾಗಿದೆ ಎನ್ನುತ್ತವೆ ಇತ್ತೀಚಿನ ಬೆಳವಣಿಗೆಗಳು. ಒಕ್ಕೂಟ ವ್ಯವಸ್ಥೆ ಕುರಿತು ಸಂವಿಧಾನ ಹೇಳುವುದೇನು? ಈಗಿನ ವ್ಯವಸ್ಥೆ ಹೊರಟಿದ್ದು ಎಲ್ಲಿಗೆ? ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ನಿಂತು ಹೀಗೊಂದು ಹೊರಳು ನೋಟ...

ಭಾರತ ಸಂವಿಧಾನ ರೂಪುಗೊಂಡ ಬಗೆಯೇ ಒಂದು ಅದ್ಭುತ ಕಥನ. ನಮ್ಮ ಸಂವಿಧಾನ ಈಗಾಗಲೇ 70 ವರ್ಷಗಳನ್ನು (ಈ ಅವಧಿಯಲ್ಲಿ 103 ತಿದ್ದುಪಡಿ ಕಂಡಿದೆ) ಯಶಸ್ವಿಯಾಗಿ ಪೂರೈಸಿದೆ. ಪ್ರಪಂಚದಲ್ಲಿ ಸಂವಿಧಾನಗಳು ಇಷ್ಟು ದೀರ್ಘಕಾಲ ಬಾಳುವುದಿಲ್ಲ. ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದ ಪ್ರಕಾರ, ಸಂವಿಧಾನಗಳ ಸರಾಸರಿ ಆಯುಷ್ಯ 17 ವರ್ಷ. ಆ ಕಾಲದ ಸಂವಿಧಾನತಜ್ಞರಲ್ಲಿ ದೊಡ್ಡ ಹೆಸರಾದ ಸರ್ ಐವರ್ ಜೆನ್ನಿಂಗ್ಸ್ 1952ರಲ್ಲಿ ಭಾರತದ ಸಂವಿಧಾನವನ್ನು ಪರಿಶೀಲಿಸಿ ‘ಇದು ಹೆಚ್ಚು ಕಾಲ ಬಾಳದು’, ಈ ಸಂವಿಧಾನದ ಗಾತ್ರ ಮತ್ತು ಕಾಠಿಣ್ಯಗಳೇ ಅದಕ್ಕೆ ಮುಳುವಾಗಲಿವೆ ಎಂದಿದ್ದರು. ಜೆನ್ನಿಂಗ್ಸ್ ನೇತೃತ್ವದಲ್ಲೇ 1948ರಲ್ಲಿ ತಯಾರಾದ ಶ್ರೀಲಂಕಾದ ಸಂವಿಧಾನವು ಪೂರ್ತಿ 25 ವರ್ಷ ಕೂಡಾ ಬಾಳಲಿಲ್ಲ!

1927ರಲ್ಲಿ ಇಂಗ್ಲೆಂಡಿನ ಸಂಸತ್ತಿನಲ್ಲಿ ಲಾರ್ಡ್ ಬಿರ್ಕಿನ್ ಹೆಡ್ – ‘ಸ್ವರಾಜ್ಯದ ಮಾತು ಹಾಗಿರಲಿ; ನೆಟ್ಟಗೆ ಭಾರತದಲ್ಲೇ ಎಲ್ಲರಿಗೂ ಒಪ್ಪಿಗೆಯಾಗುವಂತೆ ಒಂದು ಸಂವಿಧಾನ ಬರೆಯುವುದಕ್ಕೂ ಸಾಧ್ಯವಿಲ್ಲ’ ಎಂದಿದ್ದ! ಆತ ಹೇಳಿ ಎರಡು ದಶಕಗಳು ಉರುಳುವುದರೊಳಗೆ ಭಾರತದ ಸಂವಿಧಾನ ಸಿದ್ಧವಾಗಿತ್ತು.

ನೆಹರೂರವರು ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಬದ್ಧತೆ ಹೊಂದಿದ್ದರೆ, ಗಾಂಧೀಜಿಗೆ ಗ್ರಾಮಾಧಾರಿತ ವಿಕೇಂದ್ರೀಕೃತ ರಾಜಕೀಯ ವ್ಯವಸ್ಥೆಯ ಬಗ್ಗೆ ಒಲವಿತ್ತು. ಸಮಾಜವಾದಿಗಳು ಭಾಷಾ ವ್ಯೆವಿಧ್ಯ ಹಾಗೂ ಶ್ರಮಿಕರನ್ನು ಆಧರಿಸಿದ ಸಣ್ಣಕೈಗಾರಿಕೆಗಳನ್ನು ಒಳಗೊಂಡ ವಿಶಾಲ ನೆಲೆಯ ರಾಜಕೀಯ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಪ್ರಕಾರ, ‘ಭಾರತಕ್ಕೆ ಸಂಸದೀಯ ವ್ಯವಸ್ಥೆ ಹೆಚ್ಚು ಸೂಕ್ತವಾದುದು. ಏಕೆಂದರೆ, ಭಾರತದ ವ್ಯೆವಿಧ್ಯವನ್ನು ಒಳಗೊಳ್ಳಲು ಅದಕ್ಕೆ ಮಾತ್ರ ಸಾಧ್ಯ. ಅಧ್ಯಕ್ಷೀಯ ಮಾದರಿಯಲ್ಲಿ ವ್ಯೆವಿಧ್ಯಗಳು ಹಾಗೂ ಭಿನ್ನತೆಗಳು ಬದಿಗೊತ್ತಲ್ಪಡುವ ಅಪಾಯವಿದೆ. ಸಂಸದೀಯ ವ್ಯವಸ್ಥೆಯಲ್ಲಿ ಆಳ್ವಿಕೆಗೆ ನಿರಂತರವಾಗಿ ಬೆಂಬಲವನ್ನು ಸೂಚಿಸುವ ಒಂದು ವ್ಯವಸ್ಥೆಯಿದೆ. ಸಾರ್ವಜನಿಕ ಅಭಿಪ್ರಾಯದಲ್ಲಿ ಆಗುವ ಬದಲಾವಣೆಯು ಆಳುವಪಕ್ಷ ಅಥವಾ ಸಮ್ಮಿಶ್ರ ಸರ್ಕಾರಕ್ಕಿರುವ ದಿನನಿತ್ಯದ ಬೆಂಬಲದಲ್ಲಿ ವ್ಯಕ್ತವಾಗುತ್ತದೆ. ಸಾರ್ವಜನಿಕ ನಿಯಂತ್ರಣ ಹಾಗೂ ಉತ್ತರದಾಯಿತ್ವದ ಪ್ರಮಾಣ ಸಂಸದೀಯ ವ್ಯವಸ್ಥೆಯಲ್ಲಿ ಹೆಚ್ಚಾಗಿರುತ್ತದೆ’.

1946ರ ಡಿಸೆಂಬರ್ 9ರಂದು ನಡೆದ ಮೊತ್ತಮೊದಲ ಸಂವಿಧಾನ ರಚನಾಸಭೆ ನಡೆಯಿತು. ಮುಂದಿನ 3 ವರ್ಷಗಳಲ್ಲಿ ರಚನಾಸಭೆಯ 11 ಅಧಿವೇಶನಗಳು, 166 ದಿನಗಳ ಸಮಾವೇಶ (ಕೊನೆಯ ಸಭೆ 1949 ನವೆಂಬರ್ 14-26) ನಡೆದವು. ಜಗತ್ತಿನಲ್ಲೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ರೂಪಿಸಿ (ಒಂದು ಮುನ್ನುಡಿ, 22 ಭಾಗಗಳು, 12 ಪರಿಚ್ಛೇದಗಳು, 448 ವಿಧಿಗಳು, ಐದು ಅನುಬಂಧಗಳು ಹಾಗೂ 113 ತಿದ್ದುಪಡಿಗಳು; ಇಂಗ್ಲಿಷ್ ಸಂವಿಧಾನ ಪ್ರತಿಯಲ್ಲಿ 1,17,369 ಪದಗಳು) ವಿಶ್ವ ಇತಿಹಾಸದಲ್ಲಿ ದಾಖಲಿಸಲಾಯಿತು. ನಮ್ಮ ಸಂವಿಧಾನ ಯಾವುದೇ ಬಾಹ್ಯ (ಅಮೆರಿಕ, ಯುರೋಪ್) ನೆರವಿಲ್ಲದೆ ತಯಾರಾಗಿದ್ದು ವಿಶೇಷ!

ಸಂವಿಧಾನ ರಚನೆಯಲ್ಲಿ ಕರ್ನಾಟಕದ ಪಾತ್ರ ಅತ್ಯಂತ ಮಹತ್ವದ್ದು. ಸಂವಿಧಾನ ಸಭೆಯಲ್ಲಿ 318 ಸದಸ್ಯರು, ಸಂವಿಧಾನ ಕರಡು ಸಮಿತಿಯಲ್ಲಿ ಏಳು ಸದಸ್ಯರಿದ್ದರು. ಬಾಬು ರಾಜೇಂದ್ರ ಪ್ರಸಾದ್, ನೆಹರೂ, ಅಂಬೇಡ್ಕರ್ ಆದಿಯಾಗಿ ಸರ್ವರಿಂದಲೂ ಕೊಂಡಾಡಲ್ಪಟ್ಟ ಸರ್ ಬೆನಗಲ್ ನರಸಿಂಗ ರಾವ್ ಮತ್ತು ಸರ್ ನ್ಯಾಪತಿ ಮಾಧವ ರಾವ್ ಕರ್ನಾಟಕದ ಪುತ್ರ ರತ್ನಗಳು.

ಸರ್ ಬೆನಗಲ್ ನರಸಿಂಗ ರಾವ್ ತಯಾರಿಸಿದ್ದ ಮೂಲ ಕರಡು 243 ವಿಧಿಗಳು, 13 ಪರಿಚ್ಛೇದಗಳನ್ನು ಒಳಗೊಂಡಿತ್ತು. ಅಂತಿಮ ಹಂತದಲ್ಲಿ 395 ವಿಧಿಗಳು ಹಾಗೂ 8 (ಮೂಲ) ಪರಿಚ್ಛೇದಗಳನ್ನು ಒಳಗೊಂಡು ಬೃಹತ್ ಗಾತ್ರಕ್ಕೆ ಹಿಗ್ಗಿತ್ತು! 7635 ತಿದ್ದುಪಡಿ ಸೂಚನೆಗಳು ಮಂಡಿಸಲ್ಪಟ್ಟು, ಈ ಪೈಕಿ 2473 ತಿದ್ದುಪಡಿಗಳನ್ನು ಅಂಗೀಕರಿಸಲಾಗಿತ್ತು.

ಭಾರತದ ಸಂಸತ್ತು ಹಾಗೂ ಪ್ರಜಾಪ್ರಭುತ್ವ
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಭಿವೃದ್ಧಿಶೀಲ ಪ್ರಭುತ್ವವು ಸಾರ್ವಜನಿಕ ಕ್ಷೇತ್ರದ ಮೂಲೆಮೂಲೆಗೂ ವಿಸ್ತರಿಸುತ್ತಾ ಹೋದಂತೆ ಸಂಸತ್ತಿಗಿಂತ ಕಾರ್ಯಾಂಗವು ಹೆಚ್ಚು ಪ್ರಬಲವಾಗುತ್ತಾ ಬಂದಿರುವುದನ್ನು ಕಾಣಬಹುದು. 70 ವರ್ಷಗಳ ಸಂವಿಧಾನದ ಚರಿತ್ರೆಯಲ್ಲಿ ಎದ್ದುಕಾಣುವುದು ಜನಸಾಮಾನ್ಯರಿಗೆ ಸಂವಿಧಾನ ನೀಡಿದ ಹಕ್ಕುಗಳನ್ನು ಅರಗಿಸಿಕೊಳ್ಳಲಾಗದ ಅಧಿಕಾರಸ್ಥರ ಮನೋಭಾವ. ಜಾರಿಗೆ ಬಂದು ಇನ್ನೂ ವರ್ಷ ಪೂರೈಸುವುದರೊಳಗೇ ಸಂವಿಧಾನಕ್ಕೆ ಮೊದಲ ತಿದ್ದುಪಡಿಯಿಂದ ಆರಂಭವಾದುದು ಹಾಗೇ ಮುಂದುವರಿದಿದೆ!

ಸಂಕೀರ್ಣ ಸಾರ್ವಜನಿಕ ಸಂಸ್ಥೆಗಳ ಸಮೂಹಗಳ ನಡುವೆ ಉದ್ಭವಿಸುವ ಸಂಘರ್ಷಗಳ ಸಮತೋಲನವನ್ನು ಕಾಪಾಡುವ ಮೂಲಕ ಭಾರತದ ಸಂಸದೀಯ ಪ್ರಜಾಪ್ರಭುತ್ವವನ್ನು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನಾಗಿ ಪರಿವರ್ತಿಸುವಲ್ಲಿ ನ್ಯಾಯಾಂಗ ಪ್ರಮುಖ ಪಾತ್ರ ವಹಿಸಿದೆ. 1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ತೀರ್ಪು ನೀಡಿದ್ದಂಥದೇ ಪರಿಸ್ಥಿತಿ ಇಂದು ಉದ್ಭವಿಸಿದೆ. ಈಗಿನ ಕೃಷಿಕಾಯ್ದೆಗಳನ್ನು ಹೊಸದಾಗಿ ಜಾರಿಮಾಡಲು ಹೊರಟಿರುವ ಸಮಯ, ಸಂದರ್ಭವೂ ಸುಪ್ರೀಂ ಕೋರ್ಟಿನ ಸಮಯೋಚಿತ ಮಧ್ಯಪ್ರವೇಶವನ್ನು ಅಪೇಕ್ಷಿಸಿದ್ದವು. ಅಂತೆಯೇ ಮಧ್ಯಪ್ರವೇಶ ಆಗಿರುವುದು ನೆಮ್ಮದಿಯ ಬೆಳವಣಿಗೆ!

ಯಾವುದೇ ರಾಜ್ಯದ ಸಂವಿಧಾನಬದ್ಧ ಹಕ್ಕುಗಳಿಗೆ ಧಕ್ಕೆ ಬಂದಾಗ ಅದರ ಹಕ್ಕುಗಳಿಗಾಗಿ ಧ್ವನಿಯನ್ನು ಎತ್ತಬಹುದಾಗಿದೆ. ಈಗ ಆಗಿರುವುದು ಇದೇ. ರಾಜ್ಯ ಪಟ್ಟಿಯಲ್ಲಿರುವ ಕೃಷಿ, ಭೂಸುಧಾರಣೆ, ಬೆಲೆ ನಿಯಂತ್ರಣದಂಥ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಕೇಂದ್ರದ ನೀತಿಗನುಗುಣವಾಗಿ ರಾಜ್ಯ ಸರ್ಕಾರ ತೆಗೆದುಕೊಂಡ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಇಂದಿನ ಈ ವಿಮರ್ಶೆಯ ಹೂರಣ. ಅಧಿಕೃತ ರಾಷ್ಟ್ರಭಾಷೆಯಾಗಿ ಹಿಂದಿ ಹೇರಿಕೆಯ ಹಿನ್ನೆಲೆಯಲ್ಲಿ ಟಿಸಿಲೊಡೆದ ರಾಜ್ಯಗಳ ಭಾಷಾವಾರು ಚಳವಳಿಗಳ ಪರಿಣಾಮ ಇನ್ನೂ ಜೀವಂತವಿರುವಾಗಲೇ ಇದೀಗ ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿನ ಕೃಷಿ ಹಾಗೂ ಭೂಸುಧಾರಣೆ ಕ್ಷೇತ್ರಗಳಲ್ಲಿ ಕೇಂದ್ರ ಅತಿಕ್ರಮಿಸಿರುವುದು ಒಕ್ಕೂಟ ವ್ಯವಸ್ಥೆಯ ಹಿತದೃಷ್ಟಿಯಲ್ಲಿ ಉತ್ತಮ ಬೆಳವಣಿಗೆಯಲ್ಲ.

ಸಂವಿಧಾನವು ಒಕ್ಕೂಟ ವ್ಯವಸ್ಥೆಯಡಿಯಲ್ಲಿ ಕೇಂದ್ರ-ರಾಜ್ಯಗಳ ಸಂಯುಕ್ತ ಸರ್ಕಾರ ವ್ಯವಸ್ಥೆಯನ್ನು ಸ್ಥಾಪಿಸಿ ಅವಕ್ಕೆ ಕ್ರಮವಾಗಿ ವಹಿಸಿಕೊಡಲಾದ ಕ್ಷೇತ್ರಗಳಲ್ಲಿ ಪ್ರತಿಯೊಂದು ವಿಶೇಷ ಹಕ್ಕಿನೊಂದಿಗೆ ಸಾರ್ವಭೌಮ ಅಧಿಕಾರವನ್ನು ಚಲಾಯಿಸಬಹುದಾಗಿದೆ. ಸಂವಿಧಾನದ 7ನೇ ಅನುಸೂಚಿಯ 246ನೇ ಅನುಚ್ಛೇದದಡಿಯಲ್ಲಿ ಸಂಬಂಧಿಸಿದ ಅಧಿಕಾರಗಳ ಹಂಚಿಕೆಯನ್ವಯ ರಾಜ್ಯ ಪಟ್ಟಿಯಲ್ಲಿ 66 ವಿಷಯಗಳಿದ್ದು, ಆ ಪೈಕಿ ಪ್ರಮುಖವಾದವು: ಪೊಲೀಸು, ಕಂದಾಯ, ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸ್ಥಳೀಯ ಸರ್ಕಾರ, ಕೃಷಿ, ಪಶುಸಂಗೋಪನೆ, ಅರಣ್ಯ ಇತ್ಯಾದಿ.

ಕೇಂದ್ರ-ರಾಜ್ಯ ಸಂಬಂಧಗಳ ಸುಧಾರಣೆಗಾಗಿಯೇ ವಿವಿಧ ಆಯೋಗಗಳು ರಚಿಸಲ್ಪಟ್ಟಿದ್ದು, ಆಡಳಿತಾತ್ಮಕ ಸುಧಾರಣಾ ಆಯೋಗ; ಸರ್ಕಾರಿಯಾ ಆಯೋಗ, ಸಂವಿಧಾನ ನಿರ್ವಹಣಾ ಪರಿಶೀಲನಾ ರಾಷ್ಟ್ರೀಯ ಆಯೋಗ ಹಾಗೂ ಕೇಂದ್ರ-ರಾಜ್ಯ ಸಂಬಂಧಗಳ ಪರಿಶೀಲನೆಗೆ ರಚಿಸಿದ ಹೊಸ ಆಯೋಗ ಪ್ರಮುಖವಾದವು. ಈ ಆಯೋಗಗಳ ರಚನೆಯ ಹಿಂದಿನ ಉದ್ದೇಶ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರ, ಸಹಮತ ಮತ್ತು ಸದುದ್ದೇಶದ ಸಂಬಂಧ ಸ್ಥಾಪನೆ.

ಈಗಿನ ಕೃಷಿಕಾಯ್ದೆಗಳ ವಿಚಾರದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರದ ಧೋರಣೆ ಬಗ್ಗೆ ಸುಪ್ರೀಂ ಕೋರ್ಟ್‌ ಕಟುವಾದ ಛೀಮಾರಿ ಹಾಕಿದ್ದಲ್ಲದೆ, ಸಮಿತಿಯೊಂದನ್ನು ರಚಿಸಿ ವರದಿ ನೀಡಲು ಆದೇಶಿಸಿದೆ. ಕೇಂದ್ರ ಸರ್ಕಾರ ಕಾಯ್ದೆಗಳನ್ನು ಪ್ರತಿಷ್ಠೆಯಾಗಿ ಪರಿಗಣಿಸಿದೆ. ಕಾನೂನು ರೂಪಿಸಿದ ಸಂದರ್ಭದಲ್ಲಿ ಅದರ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸುವ ಅಧಿಕಾರ ಜನತೆಗೆ ಇದೆಯಲ್ಲವೇ? ವಿರೋಧಪಕ್ಷವು ಸಂಸದೀಯ ಪ್ರಜಾಪ್ರಭುತ್ವದ ಬೆನ್ನೆಲುಬು. ಸಾಮಾನ್ಯವಾಗಿ ಆಳುವ ಪಕ್ಷದ ಸದಸ್ಯರು ಸರ್ಕಾರದ ಪರವಾಗಿಯೇ ಇರುವುದರಿಂದ ಕಾರ್ಯಾಂಗದ ಉತ್ತರದಾಯಿತ್ವವನ್ನು ಖಾತ್ರಿಗೊಳಿಸಬೇಕಾದ ಹೊಣೆಗಾರಿಕೆಯನ್ನೇ ಈಗ ವಿರೋಧ ಪಕ್ಷಗಳು ಮಾಡುತ್ತಿರುವುದು.

ಕೃಷಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಪ್ರವೇಶವಾದಲ್ಲಿ ಈ ಕ್ಷೇತ್ರ ಸರ್ಕಾರದ ಹಿಡಿತದಿಂದ ದೂರವಾಗುವುದು ಖಚಿತ. ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳ ವಾದ ಅದೇ ಆಗಿದೆ. ಖಾಸಗಿ ಪ್ರಾಬಲ್ಯದಿಂದ ಎಪಿಎಂಸಿ ವ್ಯವಸ್ಥೆ ಅನಿಯಂತ್ರಿತವಾಗಲಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಖಾಸಗಿಯವರು ಉತ್ಪನ್ನಗಳನ್ನು ಖರೀದಿಸದಿದ್ದರೆ ಸರ್ಕಾರಕ್ಕೇನು ಹಿಡಿತವಿರುತ್ತದೆ?

ಬಿಎಸ್‍ಎನ್‍ಎಲ್ ಇದಕ್ಕೊಂದು ಸ್ಪಷ್ಟ ಉದಾಹರಣೆ. ಜಿಯೋ ಸಂಸ್ಥೆ ಆರಂಭದಲ್ಲಿ ಉಚಿತ ಸೇವೆ ನೀಡಿ, ನಂತರ ಮಾರುಕಟ್ಟೆ ಪ್ರವೇಶಿಸಿ, ಪೈಪೋಟಿಯಿಂದ ಬಿಎಸ್‍ಎನ್‍ಎಲ್ ಸಂಸ್ಥೆ ಮುಚ್ಚುವ ಹಂತಕ್ಕೆ ಬಂದಿರುವುದೇ ತಾಜಾ ಉದಾಹರಣೆ.

ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿಯಿಂದ ರಾಜ್ಯದಲ್ಲೂ ಭೂಮಿ ಕಳೆದುಕೊಳ್ಳುವ ರೈತರ ಮಕ್ಕಳು ನಗರಕ್ಕೆ ವಲಸೆ ಬಂದು ಕೂಲಿಕೆಲಸ ಮಾಡಬೇಕಾಗುತ್ತದೆ. ರಾಜ್ಯದಲ್ಲಿ 86.81 ಲಕ್ಷ ರೈತಕುಟುಂಬಗಳಿದ್ದು, 47.67 ಲಕ್ಷ ರೈತಕುಟುಂಬಗಳು ಒಂದು ಎಕರೆ ಮತ್ತು ಅದಕ್ಕಿಂತ ಕಡಿಮೆ ಜಮೀನು ಹೊಂದಿವೆ. ಕೃಷಿ ಆಯೋಗದ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ ಭೂಮಿ ಪಾಳುಬಿದ್ದಿದೆ. ಸರ್ಕಾರಕ್ಕೆ ನಿಜವಾದ ಕಾಳಜಿಯಿದ್ದರೆ ಆರ್ಥಿಕ ನೆರವು ನೀಡಿ, ಸಹಕಾರಿ ಕೃಷಿಗೆ ಪ್ರೋತ್ಸಾಹಿಸಿ ಈ ಬಡರೈತರಿಗೆ ನೆರವಾಗಬೇಕಿತ್ತು.

ಸಂವಿಧಾನಕ್ಕೆ ಸಂಬಂಧಿಸಿದ ಸಂವಾದಗಳಲ್ಲಿ ‘ವ್ಯಕ್ತಿಯನ್ನು’ ಕೇಂದ್ರವಾಗಿರಿಸಿ, ಸಾಂವಿಧಾನಿಕ ನಿಯಮಗಳ ಮೂಲಕ ಆ ಪುಟ್ಟ ಮಾನವನಿಗೆ ರಕ್ಷಣೆಯೊದಗಿಸುವ ಭಾರತದ ಸಂವಿಧಾನ ಆಧುನಿಕ ಪ್ರಜಾತಂತ್ರ ವ್ಯವಸ್ಥೆಯ ಹೆಗ್ಗುರುತು. 1949 ನವೆಂಬರ್ 26ರಂದು ಅಂಗೀಕೃತಕೊಂಡು, 1950ರ ಜನವರಿ 26ರಂದು ಜಾರಿಯಾದ ಭಾರತೀಯ ಸಂವಿಧಾನ, ಇದು ‘ನಮಗೆ ನಾವೇ ನೀಡಿಕೊಂಡ’ ಸಂವಿಧಾನ. ಸಂವಿಧಾನದ ಮೂಲ ಆಶಯಗಳು, ಬಹುತ್ವ, ಬಹುಸಂಸೃತಿ, ಒಕ್ಕೂಟ ವ್ಯವಸ್ಥೆಯ, ಪ್ರಜೆಗಳ ಹಿತರಕ್ಷಣೆಯ ಸಂವಿಧಾನದ ಹೊಣೆಗಾರಿಕೆಯನ್ನು ವಿಚಲಿತಗೊಳಿಸುವಂಥ (ಪ್ರಸ್ತುತ ದಿನಮಾನದ ಕಾಯ್ದೆಗಳೂ ಸೇರಿದಂತೆ) ಹಲವಾರು ವಿದ್ಯಮಾನಗಳು ಘಟಿಸುತ್ತಿದ್ದು, ಸಂವಿಧಾನ ರಕ್ಷಣೆಯ ಅಂತಿಮ ಹಕ್ಕು ಪ್ರಜೆಗಳ ಕೈಯಲ್ಲೇ ಇದೆ ಎಂಬುದನ್ನು ಮರೆಯಬಾರದು.

(ಲೇಖಕ: ರಾಜ್ಯ ವಿಧಾನ ಪರಿಷತ್‌ನ ಮಾಜಿ ಸಭಾಪತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT