ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ವಿಶೇಷಾಂಕ 2023: ವೈವಿಧ್ಯ, ಹೊಸತನದ ದರ್ಶನ

Published 25 ನವೆಂಬರ್ 2023, 20:51 IST
Last Updated 25 ನವೆಂಬರ್ 2023, 20:51 IST
ಅಕ್ಷರ ಗಾತ್ರ

ಈ ಹಿಂದೆ ಕತೆ, ಕವನ, ಚುಟುಕುಗಳಿಂದ ಇಡುಕಿರಿದಿರುತ್ತಿದ್ದ ಪ್ರಜಾವಾಣಿ ದೀಪಾವಳಿ ವಿಶೇಷಾಂಕ, ಇತ್ತೀಚೆಗೆ ಕಥನೇತರ ಪ್ರಕಾರಕ್ಕೆ ಹೆಚ್ಚು ತೆರೆದುಕೊಂಡಿರುವುದು ಕಾಣುತ್ತದೆ. ಹೊಸ ಹುಡುಗರ ಕತೆ-ಕವನಗಳ ಜೊತೆಗೆ, ಹಿರಿಯರ ಮುಖ್ಯ ಲೇಖನಗಳನ್ನು ಓದುವುದು ಹೊಸ‌ ಅನುಭವವನ್ನು ಕೊಡುತ್ತಿದೆ. ‘ನುಡಿಕಂದೀಲು’ ಲೇಖನಗಳು ಮಹತ್ವದ್ದಾಗಿವೆ. ಕೆ.ವಿ. ನಾರಾಯಣ ಅವರ ‘ಕನ್ನಡದ ಹೊರಚಾಚುಗಳು’ ತನ್ನ ಸಮಗ್ರ ದೃಷ್ಟಿಕೋನದಿಂದಾಗಿ, ಸೂಕ್ಷ್ಮ ಒಳನೋಟಗಳಿಂದಾಗಿ, ತೆರೆದ ಮನಸ್ಸಿನಿಂದ ಭಾಷೆಯ ಬದಲಾವಣೆಗಳನ್ನು ಗಮನಿಸುವ ಕ್ರಮದಿಂದಾಗಿ ಕನ್ನಡದ ಸದ್ಯದ ಬಹುಮುಖ್ಯ ಲೇಖನವೆನ್ನಿಸಿತು. ಭಾಷೆಯ ಬದಲಾವಣೆಯ ಕುರಿತ ಸಿಂಹಾವಲೋಕನ ಇದ್ದರೂ, ಈ ಲೇಖನದಲ್ಲಿ ಅಂಕಿ-ಸಂಖ್ಯೆ ಕಡಿಮೆ ಇದ್ದವು‌. ಯಾವುದೇ ವಾದವನ್ನು ಮಂಡಿಸುವಾಗಲೂ, ಅದೂ ಭಾಷೆಯ ಕುರಿತು, ಸಮೀಕ್ಷೆ ನಡೆಸಿ ಖಚಿತ ಪ್ರಮಾಣಗಳನ್ನು ಬಳಸುವುದು ಉಚಿತ.

ವಿಕ್ರಮ ವಿಸಾಜಿ ಅವರ ವಾರಾಣಸಿ ಕುರಿತ ಲೇಖನ ತನ್ನ ಮಾಹಿತಿಬಾಹುಳ್ಯದಿಂದಾಗಿ ಇಷ್ಟವಾಯ್ತು. ಲೇಖನದ ಆರಂಭದ ಒಂದೆರಡು ಪ್ಯಾರಾಗಳಲ್ಲಿ ಇಡೀ ವಾರಾಣಸಿಯ ರೂಪುರೇಷೆಯನ್ನು ಲೇಖಕರು ರೂಪಕಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ವಾರಾಣಸಿ ಹಿನ್ನೆಲೆಯಲ್ಲಿ ಅದೆಷ್ಟು ಮಹತ್ವದ ವ್ಯಕ್ತಿಗಳು ಒಡಮೂಡಿದ್ದಾರೆ!

ಈ ಸಲದ ಪ್ರಥಮ‌ ಬಹುಮಾನಿತ ಕತೆ ಹಲವು ಕಾರಣಕ್ಕೆ ರೂಢಿ ಮುರಿದ ಆಯ್ಕೆ‌. ‘ಸಾಮಾಜಿಕ ಕಾಳಜಿ’ಯನ್ನು ಸೀಮಿತ ದೃಷ್ಟಿಕೋನದಿಂದ ನೋಡಿ, ಕಥಾವಸ್ತುವಿಗೆ ಪ್ರಾಮುಖ್ಯ ಕೊಟ್ಟು, ಕಥಾಕೌಶಲ ಗೌಣವಾದ ಕತೆಗಳೇ ಹೆಚ್ಚಾಗಿ ಆಯ್ಕೆಯಾಗುತ್ತಿದ್ದವು. ಈ ಸಲದ‌ ಆಯ್ಕೆಯಲ್ಲಿ ವಸ್ತುವಿನ ಹೊಸತನ,
ಸೂಕ್ಷ್ಮಭಾಷೆ, ನೋಟಗಳಿಗೆ ಪ್ರಾಮುಖ್ಯ ದೊರಕಿದೆ. ಅದಕ್ಕಾಗಿ‌ ನಿರ್ಣಾಯಕರಿಬ್ಬರನ್ನೂ ಅಭಿನಂದಿಸುತ್ತೇನೆ. ಎರಡನೆಯ‌ ಬಹುಮಾನವೂ ಕ್ಲೀಷೆಮುಕ್ತವಾಗಿ, ಹೊಸ ಆಯಾಮವೊಂದನ್ನು ನಮಗೆ‌ ಪರಿಚಯಿಸಿತು.

ಧನಾತ್ಮಕ ಬದಲಾವಣೆ ‘ಪ್ರಜಾವಾಣಿ’ಯ ಯಾವತ್ತಿನ ನಿಲುವು. ಅದಕ್ಕೆ ಪುರಾವೆಯಂತೆ ಈ ವಿಶೇಷಾಂಕ ವೈವಿಧ್ಯ, ಹೊಸತನದಿಂದ ತುಂಬಿತ್ತು.

–ವಸುಧೇಂದ್ರ

ಸಾಂಸ್ಕೃತಿಕ ಸದಭಿರುಚಿ ಪೊರೆಯುವ ಬರಹಗಳು

ಕರ್ನಾಟಕ ಕನ್ನಡದ ಹಾದಿಯಲ್ಲಿ ಐವತ್ತು ವರ್ಷಗಳ ಹೆಜ್ಜೆಗಳನಿಡುತ್ತ ತಲುಪಿದ ಐತಿಹಾಸಿಕ ಘಟ್ಟದಲ್ಲಿ ನಿಂತು, ಹಿಂದೆ ನೋಡಿ ಮುಂದೆ ಸಾಗುವ ವಿವೇಕವನ್ನು ಜಾಗ್ರತಗೊಳಿಸುವ ಆಶಯವೇ ಈ ಸಲದ ‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ’ದ ಥೀಮ್. ರಾಜಕಾರಣ, ಸುದ್ದಿವಾಹಿನಿ, ಚಿತ್ರರಂಗ, ರಂಗಭೂಮಿ, ಶಿಕ್ಷಣ, ತಂತ್ರಜ್ಞಾನ ಮತ್ತು ಆಡುಮಾತಿನಲ್ಲಿ ಬದಲಾಗುತ್ತಿರುವ ಕನ್ನಡ ಭಾಷೆಯ ಜಾಯಮಾನವನ್ನು ವಾಸ್ತವ ಮತ್ತು ಕನಸುಗಳ ನೆಲೆಗಳ ಬಿಕ್ಕಟ್ಟಿನಲ್ಲಿ ಸಂಚಿಕೆಯ ಮುಖ್ಯ ಲೇಖನಗಳು ಕಳಕಳಿಯಿಂದ ಚರ್ಚಿಸಿವೆ. ಧಾರ್ಮಿಕ ಕ್ಷೇತ್ರದ ನಿರೂಪಣೆ, ಹಕ್ಕಿಗಳ ನಕಾಶೆ, ಮಕ್ಕಳ ಲೋಕ ಮತ್ತು ಗ್ರಾಫಿಕ್ ನಾವೆಲ್ ಸಾಂಸ್ಕತಿಕ ಸದಭಿರುಚಿಯನ್ನು ಪೊರೆಯುವ ಬರೆಹಗಳಾಗಿವೆ. ಬಹುಮಾನಿತ ಕಥೆ ಮತ್ತು ಕವಿತೆಗಳು, ಒಳ್ಳೆಯ ಗುಣಮಟ್ಟದ ನ್ಯೂಸ್‍ಪ್ರಿಂಟ್, ಔಚಿತ್ಯಪೂರ್ಣ ಚಿತ್ರಗಳು, ಅಚ್ಚುಕಟ್ಟಾದ ವಿನ್ಯಾಸಗಳಿಂದ ಸಂಚಿಕೆ ಸಂಗ್ರಹಯೋಗ್ಯವಾಗಿದೆ. ಈ ಸೊಗಸಿಗೆ ಕಾರಣರಾದ ‘ಪ್ರಜಾವಾಣಿ’ ಗೆಳೆಯರ ಬಳಗವನ್ನು ಅಭಿನಂದಿಸುವೆ.

ಶ್ರೀಧರ ಬಳಗಾರ

ರಾಜ್ಯೋತ್ಸವಕ್ಕೆ ಹಿಡಿದ ಕನ್ನಡಿ

ವರ್ತಮಾನದ ಸಂಗತಿಗಳಿಗೆ ಮೊದಲ ಆದ್ಯತೆ ನೀಡಿ ಸದಾ ಚೈತನ್ಯಶೀಲವಾಗಿ ಹೊರಹೊಮ್ಮುವ ಸಂಚಿಕೆ ‘ಪ್ರಜಾವಾಣಿ’ಯ ದೀಪಾವಳಿ ವಿಶೇಷಾಂಕ.

ಕನ್ನಡದ ಕ್ರಿಯಾಶೀಲ ಮನಸ್ಸುಗಳು ಬಹುತ್ವವಾಗಿ ಕೂಡಿ ಕಟ್ಟುವ ಸಂಚಿಕೆ ಇದು. ಪತ್ರಿಕಾ ಮನೋಧರ್ಮವೆಲ್ಲ ಸಾಂಸ್ಕೃತಿಕವಾಗಿ ಮೇಳಗೊಂಡಂತೆ ಇಲ್ಲಿನ ನಡೆ ಇದೆ. ಈ ಬಾರಿ ನಮ್ಮ ಮನದೆದುರಿಗೆ 2023ರ ದೀಪಾವಳಿ ವಿಶೇಷಾಂಕವಿದೆ. ಅದರ ಮುಖಪುಟವೇ ಹೆಚ್ಚು ಆಕರ್ಷಣೀಯ ಮತ್ತು ಅರ್ಥಪೂರ್ಣವಾಗಿದೆ. ಕರ್ನಾಟಕ ಸಂಭ್ರಮ 50ರ ಸಂದರ್ಭದಲ್ಲಿ ಕನ್ನಡ ನಾಡು–ನುಡಿ ರೂಪುಗೊಂಡ ಬಗೆ, ಐದು ದಶಕಗಳಲ್ಲಿ ಕನ್ನಡ ಭಾಷೆ ಬೆಳೆದ ಪರಿ, ಅದರ ವಿಶಿಷ್ಟ ಗುಣಗಳನ್ನು ಸಾದರಪಡಿಸುವ ಬರಹಗಳು ಇಲ್ಲಿ ಮೈದುಂಬಿಕೊಂಡಿವೆ. ‘ಕನ್ನಡದ ಹೊರಚಾಚುಗಳು’ ಎಂಬುದರ ಸಮಗ್ರ ನೋಟವೇ ಇಲ್ಲಿದೆ.

ಈ ಬೆಳಗಿನೊಂದಿಗೆ ಕೆ.ವಿ. ನಾರಾಯಣರವರ ಬರಹ ಭಾಷೆಯ ಸೂಕ್ಷ್ಮನೆಲೆಗಳನ್ನು ಶೋಧಿಸುತ್ತಾ, ಹೊಸ ತಾಂತ್ರಿಕ ಯುಗದಲ್ಲೂ ಕನ್ನಡ ತಾನು ಉಳಿದು ಬೆಳೆಯುತ್ತಿರುವ ಬಗೆಯನ್ನ, ಆಡು ನುಡಿಯ ಬಳಕೆಯ ಘಮಲನ್ನು ಇಲ್ಲಿ ವಿವರವಾಗಿ ಚರ್ಚಿಸಿರುವುದು ವಿಶೇಷಾಂಕಕ್ಕೊಂದು ಮೆರುಗು. 50ರ ನುಡಿಕಂದೀಲು ಹಿಡಿದ ‘ಪ್ರಜಾವಾಣಿ’ಯ ಚಿಂತನೆಯೂ, ಒತ್ತಾಸೆಯೂ ಇಂತಹ ಹಲವು ಆಶಯಗಳುಳ್ಳ ಬರಹಗಳನ್ನು ಈ ಸಂಚಿಕೆಯಲ್ಲಿ ರೂಪಿಸಿದೆ.

ಪ್ರಜಾವಾಣಿಯೇ ತನ್ನ ದೀಪಾವಳಿ ವಿಶೇಷಾಂಕಕ್ಕೆ ರೂಪಿಸಿಕೊಂಡಿರುವ ಮುಖಪುಟದ ಲಾಂಛನ ‘ನುಡಿ ಕಂದೀಲು’; ಕರ್ನಾಟಕದ ರಾಜ್ಯೋತ್ಸವದ ಸಂದರ್ಭಕ್ಕೆ ಹಿಡಿದ ಸವಿಗನ್ನಡಿ ಇದು. ಈ ಸಂಚಿಕೆಯನ್ನು ನಿರ್ವಹಣೆ ಮಾಡಿರುವ ಮನಸ್ಸುಗಳ ಮೊದಲ ಆದ್ಯತೆಯೇ ಕನ್ನಡ ಭಾಷಾ ಪರಿಸರದ ವಿವೇಕವನ್ನು ತೋರಿದೆ. 

ಪ್ರೊ.ಎಚ್.ಟಿ. ಪೋತೆ

ಇಷ್ಟವಾದ open-ness

ಸಮಾಜದ ಬೇರೆ ಬೇರೆ ವಲಯಗಳಲ್ಲಿ ಆಗಿರುವ ಹೊಸ ಧನಾತ್ಮಕ ಬೆಳವಣಿಗೆಯ ವಿಶ್ಲೇಷಣೆ ಸಂಚಿಕೆಯ ಉದ್ದೇಶವಾಗಿರುವುದು ಸಂಕಲನಕ್ಕೆ ಒಂದು ಒಟ್ಟಂದವನ್ನು ಕಲ್ಪಿಸಿದೆ. ಹೊಸ Trends ಗುರುತಿಸುವಾಗ ಗಮನಿಸಲೇಬೇಕಾದ್ದು open-ness. ಇದು ತುಂಬ ಇಷ್ಟವಾಯಿತು. ಸಂಪಾದಕ ಮಂಡಲಿಗೆ ಹೃತ್ಪೂರ್ವಕ ಅಭಿನಂದನೆಗಳು. ಹೀಗೆ theme ಇಟ್ಟುಕೊಂಡು ಕೆಲಸ ಮಾಡುವ ಪ್ರವೃತ್ತಿಯೇ ಈಚಿನ ದಿನಗಳಲ್ಲಿ ಅಪರೂಪವಾಗುತ್ತಿದೆ. ಹಾಗಾಗಿ ತುಂಬ ಸಂತೋಷವಾಯ್ತು.
–ಎಚ್.ಎಸ್. ವೆಂಕಟೇಶಮೂರ್ತಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT