ರಾತ್ರಿಯಿಡೀ ಮಳೆ ಸುರಿದು ನೆಲವೆಲ್ಲಾ ತಂಪಾಗಿದ್ದ ಆ ಮುಂಜಾನೆ ಆಹ್ಲಾದಕರ ವಾತಾವರಣ ಸೃಷ್ಟಿಸಿತ್ತು. ಕಪ್ಪು ಮಣ್ಣಿನ ಪರಿಮಳ ಆಘ್ರಾಣಿಸುತ್ತಾ ಗುಡ್ಡ ಏರುವಾಗ ನಡಿಗೆಯಲ್ಲಿ ಆಯಾಸ ಮರೆಯಾಗಿತ್ತು. ಆದರೆ ತಂಪೊತ್ತಿನಲ್ಲೂ ಬೇಸಿಗೆಯ ಕಾವು ಹಣೆಯ ಮೇಲೆ ಬೆವರ ಹನಿ ತರಿಸಿತ್ತು. ತುದಿ ಮುಟ್ಟುವ ಮೊದಲೇ ಸುತ್ತಲಿನ ಪರಿಸರ ಕಣ್ಮನ ಸೆಳೆದಿತ್ತು. ಜೋಗಿಮಟ್ಟಿ ಅರಣ್ಯದ ಬೆಟ್ಟಗಳ ಸಾಲು, ಪವನ ವಿದ್ಯುಚ್ಛಕ್ತಿಯ ಗಾಲಿಗಳ ತಿರುಗಾಟ ಕಣ್ಣಿಗೆ ಕಟ್ಟಿದ್ದವು. ಕೂಗಳತೆ ದೂರದಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯ ವಾಹನಗಳ ಸದ್ದು ಕಿವಿಗಡಚಿತ್ತು. ಹೊಲಗಳಲ್ಲಿ ಮುಂಗಾರು ಬಿತ್ತನೆಯಲ್ಲಿದ್ದ ರೈತರ ಹರ್ಷ, ಎತ್ತುಗಳ ಗಂಟೆನಾದ ಎಲ್ಲವೂ ಆಹಾ ಎನಿಸುವ ಕ್ಷಣಗಳಿಗೆ ಸಾಕ್ಷಿಯಾಗಿದ್ದವು.

ಗುಡ್ಡದ ತುದಿ ತಲುಪಿದ ಕೂಡಲೇ ಸುತ್ತಮುತ್ತ ಕಂಡ ದೃಶ್ಯಗಳು, ಹಸಿರ ವಾತಾವರಣ ಮರೆತೇ ಹೋಯಿತು. ಕ್ಷಣಮಾತ್ರದಲ್ಲೇ ಮನಸ್ಸಿನ ಗಮನ ಬೇರೆಡೆ ತಿರುಗಿತು. ಗುಡ್ಡದ ಮೇಲಿನ ಕಲ್ಲುಗಳ ಆ ವಿಶಿಷ್ಟ ರಚನೆಗಳು ಮನಸ್ಸನ್ನು ತನ್ನತ್ತ ಸೆಳೆದುಕೊಂಡವು. ‘ಈ ಕಲ್ಲುಗಳಲ್ಲೇನೋ ವಿಶೇಷವಿದೆ’ ಎಂಬ ಭಾವನೆ ಕಣ್ಣರಳಿಸಿತು. ಸುರುಳಿ ಸುರಳಿಯಾಗಿ ಸುತ್ತಿಕೊಂಡಂತಿರುವ ರಚನೆಗಳು ಕುತೂಹಲ ಕೆರಳಿಸಿದವು. ಕಲ್ಲಿನ ಮೇಲೆ ಬೆಂಕಿಯ ಮಳೆ ಸುರಿದಂತೆ, ಕಂಚು ಕಾಯಿಸಿ ಎರಕ ಹೊಯ್ದಂತೆ, ಮುದ್ದೆ ಸವರಿದಂತೆ, ಹದವಾಗಿ ಬ್ರೆಡ್–ಮಿಠಾಯಿ–ಕೇಕ್ ಕತ್ತರಿಸಿದಂತೆ ಕಾಣುವ ಕಲ್ಲುಗಳಲ್ಲಿ ಅಂಥದ್ದೇನು ವಿಶೇಷವಿದೆ ಎಂಬ ಹುಡುಕಾಟದತ್ತ ಮನಸ್ಸು ಹೊರಳಿತು.

ಮೊದಲ ನೋಟಕ್ಕೆ ಆ ವಿಶೇಷ ರಚನೆಗಳು ಬಗೆಬಗೆಯಾದ ಭಾವನೆಗಳು ಮೂಡಿಸುತ್ತವೆ. ಆದರೆ ವಾಸ್ತವವಾಗಿ ಅವು ಕಲ್ಲುಗಳಲ್ಲ, ಕೋಟ್ಯಂತರ ವರ್ಷಗಳ ಹಿಂದೆ ಭೂಗರ್ಭದಲ್ಲಿ ರೂಪುಗೊಂಡ ವೈಜ್ಞಾನಿಕ ಸಾಕ್ಷಿ ಅವು. ಆ ಇಡೀ ಪ್ರದೇಶ ಸಮುದ್ರದ ಭಾಗವಾಗಿತ್ತು ಎನ್ನಲು ಇರುವ ಏಕೈಕ ಕುರುಹು. ‘ಪಿಲ್ಲೊ ಲಾವಾ’ ಅದರ ಹೆಸರು. ಚಿತ್ರದುರ್ಗದಿಂದ 18 ಕಿ.ಮೀ ದೂರದ ಗುಡ್ಡದ ಮೇಲಿರುವ ಲಾವಾರಸದ ಕುರುಹು ವಿಶ್ವದ ಪ್ರಮುಖ ಭೂವಿಜ್ಞಾನದ ನೆಲೆಯಾಗಿಯೂ ಗುರುತಿಸಿಕೊಂಡಿರುವ ಅದ್ಭುತ.

ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗ್ರಾಮದ ನಡುವಿನ ಆ ಗುಡ್ಡ ಸ್ಥಳೀಯವಾಗಿ ‘ರಂಗಪ್ಪನ ಗುಡ್ಡ’ ಎಂದೇ ಕರೆಸಿಕೊಂಡಿದೆ. ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆ (ಜಿಎಸ್ಐ– ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ) ಇದನ್ನು 1976ರಲ್ಲೇ ರಾಷ್ಟ್ರೀಯ ಭೂವಿಜ್ಞಾನ ಸ್ಮಾರಕ ಎಂದು ಘೋಷಿಸಿದೆ. ಜಿಎಸ್ಐ ವತಿಯಿಂದಲೇ ನಿರ್ವಹಣೆಯಾಗುತ್ತಿದೆ. ಸಮುದ್ರದ ತಳದಲ್ಲಿ ಜ್ವಾಲಾಮುಖಿಯಿಂದ ಚಿಮ್ಮಿದ ಲಾವಾರಸ ತಣ್ಣನೆಯ ಉಪ್ಪು ನೀರಿನೊಂದಿಗೆ ಹಠಾತ್ತನೆ ಬೆರೆತಾಗ (ರ್ಯಾಪಿಡ್ ಚಿಲ್ಡ್) ಘನೀಕೃತಗೊಂಡ ರಚನೆಯೇ ‘ಪಿಲ್ಲೊ ಲಾವಾ’. ಇದು ಭೂವಿಜ್ಞಾನ ಅಧ್ಯಯನಕ್ಕೆ ಪ್ರಮುಖ ಆಧಾರ.

ಮರಡಿ ಎಂದರೆ ಮಣ್ಣಿನ ದಿಬ್ಬ. ದಿಬ್ಬದ ತಟದಲ್ಲಿರುವ ಊರು ಮರಡಿಹಳ್ಳಿ. ಗುಡ್ಡದ ವಿಶೇಷತೆಯಿಂದಾಗಿ ಆ ಊರು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿಯನ್ನೂ ಪಡೆದಿದೆ. ಸಮುದ್ರದ ಆಳದಲ್ಲಿ ರೂಪಿತವಾದ ದಿಂಬಿನಾಕೃತಿಯ (ಪಿಲ್ಲೊ) ಲಾವಾರಸದ ರಚನೆಗೆ 260 ಕೋಟಿ ವರ್ಷದ (2600 ಮಿಲಿಯನ್ ವರ್ಷ) ಇತಿಹಾಸವಿದೆ. ಅಲ್ಲಿಂದ ಇಲ್ಲಿಯವರೆಗೂ ತನ್ನ ರೂಪದಲ್ಲಿ ಎಳ್ಳಷ್ಟೂ ಬದಲಾಗಿಲ್ಲ. ಕೋಟ್ಯಂತರ ವರ್ಷಗಳಿಂದ ಮಳೆ, ಗಾಳಿ, ಬಿಸಿಲಿಗೆ ಸವೆಯುತ್ತಿದ್ದರೂ ವಿರೂಪಗೊಂಡಿಲ್ಲ. ಈ ಕಾರಣಕ್ಕೆ ಮರಡಿಹಳ್ಳಿಯ ‘ಪಿಲ್ಲೊ ಲಾವಾ’ ಬಲು ಅಪರೂಪವಾಗಿದ್ದು ವಿಜ್ಞಾನಿಗಳು ಇದನ್ನು ವಿಶ್ವದ ಪ್ರಾಚೀನ ಭೂವಿಜ್ಞಾನ ನೆಲೆ ಎಂದು ಗುರುತಿಸಿದ್ದಾರೆ. ದೇಶದಲ್ಲಿ 50ಕ್ಕೂ ಹೆಚ್ಚು ರಾಷ್ಟ್ರೀಯ ಭೂವಿಜ್ಞಾನ ಸ್ಮಾರಕಗಳಿದ್ದರೂ ಮರಡಿಹಳ್ಳಿ ಪಿಲ್ಲೊ ಲಾವಾವನ್ನು ಅತ್ಯಂತ ಹಳೆಯದ್ದು ಎಂದೇ ಹೇಳಲಾಗಿದೆ.

‘ಲಾವಾರಸದ ಹರಿವುಗಳಲ್ಲಿ ಪಹೋಹೊ, ಆಆ, ಬ್ಲಾಕಿ ಮತ್ತು ಪಿಲ್ಲೊ ಲಾವಾಗಳೆಂಬ ನಾಲ್ಕು ವಿಧಗಳಿವೆ. ಮೊದಲ ಮೂರು ಲಾವಾರಸ ಭೂಮಿ ಮೇಲ್ಮೈನಲ್ಲಿ ಕಂಡುಬಂದರೆ, ಪಿಲ್ಲೊ ಲಾವಾಗಳು ಸಮುದ್ರದ ಆಳದಲ್ಲಿ ಸಂಭವಿಸುವ ಜ್ವಾಲಾಮುಖಿಯಿಂದ ರೂಪ ಪಡೆಯುತ್ತವೆ. ಬೆಂಕಿ ಹಾಗೂ ನೀರಿನ ನಡುವಿನ ಕಾದಾಟದಲ್ಲಿ ರಚನೆಯಾದ ಘನರೂಪದ ವಸ್ತುವೇ ಪಿಲ್ಲೊ ಲಾವಾ ಆಗಿದೆ’ ಎಂದು ವಿಜ್ಞಾನಿಗಳು ಹೇಳುತ್ತಾರೆ.

ತಣ್ಣನೆಯ ನೀರಿನೊಂದಿಗೆ ತೀವ್ರ ಉಷ್ಣಾಂಶದ ಲಾವಾರಸ ಬೆರೆತಾಗ ಒತ್ತಡಕ್ಕೆ ಸಿಲುಕಿ ಸುರಳಿ ಸುರಳಿಯಾದ ರೂಪ ಪಡೆಯುತ್ತದೆ. ಒಂದರ ಮೇಲೊಂದರಂತೆ ತಲೆದಿಂಬು ಜೋಡಿಸಿದ ಹಾಗೆ ಗಟ್ಟಿಗೊಳ್ಳುತ್ತದೆ. ಈ ಕಾರಣಕ್ಕೆ ಇದನ್ನು ‘ದಿಂಬಿನಾಕೃತಿಯ ಲಾವಾ’ (ಪಿಲ್ಲೊ ಲಾವಾ) ಎಂದು ಹೇಳಲಾಗುತ್ತದೆ. ತಳದಲ್ಲಿ ಚಪ್ಪಟೆಯಾಗಿದ್ದರೆ ಮೇಲ್ಭಾಗದಲ್ಲಿ ಪೀನಾಕೃತಿಯಲ್ಲಿರುತ್ತವೆ. ಅಂಡಾಶಯದ ಆಕಾರದಲ್ಲೂ ಲಾವಾ ರೂಪಗೊಂಡಿರುವುದನ್ನು ಮರಡಿಹಳ್ಳಿಯಲ್ಲಿ ಗುರುತಿಸಲಾಗಿದೆ.

‘ಖನಿಜ ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ದೇಶದ ಭೂಪ್ರದೇಶವನ್ನು ಆರು ವಿಭಾಗ (ಕ್ರೆಟಾನ್)ಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಧಾರವಾಡ ವಿಭಾಗದಲ್ಲಿ ಬರುವ ಚಿತ್ರದುರ್ಗ ಬೆಲ್ಟ್ ಹಲವು ರೀತಿಯ ಲಾವಾ ಕುರುಹುಗಳಿಗೆ ಸಾಕ್ಷಿಯಾಗಿದೆ. ಭೂಮಿ ಹುಟ್ಟಿ 460 ಕೋಟಿ ವರ್ಷಗಳಾಗಿದ್ದರೆ, ಮರಡಿಹಳ್ಳಿ ಪಿಲ್ಲೊ ಲಾವಾಕ್ಕೆ 260 ಕೋಟಿ ವರ್ಷಗಳ ಇತಿಹಾಸವಿದೆ. ಪ್ರಾಚೀನತೆಯ ನೆಲೆಯಲ್ಲಿ ಇದನ್ನು ವಿಶ್ವದ ಬಲು ಅಪರೂಪ ಎಂದು ಪರಿಗಣಿಸಲಾಗಿದೆ. ಈ ಪಿಲ್ಲೊ ಲಾವಾವನ್ನ ಮೊದಲ ಬಾರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಸಿ.ಎಸ್.ಪಿಚ್ಚಮುತ್ತು ಗುರುತಿಸಿದರು’ ಎಂದು ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆ, ಚಿತ್ರದುರ್ಗ ತರಬೇತಿ ಕೇಂದ್ರದ ಹಿರಿಯ ಭೂ ವಿಜ್ಞಾನಿ ಪರಶುರಾಮ ಗಂಗಾಯಿಕೊಪ್ಪ ಹೇಳುತ್ತಾರೆ.

ಮರಡಿಹಳ್ಳಿ ಗುಡ್ಡ ಕಲ್ಲುಗಳ ಕಾಡಿನಂತಿದೆ. ಜೊತೆಗೆ ಕುರುಚಲು ಗಿಡಗಳೂ ಇವೆ. ಚೆಂಡಿನ ಗಾತ್ರದ ಕಲ್ಲು, ಸೈಜುಗಲ್ಲು, ಬಂಡೆಗಲ್ಲುಗಳನ್ನು ಕಾಣಬಹುದು. ಪ್ರತಿ ಕಲ್ಲು ಕೂಡ ಲಾವಾದಿಂದ ರೂಪಗೊಂಡ ರಚನೆಯೇ ಆಗಿದೆ. ಸ್ಪರ್ಶಿಸಿದರೆ ಕಲ್ಲು ಮುಟ್ಟಿದ ಅನುಭವವಾಗುವುದಿಲ್ಲ, ಹತ್ತಿಯ ಸ್ಪರ್ಶದ ಭಾವ ಮೂಡುತ್ತದೆ. ಗ್ರಾಮೀಣ ಜನರು ಆ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ ಗುಡಿಯನ್ನು ಕಟ್ಟಿದ್ದಾರೆ. ಚಪ್ಪಡಿಗೆ ಶಂಖ, ಚಕ್ರ, ಗದ ಚಿತ್ರ ಬರೆದು ರಂಗನಾಥಸ್ವಾಮಿ ಎಂದು ನಾಮಕರಣ ಮಾಡಿದ್ದಾರೆ. ಆದರೆ ಪೂಜೆಗೆ ಒಳಪಡುತ್ತಿರುವ ಕಲ್ಲು ಪಿಲ್ಲೊ ಲಾವಾ ರಚನೆಯೇ ಆಗಿದೆ. ಧಾರ್ಮಿಕ ಭಾವನೆಯ ಕಾರಣಕ್ಕೆ ಅಲ್ಲಿಯ ಕಲ್ಲುಗಳನ್ನು ಯಾರೂ ಕದಿಯುವುದಿಲ್ಲ.

‘ಆಲಿವನ್, ಪೈರಾಕ್ಸಿನ್, ಆಂಫಿಬೋಲ್, ಬಯೋಟೈಲ್, ಐರನ್, ಕ್ಯಾಲ್ಸಿಯಂ, ಸಿಲಿಕಾ ಖನಿಜಗಳಿಂದ ರಚನೆಯಾಗಿರುವ ಪಿಲ್ಲೊ ಲಾವಾ ಸಮುದ್ರದ ಅಂತರಾಳದಿಂದ ಹುಟ್ಟಿಬಂದಿದೆ. ಮರಡಿಹಳ್ಳಿಯ ಪಿಲ್ಲೊ ಲಾವಾ ಭೂವಿಜ್ಞಾನ ಸಂಶೋಧನೆಗೆ ಶ್ರೇಷ್ಠ ತಾಣ. ಇಡೀ ದಕ್ಷಿಣ ಭಾರತ ಸಮುದ್ರವಾಗಿತ್ತು ಎನ್ನಲು ಇದಕ್ಕಿಂತ ಮಿಗಿಲಾದ ಸಾಕ್ಷಿ ಬೇಕಿಲ್ಲ. ಶ್ರೀರಂಗಪಟ್ಟಣದ ಕರಿಘಟ್ಟದಲ್ಲೂ ಲಾವಾ ಕುರುಹುಗಳಿವೆ. ಮೈಸೂರಿನ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿಯನ್ನು ಜ್ವಾಲಾಮುಖಿಯಮ್ಮ ಎಂದೇ ಪೂಜಿಸಲಾಗುತ್ತದೆ’ ಎಂದು ಚಿತ್ರದುರ್ಗ ತಾಲ್ಲೂಕು ಬಹದ್ದೂರ್ಘಟ್ಟ ಹೊಸಹಟ್ಟಿ ಗ್ರಾಮ ಮೂಲದ, ಮೈಸೂರು ವಿವಿ ಭೂವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ
ಪ್ರೊ.ಎಚ್.ಪಿ.ಬಸವರಾಜಪ್ಪ ನೆನಪಿಸಿಕೊಳ್ಳುತ್ತಾರೆ. ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮರಡಿಹಳ್ಳಿ ಸ್ಮಾರಕ ಸಂಶೋಧನಾ ತಾಣವಾಗಿ ಗುರುತಿಸಿಕೊಂಡಿದೆ. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.