ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂಬಗಳ ಧ್ಯಾನ, ಮಾತಾಯಿತು ಮೌನ

Published 24 ಮಾರ್ಚ್ 2024, 0:05 IST
Last Updated 24 ಮಾರ್ಚ್ 2024, 0:05 IST
ಅಕ್ಷರ ಗಾತ್ರ

ಕನ್ನಡ ಸಿನಿಮಾ ಕಂಡ ಬಹುದೊಡ್ಡ ವಯ್ಯಾಕರಣಿ ಗಿರೀಶ ಕಾಸರವಳ್ಳಿ ಅವರ ಸಿನಿಮಾ ಜೀವನಕ್ಕೀಗ ಐವತ್ತು ವರ್ಷ. ಗಿರೀಶರ ಚೊಚ್ಚಿಲ ನಿರ್ದೇಶನದ ‘ಘಟಶ್ರಾದ್ಧ’ (1977) ಚಿತ್ರ ಐವತ್ತರ ಕ್ಲಬ್‌ ಪ್ರವೇಶಿಸಲು ಇನ್ನೂ ಎರಡು ವರ್ಷ ಬೇಕು. ಆದರೆ, 1975ರಲ್ಲಿ ತೆರೆಕಂಡ ಬಿ.ವಿ. ಕಾರಂತರ ನಿರ್ದೇಶನದ ‘ಚೋಮನ ದುಡಿ’ ಸಿನಿಮಾದಲ್ಲಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದನ್ನು ಲೆಕ್ಕಕ್ಕೆ ಹಿಡಿದರೆ, ಗಿರೀಶರ ಸಿನಿಮಾ ಜೀವನಚೈತ್ರಕ್ಕೀಗ ಐವತ್ತರ ಸಂಭ್ರಮ.

‘ಚೋಮನ ದುಡಿ’ ಸ್ವರ್ಣಕಮಲ ಪಡೆದ ಕಲಾಕೃತಿ. ಆ ಸ್ವರ್ಣ ಸಂಭ್ರಮ ‘ಘಟಶ್ರಾದ್ಧ’ದಲ್ಲಿ, ನಂತರದ ‘ತಬರನ ಕಥೆ’, ‘ತಾಯಿಸಾಹೇಬ’, ‘ದ್ವೀಪ’ ಸಿನಿಮಾಗಳಲ್ಲಿ ಮುಂದುವರೆದುದು, ನಿರ್ದೇಶಕರಾಗಿ ಗಿರೀಶರ ಐವತ್ತು ವರ್ಷಗಳ ಸಾಧನೆಗೆ ಎಳೆದಿರುವ ಚಿನ್ನದ ಅಡಿಗೆರೆಯಂತಿದೆ.

ಗಿರೀಶರ ಸಿನಿಮಾಗಳ ವಿಶೇಷಗಳನ್ನು ಮೂರು ರೀತಿಗಳಲ್ಲಿ ಗುರ್ತಿಸಬಹುದು. ಮೊದಲನೆಯದು, ಕನ್ನಡ ಸಾಹಿತ್ಯದೊಂದಿಗೆ ಅವರು ನಡೆಸಿರುವ ಅನುಸಂಧಾನ. ಎರಡನೆಯದು, ಬಿಂಬವ್ಯಾಕರಣದೊಂದಿಗಿನ ಅನುಸಂಧಾನ. ಮೂರನೆಯದು, ಪರ್ಯಾಯ ಸಿನಿಮಾಸಕ್ತರಿಗೆ ಮೇಷ್ಟ್ರ ರೀತಿ ಒದಗಿಬಂದಿರುವಂತಹದ್ದು. ‘ಬಣ್ಣದ ವೇಷ’ ಹೊರತುಪಡಿಸಿದರೆ ಗಿರೀಶರ ಎಲ್ಲ ಸಿನಿಮಾಗಳು ಸಾಹಿತ್ಯಕೃತಿಗಳನ್ನು ಆಧರಿಸಿವೆ. ಇದರಿಂದಾಗಿ ಅವರ ಸಿನಿಮಾಗಳಿಗೆ ತಂತಾನೇ ಒಂದು ಪ್ರಾದೇಶಿಕ– ಕನ್ನಡ– ಆವರಣ ಒದಗಿದೆ. ಗಿರೀಶರ ಸಿನಿಮಾಗಳ ವಿಶೇಷ ಇರುವುದು, ಸಾಹಿತ್ಯಕೃತಿಗಳನ್ನು ಆಧರಿಸಿದ್ದರೂ ಕಥೆಯಲ್ಲಿ ನಿರ್ದೇಶಕರ ದೃಷ್ಟಿಕೋನವೂ ಮಿಳಿತಗೊಂಡಿರುವುದರಲ್ಲಿ. ನಿರ್ದೇಶಕರಾಗಿ ಗಿರೀಶರು ಕಥೆಗಳಲ್ಲಿ ನೆಚ್ಚಿಕೊಂಡಿರುವುದು ಘಟನೆಗಳನ್ನಲ್ಲ, ವಿವರಗಳನ್ನಲ್ಲ, ಹೊಳಹುಗಳನ್ನು. ಆ ಕಾರಣದಿಂದಾಗಿಯೇ ಅವರ ಸಿನಿಮಾಗಳು ಸಾಹಿತ್ಯಕೃತಿಗಳ ಪ್ರತಿಬಿಂಬಗಳಾಗದೆ ಗತಿಬಿಂಬಗಳಾಗಿವೆ; ಅವುಗಳನ್ನು ಸ್ವತಂತ್ರ ಕಥನಗಳ ರೂಪದಲ್ಲೂ ನೋಡಲಿಕ್ಕೆ ಸಾಧ್ಯವಿದೆ. ಮೂಲ ಕಥೆಗೆ ಸಿನಿಮಾ ನಿಷ್ಠವಾಗಿರಬೇಕು ಎನ್ನುವ ನಂಬಿಕೆಯನ್ನು ಗಿರೀಶರಂತೆ ಮುರಿದ, ಕಥೆಯನ್ನು ಪುನರ್‌ ರೂಪಿಸಿದ ಉದಾಹರಣೆಗಳು ಕನ್ನಡದಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ವಿರಳ.
ಪರ್ಯಾಯ ಸಿನಿಮಾಗಳ ಹೆಸರಿನಲ್ಲಿ ತೆರೆಕಂಡಿರುವ ಕನ್ನಡದ ಬಹುತೇಕ ಸಿನಿಮಾಗಳು ಆಶಯಪ್ರಧಾನವಾದವು. ಸಾಹಿತ್ಯದಲ್ಲಿನ ಧ್ವನಿಯನ್ನು ಬಿಂಬವಾಗಿಯೂ ದಕ್ಕಿಸಿಕೊಂಡಿರುವ ಉದಾಹರಣೆಗಳು ವಿರಳ. ಗಿರೀಶರು ಭಿನ್ನವೆನ್ನಿಸುವುದು ಇಲ್ಲಿಯೇ. ‘ಘಟಶ್ರಾದ್ಧ’ ಸಿನಿಮಾದಲ್ಲೇ ಬಿಂಬಗಳನ್ನು ಕಾವ್ಯದ ತೀವ್ರತೆಯಲ್ಲಿ ಕಟ್ಟುವ ಕಸುಬುದಾರಿಕೆಯನ್ನು ಪ್ರಕಟಪಡಿಸಿದ ಅವರು, ನಂತರದ ಪ್ರತಿ ಸಿನಿಮಾಗಳಲ್ಲೂ ದೃಶ್ಯದ ಧ್ವನಿಶಕ್ತಿಯ ಸಾಧ್ಯತೆಗಳನ್ನು ಹುಡುಕುತ್ತಲೇ ಇದ್ದಾರೆ. ಗಿರೀಶರ ವೃತ್ತಿಜೀವನದ ಉತ್ತರಾರ್ಧದ ‘ತಾಯಿಸಾಹೇಬ’, ‘ದ್ವೀಪ’, ‘ಹಸೀನಾ’, ‘ಗುಲಾಬಿ ಟಾಕೀಸ್’, ‘ಕನಸೆಂಬೊ ಕುದುರೆಯನೇರಿ’, ‘ಕೂರ್ಮಾವತಾರ’ – ಪ್ರತಿ ಚಿತ್ರವೂ ಬಿಂಬಗಳ ಕಾಣ್ಕೆಯಲ್ಲಿ ಭಿನ್ನ ಪ್ರಯೋಗಗಳೇ ಆಗಿವೆ.
ಗಿರೀಶ ಕಾಸರವಳ್ಳಿಯವರ ಮತ್ತೊಂದು ವಿಶೇಷ, ಅವರಲ್ಲಿನ ಮೇಷ್ಟ್ರುತನ. ಸಿನಿಮಾ ತಜ್ಞರೊಂದಿಗೆ ಮಾತನಾಡುವಷ್ಟೇ ತೀವ್ರತೆಯಿಂದ ಸಿನಿಮಾ ವ್ಯಾಕರಣ ಗೊತ್ತಿಲ್ಲದ ಎಳೆಯರೊಂದಿಗೂ ಅವರು ಮಾತನಾಡಬಲ್ಲರು, ತಮ್ಮ ಯೋಚನೆಗಳನ್ನು ಹಂಚಿಕೊಳ್ಳಬಲ್ಲರು. ಕನ್ನಡ ಮಾತ್ರವಲ್ಲ, ಭಾರತೀಯ ಭಾಷೆಗಳಲ್ಲಿನ ಹೊಸ ತಲೆಮಾರಿನ ಸಿನಿಮಾ ವಿದ್ಯಾರ್ಥಿಗಳಿಗೆ ಅವರು ಮೇಷ್ಟ್ರು ರೂಪದಲ್ಲಿ ಸಲಹೆ–ಸೂಚನೆ ನೀಡುವುದಿದೆ; ಪರ್ಯಾಯ ಸಿನಿಮಾಗಳನ್ನು ರೂಪಿಸುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿ ಪರಿಣಮಿಸಿರುವುದಿದೆ.

‘ಚೋಮನ ದುಡಿ’ಯ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಗಿರೀಶ ಕಾಸರವಳ್ಳಿ ಅವರ ವೃತ್ತಿಜೀವನ ಐವತ್ತು ವರ್ಷಗಳ ಹೊಸ್ತಿಲಲ್ಲಿರುವ ಸಂದರ್ಭದಲ್ಲಿದೆಯಷ್ಟೇ; ಈ ಸಂದರ್ಭದಲ್ಲಿ ಎರಡು ಕಾರಣಗಳಿಗಾಗಿ ಅವರು ಸುದ್ದಿಯಲ್ಲಿದ್ದಾರೆ. ಒಂದು, ‘ಘಟಶ್ರಾದ್ಧ’ ಸಿನಿಮಾ ಮತ್ತೊಮ್ಮೆ ಅಂತರರಾಷ್ಟ್ರೀಯ ಗಮನಸೆಳೆದಿರುವುದು. ಮತ್ತೊಂದು ‘ಬಿಂಬ ಬಿಂಬನ’ ಕೃತಿಯ ಮೂಲಕ ಗಿರೀಶರು ತಮ್ಮ ಸಿನಿಮಾಗಳ ಮೀಮಾಂಸೆಯನ್ನು ಬರವಣಿಗೆಯಲ್ಲಿ ದಾಖಲಿಸಿರುವುದು.

ಚಲನಚಿತ್ರ ಪರಿಷ್ಕರಣೆ ಮತ್ತು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಾಲಿವುಡ್‌ನ ನಿರ್ದೇಶಕ ಮಾರ್ಟಿನ್‌ ಸ್ಕಾರ್ಸೆಸಿ ಅವರ ಸಿನಿಮಾ ಪ್ರತಿಷ್ಠಾನದ ‘ವರ್ಲ್ಡ್‌ ಸಿನಿಮಾ ಪ್ರಾಜೆಕ್ಟ್‌’ ಹಾಗೂ ‘ಸ್ಟಾರ್‌ ವಾರ್ಸ್‌’ ಸರಣಿಯ ನಿರ್ದೇಶಕ ಜಾರ್ಜ್‌ ಲ್ಯುಕಾಸ್‌ ಅವರ ‘ಹ್ಯಾಬ್ರನ್‌–ಲ್ಯುಕಾಸ್‌ ಫೌಂಡೇಶನ್‌’ ಗಿರೀಶರ ‘ಘಟಶ್ರಾದ್ಧ’ ಚಿತ್ರದ ಸಂರಕ್ಷಣೆ, ಪುನಶ್ಚೇತನಕ್ಕೆ ಮುಂದಾಗಿವೆ. ಭಾರತೀಯ ಸಿನಿಮಾವೊಂದಕ್ಕೆ ಸಂದಿರುವ ಈ ಗೌರವ ಕನ್ನಡಕ್ಕೆ ಸಂದಿರುವ ಮನ್ನಣೆಯೂ ಹೌದು. ‘ಘಟಶ್ರಾದ್ಧ’ ಸಿನಿಮಾ ರಾಷ್ಟ್ರೀಯ–ಅಂತರರಾಷ್ಟ್ರೀಯ ಗಮನಸೆಳೆದಿರುವುದು ಇದು ಮೊದಲೇನಲ್ಲ. 2002ರಲ್ಲಿ, ‘ನ್ಯಾಷನಲ್‌ ಆರ್ಕೈವ್ಸ್‌ ಆಫ್‌ ಪ್ಯಾರಿಸ್‌’ಗೆ ಆಯ್ಕೆಯಾದ ಏಕೈಕ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘ಘಟಶ್ರಾದ್ಧ’ ಪಾತ್ರವಾಗಿತ್ತು; ವಿಶ್ವ ಸಿನಿಮಾಕ್ಕೆ ನೂರು ವರ್ಷಗಳು ಸಂದರ್ಭದಲ್ಲಿ ಆರಿಸಿಕೊಂಡ ನೂರು ಸಿನಿಮಾಗಳಲ್ಲಿ ಗಿರೀಶರ ಚಿತ್ರವೂ ಸೇರಿತ್ತು. 2009ರಲ್ಲಿ, ಗೋವಾದಲ್ಲಿ ನಡೆದ ‘ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಇಂಡಿಯಾ’ದಲ್ಲಿ ಘೋಷಣೆಗೊಂಡ ಭಾರತದ ಅತ್ಯುತ್ತಮ 20 ಚಿತ್ರಗಳ ಪಟ್ಟಿಯಲ್ಲಿ ‘ಘಟಶ್ರಾದ್ಧ’ಕ್ಕೆ ಸ್ಥಾನ ದೊರೆತಿತ್ತು. ಈಗ, ‘ಹ್ಯಾಬ್ರನ್‌–ಲ್ಯುಕಾಸ್‌ ಫೌಂಡೇಶನ್‌’ ಗೌರವದ ಸಮಯ.

‘ಘಟಶ್ರಾದ್ಧ’ ಅಂತರರಾಷ್ಟ್ರೀಯ ಗಮನಸೆಳೆದಿರುವ ಸಂದರ್ಭದಲ್ಲೇ ಗಿರೀಶರ ‘ಬಿಂಬ ಬಿಂಬನ’ ಕೃತಿ ಪ್ರಕಟಗೊಳ್ಳುತ್ತಿದೆ. ಈ ಕೃತಿ, ಐದು ದಶಕಗಳ ಗಿರೀಶರ ವೃತ್ತಿಜೀವನದ ಸಿನಿಮಾಮೀಮಾಂಸೆಯ ಸಂಕಲನ. ಸಾಹಿತಿಗಳು ಸಾಹಿತ್ಯಮೀಮಾಂಸೆ, ಕಾವ್ಯಮೀಮಾಂಸೆ ಬರೆಯುವುದು ರೂಢಿ. ‘ಬಿಂಬ ಬಿಂಬನ’ ಮೂಲಕ ಸಿನಿಮಾಮೀಮಾಂಸೆಯೊಂದು ಕನ್ನಡದಲ್ಲಿ ರೂಪುಗೊಂಡಿದೆ. ನಿರ್ದೇಶಕರೊಬ್ಬರು ತಮ್ಮ ಸಿನಿಮಾಗಳ ಕಟ್ಟೋಣ ಮತ್ತು ಬಿಂಬ ವ್ಯಾಕರಣದ ಕುರಿತು ದಾಖಲಿಸಿರುವ ಇಂಥ ಕೃತಿ ಭಾರತೀಯ ಭಾಷೆಗಳಲ್ಲೂ ಇದ್ದಂತಿಲ್ಲ.

ಕನ್ನಡ ವಾಕ್ಚಿತ್ರ ಪರಂಪರೆಗೆ ತೊಂಬತ್ತು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಪ್ರಕಟಗೊಂಡಿರುವ ‘ಬಿಂಬ ಬಿಂಬನ’ ಸಿನಿಮಾ ಮತ್ತು ಸಾಹಿತ್ಯದ ವಿದ್ಯಾರ್ಥಿಗಳಿಗೆ ಕುತೂಹಲ ಹುಟ್ಟಿಸುವಂತಹದ್ದು. ಸಿನಿಮಾ ಪಠ್ಯಕ್ರಮದ ಭಾಗವಾಗಬೇಕು ಎನ್ನುವ ಒತ್ತಾಯಗಳು ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ, ‘ಬಿಂಬ ಬಿಂಬನ’ ಪ್ರಕಟಗೊಂಡಿದೆ. ಚಲನಚಿತ್ರ ವ್ಯಾಕರಣದ ಪಠ್ಯದ ರೂಪದಲ್ಲಿ ಮಾತ್ರವಲ್ಲದೆ, ಸಾಂಸ್ಕೃತಿಕ ಸಂಕಥನದ ರೂಪದಲ್ಲೂ ನೋಡಬಹುದಾದ ಈ ಕೃತಿ, ಸಿನಿಮಾಗಳಲ್ಲಿನ ಧ್ವನಿಶಕ್ತಿ ಹಾಗೂ ಬಿಂಬದ ಹಿಂದಿರಬಹುದಾದ ಸಾಧ್ಯತೆಗಳನ್ನು ಅರಿಯಲು ನೆರವಾಗುವ ಕೀಲಿಕೈಗಳ ಗೊಂಚಲಿನಂತಿದೆ.

ಬಿಂಬ ಬಿಂಬನ
ಗಿರೀಶ ಕಾಸರವಳ್ಳಿಯವರ ನಿರ್ದೇಶನದ ಚಿತ್ರಗಳ ಸಂಕಥನದ ಸಂಕಲನ – ‘ಬಿಂಬ ಬಿಂಬನ.’ ‘ಅವಶೇಷ್‌’ನಿಂದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ಯವರೆಗಿನ ಹದಿನಾರು ಸಿನಿಮಾಗಳ ಬಿಂಬ ಮೀಮಾಂಸೆಯ ಕುರಿತ ಗಿರೀಶರ ಬರವಣಿಗೆ ಈ ಕೃತಿಯಲ್ಲಿದೆ. ಪ್ರಶ್ನೋತ್ತರ ಮಾದರಿಯ ಈ ಕೃತಿಯಲ್ಲಿ ಗಿರೀಶರ ವಿಚಾರಗಳಿಗೆ ನೆಪವಾಗಿ ಕಾದಂಬರಿಕಾರ ಗೋಪಾಲಕೃಷ್ಣ ಪೈ ಅವರ ಪ್ರಶ್ನೆಗಳಿವೆ. ‘ವೀರಲೋಕ’ ಪ್ರಕಾಶನ ಪ್ರಕಟಿಸಿರುವ ‘ಬಿಂಬ ಬಿಂಬನ’ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT