ಇತ್ತೀಚೆಗೆ 550 ವರ್ಷಗಳ ಇತಿಹಾಸವಿರುವ ಜೀರ್ಣೋದ್ಧಾರಗೊಂಡ ಗೋವಾದ ಗೋಕರ್ಣ ಪರ್ತಗಾಳಿ ಮಠಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿನ ಒಳ ಗೋಡೆ, ಸುತ್ತು ಪೌಳಿ, ಗೋಪುರಗಳ ಮೇಲೆ ಚಿತ್ರಿತವಾದ ರಾಮನ ಪಟ್ಟಾಭಿಷೇಕ, ದಶಾವತಾರ, ವಿಶ್ವಂಭರ ಗಣಪತಿ, ಮಧ್ವಾಚಾರ್ಯರು, ವಟವೃಕ್ಷ ಹಾಗೂ ಕಾಮಧೇನು ಸೇರಿದಂತೆ 24 ಕ್ಕೂ ಹೆಚ್ಚು ಕಾವಿ ಕಲೆಯ ಭಿತ್ತಿಚಿತ್ರಗಳು ಗಮನ ಸೆಳೆದವು.

12-13ನೇ ಶತಮಾನದಲ್ಲಿ ಚಾಲ್ತಿಗೆ ಬಂದ ಈ ಕಲೆ ಜನಪದ ಹಾಗೂ ಸಾಂಪ್ರದಾಯಿಕ ಕಲಾ ತಂತ್ರಗಾರಿಕೆಯನ್ನು ಒಳಗೊಂಡಿದೆ.

ಕೊಂಕಣಿಯಲ್ಲಿ, ‘ಕಾವ್’ ಎಂದರೆ ‘ಕೆಂಪು’ ಬಣ್ಣ, ‘ಕಾವಿ’ ಎಂದರೆ ‘ಮಣ್ಣು’ ಎಂದರ್ಥ. ಇಂತಹ ಕೆಮ್ಮಣ್ಣು ಕಾವಿ ಕಲೆಯಂತಹ ಕಲಾಶೋಧನೆಗೆ ಇಂಬು ನೀಡುತ್ತಾ ದೇವಸ್ಥಾನದ ಗೋಡೆಯ ಮೇಲೆ ಹೂವಾಗಿ, ಪೌರಾಣಿಕ ಪಾತ್ರಗಳಾಗಿ, ದೇವ ದೇವತೆಗಳಾಗಿ, ಮಂಡಲಗಳಾಗಿ ಸಾಂಸ್ಕೃತಿಕ ಕಲಾವಂತಿಕೆಯನ್ನು ಜೀವಂತವನ್ನಾಗಿಸುತ್ತಾ ಕರಾವಳಿ ಭಾಗದಲ್ಲಿ ಶತಮಾನಗಳಿಂದಲೂ ಛಾಪನ್ನು ಮೂಡಿಸಿದೆ.

ಏನಿದು ಕಾವಿ ಕಲೆ?

ಸುಣ್ಣದ ಗಾರೆ ಮೇಲೆ ಕೆಮ್ಮಣ್ಣನ್ನು ಹಚ್ಚಿ, ಅದು ತೇವ ಇರುವಾಗಲೇ ಗೀರಿ ಅನವಶ್ಯವಾದದ್ದನ್ನು ತೆಗೆಯುತ್ತ, ತಮ್ಮಿಷ್ಟದ ರಚನೆಗೆ ರೂಪ ಕೊಡುವುದೇ ಕಾವಿ ಕಲೆ. ಪೇಂಟಿಂಗ್ ಮಾಡಿದರೆ ಅದು ಕಾವಿ ಭಿತ್ತಿ ಕಲೆ ಆಗುವುದಿಲ್ಲ. ಕಾವಿ ಕಲೆಯ ಮೂಲ ಲಕ್ಷಣವೇ ಗೀರಿ ಮಾಡುವುದು. ಕೇವಲ ಮಣ್ಣು ಬಳಸಿದರೆ ಅದು ವರ್ಲಿಯೂ ಆಗಬಹುದು, ಹಸೆ ಚಿತ್ತಾರವೂ ಆಗಬಹುದು. ‘ಕಾವಿ’ ಎಂಬ ಪದವು ಭಾರತೀಯ ಕೆಂಪು (ಹುರಾಮುಂಜಿ) ಗೆ ಸ್ಥಳೀಯ ಹೆಸರಾಗಿದ್ದು,ಇದು ಭಿತ್ತಿಚಿತ್ರಗಳಿಗೆ ಬಳಸಲಾಗುವ ಏಕೈಕ ಬಣ್ಣವಾಗಿದೆ.

ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಅತ್ಯಧಿಕ ಮಳೆ ಹಾಗೂ ಬೇಸಿಗೆಯಲ್ಲಿ ತದ್ವಿರುದ್ಧವಾಗಿ ತೇವ ಮತ್ತು ಆರ್ದ್ರ ಹವಾಮಾನ ಕಂಡುಬರುತ್ತದೆ. ಈ ಕಾರಣದಿಂದ ಬಹುಬಣ್ಣದ ಭಿತ್ತಿಚಿತ್ರಗಳು ದೀರ್ಘಕಾಲದವರೆಗೆ ತೇವಾಂಶವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಭಿತ್ತಿಚಿತ್ರಗಳು ಒಂದೆರಡು ವರ್ಷಗಳಲ್ಲೇ ಬಣ್ಣ ಮಾಸಿ ಅಂದ ಕಳೆದುಕೊಳ್ಳುತ್ತವೆ. ಹಾಗಾಗಿ ಶತಮಾನಗಳ ಹಿಂದೆ ಕರಾವಳಿ ಕಲಾಪ್ರೇಮಿಗಳು ತಮ್ಮ ಭಿತ್ತಿಚಿತ್ರಗಳಿಗೆ ಕಾವಿ ಕಲೆಯನ್ನು ಅಳವಡಿಸಿಕೊಳ್ಳುವ ಮೂಲಕ ಈ ತೊಂದರೆಯನ್ನು ಹೋಗಲಾಡಿಸಿದರು.

ಕರಾವಳಿ ಭಾಗದಲ್ಲಿ ಕಟ್ಟಡಗಳನ್ನು ಕತ್ತರಿಸಿದ ಲ್ಯಾಟರೈಟ್ (ಕೆಂಪು) ಇಟ್ಟಿಗೆಗಳಿಂದ ನಿರ್ಮಿಸಲಾಗುತ್ತದೆ. ಗೋಡೆಗಳ ಒಳ ಹೊರ ಭಾಗದ ಮೇಲೆ ಸುಣ್ಣದ ಲೆಪ್ಪ ಹಚ್ಚಲಾಗುತ್ತದೆ. ಒಣಗಿದ ಸುಣ್ಣದ ಗೋಡೆಯ ಮೇಲ್ಭಾಗಕ್ಕೆ ತೆಳುವಾದ ಕೆಮ್ಮಣ್ಣಿನ ಲೇಪನ ಮಾಡಲಾಗುತ್ತದೆ. ಇವು ಫ್ರೆಸ್ಕೊ ವರ್ಣಚಿತ್ರಗಳಂತೆ ಗೋಡೆಗಳು ಇನ್ನೂ ಒದ್ದೆಯಾಗಿರುವಾಗಲೇ ಕಾವಿಚಿತ್ರಗಳನ್ನು ಗೀರಲಾಗುತ್ತದೆ. ಹೀಗೆ ಕಲಾತ್ಮಕವಾಗಿ ಚಿತ್ರಿಸಲಾದ ಚಿತ್ರಗಳು ಕೆಂಪು ಓಚರ್ ಭಿತ್ತಿಚಿತ್ರ, ಮರಳು-ಬ್ಲಾಸ್ಟೆಡ್ ಬಿಳಿ ಬಣ್ಣದಲ್ಲಿ, ಬಹು ಬಣ್ಣದ ಚಿತ್ರಕಲೆಯಂತೆ ಆಕರ್ಷಕ.

ಕಾವಿ ಕಲೆಯಿಂದ ಸೃಷ್ಟಿಯಾದ ಚಿತ್ರಗಳನ್ನು ಎಲ್ಲಿ ಇರಿಸಬಹುದು ಎಂಬುದಕ್ಕೆ ಯಾವುದೇ ನಿಯಮವಿಲ್ಲ. ಅವುಗಳನ್ನು ವಿಶೇಷವಾಗಿ ದೇವಾಲಯಗಳ ಮುಖಮಂಟಪಗಳ ಹೊರ-ಒಳ ಗೋಡೆ, ಮಹಾದ್ವಾರ, ನವರಂಗ, ಸುಕನಾಸ, ಗರ್ಭಗುಡಿ ಮತ್ತು ಇತರ ಸ್ಥಳಗಳಲ್ಲಿ ರಾಮಾಯಣ, ಮಹಾಭಾರತ ಮತ್ತು ಭಾಗವತ ಪುರಾಣಗಳಿಂದ ಕಥಾವಸ್ತುಗಳನ್ನು ಆಯ್ದುಕೊಂಡು ಕಾವಿ ಕಲೆಯನ್ನು ರಚಿಸಿರುವುದನ್ನು ಕಾಣಬಹುದು. ಜೊತೆಗೆ ಇತ್ತೀಚಿನ ಕಲಾವಿದರು ಆಧುನಿಕತೆಗೆ ತಕ್ಕಂತೆ ಯಕ್ಷಗಾನ ಶೈಲಿ, ಜನಪದ ಕಥೆಗಳನ್ನು , ಪ್ರಾಣಿ, ಪಕ್ಷಿಗಳು ಸುತ್ತಲಿನ ಪ್ರಕೃತಿಯ ಸೊಬಗನ್ನು ಸಹ ಕಾವಿ ಕಲೆಯ ಮೂಲಕ ಗೋಡೆಗಳ ಮೇಲೆ ಚಿತ್ರಿಸುವುದನ್ನು ಕಾಣಬಹುದು.

ಕಾವಿ ಕಲೆಯು ಅವುಗಳ ಸ್ವರೂಪ, ಬಳಸುವ ಸಾಮಗ್ರಿಗಳು, ವಿನ್ಯಾಸಗಳು ಪ್ರದೇಶದಿಂದ ಪ್ರದೇಶ ವ್ಯತ್ಯಾಸವನ್ನು ಹೊಂದಿರುತ್ತವೆ. ಜೊತೆಗೆ ಪೌರಾಣಿಕ ಕಥಾ ಸನ್ನಿವೇಶವನ್ನು ಚಿತ್ರಿಸುವಾಗ ಕಲಾವಿದವರು ಉತ್ತಮ ತರಬೇತಿ ಹಾಗೂ ಕಲಾ ಶೈಲಿಯ ಬಗ್ಗೆ ಸಾಕಷ್ಟು ಅರಿತಿರಬೇಕು. ಉದಾಹರಣೆಗೆ ಕೇಶವಿನ್ಯಾಸ ಅಲಂಕಾರಗಳು, ಆಭರಣಗಳು, ಕುಪ್ಪಸ ಮತ್ತು ಸೀರೆ ವಿನ್ಯಾಸಗಳು ಇತ್ಯಾದಿ.

ಮೊದಲು ಕಾವಿ ಕಲೆಯನ್ನು ಅಧ್ಯಯನ ಮಾಡಿ ಅದನ್ನು ಮುನ್ನಲೆಗೆ ತಂದ ಕೀರ್ತಿ ಕೃಷ್ಣಾನಂದ್ ಕಾಮತ್ ಅವರಿಗೆ ಸಲ್ಲುತ್ತದೆ. ಕೆಲವು ಸಂದರ್ಭಗಳಲ್ಲಿ ಹಿಂದೂ ದೇವಾಲಯ ಮತ್ತು ಅದರ ಕಾವಿ ಕಲಾಕೃತಿ ಪೂರ್ಣಗೊಂಡ ವರ್ಷವನ್ನು ಸೂಚಿಸುವ ದಾಖಲೆಗಳನ್ನು ತಮ್ಮ ಸಂಶೋಧನೆಗಳ ಮೂಲಕ ಕಂಡುಕೊಂಡಿದ್ದಾರೆ. ಕರಾವಳಿ ಭಾಗದ ಹಿಂದೂ ದೇವಾಲಯ ಹೊರತುಪಡಿಸಿ 400 ವರ್ಷಗಳಷ್ಟು ಹಳೆಯದಾದ ಸೇಂಟ್ ಆಗಸ್ಟೀನ್ ಚರ್ಚ್ನ ಗೋಡೆಗಳು, ಹಾಗೆಯೇ ಹಳೆಯ ಗೋವಾದ ಸೆ ಕ್ಯಾಥೆಡ್ರಲ್, ಅವರ್ ಲೇಡಿ ಆಫ್ ದಿ ಮೌಂಟ್ ಚಾಪೆಲ್, 1562 ಮತ್ತು 1619ರ ನಡುವೆ ನಿರ್ಮಿಸಲಾದ ಗೋವಾದ ಆರ್ಚ್ಬಿಷಪ್ ಅರಮನೆಯ ಗೋಡೆಗಳ ಮೇಲಿನ ಕಾವಿ ಕಲೆಯು ಗಂಡಭೇರುಂಡದ ವಿಶಿಷ್ಟ ಲಕ್ಷಣವನ್ನು ಹೊಂದಿದೆ ಎಂಬುದು ಕುತೂಹಲಕಾರಿಯಾಗಿದೆ. ಗೋವಾದ ಮೇಲೆ ಪೋರ್ಚುಗೀಸರ ಆಕ್ರಮಣಕ್ಕೂ ಮುಂಚೆಯೇ ಈ ಕಲೆ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಸಾಕ್ಷಿ.

‘ಕಾವಿ ಕಲಾವಿದರು ಮಾತ್ರ ತಮ್ಮ ಗುರುತನ್ನು ಎಲ್ಲಿಯೂ ಬಿಟ್ಟಿಲ್ಲ. ಆದಾಗ್ಯೂ, ಕೆಲವು ಭಿತ್ತಿಚಿತ್ರಗಳ ವಿಷಯಗಳನ್ನು ಫಲಕದ ಒಳಗೆ ದೇವನಾಗರಿ ಲಿಪಿಯ ಜೊತೆಗೆ ಕನ್ನಡ ಮತ್ತು ತಿಗಳಾರಿ ವರ್ಣಮಾಲೆಗಳನ್ನು ಬಳಸಲಾಗಿದೆ. ಈ ಕನ್ನಡ ಅಕ್ಷರಗಳ ಆಧಾರದ ಮೇಲೆ ಈ ಫಲಕಗಳು 400 ರಿಂದ 450 ವರ್ಷಗಳಷ್ಟು ಹಳೆಯವು ಎಂದು ಗುರುತಿಸಬಹುದು’ ಎಂದು ಕಾವಿ ಕಲೆಯನ್ನು ನಿರಂತರವಾಗಿ ಅಧ್ಯಯನ ಮಾಡುತ್ತಾ, ಕಲೆಯನ್ನು ಉಳಿಸುವಲ್ಲಿ ಶ್ರಮಿಸುತ್ತಿರುವ ಉಡುಪಿಯ ಕಾವಿ ಕಲಾವಿದ ಜನಾರ್ದನ್ ರಾವ್ ಹಾವಂಜೆ ಹೇಳುತ್ತಾರೆ.

ಇಂದು ಕಾವಿ ಕಲೆ ಕೇವಲ ದೇವಾಲಯಗಳು, ಮಠಗಳಿಗಷ್ಟೆ ಸೀಮಿತವಾಗಿಲ್ಲ. ಬಸದಿಗಳು, ಚರ್ಚುಗಳು, ಮಸೀದಿಗಳು ಜನಪದ ನಂಬಿಕೆಯನ್ನು ಬಿಂಬಿಸುವ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಮನೆಗಳು, ಅಶ್ವತ್ಥ ಮರದ ಕಟ್ಟೆಗಳು, ತುಳಸಿಕಟ್ಟೆಗಳು ಕೊನೆಗೆ ಸಮಾಧಿಗಳ ಮೇಲೆಯೂ ಅರಳಿ, ನಳನಳಿಸುತ್ತಿದೆ.

ಆಧುನೀಕರಣಕ್ಕೆ ಒಗ್ಗಿಕೊಂಡಂತೆ ಸಿಮೆಂಟು, ಹೊಸ ತಂತ್ರಜ್ಞಾನ, ಕೃತಕ ಬಣ್ಣಗಳು ಗೋಡೆಗಳನ್ನೆಲ್ಲ ಆಕ್ರಮಿಸಿಕೊಂಡಿವೆ. ಹಾಗಾಗಿ ಸುಣ್ಣದ ಗೋಡೆಗಳ ಮೇಲೆ ರಾರಾಜಿಸುತ್ತಿದ್ದ ಶತಮಾನಗಳಷ್ಟು ಪ್ರಾಚೀನ ಕಾವಿ ಕಲೆಯೂ ನಿಧಾನಕ್ಕೆ ತೆರೆಮರೆಗೆ ಸರಿಯುತ್ತಿದೆ. ಆದರೂ ಅಲ್ಲೊಂದು ಇಲ್ಲೊಂದು ಪುರಾತನ ದೇವಾಲಯಗಳು ಜೀರ್ಣೋದ್ಧಾರ ಮಾಡುವಾಗ ಕಾವಿ ಕಲಾಕೃತಿಗಳು ಸುಣ್ಣದ ಗೋಡೆಗಳ ಮೇಲೆ ಮರುಸ್ಥಾಪನೆಯಾಗಿರುವುದನ್ನು ನೋಡಿ ಆನಂದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.