ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿಗೆ ಬೇಕು ಹವ್ಯಾಸದ ಬಲ

Last Updated 19 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ನೃತ್ಯ ಕಲಾಶಾಲೆಯ ವಾರ್ಷಿಕೋತ್ಸವದ ದಿನ ಅತ್ಯಂತ ಕಿರಿಯ ವಿದ್ಯಾರ್ಥಿಗಳ ಜೊತೆ ವಿವಾಹಿತ ಮಹಿಳೆಯೊಬ್ಬರು ನೃತ್ಯ ಮಾಡುತ್ತಿದ್ದರು. ಆರರಿಂದ ಎಂಟು ವರ್ಷದ ಆ ಮಕ್ಕಳ ಜೊತೆ ಆಕೆ ತನ್ಮಯಳಾಗಿ ಕುಣಿಯುತ್ತಿದ್ದಳು. ಸಂಗೀತಶಾಲೆಯ ಕಾರ್ಯಕ್ರಮವೊಂದರಲ್ಲೂ ಅತ್ಯಂತ ಕಿರಿಯ ಮಕ್ಕಳ ಜೊತೆ ಮಹಿಳೆಯೊಬ್ಬರು ಹಾಡುತ್ತಿದ್ದರು. ಆ ಇಬ್ಬರೂ ಇತ್ತೀಚೆಗಷ್ಟೇ ಕಲಿಕೆ ಆರಂಭಿಸಿದವರು. ಕಾಲೇಜಿನ ಆವರಣದಲ್ಲಿ ನಡೆಯುವ ಚಿತ್ರಕಲಾ ಶಾಲೆಯಲ್ಲಿ ಮಕ್ಕಳ ಜೊತೆ ಕುಳಿತು ನಾನು ಚಿತ್ರ ಕಲೆ ಅಭ್ಯಸಿಸುತ್ತಿರಬೇಕಾದರೆ ಅಲ್ಲಿಂದ ಹೋಗುತ್ತಿದ್ದ ಹಾಸ್ಟೆಲ್ ವಾಸಿಗಳಾದ ಹೈಸ್ಕೂಲ್ ಮಕ್ಕಳು ‘ಆಂಟಿಯೊಬ್ಬರು ಚಿತ್ರ ಕಲೀತಿದ್ದಾರೆ!’ ಎಂದು ಉದ್ಗರಿಸಿದರು.

ಸಂಗೀತ, ನೃತ್ಯ, ಚಿತ್ರಕಲೆ, ವಾದ್ಯಸಂಗೀತ, ಹೊಲಿಗೆ, ಕಸೂತಿ ಇತ್ಯಾದಿ ತರಬೇತಿ ಶಾಲೆಗಳಲ್ಲಿ ಮಕ್ಕಳ ಜೊತೆಗೆ ಕೆಲವರಾದರೂ ವಿವಾಹಿತ ಮಹಿಳೆಯರನ್ನು ನಾವು ಕಾಣಬಹುದು. ನಮ್ಮೂರಿನಲ್ಲಿ ಹಲವು ವಿವಾಹಿತ ಯುವತಿಯರು ಇಂತಹ ಕಲಿಕೆಯಲ್ಲಿ ತೊಡಗಿರುವುದನ್ನು, ಕೆಲವರು ಮದುವೆಯಾಗಿ ಮಕ್ಕಳಾದ ನಂತರ ಕಲಿಯಲು ಆರಂಭಿಸಿದ್ದನ್ನು ನಾನು ನೋಡಿದ್ದೇನೆ. ಕಾರಣವಿಷ್ಟೇ. ಅವರಲ್ಲಿ ಸುಪ್ತವಾಗಿದ್ದ ಆ ಒಂದು ಪ್ರತಿಭೆ, ಅವರ ಹವ್ಯಾಸ ಅದನ್ನು ಕಲಿಯುವಂತೆ ಅವರನ್ನು ಪ್ರೇರೇಪಿಸಿದೆ.

ಚಿತ್ರಕಲೆ ನನ್ನ ನೆಚ್ಚಿನ ಹವ್ಯಾಸ. ಬಿಡುವಿನ ವೇಳೆಯಲ್ಲಿ ವಾಟರ್ ಕಲರ್ ಬಳಸಿ ಯಾವುದಾದರೊಂದು ಚಿತ್ರ ರಚಿಸುತ್ತಿದ್ದೆ. ವರ್ಷಕ್ಕೆ ಒಂದೆರಡು ಚಿತ್ರಗಳನ್ನು ಮಾತ್ರ ರಚಿಸಲು ಸಮಯಾವಕಾಶ ಸಿಗುತ್ತಿತ್ತು. ಮನೆಯ ಗೋಡೆಯ ಮೇಲೂ ಚಿತ್ರ ಬಿಡಿಸುತ್ತಿದ್ದೆ. ಹೀಗಿರಲು ನನ್ನ ಮಕ್ಕಳಿಬ್ಬರನ್ನು ಡ್ರಾಯಿಂಗ್ ಕ್ಲಾಸಿಗೆ ಸೇರಿಸಿದೆ. ಒಂದು ಗಂಟೆಯ ಅವಧಿಯ ಆ ಕ್ಲಾಸಿಗೆ ಮಕ್ಕಳನ್ನು ಸ್ಕೂಟರಲ್ಲಿ ಡ್ರಾಪ್ ಮಾಡಿ ಮನೆಗೆ ಬಂದು, ಸ್ವಲ್ಪ ಹೊತ್ತಿನ ಬಳಿಕ ಪುನಃ ಅವರನ್ನು ಕರೆದುಕೊಂಡು ಬರಲು ಹೊರಡುತ್ತಿದ್ದೆ. ಆ ಒಂದು ಗಂಟೆಯ ಅವಧಿಯಲ್ಲಿ ನನ್ನ ಯಾವುದೇ ಕೆಲಸಗಳು ನಡೆಯುತ್ತಿರಲಿಲ್ಲ. ಒಮ್ಮೊಮ್ಮೆ ಮಕ್ಕಳು ಹಟ ಮಾಡಿದರೆ ಅವರ ತರಗತಿ ಮುಗಿಯುವ ತನಕ ನಾನು ಅಲ್ಲೇ ನಿಲ್ಲಬೇಕಾಗುತ್ತಿತ್ತು. ಆ ಸಮಯವನ್ನು ಸದುಪಯೋಗ ಪಡಿಸುವುದು ಹೇಗೆಂದು ಯೋಚಿಸಿದೆ. ನನ್ನಿಷ್ಟದ ಚಿತ್ರಕಲೆಯನ್ನೇ ಕಲಿತರೆ ಹೇಗೆ? ಜಲವರ್ಣ ತಿಳಿದಿದ್ದ ನಾನು ತೈಲವರ್ಣ ಅಭ್ಯಾಸ ಮಾಡಿ, ಪ್ರಥಮ ಚಿತ್ರವನ್ನು ರಚಿಸಿದಾಗ ನನಗಾದ ಆನಂದ ಅವರ್ಣನೀಯ.

ಮದುವೆಯಾಗಿ ಮಕ್ಕಳು-ಮನೆ ಜೊತೆಗೆ ಉದ್ಯೋಗ ಎಂದು ಒತ್ತಡದಲ್ಲಿ ಬದುಕುವಾಗ ಹವ್ಯಾಸಗಳಿಗೆ ಎಲ್ಲಿದೆ ಸಮಯ? ಅದರ ಅಗತ್ಯವಾದರೂ ಏನಿದೆ? ಹೀಗೆ ಪ್ರಶ್ನಿಸುವವರಿದ್ದಾರೆ. ಹವ್ಯಾಸವೊಂದರಲ್ಲಿ ತೊಡಗಿಸಿಕೊಂಡಾಗ ಮನಸ್ಸಿನ ಚಿಂತೆ, ಒತ್ತಡ, ಉದ್ವೇಗಗಳೆಲ್ಲಾ ದೂರವಾಗುತ್ತದೆ. ಮನಸ್ಸು ಏಕಾಗ್ರವಾಗುತ್ತದೆ. ಬದುಕಿಗೆ ಹೊಸ ಅರ್ಥ ಲಭಿಸಿದಂತಾಗುತ್ತದೆ.

‘ಉದ್ಯೋಗ ಹಾಗೂ ಮನೆಕೆಲಸದ ನಡುವೆ ನಿನ್ನ ಚಿತ್ರರಚನೆ ಹಾಗೂ ಬರವಣಿಗೆಗೆ ಹೇಗೆ ಸಮಯ ಹೊಂದಿಸುತ್ತೀ?’ ಎಂದು ಹಲವು ಆತ್ಮೀಯರು ನನ್ನಲ್ಲಿ ಕೇಳಿದ್ದಿದೆ. ಆಸಕ್ತಿಯೊಂದಿದ್ದರೆ ಸಮಯ ತಾನಾಗಿ ಸಿಗುತ್ತದೆಂದು ನಾನು ಉತ್ತರಿಸುತ್ತೇನೆ. ನನ್ನ ಹವ್ಯಾಸಗಳಿಗಾಗಿಯೂ, ಹವ್ಯಾಸಗಳಿಂದಾಗಿಯೂ ನನಗೆ ಸಮಯಾಭಾವ ಆದದ್ದೇ ಇಲ್ಲ. ಆದರೆ ಚಿಂತೆ ಮಾಡಲು, ಧಾರಾವಾಹಿ ನೋಡಲು, ಅನಗತ್ಯ
ಹರಟೆ ಹೊಡೆಯಲು ನನಗೆ ಸಮಯಾಭಾವವಿದೆ. ಹವ್ಯಾಸಗಳಿಗೆ ಮರುಜೀವ ಬಂದಾಗ ನಾನೋರ್ವ ಹೊಸ ವ್ಯಕ್ತಿಯಾದ ಅನುಭವ ನನಗಾಗುತ್ತಿದೆ. ಚಿಂತೆ, ಒತ್ತಡಗಳಿಲ್ಲದ, ಸುಂದರ, ಸಂತಸದ ಬದುಕು ನನ್ನದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT