ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಪತ್ತಿಗೆ ಜೈಕಾರ! ಮುಂದೆಯೂ ಏಳದಿರಲಿ ಹಾಹಾಕಾರ

Published 22 ಏಪ್ರಿಲ್ 2023, 19:50 IST
Last Updated 22 ಏಪ್ರಿಲ್ 2023, 19:50 IST
ಅಕ್ಷರ ಗಾತ್ರ

ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ. ನಮ್ಮ ದೇಶದಲ್ಲಿ ದುಡಿಮೆಯ ತಾಕತ್ತುಳ್ಳ ‘ಉತ್ಪಾದಕ ಜನಸಂಖ್ಯೆ’ 97 ಕೋಟಿಗೇರಿದೆ. ಚೀನಾದಲ್ಲಿ ಇಳಿವಯಸ್ಸಿನವರ ಸಂಖ್ಯೆ ಶೀಘ್ರ ಜಾಸ್ತಿಯಾಗುತ್ತಿದೆ. ಇಂದು ಭಾರತವೇ ಜಗತ್ತಿನ ಅತ್ಯಂತ ಯುವ ದೇಶ. ಇತರೆಲ್ಲ ದೇಶಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದರೆ, ನಮ್ಮಲ್ಲಿ ಇನ್ನಿಪ್ಪತ್ತು ವರ್ಷ ಆ ಆತಂಕವಿಲ್ಲ. ‘ಜನಸಂಖ್ಯಾ ವೀರ’ ಎನಿಸಿಕೊಂಡಿರುವ ಭಾರತದ ಸ್ಥಿತಿ–ಗತಿ–ಭವಿತವ್ಯದ ಸಾಧ್ಯತೆಯ ಮೇಲೆ ಬೆಳಕು ಚೆಲ್ಲುವ ಲೇಖನ ಇದು.

ಕಳೆದ ನೂರು ವರ್ಷಗಳ ಜಾಗತಿಕ ಇತಿಹಾಸವೆಂದರೆ ಜನಸಂಖ್ಯೆಯ ಏರಿಳಿತದ ಪುಟಿಚೆಂಡಿನ ಇತಿಹಾಸ. ಅದು ಇಳಿಯಿತೆಂಬ ಆತಂಕ, ಏರಿತೆಂಬ ಆತಂಕಗಳ ಇತಿಹಾಸವೂ ಹೌದು. ಕೊಳಾಯಿ ನೀರಿನ ವ್ಯವಸ್ಥೆ ಜಾರಿಗೆ ಬಂದಮೇಲೆ ಕಾಲರಾ, ವಿಷಮಜ್ವರ ಹಾವಳಿ ತಗ್ಗಿತು. ಜನಸಂಖ್ಯೆ ಏರಿತು. ಸಿಡಿಮದ್ದು, ಬಾಂಬರ್‌ ದಾಳಿಗಳಿಂದಾಗಿ ಒಂದಿಷ್ಟು ತಗ್ಗಿತು. ಆಂಟಿಬಯಾಟಿಕ್ ಔಷಧಗಳ ಬಳಕೆ ಹೆಚ್ಚಿದಂತೆಲ್ಲ ಅದು ಮತ್ತೆ ಏರಿ, ಪ್ಲೇಗು, ಸಿಡುಬಿನ ಹಾವಳಿಯಿಂದಾಗಿ ಪುನಃ ತಗ್ಗಿತು. ಅಣುಬಾಂಬ್‌ ದಾಳಿಯ ನಂತರ ಯುದ್ಧಭೀತಿ ಅಡಗಿತು. ಯುದ್ಧ ಸಾಮಗ್ರಿಗಳನ್ನೇ ಬಳಸಿ ಕೃಷಿಭೂಮಿಯನ್ನು ವಿಸ್ತರಣೆ ಮಾಡಲಾಯಿತು. ಗಾಳಿಯಲ್ಲಿನ ಸಾರಜನಕವನ್ನೇ ರಸಗೊಬ್ಬರವನ್ನಾಗಿಸಿ ಗೋಧಿಯ ಇಳುವರಿ ಹೆಚ್ಚಿಸಿದ್ದೇ ತಡ ಜನಸಂಖ್ಯೆ ಮತ್ತೆ ಏರತೊಡಗಿತು. ಆಹಾರದ ಅಭಾವ ಎಲ್ಲೇ ಇಣುಕಿದರೂ ಹಡಗು, ರೈಲುಗಳಲ್ಲಿ ಧಾನ್ಯದ ಮೂಟೆಗಳು ಧಾವಿಸಿ ಬಂದವು.

1950ರ ದಶಕದಲ್ಲಿ ವಿಶ್ವಶಾಂತಿಯ ನಿಟ್ಟುಸಿರಿಟ್ಟಿದ್ದೇ ತಡ, ಧುತ್ತೆಂದು ತಲೆಯೆತ್ತಿತು ‘ಜನಸಂಖ್ಯಾ ಬಾಂಬ್‌’ ಎಂಬ ಹೊಸ ಆತಂಕ. ‘ಮನುಕುಲದ ಕತೆ ಇನ್ನೇನು ಮುಗಿಯಿತು’ ಎಂದು 1968ರಲ್ಲಿ ಪಾವ್ಲ್‌ ಎರ್ಲಿಕ್‌ ಎಂಬ ವಿಜ್ಞಾನಿ ‘ಪಾಪ್ಯುಲೇಶನ್‌ ಬಾಂಬ್‌’ ಎಂಬ ಶಿರೋನಾಮೆಯ ಪುಸ್ತಕವನ್ನು ಪ್ರಕಟಿಸಿದ; ಆಹಾರದ ಅಭಾವದಿಂದಾಗಿ ಕೋಟಿಗಟ್ಟಲೆ ಜನರು ಸಾಯುತ್ತಾರೆಂದು ಆತ ಲೆಕ್ಕಸಂಖ್ಯೆ ತೋರಿಸಿ ಹೇಳಿದ್ದೇ ತಡ, ಚಿಂತಕರ ವಲಯದಲ್ಲಿ ಬಿರುಗಾಬರಿಯೇ ಚಿಮ್ಮಿತು. ಅಷ್ಟು ಹೊತ್ತಿಗೆ ನಾರ್ಮನ್‌ ಬೋರ್ಲಾಗ್‌ ಎಂಬ ತಳಿವಿಜ್ಞಾನಿಯ ಯತ್ನದಿಂದಾಗಿ ಹೈಬ್ರಿಡ್‌ ಗೋಧಿ ಬಂತು. ನೀರಾವರಿ, ರಸಗೊಬ್ಬರ, ಕೃಷಿ ವಿಷಗಳ ಮಳೆ ಸುರಿಸಿ ಬಡದೇಶಗಳಲ್ಲೂ ಹಸಿರು ಕ್ರಾಂತಿ ಸಂಭವಿಸಿತು. ಜನಸಂಖ್ಯಾ ಬಾಂಬ್‌ ಸ್ಫೋಟಿಸುವ ಬದಲು ಶಾಂತಿಯ ಕಾರಂಜಿ ಚಿಮ್ಮಿತು.

ಆತಂಕ ಮುಗಿಯಿತೆ, ಇಲ್ಲ! ಮಕ್ಕಳು ಹೆಚ್ಚಿದ್ದಲ್ಲಿ ಸಂಪತ್ತು ಕಮ್ಮಿ ಎಂಬ ಅನೂಚಾನದ ಮಾತು ಈಗ ಉಲ್ಟಾ ಹೊಡೆಯತೊಡಗಿತು. ಸಂಪತ್ತು ಹೆಚ್ಚಿದ್ದಲ್ಲಿ ಮಕ್ಕಳ ಸಂಖ್ಯೆ ಕಮ್ಮಿಯಾಗತೊಡಗಿತು. ಸಂಪತ್ತಿನ ಜೊತೆ ಸಮಾನತೆ ಇದ್ದರೆ ಮಾತ್ರ ಜನಸಂಖ್ಯೆಯ ಸಮತೋಲ ಸಾಧ್ಯ ಎಂಬ ಹೊಸ ಸತ್ಯ ಗೋಚರಿಸಿತು. ಜನಸಂಖ್ಯೆ ಸ್ಥಿರ ಇರಬೇಕೆಂದರೆ ‘ನಾವಿಬ್ಬರು, ನಮಗಿಬ್ಬರು’ ಎಂಬಂತೆ ಪ್ರತಿ ದಂಪತಿಗೆ ಇಬ್ಬರು ಮಕ್ಕಳಾಗಬೇಕು ತಾನೆ? ಆದರೆ ಜಪಾನಿನಲ್ಲಿ ಪ್ರತಿ ದಂಪತಿಗೆ ಸರಾಸರಿ 1.2 ಮಕ್ಕಳು. ಇಥಿಯೋಪಿಯಾದಲ್ಲಿ 6.17 ಎಂಬಂತಾಯಿತು. ಸಂಪತ್ತಿಗೆ ಸವಾಲೆಂಬಂತೆ ಭಾರತದಲ್ಲೂ ಪಾರ್ಸಿಗಳ ಸಂಖ್ಯೆ ತೀರ ಕಮ್ಮಿಯಾಗುತ್ತ, ಬಡ ಬಿಹಾರಿಗಳ ಸಂಖ್ಯೆ ಏರುತ್ತ ಹೋಯಿತು.

ಜಗತ್ತಿನಲ್ಲೇ ಅತಿ ಹೆಚ್ಚು ಜನರಿರುವ ಚೀನಾ ಕಾನೂನಿನ ಬಲದಿಂದ ಜನಸಂಖ್ಯೆಯನ್ನು ತಗ್ಗಿಸಲು ಹೊರಟಿತು. ಕೃಷಿ ಸಮಾಜವನ್ನು ಔದ್ಯಮಿಕ ಸಮಾಜವಾಗಿ ಪರಿವರ್ತಿಸಲೆಂದು ಹಿಂದೆ 1960ರ ದಶಕದಲ್ಲಿ ಮಾವೋ ನಡೆಸಿದ ‘ಮಹಾ ಮುಂಜಿಗಿತ’ ಎಂಬ ಪ್ರಯೋಗದಿಂದಾಗಿ ಅಂದಾಜು ನಾಲ್ಕಾರು ಕೋಟಿ ಜನರು ಅಸುನೀಗಿದರು (ಕನಿಷ್ಠ ಮೂರು ಕೋಟಿ, ಗರಿಷ್ಠ 11 ಕೋಟಿ). ಜನಸಂಖ್ಯೆಯನ್ನು ಮತ್ತೆ ನಿಯಂತ್ರಿಸಲೆಂದು ‘ಒಂದೇ ಮಗು ಸಾಕು’ ಎಂಬ ಕಾನೂನನ್ನು 1990ರ ದಶಕದಲ್ಲಿ ಹೇರಿತು. ಶಿಕ್ಷೆ, ದಂಡ, ಬಲವಂತ ಗರ್ಭಪಾತ ಏನೆಲ್ಲ ರುದ್ರ ಪ್ರಯೋಗ ಅಲ್ಲಿ ನಡೆಯಿತು. ಕದ್ದು ಮುಚ್ಚಿ ಜನ್ಮ ತಾಳಿದ ಮಕ್ಕಳು ಎಲ್ಲೆಲ್ಲೋ ಅನಾಮಿಕರಾಗಿ ಬೆಳೆದಿದ್ದೇನು, ಒಂದೇ ಮಗುವಿನ ಮೇಲಿನ ಅತಿಕಾಳಜಿಯಿಂದಾಗಿ ದಢೂತಿ ಮಕ್ಕಳು ಬೆಳೆದಿದ್ದೇನು; ಜನಸಂಖ್ಯೆಯೇನೊ ಸ್ತಿಮಿತಕ್ಕೆ ಬಂತು. ಕಡಿಮೆಯೂ ಆಗತೊಡಗಿ, ಹೊಸ ಆತಂಕ ತಲೆದೋರಿತು. ಯುವಜನರ ಸಂಖ್ಯೆ ಇಳಿಮುಖವಾಯಿತು. ಈಗ ಪ್ರತಿ ದಂಪತಿ ಮೂರು ಮಕ್ಕಳನ್ನು ಹೆರುವಂತೆ ಚೀನಾ ಏನೆಲ್ಲ ಆಮಿಷ ಒಡ್ಡತೊಡಗಿದೆ. ಮೂರನೆಯ ಮಗುವಿಗಾಗಿ ಒತ್ತಡ ಹೇರತೊಡಗಿದೆ.

ಭಾರತ ಅಂಥ ಯಾವ ಅತಿರೇಕಕ್ಕೂ ಹೋಗಲಿಲ್ಲ. ತುರ್ತುಪರಿಸ್ಥಿತಿಯಲ್ಲಿ ಅಲ್ಲಲ್ಲಿ ಬಲಾತ್ಕಾರದ ಯತ್ನ ಹಾಗೂ ಕ್ವಿನಾಕ್ರೈನ್‌ನಂಥ ಗರ್ಭನಾಶಕ ಮಾತ್ರೆಗಳ ಪ್ರಯೋಗ, ವೈದ್ಯರ ಅತಿ ಉತ್ಸಾಹದ ಶಸ್ತ್ರಕ್ರಿಯೆಯಂಥ ಭಾನಗಡಿಗಳು ನಡೆದಿದ್ದು ಹೌದು. ಛತ್ತೀಸ್‌ಗಢದಲ್ಲಿ ಡಾ. ಆರ್‌.ಕೆ. ಗುಪ್ತಾ ಎಂಬಾತ ದಾಖಲೆಗೆಂದು ಐದೇ ಗಂಟೆಗಳಲ್ಲಿ 83 ಟ್ಯೂಬೆಕ್ಟಮಿ ನಡೆಸಿದ್ದರ ಪರಿಣಾಮವಾಗಿ 60 ಮಹಿಳೆಯರು ತೀವ್ರ ಅಸ್ವಸ್ಥಗೊಂಡು 12 ಸಾವು ಸಂಭವಿಸಿತು. ಅಂಥ ಎಲ್ಲ ಸಂದರ್ಭಗಳಲ್ಲೂ ಜಾಗೃತ ಮಾಧ್ಯಮ ಮತ್ತು ಚುರುಕಿನ ಸಾಮಾಜಿಕ ಸಂಘಟನೆಗಳು ಕೈಜೋಡಿಸಿ ಸರಕಾರಕ್ಕೆ ಪಾಠ ಕಲಿಸಿದವು.

ಜನಸಂಖ್ಯೆ ಹೆಚ್ಚುತ್ತ ಹೋಯಿತು ನಿಜ. ಆದರೆ ಏರಿಕೆಯನ್ನು ನಿಯಂತ್ರಿಸಲು ಬಲಾತ್ಕಾರದ ಬದಲು, ಮೆಲ್ಲುಲಿಯ ಕ್ರಮಗಳು ಜಾರಿಗೆ ಬಂದವು. ‘ಅಭಿವೃದ್ಧಿಯೇ ಅತ್ಯುತ್ತಮ ಜನನ- ನಿಯಂತ್ರಕ’ ಎಂಬ ಡಾ. ಕರಣ್‌ ಸಿಂಗ್‌ ಮಾತು ಮೂಲಮಂತ್ರವೆನಿಸಿತು. ಜನರ ಆದಾಯ ಕ್ರಮೇಣ ಹೆಚ್ಚುತ್ತ ಬಂದಂತೆ ಮಹಿಳೆಯರಲ್ಲಿ ಸಾಕ್ಷರತೆ ಹೆಚ್ಚುವಂತೆ, ಜನನ ನಿಯಂತ್ರಣ ಸಾಧನಗಳು ಸುಲಭವಾಗಿ ಸಿಗುವಂತೆ ಮಾಡಿದ್ದೂ ಅಲ್ಲದೆ ಜನಸಂಖ್ಯೆಯ ಏರುಗತಿಯನ್ನೇ ದೇಶದ ಅನುಕೂಲಕ್ಕಾಗಿ ತಿರುಗಿಸಿಕೊಳ್ಳುವತ್ತ ಸರ್ಕಾರ ಸರಿಯಾದ ಹೆಜ್ಜೆ ಇಡುತ್ತ ಹೋಯಿತು. ನಮ್ಮಲ್ಲಿಂದು 24 ರಾಜ್ಯಗಳಲ್ಲಿ ಜನಸಂಖ್ಯೆ ಇಳಿಮುಖವಾಗುತ್ತಿದೆ. ‘ಇಳಿಗತಿ ಸಾಧಿಸುವಲ್ಲಿ ಇತರ ಧರ್ಮೀಯರಿಗಿಂತ ಮುಸ್ಲಿಮರೇ ಮುಂದಿದ್ದಾರೆ’ ಎಂದು ಭಾರತೀಯ ಜನಸಂಖ್ಯಾ ಅಧ್ಯಯನ ಸಂಸ್ಥಾನದ ನಿರ್ದೇಶಕಿ ಪೂನಂ ಮುತ್ರೇಜಾ ಅಂಕಿಸಂಖ್ಯೆಗಳ ಆಧಾರದಲ್ಲಿ ವಾದಿಸುತ್ತಾರೆ.

ನಮ್ಮಲ್ಲೀಗ ಆಹಾರದ ಅಭಾವವಿಲ್ಲ. ಎಂಥದೇ ವಿಪತ್ತು ತಲೆದೋರಿದರೂ ಚುರುಕಾಗಿ ಸ್ಪಂದಿಸಬಲ್ಲ ಮೂಲಸೌಕರ್ಯಗಳಿವೆ. ಎಲ್ಲಕ್ಕಿಂತ ಮಹತ್ವದ ಸಂಗತಿ ಏನೆಂದರೆ ನಮ್ಮಲ್ಲಿ ಪ್ರಜಾಪ್ರಭುತ್ವ ಇದೆ. ಸರ್ಕಾರದ ತಪ್ಪು ಹೆಜ್ಜೆಗಳನ್ನು ಪ್ರಶ್ನಿಸಬಹುದಾಗಿದೆ. ‘ಪ್ರಜಾಪ್ರಭುತ್ವ ಮತ್ತು ಮಾಧ್ಯಮ ಸ್ವಾತಂತ್ರ್ಯ ಇರುವ ದೇಶಗಳಲ್ಲಿ ಕ್ಷಾಮಢಾಮರದಂಥ ವಿಪತ್ತು ಬರಲಾರದು’ ಎಂದು ನೊಬೆಲ್‌ ಅರ್ಥತಜ್ಞ ಅಮರ್ತ್ಯಸೆನ್‌ ಹಿಂದೆಯೇ ಹೇಳಿದ್ದರು. ಅದು ಇದುವರೆಗಂತೂ ಸತ್ಯವಾಗಿದೆ.

ಇದರ ಫಲ ಏನೆಂದರೆ, ನಮ್ಮ ದೇಶದಲ್ಲಿ ದುಡಿಮೆಯ ತಾಕತ್ತುಳ್ಳ ‘ಉತ್ಪಾದಕ ಜನಸಂಖ್ಯೆ’ 97 ಕೋಟಿಗೇರಿದೆ. ಈ ದೃಷ್ಟಿಯಲ್ಲಿ ಸದ್ಯಕ್ಕೆ ಚೀನಾ ನಮಗಿಂತ ತುಸುವೇ ಮುಂದಿದೆಯಾದರೂ ಅಲ್ಲಿ ಇಳಿವಯಸ್ಸಿನವರ ಸಂಖ್ಯೆ ಶೀಘ್ರ ಜಾಸ್ತಿಯಾಗುತ್ತಿದೆ. ಇಂದು ಭಾರತವೇ ಜಗತ್ತಿನ ಅತ್ಯಂತ ಯುವ ದೇಶ. ಇತರೆಲ್ಲ ದೇಶಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದರೆ ನಮ್ಮಲ್ಲಿ ಇನ್ನಿಪ್ಪತ್ತು ವರ್ಷ ಆ ಆತಂಕವಿಲ್ಲ-ಏಕೆಂದರೆ ಸರಾಸರಿ 23-24ರ ವಯೋಮಾನದವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚೀನಾವನ್ನು ಬಿಟ್ಟರೆ, ತಾಂತ್ರಿಕ ಕೌಶಲಗಳಲ್ಲಿ ಪರಿಣತಿ ಪಡೆದ ಅತಿ ಹೆಚ್ಚಿನ ಯುವಜನತೆ ನಮ್ಮಲ್ಲಿದೆ. ಚೀನಾಕ್ಕಿಂತ ನಮ್ಮ ಪರಿಸ್ಥಿತಿ ಉತ್ತಮ ಇದೆ ಏಕೆಂದರೆ, ನಮ್ಮವರಿಗೆ ಇಂಗ್ಲಿಷ್‌ ಗೊತ್ತಿದೆ. ಐಐಟಿ, ಐಐಎಮ್‌ಗಳಲ್ಲಿ ಹೊಕ್ಕು ಹೊರಟವರು ಜಗತ್ತಿನ ಯಾವ ದೇಶಕ್ಕಾದರೂ ಹೋಗಿ ಜೈಸಿಕೊಳ್ಳುವಂತಿದ್ದಾರೆ. ಧಾರ್ಮಿಕ ಜಿಗುಟುತನ ಇಲ್ಲದ, ಎಲ್ಲಿ ಹೋದರೂ ಹೊಂದಿಕೊಂಡು ಹೋಗುವ ಗುಣ ನಮ್ಮವರದಾಗಿದೆ. ನಮ್ಮ ಜನಸಂಪತ್ತು ವಿದೇಶಗಳಿಗೆ ಸಲೀಸಾಗಿ ರಫ್ತಾಗಲು ಅನುಕೂಲವಾಗುವಂತೆ ಅನೇಕ ದ್ವಾರಗಳನ್ನು ಏಕಕಾಲಕ್ಕೆ ತೆರೆಯಲಾಗಿದೆ. ನಮ್ಮಲ್ಲಿಂದು ಚುರುಕಾಗಿ ಕೆಲಸ ಮಾಡುವ 93 ಪಾಸ್‌ಪೋರ್ಟ್‌ ಕಚೇರಿಗಳಿವೆ. ಸಾಲದೆಂಬಂತೆ 424 ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಅರ್ಜಿ ಸಲ್ಲಿಸುವ ಸವಲತ್ತುಗಳಿವೆ. ಭಾರತದ ತಾಂತ್ರಿಕ ಯುವಸೈನ್ಯವನ್ನು ಆಮದು ಮಾಡಿಕೊಳ್ಳುವಂತೆ ಜಪಾನಿನಂಥ ತೀರ ಸ್ವಪ್ರತಿಷ್ಠೆಯ ದೇಶವನ್ನೂ ಒಲಿಸಿಕೊಳ್ಳುವಲ್ಲಿ ನಮ್ಮ ವಿದೇಶಾಂಗ ನೀತಿ ಸಫಲವಾಗಿದೆ.

ಹಾಗಿದ್ದರೆ ಎಲ್ಲಕ್ಕೂ ಜೈಹೋ ಎನ್ನೋಣವೆ? ನಿಲ್ಲಿ. ಜನಸಂಖ್ಯೆ ಹೆಚ್ಚುತ್ತಿರುವ ಹಾಗೇ ಭೋಗಲಾಲಸೆಗಳ ಆಮಿಷವೂ ಹೆಚ್ಚುತ್ತಿದೆ. ಹಾಗಾಗಿ ಹೆಚ್ಚಿನ ಸವಾಲುಗಳು ಎದುರಾಗುತ್ತಿವೆ. ಮೊದಲ ಸವಾಲು ಏನೆಂದರೆ, ಸುಖಜೀವನದ ಕನಸು ಕಾಣುವ ಯುವಜನಕೋಟಿಗೆ ಅಷ್ಟೇ ತ್ವರಿತವಾಗಿ ಉದ್ಯೋಗ ಸಿಗಬೇಕು. ಅವರು ಕೈಕಟ್ಟಿ ಕೂರಲೇಬಾರದು. ಅಂದರೆ, ದೇಶದ ಅಭಿವೃದ್ಧಿಯ ಏರುಗತಿ ಶೇ. 8-9ರ ಮಟ್ಟದಲ್ಲೇ ಇರಬೇಕು. ಕಡಿಮೆಯಾದರೆ ಅಪಾಯ. ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆಗೆ ನಾವು ಈಗಲೂ ತೀರ ಕಡಿಮೆ ಪ್ರಮಾಣದ ಹೂಡಿಕೆ (ಕ್ರಮವಾಗಿ ಜಿಡಿಪಿಯ ಶೇ. 2.9 ಮತ್ತು 1.3 ಮಾತ್ರ) ಮಾಡುತ್ತಿದ್ದೇವೆ. ಅದನ್ನು ಇಮ್ಮಡಿ ಮಾಡಬೇಕೆಂದು ಒತ್ತಡವಿದ್ದರೂ ಜಾರಿಗೆ ಬರುತ್ತಿಲ್ಲ. ಚೀನಾದಿಂದ ಕಾಲ್ತೆಗೆಯುತ್ತಿರುವ ಕಂಪನಿಗಳು ವಿಯೆಟ್ನಾಂ, ಕಾಂಬೋಡಿಯಾ ಕಡೆ ಹೋಗುವ ಬದಲು ನಮ್ಮತ್ತ ಬರಬೇಕೆಂದರೆ ಈಗ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ಸಿಗಬೇಕು.  ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಸೂಕ್ತ ಉದ್ಯೋಗಾವಕಾಶ ಕಲ್ಪಿಸಬೇಕು. ಸ್ವಯಂಚಾಲಿತ ಯಂತ್ರಗಳ ಬಳಕೆ ಹೆಚ್ಚುತ್ತ ಹೋಗುತ್ತಿರುವಾಗ ಶ್ರಮದ ದುಡಿಮೆಗೂ ಹೊಸ ಹೊಸ ಮಾರ್ಗಗಳನ್ನು ಶೋಧಿಸಬೇಕು.

ಆಗಲೂ ಸವಾಲು ಕಠಿಣವಾಗುತ್ತ ಹೋಗಲಿದೆ. ತಾಪಮಾನದ ವೈಪರೀತ್ಯ ಹೆಚ್ಚುತ್ತ ಹೋದಂತೆಲ್ಲ ಕೃಷಿ ದುಡಿಮೆಯಲ್ಲಿ ಹೈರಾಣಾಗಿ ನಗರಕ್ಕೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚುತ್ತದೆ. ಅಥವಾ ಇದ್ದುದರಲ್ಲಿ ಸುಲಭವೆಂದು ವಾಣಿಜ್ಯ ಬೆಳೆಗಳಿಗೆ ಶರಣು ಹೋಗುತ್ತಾರೆ. ಅಥವಾ ಬಿಸಿಲು ಮಳೆಯನ್ನೇ ಮಾರಾಟಕ್ಕಿಡುತ್ತಾರೆ. ಅಂಥ ಎಂಥ ಕಾಲ ಬಂದರೂ ಆಹಾರೋತ್ಪಾದನೆ ಕುಂಠಿತವಾಗದಂತೆ, ನೆಲಜಲ ಬರಡಾಗದಂತೆ ನೋಡಿಕೊಳ್ಳಬೇಕಿದೆ.

ಬಂಡವಾಳಶಾಹಿ ಆರ್ಥಿಕತೆಯ ಮೂಲ ಸಮಸ್ಯೆ ಏನು ಗೊತ್ತೆ? ಜನಸಂಖ್ಯೆಯ ಏರಿಕೆಗಿಂತ ಭೋಗದಾಹದ ಏರಿಕೆ ಹೆಚ್ಚುತ್ತ ಹೋಗುತ್ತದೆ. ಅದನ್ನು ಪೂರೈಸುವ ಮೇಲಾಟದಲ್ಲಿ ಪೃಥ್ವಿಯ ಸಂಪತ್ತು ಬರಿದಾಗುತ್ತ, ಅಸಮಾನತೆ ಹೆಚ್ಚುತ್ತ ಹೋಗುತ್ತದೆ. ಅದನ್ನು ಪ್ರಶ್ನಿಸುವವರನ್ನು ಹತ್ತಿಕ್ಕಲೆಂದು ಪ್ರಜಾಪ್ರಭುತ್ವಕ್ಕೂ ಮಾಧ್ಯಮಗಳಿಗೂ ಲಗಾಮು ಹಾಕಲು ಹೊರಟರೆ, ಆಗಎರ್ಲಿಕ್‌ ಕಂಡ ದುಃಸ್ವಪ್ನ (‘ಅಲ್ಲಿಗೆ ಮುಗಿಯಿತು ಕತೆ’) ನಿಜವಾದೀತು.

ಈಗ ನಮಗೆ ಗಾಂಧೀಜಿ ನೆನಪಾಗಬೇಕಿದೆ. ‘ಎಲ್ಲರ ಆಸೆಗಳನ್ನು ಪೂರೈಸುವಷ್ಟು ಕ್ಷಮತೆ ಈ ಭೂಮಿಗಿದೆ; ಆದರೆ ಎಲ್ಲರ ದುರಾಸೆಗಳನ್ನಲ್ಲ’ ಎಂದು ಆ ತಾತ ಅಂದೇ ಹೇಳಿದ ಮಾತು ಇಂದಿನ ಮೊಮ್ಮಕ್ಕಳಮನಕ್ಕಿಳಿಯುವಂತೆ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT