ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ: ಕಲ್ಯಾಣ ಕರ್ನಾಟಕದ ಸಾಕ್ಷಿಪ್ರಜ್ಞೆ ಶಾಂತರಸ

Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಕಲ್ಯಾಣ ಕರ್ನಾಟಕ ಸೊಗಡಿನ ಸಾಹಿತಿ ಶಾಂತರಸರ (ಏಪ್ರಿಲ್‌ 4,1924) ಶತಮಾನೋತ್ಸವ ಸಮಾರಂಭವನ್ನು ಇಂದು ರಾಯಚೂರಿನ ಎಸ್‌.ಆರ್‌.ಕೆ. ಮಹಾವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಲ್ಲಿ ಪುಸ್ತಕ ಬಿಡುಗಡೆ, ಉಪನ್ಯಾಸ ಸಹ ನಡೆಯಲಿವೆ.

***

‘ಜಿಗಿದು ಹೋದವು ತಾರೆ ಎಂದೋ ನೀಲಾಂಬರದ ಅಂಗಳಕೆ
ಯಾರು ತರುವರು ಮರಳಿ ಈ ನೆಲಕೆ ರಂಗೋಲಿ ಹಾಕಲಿಕೆ’

ಕಲ್ಯಾಣ ಕರ್ನಾಟಕದ ಕದಡಿ ಹೋದ ಕನಸು, ದುರಂತ, ಹಾಡುಪಾಡು, ಆಶಾವಾದವನ್ನು ಗಜಲ್‌ಗಳ ಮೂಲಕ ರೂಪಕನಿಷ್ಠವಾಗಿ ತೋಡಿಕೊಂಡ ಕವಿ ಶಾಂತರಸ.

ಲೇಖಕ, ಕಥೆಗಾರ, ನಾಟಕಕಾರ, ಸಂಶೋಧಕ, ಹೋರಾಟಗಾರ–ಹೀಗೆ ಹಲವು ರೂಪಗಳಲ್ಲಿ ಕಾಣಿಸಿಕೊಂಡಿದ್ದ ಅವರು, ರಾಯಚೂರು ಜಿಲ್ಲೆಯ ಹೆಂಬೇರಾಳ ಗ್ರಾಮದ ಚನ್ನಬಸವಯ್ಯ ಹಿರೇಮಠ ಮತ್ತು ಸಿದ್ದಲಿಂಗಮ್ಮನವರ ಪುತ್ರ. ಅವರ ಮೊದಲು ಹೆಸರು ಶಾಂತಯ್ಯ. ಬಾಲ್ಯದಲ್ಲಿಯೇ ಚುರುಕಾಗಿದ್ದರು. ಹೊಟ್ಟೆಪಾಡಿಗಾಗಿ ಪಂಚಾಂಗ ಹೇಳುವ, ದೆವ್ವ ಬಿಡಿಸುವ, ಕರ್ಮಠ ವಿಧಿವಿಧಾನಗಳನ್ನು ಅನುಸರಿಸುವ ತಂದೆಯ ಕೆಲಸಗಳನ್ನು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡಿದ್ದರು.

ಶಾಂತರಸರು ರಾಯಚೂರಿನಲ್ಲಿ ನೆಲೆಯೂರಿದ್ದರು. ಅಧ್ಯಾಪನ, ಬರವಣಿಗೆಗೆ ತಮ್ಮ ಬದುಕನ್ನು ಸೀಮಿತಗೊಳಿಸದೆ ನಿತ್ಯ ನಡೆಯುವ ಮೋಸ, ತಾರತಮ್ಯ ನೀತಿಯ ತಲ್ಲಣಗಳಿಗೆ ನಿರಂತರವಾಗಿ ಪ್ರತಿರೋಧ ಒಡ್ಡುತ್ತಿದ್ದರು. ಕನ್ನಡ ನಾಡು-ನುಡಿ, ನೆಲ–ಜಲ, ಪರಿಸರಕ್ಕೆ ಹಾನಿಯಾದರೆ ಸಿಡಿಮಿಡಿಗೊಳ್ಳುತ್ತಿದ್ದರು. ಮಲತಾಯಿ ಧೋರಣೆಯನ್ನು ಎಂದೂ ಸಹಿಸುತ್ತಿರಲಿಲ್ಲ.

ಅವರು ‘ಸಂಗಡಿಗರ ಸಮಿತಿ’ಯನ್ನು ಹುಟ್ಟುಹಾಕಿ ಉಪನ್ಯಾಸ, ಸಂಗೀತ, ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ರಾಯಚೂರು ಸುತ್ತಮುತ್ತಲಿನ ಸಾಂಪ್ರದಾಯಿಕ ಮಠಗಳಲ್ಲಿ ‘ಬಸವ ಜಯಂತಿ’ಯನ್ನು ಆಚರಿಸಿ ಅಸಮಾನತೆ, ಅಸ್ಪೃಶ್ಯತೆಯ ವಿರುದ್ಧ ಸಂಘರ್ಷಕ್ಕೆ ಇಳಿದರು. ‘ಸತ್ಯಸ್ನೇಹಿ’ ಪ್ರಕಾಶನವನ್ನು ಆರಂಭಿಸಿ ಎಲೆಮರೆಕಾಯಿಯಂತಿರುವ ಲೇಖಕರ ಕನಸು, ಕನವರಿಕೆ, ಪಿಸುಮಾತುಗಳ ಸೃಜನಶೀಲ ಅಭಿವ್ಯಕ್ತಿಗೆ ಪ್ರಕಟಣೆ ಭಾಗ್ಯವನ್ನು ಕಲ್ಪಿಸಿದರು. ಇದು ಕಲ್ಯಾಣ ಕರ್ನಾಟಕದ ಸಾಹಿತಿಗಳ ಬೆಳವಣಿಗೆಗೂ ಕಾರಣವಾಯಿತು. ಸಿರವಾರದ ‘ಉಮಾಪತಿ ಚುಕ್ಕಿ ಪ್ರತಿಷ್ಠಾನ’ದಿಂದ ಲೇಖಕರಿಗೆ ಪುಸ್ತಕ ಪ್ರಶಸ್ತಿ ನೀಡುತ್ತಿದ್ದರು. ಸಿದ್ದರಾಮ ಜಂಬಲದಿನ್ನಿ, ಗಜಲ್ ಗುಂಡಮ್ಮರಿಂದ ಸಂಗೀತ, ತತ್ವಪದ ಗಾಯನ ನಡೆಯುವಂತೆ ನೋಡಿಕೊಂಡರು. ತಾವಿದ್ದ ನೆಲದಲ್ಲಿ ಸಾಂಸ್ಕೃತಿಕ ಹಸಿರನ್ನು ಉಕ್ಕಿಸುವ ಕೆಲಸವನ್ನು ಬಿಡದೆ ಮಾಡಿದರು.

ಚಂದ್ರಕಾಂತ ಕುಸುನೂರು, ರಾಜಶೇಖರ ನೀರಮಾನ್ವಿಯೊಂದಿಗೆ ‘ಪ್ರತೀಕ’ ತ್ರೈಮಾಸಿಕ ಪತ್ರಿಕೆ ಹೊರತಂದರು. ಇದು ಯುವ ಮನಸುಗಳ ಪಿಸುಮಾತಿಗೆ, ಭಾವಲಹರಿಗೆ, ತೀವ್ರ ಸಂವೇದನೆಗಳಿಗೆ ವೇದಿಕೆಯಾಯಿತು. ಹೀಗಾಗಿಯೇ ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೀಕಾರ, ಬಿ.ಟಿ.ಲಲಿತಾ ನಾಯಕ, ಎಚ್.ಎಸ್. ಮುಕ್ತಾಯಕ್ಕರ ಹೊಸನುಡಿಗಟ್ಟಿನ ಕವಿತೆಗಳು ಅಲ್ಲಿ ಬೆಳಗಿದವು.

ಪಿ.ಲಂಕೇಶರ ‘ಅಕ್ಷರ ಹೊಸ ಕಾವ್ಯ’ ಪ್ರಾತಿನಿಧಿಕ ಸಂಕಲನದಂತೆ, ಬುದ್ದಣ್ಣ ಹಿಂಗಮಿರೆ ಅವರು ಧಾರವಾಡದಿಂದ ‘ಹೊಸ ಜನಾಂಗದ ಕವಿತೆ’ಯನ್ನು ತಂದರು. ಅಲ್ಲಿ ಕಲ್ಯಾಣ ಕರ್ನಾಟಕದ ಪ್ರತಿಭೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಕ್ಕೆ ಒಳಪಡಿಸಲಾಗಿತ್ತು. ಇದು ಶಾಂತರಸರ ಸ್ವಾಭಿಮಾನವನ್ನು ಕೆಣಕಿತು. ಆಗ ‘ಬೆನ್ನ ಹಿಂದಿನ ಬೆಳಕು’ ಪ್ರಾತಿನಿಧಿಕ ಸಂಕಲನ ಪ್ರಕಟಿಸಿದರು. ‘ಪರಿಸರ, ಪ್ರೋತ್ಸಾಹ, ಅವಕಾಶಗಳ ಬಲದಿಂದ ಮುಂದೆ ಹೋದವರು ಈ ಭಾಗದ ಬೆಳಕನ್ನು ಗುರುತಿಸಲಿಲ್ಲ. ಹೀಗಾದರೆ ಇಲ್ಲಿ ಬೆಳಕೇ ಇಲ್ಲವೆಂಬ ಭ್ರಮೆ ಹುಟ್ಟಬಹುದು. ಕನ್ನಡದ ಪ್ರಾಮಾಣಿಕ ಓದುಗ ಐತಿಹಾಸಿಕ ಸತ್ಯವಾದ ಬೆಳಕಿನಿಂದ ವಂಚಿತನಾಗಬಹುದು. ದಯವಿಟ್ಟು ಹಿಂದಿರುಗಿ ನೋಡಿ ಬೆನ್ನ ಹಿಂದಿನ ಬೆಳಕು’ ಎಂದರು.

ಕಲ್ಯಾಣ ಕರ್ನಾಟಕದ ಬಗೆಗೆ ಎಲ್ಲಿಲ್ಲದ ಅಭಿಮಾನ. ಈ ಭಾಗಕ್ಕೆ ಅನ್ಯಾಯವಾದಾಗಲೆಲ್ಲ ‘ನಾಗರಿಕ ವೇದಿಕೆ’ಯಿಂದ ವ್ಯವಸ್ಥೆಯ ವಿರುದ್ದ ‘ಲಭೋ.. ಲಭೋ..’ ಹೊಯ್ಯಕೊಳ್ಳುತ್ತ ವಿಶಿಷ್ಟವಾದ ಬಗೆಯಲ್ಲಿ ಪ್ರತಿಭಟಿಸುತ್ತಿದ್ದರು. ಶಾಂತರಸರಿಗೆ ಕರ್ನಾಟಕ ಸರ್ಕಾರ 1992 ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪ್ರಕಟಿಸಿತು. ಕನ್ನಡ ಭಾಷೆಯ ಬಗೆಗಿನ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಪ್ರಶಸ್ತಿಯನ್ನು ನಿರಾಕರಿಸಿದ್ದು ಇತಿಹಾಸ.

ಶಾಂತರಸರು ಸತ್ಯಸ್ನೇಹ (ನಾಟಕ), ಮುಸುಕು ತೆರೆ ಮಾನಸಗಳ್ಳಿ, ಬಯಲುಸೀಮೆಯ ಬಿಸಿಲು (ಕಾವ್ಯ) ಹೊರತಂದರು. ಪ್ರೀತಿ, ಪ್ರೇಮ, ಪ್ರತಿಭಟನೆ, ಆಕ್ರೋಶ, ನಿತ್ಯ ಬದುಕಿನ ಸಂಕಟ, ಭಾವತೀವ್ರತೆಯನ್ನು ಕಾವ್ಯದುದ್ದಕ್ಕೂ ತೆರೆದಿಟ್ಟರು. ನವೋದಯ, ನವ್ಯ ಮಾದರಿಯ ಕವಿತೆಗಳು ಈ ಹೊತ್ತಿಗೂ ತಾಜಾತನವನ್ನು ಉಳಿಸಿಕೊಂಡಿವೆ. ನೆಲದ ಕಸುವು ಅಲ್ಲಿ ಮಿಂಚಿದೆ. ಕನ್ನಡ ಕಾವ್ಯಲೋಕಕ್ಕೆ ‘ಗಜಲ್’ ರೂಪವನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಕನ್ನಡದಲ್ಲಿ ಒಂದು ಪರಂಪರೆಯನ್ನೇ ನಿರ್ಮಾಣ ಮಾಡಿದ್ದಾರೆ. ಅವರ ‘ಗಜಲ್ ಮತ್ತು ಬಿಡಿ ದ್ವಿಪದಿ’ ಒಂದು ಅಪರೂಪದ ಸಂಕಲನ. ಈ ರೂಪ ಒಳಗು ಮಾಡಿಕೊಂಡಿರುವ ಮತ್ಲಾ, ಕಾಫೀಯಾ, ರದೀಫ್, ಮಕ್ತಾ ಛಂದೋಲಯಗಳನ್ನು ಪ್ರಸ್ತಾವನೆಯಲ್ಲಿ ಸೋದಾಹರಣವಾಗಿ ವಿಶ್ಲೇಷಿಸಿದ್ದಾರೆ.

‘‘ಏಸೋ ದಿನಗಳ ಬಳಿಕ ಓಲೆ ಬಂದಿದೆಯವಳ ಏನಿದೆಯೋ ಅಲ್ಲಿ.
ಮುನಿಸು ಒಲವೋ ಅದನು ಸಹಿಸಲಿಕೆ ಬಟ್ಟಲವ ತುಂಬಿಕೊಡು ಸಾಕಿ’’.

ವಿರಹ, ತೊಳಲಾಟ, ಚಡಪಡಿಕೆ, ವಿಪ್ರಲಂಭ, ಯಾತನೆಯ ಭಾವದ ಗಜಲ್‌ಗಳು ಮಧುರವಾಗಿವೆ. ಮತ್ತೆ ಮತ್ತೆ ಮೆಲುಕು ಹಾಕುವಂತಿವೆ. ಗಜಲ್‌ಗಳ ಭಾಷೆ ಕೋಮಲವಾಗಿದೆ. ಕನ್ನಡ ಕಾವ್ಯಲೋಕಕ್ಕೆ ಅವರ ಇನ್ನೊಂದು ಸೇರ್ಪಡೆ ಎಂದರೆ ‘ಉರ್ದು ಕಾವ್ಯದಲ್ಲಿ ಮದಿರೆ ಮತ್ತು ಯೌವನ’ ಅಲ್ಲಿನ ಇನ್ನೂರು ದ್ವಿಪದಿಗಳು ಅಪ್ಪಟ ಕನ್ನಡದವೇ ಎನ್ನುವಷ್ಟರ ಮಟ್ಟಿಗೆ ಸೊಗಸಾಗಿವೆ.

ಶಾಂತರಸರು ಅನನ್ಯ ಕಥೆಗಾರರು. ಅವರ ಬಡೇಸಾಬು ಪುರಾಣ, ನಾಯಿ ಮತ್ತು ಪಿಂಚಣಿ, ಉರಿದ ಬದುಕು ಸಂಕಲನಗಳಲ್ಲಿ ಒಂದು ಅದ್ಭುತಲೋಕವೇ ತೆರೆದುಕೊಂಡಿದೆ. ದೇಸಿಯ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಂಡರು. ಬಿಸಿಲ ಬದುಕು, ರಜಾಕಾರರ ಹಾವಳಿ, ಹಿಂಸೆ, ಪ್ರೀತಿ, ಲೈಂಗಿಕ ಶೋಷಣೆಯಿದೆ. ಪಾತ್ರಗಳ ಚಹರೆ, ಮಾತು, ಬದುಕಿನ ವಿನ್ಯಾಸಗಳು ಸಹಜವಾಗಿ ಮೂಡಿವೆ. ಅವರ ಕಥನಕಲೆ, ತಂತ್ರ, ಶೈಲಿ ಆಪ್ತವಾಗುವಂತಿವೆ. ಬದುಕಿನ ಅನೇಕ ನಿಷ್ಠುರ ಸತ್ಯಗಳೇ ಅಲ್ಲಿ ಕಥೆಗಳಾಗಿವೆ. ಕತೆಗಳ ಮೇಲೆ ಸುಮ್ಮನೆ ಕಣ್ಣಾಡಿಸಿದರೆ ಸಾಕು ಇಡೀ ಕಲ್ಯಾಣ ಕರ್ನಾಟಕದ ದರ್ಶನವಾಗುತ್ತ ಹೋಗುತ್ತದೆ.

ಶಾಂತರಸರ ‘ಸಣ್ಣ ಗೌಡಸಾನಿ’, ಮಿರ್ಜಾ ರುಸ್ವಾರ ‘ಉಮ್ರಾವೋ ಜಾನ್ ಅದಾ’ ಉರ್ದು  ಅನುವಾದಿತ ಕಾದಂಬರಿ ಕಾವ್ಯಾತ್ಮಕವಾಗಿವೆ. ಅಷ್ಟೇ ಮನೋಜ್ಞವಾಗಿ ಅನುವಾದಗೊಂಡಿದೆ. 

ಕಲ್ಯಾಣ ಕರ್ನಾಟಕದ ಸಾಕ್ಷಿಪ್ರಜ್ಞೆಯಂತೆ, ಪ್ರಶಾಂತ ಹಸಿರು ದೀಪದಂತಿದ್ದ ಶಾಂತರಸರು ಏನಾದರೂ ಮಾಡಬೇಕು ಎಂದು ಸದಾ ಬಡಬಡಿಸುತ್ತಿದ್ದರು. ಅವರ ಉತ್ಸಾಹ, ಕ್ರಿಯಾಶೀಲತೆ ಅನುಕರಣೀಯವಾಗಿತ್ತು.

‘ಮುಗಿಯ ಬಂದಿದೆ ಎಣ್ಣೆ ದೀಪದಲಿ ಮಾಡುವುದು ಬಹಳವಿತ್ತು

ಕತ್ತಲೆಯನ್ನಪ್ಪಿದ್ದೆ ಉರಿವಾಗ ನೋಡುವುದು ಬಹಳವಿತ್ತು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT