ಭಾರತೀಯ ಭಕ್ತಿ ಪರಂಪರೆಯ ಮೊದಲಿಗರಲ್ಲೊಬ್ಬರಾದ ಕನಕದಾಸರೆಂದರೆ ಕರ್ನಾಟಕದ ಜನರಿಗೆ ಮೊದಲು ನೆನಪಾಗುವುದು ಡಾ.ರಾಜ್ಕುಮಾರ್ ಅಭಿನಯದ ‘ಭಕ್ತ ಕನಕದಾಸ’ ಸಿನಿಮಾ. 60ರ ದಶಕದಲ್ಲಿ ಬಂದ ಆ ಸಿನಿಮಾದಲ್ಲಿ ಮೂಡಿಬಂದ ಕನಕನೇ ನಿಜವಾದ ಕನಕ, ಅಲ್ಲಿರುವುದೇ ಕನಕನ ನಿಜವಾದ ಜೀವನಚರಿತ್ರೆ ಎಂದು ಜನ ಭಕ್ತಿಪೂರ್ವಕವಾಗಿ ನಂಬಿದ್ದಾರೆ. ನಂತರದ ದಶಕಗಳಲ್ಲಿ ಕನಕದಾಸರ ಕುರಿತು ಬೆರಳೆಣಿಕೆಯಷ್ಟು ನಾಟಕಗಳು, ಕಾವ್ಯಗಳು ಬಂದರೂ, ಆ ನಂಬಿಕೆಗೆ ಮಾತ್ರ ಚ್ಯುತಿ ಬಂದಿಲ್ಲ.

ಇನ್ನೊಂದೆಡೆ, ಜನಪದರ ಡೊಳ್ಳಿನ ಪದ, ತ್ರಿಪದಿ, ಏಕತಾರಿ ಹಾಡು, ಗೀಗೀ ಪದಗಳಲ್ಲಿ, ಕನಕನ ಕಿಂಡಿಯ ಐತಿಹ್ಯ, ಪಠ್ಯಪುಸ್ತಕದ ಪಾಠಗಳಲ್ಲಿ, ಕೀರ್ತನೆಗಳಲ್ಲಿ ಕನಕರ ಬದುಕು ಜೀವಂತವಾಗಿದೆ ಎಂಬುದು ವಿಶೇಷ. ಅಧ್ಯಯನಪೀಠ, ಕೇಂದ್ರಗಳಲ್ಲಿ ಕನಕದಾಸರ ಜೀವನ–ಕೃತಿಗಳ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆದಿವೆ.

ಇಂಥ ಸನ್ನಿವೇಶದಲ್ಲಿ, ಯಕ್ಷಗಾನದ ಬಾಗಿಲು ತೆರೆದು ಕನಕದಾಸರು ಬಂದಿದ್ದಾರೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡದ ಕಲಾವಿದರು ಇದನ್ನು ಆಗು ಮಾಡಿದ್ದಾರೆ.

ಪ್ರಯೋಗಗಳ ರಂಗಭೂಮಿಯಾದ ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಈ ತಂಡದ ಕಲಾವಿದರು ‘ಸಂತ ಕವಿ ಕನಕದಾಸ–ಯಕ್ಷಗಾನ ಪ್ರಸಂಗ’ವನ್ನು ಅಭಿನಯಿಸಿ ಪ್ರದರ್ಶಕ ಕಲಾ ಪ್ರಕಾರಗಳ ಅಭಿವ್ಯಕ್ತಿ ಸಾಧ್ಯತೆ–ಸವಾಲುಗಳ ಕಡೆಗೂ ಗಮನ ಸೆಳೆದರು. ತಮ್ಮ 25 ವರ್ಷಗಳ ಸುದೀರ್ಘ ನಡಿಗೆಯಲ್ಲಿ ಇಂಥ ಸಾಹಸಮಯ ಪ್ರಯೋಗ–ಅನುಭವಗಳ ಜೊತೆಗೆ ಸಾಗುತ್ತಾ, ಪ್ರೇಕ್ಷಕರಲ್ಲೂ ಹೊಸ ಬಗೆಯ ಅಭಿರುಚಿಯನ್ನೂ ನಿರ್ಮಿಸುತ್ತಾ ಬಂದಿದ್ದಾರೆ ಎಂಬುದೇ ವಿಶೇಷ.

ಸಣ್ಣಾಟ, ದೊಡ್ಡಾಟ ಸೇರಿದಂತೆ ಜನಪದ ರಂಗ ಪ್ರಕಾರಗಳ ಉತ್ಸವಕ್ಕೆ ಸಾಕ್ಷಿಯಾಗಿದ್ದ ರಂಗಾಯಣವನ್ನು ಮರುರೂಪಿಸುವ ಪ್ರಯತ್ನವಾಗಿಯೂ ಇದು ಗಮನ ಸೆಳೆಯಿತು.

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಬಸವಣ್ಣ, ಅಕ್ಕಮಹಾದೇವಿ, ಒಕ್ಕಲಿಗರ ಆರಾಧ್ಯದೈವವಾದ ಕಾಲಭೈರವೇಶ್ವರ, ಕುರುಬ ಸಮುದಾಯದ ಆರಾಧ್ಯದೈವವಾದ ಬೀರಲಿಂಗೇಶ್ವರರ ಪ್ರಸಂಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ ನೂರಾರು ಪ್ರದರ್ಶನಗಳನ್ನು ನೀಡಿ, ಈಗಾಗಲೇ ಗಮನ ಸೆಳೆದಿರುವ ವಿದ್ವಾನ್ ದತ್ತಮೂರ್ತಿ ಭಟ್ಟರ ನೇತೃತ್ವದಲ್ಲೇ ಈ ಪ್ರಯೋಗವೂ ನಡೆಯಿತು. ಭಿನ್ನ ನೆಲೆಗಳಲ್ಲಿ ಕನಕನ ಪಾತ್ರವನ್ನು ತಾವೇ ನಿರ್ವಹಿಸಿ, ಅಮೋಘ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಂಡರು.

ಒಂದೂವರೆ ವರ್ಷದ ಹಿಂದೆ ಕನಕ ಜಯಂತಿಯ ವೇಳೆಯಲ್ಲಿ ಶಿವಮೊಗ್ಗದಲ್ಲಿ ಈ ಪ್ರಯೋಗದ ಮೊದಲ ಪ್ರದರ್ಶನ ನಡೆದಿತ್ತು. ಇದೀಗ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಮತ್ತೆ ಪ್ರದರ್ಶಿಸಲಾಯಿತು.

90 ನಿಮಿಷಗಳ ಅವಧಿಯ ಪ್ರದರ್ಶನದಲ್ಲಿ ಕನಕದಾಸರ ಜೀವನವು 15 ವಿಭಿನ್ನ ದೃಶ್ಯಾವಳಿಗಳಲ್ಲಿ ಮೂಡಿಬಂತು. ತಿಮ್ಮಪ್ಪನಾಯಕ ಕನಕದಾಸರಾಗುವವರೆಗಿನ ಪೂರ್ವಾರ್ಧ ಹಾಗೂ ನಂತರದ ಕಥಾನಕವುಳ್ಳ ಉತ್ತರಾರ್ಧವು, ಯಕ್ಷಗಾನಕ್ಕೆ ಪ್ರಸಂಗವನ್ನು ಒಗ್ಗಿಸುವ ತಂಡದ ಪರಿಶ್ರಮವನ್ನೂ ತೋರಿತು.

ಸಂತಾನಕ್ಕಾಗಿ ತಿರುಪತಿ ತಿಮ್ಮಪ್ಪನಲ್ಲಿ ಬೀರಪ್ಪನಾಯಕ–ಬಚ್ಚಮ್ಮ ದಂಪತಿಯ ಹರಕೆ, ತಿಮ್ಮಪ್ಪ ನಾಯಕನ ಜನನ, ಆತನ ವೈಭೋಗ, ಯುದ್ಧ, ನಂತರ ಮೂಡುವ ವೈರಾಗ್ಯ ಮತ್ತು ಕನಕದಾಸರಾದ ನಂತರದ ಬದುಕು, ನಿಷ್ಕಳಂಕ ಭಕ್ತಿ, ಜಾತೀಯತೆಯು ತಂದೊಡ್ಡುವ ಸಂಕಟಗಳು, ಅದನ್ನು ಮೀರಿಕೊಳ್ಳುವ ಕನಕರ ಸಾತ್ವಿಕ ಆಕ್ರೋಶ, ನಿಜಭಕ್ತಿ, ಆ ಮೂಲಕವೇ ಕಾಣುವ ಕೃಷ್ಣ ದರ್ಶನ ಮತ್ತು ಸಮಾಜ ಪ್ರೀತಿ, ಮುಕ್ತಿಯ ಕ್ಷಣಗಳೆಲ್ಲವೂ ಪ್ರಸಂಗದಲ್ಲಿ ಮೇಳೈಸಿತು. ಎಂ.ಎ.ಹೆಗಡೆ ದಂಟ್ಕಲ್ ಅವರು ರಚಿಸಿರುವ ಪ್ರಸಂಗವನ್ನು ಈ ತಂಡ ಅಭಿನಯಿಸಿತು.

ಯಕ್ಷಗಾನ–ನಾಟಕ ಸಮನ್ವಯ..

ಚಾರಿತ್ರಿಕ ವ್ಯಕ್ತಿಗಳ ಪ್ರಸಂಗದಲ್ಲಿ ಯಕ್ಷಗಾನದ ಪೋಷಾಕನ್ನು ಒಂದೇ ಸಮನೆ ಧರಿಸಲು, ಕುಣಿಯಲು, ಅಭಿನಯಿಸಲು ಆಗದು ಎಂಬುದರ ಕಡೆಗೂ ಪ್ರಯೋಗ ಗಮನ ಸೆಳೆಯಿತು.

ತಿಮ್ಮಪ್ಪನಾಯಕನಾಗುವವರೆಗೂ ಕಿರೀಟ ಸೇರಿ ಯಕ್ಷಗಾನದ ಪೋಷಾಕನ್ನು ಧರಿಸಿ ಹಾಡು, ಕುಣಿತ, ಸಂಭಾಷಣೆಯ ತ್ರಿವಳಿ ಅಭಿವ್ಯಕ್ತಿಗೆ ಮೈಕೊಡುವ ಪಾತ್ರ ಮತ್ತು ರಂಗಸಜ್ಜಿಕೆಯು, ಪಾತ್ರದ ಮನಪರಿವರ್ತನೆಯಾಗುತ್ತಲೇ ಪೋಷಾಕನ್ನೂ ಪರಿವರ್ತಿಸಲೇಬೇಕಾದ ಅನಿವಾರ್ಯತೆ ಅದು. ಕನಕನಂತೆಯೇ ಉಳಿದ ಪಾತ್ರಗಳೂ ಪೋಷಾಕು, ಅಭಿನಯ, ಭಾಷಾಭಿವ್ಯಕ್ತಿಯೆಲ್ಲವನ್ನೂ ಬದಲಾಯಿಸಿಕೊಳ್ಳುತ್ತವೆ.

ಐತಿಹ್ಯಗಳಿಂದ ಕೂಡಿದ ವ್ಯಕ್ತಿತ್ವವೊಂದನ್ನು, ಅದು ಜನಮಾನಸದಲ್ಲಿ ಮೂಡಿರುವ ರೀತಿಯಲ್ಲೇ ಕಟ್ಟಿಕೊಡಲೇಬೇಕಾದಾಗ ಯಾವ ಕಲೆಗಾದರೂ ದಕ್ಕುವ ಅಭಿವ್ಯಕ್ತಿಯ ಅವಕಾಶ ಇಷ್ಟೇ. ಇದು ಕಲಾ ಪ್ರಕಾರಗಳ ನಡುವಿನ ಸಮನ್ವಯಕ್ಕೂ ದಾರಿ ಮಾಡಿದೆ. ಹೀಗಾಗಿಯೇ ಇಲ್ಲಿ ಯಕ್ಷಗಾನ, ಬಯಲಾಟ ಮತ್ತು ನಾಟಕ ಒಂದರೊಳಗೊಂಡು ಮೇಳೈಸುತ್ತವೆ.

ಬಿಳಿ ಪಂಚೆ, ತಂಬೂರಿ, ಕರಿದಾರ ಧರಿಸಿ ಸಾತ್ವಿಕ ಕನಕನಾಗಿ ರೂಪುಗೊಂಡ ಪಾತ್ರವು ವೇದಿಕೆಗೆ ಬಂದ ನಂತರದಿಂದ, ಪೋಷಾಕಿನ ಜೊತೆಗೆ ಭಾಗವತಿಕೆಯೂ ತನ್ನ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟುಕೊಟ್ಟು, ನಾಟಕದ ಹಾಡುಗಾರಿಕೆಯ ಶೈಲಿಯನ್ನು ಅಳವಡಿಸಿಕೊಳ್ಳುತ್ತದೆ. ನಂತರದ್ದೆಲ್ಲ, ನಾವು ನೀವೆಲ್ಲ ಇದುವರೆಗೂ ನಂಬಿರುವ ಕನಕದಾಸರ ತಥಾಕಥಿತ ಜೀವನ. ಕನಕರ ಕೃತಿಗಳ ಸಾಂದರ್ಭಿಕ ಉಲ್ಲೇಖ, ಆರ್ತಭಾವದಿಂದ ಜನಪ್ರಿಯ ಕೀರ್ತನೆಗಳ ಗಾಯನ. ದೈವದಲ್ಲಿ ಲೀನವಾಗುವ ಮುಕ್ತಿ ಸತ್ಯ.

‘ಚಾರಿತ್ರಿಕ ವ್ಯಕ್ತಿಗಳ ಪ್ರಸಂಗದಲ್ಲಿ ಯಕ್ಷಗಾನವೂ ಇರಬೇಕು, ಅದು ಜನ ಒಪ್ಪುವಂತೆಯೂ ಇರಬೇಕು. ಅಂಥ ವ್ಯಕ್ತಿತ್ವಗಳ ಮಹಾನ್ ಆಶಯವೂ ಹೊಸ ಪ್ರಕಾರದಲ್ಲಿ ಮೂಡಬೇಕೆಂಬುದೇ ನಮ್ಮ ಆಶಯ’ ಎನ್ನುವ ದತ್ತಮೂರ್ತಿ ಭಟ್ಟರು, ಇಂಥ ಪ್ರಸಂಗಗಳ ನಿರೂಪಣೆಗೂ ಮುನ್ನ ಮಾಡುವ ಸಿದ್ಧತೆ, ವಿದ್ವಾಂಸರ, ಸ್ವಾಮೀಜಿಗಳ ಭೇಟಿ, ಚರ್ಚೆ, ವೇದಿಕೆ ಪ್ರದರ್ಶನಕ್ಕೂ ಮುನ್ನ ನಡೆಸುವ ಪ್ರಯೋಗಾಭಿನಯಗಳ ಪರಿಶ್ರಮವೂ ದೊಡ್ಡದು.

ಬಸವಣ್ಣನ ಕುರಿತ ಯಕ್ಷಗಾನ ಪ್ರದರ್ಶನದ ವೇಳೆ, ಆರಂಭದಲ್ಲಿ ಗಣಪನ ಪ್ರಾರ್ಥನೆಗೆ ಅವಕಾಶ ನೀಡದೇ ಇದ್ದ ಒಂದು ಘಟನೆಯೂ ಅವರ ನೆನಪಿನಲ್ಲಿದೆ. ಹಾಗೆಯೇ, ಚಾರಿತ್ರಿಕ ವ್ಯಕ್ತಿಗಳ ಯಕ್ಷಗಾನ ಪ್ರಸಂಗಗಳ ಪ್ರಯೋಗದಲ್ಲಿ ಅವರ ಪರಿಶ್ರಮವನ್ನು ಅರಿತವರು, ಶಂಕರಾಚಾರ್ಯರ ಕುರಿತೂ ಯಕ್ಷಗಾನ ಪ್ರಸಂಗ ಮಾಡುವಂತೆ ಕೇಳಿಕೊಂಡಿದ್ದನ್ನು ನಯವಾಗಿ ನಿರಾಕರಿಸಿದ ನಿದರ್ಶನವೂ ಇದೆ. ಅವರಿಗೆ ತಮ್ಮ ಕಲಾಭಿವ್ಯಕ್ತಿಯ ಸಾಧ್ಯತೆಯೂ ಗೊತ್ತು, ಮಿತಿಯೂ ಗೊತ್ತು ಎಂಬುದಕ್ಕೆ ಇವೆರಡು ಸಾಕ್ಷಿ.

‘ಕನಕದಾಸರು, ಶಂಕರಾಚಾರ್ಯರ ಪಾತ್ರಕ್ಕೆ ಯಕ್ಷಗಾನದ ಕಿರೀಟ ಇಡಲಾಗದು. ಕಿರೀಟವಿಲ್ಲದೆ ಯಕ್ಷಗಾನವನ್ನೂ ಆಡಲಾಗದು. ಹೀಗಾಗಿ ತಿಮ್ಮಪ್ಪನಾಯಕನ ಪಾತ್ರಕ್ಕಷ್ಟೇ ಕಿರೀಟ ತೊಡಿಸಿದೆವು. ಕುಣಿಸಿದೆವು. ಸಂತ ಕನಕದಾಸರನ್ನು ಜನರ ಕಲ್ಪನೆಯಲ್ಲೇ ತೋರಿಸಿದೆವು. ಏಕೆಂದರೆ, ಚಾರಿತ್ರಿಕ ವ್ಯಕ್ತಿಗಳಿಗೂ, ಯಕ್ಷಗಾನಕ್ಕೂ ಅಪಚಾರವಾಗಬಾರದು’ ಎನ್ನುತ್ತಾರೆ ಅವರು.

ಈ ಸದಾಶಯವೇ ಯಾವುದೇ ಕಲೆ ಮತ್ತು ಅಭಿವ್ಯಕ್ತಿಯ ಮೂಲಸೆಲೆ. ಅದನ್ನು ಸಾಧಿಸಲು ಹೊರಟ ತಂಡವು ಬಹುದೂರ ಸಾಗಿ ಬಂದಿದೆ. ಈ ತಂಡದ ಹಿಮ್ಮೇಳದಲ್ಲಿದ್ದ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್, ಸುಬ್ರಹ್ಮಣ್ಯ ಭಂಡಾರಿ, ಮುಮ್ಮೇಳದಲ್ಲಿದ್ದ ಕೃಷ್ಣಯಾಜಿ ಬಳ್ಕೂರು, ಅಶೋಕ ಭಟ್, ಪ್ರಭಾಕರ ಹಾನಗಲ್, ಪ್ರಶಾಂತ್ ವರ್ಧನ್, ಸದಾಶಿವ ಯಲ್ಲಾಪುರ, ಮಹಾಬಲೇಶ್ವರ್ ಇಟಗಿ, ವೆಂಕಟೇಶ್ ಓಜಗಾರ್, ಅವಿನಾಶ್ ಕೊಪ್ಪ, ಎಂ.ಆರ್.ನಾಯ್ಕ ಇಡೀ ಪ್ರಸಂಗವನ್ನು ಕಳೆಗಟ್ಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.