ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವನಗಿರಿಯಲ್ಲಿ ಕನ್ನಡಾಂಬೆ

Last Updated 11 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಸುತ್ತಲೂ ಹಚ್ಚ ಹಸಿರು, ಬೀಸುವ ತಣ್ಣನೆಯ ಗಾಳಿಯ ನಡುವೆ ಇನ್ನೂರು ನಲ್ವತ್ತೆಂಟು ಮೆಟ್ಟಿಲನ್ನು ಒಂದೊಂದಾಗಿ ಏರುತ್ತಾ ಬೆಟ್ಟದ ತುದಿ ತಲುಪಿದರೆ, ಪುರಾತನ ಕಾಲದ ದೇಗುಲವೊಂದು ಎದುರಾಗುತ್ತದೆ. ಪೌಳಿ ದಾಟಿ, ಗರ್ಭಗುಡಿ ಮುಂದೆ ಎದುರು ನಿಂತರೆ, ಪುಷ್ಪಾಲಂಕೃತ ಭುವನೇಶ್ವರಿ ದೇವಿಯ ಮೂರ್ತಿ ನಿಮ್ಮನ್ನು ಸ್ವಾಗತಿಸುತ್ತದೆ.

ಇದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಬೆಟ್ಟದಲ್ಲಿರುವ ಭುವನೇಶ್ವರಿ ದೇವಿಯ ಆಲಯ. ಈ ದೇವಿಯನ್ನು ಕನ್ನಡದ ಅಧಿದೇವತೆ, ಕನ್ನಡಾಂಬೆ ಎಂದೆಲ್ಲ ಕರೆಯುತ್ತಾರೆ. ಸಿರಿವಂತ ಪ್ರಕೃತಿಯ ನಡುವೆ ಮುನ್ನೂರು ಅಡಿ ಎತ್ತರದ ಬೆಟ್ಟದಲ್ಲಿ ಈ ದೇವಾಲಯವಿದೆ. ಬೆಟ್ಟದ ಬುಡದಲ್ಲಿ ಸುಂದರ ಪುಷ್ಕರಣಿ ಇದೆ. ದೇವಾಲಯ ನವೀರಣಗೊಂಡಿದ್ದರೂ, ಪುರಾತನ ಶೈಲಿಯ ಗರ್ಭಗುಡಿಯನ್ನು ಹಾಗೆ ಉಳಿಸಿಕೊಳ್ಳಲಾಗಿದೆ. ಸುತ್ತಲಿನ ಚಂದ್ರ ಶಾಲೆ ಮತ್ತಿತರ ಕಟ್ಟಡಗಳನ್ನು ಭವ್ಯವಾಗಿ ನವೀಕರಿಸಲಾಗಿದೆ.

ಐತಿಹಾಸಿಕ ದೇಗುಲ
ಭುವನೇಶ್ವರಿ ದೇವಾಲಯಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಹೈವನಾಡು ಎಂದು ಕರೆಯಲಾಗುತ್ತಿದ್ದ ರಾಜ್ಯವನ್ನು ಶ್ವೇತಪುರ(ಈಗಿನ ಬಿಳಗಿ)ವನ್ನು ರಾಜಧಾನಿಯನ್ನಾಗಿಸಿ ಆಳಿದ ಅರಸರು ಭುವನಗಿರಿ ದೇವಾಲಯದ ಜೀರ್ಣೋದ್ಧಾರ ಮಾಡಿದರು. ಕ್ರಿ.ಶ 1475ರಿಂದ 1913ರವರೆಗೆ ಈ ಅರಸರ ವಂಶಾವಳಿಯನ್ನು ಗುರುತಿಸಲಾಗಿದೆ. 1614ರಲ್ಲಿ ಬಿಳಗಿ ಅರಸರು ಈ ದೇವಾಲಯಕ್ಕೆ ಕಲಶವಿಟ್ಟರು. ಅವರಲ್ಲಿ 18ನೇ ದೊರೆ ಬಸವೇಂದ್ರ ತನ್ನ ಪಟ್ಟಾಭಿಷೇಕದ ಸವಿನೆನಪಿಗಾಗಿ 10 ದಿನಗಳ ಕಾರ್ಯಕ್ರಮ ನೆರವೇರಿಸಿದ. ಆತ 1692ರಲ್ಲಿ ಶಿಲಾಮಯ ಗುಡಿಯನ್ನು ಕಟ್ಟಿಸಿ, ನಿತ್ಯಪೂಜೆಗಾಗಿ ದತ್ತಿಯ ವ್ಯವಸ್ಥೆ ಮಾಡಿದ. ಆ ಸಂದರ್ಭದಲ್ಲಿಯೇ ವಿಶಾಲವಾದ ಕೆರೆಯನ್ನೂ ಕಟ್ಟಿಸಿದ. ಬಿಳಗಿ ಅರಸರು ವಿಜಯನಗರದ ಮಾಂಡಲೀಕರಾಗಿದ್ದರು. ‘ಕರ್ನಾಟಕ ಶಬ್ದಾನುಸಾಶನಂ’ ಗ್ರಂಥದಲ್ಲಿ ಕನ್ನಡದ ವ್ಯಾಕರಣವನ್ನು ಪ್ರತಿಪಾದಿಸಿದ್ದ ಜೈನ ಮುನಿ ಭಟ್ಟಾಕಳಂಕರು ಬಿಳಗಿ ಅರಸರ ರಾಜಗುರುವಾಗಿದ್ದರು. ಈ ಎರಡೂ ಕಾರಣದಿಂದ ಬಿಳಗಿ ಅರಸರು ಕನ್ನಡದ ಅಧಿದೇವತೆಯ ದೇಗುಲ ನಿರ್ಮಿಸಿರಬಹುದು ಎಂಬ ಸಂಗತಿಗಳು ಪದ್ಮಾಕರ ಮಡಗಾಂವಕರ್ ಬರೆದ ಬಿಳಗಿ ಸಂಸ್ಥಾನ ಎಂಬ ಗ್ರಂಥದಲ್ಲಿ ದೊರೆಯುತ್ತದೆ. ‘ಭುವನಾಸುರನನ್ನು ವಧಿಸಿರುವ ಈಕೆ ಭುವನೇಶ್ವರಿ. ಈ ದೇವಿಯ ದೇಗುಲದ ಸ್ಥಾಪನೆಯ ಇತಿಹಾಸ ತಿಳಿಯದು. ದೇವಾಲಯ ನಿರ್ಮಾಣಕ್ಕೆ ನೂರಾರು ವರ್ಷಗಳ ಇತಿಹಾಸವಂತೂ ಇದೆ’ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಧರ ಭಟ್ ಮುತ್ತಿಗೆ.

‘ದೇಗುಲಕ್ಕೆ ವಾಹನ ಬರುವ ರಸ್ತೆ ಇತ್ತೀಚಿನ ವರ್ಷಗಳಲ್ಲಿ ಆಗಿದೆ. ಮೊದಲೆಲ್ಲ ಮೆಟ್ಟಿಲು ಏರಿಯೇ ಬರಬೇಕಾಗಿತ್ತು. ಎಷ್ಟೋ ಶತಮಾನ ಹಿಂದೆ ನಿರ್ಮಿಸಿದ್ದ ಈ ದೇಗುಲಕ್ಕೆ ಅಗತ್ಯವಾದ ಕಲ್ಲಿನ ಹಲಗೆ, ಕಂಬಗಳನ್ನು ಹೇಗೆ ತಂದರು ಎಂಬುದು ಅಚ್ಚರಿಯ ಸಂಗತಿ’ ಎಂಬುದು ಅವರ ಮಾತು.

ಸದ್ಯ, ಶ್ರೀಕಾಂತ ಕೆ ಹೆಗಡೆ ಗುಂಜಗೋಡು ಅಧ್ಯಕ್ಷತೆಯ, 16 ಸದಸ್ಯರ ಆಡಳಿತ ಮಂಡಳಿ ದೇಗುಲವನ್ನು ನಿರ್ವಹಣೆ ಮಾಡುತ್ತಿದೆ. ಬಿಳಗಿ ಸೀಮೆಯ ಎಲ್ಲರೂ ಭುವನಗಿರಿ ಅಮ್ಮನವರ ಭಕ್ತ ಸಮೂಹದಲ್ಲಿದ್ದಾರೆ.

ಭುವನದೇವಿಗೆ ಪ್ರತಿದಿನ ತ್ರಿಕಾಲ ಪೂಜೆ. ವಿಶೇಷ ಸಂದರ್ಭಗಳಲ್ಲಿ ಉತ್ಸವಗಳೂ ನಡೆಯುತ್ತವೆ. ವೈಶಾಖ ಬಹುಳ ಅಮಾವಾಸ್ಯೆಯಂದು ವಸಂತೋತ್ಸವ, ಆಶ್ವೀಜ ಶುದ್ಧ ಪಾಡ್ಯದಿಂದ ನವಮಿಯವರೆಗೆ ನವರಾತ್ರಿ, ದಶಮಿಯಂದು ವಿಜಯೋತ್ಸವ, ಕಾರ್ತಿಕ ಶುದ್ಧ ಹುಣ್ಣಿಮೆಯಂದು ತೆಪ್ಪೋತ್ಸವ ವನ ಭೋಜನ ನಡೆಯುತ್ತದೆ.

ಫೆ.16ರಿಂದಲೇ ಆರಂಭ
ಇದೇ 19ರಂದು ಭುವನಗಿರಿಯ ಭುವನೇಶ್ವರಿ ದೇವಿಯ ಮಹಾ ರಥೋತ್ಸವ ನಡೆಯಲಿದೆ. ಫೆ.16ರಿಂದ ಉತ್ಸವದ ಕಾರ್ಯಗಳು ಆರಂಭವಾಗಲಿವೆ. ಫೆ.17ರಂದು ಸಿಂಹ ಯಂತ್ರೋತ್ಸವ, ಫೆ. 18ರಂದು ಡೋಲಾ ಯಂತ್ರೋತ್ಸವ, ಫೆ.20ರಂದು ಕುಂಕುಮೋತ್ಸವ, ಫೆ,21ರಂದು ಪೂರ್ಣಾಹುತಿ, ಪೂರ್ಣ ಕುಂಭಾಭಿಷೇಕ, ಅಂಕುರ ಪ್ರಸಾದ ವಿತರಣೆ ನಡೆಯಲಿದೆ.

**
ಸರ್ಕಾರ ಮಹತ್ವ ಗುರುತಿಸಲಿ

‘ಕನ್ನಡ ನಾಡಿನ ಅಧಿದೇವತೆ ನೆಲೆಸಿರುವ ಭುವನಗಿರಿಯ ಭುವನೇಶ್ವರಿ ದೇಗುಲದ ಮಹತ್ವವನ್ನು ಸರ್ಕಾರ ಗುರುತಿಸಬೇಕು. ಇಲ್ಲಿ ಸರ್ಕಾರದ ಕನ್ನಡ ರಾಜ್ಯೋತ್ಸವ ನಡೆಯಬೇಕು’ ಎಂಬ ಬೇಡಿಕೆ ಆಗಾಗ ಕನ್ನಡಾಭಿಮಾನಿಗಳಿಂದ ಕೇಳಿಬರುತ್ತಿದೆ. ಆದರೆ ಈವರೆಗೆ ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಕೆಲವು ವರ್ಷಗಳ ಹಿಂದೆ ಕರ್ನಾಟಕ ರಾಜ್ಯೋತ್ಸವ ಆಚರಣೆಗಾಗಿ ರಾಜ್ಯದ ಕನ್ನಡ ಸಂಘಟನೆಯೊಂದು ಈ ದೇವಾಲಯದಿಂದ ಜ್ಯೋತಿ ತೆಗೆದುಕೊಂಡು ಹೋಗಿತ್ತು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಕೆಲವು ವರ್ಷ ಇಲ್ಲಿ ಕನ್ನಡ ರಾಜ್ಯೋತ್ಸವ ಆಚಿರಿಸಿದೆ. ಈಗಲೂ ಪ್ರತಿ ವರ್ಷ ಮಾತೃ ವಂದನಾ ಸಮಿತಿ ಎಂಬ ಸಂಘಟನೆ ರಾಜ್ಯೋತ್ಸವ ಆಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT