ಇತ್ತೀಚೆಗೆ ಮೈಸೂರಿನ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ವಿಚಿತ್ರ ಸನ್ನಿವೇಶವೊಂದು ಎದುರಾಯಿತು. ಅಂಗಡಿಯ ಮಾಲೀಕ ಬಂದ ಗಿರಾಕಿಗಳಿಗೆ ಹಾಗಲಕಾಯಿ ತಗೊಳ್ಳಿ ಸಾರ್... ಶುಗರ್ಗೆ ಒಳ್ಳೇದು, ನವಿಲುಕೋಸು ಬಿ.ಪಿಗೆ ಒಳ್ಳೇದು, ಮೂಲಂಗಿ ತಗೊಳ್ಳಿ...ನುಗ್ಗೆಸೊಪ್ಪು ತಗೊಳ್ಳಿ... ಎಂದು ಪ್ರತಿ ತರಕಾರಿಯಲ್ಲಿರುವ ಔಷಧೀಯ ಗುಣಗಳನ್ನು ಕಂಠಪಾಠ ಮಾಡಿದಂತೆ ಹೇಳುತ್ತಿದ್ದ.

ಅವನ ವಿವರಣೆಗಳು ನಿಲ್ಲದೆ ಮುಂದುವರಿದಿದ್ದಾಗ ಇವನು ತರಕಾರಿ ಮಾರುತ್ತಿದ್ದಾನೋ, ಇಲ್ಲವೇ ಔಷಧ ಮಾರುತ್ತಿದ್ದಾನೋ ಎನ್ನುವ ಗೊಂದಲ ಶುರುವಾಯಿತು.

ಆ ವಿಷಯದ ಕುರಿತು ಕೊಂಚ ಯೋಚಿಸಲು ಆರಂಭಿಸಿದೆವು. ಹೌದಲ್ಲ. ಈ ಸಸ್ಯಗಳೇಕೆ ಮನುಷ್ಯನ ಕಾಯಿಲೆಗಳಿಗೆ ಔಷಧ ತಯಾರು ಮಾಡಬೇಕು? ಅದರಿಂದ ಅವುಗಳಿಗೇನು ಲಾಭ? ಎಂಬ ಪ್ರಶ್ನೆಗಳು ಎದುರಾದವು. ಜೊತೆಗೆ ಪ್ರಕೃತಿ ತನಗೆ ಅವಶ್ಯವಿಲ್ಲದ ವಸ್ತುಗಳನ್ನು ಎಂದೂ ತಯಾರು ಮಾಡುವುದಿಲ್ಲವೆಂಬ ಸರಳ ತತ್ವವೂ ನೆನಪಿಗೆ ಬಂತು.

ಮೇಲಿನ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮಾನವನ ಇತಿಹಾಸ ಮತ್ತು ಸಸ್ಯಸಂಕುಲಗಳ ವಿಕಾಸದ ಹಾದಿಯ ಪುಟಗಳಲ್ಲಿ ಅಲೆದಾಡುವುದೊಂದೇ ಮಾರ್ಗವೆನಿಸಿತು.

ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ ಮನುಷ್ಯ ಭೂಮಿಗೆ ಆಗಮಿಸಿದ. ಆ ದಿನಗಳಲ್ಲಿ ಅವನ ಬದುಕು ಸುಲಭವಾಗಿರಲಿಲ್ಲ. ನಾನಾ ಬಗೆಯ ನೂರೆಂಟು ಸವಾಲುಗಳು ಅವನ ಮುಂದಿದ್ದವು. ಭೂಪಟದ ಅಸ್ಪಷ್ಟ ಹಾದಿಗಳಲ್ಲಿ ಅಲೆದಾಡಿಕೊಂಡು, ಸಣ್ಣಪುಟ್ಟ ಜೀವಿಗಳನ್ನು ಬೇಟೆಯಾಡುತ್ತಾ, ಹಣ್ಣು, ಕಾಯಿ, ಸೊಪ್ಪು ಸದೆಗಳನ್ನು ಹುಡುಕುತ್ತಾ ಅಲೆಮಾರಿಯಾಗಿ ಬದುಕು ಸಾಗಿಸಿದ್ದ.

ಈ ಪ್ರಯಾಣದಲ್ಲಿ ಅವನಿಗೆ ಸಣ್ಣಪುಟ್ಟ ಕಾಯಿಲೆಗಳು ಎದುರಾಗಿರಬಹುದು. ಆ ಅಸಹಾಯಕ ಸನ್ನಿವೇಶದಲ್ಲಿ ಎಲೆ, ಚಿಗುರು, ಬೀಜ, ಮರಗಿಡಗಳ ತೊಗಟೆಗಳನ್ನೆಲ್ಲಾ ತಿಂದು ನೋಡಿರಬಹುದು. ಇಂತಹ ನೂರಾರು ಪ್ರಯತ್ನಗಳಲ್ಲಿ ಯಾವುದೋ ಒಂದೆರಡು ಸಸ್ಯಗಳು ಔಷಧವಾಗಿ ಕೆಲಸ ಮಾಡಿರಬಹುದು. ಹೀಗೆ ಸಾವಿರಾರು ವರ್ಷಗಳ ಪ್ರಯೋಗಾತ್ಮಕ ಕಲಿಕೆಯ ಮಾರ್ಗದಲ್ಲಿ ಔಷಧೀಯ ಗುಣಗಳಿರುವ ಹಲವು ಗಿಡಮೂಲಿಕೆಗಳನ್ನು ಆತ ಪತ್ತೆ ಹಚ್ಚಿರಬಹುದು. ಬಹುಶಃ ಔಷಧ ಸಸ್ಯಗಳ ಆರಂಭದ ಪುಟಗಳು ಹೀಗೆ ತೆರೆದುಕೊಂಡಿರಬಹುದು.

ಗಿಡಮೂಲಿಕೆಗಳ ಔಷಧ ಎಂದರೆ ವಿಜ್ಞಾನದ ಭಾಷೆಯಲ್ಲಿ ರಾಸಾಯನಿಕ ವಸ್ತುಗಳು. ಸಸ್ಯಗಳು ಈ ರಾಸಾಯನಿಕ ಅಂಶಗಳನ್ನು ಉತ್ಪಾದಿಸಲು ಬಹಳಷ್ಟು ಶ್ರಮವನ್ನು ವ್ಯಯಿಸಬೇಕು. ಕಷ್ಟಪಟ್ಟು ಗಳಿಸಿದ ಆಹಾರವನ್ನು ಖರ್ಚು ಮಾಡಬೇಕು. ಹೀಗಿದ್ದೂ ರಾಸಾಯನಿಕ ವಸ್ತುಗಳನ್ನು ಗಿಡಗಳೇಕೆ ತಯಾರಿಸಬೇಕು?

ಇಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರಕೃತಿಯಲ್ಲಿ ಸಸ್ಯಸಂಕುಲಗಳ ಬದುಕು ನಿರಾತಂಕವಾಗಿಲ್ಲ. ಗಾಳಿ, ಬಿಸಿಲು, ಮಣ್ಣು, ನೀರು ಅವಶ್ಯವಾಗಿ ಲಭ್ಯವಿದ್ದಾಗ ಅವು ಚಿಗುರೊಡೆದು, ಹೂವು ಹಣ್ಣುಗಳನ್ನು ಬಿಟ್ಟು ಸುಖವಾಗಿ ಜೀವಿಸಬಲ್ಲವೆಂಬ ತಿಳಿವಳಿಕೆ ತಪ್ಪಾಗುತ್ತದೆ. ಪ್ರಕೃತಿಯಲ್ಲಿ ಜೀವಿಸುವುದು ಅಷ್ಟು ಸರಳವಲ್ಲ. ಬದುಕುಳಿಯುವ ಪರೀಕ್ಷೆಯಲ್ಲಿ ಅವು ಉತ್ತೀರ್ಣವಾಗುತ್ತಲೇ ಇರಬೇಕು. ಉಳಿದ ಜೀವಿಗಳೊಂದಿಗೆ ಸ್ಪರ್ಧಿಸಿ ಜಯಿಸುವುದಷ್ಟೇ ಅಲ್ಲ, ಬದುಕಿಗೆ ಸವಾಲೊಡ್ಡುವ ಶತ್ರುಗಳನ್ನು ಎಚ್ಚರಿಕೆಯಿಂದ ಯಶಸ್ವಿಯಾಗಿ ನಿಭಾಯಿಸಬೇಕು. ಈ ವಿಷಯದಲ್ಲಿ ಸಸ್ಯಗಳಿಗಿರುವ ಒಂದು ಅನನುಕೂಲ
ವೆಂದರೆ ಅವು ಪ್ರಾಣಿ, ಪಕ್ಷಿಗಳಂತೆ ವೈರಿಗಳು ಎದುರಾದಾಗ ಜಿಗಿದು, ಹಾರಿ ಪಲಾಯನ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಹಾಗಾಗಿ ಅವು ನಿಂತಲ್ಲೇ ನಿಂತು ಶತ್ರುಗಳನ್ನು ಹಿಮ್ಮೆಟ್ಟಿಸುವ ತಂತ್ರಗಳನ್ನು ರೂಪಿಸಿಕೊಳ್ಳುವುದು ಅನಿವಾರ್ಯ.

ಈ ಸವಾಲಿಗೆ ಪರಿಹಾರ ಕಂಡುಕೊಳ್ಳಲು ಸಸ್ಯಗಳು ಬಗೆಬಗೆಯ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುವುದನ್ನು ಕಲಿತಿರಬಹುದು. ಇದನ್ನು ಸಸ್ಯಸಂಕುಲಗಳು ಒಮ್ಮಿಂದೊಮ್ಮೆಗೆ ಕಂಡುಕೊಂಡ ಸಾಧನವೆಂದು ಭಾವಿಸಬಾರದು. ಈ ರಾಸಾಯನಿಕ ವಸ್ತುಗಳೆಲ್ಲ ವಿಕಾಸಕ್ರಿಯೆಯ ಅನಂತಯಾತ್ರೆಯಲ್ಲಿ ಪರಿಷ್ಕೃತಗೊಂಡ ಅಮೂಲ್ಯ ವಸ್ತುಗಳು. ಇವುಗಳನ್ನು ಅವು ತಮ್ಮ ರಕ್ಷಣೆಗೆ ಶಸ್ತ್ರಗಳಾಗಿ, ಆಯುಧಗಳಾಗಿ ಬಳಸಿಕೊಳ್ಳುತ್ತಿವೆ.

ಇದಕ್ಕೆ ಅದ್ಭುತ ಉದಾಹರಣೆ ಎಂದರೆ ಆಫ್ರಿಕಾ ಕಾಡುಗಳಲ್ಲಿ ಜೀವಿಸುವ ಜಿರಾಫೆ ಪ್ರಾಣಿಗಳದು. ಜಿರಾಫೆಗಳಿಗೆ ಅಕೇಶಿಯಾ ಸಸ್ಯಗಳ ಎಲೆಗಳು ನೆಚ್ಚಿನ ಆಹಾರ. ಹಾಗಾಗಿ ಚಿಗುರುವ ಒಂದೂ ಎಲೆಯನ್ನು ಅವು ಬಿಡುವುದಿಲ್ಲ. ಇದಕ್ಕಾಗಿ ಅಕೇಶಿಯಾ ಗಿಡಗಳು ತಂತ್ರವೊಂದನ್ನು ಅಳವಡಿಸಿಕೊಂಡಿವೆ. ಜಿರಾಫೆಗಳು ಆಗಮಿಸಿ ಚಿಗುರುಗಳಿಗೆ ಬಾಯಾಡಿಸಿದ ಕ್ಷಣದಲ್ಲಿ ಮರಗಳು ಎಲೆಗಳಿಗೆ ರಾಸಾಯನಿಕ ದ್ರವ್ಯವನ್ನು ಹರಿದು ಬಿಡುತ್ತವೆ. ಅದು ಜಿರಾಫೆಗಳಲ್ಲಿ ಆಲಸ್ಯ
ವನ್ನುಂಟು ಮಾಡುತ್ತದೆ. ಇದರಿಂದ ಅವು ಮುಂದಿನ ಮರಕ್ಕೆ ತೆರಳುತ್ತವೆ. ಜಿರಾಫೆಗಳು ಆಗಮಿಸುವ ಸುದ್ದಿಯನ್ನು ಕೆಲವೊಮ್ಮೆ ಅಕ್ಕಪಕ್ಕದ ಅಕೇಶಿಯಾ ಗಿಡಮರಗಳು ಗಾಳಿಯಲ್ಲಿ ತೇಲಿಬರುವ ಅಣುಗಳ ಮಾಹಿತಿ ಪಡೆದು ಮುಂಚಿತವಾಗಿಯೇ ದಾಳಿಗೆ ಸಜ್ಜಾಗಿ ನಿಲ್ಲುತ್ತವೆ. ಇದೇ ಅವುಗಳ ಉಳಿವಿನ ಗುಟ್ಟು.

ನಮ್ಮಲ್ಲಿ ಮೇಕೆಗಳ ಸ್ವಭಾವವನ್ನು ಗಮನಿಸಿದಾಗ ಈ ಮೇಲಿನ ಸಂವಹನ ಇನ್ನಷ್ಟು ಸ್ಪಷ್ಟವಾಗಿ ಮನದಟ್ಟಾಗಬಹುದು. ಈ ಮೇಕೆಗಳು ದನ, ಕುರಿಗಳಂತೆ ಒಂದೆಡೆ ನಿಂತು ಮೇಯುವುದೇ ಇಲ್ಲ. ಪ್ರತಿ ಗಿಡಗಳಲ್ಲಿ ನಾಲ್ಕಾರು ಎಲೆಗಳಿಗೆ ಬಾಯಾಡಿಸಿ ಅವಸರದಿಂದ ಮುಂದಿನ ಗಿಡಕ್ಕೆ ಸಾಗುತ್ತವೆ. ಇಲ್ಲಿಯೂ ಸಹ ಸಸ್ಯಗಳು ಹೊರ ಸೂಸುವ ರಾಸಾಯನಿಕ ಅಸ್ತ್ರಗಳಿಂದ ಪಾರಾಗಲು ಮೇಕೆಗಳಲ್ಲಿ ಈ ಸ್ವಭಾವ ರೂಪುಗೊಂಡಿರಬಹುದು. ಇದನ್ನು ಗಮನಿಸಿ ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಗಾದೆ ಅರಳಿರಬಹುದು.

ಇದೇ ರೀತಿ ಎಕ್ಕದ ಗಿಡಗಳನ್ನು ಮುಖ್ಯ ಔಷಧ ಗಿಡವೆಂದು ಪರಿಗಣಿಸಿದ್ದೇವೆ. ಅದು ಬದುಕುಳಿಯಲು ಯಾವುದೋ ಚಿಟ್ಟೆಯ ಸಂತತಿಯೊಂದಿಗೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಇವೆರಡರ ನಡುವೆ ಜರುಗಿರುವ ತಂತ್ರ ಮತ್ತು ಪ್ರತಿತಂತ್ರದ ಪ್ರಕ್ರಿಯೆಯಲ್ಲಿ ಎಕ್ಕದ ಗಿಡಗಳು 150ಕ್ಕೂ ಹೆಚ್ಚು ಬಗೆಯ ರಾಸಾಯನಿಕ ವಸ್ತುಗಳನ್ನು ರೂಪಿಸಿಕೊಂಡಿವೆ. ಇವುಗಳ ನಡುವಿನ ಹೋರಾಟ ಇಂದಿಗೂ ಮುಂದುವರಿದಿದೆ. ಮುಂದೆಯೂ ಮುಂದುವರಿಯುತ್ತದೆ. ಇದನ್ನೇ ಪ್ರಕೃತಿಯಲ್ಲಿ ಬದುಕಿಗಾಗಿ ಹೋರಾಟ ಎಂದು ಸರಳವಾಗಿ ಹೇಳಿಬಿಡುತ್ತೇವೆ. ಆದರೆ ಗಿಡ ಮೂಲಿಕೆಗಳು ಈ ರಾಸಾಯನಿಕ ಅಂಶಗಳನ್ನು ರೂಪಿಸಿಕೊಳ್ಳುವ ಜ್ಞಾನದ ಹಿಂದೆ ಲಕ್ಷಾಂತರ ವರ್ಷಗಳ ನೈಸರ್ಗಿಕ ಆಯ್ಕೆ ಕೆಲಸ ಮಾಡಿರುತ್ತದೆ.

ಆದರೆ ಪ್ರಕೃತಿಯ ಸಸ್ಯಸಂಕುಲಗಳ ರಹಸ್ಯಲೋಕ ಮನುಕುಲದಲ್ಲಿ ವಿಸ್ಮಯವನ್ನುಂಟು ಮಾಡಲು ಸೋತಿದೆ. ಅದನ್ನು ನಗದೀಕರಿಸಿಕೊಳ್ಳುವ ಹಾದಿ ಸಕ್ರಿಯಗೊಂಡಿದೆ. ಈಗ ಔಷಧ ಉದ್ಯಮಕ್ಕೆ ಅವಶ್ಯವಿರುವ ಈ ರಾಸಾಯನಿಕ ವಸ್ತುಗಳಲ್ಲಿ ಶೇಕಡ 80 ಭಾಗ ಪ್ರಕೃತಿಯಿಂದಲೇ ದಕ್ಕುತ್ತಿದೆ. ಜಾಗತಿಕವಾಗಿ ಔಷಧ ಉದ್ಯಮ 120 ಬಿಲಿಯನ್ ಡಾಲರ್ ಮೌಲ್ಯವನ್ನು ಮೀರಿದೆ. ಇದರಿಂದ ಲೆಕ್ಕವಿಲ್ಲದಷ್ಟು ಸಸ್ಯಪ್ರಭೇದಗಳು ಸಂಕಷ್ಟಕ್ಕೆ ಸಿಕ್ಕಿಕೊಂಡಿವೆ. ಮತ್ತಷ್ಟು ವಿನಾಶದಂಚಿನಲ್ಲಿವೆ.

ನೀವು ಸಿಂಕೋನಾ ಹೆಸರನ್ನು ಕೇಳಿರಬಹುದು. ಚರಿತ್ರೆಯಲ್ಲಿ 40 ಕೋಟಿಗೂ ಹೆಚ್ಚು ಜನರನ್ನು ಆಹುತಿ ತೆಗೆದುಕೊಂಡ ಮಲೇರಿಯಾ ಕಾಯಿಲೆಗೆ ಮದ್ದು ಒದಗಿಸಿದ್ದೇ ಈ ಸಿಂಕೋನಾ ಸಸ್ಯ. ‘ಜ್ವರದ ಮರ’ವೆಂದೇ ಖ್ಯಾತಿ ಪಡೆದ ಇದು ತನ್ನ ತವರು ದೇಶವಾದ ‘ಪೆರು’ವಿನಲ್ಲಿಂದು ಅಪಾಯದಂಚಿನಲ್ಲಿದೆ.

ಪ್ರಕೃತಿಯಲ್ಲಿ ಜೀವಿಗಳು ನಮ್ಮ ನೆಲೆಗೆ ಹೊಂದಿಕೊಂಡು ಬದುಕುವ ಪ್ರವೃತ್ತಿಯನ್ನು ಹೊಂದಿವೆ. ಆದರೆ ಮಾನವ ಮಾತ್ರ ಈ ತತ್ವಕ್ಕೆ ತದ್ವಿರುದ್ಧ. ತನ್ನ ಅನುಕೂಲಕ್ಕೆ ತಕ್ಕಂತೆ ಪರಿಸರವನ್ನು ಬಗ್ಗಿಸುತ್ತಾ, ಬದಲಾಯಿಸುತ್ತಾ ಸಾಗಿದ್ದಾನೆ.

ಇದೇ ರೀತಿ ಸುಗಂಧ ದ್ರವ್ಯಗಳ ಪ್ರಪಂಚವೂ ವಿಸ್ಮಯಲೋಕವೆ. ಸಸ್ಯಗಳು ಪರಾಗಸ್ಪರ್ಶಕ್ಕೆ, ಬೀಜ ಪ್ರಸರಣಕ್ಕೆ, ಗಾಳಿ, ನೀರು, ಬಣ್ಣಗಳನ್ನೆಲ್ಲಾ ಬಳಸಿಕೊಳ್ಳುತ್ತವೆ. ಅದೇ ರೀತಿ ತಮ್ಮ ಬದುಕಿಗೆ ಅವಶ್ಯವಿರುವ ಸಂಗಾತಿಗಳನ್ನು ಓಲೈಸಲು, ಆಮಂತ್ರಿಸಲು, ಜೊತೆಗೆ ವೈರಿಗಳನ್ನು ದೂರವಿಡಲು ಸಸ್ಯಗಳು ಸುಗಂಧ ದ್ರವ್ಯಗಳನ್ನು ಅಸ್ತ್ರಗಳಾಗಿ ಬಳಸುತ್ತವೆ. ಈ ಸುಗಂಧ ದ್ರವ್ಯಗಳು ಸಹ ರಾಸಾಯನಿಕ ವಸ್ತುಗಳ ಮತ್ತೊಂದು ರೂಪ. ನಾವು ಬಳಸುವ ಗೋಂದ್, ರಬ್ಬರ್ಗಳೆಲ್ಲವೂ ಕೀಟಗಳನ್ನು ದೂರವಿರಿಸಲು ಬಳಸುವುದು ರಾಸಾಯನಿಕ ವಸ್ತುಗಳನ್ನೇ.

ಒಮ್ಮೆ ನಾಗರಹೊಳೆ ಕಾಡಿನಲ್ಲಿ ಕಾಡುನಾಯಿಗಳನ್ನು ಹುಡುಕಿ ಅಲೆದಾಡುವಾಗ ದಟ್ಟ ಪೊದೆಯೊಳಗಿನಿಂದ ಘಾಟು ವಾಸನೆ ಬರುತ್ತಿತ್ತು. ಅದು ಸತ್ತ ಪ್ರಾಣಿಯ ದೇಹ ಕೊಳೆತುನಾರುವಂತಹ ವಾಸನೆ. ಹುಲಿಯೋ, ಚಿರತೆಯೋ ಬೇಟೆಯಾಡಿರುವ ಕಳೇಬರವೆಂದೇ ತೀರ್ಮಾನಿಸಿ ಹುಡುಕಾಡಿದೆವು. ಆದರೆ ಅಲ್ಲಿ ಯಾವ ಕುರುಹುಗಳೂ ಸಿಗಲಿಲ್ಲ. ವಾಸನೆ ಮಾತ್ರ ಇನ್ನಷ್ಟು ದಟ್ಟವಾಯಿತು. ಸ್ವಲ್ಪ ಹೊತ್ತಿನ ಬಳಿಕ ಗೊಂದಲ ತಿಳಿಯಾಯಿತು. ಆ ವಾಸನೆಯನ್ನು ಬೀರುತ್ತಿದ್ದದ್ದು ನೆಲದಲ್ಲಿ ಅರಳಿದ್ದ ಒಂದು ಸುಂದರ ಹೂವು! ನೂರೆಂಟು ಕೀಟಗಳು ಆ ಸುವಾಸನೆಗೆ ಆಕರ್ಷಿತಗೊಂಡು ಮಕರಂದಕ್ಕೆ ಮುಗಿಬಿದ್ದಿದ್ದವು! ಬಹುಶಃ ವಾಸನೆಯೂ ಸಹ ಸಬ್ಜೆಕ್ಟಿವ್ ಅಲ್ಲವೇ?

ಹಾಗೆಯೇ ಲುನಾರ್ ಪತಂಗ ಚೆಲ್ಲುವ ಸುಗಂಧ ದ್ರವ್ಯ ನಮ್ಮ ಮೂಗಿಗೆ ಅರಿವಾಗುವುದೇ ಇಲ್ಲ. ಇದು ಕೂಡುವಿಕೆಗೆ ಸಿದ್ಧವಿರುವ ಮಾಹಿತಿಯನ್ನು ರಾಸಾಯನಿಕ ಭಾಷೆಯ ಮೂಲಕ ಸಂಗಾತಿಗಳಿಗೆ ತಲುಪಿಸುತ್ತವೆ. ಈ ಸಂದೇಶ ಎರಡು ಕಿಲೋಮೀಟರ್ ದೂರದಲ್ಲಿರುವ ಸಂಗಾತಿಯನ್ನು ತಲುಪುವಲ್ಲಿ ಯಶಸ್ವಿಯಾಗುತ್ತದೆ. ಇವೆಲ್ಲ ಪ್ರಕೃತಿಯಲ್ಲಿ ಚಾಲ್ತಿಯಲ್ಲಿರುವ ಭಾಷೆ ಮತ್ತು ಸಂವಹನಕ್ಕೆ ಸಂಬಂಧಿಸಿದ ವಿಷಯಗಳು.

ಇಷ್ಟು ರಹಸ್ಯಗಳನ್ನೊಳಗೊಂಡ ಜಗತ್ತು ಮನುಕುಲವನ್ನು ವಿಸ್ಮಯಗೊಳಿಸಿ ಚಕಿತಗೊಳಿಸಬೇಕಿತ್ತು. ಅದು ಸಾಧ್ಯವಾಗಿಲ್ಲ. ಸಾಧ್ಯವಾಗುವ ಕುರುಹುಗಳೂ ಕಾಣಿಸುತ್ತಿಲ್ಲ. ಈಗ ಸುಗಂಧ ದ್ರವ್ಯಗಳ ಉದ್ಯಮ ಬೃಹದಾಕಾರವಾಗಿ ಬೆಳೆದಿದೆ. ಬೇಡಿಕೆ ಹೆಚ್ಚುತ್ತಲೇ ಇದೆ. ಇದರ ವಾರ್ಷಿಕ ವಹಿವಾಟು 380 ಬಿಲಿಯನ್ ಡಾಲರ್ಗಳಿಗೂ ಹೆಚ್ಚಿದೆ. ಮುಂದಿನ ದಿನಗಳಲ್ಲಿಅದು ಇನ್ನಷ್ಟು ವೃದ್ಧಿಯಾಗುವುದಾಗಿ ಸಮೀಕ್ಷೆಗಳು ಸೂಚಿಸಿವೆ. ಈ ಉದ್ಯಮಕ್ಕೆ ಪೂರೈಕೆಯಾಗುವ ಮೂಲದ್ರವ್ಯಗಳೆಲ್ಲ ಪ್ರಕೃತಿಯಿಂದಲೇ ಬರಬೇಕಿದೆ.

ಈ ಬೇಡಿಕೆಗಳಿಗೆ ಪೂರಕವಾಗಿ ಕೆಲವು ಆಯ್ದ ಗಿಡಮೂಲಿಕೆಗಳನ್ನು ಬೇಲಿಯ ಹೊಲಗಳಲ್ಲಿ ಬೆಳೆಸುವ ಸಂಪ್ರದಾಯ ಆರಂಭವಾಗಿದೆ. ಸರ್ಕಾರಗಳು, ಉದ್ಯಮಗಳು ಇದರಲ್ಲಿ ಭಾಗಿಯಾಗಿವೆ. ಈ ಸಂಸ್ಕೃತಿ ಅಮಾನವೀಯವೆನಿಸುತ್ತದೆ. ಪ್ರಕೃತಿಯಲ್ಲಿ ಬದುಕುಳಿಯಲು ಕಲಿತಿದ್ದ ಭಾಷೆ, ಕಲೆಗಳೆಲ್ಲ ಅಂತ್ಯಗೊಳ್ಳಬಹುದು. ಅವು ಕಾಲಾಂತರದಲ್ಲಿ ನಿಸರ್ಗದ ನಿಯಮಗಳಿಗೆ ಅನುಸಾರವಾಗಿ ವಿಕಸಿಸಿ ಅರಳಿದ ಜೀವಕೋಟಿಗಳ ಮಹಾ ಅಧ್ಯಾಯವೊಂದು ಕೊನೆಗೊಳ್ಳುತ್ತದೆ. ಅವು ಮಾತುಬಾರದ ಗಿಡಗಳಾಗಿ ಮಾಡುವುದು ಅಪರಾಧವಾಗುತ್ತದೆ.

ಏಕೆಂದರೆ ಈ ರಾಸಾಯನಿಕ ದ್ರವ್ಯಗಳ ಹುಟ್ಟು ಪಡೆದಿರುವುದು ಜೀವಿ–ಜೀವಿಗಳ ನಡುವೆ ಲಕ್ಷಾಂತರ ವರ್ಷಗಳು ಜರುಗಿದ ಸಂಘರ್ಷ ಮತ್ತು ಸಂವಾದದಿಂದ. ಇದು ನಿಷ್ಕ್ರಿಯಗೊಳ್ಳಬಾರದು. ಸದಾ ಮುಂದುವರಿಯಬೇಕು. ಇಲ್ಲದಿದ್ದಲ್ಲಿ ಪ್ರಕೃತಿಯ ಸಹಜ ಚಟುವಟಿಕೆಗಳಿಗೆ ನಿರ್ಬಂಧ ಹೇರಿದಂತಾಗುತ್ತದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಜೀವಪರಿಸರ ಅತಿ ಮುಖ್ಯ. ನಾವು ನೆಟ್ಟು ಬೆಳೆಸಿದ ಸಾವಿರಾರು ಗಿಡ ಮರಗಳಿಗೆ ಇಂತಹ ಪ್ರಾಮುಖ್ಯತೆ ಇರುವುದೇ ಇಲ್ಲ. ಅವು ಮಾತುಬಾರದ ಹಸಿರು ಹೊದಿಕೆಗಳಾಗಿ ಉಳಿಯಬಹುದಷ್ಟೆ. ಈ ಹಿನ್ನೆಲೆಯಲ್ಲಿ ಜೀವಪರಿಸರಗಳನ್ನು ಉಳಿಸಿಕೊಳ್ಳುವ ಮನೋಧರ್ಮ ನಮ್ಮದಾಗಬೇಕು. ಆಗಷ್ಟೇ ಅದ್ಭುತ ಚರಿತ್ರೆಯೊಂದನ್ನು ಗೌರವಿಸುವ ಸಂಸ್ಕೃತಿಗೆ ನಾವೆಲ್ಲ ಪಾತ್ರರಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.