ಮಾರ್ಗಶಿರ ಪುಷ್ಯ ಮಾಸಗಳು ಸೇರಿ ಹೇಮಂತ ಋತು. ಅದು ಚಳಿಗಾಲ. ಆ ಕಾಲದಲ್ಲಿ ತರುಲತೆಗಳಲ್ಲಿ ಪುಷ್ಪಗಳಿರುವುದಿಲ್ಲ. ಆ ಕಾಲದ ಪ್ರಕೃತಿಯ ವರ್ಣನೆಯನ್ನು ಕುವೆಂಪು ಅವರು ಪೃಥ್ವಿಯನ್ನು ವ್ಯಕ್ತಿ ಎಂದು ಪರಿಭಾವಿಸಿ ಅವಳು ಉಟ್ಟ ಉಡುಗೆಯಲ್ಲಿ ಚಿತ್ರಿಸಿರುವ ರೀತಿ ನವನವೀನವಾಗಿದೆ. ಅದು ಅವರ ರಮ್ಯ ಕಾಲ್ಪನಿಕ ಸೌಂದರ್ಯ.

‘ಭೂದೇವಿ ಹಸಿರು ಉಡುಗೆ ಉಡುವ ತನ್ವಂಗಿ (ಕೋಮಲಾಂಗಿ). ಅವಳು ಏನೋ ಕಾರ್ಯನಿಮಿತ್ತ ಹೊರ ಹೊರಟು ಮಾರ್ಗ ಮಧ್ಯದಲ್ಲಿ ನಿಂತಿದ್ದಾಳೆ. ಆಗ ಹೇಮಂತ ಋತುವು ಹಿಮವರ್ಷವನ್ನು ಅವಳ ಮೇಲೆ ಸುರಿಸಿದ್ದಾನೆ. ಆ ತುಹಿನವು (ಮಂಜು) ಅವಳ ಒಡಲಿಗೆ ಬಿಳಿಯ ಉಡುಗೆಯನ್ನು ತೊಡಿಸಿದೆ. ಆ ಶ್ವೇತವಸ್ತ್ರದಲ್ಲಿ ಅವಳು ಮನೋಹರೆಯಾಗಿ ಕಾಣುತ್ತಿದ್ದಾಳೆ!’

‘ಇಂಬಾದಳಾ ತುಹಿನ ತನುವಸನೆ, ತನ್ವಂಗಿ,

ಸಸ್ಯಶಾಲಿನಿ ಪೃಥಿವಿ!

(ಶ್ರೀ ರಾಮಾಯಣ ದರ್ಶನಂ 1.11–184)

ಕುವೆಂಪು ಅವರು ‘ಶ್ರೀ ರಾಮಾಯಣ ದರ್ಶನಂ’ನ ಪ್ರಾರಂಭದ ಕವಿಕೃತ ದರ್ಶನಂ ಸಂಚಿಕೆಯಲ್ಲಿ ದೇವಕವಿ ವಾಲ್ಮೀಕಿ ಮತ್ತು ವಿದ್ಯಾದೇವತೆ ಸರಸ್ವತಿಯನ್ನು ಹರಸಿರಿ ಎಂದು ಪ್ರಾರ್ಥಿಸಿದ್ದಾರೆ. ಅವರಿಗೆ ತಾವು ಕೈಗೊಂಡಿರುವ ಮಹಾಕಾವ್ಯದ ರಸಯಾತ್ರೆಯಲ್ಲಿ ಪ್ರಕೃತಿಯ ಸಮಸ್ತವೂ ಮಾನ್ಯವಾದುದು. ರಾಮನ ಕಿರೀಟದ ರತ್ನಮಣಿಯಂತೆ ಪಂಚವಟಿಯ ಸೂರ್ಯೋದಯದ ಶಾದ್ವಲದ ಹಸುರುಗರುಕೆ ತೃಣಸುಂದರಿಯ ಮೂಗುತಿಯ ಮುತ್ತುಆಗಿರುವ ಹಿಮಬಿಂದುವೂ ಅಮೂಲ್ಯವಾದುದು.

‘ರಾಮನ ಕಿರೀಟದಾರನ್ನವಣಿಯೊಲೆ ರಮ್ಯಂ, ಪಂಚವಟಿಯೊಳ್

ದಿನೇಶೋದಯದ ಶಾದ್ವಲದ ಪಸುರು ಗರುಕೆಯೊಳ್

ತೃಣಸುಂದರಿಯ ಮೂಗುತ್ತಿಯ ಮುತ್ತು ಪನಿಯಂತೆ

ಮಿರುಮಿರುಗಿ ಮೆರೆವ ಹಿಮಬಿಂದುವುಂ’

ಮನುಷ್ಯ ಹೆಚ್ಚು ಜಾಗೃತನಾಗಿರುವುದು, ಕ್ರಿಯಾಶೀಲನಾಗಿರುವುದು ಮತ್ತು ಧ್ಯಾನಶೀಲನಾಗಿರುವುದು ಹೇಮಂತ ಋತುವಿನಲ್ಲಿ. ಬಾಲ್ಯದಿಂದಲೂ ಅರಣ್ಯದಲ್ಲಿ ಆ ಋತುವಿನಲ್ಲಿಓಡಾಡಿ, ಅದರ ವಿವಿಧ ಲಾಸ್ಯವನ್ನು ಕಣ್ತುಂಬಿಕೊಂಡು ಆ ಕಾಲದ ಬಗ್ಗೆ ಚಿಂತನಶೀಲರಾದ ಕುವೆಂಪು ಅವರು, ಆ ಕಾಲದ ಭೂಮಿತಾಯಿಯನ್ನು ಒಂದು ಸೊಗಸಾದ ರೂಪಕದಲ್ಲಿ ಹೀಗೆ ಚಿತ್ರಿಸಿದ್ದಾರೆ:

‘ತೂಲಸಮ ಪೀಯೂಷ ಕೋಶದಿಂ

ಕೇಶ ತನುತರ ತಂತುವನ್ನೆಳೆದು ಕುಶಲದಿಂ

ನೇಯ್ದಮೃತ ಕೌಶೇಯ ಯವನಿಕಾಚ್ಛಾದಿತಂ

ಮೆರೆದಿರೆ ಮನೋಹರಾಸ್ಪಷ್ಟ ಕಾನನ ಭೂಮಿ’

(ಶ್ರೀ ರಾಮಾಯಣ ದರ್ಶನಂ 1.11–169ರಿಂದ 172)

ಮನೋಹರಾಸ್ಪಷ್ಟ ಕಾನನ ಭೂಮಿಯು ಚಳಿಯ ಅರಳೆಯಂತಹ ಅಮೃತ ಕೋಶದಿಂದ ಕೇಶ ಶರೀರದ ತಂತುವನ್ನು ಎಳೆದು ಕುಶಲದಿಂದ ನೇಯ್ದ ಅಮೃತ ರೇಷ್ಮೆವಸ್ತ್ರದಂತಹ ತೆರೆಯನ್ನು ಹೊದ್ದು ಶೋಭಿಸುತ್ತಿತ್ತು.

ಕಾವ್ಯ ಲಹರಿಯಲ್ಲಿ ಕವಿ ಕುವೆಂಪು

ಮಾಗಿ ಕಾಲವು ನಮ್ಮನ್ನು ಚಳಿಯ ಸಮುದ್ರದಲ್ಲಿ ಅದ್ದಿದಂತಿರುತ್ತದೆ. ಅದು ಎಲ್ಲ ಪ್ರಾಣಿಗಳಲ್ಲಿ ತಣ್ಣನೆಯ ಉಸಿರನ್ನು ಊದಿಸುತ್ತಾ, ಹಣ್ಣೆಲೆಗಳನ್ನು ಉದುರಿಸುತ್ತಾ, ವಯಸ್ಸಾದವರು ದೊಣ್ಣೆಯೂರಿ ‘ಹುಹು’ ಎನ್ನುವಂತೆ ನಡುಗಿಸುತ್ತಾ ಬರುತ್ತದೆ. ಅದು ಬಂದ ಬಗೆಯನ್ನು ನೋಡು ಎಂದು ಕವಿ ಹೀಗೆ ಚಿತ್ರಿಸಿದ್ದಾರೆ:

‘ನೋಡು ನೋಡು ಕುಳಿರ ಬೀಡು ಮಾಗಿ ಬರುತಿದೆ!

ಹಲ್ಲ ಕಡಿದು ಮುಷ್ಟಿ ಹಿಡಿದು ಸೆಡೆತು ಬರುತಿದೆ!

ಐಕಿಲದರ ತಲೆಯ ತಿರುಳು

ಕೊರೆಯುವ ಚಳಿಯದರ ಕರುಳು

ಬೆರೆತ ಮುಗಿಲಿನರೆತ ಕುರುಳು

ಮಾಗಿ ಬರುತಿದೆ!

ನೋಡು ನೋಡು ಕುಳಿರಬೀಡು ಸಾಗಿ ಬರುತಿದೆ!

(ಮಾಗಿ ಬರುತಿದೆ; ಪಕ್ಷಿಕಾಶಿ)

ಕುವೆಂಪು ಅವರಿಗೆ ಹುಲ್ಲಿನ ಮೇಲಿನ ಇಬ್ಬನಿ ರಾಶಿಯು ಶಿಶುರವಿ ರುಚಿಯಲಿ ನಗೆನಗೆ ಸೂಸುತ್ತದೆ. ಅವರಿಗೆ ಹುಲ್ಲಿನ ಮೇಲಿನ ಪ್ರತೀ ಹನಿಯೂ ಕಾಮನಬಿಲ್ಲು, ಸೊಡರು. ಅದನ್ನು ಅವರು ಕಂಡು ಬಣ್ಣಿಸಿರುವ ರೀತಿ ಅನನ್ಯ.

‘ಹಚ್ಚನೆ ಪಚ್ಚನೆ ವೇದಿಕೆಯಲ್ಲಿ

ಸಾಸಿರಗಟ್ಟಲೆ ಮುತ್ತನು ಚೆಲ್ಲಿ,

ರನ್ನದ ಕಿರುಹಣತೆಗಳಲ್ಲಿ

ಶ್ಯಾಮಲ ತೈಲದಿ ಹೊನ್ನಿನ ಬತ್ತಿ

ಕಾಮನ ಬಿಲ್ಲಿನ ಬೆಂಕಿಯು ಹೊತ್ತಿ

ಸೊಡರುರಿಯುತ್ತಿದೆ ಅಲ್ಲಲ್ಲಿ!’

(ಶರತ್ಕಾಲದ ಸೂರ್ಯೋದಯದಲಿ; ಪಕ್ಷಿಕಾಶಿ)

ಕಾವ್ಯದ ಅನುಸಂಧಾನದಲ್ಲಿ ಶಬ್ದದಲ್ಲಿಯ ಅರ್ಥವನ್ನು ಹುಡುಕುವಷ್ಟಕ್ಕೆ ಮಿತಿಗೊಳ್ಳುವುದು ವಾಚ್ಯ. ವಾಚ್ಯ ಸ್ವರೂಪದಿಂದ ಚಿತ್ತವೃತ್ತಿ ಸ್ವರೂಪಕ್ಕೆ ಸಾಗಿದ ಕಾವ್ಯಾನುಭವಿಯು ವ್ಯಂಜನಾ ಸ್ವರೂಪದ ವ್ಯಂಗ್ಯ ಧ್ವನಿಯಲ್ಲಿ ಕಾವ್ಯ ಪ್ರಕಾಶವನ್ನು ಕಂಡು ಸುಖಿಸುತ್ತಾನೆ. ಅದನ್ನು ಮೀರಿ ಹೋಗಿ ತಾತ್ವಿಕವಾದ ವಿಶೇಶಾರ್ಥ ದರ್ಶನ ಧ್ವನಿಯನ್ನು ಕಾವ್ಯದಲ್ಲಿ ಮೂಡಿಸುವವನು ದರ್ಶನ ಕವಿ. ಅದು ಅವನ ಕಾವ್ಯ ಸೃಷ್ಟಿಯ ದರ್ಶನ ಶಕ್ತಿ. ಅದು ರಸಋಷಿ ಸವಿಯುವ ರಸಾಮೃತ ಪಾನ. ಆ ದರ್ಶನ ಫಲದ ಸಾರ್ಥಕ ಮಾರ್ಗ:

‘ದರ್ಶನ ಧ್ವನಿ ರಸಾಮೃತ ಪಾನದಾನಂದದಿಂ

ಲೋಕಶೋಕವನಳಿಸಿ ಭುವನತ್ರಯಂಗಳಂ

ತಣಿಪನಂದನ ತಪೋದೀಕ್ಷೆ’

(ಶ್ರೀ ರಾಮಾಯಣ ದರ್ಶನಂ 1.11–119ರಿಂದ 121)

ಅಂತಹ ದರ್ಶನ ದೀಪ್ತ ಕುವೆಂಪು ಅವರು, ಕಾಣ್ಕೆ, ದರ್ಶನವನ್ನು ‘ದೃಷ್ಟಿ’ಎಂದು ಕರೆದಿದ್ದಾರೆ. ‘ಸರ್ವಸೃಷ್ಟಿಯ ದೃಷ್ಟಿ ತಾಂ ಸೆರೆಯಾಗಲೊಪ್ಪಿರುವುದಾ ಹನಿಯ ಹೃದಯದ ಪುಟ್ಟ ಜ್ಯೋತಿಯಲಿ’ ಎಂದು ಅನುಭಾವ ಧ್ವನಿ ಹೊಮ್ಮಿಸಿದ್ದಾರೆ. ಸರ್ವಸೃಷ್ಟಿಯ ಹಿಮಮಣಿಯ ಒಳಗಿರುವ ಜ್ಯೋತಿಯು ಕಾವ್ಯ ಧ್ವನಿಗಿಂತಲೂ ವ್ಯಂಜನಾ ವ್ಯಾಪಾರಕ್ಕಿಂತಲೂ ಹಿರಿದಾದದ್ದು. ಆ ‘ಹಿಮಬಿಂದು’ವಿನಲ್ಲಿ ಪಂಚ ಮಹಾಭೂತಗಳಾದ ಭೂಮಿ, ಆಪ್, ತೇಜ, ವಾಯು, ಆಕಾಶ ತತ್ವಗಳ ರಹಸ್ಯ ಏಕತ್ರಗೊಂಡು ಹೊರಹೊಮ್ಮಿದಂತಿದೆ.

‘ಪ್ರಕೃತಿಯಾರಾಧನೆಯೇ ಪರಮನಾರಾಧನೆ’ ಎಂಬ ನಿಸರ್ಗ ಅಧ್ಯಾತ್ಮ ಭಾವದಲ್ಲಿ ಲೀನವಾದ ಅವರು, ‘ದೇವರ ಮುಖ ದರ್ಶನಕೆ ಸಾಲದೇನಾ ಹನಿಯ ಕಿರುದರ್ಪಣಂ’ ಎಂದು ಪ್ರಶ್ನಿಸುತ್ತಾ ಅನಂತ ಶಕ್ತನನ್ನು ಆ ಹನಿಯ ಕಿರುಗನ್ನಡಿಯಲ್ಲಿ ಕಂಡು ಧ್ಯಾನಶೀಲರಾಗಿದ್ದಾರೆ. ಮತ್ತು ಮುಂದುವರಿದು, ‘ನಿಲ್ಲಿಮ್; ಆ ಇರ್ಬನಿಯ ಕಿಡಿಗುಡಿಯೊಳಾರಾಧನೆಯೆಸಗಿ ಮುಂಬರಿಯುವಂ’ ಎಂದು ತುಸುಹೊತ್ತು ಶಾಂತವಾಗಿ ನಿಲ್ಲುವಂತೆ ಚಿತ್ರಿಸಿದ್ದಾರೆ. ಜಗತ್ತಿನ ಕಾವ್ಯಲೋಕದಲ್ಲಿ ಇಬ್ಬನಿಯ ಕಿಡಿಗುಡಿಯಲ್ಲಿ ಆರಾಧನೆಗೈದ ಪ್ರಕೃತಿಧ್ಯಾನಿ ಕುವೆಂಪು ಎಂಬುದು ಕನ್ನಡಿಗರ ಹೆಮ್ಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.