ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಕ್ತ ಮಕ್ಕಳಿಗೆ ‘ಮೈತ್ರಿ’ಯ ಆಸರೆ

Last Updated 4 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಡೌನ್‌ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಮುರಳೀಧರ ಈ ಸ್ಕೂಲ್‌ಗೆ ಬಂದಾಗ ಏನೂ ಗೊತ್ತಾಗುತ್ತಿರಲಿಲ್ಲ ಎನ್ನುವಂತಿತ್ತು. ಆದರೆ, ಈತನೊಳಗಿದ್ದ ವಿಶೇಷ ಕೌಶಲವನ್ನು ಗುರುತಿಸಿದ್ದು ‘ಮೈತ್ರಿ’ ಸಂಸ್ಥೆ. ಅವನು ಗಣಿತದಲ್ಲಿ ಚುರುಕಾಗಿದ್ದ. ಇದನ್ನು ಗಮನಿಸಿ, ಸಂಸ್ಥೆ ತರಬೇತಿ ನೀಡಿತು. ಈಗ ಮುರುಳಿ ಬೆಂಗಳೂರಿನ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಮುರಳೀಧರ ಮಾತ್ರವಲ್ಲ, ಮೈಸೂರಿನ ‘ಮೈತ್ರಿ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ’ ಸೇರಿದ ಹಲವು ವಿಶೇಷ ಮಕ್ಕಳು ಈಗ ನ್ಯೂನತೆಗಳನ್ನು ಮೀರಿ ನಿಂತಿ ದ್ದಾರೆ. ಕೋಪಿಷ್ಠರು ಸಮಾಧಾನಿಗಳಾಗಿದ್ದಾರೆ. ಮಂಕಾಗಿರುತ್ತಿದ್ದವರೂ ಚುರು ಕಾಗಿದ್ದಾರೆ. ತಮ್ಮ ಕೆಲಸ ತಾವೇ ಮಾಡಿಕೊಳ್ಳಲಾಗದವರು ಸುಧಾರಿಸಿದ್ದಾರೆ. ಮಾತು ಬಾರದವರು ಹೇಳಿದ್ದನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ, ಇಂಥ ಮಕ್ಕಳು ಶಿಕ್ಷಣ ಪಡೆದು, ಉದ್ಯೋಗವನ್ನೂ ಸಂಪಾದಿಸಿದ್ದಾರೆ. ಈ ಮಕ್ಕಳಲ್ಲಿನ ಆಸಕ್ತಿ ಗುರುತಿಸಿ, ಶಿಕ್ಷಣ ನೀಡಿ, ಮುಖ್ಯ ವಾಹಿನಿಗೆ ತರಬೇಕೆನ್ನುವುದು ಸಂಸ್ಥೆಯ ಉದ್ದೇಶ. ಇಂಥ ನೂರಾರು ಮಕ್ಕಳ ಯಶೋಗಾಥೆಗಳು, ಸ್ಫೂರ್ತಿದಾಯಕ ಕಥೆಗಳು ಈ ಸಂಸ್ಥೆಯಲ್ಲಿವೆ.

1982ರಲ್ಲಿ ಆರಂಭ
ಮೈತ್ರಿ, 1982ರಲ್ಲಿ ಆರಂಭವಾದ ಮೈಸೂರಿನ ಪ್ರಥಮ ವಿಶೇಷ ಮಕ್ಕಳ ಶಾಲೆ. ಬನುಮಯ್ಯ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಎನ್.ವೆಂಕೋಬರಾವ್ ಹಾಗೂ ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಪಿ.ಎಸ್.ಬಾಲಕೃಷ್ಣನ್ ಅವರು ಈ ಶಾಲೆ ನಿರ್ಮಾತೃ. ಇಂದಿಗೂ ಮೈಸೂರಿನ ಅಶೋಕಪುರಂನಲ್ಲಿ ಬಾಡಿಗೆ ಕಟ್ಟಡದಲ್ಲಿ ಈ ಶಾಲೆ ನಡೆಯುತ್ತಿದೆ. ನಿರ್ವಹಣಾ ವೆಚ್ಚಕ್ಕಾಗಿ ದಾನಿಗಳನ್ನು ಅವಲಂಬಿಸಿದೆ. ಬುದ್ಧಿಮಾಂದ್ಯ, ಸೆರೆಬ್ರಲ್ ಪಾಲ್ಸಿ, ಆಟಿಸಮ್, ಮಲ್ಟಿಪಲ್ ಡಿಸೆಬಿಲಿಟಿ, ಡೌನ್‌ ಸಿಂಡ್ರೋಮ್‌ನಂಥ ಸಮಸ್ಯೆಗಳಿರುವ ಒಟ್ಟು 40 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

‘ಈ ಮಕ್ಕಳಿಗೆ ಶಿಕ್ಷಣ ನೀಡಿ, ಅವರು ಸ್ಪಂದಿಸುವ ವಿಧಾನದಲ್ಲಿ ನಿಧಾನಕ್ಕೆ ತರಬೇತಿ ನೀಡಲಾಗುತ್ತಾ ಅವರ ಬೌದ್ಧಿಕ ಮಟ್ಟ ಹೆಚ್ಚಿಸುವುದು, ನಂತರ ಅವರಿಗೆ ಉದ್ಯೋಗ ಒದಗಿಸುವುದಕ್ಕೆ ಸಂಸ್ಥೆ ಆದ್ಯತೆ ನೀಡಿದೆ. ಹೀಗಾಗಿ ಕನ್ನಡ, ಇಂಗ್ಲಿಷ್‌, ಹಿಂದಿ, ಯೋಗ ಹಾಗೂ ಕಂಪ್ಯೂಟರ್‌ ಶಿಕ್ಷಣವನ್ನು ಹಂತ ಹಂತವಾಗಿ ನೀಡುತ್ತಿದ್ದೇವೆ’ ಎಂದು ವ್ಯವಸ್ಥಾಪಕ ಟ್ರಸ್ಟಿ ಪೃಥ್ವಿ ಸುಧೀಂದರ್ ವಿವರಿಸುತ್ತಾರೆ.

ವ್ಯವಸ್ಥಿತ ತರಬೇತಿ
ಪರಾವಲಂಬಿ ಜೀವನ ಕಷ್ಟ. ಅದು ವಿಶೇಷ ಮಕ್ಕಳಿಗೆ ಹೆಚ್ಚು ಅನ್ವಯ. ಈ ಮಕ್ಕಳು, ತಂದೆ-ತಾಯಿ ಇರುವವರೆಗೆ ಸುರಕ್ಷಿತ. ನಂತರ ಏನು? ಇದು ಪ್ರತಿ ಪೋಷಕರಲ್ಲಿರುವ ಚಿಂತೆ. ಹೀಗಾಗಿ ವಿಶೇಷ ಮಕ್ಕಳನ್ನೂ ಸಮಾಜದ ಮುಖ್ಯ ವಾಹಿನಿಗೆ ಸೇರಿಸಲು ಏನಾದರೂ ಕೌಶಲ, ವೃತ್ತಿ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಮಾಡುವುದು ಇಂದಿನ ಅಗತ್ಯ. ಇದೇ ನಿಟ್ಟಿನಲ್ಲಿ ಮೈತ್ರಿ ಶಾಲೆ ಪ್ರತಿಯೊಬ್ಬರ ಕೌಶಲಗಳನ್ನು ಗುರುತಿಸಿ ಅವರಿಗೆ ವ್ಯವಸ್ಥಿತ ತರಬೇತಿ ನೀಡುತ್ತಿದೆ. ಅಷ್ಟೇ ಅಲ್ಲದೇ ಅವರನ್ನು ಆಟ-ಹಾಡು-ನೃತ್ಯ, ಟಿ.ವಿ, ಪ್ರವಾಸ, ಕ್ರೀಡೆ, ಯೋಗ ಎಲ್ಲದರಲ್ಲೂ ತೊಡಗಿಸಿ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿದೆ. ‘ಮಕ್ಕಳಲ್ಲಿ ಬೌದ್ಧಿಕ ವಾಗಿ ಎಂಥದ್ದೇ ವೈಕಲ್ಯವಿದ್ದರೂ ಬದಲಾವಣೆ ತರಬಹುದು. ಆದರೆ, ಸುಧಾರಣೆ ಗುರುತಿಸಲು 10-15 ವರ್ಷಗಳಾದರೂ ಬೇಕು. ಕೆಲವರು ಬೇಗನೆ ಪಿಕ್ಅಪ್ ಆಗುವ ಸಾಧ್ಯತೆಗಳೂ ಇವೆ’ ಎನ್ನುತ್ತಾರೆ ಸಂಸ್ಥೆಯ ಬೃಂದಾಬಾಯಿ ಮೇಡಂ.

ಈ 37 ವರ್ಷಗಳಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಸಮರ್ಥರಾಗಿದ್ದಾರೆ. ಕೆಲವೊಮ್ಮೆ ಶಾಲೆಯಿಂದಲೇ ಉದ್ಯೋಗ ಹುಡುಕಲು ನೆರವಾಗಿದ್ದಾರೆ. ಉಳಿದಂತೆ ಪೋಷಕರೇ ಆ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ‘ಈ ಮಕ್ಕಳಿಗೆ ಉದ್ಯೋಗದಾತರು ಕಡಿಮೆ. ಇವರ ಕೌಶಲ ಗುರುತಿಸಿ ಕೆಲಸ ಕೊಡುವ ಕೈಗಳು ಹೆಚ್ಚಬೇಕಿದೆ’ ಎನ್ನುತ್ತಾರೆ ಪೃಥ್ವಿ.

ಸದ್ಯ ಇಲ್ಲಿನ ವಿಶೇಷ ಮಕ್ಕಳು ಬುಕ್ ಬೈಂಡಿಂಗ್, ಫೈಲ್ ಫೋಲ್ಡಿಂಗ್, ಫ್ಯಾಕ್ಟರಿ ಕೆಲಸಗಳು, ಅಂಗಡಿಗಳು, ಟೈಪಿಂಗ್ ಹೀಗೆ ಹಲವು ಕೆಲಸಗಳಲ್ಲಿ ತರಬೇತಿ ಪಡೆದಿದ್ದಾರೆ. ಕೆಲವು ಮಕ್ಕಳು ಅಂಥದ್ದೇ ಸಂಸ್ಥೆಗಳಲ್ಲಿ ಕೆಲಸ ಗಳಿಸಿದ್ದಾರೆ. ದಾನಿಗಳ ನೆರವಿನಿಂದಷ್ಟೇ ಇಂಥ ವಿಶೇಷ ಶಾಲೆ ನಡೆಸುವುದು ಕಷ್ಟ. ಆದರೂ ಈ ಮಕ್ಕಳನ್ನು ಕಂಡಾಗ ಹೇಗಾದರೂ ಮಾಡಿ ಶಾಲೆ ನಡೆಸೋಣ ಎಂಬ ಹುಮ್ಮಸ್ಸು ಬರುತ್ತದೆ. 18 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಸರ್ಕಾರದ ಅನುದಾನ ಇದೆ. ಆದರೆ ಇಲ್ಲಿರುವವರ ವಯಸ್ಸು 30 ಆದರೂ ಇವರ ಮನಸ್ಸು, ಕಲಿಕೆಯ ಮಟ್ಟ ಪುಟ್ಟ ಮಕ್ಕಳದ್ದೇ ಆಗಿರುತ್ತದೆ. ಹೀಗಾಗಿ ಸರ್ಕಾರ ವಿಶೇಷ ಮಕ್ಕಳ ಅನುದಾನಕ್ಕೆ ವಯಸ್ಸಿನ ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.

ಕ್ರಾಫ್ಟ್, ಕೃತಕ ಆಭರಣ ತಯಾರಿಕೆ
ಮೈತ್ರಿಯ ಅನುರಾಧಾ ಗಿರೀಶ್‌ 7 ವರ್ಷಗಳಿಂದ ಮಕ್ಕಳಿಗೆ ನಿಯಮಿತವಾಗಿ ಚಿತ್ರಕಲೆ, ಕ್ರಾಫ್ಟ್‌ಗಳನ್ನು ಕಲಿಸುತ್ತಿದ್ದಾರೆ. ಕೃತಕ ಆಭರಣಗಳು, ಗ್ಲಾಸ್‌ ಪೇಂಟಿಂಗ್‌, ಒಡಿಶಾ ಪೇಂಟಿಂಗ್‌, ಕುಂದನ್‌ ವರ್ಕ್‌, ಮಣ್ಣಿನ ದೀಪಗಳು, ಪೇಂಟಿಂಗ್‌, ಪೇಪರ್‌ ಬ್ಯಾಗ್‌, ಕ್ಯಾಂಡಲ್‌ ಮೇಕಿಂಗ್‌, ಕ್ಯಾಂಡಲ್‌ ಡಿಸೈನ್‌, ವುಲನ್‌ ವರ್ಕ್‌ ಹೀಗೆ ಹಲವು ಕುಸುರಿ ಕೆಲಸಗಳನ್ನು ಮಕ್ಕಳ ಕೈಯಲ್ಲಿ ಸಿದ್ಧಪಡಿಸಲಾಗಿದೆ. ಈ ವಸ್ತುಗಳಿಗೆ ಮಾರುಕಟ್ಟೆಯೂ ಇದೆ. ಬಣ್ಣದ ಹಣತೆ, ಮೇಣದ ಬತ್ತಿ, ರಂಗೋಲಿ, ಪುಟ್ಟ ತುಳಸಿಕಟ್ಟೆಗಳಿಗೆ ಬೇಡಿಕೆ ಹೆಚ್ಚಿದೆ. ದೀಪಾವಳಿಯಲ್ಲಿ ಆಯೋಜಿಸುವ ಮೇಳದಲ್ಲಿ ಕೆಲವೇ ಗಂಟೆಗಳಲ್ಲಿ ಈ ಸಾಮಗ್ರಿಗಳೆಲ್ಲ ಸೋಲ್ಡ್‌ ಔಟ್‌ ಆಗುತ್ತವೆ.

‘ಮೇಳದಲ್ಲಿ ಮಕ್ಕಳು ತಾವು ತಯಾರಿಸಿದ ವಸ್ತುಗಳನ್ನು ಪ್ರದರ್ಶನಕ್ಕಿ ಡುತ್ತಾರೆ. ಅದರಿಂದ ಬಂದ ಹಣವನ್ನು ಆಯಾ ಮಕ್ಕಳ ಪೋಷಕರಿಗೆ ತಲುಪಿಸುತ್ತೇವೆ’ ಎನ್ನುತ್ತಾರೆ ಅನುರಾಧ. ‘ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿಯಿದ್ದ ವಿನಯ್‌, ಚೆನ್ನಾಗಿ ಚಿತ್ರ ಬಿಡಿಸುತ್ತಿದ್ದ. ಅವನಿಗೆ ಚಿತ್ರಕಲಾ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಈಗ ಬೇರೆಡೆ ಕೆಲಸವೂ ಸಿಕ್ಕಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ತಾಳ್ಮೆ, ಪ್ರೀತಿಯ ಕಲಿಕೆ ಬೇಕು
‘ಈ ವಿಶೇಷ ಮಕ್ಕಳಿಗೆ ತಾಳ್ಮೆ ಮತ್ತು ಪ್ರೀತಿಯಿಂದ ಕಲಿಸಬೇಕು. ಪ್ರತಿ ಮಗುವಿನಲ್ಲೂ ಕೌಶಲವಿರುತ್ತದೆ. ಅದನ್ನು ಗುರುತಿಸಿ ಅವರು ಇಷ್ಟಪಡುವ ವಿಧಾನದಲ್ಲೇ ತರಬೇತಿ ನೀಡುತ್ತೇವೆ. ಹೆಚ್ಚಾಗಿ ಹಾಡು, ನೃತ್ಯ, ಕಥೆ ಇವರಿಗೆ ಇಷ್ಟ. ಹೀಗಾಗಿ ಶೈಕ್ಷಣಿಕ ವಿಷಯಗಳನ್ನೂ ಅವುಗಳ ಮೂಲಕವೇ ಹೇಳಿಕೊಡುತ್ತೇವೆ. ಮಕ್ಕಳ ಜತೆ ನಾವೂ ಆಡುತ್ತಾ, ಹಾಡುತ್ತಾ ಕಲಿಸುತ್ತೇವೆ’ ಎನ್ನುತ್ತಾರೆ ಶಾಲೆಯ ಆಡಳಿತಾಧಿಕಾರಿ ಕೆ. ಜೆ. ಪದ್ಮಾವತಿ.

ಶಾಲೆಯಲ್ಲಿ ವಿಶೇಷ ಮಕ್ಕಳಿಗಾಗಿಯೇ ಇಬ್ಬರು ಪ್ರತ್ಯೇಕ ಶಿಕ್ಷಕಿಯರಿದ್ದಾರೆ. ಯೋಗ, ಸಂಗೀತ, ಡಾನ್ಸ್‌, ಚಿತ್ರಕಲೆ ಹಾಗೂ ಕ್ರಾಫ್ಟ್‌ ಕಲಿಸಲು ಪ್ರತ್ಯೇಕ ಶಿಕ್ಷಕರು ಇದ್ದಾರೆ. ಮಕ್ಕಳಿಗೆ ಕಥೆ ಹೇಳಲು ಉಷಾ ಪ್ರಕಾಶ್‌ ಬರುತ್ತಾರೆ. ಕಾಲೇಜು ವಿದ್ಯಾರ್ಥಿಗಳೂ ಆಗಾಗ ಬಂದು ಕಾರ್ಯಕ್ರಮಗಳನ್ನು ನೀಡುತ್ತಾರಂತೆ.

ವಿಶೇಷ ಒಲಿಂಪಿಕ್ಸ್, ಯುವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಯುವ ದಸರಾಗಳಲ್ಲಿ ಪ್ರತಿ ವರ್ಷ ಈ ಮಕ್ಕಳು ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಶೇಷ ಒಲಿಂಪಿಕ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದವರೆಗೂ ಆಯ್ಕೆಯಾಗಿದ್ದಾರೆ. ‘ಕ್ರೀಡೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪ್ರತಿ ಶನಿವಾರ ಶಾಲೆಯ ಎದುರಿಗಿರುವ ಅಂಬೇಡ್ಕರ್ ಪಾರ್ಕ್‌ನಲ್ಲಿ ತರಬೇತಿ ನೀಡಲಾಗುತ್ತದೆ’ ಎನ್ನುತ್ತಾರೆ ಶಿಕ್ಷಕಿ ಅಶ್ವಿನಿ.

ಮಕ್ಕಳು ಮಂಗಳೂರು, ಬೆಂಗಳೂರು, ಮಂಡ್ಯಗಳಲ್ಲಿ ನಡೆದ ಕ್ರೀಡಾಕೂಟ ಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರವಾಸಕ್ಕೆ ಕರೆದೊಯ್ದಾಗಲೂ ಪ್ರತಿ ಕೆಲಸವನ್ನೂ ಅವರೇ ಮಾಡಿಕೊಳ್ಳುವಂತೆ ತರಬೇತಿ ನೀಡಲಾಗಿದೆ. ಹತ್ತು ಬಾರಿ ಹೇಳಿದರೂ ಅವರಿಗೆ ಬಂದೇ ಬಿಡುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ನಾವು ಹೇಳಿದ ವಿಧಾನಗಳನ್ನು ಪೋಷಕರೂ ಚಾಚೂ ತಪ್ಪದೇ ಮನೆಯಲ್ಲೂ ಅಭ್ಯಾಸ ಮಾಡಿಸಬೇಕಾಗುತ್ತದೆ’ ಎಂದು ಶಿಕ್ಷಕಿ ಅಶ್ವಿನಿ ವಿವರಿಸಿದರು.

ಸಮ್ಮರ್ ಕ್ಯಾಂಪ್ಯಾವಾಗ ಬರುತ್ತೆ?
ಮೈತ್ರಿ ಶಾಲೆಯ ಮಕ್ಕಳು ಸಮ್ಮರ್ ಕ್ಯಾಂಪ್ ಯಾವಾಗ ಬರುತ್ತದೆ ಎಂದು ಕಾಯುತ್ತಿರುತ್ತಾರೆ. ಒಟ್ಟು 10 ದಿನಗಳ ಕಾಲ ನಡೆಯುವ ಶಿಬಿರದಲ್ಲಿ 3-4 ದಿನಗಳ ಕಾಲ ಹೊರ ಊರುಗಳಿಗೆ ಪ್ರವಾಸ ಇರುತ್ತದೆ. 3 ದಿನ ಶಾಲೆಯಲ್ಲೇ ವಸತಿ ಇರುತ್ತದೆ. ಅಲ್ಲಿ ಆಟ, ಹಾಡು, ಡಾನ್ಸ್, ಯೋಗ, ಕ್ರಾಫ್ಟ್, ಡ್ರಾಯಿಂಗ್, ನಾಟಕ ಸೇರಿದಂತೆ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಈ ಕ್ಯಾಂಪ್ ಅನ್ನು ಯಾವಾಗಲೂ ಮಕ್ಕಳು ಸ್ಮರಿಸುತ್ತಾರೆ.ಸ್ವಾವಲಂಬನೆಯೇ ಖುಷಿ
ನನ್ನ ಸಹೋದರ ಗಿರೀಶ್‌ಗೆ ಶೇ 50ರಷ್ಟು ಬೌದ್ಧಿಕ ಸಮಸ್ಯೆ ಇತ್ತು. ಏಳೆಂಟು ವರ್ಷಗಳ ಕಾಲ ಮೈತ್ರಿ ಶಾಲೆಗೆ ಹೋಗಿದ್ದ. ಅಲ್ಲಿ ವ್ಯವಸ್ಥಿತ ತರಬೇತಿಯಿಂದಾಗಿ ಅವನು ಈಗ ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ ಅವನಿಗೆ ಕೆಲಸ ಸಿಕ್ಕಿದೆ. ಕೆಲಸ ಯಾವುದಾದರೇನು, ಆತ ಸ್ವಾವಲಂಬನೆಯ ದಾರಿಯಲ್ಲಿದ್ದಾನೆ ಎನ್ನುವುದೇ ಖುಷಿಯ ಸಂಗತಿ.
– ವೆಂಕಟೇಶ್‌, ಶ್ರೀರಾಂಪುರ, ಮೈಸೂರು

***
ಆತ್ಮವಿಶ್ವಾಸ ಮೂಡಲು ಸಹಾಯವಾಯಿತು
ನನ್ನ ಮಗ ಹರ್ಷ ಮೈತ್ರಿ ಶಾಲೆಯಲ್ಲಿ 10 ವರ್ಷಗಳ ಕಾಲ ತರಬೇತಿ ಪಡೆದಿದ್ದಾನೆ. ಅಲ್ಲಿ ತುಂಬಾ ತಾಳ್ಮೆಯಿಂದ ಪಾಠ ಹಾಗೂ ನಡವಳಿಕೆಗಳನ್ನು ಹೇಳಿಕೊಟ್ಟರು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಸಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲೂ ಉತ್ತಮ ಸಾಧನೆ ಮಾಡಿದ. ಇದರಿಂದ ಅವನಲ್ಲಿ ಆತ್ಮವಿಶ್ವಾಸ ಮೂಡಲು ಸಹಾಯವಾಯಿತು. ಮನೆಯ ಹತ್ತಿರವಿರುವ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಈಗ ಕೆಲಸ ಮಾಡುತ್ತಿದ್ದಾನೆ.
– ಶಾಂತಾ, ಅಗ್ರಹಾರ, ಮೈಸೂರು

(ಮಾಹಿತಿಗೆ ದೂ: 0821–2972013, ಮೊ: 9164560668)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT