ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಸಿನಿಮಾಗಳ ಅಪರೂಪದ ಮ್ಯೂಸಿಯಂ

Published 15 ಅಕ್ಟೋಬರ್ 2023, 0:30 IST
Last Updated 15 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಮೋಹನ್‌ದಾಸ್‌ ಕರಮ್‌ಚಂದ್ ಗಾಂಧಿ–ಪ್ರಪಂಚ ಕಂಡ ಪ್ರಖ್ಯಾತ ಸಮಾಜ ಪರಿವರ್ತಕರು. ಸತ್ಯಾಗ್ರಹ, ಉಪವಾಸ ಅಸಹಯೋಗ, ಅಹಿಂಸೆ ಎಂಬ ಅಸ್ತ್ರಗಳನ್ನು ಜಗತ್ತಿಗೆ ಕೊಟ್ಟ ಗಾಂಧೀಜಿ ಜನಮಾನಸದಲ್ಲಿ ಸೇರಿಹೋದವರು. ಮಾತು–ಬರವಣಿಗೆಯಿಂದ ಜನತೆಯೊಡನೆ ಸಂಭಾಷಿಸುತ್ತಿದ್ದ ಬಾಪು ಅವರಿಗೆ ಆಗಷ್ಟೇ ಆವಿಷ್ಕಾರಗೊಂಡಿದ್ದ ಕಲೆ–ವಿಜ್ಞಾನ ಒಳಗೊಂಡ ಸಂವಹನ ಮಾಧ್ಯಮ ಚಲನಚಿತ್ರದ ಬಗೆಗೆ ಒಲವಿರಲಿಲ್ಲ.

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಣಕ್ಕೆ ಇಳಿಯುವ ಮೊದಲೇ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಅಸ್ತ್ರಗಳನ್ನು ಉಪಯೋಗಿಸಿ ಯಶಕಂಡು ಮಹಾತ್ಮ ಎನ್ನಿಸಿಕೊಂಡಿದ್ದ ಗಾಂಧೀಜಿ ಪ್ರಭಾವಶಾಲಿ ಸಂವಹನ ಮಾಧ್ಯಮ ಸಿನಿಮಾದಿಂದ ದೂರವಿದ್ದರೂ ಸಿನಿಮಾ ಅವರನ್ನು ಹಿಂಬಾಲಿಸುತ್ತಲೇ ಇತ್ತು. ಈಗಲೂ ಹಿಂಬಾಲಿಸುತ್ತಿದೆ.

ತಮ್ಮ ಜೀವಿತಾವಧಿಯಲ್ಲಿ ಒಂದೆರಡು ಸಿನಿಮಾ, ಅದೂ ಕೆಲವು ರೀಲುಗಳನ್ನು ಮಾತ್ರ ಮಹಾತ್ಮ ಗಾಂಧಿ ನೋಡಿದ್ದರು. ಆದರೆ, ಅವರ ಬಗ್ಗೆ, ಅವರ ಹೋರಾಟ–ಆದರ್ಶದ ಕುರಿತು ಬಂದಿರುವ ಚಲನಚಿತ್ರಗಳು ಅಸಂಖ್ಯ. ಜಗತ್ತಿನ ಅನೇಕ ಭಾಷೆಗಳ ಚಿತ್ರಗಳಲ್ಲಿ ಗಾಂಧಿ ಮೂಡಿಬಂದಿರುವುದು ವಿಶೇಷ. ಚಲನಚಿತ್ರಗಳನ್ನು ವಿರೋಧಿಸುತ್ತಿದ್ದ ಗಾಂಧಿ ಅವರ ಕುರಿತು ಹಲವು ಹತ್ತು ಚಿತ್ರಗಳು ತಯಾರಾಗಿರುವುದು ಆಸಕ್ತಿಕರ ವಿಷಯ.

ಜಗತ್ತಿನುದ್ದಕ್ಕೂ ಅನೇಕ ಬಗೆಯ ಪ್ರಭಾವಗಳನ್ನು ಬೀರಿರುವ ಬಾಪು, ಚಿತ್ರಜಗತ್ತಿನ ಮೇಲೂ ತಮ್ಮ ಪ್ರಭಾವ ಬೀರಿದ್ದಾರೆ.

ಪ್ರಪಂಚದಲ್ಲಿ ಅತಿ ಹೆಚ್ಚು ಚಲನಚಿತ್ರಗಳನ್ನು ತಯಾರಿಸುವ ರಾಷ್ಟ್ರವೆಂದು ಹೆಸರು ಮೂಡಿರುವ ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ಸಂದಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಭಾರತದ ಪ್ರಮುಖ ಚಲನಚಿತ್ರ ತಯಾರಿಕಾ ಚಟುವಟಿಕೆಯ ತಾಣ ಮುಂಬೈನಲ್ಲಿ ರೂಪಿಸಿರುವ ಮ್ಯೂಸಿಯಂನಲ್ಲಿ ಗಾಂಧಿ ಹಾಗೂ ಚಲನಚಿತ್ರ ಸಂಗತಿ ಕುರಿತಂತೆ ಪ್ರತ್ಯೇಕ ವಿಭಾಗವೇ ಇದೆ. ಇಲ್ಲಿ ಗಾಂಧೀಜಿ ತಿರುಗಿಸುತ್ತಿದ್ದ ರಾಟೆಯೂ ಇದೆ. ಬಾಪು ಅವರನ್ನು ಕುರಿತು ತಯಾರಾದ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಪ್ರೊಜೆಕ್ಟರ್ ಪ್ರತಿಕೃತಿಯೂ ಇದೆ.

ಮಹಾತ್ಮ ಗಾಂಧಿ ಅವರನ್ನು ಕುರಿತಂತೆ ಮೊಟ್ಟಮೊದಲ ಸಾಕ್ಷ್ಯಚಿತ್ರವನ್ನು ನಿರ್ಮಿಸಿದವರು ಮದ್ರಾಸ್‌ನ ಪತ್ರಕರ್ತ ಎ.ಕೆ. ಚೆಟ್ಟಿಯಾರ್. ಗಾಂಧಿ ಭೇಟಿ ನೀಡಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸ್ಥಳಗಳಿಗೆ ಹೋಗಿ ಚಿತ್ರಿಕೆಗಳನ್ನು, ಮಾಹಿತಿಯನ್ನು ಏಕಾಂಗಿಯಾಗಿ ಸಂಗ್ರಹಿಸಿ ಅಪಾರ ಹಣ ವ್ಯಯಿಸಿದ್ದ ಚೆಟ್ಟಿಯಾರ್ ಅವರ ‘ಮಹಾತ್ಮ ಗಾಂಧಿ’ ಸಾಕ್ಷ್ಯಚಿತ್ರ ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನ, ಬಾಪೂ ಬದುಕಿರುವಾಗಲೇ ಬಿಡುಗಡೆಯಾಯಿತು.

ನಿಖರವಾದ ಮಾಹಿತಿ, ಉತ್ತಮ ಚಿತ್ರಕಥೆ, ಒಳ್ಳೆಯ ಸಂಗೀತ, ಗೀತೆಗಳು, ಛಾಯಾಗ್ರಹಣ ಇದ್ದ ಎ.ಕೆ. ಚೆಟ್ಟಿಯಾರ್ ಅವರ ‘ಮಹಾತ್ಮ ಗಾಂಧಿ’ ಸಾರ್ವಜನಿಕವಾಗಿ ಬಿಡುಗಡೆಯಾದರೂ (1940ರ ಆಗಸ್ಟ್ 23) ಅದರ ಪ್ರತಿ ಈಗ ಅಲಭ್ಯ. ಸಾಕ್ಷ್ಯಚಿತ್ರದ ಒಂದೆರಡು ತುಣುಕುಗಳಷ್ಟೆ ಇವೆ. ಇದರ ನಿರ್ಮಾಣಕ್ಕಾಗಿ ಪಟ್ಟ ಪಡಿಪಾಟಲಿನ ಬಗ್ಗೆ ಚೆಟ್ಟಿಯಾರ್ ಅವರೇ ಧಾರಾವಾಹಿಯಾಗಿ ಬರೆದಿದ್ದು, ಆ ಮಾಹಿತಿಯಿಂದ ಮಾತ್ರ ಈ ಸಾಕ್ಷ್ಯಚಿತ್ರ ಜೀವಂತವಾಗಿದೆ. ಅಟೆನ್‌ಬರೊ ಅವರ ‘ಗಾಂಧಿ’ ಸಿನಿಮಾ ಬಿಡುಗಡೆಯಾಗುವರೆಗೂ ಅನೇಕ ಭಾರತೀಯ ಭಾಷೆಗಳು ಹಾಗೂ ಆಂಗ್ಲ ಭಾಷೆಯಲ್ಲೂ ಸಿದ್ಧವಾಗಿ ಪ್ರದರ್ಶನಗೊಂಡ ಸಾಕ್ಷ್ಯಚಿತ್ರ ಇದಾಗಿತ್ತು.

ಭಜನೆ, ಗೀತಗಾಯನ ಇಷ್ಟಪಡುತ್ತಿದ್ದ ಬಾಪೂಜಿ ಕತ್ತಲಿನಲ್ಲಿ ಪರದೆ ಮೇಲೆ ಮೂಡುತ್ತಿದ್ದ ಸಿನಿಮಾವನ್ನು ಇಷ್ಟಪಟ್ಟಿರಲಿಲ್ಲ. ಇದನ್ನು ‘ಹರಿಜನ್‌’ ಪತ್ರಿಕೆಯಲ್ಲಿ ಕಾರಣಗಳ ಸಹಿತ ಬರೆದಿದ್ದರು.

ವಿಜಯ ಭಟ್ ಅವರ ಹಿಂದಿ ಚಿತ್ರ ‘ರಾಮರಾಜ್ಯ’ದ ಕೆಲ ರೀಲುಗಳನ್ನು ಗಾಂಧಿ ನೋಡಿದ್ದರು. ಅವುಗಳ ಪೋಸ್ಟರ್‌ಗಳು, ವಿಶ್ವವಿಖ್ಯಾತ ನಟ ಚಾರ್ಲಿ ಚಾಪ್ಲಿನ್‌ ಅವರೊಡನೆ ಆಗಿದ್ದ ಭೇಟಿ, ನಂತರ ಚಾಪ್ಲಿನ್‌ ತಯಾರಿಸಿದ ಮಾರ್ಡನ್‌ ಟೈಸ್ ಛಾಯಾಚಿತ್ರಗಳು, ಬಾಪೂಜಿ ಅವರ ತತ್ವಾದರ್ಶಗಳನ್ನು ಒಳಗೊಂಡ ಚಲನಚಿತ್ರಗಳ ಮಾಹಿತಿ, ಉತ್ತಮ ಛಾಯಾಚಿತ್ರಗಳು, ಸಿನಿಮಾ ಕುರಿತು ಬಾಪೂಜಿ ಬರೆದ ಬರಹಗಳಿರುವ ನಿಯತಕಾಲಿಕೆಗಳು– ಎಲ್ಲವೂ ಇಲ್ಲಿ ನೋಡಲು ಸಿಗುತ್ತವೆ.

ಗಾಂಧಿ ಹಾಗೂ ಚಲನಚಿತ್ರದ ನಡುವಿನ ಸಂಬಂಧವನ್ನು ವಿವರವಾಗಿ ತಿಳಿಹೇಳುವ ಈ ಪ್ರದರ್ಶನಾಂಗಣ ಮಕ್ಕಳಿಗೆ ಅಚ್ಚುಮೆಚ್ಚು.

ಚಾರ್ಲಿ ಚಾಪ್ಲಿನ್‌ ಅವರನ್ನು ಮಹಾತ್ಮ ಗಾಂಧಿ ಭೇಟಿಯಾಗಿದ್ದ ಸಂದರ್ಭದ ಫೋಟೊ
ಚಾರ್ಲಿ ಚಾಪ್ಲಿನ್‌ ಅವರನ್ನು ಮಹಾತ್ಮ ಗಾಂಧಿ ಭೇಟಿಯಾಗಿದ್ದ ಸಂದರ್ಭದ ಫೋಟೊ

ಚಿತ್ರಗಳು: ಎಸ್. ವಿಶ್ವೇಶ್ವರಪ್ಪ

ಮುಂಬೈನಲ್ಲಿ ರೂಪಿಸಿರುವ ಮ್ಯೂಸಿಯಂನಲ್ಲಿ ಗಾಂಧಿ ಹಾಗೂ ಚಲನಚಿತ್ರ ಸಂಗತಿ ಕುರಿತಂತೆ ಇರುವ ಪ್ರತ್ಯೇಕ ವಿಭಾಗದಲ್ಲಿನ ಪ್ರತಿಮೆ
ಮುಂಬೈನಲ್ಲಿ ರೂಪಿಸಿರುವ ಮ್ಯೂಸಿಯಂನಲ್ಲಿ ಗಾಂಧಿ ಹಾಗೂ ಚಲನಚಿತ್ರ ಸಂಗತಿ ಕುರಿತಂತೆ ಇರುವ ಪ್ರತ್ಯೇಕ ವಿಭಾಗದಲ್ಲಿನ ಪ್ರತಿಮೆ

ಚಿತ್ರಗಳು: ಎಸ್. ವಿಶ್ವೇಶ್ವರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT