ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಿಕ್ಷಯಾನಕ್ಕೆ ಮೈಸೂರು ಮಾದರಿ

Published 27 ಏಪ್ರಿಲ್ 2024, 23:30 IST
Last Updated 27 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಮೈಸೂರು ಹೊರವಲಯದ ಬೆಳವಾಡಿ ಕೈಗಾರಿಕಾ ಪ್ರದೇಶದ ‘ಕ್ರಾಫ್ಟಿಜಾನ್‌ (CRAFTIZAN) ಎಂಜಿನಿಯರಿಂಗ್‌ ಮಾಡೆಲ್ಸ್‌’ ಘಟಕದ ಹೊರಗೆ ನಿಂತರೆ, ಬೋರ್ಡ್‌ ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ. ಒಮ್ಮೆ ಗೇಟು ತೆರೆದರೆ ಕಾಣುವ ದೊಡ್ಡ ಹಜಾರದಲ್ಲಿ ವೆಲ್ಡಿಂಗ್‌ ಮಾಡುವವರು, ಪೈಪ್‌ಗಳನ್ನು ಕತ್ತರಿಸುವವರು, ಬಣ್ಣ ಬಳಿಯುವವರು ಕಾಣಿಸುತ್ತಾರೆ. ಕೆಲವು ಬೃಹತ್‌ ಮಾದರಿಗಳು ಕಣ್ಣಿಗೆ ಬಿದ್ದರೂ ತಕ್ಷಣಕ್ಕೆ ಅವು ಏನು ಎಂಬುದು ಅರಿವಾಗುವುದಿಲ್ಲ.

ಮತ್ತೇನಿದೆ ಅಲ್ಲಿ? ಎಂಬ ಕುತೂಹಲ ಈಗ ನಿಮಗೆ ಮೂಡಿರಬಹುದು. ಹಜಾರದ ಬಲಬದಿಯಲ್ಲಿರುವ ಪುಟ್ಟ ಕಚೇರಿಯೊಳಗೆ ಹೆಜ್ಜೆ ಹಾಕಿ, ಅಲ್ಲಿ ತಮ್ಮ ಕೆಲಸದಲ್ಲಿ ತಲ್ಲೀನರಾದ ತರುಣ–ತರುಣಿಯರನ್ನು ‌ಗಮನಿಸುತ್ತಾ ಎಡಭಾಗಕ್ಕೆ ತಿರುಗಿ ನೋಡಿದರೆ, ‘ನಮ್ಮೂರಲ್ಲೂ ಹೀಗೂ ಉಂಟೇ’ ಎಂಬ ಉದ್ಗಾರ ಗ್ಯಾರಂಟಿ. ಏಕೆಂದರೆ ಅಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಜೊತೆಗೆ ಪಾರಂಪರಿಕ ನಗರವು ಏರ್ಪಡಿಸಿಕೊಂಡ ಅಪರೂಪದ ನಂಟೊಂದು ಕಾಣಿಸುತ್ತದೆ. ಹೇಗೆಂದಿರಾ? ಬೆಳವಾಡಿ ಎಂಬ ಈ ಪ್ರದೇಶವು ಬಾಹ್ಯಾಕಾಶ ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ‘ಮಾದರಿ’ಗಳನ್ನು ಪೂರೈಸುತ್ತಿದೆ!

‘ಆರ್ಯಭಟ’, ‘ರೋಹಿಣಿ’ಯಿಂದ ‘ಚಂದ್ರಯಾನ’ದವರೆಗೆ, ‘ಮಂಗಳಯಾನ’ದಿಂದ ‘ಗಗನಯಾನ’ದವರೆಗೆ ಇಸ್ರೋ ಜಾರಿಗೊಳಿಸಿದ ವಿವಿಧ ಯೋಜನೆಗಳ ಉಡ್ಡಯನ ವಾಹಕಗಳಾದ (ರಾಕೆಟ್‌) ಪಿಎಸ್ಎಲ್‌ವಿ, ಎಎಸ್‌ಎಲ್‌ವಿ ಕಿರು–ಬೃಹತ್ ಮಾದರಿಗಳ ವಿಶ್ವವೇ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ರಾಕೆಟ್‌ಗಳನ್ನು ಬೈಸಿಕಲ್‌, ಎತ್ತಿನಗಾಡಿಗಳಲ್ಲಿಟ್ಟುಕೊಂಡು ಸಾಗಿಸಿದ ಐತಿಹಾಸಿಕ ಮಾದರಿಗಳೂ ಅಲ್ಲಿವೆ. ಉಪಗ್ರಹ ತಂತ್ರಜ್ಞಾನವನ್ನು ರೂಪಿಸಿ ಅದನ್ನು ಉನ್ನತ ನೆಲೆಗೆ ಒಯ್ಯುವಲ್ಲಿ ಇಸ್ರೋ ನಡೆಸಿದ ಸಾಹಸ ಪ್ರಯತ್ನಗಳ ಮಾದರಿಗಳು ರೋಮಾಂಚನ ಮೂಡಿಸುತ್ತವೆ. 

ಕಚೇರಿಯ ಒಳಭಾಗದಿಂದ ಹೊರಕ್ಕೆ ನಡೆಯುತ್ತಾ ಹೋದಂತೆ, 6 ಇಂಚಿನಿಂದ 100 ಅಡಿ ಎತ್ತರದವರೆಗಿನ ವೈವಿಧ್ಯಮಯ ರಾಕೆಟ್‌ಗಳನ್ನು ತಯಾರಿಸುವ ವಿವಿಧ ಹಂತಗಳು ಹೇಗಿರುತ್ತವೆ ಎಂಬುದನ್ನು ಕಣ್ಣಾರೆ ಕಾಣಬಹುದು. ಅಂದಹಾಗೆ, ಅವನ್ನೆಲ್ಲಾ ತಯಾರಿಸುವವರು ವಿಜ್ಞಾನಿಗಳೇನಲ್ಲ. ಐಟಿಐನಿಂದ ಎಂಜಿನಿಯರಿಂಗ್‌ವರೆಗೂ ಓದಿರುವ ಮೈಸೂರಿನ ತರುಣ–ತರುಣಿಯರು. ಅವರ ಸೂಕ್ಷ್ಮ ಕಸುಬುದಾರಿಕೆ, ಏಕಾಗ್ರತೆ, ತಲ್ಲೀನತೆಯೂ ಗಮನ ಸೆಳೆಯದೇ ಇರದು.

ದೇಶ–ವಿದೇಶಗಳ ಅತಿ ಪುರಾತನ ಗುಡಿ, ಚರ್ಚ್‌, ಮೃಗಾಲಯಗಳು, ಸೇತುವೆಯ ಮಾದರಿಗಳು, ಮ್ಯೂಸಿಯಂಗಳಿಗೆ ಅಗತ್ಯವಿರುವ ಮಾದರಿಗಳು ಸೇರಿದಂತೆ ವೈವಿಧ್ಯಮಯ ಮಾದರಿಗಳ ತಯಾರಿಕೆಯಿಂದ ಶುರುವಾದ ಉದ್ಯಮವು ಮೈಸೂರು ದಾಟಿ ದೇಶದಾದ್ಯಂತ ಹಬ್ಬಿದೆ ಎಂಬುದೇ ವಿಶೇಷ. ಇದುವರೆಗೆ 2 ಸಾವಿರ ವಿವಿಧ ಮಾದರಿಗಳು ಇಲ್ಲಿ ತಯಾರಾಗಿವೆ.

ಈಗ ಇಡೀ ದೇಶದಲ್ಲಿ ರಾಕೆಟ್‌, ಪಿಎಸ್ಎಲ್‌ವಿ ಕಿರು ಮಾದರಿಗಳ ತಯಾರಿಕೆಗೆ ಹೆಸರಾಗಿರುವ ‘ಕ್ರಾಫ್ಟಿಜಾನ್‌’ಗೆ ಇಸ್ರೋ ಸಂಸ್ಥೆಯೇ ಟಾಪ್‌ ಕಸ್ಟಮರ್‌. ಘಟಕದ ನಿರ್ಮಾತೃ ಶ್ರೀನಿವಾಸನ್‌ ರಾಮನಾಥನ್‌ ಅವರು ಸಹಜ ಕುತೂಹಲದಿಂದ ತಯಾರಿಸಿದ್ದ ರಾಕೆಟ್‌ ಮಾದರಿಗಳು ‌ಇಸ್ರೋದ ಅಧಿಕಾರಿ ಎನ್‌.ಸುಧೀರ್‌ಕುಮಾರ್‌ ಅವರ ಗಮನಕ್ಕೆ ಬಂದ ಬಳಿಕ, ಉದ್ಯಮಕ್ಕೊಂದು ಹೊಸ ತಿರುವು ಸಿಕ್ಕಿತು. ಇಸ್ರೋದ ಶಾಖೆಗಳಿಗೆ ರಾಕೆಟ್‌ ಮಾದರಿಗಳನ್ನು ಪೂರೈಸುವ ಅವಕಾಶ ಸಿಕ್ಕಿತು. ‘ಇಸ್ರೋ ತನ್ನ ಶೈಕ್ಷಣಿಕ ಉದ್ದೇಶಕ್ಕೆ ಅಗತ್ಯವಿರುವ ಮಾದರಿಗಳ ನಿರ್ಮಾಣದ ಕೆಲಸ ನೀಡುವ ಮೂಲಕ ನಮ್ಮ ಸಂಸ್ಥೆಯ ಬೆಳವಣಿಗೆಗೆ ಕಾರಣವಾಯಿತು’ ಎಂಬುದು ಅವರ ಹೆಮ್ಮೆಯ ನುಡಿ.

ವಾಲ್‌ ಮ್ಯೂಸಿಯಂ ಯೋಜನೆ

ಸದ್ಯ ಇಸ್ರೋ ತಾನು ಜಾರಿಗೊಳಿಸಿದ ವಿವಿಧ ಯೋಜನೆಗಳ ಮಾಹಿತಿ ನೀಡುವ, ಹಿತ್ತಾಳೆ ಮತ್ತು ಅಲ್ಯುಮಿನಿಯಂನಿಂದ ರೂಪಿಸಿದ 25ಕ್ಕೂ ಹೆಚ್ಚು ಕಿರು ಮಾದರಿಗಳಿರುವ 7X7 ಅಡಿ ಅಳತೆಯ ವಾಲ್‌ ಮ್ಯೂಸಿಯಂಗಳನ್ನು ಘಟಕದಲ್ಲಿ ಸಿದ್ಧಪಡಿಸಲಾಗುತ್ತಿದೆ. ‘ರಾಕೆಟ್‌ ವಿಜ್ಞಾನ’ದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವಂಥ ಮಾಹಿತಿಗಳೂ ಇದರಲ್ಲಿ ಅಡಕವಾಗಿರುವುದು ವಿಶೇಷ.

ಇದು ‘ಇಂಡಿಯಾ ಇನ್‌ ಸ್ಪೇಸ್‌’ (ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ) ಪರಿಕಲ್ಪನೆಯ ಅಡಿ ಇಸ್ರೋ ರೂಪಿಸಿರುವ ವಿಶೇಷ ಯೋಜನೆ. ಈ ಮ್ಯೂಸಿಯಂಗಳನ್ನು ಶಾಲೆಗಳಿಗೆ ವಿತರಿಸಿ ಎಳೆಯರಲ್ಲಿ ಬಾಹ್ಯಾಕಾಶದ ಬಗ್ಗೆ ಅರಿವು ಮೂಡಿಸುವುದೇ ಪ್ರಮುಖ ಉದ್ದೇಶ.

ರಾಕೆಟ್‌ ಮಾದರಿಗಳನ್ನು (scaled models) ತಯಾರಿಸಿಯೇ ಯಶಸ್ವಿ ಉದ್ಯಮ ನಡೆಸಬಹುದೆಂಬುಕ್ಕೆ ಈ ಘಟಕ ಹೀಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಶಾಲೆಗಳು, ಮ್ಯೂಸಿಯಂಗಳಿಗೆ ನೀಡಲು ನೂರಾರು ಮಾದರಿಗಳು ತಯಾರಾಗುತ್ತಿವೆ. ವಾರ್ಷಿಕ ₹6 ಕೋಟಿಯಷ್ಟು ವಹಿವಾಟು ನಡೆಯುತ್ತಿದೆ.

ಯೂನಿವರ್ಸಿಟಿ ಆಫ್‌ ಚೆನ್ನೈ, ಕೊಯಮತ್ತೂರಿನ ಪಿಎಸ್‌ಜಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್, ಅಹಮದಾಬಾದ್‌ನ ಸೈನ್ಸ್‌ ಸಿಟಿ, ಚೆನ್ನೈನ ಸವಿತಾ ವಿಶ್ವವಿದ್ಯಾಲಯ ಹಾಗೂ ಎಚ್‌ಎಎಲ್‌ಗೂ ಅಗತ್ಯವಿರುವ ಮಾದರಿಗಳನ್ನು ಮಾಡಿಕೊಡಲಾಗಿದೆ. ಸತತ ಅಧ್ಯಯನ ಮತ್ತು ಪ್ರಯೋಗಶೀಲತೆಯೇ ಈ ವೃತ್ತಿಯ ತಳಪಾಯ.

ಸ್ಥಳೀಯರಿಗೇ ಕೆಲಸ..

ಘಟಕದಲ್ಲಿ ಕೈಗಾರಿಕೆ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ 50 ತರುಣ–ತರುಣಿಯರಿಗೇ ಉದ್ಯೋಗ ನೀಡಿರುವುದು ವಿಶೇಷ. ಈಗ ಅಂಗವಿಕಲರಿಗೆ, ಅದರಲ್ಲೂ ವಾಕ್‌ ಶ್ರವಣ ದೋಷವುಳ್ಳ 15 ಮಂದಿಗೆ ಉದ್ಯೋಗ ನೀಡುವ ಚಿಂತನೆ ನಡೆದಿದೆ. ‘ಸ್ಥಳೀಯರಿಗೇ ಉದ್ಯೋಗ ನಮ್ಮ ಆದ್ಯತೆ’ –ಇದು ಘಟಕದ ಧ್ಯೇಯವಾಕ್ಯ. ದೇಶವ್ಯಾಪಿ ಉದ್ಯಮವೊಂದು ಸ್ಥಳೀಯರಿಗೆ ನೆರವಾಗುವ ಅನನ್ಯ ಮಾದರಿಯೂ ಇಲ್ಲಿದೆ.

‘ಬೃಹತ್ತಾದ ನಮ್ಮ ದೇಶದಲ್ಲಿ ಇಂಥ ಎಂಜಿನಿಯರಿಂಗ್‌ ಮಾದರಿಗಳನ್ನು ನಿರ್ಮಿಸುವ ಘಟಕಗಳು ಕನಿಷ್ಠ ನೂರಾದರೂ ಇರಬೇಕು. ಇರೋದು ನಮ್ಮದೊಂದೇ ಘಟಕ. ಇಂಥ ಮಾದರಿಗಳನ್ನು ಮಾಡುವವರನ್ನು ಹುಡುಕಿ ಎಂದು ಇಸ್ರೋದವರಿಗೂ ಕೇಳಿಕೊಂಡಿದ್ದೇನೆ. ಆರು ವರ್ಷದಿಂದ ಅವರೂ ಹುಡುಕುತ್ತಿದ್ದಾರೆ. ಇಷ್ಟೊಂದು ಅವಕಾಶಗಳಿರುವ ಈ ಕ್ಷೇತ್ರಕ್ಕೆ ಎಂಜಿನಿಯರಿಂಗ್‌ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಾಗಬೇಕು. ನಮ್ಮದೇ ದಾರಿ ಸೃಷ್ಟಿಸಿಕೊಂಡು ನಡೆಯಲು ಆಸಕ್ತಿ ಇರಬೇಕು. ಇತರರಿಗೂ ಅವಕಾಶ ನೀಡಬೇಕು. ಆಗ ನಮಗೂ ದೇಶಕ್ಕೂ ಒಳ್ಳೆಯದಾಗುತ್ತದೆ’ ಎಂದು ರಾಮನಾಥನ್ ಹೇಳುತ್ತಿದ್ದರೆ, ತರುಣ–ತರುಣಿಯರು ಉತ್ಸಾಹದಿಂದ ಮಾದರಿಗಳ ನಿರ್ಮಾಣದಲ್ಲಿ ತಲ್ಲೀನರಾಗಿದ್ದರು.

ತಂದೆಯ ಪ್ರೇರಣೆ

ಎಂಜಿನಿಯರಿಂಗ್‌ ಮಾದರಿಗಳ ತಯಾರಿಕೆಯನ್ನೇ ಬದುಕಾಗಿಸಿಕೊಳ್ಳುವಲ್ಲಿ ರಾಮನಾಥನ್‌ ಅವರಿಗೆ ತಂದೆ ಶ್ರೀನಿವಾಸನ್‌ ಅವರೇ ಪ್ರೇರಣೆ.

‘ಪುಣೆಯ ಹಿಂದೂಸ್ತಾನ್‌ ಆಂಟಿಬಯಾಟಿಕ್ಸ್‌ ಸಂಸ್ಥೆಯಲ್ಲಿ ಜನರಲ್‌ ಮ್ಯಾನೇಜರ್‌ ಆಗಿದ್ದ ತಂದೆ, ನನ್ನ 8ನೇ ವಯಸ್ಸಿನಲ್ಲಿದ್ದಾಗ ಕೊಡಿಸಿದ್ದ ಮೆಕಾನೋ ಸೆಟ್‌ (ವಿವಿಧ ಮಾದರಿಗಳನ್ನು ರೂಪಿಸಲು ಬೇಕಾದ ಆಟಿಕೆಗಳ ಸೆಟ್‌) ನನ್ನ ಉದ್ಯಮಶೀಲತೆಗೆ ಮೊದಲು ನೀರೆರೆದ ಘಟನೆ’ ಎಂದು ಸ್ಮರಿಸುವ 80ರ ವಯಸ್ಸಿನ ಉತ್ಸಾಹಿ ರಾಮನಾಥನ್‌, ಆಪ್ತರ ನಡುವೆ ‘ರಾಮ್‌ಜಿ’ ಎಂದೇ ಪ್ರಸಿದ್ಧಿ.

1967ರಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಅವರು ಕಾರ್ಪೆಂಟರಿ ಕಲಿತರು. 1975ರಲ್ಲಿ ಬೆಂಗಳೂರಿಗೆ ಬಂದು ‘ಟಚ್‌ ವುಡ್‌’ ಸಂಸ್ಥೆಯನ್ನು ಆರಂಭಿಸಿದ್ದರು. ಅದು ಲಾಭದಲ್ಲಿ ನಡೆದಿತ್ತು. ಆದರೆ ಎರಡೂವರೆ ದಶಕದ ಬಳಿಕ ಮುಚ್ಚಬೇಕಾಯಿತು. ನಂತರ 2003ರಲ್ಲಿ ಮೈಸೂರಿಗೆ ಬಂದರೂ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದರು. ಹುಣಸೂರಿನ ಪ್ಲೈವುಡ್‌ ಉದ್ಯಮಿ ಮೋಯಿಸ್‌ ವಾಘ್‌ ಅವರ ಸಲಹೆ, ಸಹಕಾರದಿಂದ 2018ರಲ್ಲಿ ‘ಕ್ರಾಫ್ಟಿಜಾನ್‌’ ಶುರು ಮಾಡಿದ ಬಳಿಕ ಹಿಂದಿರುಗಿ ನೋಡಲಿಲ್ಲ. ಆದರೆ ಕಲ್ಲು–ಮುಳ್ಳಿನ ಹಾದಿಯನ್ನು ಮರೆತಿಲ್ಲ. ಕಲಿತ ಕನ್ನಡ, ಇಂಗ್ಲಿಷ್‌, ಹಿಂದಿ, ಗುಜರಾತಿ, ಮರಾಠಿ ಭಾಷೆಗಳು ಅವರನ್ನು ಮುನ್ನಡೆಸುತ್ತಿವೆ.

ಚಂದ್ರಯಾನ್‌ ವಿಕ್ರಮ್‌ ಲ್ಯಾಂಡರ್
ಚಂದ್ರಯಾನ್‌ ವಿಕ್ರಮ್‌ ಲ್ಯಾಂಡರ್
ಎಚ್‌ಎಎಲ್‌ಗೆ ಸಿದ್ಧಪಡಿಸಿದ ಹೆಲಿಕಾಪ್ಟರ್‌ ಮಾದರಿಯೊಂದಿಗೆ ರಾಮ್‌ಜಿ
ಪ್ರಜಾವಾಣಿ ಚಿತ್ರ; ಹಂಪಾ ನಾಗರಾಜ್
ಎಚ್‌ಎಎಲ್‌ಗೆ ಸಿದ್ಧಪಡಿಸಿದ ಹೆಲಿಕಾಪ್ಟರ್‌ ಮಾದರಿಯೊಂದಿಗೆ ರಾಮ್‌ಜಿ ಪ್ರಜಾವಾಣಿ ಚಿತ್ರ; ಹಂಪಾ ನಾಗರಾಜ್
ಇಸ್ರೋಗಾಗಿ ಸಿದ್ಧಪಡಿಸಿದ ‘ಇಂಡಿಯಾ ಇನ್‌ ಸ್ಪೇಸ್‌’ ವಾಲ್‌ ಮ್ಯೂಸಿಯಂ  ಹೀಗಿದೆ..
ಪ್ರಜಾವಾಣಿ ಚಿತ್ರ; ಹಂಪಾ ನಾಗರಾಜ್
ಇಸ್ರೋಗಾಗಿ ಸಿದ್ಧಪಡಿಸಿದ ‘ಇಂಡಿಯಾ ಇನ್‌ ಸ್ಪೇಸ್‌’ ವಾಲ್‌ ಮ್ಯೂಸಿಯಂ  ಹೀಗಿದೆ.. ಪ್ರಜಾವಾಣಿ ಚಿತ್ರ; ಹಂಪಾ ನಾಗರಾಜ್
ವಾಯು ಮತ್ತು ಜಲಮಾರ್ಗವೆರಡರಲ್ಲೂ ಸರಕು ಸಾಗಿಸುವ ವಾಹನ (amphibious tank)
ವಾಯು ಮತ್ತು ಜಲಮಾರ್ಗವೆರಡರಲ್ಲೂ ಸರಕು ಸಾಗಿಸುವ ವಾಹನ (amphibious tank)
ರೈಲು ಎಂಜಿನ್‌ (locomotive engine)
ರೈಲು ಎಂಜಿನ್‌ (locomotive engine)

ತಂದೆಯ ಪ್ರೇರಣೆ

ಎಂಜಿನಿಯರಿಂಗ್‌ ಮಾದರಿಗಳ ತಯಾರಿಕೆಯನ್ನೇ ಬದುಕಾಗಿಸಿಕೊಳ್ಳುವಲ್ಲಿ ರಾಮನಾಥನ್‌ ಅವರಿಗೆ ತಂದೆ ಶ್ರೀನಿವಾಸನ್‌ ಅವರೇ ಪ್ರೇರಣೆ.

‘ಪುಣೆಯ ಹಿಂದೂಸ್ತಾನ್‌ ಆಂಟಿಬಯಾಟಿಕ್ಸ್‌ ಸಂಸ್ಥೆಯಲ್ಲಿ ಜನರಲ್‌ ಮ್ಯಾನೇಜರ್‌ ಆಗಿದ್ದ ತಂದೆ ನನ್ನ 8ನೇ ವಯಸ್ಸಿನಲ್ಲಿದ್ದಾಗ ಕೊಡಿಸಿದ್ದ ಮೆಕಾನೋ ಸೆಟ್‌ (ವಿವಿಧ ಮಾದರಿಗಳನ್ನು ರೂಪಿಸಲು ಬೇಕಾದ ಆಟಿಕೆಗಳ ಸೆಟ್‌) ನನ್ನ ಉದ್ಯಮಶೀಲತೆಗೆ ಮೊದಲು ನೀರೆರೆದ ಘಟನೆ’ ಎಂದು ಸ್ಮರಿಸುವ 80ರ ವಯಸ್ಸಿನ ಉತ್ಸಾಹಿ ರಾಮನಾಥನ್‌ ಆಪ್ತರ ನಡುವೆ ‘ರಾಮ್‌ಜಿ’ ಎಂದೇ ಪ್ರಸಿದ್ಧಿ.

1967ರಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಅವರು ಕಾರ್ಪೆಂಟರಿ ಕಲಿತರು. 1975ರಲ್ಲಿ ಬೆಂಗಳೂರಿಗೆ ಬಂದು ‘ಟಚ್‌ ವುಡ್‌’ ಸಂಸ್ಥೆಯನ್ನು ಆರಂಭಿಸಿದ್ದರು. ಅದು ಲಾಭದಲ್ಲಿ ನಡೆದಿತ್ತು. ಆದರೆ ಎರಡೂವರೆ ದಶಕದ ಬಳಿಕ ಮುಚ್ಚಬೇಕಾಯಿತು. ನಂತರ 2003ರಲ್ಲಿ ಮೈಸೂರಿಗೆ ಬಂದರೂ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದರು. ಹುಣಸೂರಿನ ಪ್ಲೈವುಡ್‌ ಉದ್ಯಮಿ ಮೋಯಿಸ್‌ ವಾಘ್‌ ಅವರ ಸಲಹೆ ಸಹಕಾರದಿಂದ 2018ರಲ್ಲಿ ‘ಕ್ರಾಫ್ಟಿಜಾನ್‌’ ಶುರು ಮಾಡಿದ ಬಳಿಕ ಹಿಂದಿರುಗಿ ನೋಡಲಿಲ್ಲ. ಆದರೆ ಕಲ್ಲು–ಮುಳ್ಳಿನ ಹಾದಿಯನ್ನು ಮರೆತಿಲ್ಲ. ಕಲಿತ ಕನ್ನಡ ಇಂಗ್ಲಿಷ್‌ ಹಿಂದಿ ಗುಜರಾತಿ ಮರಾಠಿ ಭಾಷೆಗಳು ಅವರನ್ನು ಮುನ್ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT