‘ಶ ಬ್ದಗಾರುಡಿಗ’ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ. ಬೇಂದ್ರೆ) ಕನ್ನಡ ಸಾಹಿತ್ಯದ ಮೇರು ಪ್ರತಿಭೆ. ಅಂಬಿಕಾತನಯದತ್ತನ ಕವಿವಾಣಿಗೆ ಮನಸೋಲದ ಕನ್ನಡಿಗನಿಲ್ಲ ಎನ್ನುವುದು ಸಹಜ ಮಾತಾಗುವುದೇ ವಿನಃ ಅದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ದ.ರಾ.ಬೇಂದ್ರೆಯವರು ಮಥಿಸಿ ಮಥಿಸಿ ಕವನಗಳ ನವನೀತವನ್ನೆ ಕಡೆದವರು. ಬೇಂದ್ರೆ ಕಾವ್ಯ ಹೊಳೆಯಿಸುವ ರಸಾನುಭೂತಿಗಳು ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಬೀಸುವ ಚುಂಬಕ ಗಾಳಿ’ಯ ವೇಗ-ಆವೇಗಗಳನ್ನು ಉಂಟುಮಾಡುವಂಥವು.

ಕನ್ನಡಕ್ಕೆ ಎರಡನೆಯ ಜ್ಞಾನಪೀಠ ತಂದುಕೊಟ್ಟ ಕವನ ಸಂಕಲನ ‘ನಾಕುತಂತಿ’ ಬೇಂದ್ರೆಯವರ 19ನೆಯ ಕೃತಿಯಾಗಿ 1964 ರಲ್ಲಿ ಪ್ರಕಟವಾಯಿತು. ಈ ಕೃತಿಗೆ ಈಗ 60 ವರ್ಷದ ಷಷ್ಠಿಪೂರ್ತಿಯ ಸಂಭ್ರಮ. ಇದರಲ್ಲಿ ಒಟ್ಟು 44 ಕವಿತೆಗಳಿದ್ದು ಈ ಸಂಕಲನದ ಸಮಗ್ರ ತಾತ್ವಿಕ ತಳಹದಿಯೇ ‘ನಾಲ್ಕರ’ ಒಗಟಿನ ಮೇಲೆ ನಿಂತಿದೆ ಎನ್ನಬಹುದು.

ಬೇಂದ್ರೆಯವರ ಕಾವ್ಯ ಸೃಷ್ಟಿಯ ಮೇಲೆ ಪ್ರಭಾವ ಬೀರಿದ ಸಮ್ಯಕ್ ಶಕ್ತಿಗಳು ಅನೇಕ. ಕವಿಮನವು ತನ್ನ ಚಿಂತನೆಯ ಕ್ರಮಕ್ಕೆ ಪೂರಕವಾಗಿಯೋ ಪ್ರತಿಷೇಧವಾಗಿಯೋ ಬರುವ ಯಾವುದನ್ನೇ ಆಗಲಿ ಅನುಸಂಧಾನಿಸುವುದು ಅನಿವಾರ್ಯ. ಹಾಗೆ ಬೇಂದ್ರೆಯವರ ಮೇಲೆ ಪ್ರಗಾಢವಾದ ಪ್ರಭಾವ ಬೀರಿದವರು ಹನ್ನೆರಡನೆಯ ಶತಮಾನದ ಶಿವಶರಣರು- ಅದರಲ್ಲೂ ಪ್ರಮುಖವಾಗಿ ಅಲ್ಲಮಪ್ರಭು, ಬಸವಣ್ಣ ಮತ್ತು ಅಕ್ಕಮಹಾದೇವಿಯರಂಥ ವಚನಕಾರರು. ಈ ಕುರಿತು ಬೇಂದ್ರೆಯವರು 1974 ರಷ್ಟು ಹಿಂದೆಯೇ ತಮ್ಮ ‘ಸಾಹಿತ್ಯದ ವಿರಾಟ್ ಸ್ವರೂಪ’ ಎಂಬ ಗ್ರಂಥದ ಪುಟ 196 ರಲ್ಲಿ ಸ್ಪಷ್ಟವಾಗಿಯೇ ಹೀಗೆ ಬರೆಯುತ್ತಾರೆ:

‘ಸಾಹಿತ್ಯ ಕವಿಯ ಸೃಷ್ಟಿ ಶಬ್ದದ ಮಾಯೆ. ವಚನಗಳ ಮಾತು ಹಾಗಲ್ಲ. ಬಸವನ ವಚನಗಳೇ ಆಗಲಿ, ಮಹಾದೇವಿಯ ವಚನಗಳೇ ಆಗಲಿ, ಪ್ರಭುವಿನ ವಚನಗಳೇ ಆಗಲಿ ಅವುಗಳಲ್ಲಿ ಮಹತ್ತರವಾದ ಪ್ರಾಣಶಕ್ತಿಯು ಸ್ಪಂದಿಸುವುದು. ಅವರ ಜೀವನವೇ ಬೇರೆ ಕವಿಗಳಿಗೆ ಕಾವ್ಯ ವಸ್ತುವಾಯಿತು. ಸಾಹಿತ್ಯ ಕವಿಗಳಿಗೆ ಆ ವರ ಜೀವನವಿಲ್ಲ’.

ಇದಲ್ಲದೆ, ತಮ್ಮ ‘ನಮನ’ ಎನ್ನುವ ಕವನ ಸಂಗ್ರಹದಲ್ಲಿ ಬರೆದ ‘ನನ್ನದು ಈ ಕನ್ನಡ ನಾಡು’ ಎಂಬ ಕವಿತೆಯಲ್ಲಿ ಶಿವಶರಣರ ಕುರಿತು ಬೇಂದ್ರೆಯವರು ಹಾಡಿದ್ದು ಹೀಗೆ:

‘ಆ ನಂದಿಯಲ್ಲಿ, ಹಲ ಮಂದಿಯಲ್ಲಿ, ಯುಗ ಸಂಧಿಯಲ್ಲಿ ಬಸವನ್ನಾ ಬೆಳಗಿಸಿ
ಅನುಭಾವ ಮೋಡ, ಘನದಾಚೆ ನೋಡ, ಸಿಡಿಲ್ ಮಿಂಚು ಕೂಡ ಪ್ರಭುವಾಗಿ ಬೆಳಗಿಸಿ
ಇಹದೇವಿಯಾಗಿ, ಮಹದೇವಿಯಾಗಿ, ಬಹತಾಯಿಯಾಗಿ ಶ್ರೀಶೈಲಾ ತೊಳಗಿಸಿ
ಕಲ್ಯಾಣಿ ಕಟ್ಟಿ, ಉಳವಿಯನು ಮುಟ್ಟಿ, ದಿಗ್ದೇಶ ಮೆಟ್ಟಿ ಲಿಂಗಾಂಗ ಅಪ್ಪಿದಾ’

ಇದು ಶಿವಶರಣರನ್ನು ಬೇಂದ್ರೆಯವರು ಸಾಕ್ಷಾತ್ಕರಿಸಿಕೊಂಡು ಕೊಂಡಾಡಿದ ಪರಿ.

ಕನ್ನಡ ಸಾಹಿತ್ಯದ ನಾಲ್ಕು ನಾಯಕ ರತ್ನಗಳು:

ಈ ಮೇಲೆ ಉದಾಹರಿಸಿದ ದೃಷ್ಟಾಂತಗಳಲ್ಲದೆ ಬೇಂದ್ರೆಯವರು ಇನ್ನೊಂದೆಡೆ ಅಲ್ಲಮಪ್ರಭುವಿನ ಕುರಿತು ಬಹು ವಿಶೇಷವಾದ ರೀತಿಯಲ್ಲಿ ವಿವೇಚಿಸಿದ್ದಾರೆ. ‘ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು’ ಎಂಬುದು ಬೇಂದ್ರೆಯವರ ಮಹತ್ವದ ಗದ್ಯ ಕೃತಿ. ಇದು 1968 ರಲ್ಲಿ ಬೇಂದ್ರೆಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳ ಸಂಕಲಿತ ಕೃತಿ. ಈ ಕೃತಿಯಲ್ಲಿ ಬೇಂದ್ರೆಯವರು ಹೆಸರಿಸುವ ಕನ್ನಡ ಸಾಹಿತ್ಯದ ನಾಲ್ಕು ನಾಯಕ ರತ್ನಗಳಲ್ಲಿ ಅಲ್ಲಮಪ್ರಭು ಸಹ ಒಬ್ಬ ನಾಯಕ ರತ್ನ. ಆದ್ದರಿಂದ, ಬೇಂದ್ರೆಯವರ ಮೇಲಿನ ಶಿವಶರಣರ ಪ್ರಭಾವ ಅವರ ಕವನ, ಗದ್ಯ ಕೃತಿಗಳಿಂದಲೇ ನಮಗೆ ತಿಳಿಯುತ್ತದೆ.

ಹಾಗಾದರೆ, ನಾಕುತಂತಿ ಕವನಕ್ಕೆ ಯಾವ ವಚನ ಸ್ಫೂರ್ತಿಯಾಯಿತು?

ನಾಕುತಂತಿ ಕವಿತೆಯಲ್ಲಿ ಬೇಂದ್ರೆಯವರು ‘ನಾನು, ನೀನು, ಆನು, ತಾನು’ ಎಂಬ ಚತರ್ರಸಗಳನ್ನು ಜೀವನದ ಆತ್ಯಂತಿಕ ತಾತ್ವಿಕ ನೆಲೆಗಟ್ಟೆಂದು ಹೇಳುತ್ತಾರೆ. ಇದಕ್ಕೆ ಆಧಾರವಾಗಿ ನಿಲ್ಲುವುದು ಅಲ್ಲಮಪ್ರಭುವಿನ ಈ ವಚನ:

‘ನಾನೆಂಬುದು ಪ್ರಮಾಣ, ನೀನೆಂಬುದು ಪ್ರಮಾಣ
ಸ್ವಯಂ ಎಂಬುದು ಪ್ರಮಾಣ, ಪರಂ ಎಂಬುದು ಪ್ರಮಾಣ
ಪ್ರಮಾಣ ಎಂಬುದು ಪ್ರಮಾಣ
ಗುಹೇಶ್ವರನೆಂಬುದು ಅಪ್ರಮಾಣ!’

ಗಮನಿಸಬೇಕಾದ ಅಂಶವೆಂದರೆ ಇದೊಂದು ವಚನವನ್ನು ಬೇಂದ್ರೆಯವರು ಅನೇಕ ಕಡೆ ಪದೇಪದೇ ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ‘ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು' ಕೃತಿಯಲ್ಲಿ ಪುಟ 26 ರಲ್ಲಿ ಮತ್ತು ಅವರ ಮರಾಠಿ ಗ್ರಂಥವಾದ ‘ಸಂತ ಮಹಂತಾಂಚಾ ಪೂರ್ಣ ಶಂಭೂ ವಿಠ್ಠಲ’ದ ಪುಟ 12ರಲ್ಲಿ ಅಲ್ಲದೆ ಇನ್ನೂ ಹಲವಾರು ಸಂದರ್ಭಗಳಲ್ಲಿ ಅಲ್ಲಮಪ್ರಭುವಿನ ಈ ವಚನವನ್ನು ಬೇಂದ್ರೆಯವರು ನಿರ್ವಚಿಸಿದ್ದಾರೆ. ಬೇಂದ್ರೆಯವರ ಮೇಲೆ ಅಲ್ಲಮಪ್ರಭು ಅಷ್ಟು ಆಳವಾದ ಪ್ರಭಾವ ಬೀರಲು ಕಾರಣವೆಂದರೆ, ಬೇಂದ್ರೆಯವರೆ ಹೇಳುವಂತೆ, ಅಲ್ಲಮಪ್ರಭುವಿನ ಪರಿಪೂರ್ಣ ವ್ಯಕ್ತಿತ್ವ ಮತ್ತು ನಿರಹಂಕಾರ. ಅಲ್ಲಮಪ್ರಭುವಿನ ಕುರಿತು ಬೇಂದ್ರೆಯವರ ಈ ಮಾತುಗಳನ್ನು ನಾವು ಗಮನಿಸಬೇಕು:

‘ಅಲ್ಲಮಪ್ರಭುದೇವನೆಂದರೆ ಭಕ್ತ ಹೃದಯದ ‘ಎದೆಯ ಒಕ್ಕಲಿಗ’ ನಿದ್ದಂತೆ. ಅವರಲ್ಲಿ ನಾವು ಅಹಂಕಾರದ ಲವಲೇಶವನ್ನೂ ಕಾಣುವಂತಿಲ್ಲ. ಅಲ್ಲಮಪ್ರಭುದೇವರ ಪ್ರತಿಯೊಂದು ಮಾತಿನಲ್ಲಿಯೂ ನಾವು ಜ್ಯೋತಿಯನ್ನು ಕಾಣಬಹುದು. ಜ್ಯೋತಿ ಎಂದರೆ ಮಾರ್ಗದರ್ಶಕ ಶಕ್ತಿ. ಇದು ವಿಜ್ಞಾನ ಮಾರ್ಗ!’

ಅಲ್ಲಮಪ್ರಭು ಈ ವಚನದಲ್ಲಿ ‘ನಾನು, ನೀನು, ಸ್ವಯಂ, ಪರಂ’ ಎಂಬ ನಾಲ್ಕು ರೂಪಗಳ ಮೂಲಕ ತಾತ್ವಿಕ ಸಂದೇಶವೊಂದನ್ನು ನೀಡುತ್ತಾನೆ. ಈ ವಚನವು ನಾಕುತಂತಿ ಕವನದಲ್ಲಿ ಬೇಂದ್ರೆಯವರು ಸಾಕ್ಷಾತ್ಕರಿಸಿಕೊಂಡ ಅನುಭವದ ಅಧ್ಯವಸಾಯವಾಗುತ್ತದೆ. ಹಾಗೆ ಬೇಂದ್ರೆಯವರ ಚಿಂತನೆಯ ಅನುಭವಕ್ಕೆ ಪ್ರೇರಕವಾಗಿ ಅಲ್ಲಮಪ್ರಭುವಿನ ಅನುಭಾವದ ವಚನವು ನಿಂತು ಪ್ರತಿಫಲಿತವಾಗುವುದು ಅಭಿಷ್ಟುತವಾದ ‘ನಾಕುತಂತಿ’ ಎಂಬ ಚತುಷ್ಟಯ.

ಜಿ. ಎಸ್. ಆಮೂರರ ಅಭಿಮತ:

ಬೇಂದ್ರೆಯವರ ಕಾವ್ಯದ ಕುರಿತು ಆಳವಾಗಿ ವಿಮರ್ಶಿಸಿದ ಜಿ. ಎಸ್. ಆಮೂರರು ನಾಕುತಂತಿ ಕವಿತೆಯ ಕುರಿತು ಹೇಳುವುದು ಹೀಗೆ:

‘ಆತ್ಮಾ ಚತುಷ್ಟಾತ್’ ಎಂಬ ಮಾತು ಉಪನಿಷತ್ತಿನಲ್ಲಿದೆ. ಆದರೆ ಬೇಂದ್ರೆಯವರ ಸಾಲುಗಳ ನಿಜವಾದ ಮೂಲ ಅಲ್ಲಮನ ವಚನದಲ್ಲಿದೆ ಎಂದೆನಿಸುತ್ತದೆ. ಇಲ್ಲಿ ‘ನಾನು’, ‘ನೀನು’ ಹಾಗೆಯೇ ಉಳಿದು ‘ಸ್ವಯಂ’ ಎನ್ನುವುದು ‘ಆನು’ ಆಗಿ ‘ಪರಂ’ ಎನ್ನುವುದು ‘ತಾನು’ ಆಗಿ ಪರಿವರ್ತಿತವಾಗಿದೆ’.

ಅಲ್ಲಮಪ್ರಭುವಿನ ವಚನವನ್ನು ಆಧಾರವಾಗಿಟ್ಟುಕೊಂಡು ತಮ್ಮ ಅನುಭವದ ಮೂಸೆಯಿಂದ ಬೇಂದ್ರೆಯವರು ನಾಕುತಂತಿ ಕವಿತೆಯಲ್ಲಿ ಈ ‘ನಾನು, ನೀನು, ಆನು, ತಾನು’ ಎಂಬ ಚತುಷ್ಟಯವನ್ನು ನಾಲ್ಕು ಭಾಗಗಳಲ್ಲಿ ಅದರ ನಾಲ್ಕು ತತ್ವ ಸ್ವರೂಪಗಳಲ್ಲಿ ನಿರೂಪಿಸುತ್ತಾರೆ.

ಇಂಥ ಅನುಪಮವಾದ ಕೃತಿಗೆ ಈಗ ಷಷ್ಠಿಪೂರ್ತಿ ಎನ್ನುವುದು ಒಂದು ಸಂಭ್ರಮವೂ ಹೌದು, ಬೇಂದ್ರೆಯವರ ನಾಕುತಂತಿಯನ್ನು ಇಂದಿನ ಕಾಲದ ಸಾಂಸ್ಕೃತಿಕ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ಅನುಸಂಧಾನಿಸುವ ಹೊಸ ಅವಕಾಶವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.