ಮೈಸೂರಿನ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಟೆ ಆಗಷ್ಟೇ ರಿಂಗಣಿಸಿತ್ತು. ಒಂದು ಮೂಲೆಯಲ್ಲಿ ವರ್ಚುವಲ್ ರಿಯಾಲಿಟಿ (ವಿಆರ್) ಹೆಡ್ಸೆಟ್ಗಳನ್ನು ಧರಿಸಿದ್ದ ಮಕ್ಕಳು ಲ್ಯಾಪ್ಟಾಪ್ ಪರದೆಯ ಮುಂದೆ ನಿಂತಿದ್ದರು. ಇದೇ ವೇಳೆ, ವಿದ್ಯಾರ್ಥಿಗಳ ಇನ್ನೊಂದು ಗುಂಪು 3ಡಿ ಪ್ರಿಂಟರ್ ಚಾಲೂ ಆಗುವುದನ್ನೇ ಕಾಯುತ್ತಿತ್ತು. ಈ ವಿದ್ಯಾರ್ಥಿಗಳ ಗುಂಪುಗಳ ನಡುವೆ ವಿಜ್ಞಾನ ಶಿಕ್ಷಕ ಮಧುಸೂದನ್ ಕೆ.ಎಸ್. ನಿಂತಿದ್ದರು. ವಿಆರ್ ಹೆಡ್ಸೆಟ್ಗಳು, 3ಡಿ ಪ್ರಿಂಟರ್ಗಳನ್ನು ಆ ಶಾಲೆಯ ವಿದ್ಯಾರ್ಥಿಗಳು ಬಳಸುತ್ತಿರುವುದರ ಹಿಂದೆ ಇರುವುದು ಈ ಮೇಷ್ಟ್ರು. ಅವರು ಒಂದು ಸಾಮಾನ್ಯ ಸರ್ಕಾರಿ ಶಾಲೆಯನ್ನು ಪುಟ್ಟ ನಾವಿನ್ಯ ಕಲ್ಪನೆಗಳ ಕೇಂದ್ರವನ್ನಾಗಿ (ಇನೊವೇಶನ್ ಹಬ್) ರೂಪಿಸಿದ್ದಾರೆ.

2025ರ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಶಿಕ್ಷಕ ಮಧುಸೂದನ್, ಮೈಸೂರು ಜಿಲ್ಲೆಯ ಕೇದಗ ಗ್ರಾಮದವರು. ಬೋಧನೆಯೇ ಜೀವನದ ವಿಧಾನವಾಗಿದ್ದ ಕುಟುಂಬಕ್ಕೆ ಸೇರಿದವರು. ಅವರ ತಂದೆ ಸರ್ಕಾರಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದರು. ಅವರ ಶಿಸ್ತಿನ ಜೀವನವು ಮಧುಸೂದನ್ ಬದುಕು ಮತ್ತು ವ್ಯಕ್ತಿತ್ವವನ್ನು ರೂಪಿಸಿತು. ಕ್ರೀಡೆಯನ್ನು ಇಷ್ಟ ಪಡುವ ಅವರು ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡುವ ವೃತ್ತಿಯನ್ನು ಬಿಟ್ಟು ಬೇರೆ ಉದ್ಯೋಗದ ಬಗ್ಗೆ ಯೋಚಿಸಿಯೂ ಇರಲಿಲ್ಲ.

ಹಾಗಾಗಿ, ಬಿಎಸ್ಸಿ ಪದವಿ ಪಡೆದ ನಂತರ ಬಿಇ.ಡಿ ಮಾಡಿದರು. ವಿದ್ಯಾರ್ಥಿಯಾಗಿ ಒಂದು ಬಾರಿ ತರಗತಿಯಿಂದ ಓಡಿ ಹೋಗಲು ಯತ್ನಿಸಿದ್ದ ಅವರು, ಆ ತರಗತಿಯೇ ತಮ್ಮ ಆಟದ ಮೈದಾನ ಎಂಬುದನ್ನು ಬಹುಬೇಗ ಅರಿತುಕೊಂಡರು. ಶಿಕ್ಷಕರಾಗಿದ್ದುಕೊಂಡೇ ತಮ್ಮ ಆಸಕ್ತಿಯ ವಿಷಯವಾದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

ಮಧುಸೂದನ್ ಅವರ ವೃತ್ತಿ ಜೀವನ 2008ರಲ್ಲಿ ಮೈಸೂರು ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯಲ್ಲಿ ಆರಂಭವಾಯಿತು. ಮುಂದಿನ 11 ವರ್ಷಗಳಲ್ಲಿ ಅವರು ಹಲವು ಗ್ರಾಮೀಣ ಶಾಲೆಗಳಿಗೆ ನಿಯೋಜನೆಗೊಂಡರು. ಅಲ್ಲಿ, ಕೃಷಿಯೊಂದಿಗೆ ಮನೆ ಕೆಲಸಗಳ ಜವಾಬ್ದಾರಿಗಳನ್ನೂ ಹೊಂದಿರುವ ಮಕ್ಕಳೇ ಇವರ ವಿದ್ಯಾರ್ಥಿಗಳಾಗಿದ್ದರು. ಇದು ಅವರಿಗೆ ಜೀವನದ ಬಹುದೊಡ್ಡ ಪಾಠ ಕಲಿಸಿತು.

2019ರಲ್ಲಿ ಹಿನಕಲ್ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾದರು. ಅಲ್ಲಿ ಮಕ್ಕಳು ವಸ್ತುಗಳನ್ನು ಮುಟ್ಟುವ, ಮುರಿಯುವ, ಅದನ್ನು ರಿಪೇರಿ ಮಾಡುವ ಮತ್ತು ಪುನಃ ಅದನ್ನು ಸಿದ್ಧಪಡಿಸುವುದಕ್ಕೆ ಅವಕಾಶ ಕಲ್ಪಿಸುವ ವಾತಾವರಣವನ್ನು ಸೃಷ್ಟಿಸಲು ಮಧುಸೂದನ್ ಹೊರಟರು. ‘ಈ ಪ್ರಪಂಚದಲ್ಲಿ ಬದುಕುಳಿಯಲು ಮತ್ತು ಅರ್ಥಪೂರ್ಣ ಜೀವನ ನಡೆಸಲು ಒಂದು ಮಗುವಿಗೆ ಏನೆಲ್ಲ ತಿಳಿದಿರಬೇಕು’ ಎಂಬ ಮೂಲಪ್ರಶ್ನೆಯನ್ನು ತಮಗೆ ತಾವು ಕೇಳಿಕೊಂಡರು.

ತರಗತಿ ಕೊಠಡಿಯೇ ವರ್ಕ್ಶಾಪ್

ಈ ಪ್ರಶ್ನೆಗೆ ಉತ್ತರವಾಗಿ ತಯಾರಾಗಿದ್ದು, ಬೋರ್ಡ್ ಹೊಂದಿರುವ ತರಗತಿ ಬದಲಿಗೆ, ಆಧುನಿಕ ‘ವರ್ಕ್ಶಾಪ್’ ಅನ್ನು ಹೋಲುವ ಕೊಠಡಿ. ಅದರ ಒಂದು ಗೋಡೆಯಲ್ಲಿ ನೇತುಹಾಕಲಾಗಿರುವ ಮರದ ಹಲಗೆಯಲ್ಲಿ ವಿವಿಧ ಸಲಕರಣೆಗಳನ್ನು ಒಪ್ಪವಾಗಿ ಜೋಡಿಸಿಡಲಾಗಿದೆ. ಆ ಹಲಗೆಯನ್ನು ರೂಪಿಸಿದವರೂ ವಿದ್ಯಾರ್ಥಿಗಳೇ. ಪ್ರಾಯೋಗಿಕ ಅನುಭವ ಸಹಿತ ಕಲಿಕೆಯ ಭಾಗವಾಗಿ ಅದು ರೂಪುಗೊಂಡಿದೆ. ಮಕ್ಕಳಿಗೆ ಮೇಲ್ಮೈ ಅಳತೆ ಅಳೆಯುವುದು, ಜಿಯಾಮೆಟ್ರಿಯನ್ನು ಹೇಳಿಕೊಡಲು ಮಧುಸೂದನ್ ಅವರು ಈ ಫಲಕವನ್ನು ಬಳಸುತ್ತಾರೆ. ಅವರು ಗಣಿತ ಕಲಿಸುವಾಗ ಪಠ್ಯದ ಬದಲಿಗೆ ಮರದ ತುಂಡು, ಪುಟ್ಟ ಹಲಗೆಗಳನ್ನು ಉಪಯೋಗಿಸುತ್ತಾರೆ. 5ನೇ ಮತ್ತು 6ನೇ ತರಗತಿಯ ವಿದ್ಯಾರ್ಥಿಗಳು ಮರದ ಹಲಗೆಯನ್ನು ಕತ್ತರಿಸಿ, ನಂತರ ಅವುಗಳನ್ನು ಜೋಡಿಸಿ ಕೋನಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.

ಮಧುಸೂದನ್ ತಮ್ಮದೇ ಹಣದಿಂದ ಸಲಕರಣೆಗಳು, ವಿಆರ್ ಹೆಡ್ಸೆಟ್ಗಳು, ರೊಬೊಟಿಕ್ ಕಿಟ್ಗಳನ್ನು ಖರೀದಿಸಿದ್ದಾರೆ. ಈವರೆಗೆ ಪ್ರಯೋಗಾಲಯ ಮತ್ತು ಅದಕ್ಕೆ ಸಂಬಂಧಿಸಿದ ಇತರ ವ್ಯವಸ್ಥೆಗಳಿಗಾಗಿ ₹6 ಲಕ್ಷ ವ್ಯಯಿಸಿದ್ದಾರೆ. ಸ್ನೇಹಿತರು, ಹಿತೈಷಿಗಳು ಕೂಡ ನೆರವಾಗಿದ್ದಾರೆ. ಸ್ಥಳೀಯವಾಗಿ ಸಂಗ್ರಹಿಸಿದ ನಿಧಿಯಿಂದ ಮೊದಲು ಪ್ರಯೋಗಾಲಯ ಆರಂಭಿಸಲಾಗಿತ್ತು. ಆ ಪ್ರಯತ್ನ ಯಶಸ್ವಿಯಾಗಿದ್ದರಿಂದ ಇನ್ನಷ್ಟು ದೊಡ್ಡ ಯೋಜನೆಗಳಿಗೆ ಕೈಹಾಕಲು ಅವರಿಗೆ ಪ್ರೇರಣೆ ಸಿಕ್ಕಿದೆ.

ಓದು ಮತ್ತು ಆಸಕ್ತಿ

ಇಂತಹ ಕೆಲಸ ಮಾಡಲು ಮಧುಸೂದನ್ ಅವರಿಗೆ ಪ್ರೇರಣೆ ನೀಡಿದ್ದು, ಅವರ ಓದು ಮತ್ತು ಶಿಕ್ಷಣ ಕ್ಷೇತ್ರದ ಮೇಲಿದ್ದ ಆಸಕ್ತಿ. ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ವಲಯದಲ್ಲಿ ಆಗಿರುವ ಮತ್ತು ಈಗ ಆಗುತ್ತಿರುವ ಸಾಧನೆಗಳ ಬಗ್ಗೆ ಓದುವ ಹವ್ಯಾಸವನ್ನು ಅವರು ಇಟ್ಟುಕೊಂಡಿದ್ದಾರೆ. ಅದರಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಮೌಲ್ಯಮಾಪನ (ಪಿಐಎಸ್ಎ) ಎಂಬ ಕಾರ್ಯಕ್ರಮ ಅವರ ಗಮನ ಸೆಳೆಯಿತು. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು 15 ವರ್ಷದ ಮಕ್ಕಳು ಓದು, ಗಣಿತ ಮತ್ತು ವಿಜ್ಞಾನದ ಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಈ ಕಾರ್ಯಕ್ರಮದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಇದರೊಂದಿಗೆ ಸಮಾನತೆ ಮತ್ತು ಕೌಶಲಗಳನ್ನು ಕೇಂದ್ರೀಕರಿಸಿರುವ ನಾರ್ವೆಯ ಶಿಕ್ಷಣ ವ್ಯವಸ್ಥೆಯೂ ಅವರಿಗೆ ಪ್ರಭಾವ ಬೀರಿತ್ತು. ಇವೆಲ್ಲವನ್ನೂ ಅವರು ತಮ್ಮ ಶಾಲೆಯಲ್ಲೂ ಅಳವಡಿಸಿಕೊಳ್ಳಲು ತೀರ್ಮಾನಿಸಿದರು.

ಅವರ ನವೀನ ಪರಿಕಲ್ಪನೆಗಳು ಹಾರ್ಡ್ವೇರ್ಗಷ್ಟೇ ಸೀಮಿತವಾಗಿಲ್ಲ. ಮಧುಸೂದನ್ ಅವರು ಕಲಿಕಾ ನಿರ್ವಹಣಾ ವ್ಯವಸ್ಥೆಯೊಂದನ್ನು (ಎಲ್ಎಂಎಸ್) ಖರೀದಿಸಿ, ಅದನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡಿದ್ದಾರೆ. ಅದರ ಮೂಲಕ 50 ವಿದ್ಯಾರ್ಥಿಗಳ ಹಾಜರಾತಿಯನ್ನು ಅವರು ಕ್ಯೂಆರ್ ಕೋಡ್ ಮೂಲಕ ಪರಿಶೀಲಿಸುತ್ತಿದ್ದಾರೆ. ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ನೀಡುವ ಹೋಂವರ್ಕ್ಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ರಸಪ್ರಶ್ನೆಗಳನ್ನೂ ನಡೆಸುತ್ತಿದ್ದಾರೆ. ಪೋಷಕರು ಕೂಡ ಈ ವ್ಯವಸ್ಥೆಗೆ ಲಾಗಿನ್ ಆಗಿ ಮಕ್ಕಳ ಶೈಕ್ಷಣಿಕ ಸಾಧನೆಯನ್ನು, ಉತ್ತರ ಪತ್ರಿಕೆಗಳನ್ನು ವೀಕ್ಷಿಸಬಹುದು. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಅದನ್ನು ಇನ್ನಷ್ಟು ಸುಧಾರಿಸುವ, ವಿಸ್ತರಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.

‘ನಾನು ಈವರೆಗೆ ಟಿವಿಯಲ್ಲಿ ಮಾತ್ರ ವಿಆರ್ ಹೆಡ್ಸೆಟ್, ರೊಬೋಟಿಕ್ಸ್ ಮತ್ತು ಸ್ಮಾರ್ಟ್ ಬೋರ್ಡ್ಗಳನ್ನು ನೋಡಿದ್ದೆ’ ಎಂಬುದು ಐದನೇ ತರಗತಿ ವಿದ್ಯಾರ್ಥಿನಿ ಪ್ರೇಕ್ಷಾಳ ಮಾತು. ಆಕೆ ಈಗ ಪಠ್ಯಪುಸ್ತಕದಲ್ಲಿರುವ ಪಠ್ಯವನ್ನು ಬಾಯಿಪಾಠ ಮಾಡುವುದರ ಬದಲು ಶಾಲೆಯ ಪ್ರಯೋಗಾಲಯದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಾ ಸಮಯ ಕಳೆಯುತ್ತಾಳೆ.

ಮಧುಸೂದನ್ ಅವರ ಪ್ರಯತ್ನ ಖಾಸಗಿ ಶಾಲೆಗಳ ಗಮನಸೆಳೆದಿದೆ. ತಮ್ಮಲ್ಲಿಗೆ ಬರುವಂತೆ ಕೇಳಿಕೊಂಡಿವೆ. ಆದರೆ, ಅವರು ಸರ್ಕಾರಿ ಶಾಲಾ ವ್ಯವಸ್ಥೆಯಲ್ಲೇ ಉಳಿಯಲು ಬಯಸಿದ್ದಾರೆ. ‘ಇಲ್ಲಿನ ಮಕ್ಕಳಿಗೆ ಈ ಮಾದರಿಯ ಶಿಕ್ಷಣದ ಅಗತ್ಯ ಹೆಚ್ಚಿದೆ’ ಎಂಬುದು ಅವರ ಅಭಿಪ್ರಾಯ. ಅತ್ಯಂತ ವ್ಯವಸ್ಥಿತವಾದ ರೊಬೋಟಿಕ್ಸ್ ಪ್ರಯೋಗಾಲಯವನ್ನು ಸ್ಥಾಪಿಸುವುದು ಅವರ ಮುಂದಿನ ಗುರಿ. ಅದು ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ತೆರೆದಿರಬೇಕು ಎಂಬುದು ಅವರ ಆಶಯ.

ಮೈಸೂರು ಡಯಟ್ನಲ್ಲಿ ಉಪನ್ಯಾಸಕಿಯಾಗಿರುವ ಭಾಗ್ಯಲಕ್ಷ್ಮಿ ಎ. ಅವರು ಮಧುಸೂದನ್ ಅವರ ಕೆಲಸವನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ‘ಅವರಷ್ಟೇ ಶ್ರದ್ಧೆ, ಬದ್ಧತೆಯಿಂದ ಕೆಲಸ ಮಾಡುವ ಶಿಕ್ಷಕರು ನಮಗೆ ಸಿಕ್ಕಿದರೆ, ಅವರು ರೂಪಿಸಿರುವ ಶಿಕ್ಷಣ, ಬೋಧನೆಯ ಮಾದರಿಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ’ ಎಂಬುದು ಅವರ ಮೆಚ್ಚುಗೆಯ ಮಾತು.

ಒಂದು ಕಾಲದಲ್ಲಿ ಚೆಂಡನ್ನು ಹಿಡಿಯುವುದಕ್ಕಾಗಿ ತರಗತಿಗಳಿಂದ ಓಡುತ್ತಿದ್ದ ಬಾಲಕನ ಜೀವನ ಪಯಣವು ಈಗ ಪೂರ್ತಿ ಚಕ್ರದಂತೆ ತಿರುಗಿದೆ. ಈಗ ಸಲಕರಣೆಗಳು, ಯಂತ್ರಗಳನ್ನು ಹೊಂದಿರುವ ಪ್ರಯೋಗಾಲಯವೇ ಅವರ ಆಟದ ಮೈದಾನವಾಗಿದೆ. ಪ್ರಯೋಗಾಲಯದಲ್ಲಿರುವ ವಸ್ತುಗಳ ಮೇಲೆ ಕೈಯಾಡಿಸುವ ಮಕ್ಕಳು ಏನು ಸಾಧಿಸಬಲ್ಲರು ಎಂಬುದನ್ನೂ ಅವರು ಅರಿತುಕೊಂಡಿದ್ದಾರೆ.

ಅನುವಾದ: ಸೂರ್ಯನಾರಾಯಣ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.