ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಡಿನ್‌ಯುಕ್ತ ಉಪ್ಪೂ ವಿಜ್ಞಾನಿಯ ಋಣವೂ

Published 4 ನವೆಂಬರ್ 2023, 23:30 IST
Last Updated 4 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಹೈದರಾಬಾದ್‌ನ ವಿಜ್ಞಾನಿ ಮಿರ್ಜಾ ಮೊಹಮ್ಮದ್ ತಖ್ವಿ ಖಾನ್ ಅಯೋಡಿನ್‌ಯುಕ್ತ ಉಪ್ಪಿನಿಂದ ಗಳಗಂಡ ಕಾಯಿಲೆ ನಿವಾರಿಸಬಹುದು ಎಂದು ಹೇಳಿ ಸುಮ್ಮನಾಗಲಿಲ್ಲ. ಸಮುದ್ರದ ಪಾಚಿಯಿಂದ ಅಯೋಡಿನ್ ತೆಗೆಯುವ ಸಂಶೋಧನೆಯನ್ನೂ ನಡೆಸಿ, ಯಶಸ್ವಿಯಾದರು. ಆರ್‌ಒ ತಂತ್ರಜ್ಞಾನದ ಶುದ್ಧ ಕುಡಿಯುವ ನೀರಿನ ಘಟಕವನ್ನು ದೇಶದಲ್ಲಿ ಮೊದಲು ರೂಪಿಸಿದವರೂ ಅವರೇ.

***

ನಾಗಾಲ್ಯಾಂಡ್ ಮತ್ತು ಮಿಜೋರಾಂನ ಬುಡಕಟ್ಟುಗಳ ಜನರನ್ನು ಗಾಯಿಟರ್ (ಗಳಗಂಡ) ಕಾಯಿಲೆ ಬಾಧಿಸುತ್ತಿದ್ದ ದಿನಗಳವು. ಅದು ಯಾವುದರಿಂದ ಬರುತ್ತದೆ, ಚಿಕಿತ್ಸೆ ಏನು ಎಂದು ಗೊತ್ತಾಗದೆ ಒದ್ದಾಡುತ್ತಿದ್ದ ಜನರಿಗೆ ವಿಜ್ಞಾನಿಯೊಬ್ಬರು ಅಯೋಡಿನ್‌ಯುಕ್ತ ಉಪ್ಪು ಸೇವಿಸಿದರೆ ಸರಿಹೋಗುತ್ತದೆ ಎಂದರು. ಜನರಿಗೆ ಅದು ಅರ್ಥವಾಗಲಿಲ್ಲ. ವಿಜ್ಞಾನಿಯನ್ನು ಮಿಕಿಮಿಕಿ ನೋಡಿದರು. ಆಗ ವಿಜ್ಞಾನಿಯೇ ಖುದ್ದಾಗಿ ಅಯೋಡಿನ್‌ಯುಕ್ತ ಉಪ್ಪು ತಯಾರಿಸುವುದನ್ನು ಕಲಿಸಿದರು. ಅದನ್ನು ಸೇವಿಸಲು ಶುರುಮಾಡಿದ ನಂತರ ಜನರ ಕಾಯಿಲೆ ಕಳೆಯಿತು. ಕೃತಜ್ಞತಾಪೂರ್ವಕವಾಗಿ ವಿಜ್ಞಾನಿಗೆ ಏನು ಉಡುಗೊರೆ ಕೊಡುವುದೆಂದು ಹೊಳೆಯದ ಮಗ್ಧರು ತಮ್ಮ ಬುಡಕಟ್ಟಿನ ಸುಂದರ ಕನ್ಯೆಯೊಬ್ಬಳನ್ನು ಮುಂದೆ ನಿಲ್ಲಿಸಿ, ‘ಇವಳನ್ನು ನಿಮಗೆ ಮದುವೆ ಮಾಡಿಕೊಡುತ್ತೇವೆ’ ಎಂದಿದ್ದರಂತೆ! ಅಯೋಡಿನ್‌ಯುಕ್ತ ಉಪ್ಪು ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ ಹೈದರಾಬಾದ್‌ನ ಆ ವಿಜ್ಞಾನಿಯ ಹೆಸರು ಮಿರ್ಜಾ ಮೊಹಮ್ಮದ್ ತಖ್ವಿ ಖಾನ್.

ಉಪ್ಪಿನ ಋಣ

‘ಉಪ್ಪಿಗಿಂತ ರುಚಿಯಿಲ್ಲ’ ಎಂಬ ಮಾತು ಕೇಳದವರೇ ಇಲ್ಲ. ಮಾಡಿದ ಆಡುಗೆಗೆ ಸೇರಿದರಷ್ಟೇ ಉಪ್ಪಿಗೆ ಸಾರ್ಥಕತೆ. ಈಗಿನ ಕಾಲಮಾನಕ್ಕೆ ಆಡುಗೆ ರುಚಿಯಾಗಿದ್ದರಷ್ಟೇ ಸಾಲದು, ಆರೋಗ್ಯವೂ ವೃದ್ಧಿಸಬೇಕು. ರುಚಿ, ಆರೋಗ್ಯ ಎರಡಕ್ಕೂ ಬೇಕಾಗುವ ಉಪ್ಪಿನಲ್ಲಿ ಅಯೋಡಿನ್ ಅಂಶ ಇರಲೇಬೇಕೆಂದು, ಇರದಿದ್ದರೆ ಅತ್ಯಗತ್ಯವಾಗಿ ಸೇರಿಸಬೇಕೆಂದು ಹೇಳಿದ ಈ ದೇಶ ಕಂಡ ಅಪರೂಪದ ವಿಜ್ಞಾನಿ ತಖ್ವಿ ಖಾನ್‌ಗೆ ನಾವೆಲ್ಲ ಋಣಿಯಾಗಿರಲೇಬೇಕು. ಇಂತಹ ಖಾನ್ ಸಾಹೇಬರಿಗೆ ಈಗ ತೊಂಬತ್ಮೂರರ ಹರೆಯ.

ಸುದ್ದಿವಾಹಿನಿಗಳ ಕಾರ್ಯಕ್ರಮಗಳ ಮಧ್ಯೆ ತೂರಿಬರುವ ಉಪ್ಪಿನ ಜಾಹೀರಾತಿನಲ್ಲಿ ಅಯೋಡಿನ್‌ಯುಕ್ತ ಉಪ್ಪಿನ ಪ್ರಸ್ತಾಪವಾಗುತ್ತಲೇ ಇರುತ್ತದೆ. ‘ಅಯೋಡಿನ್’ ಎಂಬ ಮೂಲ ವಸ್ತುವನ್ನು (ಆರೋಗ್ಯ ಚೂರ್ಣವನ್ನು) ಕಂಡುಹಿಡಿದವನು ಬ್ರಿಟಿಷ್ ವಿಜ್ಞಾನಿ ಡೇವಿಡ್ ಹಂಫ್ರಿ. ಮನುಷ್ಯನ ದೇಹದಲ್ಲಿ ಥೈರಾಯಿಡ್ ರಸದೂತವನ್ನು ಉತ್ಪಾದಿಸಲು ಇದು ಬೇಕೇ ಬೇಕು. ಥೈರಾಯಿಡ್ ರಸದೂತಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸವಾದಾಗ ಜನರು ತೀವ್ರತರವಾದ ಮಾನಸಿಕ ಕಾಯಿಲೆ, ಅಂಗವೈಕಲ್ಯ, ಕುಂದಿದ ದೈಹಿಕ ಬೆಳವಣಿಗೆ, ಕಿವುಡು ಮತ್ತು ಮೂಕತನ, ಮೆಳ್ಳೆಗಣ್ಣು, ದೋಷಯುಕ್ತ ನಡಿಗೆ, ಹಿರಿಯರಲ್ಲಿ ನಿಶ್ಯಕ್ತಿ, ಗಳಗಂಡ ರೋಗ, ಗರ್ಭಪಾತ, ಮೃತ ಶಿಶು ಜನನ (ಮರಣಜಾತ ಶಿಶು) ಸಂಖ್ಯೆಯಲ್ಲಿ ಹೆಚ್ಚಳ ಸೇರಿದಂತೆ ಇನ್ನೂ ಅನೇಕ ನ್ಯೂನತೆಗಳಿಗೆ ಒಳಗಾಗುತ್ತಾರೆ.

ಆಗ ಇಂದಿರಾಗಾಂಧಿ ಪ್ರಧಾನಿಯಾಗಿದ್ದರು. ಆಹಾರದಲ್ಲಿ ಉಂಟಾದ ಅಯೋಡಿನ್ ಕೊರತೆಯಿಂದ ದೇಶದ ಬಹಳಷ್ಟು ಜನ ಬುದ್ಧಿಮಾಂದ್ಯತೆ ಮತ್ತು ಗಾಯಿಟರ್ ಕಾಯಿಲೆಯಿಂದ ಬಳಲುತ್ತಿದ್ದರು. ನಮ್ಮ ದೇಶದ ಆಹಾರ ಕ್ರಮದಲ್ಲಿ ಅಯೋಡಿನ್ ಸಂಯುಕ್ತದ ಕೊರತೆ ಹೆಚ್ಚಾಗಿದ್ದು, ಇದನ್ನು ಪೂರೈಸುವುದು ಹೇಗೆ ಎಂಬ ಪ್ರಶ್ನೆ ಎದುರಲ್ಲಿತ್ತು. ಅದಕ್ಕೆ ಉತ್ತರ ನೀಡಿದ್ದು ಭಾವ್‌ನಗರ್‌ದ ಕೇಂದ್ರೀಯ ಉಪ್ಪು ಮತ್ತು ಸಾಗರ ರಸಾಯನಿಕ ಸಂಶೋಧನಾ ಕೇಂದ್ರದ ಉಸ್ತುವಾರಿಯಾಗಿದ್ದ ತಖ್ವಿ ಖಾನ್. ದೇಶದ ಜನ ಸೇವಿಸುವ ಉಪ್ಪಿನಲ್ಲಿ ಅಯೋಡಿನ್ ಇರುವಂತೆ ನೋಡಿಕೊಳ್ಳಲು ಸಾಹೇಬರಿಗೆ ಬುಲಾವ್ ಕಳಿಸಿದ ಪ್ರಧಾನಿ ಇಂದಿರಾ, ಕೂಡಲೇ ಕೆಲಸ ಶುರುಮಾಡಲು ಬಂಡವಾಳದ ಜೊತೆಗೆ ಮತ್ತೇನು ಬೇಕು ಎಂದು ಕೇಳಿದರು. ಇಡೀ ದೇಶದ ಜನ ಸೇವಿಸುವ ಉಪ್ಪಿನಲ್ಲಿ ಅಯೋಡಿನ್ ಅಂಶ ಸೇರಿಸಲು ಭಾರಿ ಪ್ರಮಾಣದ ಅಯೋಡಿನ್‌ನ ಅವಶ್ಯಕತೆ ಇತ್ತು. ಎಲ್ಲರಿಗೂ ಬೇಕಾಗುವಷ್ಟು ಅಯೋಡಿನ್‌ಯುಕ್ತ ಉಪ್ಪು ತಯಾರಿಕೆ ಸರ್ಕಾರಿ ಸಂಸ್ಥೆಗಳಿಂದ ಸಾಧ್ಯವಿಲ್ಲ, ಖಾಸಗಿಯವರೂ ಕೈಜೋಡಿಸಿದರೆ ಆಗುತ್ತದೆ ಎಂದು ಕೆಲಸ ಶುರುಮಾಡಿದರು.

ದೇಸೀ ಸಂಶೋಧನೆ: ಸಮುದ್ರದ ಪಾಚಿಯಿಂದ ಅಯೋಡಿನ್ ಹೊರತೆಗೆಯುವ ವಿನೂತನ ಸಂಶೋಧನೆ ಮಾಡಿ ಯಶಸ್ವಿಯಾದ ವಿಜ್ಞಾನಿ ತಕ್ವಿ ಖಾನ್‌ ಅವರನ್ನು ಹೈದರಾಬಾದ್‌ನ ಡೇವಿಡ್ ಹಂಫ್ರಿ ಎಂದೇ ಕರೆಯಲಾಗುತ್ತದೆ. ಓಸ್ಮಾನಿಯ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥರೂ ಮತ್ತು ನಿಜಾಮ್ ಕಾಲೇಜಿನ ಪ್ರಾಚಾರ್ಯರಾಗಿ ಕೆಲಸ ಮಾಡಿದ್ದ ಖಾನ್ ಸಾಹೇಬರು, ಸಮುದ್ರದ ಕಂದು ಪಾಚಿಯಲ್ಲಿ ಸಾಕಷ್ಟು ಅಯೋಡಿನ್ ಇರುವುದನ್ನು ಕಂಡುಕೊಂಡಿದ್ದರು. ಪಾಚಿಯನ್ನು ಒಣಗಿಸಿ, ಸುಟ್ಟು ಪುಡಿ ಮಾಡಿ, ನೀರಿನಲ್ಲಿ ಕರಗಿಸಿದಾಗ ಅಯೋಡಿನ್ ಸಿಗುತ್ತದೆ ಎಂಬ ದೇಸೀ ತಂತ್ರಜ್ಞಾನ ಅವರಿಗೆ ಗೊತ್ತಿತ್ತು. ಇಂದಿರಾಗಾಂಧಿಯವರಿಂದ ಕರೆ ಬಂದ ದಿನಗಳಲ್ಲಿ ಭಾವ್‌ನಗರ್‌ನ ಸಂಶೋಧನಾ ಕೇಂದ್ರದಲ್ಲಿ ಪಾಚಿಯಿಂದ ಯುರೇನಿಯಂ ತೆಗೆಯುವ ತಂತ್ರಜ್ಞಾನಕ್ಕಾಗಿ ತಕ್ವಿ ಖಾನ್ ಶ್ರಮಿಸುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ರಸಾಯನಿಕ ಕ್ರಿಯೆಗಳಿಂದ ವಿಕಿರಣ ಹೊಮ್ಮಲು ಶುರುವಾದಾಗ, ಆ ಯೋಜನೆಯನ್ನು ಕೈಬಿಟ್ಟು ಅಯೋಡಿನ್ ಪಡೆಯುವುದರತ್ತ ಗಮನಹರಿಸಿದರು.

ನೆಲ-ನೀರಿನ ಋಣ: ನಾವೆಲ್ಲ ಮನೆಗೆ ಕೊಳ್ಳುವ ರಿವರ್ಸ್ ಆಸ್ಮೋಸಿಸ್ (ಆರ್‌ಒ) ತಂತ್ರಜ್ಞಾನದ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ಭಾರತದಲ್ಲಿ ಮೊದಲು ರೂಪಿಸಿದ ಕೀರ್ತಿ ಕೂಡ ಖಾನ್ ಸಾಹೇಬರಿಗೆ ಸಲ್ಲುತ್ತದೆ. ‘ಮೇಕ್ ಇನ್ ಇಂಡಿಯ’ ಧ್ಯೇಯವನ್ನು ಎಂಬತ್ತರ ದಶಕದಲ್ಲಿಯೇ ಅನುಸರಿಸಿ ಉಪ್ಪುನೀರಿನ ಲವಣಾಂಶವನ್ನು ತೆಗೆದುಹಾಕಲು ಬೇಕಾದ ತಂತ್ರಜ್ಞಾನವನ್ನು ಅತ್ಯಂತ ಕಡಿಮೆ ದರದಲ್ಲಿ ಪ್ರತಿ ಲೀಟರ್‌ಗೆ ಒಂದು ಪೈಸೆಯಂತೆ ಜನರ ಕೈಗೆಟುವಂತೆ ಮಾಡಿದ್ದರು. ರಾಜಸ್ಥಾನ ಮತ್ತು ಗುಜರಾತಿನ ಸೌರಾಷ್ಟ್ರ ಭಾಗಗಳ ಕುಡಿಯುವ ನೀರಿನಲ್ಲಿ ಕ್ಷಾರ ಮತ್ತು ಲವಣಾಂಶ ಅತಿ ಎನಿಸುವಷ್ಟಿರುತ್ತಿತ್ತು. ಅದನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದ ಖಾನ್‌ ಅವರ ತಂತ್ರಜ್ಞಾನವನ್ನು ಥಾಯ್ಲೆಂಡ್‌ ಮತ್ತು ವಿಯೆಟ್ನಾಂ ಅನುಮತಿ ಪಡೆದು ಬಳಸಲು ಪ್ರಾರಂಭಿಸಿದವು.

ಜೊಜೊಬಾ-ಅಜೂಬಾ: ಇದಷ್ಟೇ ಅಲ್ಲ, ನಿರಂತರವಾಗಿ ಬರಗಾಲಕ್ಕೆ ತುತ್ತಾಗಿ, ಅಂತರ್ಜಲ ಕುಸಿದಿದ್ದ ಥಾರ್ ಮರುಭೂಮಿ ಮತ್ತು ಕಛ್‌ನ ರಣ ಪ್ರದೇಶದಲ್ಲಿ ಎರಡನೆಯ ಹಸಿರು ಕ್ರಾಂತಿಯನ್ನು ಸಂಘಟಿಸಿ ಮರುಭೂಮೀಕರಣವನ್ನು ರಿವರ್ಸ್ ಮಾಡಿದ ಹೆಗ್ಗಳಿಕೆಯೂ ಖಾನ್‌ ಅವರಿಗೆ ಸಲ್ಲುತ್ತದೆ. ದೂರದ ಮೆಕ್ಸಿಕೊದಲ್ಲಿ ಸೊನಾರನ್ ಮರುಭೂಮಿಯ ಹಸಿರೀಕರಣವನ್ನು ಕಣ್ಣಾರೆ ಕಂಡಿದ್ದ ಖಾನ್, ಅಲ್ಲಿನ ಜೊಜೊಬಾ ಗಿಡದ ಬೀಜಗಳನ್ನು ನಮ್ಮಲ್ಲಿಗೆ ತಂದು ನೆಟ್ಟು ಬೆಳೆಸಿದರು. ನೂರು-ಇನ್ನೂರು ವರ್ಷ ಬಾಳುವ ಜೊಜೊಬಾ ಗಿಡಗಳು ಹೆಚ್ಚಿನ ನೀರು ಬೇಡದೆ ಅಧಿಕ ಉಷ್ಣತೆ ಮತ್ತು ವಾತಾವರಣದ ಕ್ಷಾರದ ಅಂಶವನ್ನು ತಡೆದುಕೊಳ್ಳುತ್ತವೆ. ಮರುಭೂಮಿಯ ಬಂಗಾರ ಎಂಬ ಖ್ಯಾತಿಯ ಜೊಜೊಬಾ ಬೀಜದ ಒಂದು ಲೀಟರ್ ಎಣ್ಣೆಯ ಬೆಲೆ ಬರೋಬ್ಬರಿ ಏಳು ಸಾವಿರ ರೂಪಾಯಿ!

1985ರ ಕೇಂದ್ರ ಸರ್ಕಾರದ ಬರಡುಭೂಮಿ ಅಭಿವೃದ್ಧಿ ಯೋಜನೆಯಲ್ಲಿ ಮೊದಲಿಗೆ 20 ಎಕರೆ ಜಾಗದಲ್ಲಿ ಜೊಜೊಬಾ ಗಿಡದ ಬೀಜಗಳನ್ನು ನೆಟ್ಟು ಬೆಳೆಸಲಾಯಿತು. ಈಗ ಖಾರಿ ಪ್ರದೇಶ, ಗುಜರಾತ್ ಮತ್ತು ಥಾರ್‌ನ ಸಾವಿರಾರು ಚದರ ಕಿ.ಮೀ.ಗಳಷ್ಟು ಪ್ರದೇಶದಲ್ಲಿ ಜೊಜೊಬಾ ಗಿಡಗಳಿವೆ. ಜೊಜೊಬಾ ಬೀಜಗಳ ಎಣ್ಣೆಯಿಂದ ತಯಾರಿಸಲಾಗುವ ಅಂಟಿನ ಪದಾರ್ಥಕ್ಕೆ ಪ್ರಸಾಧನ, ಔಷಧ ಮತ್ತು ಪೆಟ್ರೊಕೆಮಿಕಲ್ ಉದ್ಯಮಗಳಲ್ಲಿ ಭಾರಿ ಬೇಡಿಕೆಯಿದೆ. ಜೊಜೊಬಾ ಮತ್ತು ಹರಳೆಣ್ಣೆಗಳ ಹೈಡ್ರೋಜಿನೇಶನ್ ಸೇರಿ 70 ವಿವಿಧ ಹಕ್ಕುಸ್ವಾಮ್ಯಗಳು ಖಾನ್‌ ಅವರ ಬಳಿಯೇ ಇವೆ.

ಖಾನ್ ಸಾಹೇಬರು ಜನಿಸಿದ್ದು ದಂಡಿ ಸತ್ಯಾಗ್ರಹ ನಡೆದ ಮರು ವರ್ಷದಲ್ಲಿ. ಹಿಡಿ ಉಪ್ಪನ್ನು ತಯಾರಿಸಿ, ಅದಕ್ಕೆ ತೆರಿಗೆ ನೀಡುವುದಿಲ್ಲ ಎಂದು ಬ್ರಿಟಿಷರನ್ನು ಕಂಗಾಲಾಗಿಸಿದ್ದ ಗಾಂಧೀಜಿಯವರನ್ನು ತಮಗೆ 14 ವರ್ಷ ತುಂಬಿದ್ದಾಗ ಭೇಟಿ ಮಾಡಿದ್ದ ಖಾನ್, ‘ಉಪ್ಪಿನ ಪಾತ್ರೆ’ ಎಂದೇ ಹೆಸರುವಾಸಿಯಾದ ಭಾವ್‌ನಗರ್‌ದ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತ ಉಪ್ಪಿಗೆ ಹೊಸ ಸತ್ವ ತುಂಬಿ ತಮ್ಮ ಉಪ್ಪು-ನೆಲ-ನೀರಿನ ಋಣ ತೀರಿಸಿದರು. ನಾವೂ ತೀರಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT