ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಾತಾಡಬೇಕಾದಾಗ ಮಾತಾಡದಿದ್ರ...

Last Updated 11 ಫೆಬ್ರುವರಿ 2021, 5:56 IST
ಅಕ್ಷರ ಗಾತ್ರ

ನಿಮ್ಮದು ಅಂತರ್ಧರ್ಮೀಯ ಮದುವೆಯಂತ...

ಹೌದು.

ಎಷ್ಟು ವರ್ಷಗಳಾದವು?

10, 15, 25, 30...

ಓಹ್‌ ಆ ಕಾಲದಾಗ ಕ್ರಾಂತಿಕಾರಿ ಮದಿವಿ ಆಗಿರಬೇಕಲ್ಲ ನಿಮ್ದು...?

ಇಲ್ಲ ತಾಯಿ, ನಾವಿಬ್ಬರೂ ಒಪ್ಕೊಂಡ್ವಿ. ಮನ್ಯಾಗ ಹೇಳಿದ್ವಿ. ಮನ್ಯಾಗ ಒಪ್ಪಲಿಲ್ಲ. ಆದರೂ ಮದಿವಿ ಆದ್ವಿ. ಮಕ್ಕಳಾದುವು. ಅಸಲಿಗಿಂತ ಬಡ್ಡಿ ಮ್ಯಾಲೆ ಪ್ರೀತಿ ಅಂತಾರ. ಹಂಗ ಮೊಮ್ಮಕ್ಕಳು ಚದುರಿದ ಕುಟುಂಬವನ್ನು ಒಗ್ಗೂಡಿದವು.

ಧರ್ಮ, ಜಾತಿ ನಿಮ್ಮ ನಡುವೆ ಬರಲಿಲ್ಲೇನು?

ಬಂತಲ್ಲ.. ಮಾಂಸ ತಿನ್ನೋರು ಜೀವಪರ ಆಗಿರೂದಿಲ್ಲ ಅಂತ ಅವರ ಮನ್ಯಾಗ ಅಕಿನ್ನ ತಡದ್ರು. ಅಕಿನ್ನ ಕಟ್ಕೊಂಡ್ರ ಕಡೀತನ ಸೊಪ್ಪುಸದೆ ತಿನ್ನಬೇಕಾಗ್ತದ ಅಂತ ನನ್ನ ತಡದ್ರು. ಜಾತಿ–ಧರ್ಮ ಆಹಾರದ ಜೊತಿಗೆ ತಳಕು ಹಾಕ್ಕೊಂಡದ. ನಾವು ಹೊಟ್ಟಿ ತುಂಬಸ್ಕೊಂಡು ಬದುಕಾಕ ಏನಾದರೂ ಸರಿ ತಿಂತೀವಿ. ಉಣ್ಣೂದನ್ನ ಆನಂದಸ್ತೀವಿ ಅಂತ ತೀರ್ಮಾನ ಮಾಡ್ಕೊಂಡಿದ್ವಿ. ಹಂಗೇ ಬದುಕಿದ್ವಿ.

ಅಷ್ಟು ಸಲೀಸಾಯ್ತಾ ಬದುಕು?

ಯಾವಾಗಲೂ ಅನುಭವಿಸುವ ಮುಂದ ಆ ಕ್ಷಣಗಳು ಮುಂದೂಡಾಕ ಆಗೂದಿಲ್ಲ. ಎಲ್ಲವೂ ತಾಸಿನ ಮುಳ್ಳಿನ್ಹಂಗ ಸಾವಕಾಶ ಸರೀತಾವ. ಅವಾಗ ಮನಿ ಬಾಡಗಿಗೆ ಕೊಡ್ತಿರಲಿಲ್ಲ. ಮನಿ ಹುಡುಕೂದೆ ದೊಡ್ಡ ತ್ರಾಸಾಗ್ತಿತ್ತು. ನಮ್ಮನ್ನ ಯಾವ ಸಂಭ್ರಮದೊಳಗೂ ಯಾರೂ ಸೇರಸ್ತಿರಲಿಲ್ಲ. ನಮ್ಮ ಸಂಭ್ರಮಕ್ಕೂ ಅಗ್ದಿ ಕಡಿಮಿ ಮಂದಿ ಬರ್ತಿದ್ರು. ಯಾರೂ ಬ್ಯಾಡ, ನನಗ ನೀನು, ನಿನಗ ನಾನು ಅಂತ ಅನ್ಕೊಂಡ್ರೂ... ಮಕ್ಕಳಾದ ಮ್ಯಾಲೆ ಸಮಾಜ ಬೇಕು ಅನಸ್ತದ. ನಮ್ಮ ಮಕ್ಕಳ ಸಂಭ್ರಮ ಬಂಧು ಬಳಗದ ಜೊತಿಗೆ ಹಂಚ್ಕೊಬೇಕು ಅನಿಸ್ತದ. ಆ ಸಮಯ ದಾಟೂದು ತ್ರಾಸದ. ಈಗ ಎಲ್ಲಾ ಸಲೀಸನಸ್ತದ.

ಸಮಾಜ ಎದುರು ಹಾಕ್ಕೊಂಡು ಬದುಕೂದು ತ್ರಾಸಾಗ್ತದಲ್ಲ...?

ಎದುರು ಹಾಕ್ಕೊಂಡು ಅಂತಲ್ಲ.. ಹಂಗನ್ನೂದು ತಪ್ಪಾಗ್ತದ. ನಾವು ಸಮಾಜದಿಂದ ಹೊರಗ ಹೋಗೂದಿಲ್ಲ. ಸಮಾಜ ನಮ್ಮನ್ನ ಒಳಗೊಳ್ಳೂದಿಲ್ಲ. ಈ ಪದ ಪ್ರಯೋಗವೇ ಸುಳ್ಳು.. ಎದುರು ಹಾಕ್ಕೊಳ್ಳೂದು ಅಂತನ್ನೂದು ತಪ್ಪು. ಸಿದ್ಧಸೂತ್ರಗಳನ್ನು ಮೀರಿದಾಗ, ಚೌಕಟ್ಟಿನಿಂದಾಚೆ ನಡೆದಾಗ.. ನಮ್ಮನ್ನು ಒಳಗೊಳ್ಳುವ ಕೆಲಸ ಸಮಾಜದಿಂದಾಗಬೇಕು. ಹಂಗಾಗೂದಿಲ್ಲ. ಅವಾಗ ಒಳಗೊಳ್ಳುವ ಪ್ರಕ್ರಿಯೆ ನಡೆಯದೇ ಇದ್ದಾಗ ಜೀವ ಗಟ್ಟಿ ಮಾಡ್ಕೊಬೇಕು.

ಹಂಗಂದ್ರ..?

ಹಂಗಂದ್ರ, ಬದುಕಿನ ಯಾವುದೇ ಕ್ಷಣದೊಳಗ ನಮ್ಮ ಆಯ್ಕೆಯನ್ನು ನಾವು ಅವಮಾನಿಸಕೂಡದು. ಅನುಮಾನಿಸಕೂಡದು. ಇಕ್ಕಿನ್ನ ಕಟ್ಕೊಳಿಕ್ರ ನಾ ಅರಾಮಿರ್ತಿದ್ದೆ. ಇವ ಬೆನ್ನು ಹತ್ಲಿಕ್ಕರ ನಾನೂ ನಾಕು ಮಂದ್ಯಾಗ ಖುಷಿಯಿಂದ ಇರ್ತಿದ್ದೆ ಇಂಥ ಪಶ್ಚಾತ್ತಾಪಗಳನ್ನು ಸಲುಹಬಾರದು. ನೋಡು, ಇಷ್ಟೆಲ್ಲ ಅಡೆತಡೆಗಳಿದ್ದರೂ ನಿನ್ನನ್ನೇ ಆಯ್ಕೆ ಮಾಡಿದೆ ಎಂಬ ಅಹಮಿಕೆಯನ್ನೂ ಬೆಳೆಸಬಾರದು. ಅವಾಗ ಮೊದಲ ನೋಟದ ಪ್ರೀತಿಯೇ ಕೊನೀತನಾನೂ ಇರ್ತದ.

ಮತ್ತ ನೀವು ಇವನ್ನೆಲ್ಲ ಹೆಂಗ ಮೀರಿದ್ರಿ?

ನಾವು ಒಟ್ಗೆ ಬದುಕಬೇಕು ಅಂತ ನಿರ್ಧಾರ ಮಾಡಿದಾಗಲೇ ಇವೆಲ್ಲವನ್ನೂ ಮೀರಿದ್ದಾಗಿತ್ತು. ನಿರೀಕ್ಷೆಗಳಿಲ್ಲದೆ ಬದಕುಬೇಕು ಅನ್ನೂದೆ ಕ್ಲೀಷೆ. ಪರಸ್ಪರ ನಿರೀಕ್ಷೆಗಳಿರಬೇಕು. ನಿರಾಸೆ ಆಗದ್ಹಂಗ ಇಬ್ಬರೂ ತಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇರಬೇಕು. ಈ ಪ್ರಯತ್ನಗಳೇ ಕೊನಿತನಾನೂ ಪ್ರೀತಿಯನ್ನು ಜೀವಂತವಾಗಿಡ್ತಾವ...

ನೀವ್ಯಾಕ ಇದನ್ನೆಲ್ಲ ನಮ್ಮ ಓದುಗರ ಜೊತಿಗೆ ಹಂಚ್ಕೊಬಾರದು...

ಛೆ.. ಛೆ.. ನಮ್ಮ ಪಾಡು ನಮಗಿರಲಿ. ಇದರ ಬಗ್ಗೆ ಮಾತಾಡೂದರೆ ಏನದ? ದಶಕಗಳ ಹಿಂದ ಪ್ರೀತಿಸಿದ್ವಿ. ಮದಿವಿ ಆದ್ವಿ. ಜಗಳಾಡಿದ್ವಿ, ಮಾತಾಡಿದ್ವಿ. ಮಕ್ಕಳಾದ್ವು ಬೆಳಸಿದ್ವಿ. ಈಗ ಮಾತಾಡಿದ್ರ ಮತ್ತ ಹಳೆಯ ಗಾಯಗಳನ್ನು ಕಿತ್ಕೊಂಡು ಕುಂತಂಗ ಆಗ್ತದ. ಹೊಸ ಜಾಗದಾಗ, ಹೊಸ ಊರಿನಾಗ ಬದುಕು ಕಟ್ಕೊಂಡೇವಿ. ಮತ್ತ ನಮಗ ಆ ಅನುಮಾನದ ಕಂಗಳಿಂದ ನೋಡೋರು, ಅವಮಾನದ ನೋಟ ಎಸಿಯೋರು ಹೆಚ್ಚಾಗ್ತಾರ. ಅವಾಗ ವಯಸ್ಸಿತ್ತು.. ತಡಕೊಂಡ್ವಿ. ಈಗ ತಡಕೋಳಾಕ ಆಗ್ತದೇನು?

ಮಕ್ಕಳು ಮದಿವಿಗೆ ಬಂದಾರ. ಅವರ ಆಯ್ಕೆಗೆ ಬಿಟ್ಟೇವಿ. ಆದ್ರ ಸಂಗಾತಿಯ ಪಾಲಕರು ಏನು ಯೋಚನೆ ಮಾಡಬಹುದು... ಬ್ಯಾಡವಾ..ಈಗ ಇದನ್ನೆಲ್ಲ ಮಾತಾಡೂದು ಬ್ಯಾಡ. ಚಂದಗೆ ಬದುಕೇವಿ ಅಂತನಿಸೇದ. ಚಂದಗೆ ಕೊನಿದಿನಾ ಕಳೀತೇವಿ. ಮಾತಾಡಿದ್ದು ನಿನ್ಹತ್ರ.. ಎಲ್ಲಾರಿಗೂ ಹೇಳಿ ಏನು ಮಾಡೂದದ.. ಇಷ್ಟಕ್ಕೂ ಅವರವರ ಬದುಕಿನ ಸಮರದೊಳಗ ಅವರವರೇ ಸೆಣಸಬೇಕು. ಅವರವರೆ ಗೆಲ್ಲಬೇಕು.

ಮಾತಾಡೂದು ಬ್ಯಾಡ..!

***

ನೀವು ರೈತ ಚಳವಳಿಗೆ ಹೋಗಿ ಬಂದ್ರಂತ...

ಹೌದು. ಜೀವ ತಡೀಲಿಲ್ಲ ಹೋಗಿ ಬಂದೆ.

ಹೆಂಗದ ಅಲ್ಲಿ ಪರಿಸ್ಥಿತಿ?

ಹೆಂಗೇನಿರ್ತದ. ಚಳಿ, ಹಸಿವು, ಆಕ್ರೋಶ, ಅಸಮಾಧಾನ ಜೊತಿಗೆ ಅಹಿಂಸೆಯ ಹಟ...

ಊಟ...?

ಹಸಿಬಿಸಿ ಬೇಯಿಸಿದ ರೊಟ್ಟಿ, ಎಂಥದ್ದೋ ಒಂದು ಸಬ್ಜಿ. ಅವರು ಉಣ್ತಾರ. ನಮಗೂ ಕೊಟ್ರು. ನಾವು ಅಲ್ಲಿಯೂ ಪಾಲು ಪಡದ್ವಿ. ಉಂಡ್ವಿ. ಸಾಕಾಯ್ತು.. ಗಡಿ ಭಾಗದೊಳಗ ಕಿಲೊಮೀಟರ್‌ಗಟ್ಟಲೆ ನಡದು..

ಮತ್ತ...

ಮತ್ತೇನಿಲ್ಲ.. ನಾ ಏನೂ ಹೇಳೂದಿಲ್ಲ.. ನೀ ಏನೂ ಬರೀಬ್ಯಾಡ..

ಯಾಕ?

ಮಾತಾಡೂದ್ರಿಂದ ಪ್ರಯೋಜನ ಇಲ್ಲ. ನಾವು ಯಾರ ಪರ, ಯಾರ ವಿರುದ್ಧ ಅಂತ ಪಟ್ಟ ಕಟ್ತಾರ. ಮಾತಾಡೂದ್ರಿಂದ ಅಲ್ಲಿ ಸುಧಾರಣೆಯಾಗಲಿ, ಬದಲಾವಣೆಯಾಗಲಿ ಆಗೂದಿಲ್ಲ. ನಾ ಮಾತಾಡೂದ್ರಿಂದ ಏನಾಗೂದದ.. ನನಗ ತ್ರಾಸಾಗೂದು ಬಿಟ್ರ ಮತ್ತೇನೂ ಆಗೂದಿಲ್ಲ.

ಮಾತು ಬ್ಯಾಡಂದ್ರ ಬ್ಯಾಡ... ನಾ ಯಾರಿಗೂ ಏನೂ ಹೇಳೂದಿಲ್ಲ. ನನಗ ಹೋಗಬೇಕನಿಸ್ತು.. ಹೋಗಿ ಬಂದೆ.

ಮಾತು ಬ್ಯಾಡ...

***

ಹಿಂಗ ಮಾತುಗಳು ಬ್ಯಾಡ ಅನ್ನುವ ಪರಿಸ್ಥಿತಿ ಸೃಷ್ಟಿಯಾಗಿದ್ದಾದರೂ ಯಾಕ? ಮಂದಿ ಮಾತಾಡಾಕ ಹಾತೊರಿತಾರ. ತಮ್ಮ ಜೀವನದ ಬಗ್ಗೆ, ತಮ್ಮ ಹೋರಾಟದ ಬಗ್ಗೆ, ತಾವು ಪಾಲ್ಗೊಂಡ ಚಳವಳಿಗಳ ಬಗ್ಗೆ. ಒಂದು ವೇಳೆ ಮಾತಾಡಾಕ ಆತಂಕ ಪಡುವಂಥ ಪರಿಸ್ಥಿತಿ ನಮ್ಮಲ್ಲಿ ಹುಟ್ಟೇದ ಅಂದ್ರ..?

ಪ್ರಭುತ್ವದ ಪಾಳೇಗಾರಿಕೆ ಮನೋಭಾವದ ಪರಿಣಾಮ ಅನ್ನೂದೊ.. ಪ್ರಜೆಗಳು ಸಂವೇದನಾರಹಿತರು ಅನ್ನೂದೊ? ಇವೆರಡರೊಳಗ ಯಾವುದೊಂದು ನಿಜವಾದರೂ ನಾವು ಬದುಕುತ್ತಿರೂದು ಸ್ವಸ್ಥ ಸಮಾಜದೊಳಗ ಅಲ್ಲೇ ಅಲ್ಲ. ಈಗ ನಾವು ಹಿಂಗ ಮೌನವಾಗಿರೂದನ್ನ ಆಯ್ಕೆ ಮಾಡ್ಕೊಂಡ್ರ ನಮ್ಮ ಮಕ್ಕಳಿಗೆ, ಅಥವಾ ಮುಂದಿನ ನಾಗರಿಕ ಸಮಾಜಕ್ಕ ಒಂದು ಶಾಪ ಕೊಡಾತೇವಿ.ತಪ್ಪು ಪಾಠ ಕೊಡ್ತೀವಿ ಅಂತರ್ಥ.

ಅನ್ಯಾಯಗಳಾದ್ರ ಆಗಲಿ... ನಾವು ಸುಮ್ನಿರೂನು. ನಮ್ಮ ಮನೀ ಬಾಗಲತನಾ ಬಂದಿಲ್ಲ.. ಬರಾಕ ಬಿಡದ್ಹಂಗ ಬಾಗಲಾ ಹಾಕ್ಕೊಂಡು ಕೂರೂನು ಅನ್ನುವ ಹೇಡಿಗಳ ಪಾಠ ಹೇಳಿಕೊಡ್ತೀವಿ. ಇಲ್ಲಾಂದ್ರ ಅಧಿಕಾರ ಇದ್ರ ಏನು ಬೇಕಾದರೂ ಮಾಡಬಹುದು. ಯಾರನ್ನು ಬೇಕಾದರೂ ತುಳಿಯಬಹುದು. ಎದುರಾಡಿದವ ಮಾತು ಕೇಳದ್ಹಂಗ ಇರಬೇಕು. ಕೇಳಿದ್ರೂ ಅವರು ಇನ್ನೊಮ್ಮೆ ಮಾತಾಡದ್ಹಂಗ ಮಾಡಬೇಕು.

ಹಿಂಗ ನಮಗ ಗೊತ್ತಿಲ್ಲದೆಯೇ ನಾವು ಶೋಷಿತರ, ಶೋಷಕರ ಉದಾಹರಣೆಗಳನ್ನೇ ಪ್ರಬಲ ಮಾಡ್ಕೊಂತ ಹೋಗ್ತೇವಿ.

ನಮ್ಮ ಸುಖ ದುಃಖಗಳನ್ನು ಹಂಚಿಕೊಳ್ದೆ ಇದ್ರ, ನಮ್ಮ ಪಾಡು ನಮಗಿರಲಿ. ನಾವು ಅನುಭವಿಸುವುದು ನಮಗಷ್ಟೇ ಇರಲಿ. ದುಃಖ ಇದ್ರೂ ನಮ್ಮೊಳಗ ಹೂತು ಹೋಗಬೇಕು. ಸುಖ ಇದ್ರ ಇನ್ನೊಬ್ಬರ ಕಣ್ಣಿಗೆ ಬೀಳಬಾರದು ಅನ್ನುವ ಸ್ವಯಂಕೇಂದ್ರೀಕೃತ ಆಗುವ ಭಯಾನಕ ಪಾಠವನ್ನು ಹೇಳಿಕೊಡ್ತೇವಿ.

ಸಮಾಜದೊಳಗ ಒಂದು ಸಮಾಧಾನದ ವಲಯ ಇರಬೇಕಂದ್ರ ಚೌಕಟ್ಟಿನಿಂದಾಚೆ ಹೋಗಬಾರದು ಅನ್ನುವ ಪಾಠ ಕೊಟ್ಟೇಬಿಡ್ತೇವಿ.

ಮತ್ತ ನಾವು ಸುಮ್ನಿದ್ರ ಮಕ್ಕಳೂ ಸುಮ್ನಿರ್ತಾರ. ಈ ಬದುಕು ಹಿಂಗೆನೆ ಅನ್ನುವ ತೀರ್ಮಾನಕ್ಕ ಬರ್ತಾರ. ಪ್ರಭುತ್ವನೇ ಇರಲಿ, ಏನೇ ಇರಲಿ.. ನಮಗನಿಸಿದ್ದು ನ್ಯಾಯ ಸಮ್ಮತವಾಗಿದ್ರ, ನಮಗನಿಸಿದ್ದು ಹೇಳೂದ್ರೊಳಗ ಯಾರನ್ನೂ ದೂಷಿಸುವುದಿಲ್ಲ ಅನ್ನೂಹಂಗಿದ್ರ ನಾವು ಮಾತಾಡಬೇಕು. ಮಾತಾಡಾಕ ಬೇಕು ಅನ್ನುವ ಧ್ವನಿ ಗಟ್ಟಿಯಾಗಬೇಕಂದ್ರ.. ನಾವು ಸುಮ್ಮನಿರಬೇಕಾಗಿಲ್ಲ.

ಅಂತರ್‌ಧರ್ಮೀಯ ಮದುವೆಯಾದವರು, ರೈತ ಚಳವಳಿಯಂಥ ದೊಡ್ಡ ಪ್ರತಿಭಟನೆಯೊಳಗ ಭಾಗವಹಿಸಿದವರು ಮಾತಾಡಾಕ ಒಲ್ಲೆ ಅಂತಾರಂದ್ರ... ಇನ್ನೂ ಅದೆಷ್ಟು ಶೋಷಣೆಗಳಿಗೆ ಬಾಯಿಸತ್ತೋರು ಅದಾರ? ಅವರೆಲ್ಲ ಮಾತಾಡೂದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT