ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲೂರಿನ ಬಾವಿಗಳು

Last Updated 10 ಜೂನ್ 2019, 19:30 IST
ಅಕ್ಷರ ಗಾತ್ರ

ಕಲಬುರ್ಗಿ ನಗರದ ಭುಜಕ್ಕೇ ಅಂಟಿಕೊಂಡ ಪ್ರದೇಶ ಹೀರಾಪುರ. ಐತಿಹಾಸಿಕ ದಾಖಲೆ, ಧಾರ್ಮಿಕ ಸಾಮರಸ್ಯ ಹಾಗೂ ಜೀವನೋತ್ಸಾಹದ ಪಳೆಯುಳಿಕೆ ಎಂಬಂತಿದೆ ಈ ಪ್ರದೇಶ. ವೀರಶೈವ– ಲಿಂಗಾಯತರು ಹಾಗೂ ಮುಸ್ಲಿಂ ಸಮುದಾಯಗಳು ಸಮನಾಗಿ ಹಂಚಿಕೆಯಾಗಿರುವ ಈ ಬಡಾವಣೆ ಶಾಂತಿ– ಸಾಮರಸ್ಯಕ್ಕೂ ಹೆಸರುವಾಸಿ. ಇದನ್ನು ಸಾಕ್ಷೀಕರಿಸುವಂತಿವೆ ಇಲ್ಲಿನ ಪಾರಂಪರಿಕ ಬಾವಿಗಳು.

ಚೌಕಾಕಾರದ ಕಟ್ಟಡ, ಅಂದವಾದ ಮೈಮಾಟ, ಸುಸಜ್ಜಿತ ಮೆಟ್ಟಿಲು, ನುಣುಪುನುಣು ಪಾದ ಗೋಡೆ, ತ್ರಿಜ್ಜಿನಿಂದ ಕೊರೆದಷ್ಟೇ ಶಾರ್ಪ್‌ ಫಿನಿಷಿಂಗ್‌ ಇರುವ ಕಮಾನುಗಳು, ಕಣ್ಮನ ಸೆಳೆಯುವ ಕಲಾಕೃತಿಗಳು ಈ ಬಾವಿಗಳನ್ನು ಇನ್ನೂ ಜೀವಂತವಾಗಿ ಇಟ್ಟಿವೆ. ಮೂರು ಕಡೆಗಳಲ್ಲಿ ಗಟ್ಟಿಮುಟ್ಟಾದ ಗೋಡೆ, ಒಂದು ಕಡೆ ಮಾತ್ರ ಮೆಟ್ಟಿಲುಗಳನ್ನು ಮಾಡಲಾಗಿದೆ. ಕೆಳಗೆ ಇಳಿಯಲಾಗದವರು ಕಟ್ಟಡದ ಮೇಲಿಂದಲೇ ಹಗ್ಗದ ಸಹಾಯದಿಂದ ನೀರು ಸೇದುವಂತೆ ‘ಬೋರ್ಗಡೆ’ಗಳ (ರಾಟೆ) ವ್ಯವಸ್ಥೆ ಇದೆ.

ಸುಮಾರು 440 ವರ್ಷಗಳ ಇತಿಹಾಸ ಹೊಂದಿರುವ ಈ ಬಾವಿಗಳು ಎರಡು ದಶಕಗಳ ಹಿಂದಿನವರೆಗೂ ನಗರದ ಬಹುಪಾಲು ಭಾಗಗಳಿಗೆ ನೀರು ಪೂರೈಸುವ ಜಲಾಧಾರವಾಗಿದ್ದವು. ನಿರ್ವಹಣೆ ಕೊರತೆಯ ಕಾರಣವೋ ಏನೋ, ಒಂದಷ್ಟು ಬಾವಿಗಳು ‘ನಿಷ್ಕ್ರಿಯ’ವಾದವು. ಆದರೆ, ಒಂದು ಬಾವಿಯನ್ನು ಪಾಲಿಕೆಯವರು ಸ್ವಚ್ಛ ಮಾಡಿಸಿದ್ದು, ಅದು ಈಗಲೂ ಬಳಕೆಯಾಗುತ್ತಿದೆ. ಬಹಮನಿ ಸುಲ್ತಾನರ ಕಾಲದ ಈ ಬಾವಿಗಳ ವಾಸ್ತುಶಿಲ್ಪ ಎಂಥವರ ಬಾಯಲ್ಲೂ ‘ವಾಹ್‌’ ಎಂಬ ಉದ್ಗಾರ ಹೊರಡಿಸುತ್ತವೆ. ಇವತ್ತಿಗೂ ಬಾವಿಗಳ ಕಟ್ಟಡದ ಒಂದೇ ಒಂದು ಹಿಡಿಗಲ್ಲು ಕೂಡ ಅಲ್ಲಾಡದಂತೆ ಗಟ್ಟಿಮುಟ್ಟಾಗಿ ನಿಂತಿವೆ.

ಒಂಬತ್ತು ಬಾವಿಗಳಿವೆ

ಸದ್ಯಕ್ಕೆ ಇಲ್ಲಿ ಒಂಭತ್ತು ಬಾವಿಗಳು ಸುಸ್ಥಿತಿಯಲ್ಲಿವೆ. ಇನ್ನೂ ಹಲವು ಕಾಲಗರ್ಭ ಸೇರಿವೆ. ಗೌತಪ್ಪ ಬಾವಿ, ರಂಗೋಜಿಯ, ಶಂಕರಲಿಂಗ, ಬೋರಲಿಂಗ, ಜ್ಯೋತಿರ್ಲಿಂಗ, ಇಬ್ರಾಹಿಂ ಅಲಿ ಆದಿಲ್‌ ಷಾ ಮಸೀದ್‌ ಬಾವಿ, ಬರಫ್‌ಖಾನಾ ಬಾವಿ, ದರ್ಗಾಬಾವಿ ಈಗಲೂ ಜೀವಕಳೆಯಿಂದ ಕಂಗೊಳಿಸುತ್ತವೆ. ವಿಶೇಷವೆಂದರೆ ಈ ಬಾವಿಗಳನ್ನು ದೇವಾಲಯ ಹಾಗೂ ದರ್ಗಾಗಳ ಆಸುಪಾಸಿನಲ್ಲಿ ನಿರ್ಮಿಸಲಾಗಿದೆ. ಹಾಗಾಗಿ, ಆಯಾ ದೇವರು ಹಾಗೂ ದರ್ಗಾಗಳ ಹೆಸರಿನಲ್ಲೇ ಗುರುತಿಸಲಾಗುತ್ತದೆ.

ಬರಫ್‌ಖಾನಾ ಬಾವಿ ಎಲ್ಲಕ್ಕಿಂತ ಸುಂದರ ಮೈಮಾಟ ಹೊಂದಿದೆ. ಬೇಸಿಗೆಯಲ್ಲಿ ತಂಪು ಪಾನೀಯಗಳ ತಯಾರಿಕೆಗಾಗಿ ಇಲ್ಲಿ ಐಸ್‌ ಗಡ್ಡೆಗಳನ್ನು ತಯಾರಿಸಲಾಗುತ್ತಿತ್ತು. ಹಾಗಾಗಿ, ಈ ಪ್ರದೇಶಕ್ಕೆ ಬರಫ್‌ಖಾನಾ ಎಂಬ ಹೆಸರಿದೆ. ಇಲ್ಲಿನ ಬಾವಿಯ ವಾಸ್ತುಶಿಲ್ಪ ಅರೇಬಿಯನ್‌ ಶೈಲಿಯಲ್ಲಿದೆ.

ಬರೋಬ್ಬರಿ 100 ಅಡಿ ಆಳ ಹಾಗೂ 100X100 ಅಗಲವಿದೆ. ಚಚ್ಚೌಕಾಕಾರದ ಈ ಕಟ್ಟಡ ಸಂಪೂರ್ಣ ಕರಿ ಕಲ್ಲುಗಳಿಂದ ಕಟ್ಟಲಾಗಿದೆ. ಬಾವಿಯ ಒಂದು ಅಂಚಿನ ಮೇಲೆ ನಿರ್ಮಿಸಿದ ಸುಂದರ ಕಮಾನು ಕಲಾಕೃತಿ ಮನಸೆಳೆಯುತ್ತದೆ. ಒಂದು ಕಡೆಯಿಂದ ಬಂದು ನೀರು ತುಂಬಿಕೊಂಡು ಮತ್ತೊಂದು ಮಾರ್ಗದಿಂದ ಹೊರ ಹೋಗುವ ಹಾಗೆ ಇದರ ವಿನ್ಯಾಸವಿದ್ದು, ಆಗಿನ ಶಿಲ್ಪಿಗಳ ದೂರದೃಷ್ಟಿಗೆ ಸಾಕ್ಷಿ.

ಇಲ್ಲಿಂದ ತುಸು ದೂರದಲ್ಲಿರುವ ಜ್ಯೋತಿರ್ಲಿಂಗ ಬಾವಿ ಅತ್ಯಂತ ವಿಶಾಲ ಮತ್ತು ಆಳವಾಗಿದೆ. ಕಡಿದಾದ ಆಳ ಹೊಂದಿರುವ ಈ ಬಾವಿಗೆ ಪ್ರವೇಶ ಕಮಾನು ನಿರ್ಮಿಸಲಾಗಿದೆ. ಈಗಲೂ ಸಿಹಿಯಾದ ಶುದ್ಧ ನೀರು ಇಲ್ಲಿ ಲಭ್ಯವಾಗುವುದೇ ಅಚ್ಚರಿ. ಬಯಲುಸೀಮೆ, ಒಣಭೂಮಿ ಎಂದೆಲ್ಲ ಈ ಊರಿನ ಬಗ್ಗೆ ತಾತ್ಸಾರ ಮಾಡುವವರು ಒಮ್ಮೆ ಈ ಬಾವಿಗಳನ್ನು ನೋಡಬೇಕು. ಸಹಜವಾಗಿಯೇ ಕಲ್ಪನೆ ಬದಲಾಗುತ್ತದೆ.

ಬಾವಿಗಳ ಇತಿಹಾಸದಲ್ಲಿ ಇಣುಕಿ

ಬಹಮನಿ ಸುಲ್ತಾನನ ರಾಣಿ ಚಾಂದ್‌ಬೀಬಿ ಸುಲ್ತಾನಾ 1585ರಲ್ಲಿ ಸುಂದರವಾದ ಹೀರಾಬೀಬಿ ಮಸೀದಿ ಹಾಗೂ ಸೈಯದ್ ಅಬೀದ್ ಷಾ ವಲಿ ದರ್ಗಾ ನಿರ್ಮಿಸಿದ್ದಾರೆ. ಚಾಂದಬೀಬಿ ಸುಲ್ತಾನ ಅವರ ದಾದಿ ಪರಡೋನಾ ಖುಮುಝಾ ಅವರ ಸಮಾಧಿಯೂ ಇದೇ ಪ್ರದೇಶದಲ್ಲಿದೆ. ಇಲ್ಲಿನ ಮುಸ್ಲಿಂ ಸ್ಮಾರಕಗಳಲ್ಲಿ ಹೀರಾಬೀಬಿ ಮಸೀದಿ (ಮಕಬಾರ್‌ ಕಿ ಮಸೀದ್‌) ಸುಂದರ ಕಟ್ಟಡವಾಗಿದ್ದು, ಆಕರ್ಷಕವಾಗಿದೆ. ಹೀರಾಬೀಬಿ ಮಾಡಿದ ಕೆಲಸಗಳಿಂದಾಗಿಯೇ ಇದಕ್ಕೆ ‘ಹೀರಾಪುರ’ ಎಂಬ ಹೆಸರಿಡಲಾಗಿದೆ ಎಂಬುದು ಇತಿಹಾಸಕಾರರ ಹೇಳಿಕೆ.

ಸಂಸ್ಕೃತ ಭಾಷೆಯಲ್ಲಿ ಮೂರು ಹಾಗೂ ಪರ್ಷಿಯನ್ ಭಾಷೆಯಲ್ಲಿರುವ ಒಂಬತ್ತು ಸೇರಿ ಒಟ್ಟು 12 ಶಿಲಾ ಶಾಸನಗಳು ಹೀರಾಪುರದಲ್ಲಿ ಕಾಣಸಿಗುತ್ತವೆ. ಶಂಕರಲಿಂಗ ಬಾವಿಯ ಗೋಡೆಯಲ್ಲಿ ಅಳವಡಿಸಿದ ಶಿಲಾಶಾಸನ 1656ರಲ್ಲಿ ಬರೆಯಲಾಗಿದೆ. ಅದರ ಮೇಲಿನ ಲಿಪಿಯನ್ನು ಸ್ಪಷ್ಟವಾಗಿ ಓದಬಹುದು. ಈ ಶಾಸನವು ‘ವೈಶ್ಯಕುಲದ ಬಿಕ್ಕೋಜಿ ಸೋಮಾಜಿ ಮೋಖೆಡ ಎಂಬುವವರು ಸೋಮೇಶ್ವರ ಹಾಗೂ ಬಸವೇಶ್ವರ ದೇವಾಲಯಗಳನ್ನು ನಿರ್ಮಿಸಿ, ಸಾರ್ವಜನಿಕರ ಉಪಯೋಗಕ್ಕೆಂದು ಬಾವಿಯನ್ನು ಕಟ್ಟಿಸಿದ’ ಎಂಬ ಅಂಶವನ್ನು ತಿಳಿಸುತ್ತದೆ.

ಇನ್ನೊಂದು ಬಾವಿಯ ಮೇಲಿರುವ 1687ರ ಶಾಸನವು ರಂಗೋಜಿ ಎಂಬುವವರು ಪ್ರಜೆಗಳ ನೀರಿನ ಬವಣೆ ನೀಗಿಸಲು ಬಾವಿಗಳು ಹಾಗೂ ಹಸಿವು ನೀಗಿಸಲು ಛತ್ರಗಳನ್ನು ನಿರ್ಮಿಸಿದ ವಿಷಯ ತಿಳಿಸುತ್ತದೆ. ಬಹಮನಿ ಸುಲ್ತಾನರ ಕಾಲದಲ್ಲೂ ಈ ಭಾಗದಲ್ಲಿ ನೀರಿನ ಬವಣೆ ಇತ್ತು. ಪ್ರಜೆಗಳು ಬಡತನದಿಂದ ಬಳಲುತ್ತಿದ್ದರು ಎಂಬ ಅಂಶಗಳ ಮೇಲೂ ಈ ಶಾಸನದ ಸಾಲುಗಳು ಬೆಳಕು ಚೆಲ್ಲುತ್ತವೆ. ಈ ಕಾರಣಕ್ಕಾಗಿಯೇ ಸುಲ್ತಾನರ ಸಾಮಂತರು ಛತ್ರಗಳನ್ನು ನಿರ್ಮಿಸಿರಬಹುದು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.

ಗೌತಪ್ಪ ಬಾವಿಗೆ ಸೇರಿದ ಇನ್ನೊಂದು ಶಾಸನ 1728ರಿಂದ 1733ರ ಅವಧಿಯಲ್ಲಿ ರಚನೆಯಾಗಿದೆ. ‘ಗೌತಮ ಎಂಬುವವನು ಈ ಬಾವಿಯನ್ನು ನಿರ್ಮಿಸಿ, ಛತ್ರ ಹಾಗೂ ಕೈತೋಟ ಗಳನ್ನು ದಾನಕ್ಕೆ ಬಿಟ್ಟ’ ಎಂಬ ಅಂಶಗಳನ್ನು ಇದು ಒಳಗೊಂಡಿದೆ.

ಪರ್ಷಿಯನ್‌ ಭಾಷೆಯಲ್ಲಿರುವ ಒಂಬತ್ತು ಶಾಸನಗಳು 1585ರ ಮುಂಚಿನ ಅವಧಿಗೆ ಸೇರಿವೆ. ಬಾವಿ, ಸಮಾಧಿ, ಮಸೀದಿ ಮುಂತಾದವುಗಳ ರಚನೆಗೆ ಸಂಬಂಧಿಸಿದ ದಾಖಲೆಗಳು ಇವು ಗಳಲ್ಲಿ ಸಿಗುತ್ತದೆ. ಆದರೆ, ಬಹುಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಶಾಸನಗಳ ಮಾಹಿತಿ ಸವೆದುಹೋಗಿದೆ.

ಈಗಿನ ಸ್ಥಿತಿ ದಯನೀಯ

ಶಾಸ್ತ್ರೋಕ್ತವಾಗಿ ಹಾಗೂ ಶಾಸನೋಕ್ತವಾಗಿ ನಿರ್ಮಿಸಿದ ಈ ಬಾವಿಗಳಿಗೆ ಈಗ ದಯನೀಯ ಸ್ಥಿತಿ ಬಂದಿದೆ. ಬೇರೆ ಬೇರೆ ನೀರಿನ ಮೂಲಗಳನ್ನು ಕಂಡುಕೊಂಡ ಕಾರಣ ಬಾವಿಗಳನ್ನು ಅಂಧ ‘ಕೂಪ’ಕ್ಕೆ ತಳ್ಳಲಾಗಿದೆ. ಇನ್ನೂ ದುರಂತವೆಂದರೆ ನಗರವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ಹೊತ್ತವರೇ ಈ ಬಾವಿಗಳಲ್ಲಿ ತ್ಯಾಜ್ಯ ತಂದು ಹಾಕುತ್ತಾರೆ. ಶುದ್ಧ ಜೀವಜಲದ ತಾಣಗಳಾದ ಈ ಐತಿಹಾಸಿಕ ಕುರುಹುಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿರುವುದು ವ್ಯವಸ್ಥೆಯ ಅಣಕ.

ಪ್ರತಿ ಬೇಸಿಗೆಯಲ್ಲೂ ಹನಿ ನೀರಿಗೂ ಕಲಬುರ್ಗಿ ಜನ ಪರದಾಡುತ್ತಾರೆ. ಆದರೆ, ಸಿಹಿನೀರಿನ ಮೂಲಗಳನ್ನು ಪುನರುಜ್ಜೀವನ ಮಾಡಲು ತಯಾರಿಲ್ಲ. ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯಬೇಕಾದ ಬಾವಿಗಳು ಕಸದ ತಿಪ್ಪೆಗಳಾಗುತ್ತಿವೆ ಎಂಬುದು ಬೇಸರದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT