ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ– ದಕ್ಷಿಣಘಟ್ಟದಲ್ಲಿ ಹನುಮದ್‌ ವ್ರತ

Last Updated 18 ಡಿಸೆಂಬರ್ 2018, 19:33 IST
ಅಕ್ಷರ ಗಾತ್ರ

ಜನೇಯನಂತಹ ರಾಮ ಭಕ್ತ ಬೇರೊಬ್ಬರಿಲ್ಲ, ಅವನಿಗೆ ಅವನೇ ಸಾಟಿ, ಹನುಮಂತ, ವಾಯುಪುತ್ರ, ಪವನಸುತ ಹೀಗೆ ಹಲವು ನಾಮಗಳಿಂದ ಭಕ್ತರುಇಷ್ಟಾನುಸಾರ ಕರೆಯುತ್ತಾರೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಹನುಮನ ಭಕ್ತರಿದ್ದು, ಹಲವು ದೇಶಗಳಲ್ಲಿ ಹನುಮನ ಗುಡಿಗಳನ್ನು ಕಾಣಬಹುದಾಗಿದೆ.

ನೆಲಮಂಗಲ ಪಟ್ಟಣದಲ್ಲಿರುವ ಪ್ರಾಚೀನ ಹಿಪ್ಪೆಆಂಜನೇಯ ಸ್ವಾಮಿ ದೇವಾಲಯಕ್ಕೆ ಸಮೀಪದ ಪೂರ್ವ ದಿಕ್ಕಿಗೆ ಅಣತಿ ದೂರದಲ್ಲಿ ವಿಶೇಷ ಮಹಿಮಾ ಶಕ್ತಿಯುಳ್ಳ ಪುರಾತನ ಶ್ರೀ ಉತ್ತರಾಂಜನೇಯ ಮತ್ತು ದಕ್ಷಿಣಾಂಜನೇಯ ಎಂಬ ಎರಡು ಗುಡಿಗಳು ಎದುರು ಬದುರು ಇವೆ. ಸುತ್ತಲು ಅಡಕೆ ಬಾಳೆ ತೋಟಗಳಿವೆ ಮಧ್ಯದಲ್ಲಿ ರಸ್ತೆ ಹಾದುಹೋಗಿದೆ. ಎರಡೂ ಗುಡಿಗಳಲ್ಲಿ ಕಲ್ಯಾಣಿಗಳಿವೆ.

ಕ್ರಿ.ಶ 1650–1700ರ ಅವಧಿಯಲ್ಲಿ ಗುಡಿಗಳನ್ನು ನರ್ಮಿಸಲಾಗಿದೆ ಎನ್ನಲಾಗಿದ್ದು, ಗರ್ಭಗುಡಿಯು 5x9 ಅಡಿಗಳ ಸುತ್ತಳತೆಯಿದೆ. ಮೇಲ್ಛಾವಣಿಗೆ ಕಲ್ಲುಚಪ್ಪಡಿ ಬಳಸಿದ್ದು, ಗಾರೆ ಲೇಪಿಸಿ ನಿರ್ಮಿಸಲ್ಪಟ್ಟಿದೆ. ಉತ್ತರಾಂಜನೇಯ ಮೂರ್ತಿಯನ್ನು ಚಿಕ್ಕದಾಗಿ ಸುಂದರವಾಗಿ ಕೆತ್ತಲಾಗಿದೆ.

ಗರ್ಭಗುಡಿಯ ಪ್ರವೇಶದ್ವಾರದ ಎಡ ಮತ್ತು ಬಲ ಬದಿಯಲ್ಲಿ ಶ್ರೀವೈಷ್ಣವ ದ್ವಾರಪಾಲಕರಿದ್ದು, ಬಾಗಿಲ ಸುತ್ತಲು ಎಲೆಬಳ್ಳಿ ಬಿಡಿಸಿ ಮಧ್ಯದಲ್ಲಿ ಸರ್ಪಗಳನ್ನು ಒಳಗೊಂಡಂತೆ ಸಂಗೀತ ಮತ್ತು ನೃತ್ಯಗಾರರ ಭಂಗಿಯ ಹಲವು ಉಬ್ಬು ಚಿತ್ರಶಿಲ್ಪಗಳನ್ನು ಬಿಡಿಸಿರುವುದು ವಿಶೇಷ. ಹೊಸ್ತಿಲ ಮಧ್ಯಭಾಗದಲ್ಲಿ ಗಜಲಕ್ಷ್ಮಿ, ಮೇಲ್ಛಾವಣಿಯಲ್ಲಿ ಪದ್ಮಕಮಲ ಶಿಲೆಯಲ್ಲಿ ಕಡಿದಿರುವ ಚಿತ್ರವಿದೆ. ಇವೆಲ್ಲ ನೋಡುಗರ ಕಣ್ಮನ ಸೆಳೆಯುತ್ತವೆ. ಗುಡಿಯಲ್ಲಿ ವೈಷ್ಣವ ಧರ್ಮದ ಕುರುಹುಗಳಿವೆ. ಇನ್ನು ದಕ್ಷಿಣಾಭಿಮುಖವಾಗಿ ನಿರ್ಮಾಣವಾಗಿರುವ ದಕ್ಷಿಣಘಟ್ಟ ಶ್ರೀ ಆಂಜನೇಯಸ್ವಾಮಿ ದೇಗುಲದ ದ್ವಾರ ಬಾಗಿಲಿನ ವಾಸ್ಕಲ್ಲು– ಉತ್ತರಾಸದ ಸುತ್ತಲೂ ಉಬ್ಬು ಶಿಲ್ಪ ಚಿತ್ರಗಳಿವೆ. ಮುಖ್ಯವಾಗಿ ಗಣೇಶ, ಗರುಡದೇವರನ್ನು ಇಲ್ಲಿ ಕೆತ್ತಲಾಗಿದ್ದು, ನಾಗರಕಲ್ಲನ್ನು ವಿಶಿಷ್ಟವಾಗಿ ನಿರ್ಮಿಸಲಾಗಿದೆ.

ಇತಿಹಾಸ: ಮೈಸೂರು ಮಹಾಸಂಸ್ಥಾನದ ದೊರೆ ಚಿಕ್ಕದೇವರಾಯ ಒಡೆಯರ್‌ ವೈಷ್ಣವ ಧರ್ಮಕ್ಕೆ ಒತ್ತುನೀಡಿದ್ದ ಕಾಲವದು. ಜೊತೆಗೆ ಮರಾಠರು ದಾಳಿ ನಡೆಸುತ್ತಿದ್ದ ಸಂದರ್ಭ. ಈ ಅವಧಿಯಲ್ಲಿ ಮುಖ್ಯಸ್ಥಳಗಳು ಮತ್ತು ಅದರ ಆಜು–ಬಾಜಿನಲ್ಲಿ ದೇಗುಲಗಳನ್ನು ನಿರ್ಮಿಸಲಾಗುತ್ತಿತ್ತು. ಇಲ್ಲಿನ ದೇಗುಲಗಳನ್ನೂ ಅದೇ ಸಂದರ್ಭದಲ್ಲಿ ನಿರ್ಮಿಸಿದ್ದಿರಬಹುದು ಎಂಬುದು ಹಿರಿಯ ಇತಿಹಾಸ ಸಂಶೋಧಕ ಡಾ.ಎಚ್.ಎಸ್. ಗೋಪಾಲರಾವ್‌ ತಿಳಿಸುತ್ತಾರೆ. ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಪೂರ್ಣಯ್ಯನವರ ಕಾಲದಲ್ಲೂ ದೇಗುಲಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು ಎಂದು ಉಲ್ಲೇಖಿಸುತ್ತಾರೆ.

ಉತ್ತರಘಟ್ಟ ಶ್ರೀ ಆಂಜನೇಯನ ಗರ್ಭಗುಡಿಯ ಎದುರಲ್ಲಿ ನಿಂತು ನೋಡಿದರೆ, ದಕ್ಷಿಣಘಟ್ಟದ ಶ್ರೀ ಆಂಜನೇಯಸ್ವಾಮಿಯ ನೇರ ದರ್ಶನವಾಗುತ್ತದೆ ಎಂಬುದು ಇಲ್ಲಿನ ವೈಶಿಷ್ಟ್ಯ.

ಜೀರ್ಣೋದ್ಧಾರ: ದಿನಕಳೆದಂತೆ ತನ್ನ ಅಸ್ತಿತ್ವವವನ್ನೇ ಕಳೆದುಕೊಳ್ಳುತ್ತಿದ್ದ ಪುರಾತನ ದೇಗುಲವನ್ನು ಕಂಡು ದುರಸ್ತಿಗೊಳಿಸಲು ಮುಂದಾದ ಸ್ಥಳೀಯ ವೆಂಕಟೇಶ್ (ಕಪಾಲಿ), ವಿನಯ್, ಗಂಗರಾಜು, ಮುರಳಿ, ವಸಂತಕುಮಾರ್, ಮರಿಯಪ್ಪ ಇನ್ನು ಹಲವು ಸಮಾನ ಮನಸ್ಕರು, ಹಲವು ದಾನಿಗಳ ಸಹಾಯದಿಂದ ನಾಲ್ಕು ವರ್ಷಗಳ ನಿರಂತರ ಕಾಮಗಾರಿ ಮೂಲಕ ಗೋಪುರ, ಹಳಾಗಿದ್ದ ಕಲ್ಯಾಣಿ, ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಿಸಿದ್ದರು.

ದಕ್ಷಿಣ ಕನ್ನಡ ಮತ್ತು ಕೇರಳಗಳಲ್ಲಿನ ದೇವಾಲಯಗಳ ಶೈಲಿಯ ಕಬ್ಬಿಣ ಮತ್ತು ಸಿಮೆಂಟ್‌ ಮಿಶ್ರಿತ ದ್ವಾರಕಮಾನು, ಉಪ್ಪರಗೆಯಲ್ಲಿ 15 ಅಡಿಗಳ ಎತ್ತರದ ಶ್ರೀರಾಮ, ಜಾಂಬವಂತ, ವಿಭೂಷಣ, ಲಕ್ಷ್ಮಣ, ಶಂಖಚಕ್ರ ಗಧೆ ಸಹಿತ ಆಂಜನೇಯನನ್ನು ವರ್ಣರಂಜಿತವಾಗಿ ನಿರ್ಮಿಸಲಾಗಿದೆ. ದಕ್ಷಿಣಘಟ್ಟ ದೇವಾಲಯವು ಹಳೆ ಶಿಥಿಲ ರೂಪದಲ್ಲೇ ಇದೆ.

ಮೂಲ ದೇವಸ್ಥಾನಕ್ಕೆ ಚ್ಯುತಿ ಬಾರದಂತೆ, ಪ್ರಾಚೀನ ಕಲೆಗಳನ್ನು ಉಳಿಸಿಕೊಂಡು ಅತ್ಯಾಧುನಿಕವಾಗಿ ಜೀರ್ಣೋದ್ಧಾರಗೊಂಡಿರುವ ಉತ್ತರಾಂಜನೇಯಸ್ವಾಮಿ ದೇವಾಲಯದಲ್ಲಿ ಗುರುವಾರ ಹನುಮದ್‌ ವ್ರತ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 7:30ಕ್ಕೆ ಶುದ್ಧಿ ಪುಣ್ಯಾಃ, ಪಂಚಾಮೃತಾಭಿಷೇಕ, ಕಳಸಾರಾಧನೆ, ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹನುಮಾನ್ ಮೂಲ ಮಂತ್ರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆಯಿಂದ ರಾತ್ರಿ 9ರವರೆಗೆ ಅನ್ನಸಂತರ್ಪಣೆ ನಡೆಯಲಿದೆ.

ಹೀಗೆ ಬರಬಹುದು: ನೆಲಮಂಗಲ ಬಸ್‌ ನಿಲ್ದಾಣದಿಂದ ಕೆರೆ ಏರಿಬದಿಗೆ ಧಾವಿಸಿದರೆ ಶ್ರೀಹಿಪ್ಪೆಆಂಜನೇಯ ಸ್ವಾಮಿ ದೇವಾಲಯ ಎದುರಾಗುತ್ತದೆ. ಇಲ್ಲಿಂದ ಬಲಕ್ಕೆ ತಿರುಗಿದರೆ ಶ್ರೀ ಉತ್ತರಾಂಜನೇಯ– ದಕ್ಷಿಣಾಂಜನೇಯಸ್ವಾಮಿ ದೇವಾಲಯಗಳು ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT