ಮಕ್ಕಳ ದಿನ, ಪ್ರೇಮಿಗಳ ದಿನ, ತಂದೆಯ ದಿನ, ತಾಯಿಯ ದಿನ, ಮಹಿಳೆಯರ ದಿನ... ಹೀಗೆ ಕೊಂಡಾಡಲು ಸಾಕಷ್ಟು ದಿನಗಳಿವೆ. ಈ ವಿಶೇಷ `ದಿನ'ಗಳ ಸಾಲಿಗೆ ಸೇರುವ ಇನ್ನೊಂದು ಆಚರಣೆ ಡಿಸೆಂಬರ್ 17ರ ನಿವೃತ್ತರ ದಿನ. ಹಾಗೆ ನೋಡಿದರೆ, ನಿವೃತ್ತರಿಗೆ, ಬದುಕಿನ ಸಂಜೆಯಲ್ಲಿ ಕಾಲ ಕಳೆಯುವವರಿಗೆ ಕೊಂಡಾಡಲು ಒಂದು ದಿನ ಬೇಕೆ? ಒಂದು ಅರ್ಥದಲ್ಲಿ ನಿವೃತ್ತರೆಂದರೆ ವೃತ್ತಿಯಿಲ್ಲದವರೆಂದು ಅರ್ಥ. ಸಾಮಾನ್ಯವಾಗಿ ಈ ನಿವೃತ್ತರು ಸಂಜೆ ಪಾರ್ಕಿನಲ್ಲೋ, ಅರಳಿಕಟ್ಟೆಯಲ್ಲೋ, ಕ್ಲಬ್‌ಗಳಲ್ಲೋ ಸೇರಿ ಗತಕಾಲದ ವೈಭವವನ್ನೋ, ದುರಂತವನ್ನೋ ಮೆಲುಕು ಹಾಕಿ ಮನಸ್ಸನ್ನು ಹಗುರಗೊಳಿಸಿ ಮನೆಗೆ ಮರಳುತ್ತಾರೆ.

ಅಂದಹಾಗೆ, ಡಿಸೆಂಬರ್ 17ನ್ನು `ನಿವೃತ್ತರ ದಿನ'ವೆಂದು ಆಚರಿಸುವುದಾದರೂ ಯಾಕೆ? ಅದಕ್ಕೊಂದು ಅರ್ಥಪೂರ್ಣ ಹಿನ್ನೆಲೆಯಿದೆ.
1979ರ ಮಾರ್ಚ್ 31ರ ನಂತರ ನಿವೃತ್ತರಾದವರಿಗೆ ಕೇಂದ್ರ ಸರ್ಕಾರ ಉದಾರೀಕೃತ ನಿವೃತ್ತಿ ವೇತನ ಪದ್ಧತಿಯನ್ನು ಜಾರಿಗೊಳಿಸಿತು. ಸಹಜವಾಗಿ ಆ ದಿನಾಂಕದ ಹಿಂದೆ ನಿವೃತ್ತರಾದವರಿಗೆ ಈ ಸೌಲಭ್ಯ ದೊರೆಯದೇ ಹೋಯಿತು. ಕೇಂದ್ರದ ಉನ್ನತ ಹುದ್ದೆಯಲ್ಲಿದ್ದು 1972ರಲ್ಲಿ ನಿವೃತ್ತರಾದ ದಿವಂಗತ ಡಿ.ಎಸ್.ನಕರಾ ಅವರು ಸರ್ಕಾರದ ಈ ಆಜ್ಞೆಯ ವಿರುದ್ಧವಾಗಿ ಸುಪ್ರೀಂಕೋರ್ಟ್‌ನ್ನು ಪ್ರವೇಶಿಸಿ ನ್ಯಾಯಕ್ಕಾಗಿ ಮೊರೆಯಿಟ್ಟರು. ಡಿ.17, 1982ರಂದು ಸುಪ್ರೀಂಕೋರ್ಟಿನ ನ್ಯಾಯಾಧೀಶರಾದ ವೈ.ವಿ. ಚಂದ್ರಾಚೂಡ ಅವರು ನಿವೃತ್ತರ ಪರವಾಗಿ ಮಹತ್ವದ ತೀರ್ಪು ನೀಡಿದರು. `ನಿವೃತ್ತಿ ವೇತನವೆಂಬುದು ಸರ್ಕಾರದ ಔದಾರ್ಯದ ಕೊಡುಗೆಯಲ್ಲ. ಅದು ಸರ್ಕಾರ ನೀಡುವ ದಯಾಭಿಕ್ಷೆಯೂ ಅಲ್ಲ. ನಿವೃತ್ತಿ ಹೊಂದಿದ ಪ್ರತಿಯೊಬ್ಬ ಸರ್ಕಾರ ನೌಕರನೂ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಪಡೆಯಲು ಅರ್ಹ. ನಿವೃತ್ತಿ ವೇತನ ನಿವೃತ್ತಿ ನೌಕರನ ಹಕ್ಕು' ಎಂದು ಪ್ರತಿಪಾದಿಸಿತು. 1979 ಮಾರ್ಚ್ 31ರ ನಂತರ ನಿವೃತ್ತಿಯಾದವರಿಗೆ ಅಷ್ಟೇ ಅಲ್ಲ, ಹಿಂದೆ ನಿವೃತ್ತರಾದವರಿಗೂ ಉದಾರೀಕೃತ ನಿವೃತ್ತಿ ವೇತನ ಪದ್ಧತಿಯ ಸೌಲಭ್ಯವನ್ನು ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿತು. ತೀರ್ಪು ಹೊರಬಿದ್ದ ಡಿಸೆಂಬರ್ 17ರ ಆ ದಿನವನ್ನು ಈಗ `ನಿವೃತ್ತರ ದಿನ'ವೆಂದು ಆಚರಿಸಲಾಗುತ್ತಿದೆ.

ವ್ಯಕ್ತಿಯೊಬ್ಬ ತನ್ನ ಇಪ್ಪತ್ತೊಂದನೆಯ ವಯಸ್ಸಿನಿಂದ ಐವತ್ತು ವರ್ಷದವರೆಗೆ ದುಡಿಯಲು ಶಕ್ತನಾಗಿರುತ್ತಾನೆ. 58-60ರ ವಯಸ್ಸು ನಿವೃತ್ತಿಯಾಗುವುದಕ್ಕೆ ಸೂಕ್ತ ಸಮಯ. 55ರ ನಂತರ ಕಣ್ಣು ಮಂಜಾಗಿ, ಕಿವಿಯ ಶ್ರವಣಶಕ್ತಿ ಕಡಿಮೆಯಾಗತೊಡಗುತ್ತದೆ. ಕೈಕಾಲುಗಳು ಶಕ್ತಿಗುಂದಿ ಮೊದಲಿನಷ್ಟು ಚಟುವಟಿಕೆಗಳು ಸಾಧ್ಯವಿಲ್ಲವೆಂದು ದೇಹ ಸೂಚಿಸುತ್ತದೆ. ಇಂದ್ರಿಯಗಳು ತಮಗೆ ವಿಶ್ರಾಂತಿಯ ಅವಶ್ಯಕತೆಯಿದೆಯೆಂದು ಪಿಸುಗುಡುತ್ತಿರುತ್ತದೆ. ಮುಪ್ಪನ್ನು ಮುಂದೂಡಲು ಬೆಳ್ಳಗಾಗುತ್ತಿರುವ ತಲೆಗೂದಲಿಗೆ ಕಪ್ಪುಹಚ್ಚಿ, ಉದುರಿದ ಹಲ್ಲುಗಳ ಖಾಲಿಜಾಗದಲ್ಲಿ ಕೃತಕ ಹಲ್ಲುಗಳನ್ನು ಅಂಟಿಸಿ ತಿಪ್ಪರಲಾಗ ಹಾಕಿದರೂ ದೇಹದ ಭಾಗಗಳು ಒಂದಲ್ಲ ಒಂದು ರೀತಿಯ ಎಚ್ಚರಿಕೆ ನೀಡುತ್ತಿರುತ್ತವೆ.

ಮೂವತ್ತು-ಮೂವತ್ತೈದು ವರ್ಷಗಳ ಕಾಲ ವೃತ್ತಿ ಜೀವನ ನಡೆಸಿದ ನಂತರ ನಿವೃತ್ತಿಯ ಬದುಕಿಗೆ ಹೊಂದಿಕೊಳ್ಳುವುದು ಸುಲಭದ ಮಾತಲ್ಲ. ನೌಕರಿಯಲ್ಲಿದ್ದಾಗ ಗಡಿಬಿಡಿಯಲ್ಲಿ ಹಾಸಿಗೆ ಬಿಟ್ಟೆದ್ದು, ದೈನಂದಿನ ಕೆಲಸ ಕಾರ್ಯಗಳನ್ನು ಮುಗಿಸಿ ಆಫೀಸಿಗೆ ಹೋಗಿ ಸಂಜೆಯ ತನಕ ಕೆಲಸ ಮಾಡಿ ಮನೆಗೆ ಮರುಳುವುದು ರೂಢಿಗತವಾಗಿ ಬಂದಿರುತ್ತದೆ. ನಿವೃತ್ತಿಯ ನಂತರ ಕೆಲವರಂತೂ ನೀರಿನಿಂದ ತೆಗೆದ ಮೀನಿನಂತಾಗುತ್ತಾರೆ. ಬದುಕಿನಲ್ಲಿ ಯಾವುದೇ ಹವ್ಯಾಸಗಳನ್ನು ಬೆಳೆಸಿಕೊಳ್ಳದವರ ನಿವೃತ್ತಿಯ ಬದುಕಂತೂ ಶೋಚನೀಯ. ದಿನದ ಹೆಚ್ಚಿನ ಸಮಯವನ್ನು ಆಫೀಸಿನಲ್ಲಿ ಕೆಲಸದ ಜಾಗದಲ್ಲಿ ಕಳೆದವರಿಗೆ ಮನೆಯಲ್ಲಿ ಬಂಧಿಯಾಗುವಂತಹ ಪರಿಸ್ಥಿತಿ. ವೃತ್ತಿಯಲ್ಲಿರುವಾಗ ಲಭಿಸುವ ಗೌರವ, ಮನ್ನಣೆಗಳು ಮಾಯವಾಗಿ ಕೆಲವೊಮ್ಮೆ ಅಸಡ್ಡೆ, ತಿರಸ್ಕಾರ, ವ್ಯಂಗ್ಯದ ಮಾತುಗಳಿಗೆ ಬಲಿಯಾಗಬೇಕಾಗಬಹುದು.

ನಿವೃತ್ತಿಯ ನಂತರ ಸಿಗುವ ಆರ್ಥಿಕ ಸವಲತ್ತುಗಳು ಕೆಲವೊಮ್ಮೆ ಮಕ್ಕಳು ಮೊಮ್ಮಕ್ಕಳ ಪಾಲಾದಾಗ ನಿವೃತ್ತನ ಬದುಕು ಮತ್ತಷ್ಟು ಹದಗೆಡಬಹುದು. ಕೆಲವರು ಈ ಮೊಬಲಗನ್ನು ಮಕ್ಕಳ ಮದುವೆಗೆ, ಮನೆ ಕಟ್ಟಿಸುವುದಕ್ಕೆ ಬಳಸಿ ಸಾಲದ ಶೂಲೆಗೆ ಸಿಲುಕುತ್ತಾರೆ. ವೃತ್ತಿಯಲ್ಲಿರುವಾಗ ಯಾರ‌್ಯಾರಿಗೋ ಜಾಮೀನು ನೀಡಿ ನಿವೃತ್ತಿಯ ಹಣವನ್ನು ಕಳೆದುಕೊಳ್ಳುವವರೂ ಇದ್ದಾರೆ. ಆಗ ನಿವೃತ್ತನ ಕೈಹಿಡಿಯುವುದು ನಿವೃತ್ತಿ ವೇತನವೊಂದೇ.

ನಿವೃತ್ತಿಯ ಬದುಕು ಸುಖಮಯವಾಗಬೇಕೆಂದರೆ ವೃತ್ತಿಯಲ್ಲಿರುವಾಗಲೇ ಮನೆ, ಮಕ್ಕಳ ಮದುವೆ ಮುಂತಾದ ಜವಾಬ್ದಾರಿಗಳನ್ನ ಮುಗಿಸಿ ಕೈತೊಳೆದುಕೊಳ್ಳುವುದು ಒಳ್ಳೆಯದು. ಸಾಹಿತ್ಯ, ಸಂಗೀತ, ಕಲೆಗಳಲ್ಲಿ ಆಸಕ್ತಿ ಇರುವವರಿಗೆ ನಿವೃತ್ತಿಯ ನಂತರ ಅದನ್ನು ಮುಂದುವರಿಸಲು ಅತ್ಯುತ್ತಮ ಅವಕಾಶ. ತಮ್ಮ ಆಸಕ್ತ ಕ್ಷೇತ್ರದಲ್ಲಿ ಮಿಂಚಲು ನಿವೃತ್ತಿಯ ನಂತರ ಸಕಾಲ.

ಜೀವನ ಸಂಧ್ಯಾಕಾಲದಲ್ಲಿ ಏಳುಬೀಳುಗಳನ್ನು, ಕಷ್ಟ-ನಷ್ಟ, ರೋಗ ರುಜಿನಗಳನ್ನು ಸಮಚಿತ್ತದಿಂದ ಸ್ವೀಕರಿಸಿದರೆ ಬದುಕು ನೆಮ್ಮದಿ, ಸುಖ ಸಂತೋಷಗಳಿಂದ ಕೂಡಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಹೆಚ್ಚು ಗಮನ ಕೊಡುವುದು ಅಷ್ಟೇ ಮುಖ್ಯವೆನಿಸುತ್ತದೆ. ಹಿರಿಯರಿಗೆ ಬದುಕಿನ ಕುರಿತಾದ ಉತ್ಸಾಹವನ್ನು ನವೀಕರಿಸಿಕೊಳ್ಳುವ ಪ್ರಯತ್ನವೂ ಮುಖ್ಯ. `ನಿವೃತ್ತರ ದಿನ' ಅಂಥದೊಂದು ಪ್ರಯತ್ನವಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.