ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೊಂದು ಶಾಲೆ; ಶಾಲೆಗೊಂದು .....

Last Updated 8 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಾಲ್ಕನೆ ತರಗತಿಯ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡತೊಡಗಿದ್ದ ಸವಿತಾ ಟೀಚರಿಗೆ, ಸಹನಾಳ ಉತ್ತರ ಪತ್ರಿಕೆಯನ್ನು ನೋಡಿದಾಗ ಗಾಬರಿಯಾಗಿತ್ತು. ಎಲ್ಲರಿಗಿಂತ ಉತ್ತಮ ಅಂಕಗಳನ್ನು ಪಡೆಯುತ್ತಿದ್ದ, ಮುದ್ದು ಮುದ್ದು ಅಕ್ಷರಗಳಿಗೆ ಹೆಸರಾಗಿದ್ದ, ಸಹನಾಳ ಉತ್ತರ ಪತ್ರಿಕೆ ಬಹುತೇಕ ಖಾಲಿ ಹೊಡೆಯುತ್ತಿತ್ತು. ಬರೆದಿದ್ದ ಉತ್ತರಗಳ ಅಕ್ಷರಗಳೂ ವಾರೆಕೋರೆಯಾಗಿದ್ದವು. ಆದರೆ, ಮರುದಿನ ವಿಚಾರಿಸಿದಾಗ ಅವಳು ಕೊಟ್ಟಿದ್ದ ಉತ್ತರ ಕೇಳಿದಾಗ ಆಘಾತವಾಗಿತ್ತು.

ದೂರದ ಹಳ್ಳಿಶಾಲೆಗೆ ವರ್ಗಾವಣೆಯ ಆದೇಶ ಬಂದಿದ್ದಾಗ, ಹಳ್ಳಿಯ ಮಕ್ಕಳಿಗೆ ಶಿಕ್ಷಣ ನೀಡಲು ಇದೊಂದು ಅವಕಾಶವೆಂದು ನಂಬಿ ಬಂದಿದ್ದ ಸವಿತಾ ಟೀಚರಿಗೆ, ಅಷ್ಟು ದೊಡ್ಡ ಶಾಲೆಯಲ್ಲಿ ಬೆರಳೆಣಿಕೆಯಷ್ಟು ಮಕ್ಕಳನ್ನು ಕಂಡಾಗ ನಿರಾಸೆಯೇ ಆಗಿತ್ತು. ಊರಲ್ಲಿ ಶಾಲಾವಯಸ್ಸಿನ ಮಕ್ಕಳಿಗೇನೂ ಬರವಿರಲಿಲ್ಲ. ಆದರೆ ಅವರೆಲ್ಲರೂ ಹೆತ್ತವರ ಜೊತೆಗೆ ಕೂಲಿಗೋ ಗದ್ದೆ ಕೆಲಸಕ್ಕೋ ಹೋಗುತ್ತಿದ್ದವರು.

ಇದ್ದ ಮಕ್ಕಳನ್ನೆಲ್ಲ ಗುಡ್ಡೆ ಹಾಕಿಕೊಂಡು, ಊರ ತುಂಬಾ ಅಲೆದು, ಶಾಲಾ ಕಲಿಕೆಯಿಂದಾಗುವ ಪ್ರಯೋಜನಗಳನ್ನು ಎಷ್ಟು ಮನವರಿಕೆ ಮಾಡಿದರೂ ಪ್ರಯೋಜನವಾಗಿದ್ದಿರಲಿಲ್ಲ. ಆದರೆ ಹಟ ಬಿಡದೆ, ಶಾಲೆಗೆ ಬರುತ್ತಿದ್ದ ಮಕ್ಕಳಿಗೆಲ್ಲ ಹೊಸ ರೀತಿಯಲ್ಲಿ ಪಾಠ ಮಾಡುವುದರ ಜೊತೆಗೆ, ಹಾಡು, ನಾಟಕ, ಚಿತ್ರಕಲೆಗಳ ಬಗ್ಗೆ ಇಷ್ಟಿಷ್ಟೇ ರುಚಿ ಹತ್ತಿಸತೊಡಗಿದರು. ಓದಿನೊಟ್ಟಿಗೆ ಕಲೆಯ ಜಗತ್ತಿಗೆ ತೆರೆದುಕೊಂಡ ಮಕ್ಕಳೆಲ್ಲ, ತಮ್ಮ ಸ್ನೇಹಿತರಿಗೆ ಅವುಗಳನ್ನು ವಯೋಸಹಜವಾಗಿ, ರೋಚಕವಾಗಿ ವಿವರಿಸತೊಡಗಿದಾಗ, ತಾವೂ ಅದನ್ನೆಲ್ಲ ಕಲಿಯುವ ಆಸೆಗೆ ಒಂದೊಂದೇ ಮಗು, ಕುತೂಹಲದಿಂದ ಶಾಲೆಗೆ ಸೇರಲಾರಂಭಿಸಿದ್ದವು. ಹಾಗೆ ಬಂದಿದ್ದ ಮಕ್ಕಳಲ್ಲಿ ಸಹನಾ ಕೂಡಾ ಒಬ್ಬಳು.

ಪರೀಕ್ಷೆಯಲ್ಲಿ ಸಹನಾ ಸರಿಯಾಗಿ ಬರೆಯದಿರುವುದಕ್ಕೆ ಕಾರಣ ವಿಚಾರಿಸಿದ್ದಾಗ, ಅವಳು ಸಂಕೋಚದಿಂದಲೇ ಹೇಳಿದ್ದಳು, ‘ಒಂದಕ್ಕೆ ಹೋಗ್ಬೇಕಾಗಿತ್ತು ಮಿಸ್. ಬಹಳ ಹೊತ್ತು ತಡ್ದುಕೊಂಡದ್ರಿಂದ ಹೊಟ್ಟೆನೋವು ಬಂದಿತ್ತು. ಉತ್ತರ ಗೊತ್ತಿದ್ರೂ ಬರೆಯುಲಿಕ್ಕಾಗ್ಲಿಲ್ಲ’.
‘ಯಾವಾಗ್ಲೂ ಹೋಗ್ತಿರ್ತೀರಲ್ಲ. ಅಲ್ಲಿಗೆ ಹೋಗಿ ಬರಬಹುದಿತ್ತಲ್ಲವೇ?’ ಸವಿತಾ ಟೀಚರ್ ಸಹಜವಾಗಿಯೇ ಪ್ರಶ್ನಿಸಿದ್ದರು. ಆ ಊರಿನಲ್ಲಿ ತಂಬಿಗೆ ಹಿಡಿಕೊಂಡು ಬಯಲಿಗೆ ಹೋಗುವುದು ಸಾಮಾನ್ಯ ಸಂಗತಿಯೇ ಆಗಿತ್ತು.

‘ಅಲ್ಲಿಗೆ ಹೇಗೆ ಹೋಗುವುದು ಮಿಸ್. ಯಾವಾಗ್ಲೂ ಅಲ್ಲಿ ಕೆಲವು ಪೋಲಿ ಹುಡುಗ್ರು ಸುತ್ತಾಡ್ತಿರ್ತಾರೆ. ಹುಡುಗಿಯರಾರೂ ಅಲ್ಲಿಗೆ ಹೋಗುವುದೇ ಇಲ್ಲ. ಇದ್ಕೇ ಕೆಲವು ಹೆಣ್ಣುಮಕ್ಳು ಶಾಲೆ ಬಿಟ್ಟಿದ್ದಾರೆ ಮಿಸ್. ಈಗ ಉಳಿದವ್ರೂ ಬಿಟ್ರೆ ಮನೆಯಲ್ಲಿ ನನ್ನನ್ನೂ ಶಾಲೆಗೆ ಕಳುಹಿಸುವುದಿಲ್ಲ. ನಾನು ಮುಂದೆ ಓದುವುದು ಬೇಡ್ವಾ ಮಿಸ್..?’ ಎಂದು ಹೇಳಿ ಮುಖ ಸಣ್ಣದು ಮಾಡಿಕೊಂಡಿದ್ದಳು.
ಸವಿತಾ ಟೀಚರ್ ಬಳಿ ಉತ್ತರವಿರಲಿಲ್ಲ. ಹಾಗೆಂದು ಕೈ ಕಟ್ಟಿ ಕೂರುವವರಲ್ಲ ಅವರು. ಸಹನಾಳ ಪ್ರಶ್ನೆಗೆ ಉತ್ತರ ಹುಡುಕಲು ವಾರದೊಳಗೆ ಮಕ್ಕಳ ಪೋಷಕರ ಸಭೆ ಕರೆದೇಬಿಟ್ಟರು. ಶೌಚಾಲಯವಿಲ್ಲದೇ ಮಕ್ಕಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿ, ತಾವು ನಡೆಸುವ ಹೋರಾಟಕ್ಕೆ ಅವರೆಲ್ಲರ ಬೆಂಬಲ ಬೇಕೆಂದು ಕೋರಿದರು.

ಸಭೆಯಲ್ಲಿದ್ದ ಒಬ್ಬರು ಹಿರಿಯರು, ‘ಇದ್ಕೇ ನೋಡಿ, ಹೆಣ್ಣುಮಕ್ಳನ್ನು ಶಾಲೆಗೆ ಕಳ್ಸ್‌ಬಾರ್ದು ಅನ್ನೋದು’ ಎಂದುಬಿಟ್ಟರು. ಆಗ ಎದ್ದುನಿಂತ ಹುಡುಗನೊಬ್ಬ, ‘ಅಜ್ಜಯ್ಯ, ನೀನು ಸುಮ್ನಿರು. ಅಮ್ಮ ಮತ್ತು ತಂಗಿ ರಾತ್ರಿ ಹೊತ್ತು ಬಯಲಿಗೆಂದು ಹೋಗಿ ಅನುಭವಿಸೋ ಕಷ್ಟ ಏನಂತ ನಿನ್ಗೆ ಗೊತ್ತಿಲ್ಲ. ಹೀಗಿರುವಾಗ ಹಗಲು ಹೊತ್ತಲ್ಲಿ ಹೆಣ್ಮಕ್ಳು ಬಯಲಲ್ಲಿ ಕೂತ್ಕೊಳ್ಳೋದು ಹೇಗೇ?’ ಎಂದು ಪ್ರಶ್ನಿಸಿದಾಗ ಉಳಿದವರೆಲ್ಲ ‘ಹೌದಲ್ಲ’ ಎಂದು ತಲೆಯಾಡಿಸಿದ್ದರು. ಕುಳಿತಲ್ಲಿಂದಲೇ ಮಾತಿಗಿಳಿದ ತಾಯಿಯೊಬ್ಬಳು, ‘ಹೌದು ಟೀಚರ್ರವ್ವಾ. ನಾವೂ ಶಾಲೆಗಂತ ಹೋಗಿದ್ದಿದ್ರೆ ಈ ಸಂಕಟ ಏನೂಂತ ಗೊತ್ತಾಗ್ತಿತ್ತು.  ನಮ್ಮ ಹೆಣ್ಮಕ್ಳನ್ನಾದ್ರೂ ಈ ಕಷ್ಟದಿಂದ ಪಾರು ಮಾಡಲಿಕ್ಕೆ ಏನಾದ್ರೂ ಉಪಾಯ ಮಾಡಿ ತಾಯಿ’ ಎಂದರು. ಉಳಿದವರೆಲ್ಲರೂ ಹೌದು... ಹೌದು... ನಾವೆಲ್ಲ ನಿಮ್ಮೊಟ್ಟಿಗೆ ನಿಲ್ತೀವಿ ಎಂದು ಬೆಂಬಲ ಸೂಚಿಸಿದರು. ಮುಂದಿನ ಶನಿವಾರದಂದು ಪಂಚಾಯತ್ ಕಚೇರಿಯ ಎದುರು ಊರವರೆಲ್ಲರೂ ಸಭೆ ಸೇರಿ, ಸರ್ಕಾರದ ಸಹಾಯ ಪಡೆಯಲು ಒತ್ತಾಯಿಸುವುದೆಂದು ನಿರ್ಧರಿಸಲಾಯಿತು.

ಮಾತಾಡಿಕೊಂಡಂತೆ ಪಂಚಾಯತ್ ಕಚೇರಿಯ ಎದುರು ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ಮಕ್ಕಳೆಲ್ಲ ಸವಿತಾ ಟೀಚರ್ ಜೊತೆಗೆ ಬಂದು ನಿಂತಿದ್ದರು. ಕಚೇರಿಯ ಬಾಗಿಲಿನ್ನೂ ತೆಗೆದಿರಲಿಲ್ಲ. ನಾಲ್ಕೈದು ಮಕ್ಕಳ ಪೋಷಕರನ್ನು ಬಿಟ್ಟರೆ ಉಳಿದವರಾರೂ ಇರಲಿಲ್ಲ. ಗಂಟೆ ಹನ್ನೊಂದಾದರೂ ಕಚೇರಿಯ ಬಾಗಿಲು ತೆರೆಯುವ ಸೂಚನೆ ಕಾಣಿಸಲಿಲ್ಲ. ಪಂಚಾಯತ್ ಅಧ್ಯಕ್ಷರ ಮನೆಗೇ ಹೋಗಿ ಅವರನ್ನು ಕರೆದುಕೊಂಡು ಬರೋಣವೆಂದು ಇಬ್ಬರು ಪೋಷಕರು ಹೊರಟು ನಿಂತಾಗ, ದೂರದಿಂದ ಇಡೀ ಊರಿಗೆ ಊರೇ ಗುಂಪಾಗಿ ಪ್ರತಿಭಟನಾ ಸ್ಥಳದ ಹತ್ತಿರ ಬರುತ್ತಿರುವಂತೆ ಕಾಣಿಸಿತು. ಗುಂಪಿನ ಎದುರು, ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಕೂಡ ನಡೆದುಕೊಂಡು ಬರುತ್ತಿದ್ದರು.

ಮಕ್ಕಳ ಗುಂಪಿನಿಂದ ಎದ್ದ ಸಹನಾ, ಬರುತ್ತಿರುವವರಿಗೆ ಸ್ವಾಗತ ಕೋರುವಂತೆ ಎಲ್ಲ ಮಕ್ಕಳಿಂದ ಚಪ್ಪಾಳೆಯ ಮಳೆ ಸುರಿಸಿದಳು. ಜೊತೆಗೆ ತನ್ನ ಒಬ್ಬೊಬ್ಬ ಸ್ನೇಹಿತೆಯರ ಹೆಸರು ಕೂಗುತ್ತಾ, ಬಯಲು ಶೌಚಾಲಯದಿಂದ ಹೆಣ್ಣುಮಕ್ಕಳಿಗಾಗುವ ತೊಂದರೆಗಳನ್ನು ವಿವರಿಸಲು ಗುಂಪಿನ ಮುಂಭಾಗಕ್ಕೆ ಆಹ್ವಾನಿಸಿದಳು.

ಅಲ್ಲಿ ಬಂದು ಮಾತನಾಡಿದ ಪ್ರತಿಯೊಬ್ಬ ಮಗುವಿನ ಪೋಷಕರೂ ಅಲ್ಲಿದ್ದರು. ಅವರಲ್ಲಿ ಪಂಚಾಯತ್ ಸದಸ್ಯರ ಇಬ್ಬರು ಮಕ್ಕಳು ಕೂಡ ಮಾತನಾಡಿದರು. ಅವರು ಅನುಭವಿಸುವ ಅವಮಾನಗಳು, ಹಿಂಸೆಗಳು ಯಾವ ಮಟ್ಟಿಗಿವೆಯೆಂಬುದು ಮೊದಲಬಾರಿ ಸಾರ್ವಜನಿಕವಾಗಿ ಊರಿನ ಜನರಿಗೆ ಅರ್ಥವಾಗಿತ್ತು. ಮಕ್ಕಳ ಮಾತಿಗೆ ಊರೆಲ್ಲ ಬೆರಗಾಗಿಹೋಗಿತ್ತು. ಒಂದೆಡೆ ಮಕ್ಕಳ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕೋ, ಇಲ್ಲ ಅವರ ನೋವುಗಳಿಗೆ ಮರುಕಪಡಬೇಕೋ ಎಂಬುದು ಅರ್ಥವಾಗದ ಸ್ಥಿತಿ. ಇಷ್ಟೆಲ್ಲ ಆಗುವಷ್ಟರಲ್ಲಿ ಸೂರ್ಯ ನೆತ್ತಿಗೇರಿ, ಮಕ್ಕಳ ಮುಖವೆಲ್ಲ ಬಾಡಿಹೋಗಿತ್ತು. ಮುಂದೆ ಬಂದ ಪಂಚಾಯತ್ ಅಧ್ಯಕ್ಷರು, ಸದಸ್ಯರೊಬ್ಬರನ್ನು ಕರೆದು ಕಿವಿಯಲ್ಲೇನೋ ಪಿಸುಗುಟ್ಟಿ ಕಚೇರಿ ಒಳಗೆ ಹೋದರು.

ಆ ಸದಸ್ಯರು ಅತ್ತೆಲ್ಲೋ ಹೋದರು. ಹತ್ತು ನಿಮಿಷ ಸುತ್ತೆಲ್ಲ ಮೌನ. ಯಾರೋ ಏನೋ ಹೇಳಬೇಕೆನ್ನುವಷ್ಟರಲ್ಲಿ ಆ ಪಂಚಾಯತ್ ಸದಸ್ಯರೊಟ್ಟಿಗೆ ಬಂದವನೊಬ್ಬ ಎಲ್ಲ ಮಕ್ಕಳಿಗೂ ಶರಬತ್ತು ಹಂಚತೊಡಾಗಿದ್ದ. ಬಿಸಿಲಿಗೆ ಗಂಟಲು, ನಾಲಿಗೆ ಬತ್ತಿಸಿಕೊಂಡಿದ್ದ ಹುಡುಗರಿಗೆ ಕುಡಿಯುವ ಆಸೆಯಾದರೂ, ತಮ್ಮ ಹೋರಾಟಕ್ಕೆ ಜಯ ಸಿಗದೇ ಹೇಗೆ ಕುಡಿಯುವುದು ಎಂದುಕೊಳ್ಳುತ್ತ ಸವಿತಾ ಟೀಚರತ್ತ ಪ್ರಶ್ನಾರ್ಥಕ ನೋಟ ಬೀರಿದ್ದರು.

ಅಷ್ಟರಲ್ಲಿ ಒಳಗಿಂದ ಬಂದ ಅಧ್ಯಕ್ಷರು, ಸವಿತಾ ಟೀಚರ್ ಕೈಗೆ ಪತ್ರವೊಂದನ್ನು ಕೊಡುತ್ತ, ‘ಇನ್ನೆರೆಡು ವಾರಗಳಲ್ಲಿ ನಿಮ್ಮ ಶಾಲೆಗೆ ಶೌಚಾಲಯ ಕಟ್ಟಿಸಿಕೊಡುತ್ತೇವೆ, ನಂತರ ಊರಿನ ಮನೆಮನೆಗೂ ಶೌಚಾಲಯದ ವ್ಯವಸ್ಥೆ ಮಾಡಿಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ನಮ್ಮ ಹೆಣ್ಣುಮಕ್ಕಳ ಸುರಕ್ಷತೆಯ ಜವಾಬ್ದಾರಿ ನಮ್ಮ ಹೊಣೆ. ನಿಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇವೆಂಬ ದೃಢೀಕರಣ ಪತ್ರ ಇದು. ತೆಗೆದುಕೊಳ್ಳಿ’ ಎಂದರು.

ಅಧ್ಯಕ್ಷರಿಂದ ಪತ್ರವನ್ನು ತೆಗೆದುಕೊಂಡು ಓದಿದ ಸವಿತಾ ಟೀಚರ್, ‘ಮಕ್ಕಳೇ ಶರಬತ್ತು ಕುಡಿಯಿರಿ, ನಮ್ಮ ಊರು ಇನ್ನುಮುಂದೆ ಸ್ವಚ್ಛ ಗ್ರಾಮವಾಗಲಿದೆ’ ಎಂದರು. ಮಕ್ಕಳು ಶರಬತ್ತು ಕುಡಿದು ಮತ್ತಷ್ಟು ಹಿಗ್ಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT