ಇಂಗ್ಲಿಷ್‌ನಲ್ಲಿ ಕಪ್ಪೆ ಬೇಯಿಸುವ ಉಪಾಖ್ಯಾನವೊಂದಿದೆ. ಉಭಯವಾಸಿಯಾಗಿರುವ ಕಪ್ಪೆ ಒಂದು ಶೀತರಕ್ತ ಪ್ರಾಣಿ. ವಾತಾವರಣದ ಉಷ್ಣತೆಗೆ ತಕ್ಕಂತೆ ತನ್ನ ದೇಹದ ಉಷ್ಣತೆಯನ್ನು ಹೊಂದಿಸಿಕೊಳ್ಳುತ್ತದೆ. ಕಪ್ಪೆ ಬೇಯಿಸುವ ಉಪಾಖ್ಯಾನಕ್ಕೆ ಆಧಾರವಾಗಿರುವುದು ಕಪ್ಪೆಯ ಈ ದೇಹಪ್ರಕೃತಿ. ಕಪ್ಪೆಯನ್ನು ನೀರು ತುಂಬಿದ ಬೋಗುಣಿಯೊಂದರಲ್ಲಿ ಹಾಕಿ ನಿಧಾನವಾಗಿ ನೀರನ್ನು ಬಿಸಿ ಮಾಡತೊಡಗಿದರೆ, ಅದು ತನ್ನ ದೇಹದ ಉಷ್ಣತೆಯನ್ನೂ ನೀರಿನ ಉಷ್ಣತೆಯೊಂದಿಗೆ ಏರಿಸಿಕೊಂಡು ನೀರು ಕುದಿಯುವ ಹೊತ್ತಿಗೆ ತನಗೆ ಅರಿವೇ ಇಲ್ಲದೆ ಪ್ರಾಣ ಕಳೆದುಕೊಳ್ಳುತ್ತದೆ ಎಂದು ಈ ಉಪಾಖ್ಯಾನ ಹೇಳುತ್ತದೆ.

ಇದೊಂದು ಕೇವಲ ಉಪಮೆ ಮಾತ್ರ; ನಿಜವಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಪ್ಪೆಯಿರುವ ನೀರಿನ ಬೋಗುಣಿಯನ್ನು ನಿಧಾನವಾಗಿ ಬಿಸಿ ಮಾಡುವ ಪ್ರಯೋಗವೂ ಇದನ್ನೇ ಸಾಬೀತು ಮಾಡಿದೆ. ಆದರೆ ಈ ಉಪಾಖ್ಯಾನ ಮತ್ತೊಂದು ಬಗೆಯಲ್ಲಿ ನಿಜವಾಗುತ್ತಿದೆ. ಕಪ್ಪೆಯ ಸಹಜ ಆವಾಸಗಳ ನೀರು ನಿಧಾನವಾಗಿ ಬಿಸಿಯಾಗುತ್ತಿದೆ. ಅದರ ಅರಿವೇ ಇಲ್ಲದೆ ಪ್ರಪಂಚಾದ್ಯಂತ ಕಪ್ಪೆಗಳು ಸಾಯುತ್ತಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕದ ಜಾರ್ಜಿಯಾದಲ್ಲಿರುವ ಅಟ್ಲಾಂಟಾ ಬಾಟಾನಿಕಲ್ ಗಾರ್ಡನ್‌ನಲ್ಲಿ ಇದ್ದ ‘ಟಫ್ಪೀ’ ಎಂಬ ಮರಗಪ್ಪೆ ಕೊನೆಯುಸಿರೆಳೆಯಿತು. ಸಾಮಾನ್ಯ ಕಪ್ಪೆಗಳಿಗಿಂತ ಭಿನ್ನವಾದ ಕಾಲುಗಳಿದ್ದ ಈ ಮರಗಪ್ಪೆ ತನ್ನ ಪ್ರಭೇದದ ಕೊನೆಯ ಕೊಂಡಿಯಾಗಿತ್ತು.

2005ರಲ್ಲಿ ‘ರ್‍ಯಾಬ್ಸ್ ಫ್ರಾಗ್’ ಎಂದು ಕರೆಯಲಾಗುವ ಈ ಕಪ್ಪೆಗಳನ್ನು ಪತ್ತೆಹಚ್ಚುವ ಹೊತ್ತಿಗಾಗಲೇ, ಈ ಪ್ರಭೇದದ ಕಪ್ಪೆಗಳು ಬಹುತೇಕ ನಾಶವಾಗಿದ್ದವು. ಸಿಕ್ಕ ಕೆಲವನ್ನು ಅಟ್ಲಾಂಟಾಕ್ಕೆ ತಂದಿಟ್ಟು ಅವುಗಳ ವಂಶವನ್ನು ಮುಂದುವರಿಸುವ ಪ್ರಯತ್ನ ಮಾಡಲಾಯಿತು. 2009ರಲ್ಲಿ ಕೊನೆಯ ಹೆಣ್ಣು ಸತ್ತುಹೋಯಿತು. 2012ರಲ್ಲಿ ಒಂದು ಗಂಡು ಸತ್ತುಹೋಯಿತು. ಕೊನೆಗುಳಿದದ್ದು ಟಫ್ಫಿ ಎಂಬ ಗಂಡು ಮಾತ್ರ. ಸೆಪ್ಟೆಂಬರ್ 26ರಂದು ಇದರ ಸಾವಿನೊಂದಿಗೆ ಮರಗಪ್ಪೆಗಳ ಒಂದು ಪ್ರಭೇದವೇ ಕೊನೆಗೊಂಡಿತು.

ಟಪ್ಫಿ ಮತ್ತು ಅದರ ಜೊತೆಗಾರರನ್ನು ಬದುಕಿಸುವುದಕ್ಕೆ ವಿಜ್ಞಾನಿಗಳು ಬಹಳ ಕಷ್ಟಪಟ್ಟಿದ್ದರು. 2005ರಿಂದಲೂ ಈ ಕಪ್ಪೆಗಳ ಪುನರುಜ್ಜೀವನದ ಪ್ರಯತ್ನಗಳು ಜೀವವಿಜ್ಞಾನದ ನಿಯತಕಾಲಿಕಗಳಲ್ಲಿ ಗಮನಸೆಳೆಯುತ್ತಿದ್ದವು. ಈ ಎಲ್ಲಾ ಕಾರಣಗಳಿಂದ ಟಪ್ಫಿಯ ಸಾವು ಸುದ್ದಿಯಾಯಿತು. ಹೀಗೆ ಸುದ್ದಿಯೇ ಆಗದೆ ಸಾಯುತ್ತಿರುವ ಕಪ್ಪೆಗಳೂ ಇವೆ. ಎರಡು ವರ್ಷಗಳ ಹಿಂದೆ ‘ಭಾರತೀಯ ಪ್ರಾಣಿಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ’ ಪ್ರಕಟಿಸಿದ ವರದಿಯ ಪ್ರಕಾರ, ಭಾರತದಲ್ಲಿರುವ ಕಪ್ಪೆ ಪ್ರಭೇದಗಳಲ್ಲಿ ಶೇಕಡಾ 20ರಷ್ಟು ಅಳಿವಿನ ಹಾದಿಯಲ್ಲಿವೆ ಎಂದು ಹೇಳಿತ್ತು.

ಭಾರತದಲ್ಲಿ 340 ಪ್ರಭೇದದ ಕಪ್ಪೆಗಳಿವೆ. ಇವುಗಳಲ್ಲಿ 78 ಪ್ರಭೇದಗಳು ಅಪಾಯದಂಚಿನಲ್ಲಿವೆ. ಇವುಗಳಲ್ಲಿ 17 ಪ್ರಭೇದಗಳಂತೂ ತೀವ್ರ ಸಂಕಷ್ಟದಲ್ಲಿವೆ ಎಂದು ವರದಿ ಬೊಟ್ಟು ಮಾಡಿ ತೋರಿಸಿತ್ತು. ಉಳಿದಂತೆ 32 ಅಳಿವಿನಂಚಿನಲ್ಲಿದ್ದರೆ, 22 ಪ್ರಭೇದಗಳು ಅಳಿವಿನಂಚಿನ ಪ್ರಭೇದಗಳಾಗುವ ಹಾದಿಯಲ್ಲಿವೆ.

ಎಚ್ಚರ ವಹಿಸದೇ ಇದ್ದರೆ ಉಳಿದ ಪ್ರಭೇದಗಳ ಸ್ಥಿತಿಯೂ ಅದೇ ಎಂದು ವರದಿ ಹೇಳಿತ್ತು. ಈ ವರದಿಯ ಅಂಶಗಳು ಪತ್ರಿಕೆಗಳಲ್ಲಿ ಹತ್ತಾರು ಸಾಲುಗಳ ಸುದ್ದಿಯಾಗಿಯಷ್ಟೇ ಪ್ರಕಟವಾಯಿತು. ಜೀವವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಪರಿಸರವಾದಿಗಳು ಈಗಲೂ ಇದರ ಬಗ್ಗೆ ಚರ್ಚಿಸುತ್ತಲೇ ಇದ್ದಾರೆ. ಆದರೆ ಮುಖ್ಯವಾಹಿನಿಯ ಚರ್ಚೆಗಳಲ್ಲಿ ಇದು ಪ್ರಸ್ತಾಪವಾಗಲೇ ಇಲ್ಲ.

ಕಪ್ಪೆಗಳು ಅಳಿವಿನಂಚಿಗೆ ಸಾಗುತ್ತಿರುವುದು ನಿನ್ನೆ ಮೊನ್ನೆಯ ಸಂಗತಿಯೇನೂ ಅಲ್ಲ. 1980ರಿಂದಲೇ ಕಪ್ಪೆ ಪ್ರಭೇದಗಳ ಅಳಿವು ತೀವ್ರಗೊಂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 1989ರಲ್ಲಿ ನಡೆದ ಮೊದಲ ಉರಗಶಾಸ್ತ್ರ (ಸರೀಸೃಪ ಶಾಸ್ತ್ರ) ಕಾಂಗ್ರೆಸ್‌ನಲ್ಲಿಯೇ ವಿಜ್ಞಾನಿಗಳು ಕಪ್ಪೆಗಳ ಕೆಲವು ಪ್ರಭೇದಗಳನ್ನು ಕಂಡುಕೊಳ್ಳುವುದೇ ಕಷ್ಟವಾಗುತ್ತಿದೆ ಎನ್ನಲಾರಂಭಿಸಿದ್ದರು. ಇದು ಕೇವಲ ಒಂದು ದೇಶದ ಪ್ರಶ್ನೆಯೇನೂ ಆಗಿರಲಿಲ್ಲ.

ಅಮೆರಿಕ, ಆಸ್ಟ್ರೇಲಿಯಾ, ಕೋಸ್ಟರಿಕಾ, ಭಾರತ – ಹೀಗೆ ವಿಶ್ವದ ಎಲ್ಲೆಡೆಯ ಸರೀಸೃಪ ತಜ್ಞರು ಕಪ್ಪೆ ಪ್ರಭೇದಗಳು ಕಾಣೆಯಾಗುತ್ತಿರುವುದನ್ನು ಹೇಳುತ್ತಿದ್ದರು. 2004ರಲ್ಲಿ ಪ್ರಪಂಚದ ಉಭಯವಾಸಿಗಳ ದೊಡ್ಡದೊಂದು ಪಟ್ಟಿಯನ್ನೇ ರೂಪಿಸಲಾಯಿತು. ಸುಮಾರು 5000 ಪ್ರಭೇದಗಳ ಈ ಪಟ್ಟಿಯಲ್ಲಿ ಶೇಕಡಾ 30ರಷ್ಟು ಅಳಿವನಂಚಿಗೆ ಸಾಗುತ್ತಿವೆ ಎಂಬ ವಿಷಯ ಆಗಲೇ ಮೊದಲು ಅರಿವಾದದ್ದು. ಈ ಲೆಕ್ಕಾಚಾರಗಳಿಂದಾಗಿ ಪ್ರಾಣಿ ಮತ್ತು ಪಕ್ಷಿಗಳಿಗಿಂತ ಹೆಚ್ಚು ವೇಗವಾಗಿ ಉಭಯವಾಸಿಗಳು ಅಳಿಯುತ್ತಿವೆ ಎಂಬ ವಾಸ್ತವವೂ ಬೆಳಕಿಗೆ ಬಂತು.

ಕಪ್ಪೆಗಳ ಅಳಿವಿನ ತೀವ್ರತೆ ಭಯ ಹುಟ್ಟಿಸುವಂತಿದೆ. ಅಮೆರಿಕದ ಸಿಯೆರಾ ನೆವಾಡ ಪರ್ವತ ಪ್ರದೇಶದಲ್ಲಿರುವ ‘ಯೋಸ್ಮೈಟ್ ರಾಷ್ಟ್ರೀಯ ಉದ್ಯಾನವನ’ದಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ಹಳದಿ ಕಾಲಿನ ಕಪ್ಪೆಗಳು ಈಗ ಹುಡುಕಿದರೂ ಸಿಗುವುದಿಲ್ಲ. ಇಡೀ ನೇವಾಡ ಪರ್ವತ ಪ್ರದೇಶದ ಕಾಡು ಇದ್ದಕ್ಕಿದ್ದಂತೆಯೇ ಇಲ್ಲವಾದರೆ ಹೇಗಿರಬಹುದೋ ಹಾಗಿದೆ ಈ ಕಪ್ಪೆಗಳ ಅಳಿವು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಕಪ್ಪೆಗಳಿಗೆ ಮಾರಕವಾಗಿ ಪರಿಣಮಿಸಿದ್ದು Batrachochytrium dendrobatidis ಎಂಬ ಫಂಗಸ್‌ನಿಂದ ಬರುವ ರೋಗ. ವಿಶ್ವವ್ಯಾಪಿಯಾಗಿ ಈ ಫಂಗಸ್‌ನಿಂದ ಬರುವ ರೋಗ ಕಪ್ಪೆಗಳನ್ನು ನಿರ್ವಂಶ ಮಾಡುತ್ತಿದೆ ಎನ್ನಲಾಗುತ್ತಿದೆ.

ಕಪ್ಪೆಗಳಂಥ ಉಭಯವಾಸಿಗಳ ಚರ್ಮಕ್ಕೆ ಈ ಫಂಗಸ್ ಅಂಟಿಕೊಳ್ಳುತ್ತದೆ. ಉಭಯವಾಸಿಗಳ ಮಟ್ಟಿಗೆ ಚರ್ಮ ಎಂದರೆ ಕೇವಲ ದೇಹದ ಹೊರಾವರಣವಷ್ಟೇ ಅಲ್ಲ; ಅದು ಅವುಗಳ ಉಸಿರಾಟ ಮತ್ತು ವಿಸರ್ಜನಾಂಗವೂ ಹೌದು. ಮನುಷ್ಯನ ಶ್ವಾಸಕೋಶ ಮತ್ತು ಮೂತ್ರಜನಕಾಂಗ ಮತ್ತು ಚರ್ಮಕ್ಕೆ ಒಟ್ಟಿಗೆ ಕಾಯಿಲೆಯೊಂದು ಬಾಧಿಸಿದರೆ ಏನಾಗಬಹುದೋ ಅದು ಕಪ್ಪೆಗಳಿಗೂ ಆಗುತ್ತದೆ. ಈ ಫಂಗಸ್‌ನ ಪರಿಣಾಮವನ್ನು ಎದುರಿಸಲಾಗದಂಥ ಸ್ಥಿತಿ ಕಪ್ಪೆಗಳಿಗೇಕೆ ಬಂತು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಮತ್ತೆ ಕಪ್ಪೆ ಬೇಯಿಸುವ ಉಪಾಖ್ಯಾನಕ್ಕೇ ಹಿಂದಿರುಗಬೇಕಾಗುತ್ತದೆ.

ಮನುಷ್ಯ ಮಾಡುತ್ತಿರುವ ಅವಾಂತರಗಳು ಭೂತಾಪಮಾನವನ್ನು ಹೆಚ್ಚಿಸುತ್ತಿದೆ. ಅರ್ಥಾತ್ ನಾವು ಕಪ್ಪೆಯಿರುವ ಬೋಗುಣಿಯನ್ನು ಒಲೆಯ ಮೇಲಿಟ್ಟು ನಿಧಾನವಾಗಿ ನೀರು ಕಾಯಿಸುತ್ತಿದ್ದೇವೆ. ಒಂದು ಕಡೆ ಕಪ್ಪೆಗಳ ಆವಾಸವೇ ಕಾಣೆಯಾಗುತ್ತಿದೆ. ಇರುವ ಅಲ್ಪ ಸ್ವಲ್ಪ ಸ್ಥಳದಲ್ಲಿ ಜೀವ ಉಳಿಸಿಕೊಳ್ಳೋಣವೆಂದರೆ ಒಟ್ಟಾರೆ ತಾಪಮಾನದಲ್ಲಿ ಆಗಿರುವ ಏರಿಕೆ ಫಂಗಸ್ ಅನ್ನು ಹೆಚ್ಚು ಪ್ರಬಲವಾಗಿಸಿ ಕಪ್ಪೆಗಳನ್ನು ದುರ್ಬಲವಾಗಿಸಿದೆ. ಇಷ್ಟರ ಮೇಲೆ ನಗರೀಕರಣದ ಪರಿಣಾಮವೂ ಬಹಳ ದೊಡ್ಡದಾಗಿಯೇ ಇದೆ. ನದಿಗಳಿಗೆ ಹರಿಯ ಬಿಡುವ ನಗರ ತ್ಯಾಜ್ಯಗಳು ಅಥವಾ ಒಳಚರಂಡಿ ನೀರು ಕಪ್ಪೆಗಳನ್ನು ಕಾಡುತ್ತಿದೆ.

ಏನೇನೋ ಅಳಿದುಹೋಗಿದೆಯಂತೆ... ಹೀಗಿರುವಾಗ ಕಪ್ಪೆಗಳ ಅಳಿವಿನ ಬಗ್ಗೆ ಆತಂಕಪಡುವುದೇಕೆ? ಈ ಮಂಡೂಕಕ್ಕೂ ಮನುಷ್ಯನಿಗೂ ಏನು ಸಂಬಂಧ ಎಂಬ ಒರಟು ಪ್ರಶ್ನೆಯನ್ನು ನಾವು ಕೇಳಬಹುದು. ಆದರೆ ಇದಷ್ಟು ಸರಳ ಸಂಗತಿಯಲ್ಲ. ನಮ್ಮ ಪರಿಸರದ ಸಮತೋಲನದಲ್ಲಿ ಉಭಯವಾಸಿಗಳಿಗೆ ಬಹಳ ದೊಡ್ಡದೊಂದು ಪಾತ್ರವಿದೆ.

ಕಪ್ಪೆಗಳು ‘ಅಲ್ಗೀ’ ಎಂದು ಕರೆಯಲಾಗುವ ಬಂಡೆಗಳಿಗೆ ಅಂಟಿಕೊಂಡಿರುವ ಸೂಕ್ಷ್ಮ ಸಸ್ಯಗಳನ್ನು ತಿನ್ನುತ್ತವೆ. ಹೀಗೆ ತೆರವಾದ ಸ್ಥಳ ಅನೇಕ ಮೃದ್ವಂಗಿಗಳ ಆವಾಸಸ್ಥಾನವಾಗುತ್ತವೆ. ಈ ಸೂಕ್ಷ್ಮ ಬದಲಾವಣೆಗಳಿಗೂ ಮೀನುಗಳ ವಂಶಾಭಿವೃದ್ಧಿಗೂ ಸಂಬಂಧವಿದೆ. ಇನ್ನು ಸಲಮಾಂಡರ್‌ನಂಥ ಉಭಯವಾಸಿಗಳ ಚರ್ಮದಲ್ಲಿರುವ ಔಷಧೀಯ ಗುಣ ಮನುಷ್ಯನಿಗೆ ಬೇಕಾಗಿರುವುದು.

ಕಪ್ಪೆಗಳು ಅಳಿಯುವುದು ಎಂದರೆ ಮನುಷ್ಯನ ಅಳಿವಿಗೆ ಬರೆಯುತ್ತಿರುವ ಮುನ್ನುಡಿಯಂತೆ. ‘ಕಪ್ಪೆಯಿರುವ ಬೋಗುಣಿಯನ್ನು ಬಿಸಿ ಮಾಡುತ್ತಿದ್ದೇನೆ’ ಎಂಬ ಭ್ರಮೆಯಲ್ಲಿ ಮನುಷ್ಯನಿದ್ದಾನೆ. ಮನುಷ್ಯನೂ ಇದೇ ಬೋಗುಣಿಯಲ್ಲೇ ವಾಸವಾಗಿದ್ದಾನೆ. ಕಪ್ಪೆಯ ಸಾವು ಮನುಷ್ಯನ ಅಳಿವಿಗೆ ಸಂಬಂಧಿಸಿದ ಮುನ್ನೆಚ್ಚರಿಕೆಯಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.