ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪಾಠಕ್ಕೊಬ್ಬರೇ ಜಯಣ್ಣ

Last Updated 19 ಜುಲೈ 2014, 19:30 IST
ಅಕ್ಷರ ಗಾತ್ರ

ಅಪ್ಪನ ಜತೆ ಹೊಲ ಉಳುತ್ತ ಬೆಳೆದ ಹುಡುಗನೊಬ್ಬ ಮುಂದೊಂದು ದಿನ, ಉಳುಮೆ ಮಾಡುವುದಷ್ಟೇ ಅಲ್ಲ, ಅತ್ಯುತ್ತಮವಾಗಿ ಬೆಳೆ ತೆಗೆಯುವುದು ಹೇಗೆಂಬ ಆಧುನಿಕ ಕೃಷಿ ತಂತ್ರಗಳನ್ನು ಸಾಮಾನ್ಯ ರೈತನಿಗೂ ತಿಳಿಹೇಳಿ, ಹೊಸ ಅರಿವು ಮೂಡಿಸಲು ಶ್ರಮಿಸಿ, ಹೆಸರಾಗುವುದು ಸಾಮಾನ್ಯ ಬೆಳವಣಿಗೆ ಏನಲ್ಲ.

ಬೆಂಗಳೂರು ಆಕಾಶವಾಣಿಯ ‘ಕೃಷಿ ರಂಗ’ದ ಮೂಲಕ ಇಂಥ ವಿಶಿಷ್ಟ ಸಾಧನೆ ಮಾಡಿ, ನಾಡಿನಾದ್ಯಂತ ಚಿರಪರಿಚಿತರಾಗಿದ್ದವರು ಎಂ.ಟಿ. ಜಯಣ್ಣ (ಏಪ್ರಿಲ್ 15, 1931 – ಜುಲೈ 09, 2014). ಅವರು ತಮ್ಮ ೮೩ನೇ ವಯಸ್ಸಿನಲ್ಲಿ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿನ ಮಲ್ಲೋಹಳ್ಳಿಯ ತೋಟದ ಮನೆಯಲ್ಲಿ ನಿಧನರಾದರು. ನಿವೃತ್ತಿಯ ಬಳಿಕ ಅವರು ಜೀವನದುದ್ದಕ್ಕೂ ತಮಗೆ ಪ್ರಿಯವಾಗಿದ್ದ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. 

ಸಾಮಾನ್ಯ ರೈತರಾದ ಕೋಟೆ ತಿಮ್ಮಪ್ಪ, ಬೈಲಮ್ಮ ದಂಪತಿಗಳ ಮಗನಾಗಿ ಹುಟ್ಟಿ, ಸ್ಥಳೀಯ ಶಿಕ್ಷಣದ ಬಳಿಕ, ಬೆಂವಿವಿಯಲ್ಲಿ ಕೃಷಿಯಲ್ಲಿ ಪದವಿ ಪಡೆದ ಜಯಣ್ಣ, ಜರ್ನಲ್ ಅಸಿಸ್ಟೆಂಟ್ ಆಗಿ ಕೃಷಿ ಇಲಾಖೆಗೆ ಸೇರಿದರು. ಸ್ವಲ್ಪ ಕಾಲದಲ್ಲಿಯೇ, ಕೃಷಿ ವಿವಿಯಲ್ಲಿ ಫಾರಂ ಮೆನೇಜ್‌ಮೆಂಟ್‌ಗೆ ವ್ಯವಸ್ಥಿತ ರೂಪ ಕೊಟ್ಟ ಇರ್ವಿನ್ ಜೆ ಲಾಂಗ್ ಎಂಬ ತಜ್ಞರ ಸಹಾಯಕರಾಗಿ ಕೆಲಸ ಮಾಡುವ ಮೂಲಕ ವಿಭಿನ್ನವಾದ ಅನುಭವ ಗಳಿಸಿಕೊಂಡರು.

ಅದರ ಫಲವಾಗಿ, ಬೆಂಗಳೂರು ಆಕಾಶವಾಣಿಯಲ್ಲಿ ಕೃಷಿಗಾಗಿಯೇ ಪ್ರತ್ಯೇಕ ವಿಭಾಗ ಪ್ರಾರಂಭವಾದಾಗ, 1967ರಲ್ಲಿ ಎರವಲು ಸೇವೆ ಮೇರೆಗೆ ಫಾರಂ ರಿಪೋರ್ಟರ್ ಆಗಿ ಆಕಾಶವಾಣಿಗೆ ಕಾಲಿಟ್ಟರು; ಮೂರೇ ವರ್ಷಗಳಲ್ಲಿ (1970) ಕೃಷಿರಂಗ ವಿಭಾಗಾಧಿಕಾರಿಯಾಗಿ ಅಲ್ಲಿಯೇ ಕಾಯಂ ಆದರು. ಅಲ್ಲಿಂದ ಶುರುವಾದದ್ದು ಜಯಣ್ಣ ಅವರ ‘ಕೃಷಿರಂಗ’ ಪರ್ವ. ‘ಕೃಷಿರಂಗ’ ಎಂದರೆ ಆಕಾಶವಾಣಿ ಎನ್ನುವಷ್ಟು ಆ ಕಾರ್ಯಕ್ರಮ ಜನಪ್ರಿಯತೆ ಗಳಿಸಿತು.

ಜಯಣ್ಣ ಅವರಿಗೆ, ಆಕಾಶವಾಣಿಯ ಮೂಲಕವೇ ರೈತರಿಗೆ ಸುಲಭ ಸಂವಹನವಾಗುವ ರೀತಿಯಲ್ಲಿ ಆಧುನಿಕ ಕೃಷಿ ಪಾಠಗಳನ್ನು ಬೋಧಿಸಬಹುದೆನ್ನುವ ಆಲೋಚನೆ ಮತ್ತು ಅದಕ್ಕೆ ಬೇಕಾದ ತಂತ್ರಗಾರಿಕೆಗಳ ಹೊಳಹು ಸಿಕ್ಕಿದ್ದು ಎರಡು ನೆಲೆಗಳಲ್ಲಿ: 1972ರಲ್ಲಿ ವಿಶ್ವಸಂಸ್ಥೆ ಫಿಲಿಪೈನ್ಸ್‌ನಲ್ಲಿ ನಡೆಸಿದ ಮೂರು ತಿಂಗಳ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ದೊರೆತ ಶಿಕ್ಷಣ ಮೊದಲನೆಯ ನೆಲೆ. ಆಕಾಶವಾಣಿಯಲ್ಲಿ ಕೃಷಿ ವಿಷಯಗಳ ಪ್ರಸಾರ ಕುರಿತಂತೆ ಬೆಂಗಳೂರಲ್ಲಿ 1978ರಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದೊರೆತ ಪರಿಣತರ ಬೋಧನೆ ಎರಡನೆಯ ನೆಲೆ.

ಶಾಲೆಗೆ ಹೋಗಿ ಕಲಿಯಲಾಗದ ನಮ್ಮ ರೈತ ಬಂಧುಗಳ ಮನೆಗೇ ಕೃಷಿಶಾಲೆಯನ್ನು ಆಕಾಶವಾಣಿ ಮೂಲಕ ತೆಗೆದುಕೊಂಡು ಹೋಗಿ ಯಶ ಕಂಡದ್ದು ಜಯಣ್ಣ ಅವರ ಹೊಸ ಪರಿಕ್ರಮವಾಗಿತ್ತು. ದೂರದ ಹಳ್ಳಿಯ ಮೂಲೆಯಲ್ಲಿಯೋ, ಹೊಲದ ಬದುವಿನಲ್ಲಿಯೋ ಟ್ರಾನ್ಸಿಸ್ಟರ್‌ಗೆ ಕಿವಿಯಾನಿಸಿ ಕೂತ ರೈತಾಪಿಗಳಿಗೂ ಮನನವಾಗುವಂತೆ ಕೃಷಿಯ ಆಧುನಿಕ ತತ್ವಗಳನ್ನು ಕೇವಲ ಮಾತಿನ ಮೂಲಕವೇ ತಿಳಿಸಿಕೊಡುವುದು ಸುಲಭವೇನಲ್ಲ.

ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಉತ್ತಮ ವಾಕ್ ಚತುರರಾಗಿದ್ದ ಜಯಣ್ಣ– ರೈತರಿಗೂ, ರೈತ ಮಹಿಳೆಯರಿಗೂ ಅಗತ್ಯವಾಗಿದ್ದ ಅನೇಕ ವಿಷಯಗಳನ್ನು ಕೇವಲ ಪಾಠವಾಗಿ ಹೇಳಿ ಮುಗಿಸದೆ, ಪರೀಕ್ಷೆಗಳನ್ನೂ ನಡೆಸಿ, ಉತ್ತಮ ಅಂಕ ಗಳಿಸಿದವರಿಗೆ ಕೋಳಿಪಿಳ್ಳೆಗಳಿಂದ ಹಿಡಿದು ಎತ್ತಿನಗಾಡಿ, ನೀರೆತ್ತುವ ಪಂಪುಗಳವರೆಗೆ ಅನೇಕ ವಿಧವಾದ ಬಹುಮಾನಗಳನ್ನು ದೊರೆಯುವಂತೆ ಮಾಡಿದ್ದು ಅವರ ವಿವೇಕ ಮತ್ತು ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು.

ಗ್ರಾಮೀಣ ರೈತರನ್ನು ಗಮನದಲ್ಲಿಟ್ಟುಕೊಂಡು ಅವರು ರೂಪಿಸಿ, ಪ್ರಸಾರ ಮಾಡುತ್ತಿದ್ದ ಪಾಠ-ಪ್ರಯೋಗಗಳು  ರಾಷ್ಟ್ರೀಯಮಟ್ಟದಲ್ಲಿಯೂ ತಜ್ಞರ ಕುತೂಹಲ ಕೆರಳಿಸಿದ್ದವು. ನಗರದ ವಿದ್ಯಾವಂತರಿಗೆ ಕೃಷಿ ಪಾಠಗಳು ಅರ್ಥವಾಗದಿದ್ದರೂ, ಅಗತ್ಯವಿಲ್ಲದಿದ್ದರೂ, ಜಯಣ್ಣ ಅವರ ನುಡಿ ಸೊಗಸಿಗಾಗಿಯೇ ಹಲವರು ಆ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದರು.

ಹಳ್ಳೀ ಹಾಡುಗಳ ಬಗೆಗೆ ಪ್ರೀತಿ ಇರಿಸಿಕೊಂಡಿದ್ದ ಆಗಿನ ಆಕಾಶವಾಣಿ ನಿರ್ದೇಶಕ ರಜನೀಕಾಂತ ರಾವ್ ಅವರು ನೀಡಿದ ಒತ್ತಾಸೆಯಿಂದಾಗಿ ಆಕಾಶವಾಣಿ ಮೂಲಕ ಗ್ರಾಮೀಣ ಜನಪದ ಕಲಾವಿದರಿಗೆ ಹಿಂದೆಂದೂ ಇರದಷ್ಟು ಅವಕಾಶಗಳನ್ನು ಜಯಣ್ಣ ಸೃಷ್ಟಿಸಿಕೊಟ್ಟಿದ್ದರು. ಜೀಶಂಪ, ಎಚ್.ಎಲ್. ನಾಗೇಗೌಡ, ಗೊರುಚ, ಕೆ.ಆರ್. ಲಿಂಗಪ್ಪ, ಅಂತಹ ಅನೇಕ ಜಾನಪದಾಸಕ್ತರು ಆಕಾಶವಾಣಿಯ ಮೂಲಕ ಜನಗಳ ಬಳಿಗೆ ಹೋಗಲು ಜಯಣ್ಣ ಅವರು ಪ್ರಮುಖ ಕಾರಣ ಎಂದರೆ ತಪ್ಪಾಗದು.

ಆಕಾಶವಾಣಿ ಸೇವೆಯಿಂದ 1989ರಲ್ಲಿ ನಿವೃತ್ತರಾದ ಮೇಲೆಯೂ ಕೃಷಿ ಮತ್ತು ಗ್ರಾಮೀಣ ರೈತರನ್ನು ಮರೆಯದೆ, ‘ಚುಂಚನಗಿರಿ’ ಪತ್ರಿಕೆಗೆ ಸ್ವಲ್ಪ ಕಾಲ ಕೆಲಸ ಮಾಡಿ, ಬಳಿಕ ತಾವೇ, ‘ಕಲ್ಪವೃಕ್ಷ’ ಎಂಬ ಪತ್ರಿಕೆಯನ್ನು ಹೊರತರುವ ಪ್ರಯತ್ನ ಮಾಡಿದರು. ಪತ್ರಿಕೆ ಸಾಧ್ಯವಾಗದೆ ಹೋದಾಗ, ತಾವು ಇತರರಿಗೆ ಹೇಳಿದ ಪಾಠಗಳನ್ನು ಸ್ವಯಂ ಪ್ರಯೋಗಿಸಿ, ಏನಾದರೂ ಸಾಧಿಸಿ ನೋಡಬೇಕು ಎಂಬ ಉತ್ಸುಕತೆಯಲ್ಲಿ ತನ್ನೂರಿನ ದಿಣ್ಣೆ ಬಯಲಲ್ಲಿ ನೇರ ದ್ರಾಕ್ಷಿ ಕೃಷಿಗೆ ಇಳಿದರು. ಅದು ‘ಬಂಗಾರದ ಮನುಷ್ಯ’ ಸಿನಿಮಾದ ರಾಜೀವಪ್ಪನ ರೀತಿ ಇದ್ದಂತೆ.

ಸಾವಯವ ಮತ್ತು ಶೂನ್ಯ ಕೃಷಿ ಪದ್ಧತಿಗಳನ್ನು ಎಲ್ಲಾ ಬೆಳೆಗಳಿಗೂ ಅನ್ವಯಿಸುವುದು ಸಾಧ್ಯವಿಲ್ಲವೆಂದು ತಿಳಿದಿದ್ದರಿಂದ, ಇವರು ರಾಸಾಯನಿಕ ಮತ್ತು ಕ್ರಿಮಿನಾಶಕಗಳನ್ನು ದ್ರಾಕ್ಷಿ ಬೆಳೆಗೆ ಬಳಸುತ್ತಿದ್ದರು. ಆದರೆ, ಅದರಲ್ಲೂ ಒಂದು ನೈತಿಕ ಎಚ್ಚರಿಕೆಯನ್ನು ಇಟ್ಟುಕೊಂಡಿದ್ದುದು ಗಮನಿಸಬೇಕಾದ ಅಂಶ. ‘ಒಂದೆರಡು ಟನ್ ಇಳುವರಿ ಕಡಿಮೆಯಾದರೂ ಚಿಂತಿಸಬೇಡ; ಗರ್ಭಿಣಿಯರು, ಮಕ್ಕಳು, ರೋಗಿಗಳೂ ತಿನ್ನುವ ಹಣ್ಣಿಗೆ ಅತಿ ವಿಷಗಳನ್ನು ಸುರಿಯಬೇಡ;  ಔಷಧಿ ಯುಕ್ತ ಹಣ್ಣನ್ನು ನೀನು ಹೇಗೆ ತಿನ್ನುವುದಿಲ್ಲವೋ ಹಾಗೆಯೇ ಅವರಿಗೂ ನಾವು ಕೊಡಬಾರದು’ ಎಂದು ಮಗನಿಗೆ ತಿಳಿ ಹೇಳಿದ್ದರು.

ಅನಾರೋಗ್ಯದಿಂದ ಮಾತು ನಿಲ್ಲುವ ಸಂದರ್ಭದಲ್ಲಿ ತಮ್ಮನ್ನು ನೋಡಲು ಬಂದ ಉದ್ಯಮಿಯೊಬ್ಬರನ್ನು ಜಯಣ್ಣನವರು ಕೇಳಿದ್ದು– ‘ನಮ್ಮ ರೈತರಿಗೆ ಯಾವ ಹೊಸ ತಳಿ ಬೀಜಗಳನ್ನು ಅಭಿವೃದ್ಧಿ ಪಡಿಸಿದ್ದೀರಿ? ಅವನ್ನು ಅತಿ ಕಡಿಮೆ ಬೆಲೆಗೇ ಕೊಡಿ’. ಕೃಷಿಯೇ ಜೀವನವೆಂಬಂತೆ ಬದುಕಿದ್ದ ಜಯಣ್ಣ ತಮ್ಮ ಸಹಾಯಕಿಯಾಗಿದ್ದ ದಲಿತ ಹೆಣ್ಣುಮಗಳಲ್ಲಿ ತಾಯಿಯನ್ನು ಕಂಡಿದ್ದರು. 

ಕೃಷಿ–ಜಾನಪದ ಕ್ಷೇತ್ರಗಳಲ್ಲಿನ ಸಾಧನೆ ವಿಶೇಷಗಳನ್ನು ಗೌರವಿಸಿ, ಜಯಣ್ಣ ಅವರಿಗೆ ‘ಭಾರತ ಕೃಷಿ ಸಮಾಜ’ ರಾಷ್ಟ್ರೀಯ ಪ್ರಶಸ್ತಿ ಜೊತೆಗೆ, ಕರ್ನಾಟಕ ಜಾನಪದ ಅಕಾಡಮಿ ಪುರಸ್ಕಾರ,  ಜಾನಪದ ಲೋಕೋತ್ಸವ ಪುರಸ್ಕಾರ ಸೇರಿದಂತೆ ಹಲವು ಗೌರವಗಳು ಸಂದಿವೆ. 2006ರಲ್ಲಿ ಕನಸವಾಡಿಯಲ್ಲಿ ನಡೆದ ದೊಡ್ಡಬಳ್ಳಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರದಾಗಿತ್ತು. ಹೆಗ್ಗೋಡಿನ ಸುಬ್ಬಣ್ಣನವರಂತೆ ಮಲ್ಲೋಹಳ್ಳಿಯ ಜಯಣ್ಣನವರೂ ‘ಮ್ಯಾಗ್ಸೆಸೆ’ ಗೌರವಕ್ಕೆ ಅರ್ಹರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT