ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣವರ್ಣದ ಪುಟ್ಟಪೋರ

ಕವಿತೆ
Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

1
ಗರಿಮುರಿಯದ, ಗೇಣರಿಯದ
ಬೆಣಚು ಬಣ್ಣ ಶಿಲೆಯ
ಕುಸುರಿಕಲೆ ಸೂಟುಬೂಟು
ಕುಚ್ಚುಪೇಟ ಧರಿಸಿದ ಚಾಮರಾಜರು
ಗಾಳಿಮಳೆಗೆ ಕೆಂದದೆ
ಬಿಸಿಲ ಬೇಗೆಗೆ ಬೆಯ್ಯದೆ
ಸಿಮೆಂಟ್ ಛತ್ರಿ ಚಾಮರದಡಿ
ಎದೆಯುಬ್ಬಿಸಿ ನಗುಗಣ್ಣು ಬಿಟ್ಟು
ಬಿಜಿ ಎಂದರೆ ಬಿಜಿಯ
ಸರ್ಕಲ್‌ನಲ್ಲಿ ನಿಂತೇ ಇದ್ದರು ದಣಿವರಿಯದೆ.

2
ವ್ಯಾಸಕಾರ ವಿಶಾಲ ಸರ್ಕಲ್ ಎಡಕ್ಕೆ
ತರಕಾರಿ ಹಣ್ಣುಹಂಪಲು ಹೂವು ಮಾರುಕಟ್ಟೆ
ಬಲಕ್ಕೆ ಬ್ಯಾಂಕುಗಳು ಎ.ಟಿ.ಎಂ. ಸಹಿತ
ಎದುರಿಗೆ ಕಣ್ಣು ಕೋರೈಸುವ
ರಾಜಸ್ತಾನಿ ಫ್ಯಾನ್ಸಿ ಸ್ಟೋರುಗಳು
ಶೆಟ್ಟರ ಚಿನ್ನಬೆಳ್ಳಿ ಅಂಗಡಿ ಸಾಲು
ಮಂಗಳೂರು ಪಾತ್ರೆ ಅಂಗಡಿ ಪಕ್ಕವೆ
ಅಯ್ಯಂಗಾರ್ ಬೇಕರಿ 
ಪ್ರಾವಿಜನ್ ಸ್ಟೋರ್ಸ್ ಮುಗಿಸುವ ಸೂಪರ್‌ಮಾರ್ಕೆಟ್
ಅಂಗೆ ಸರಿದರೆ ಕೇರಳಾಪುರ ಮಿಲಿಟರಿ ಹೋಟೆಲ್
ಪಕ್ಕವೆ ಮಾಸಲು ಬೋರ್ಡು ಸರ್ಕಾರಿ ಆಸ್ಪತ್ರೆ
ದಾಪು ಕಾಲಾಕಿದರೆ ಅಲ್ಲಾಹು ಮಸೀದಿ

3
ಈ ಲೋಕ ವ್ಯಾಪಾರ ನೋಡಿ
ಬೆಂದು ಬಸವಳಿದ ಸೂರ್ಯ
ಬೆಂಕಿ ಉಗುಳಿ ಉರಿಗಾಳಿ ಬಿಡುತ್ತ
ತೊಬೆಚ್ಚನೆ ಬೆವರು ಬರಿಸುತ್ತಿದ್ದ.

4
ಈ ಗೌಜುಗದ್ದಲ ಸರ್ಕಲ್‌ನಲ್ಲಿ
ಕೂದು ಹೊಲೆವ ಚಪ್ಪಲಿ ರ್‍ಯಂಪೆ ಬೋಗುಣಿ ನೀರ
ಸಾಮಾನು ಸರಂಜಾಮುಗಳ ಸರಮಾಲೆ ನಡುವೆ
ನೆಲವ ಹಾಸಿ ಆಕಾಶವ ಹೊದ್ದು
ತೋಳತೆಕ್ಕೆ ಮಾಡಿ
ಮೂಗು ಮುತ್ತಿನಂತಿದ್ದ
ಮುಖ ಕುಂಭದಂತಿದ್ದ
ಮುದ್ದು ಗಿಡ್ಡ ಕರುವಿನ
ನೀಲಿ ಅಂಗಿ ಬಿಳಿ ಚೆಡ್ಡಿಯ
ಕೃಷ್ಣವರ್ಣದ ಪುಟ್ಟಪೋರ
ಸರ್ಕಲ್ ಶಬ್ದಗಳಿಗಂಜದೆ
ಬಿರುಬಿಸಿಲ ಬೇಗೆಗೆ ಬೆನ್ನೊಡ್ಡಿ
ನಿರುಮ್ಮಳ ನಿದ್ರೆಗೈಯ್ಯುವ ಪರಿಗೆ
ಮಾರು ಹೋದ ಸೂರ್ಯದೇವನೆ
ತೆಳುಗಾಳಿ ತೆರೆಬೀಸಿ
ಬೆಚ್ಚಗೆ ಕರಗಿ ಹೋಗಿದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT