ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಗೊಂದು ಪತ್ರ

ಕವಿತೆ
Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಆಶ್ಚರ್ಯಕ್ಕಿಂತಲೂ ಮಿಗಿಲಾಗಿ ನಗುತ್ತಿರಬಹುದು
ಲ್ಯಾಪ್‌ಟಾಪ್ ತೊಡೆಮೇಲೆ
ಇಟ್ಟುಕೊಂಡು ನಾನು ಕಳುಹಿಸಿರುವ
ಇ-ಮೇಲ್ ಪತ್ರವನ್ನು ಓದುತ್ತಾ.
ಮಗನಿಗೆ ನಿನ್ನ ಕೊಲೆಮಾಡಿದವನ ಹೆಸರು.

ಮೊನ್ನೆ ಸರ್ಕಲ್ ಬಳಿ ನಡೆದ ಗಲಾಟೆಯಲ್ಲಿ
ಪಕ್ಕದ ಮನೆ ಹುಸೇನಜ್ಜನ ಕೈ ಕತ್ತರಿಸಿದರು.
ಸಕ್ಕರೆಗಿಂತ ಬೆಲ್ಲದ ರೇಟು ದುಬಾರಿಯಾಗಿದೆ
ಅದಕ್ಕೆ ಸಕ್ಕರೆಯನ್ನೇ ಬಳಸುತ್ತಿದ್ದೇನೆ
ಕಾಫಿ-ಟೀಗೆ ಪಾಕೆಟ್ ಹಾಲಿನ ಜೊತೆಯಲ್ಲಿ.

ತರಕಾರಿಗಿಂತ ಸೂರ್ಯನ ಬೆಳಕನ್ನೇ
ಕಾಣದೆ ಸುಂದರ ಬೆಳಕಿನಲ್ಲಿ ಬೆಳೆದ ಕೋಳಿಯ ಮಾಂಸ
ರುಚಿಯೆನ್ನಿಸುತ್ತಿದೆ.

ಅಜ್ಜ ಬೆಳೆದ ಕ್ವಿಂಟಾಲ್ ಹತ್ತಿಯ ರೇಟಿಗೆ
ಒಂದು ಕಾಟನ್ ಶರ್ಟ್ ಸಹ ದಕ್ಕದೆ
ಇಂಪೋರ್ಟೆಡ್ ಪಾಲಿಸ್ಟರ್ ಅಂಗಿಯೇ
ಮೈಯ ಮುಚ್ಚಿದೆ. 

ಮೊನ್ನೆ ಅಜ್ಜನೂ ಸತ್ತುಹೋದ
ಆತ್ಮಹತ್ಯೆಮಾಡಿಕೊಂಡು ಕೀಟಬಾಧೆಗೆ, ಸಾಲಬಾಧೆಗೆ.
ಈಗ ಅವನು ನಡೆದಾಡಿದ ತೋಟ ಹೊಲ ಗದ್ದೆಗಳಲ್ಲಿ
ನಕ್ಷತ್ರಗಳೇ ನಾಚುವಂತಹ
ಗಗನ ಚುಂಬಿಕಟ್ಟಡ, ಶಾಪಿಂಗ್ ಮಾಲ್‌ಗಳು ಅರಳುತ್ತಿವೆ.
ಇಡೀ ಕೈ ತೋಟವೇ
ಶಾಪಿಂಗ್ ಮಾಲ್‌ನಲ್ಲಿ ಫ್ರೆಶ್ ಆಗಿ ಸಿಗುತ್ತೆ.

ದಲಿತರ ಕೇರಿಯಲ್ಲಿ ಮೊಬೈಲ್ ಬಂದಿದ್ದರೂ
ಅಗ್ರಹಾರಗಳಲ್ಲಿ ಇನ್ನೂ ಇದೆ ಜನಿವಾರ.
ನಮ್ಮ ಓಟಿಗೆ ಈಗ ತುಂಬಾ ಬೆಲೆ ಬಂದಿದೆ.
ಪಾರ್ಲಿಮೆಂಟು ಪ್ರೈಮರಿ ಶಾಲೆಗಳ ಸದ್ದಡಗಿಸಿದೆ.
ಗಣಿಯೊಳಗಿನ ಅದಿರು ಇಂಡಿಯಾವನ್ನು ಮಿಂಚಿಸುತ್ತಿದೆ.
ವಾಸ್ತುವಿಗೂ, ಶಾಸ್ತ್ರಕ್ಕೂ, ಜ್ಯೋತಿಷ್ಯಕ್ಕೂ
ವಿಜ್ಞಾನದ ತಳಕು ಹಾಕುತ್ತಿದ್ದಾರೆ
ಸಾಧುಗಳು ಸಂತರು ಸನ್ಯಾಸಿಗಳು.
ಕಲ್ಲಾಗಿ ಸುಮ್ಮನೆ ಮಲಗಿರುವ ಬುದ್ಧನನ್ನು ಹೊಡೆದು
ಉರುಳಿಸಿದ್ದಾರೆ.
ಆದರೆ
ನೀನು ಮಾತ್ರ ಎಲ್ಲರ ಕೈಗಳ ನೋಟುಗಳಲ್ಲಿ ಅದೇ ನಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT