ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ ನೈಟ್

ಕವಿತೆ
Last Updated 24 ಮೇ 2014, 19:30 IST
ಅಕ್ಷರ ಗಾತ್ರ

ಆನ್‌ಲೈನಿನ ಕಾಳಜಿಯೇ ಬೇರೆ
ಮೊಬೈಲಿನ ಮಾತುಗಾರಿಕೆಯೇ ಬೇರೆ
ಫೇಸ್ ಬುಕ್ಕಿನ ಫೇಸಿಗೂ ನಿಜವಾದ ಫೇಸಿಗೂ
ಇಷ್ಟು ಅಂತರವಿಟ್ಟು ನೀನಿದ್ದರೇನು ಹತ್ತಿರ

ಒಂದೇ ಮನೆಯೊಳಗಿದ್ದು ಕಂಪ್ಯೂಟರಲ್ಲಿ ಚ್ಯಾಟ್ ಮಾಡುವ
ಗಮ್ಮತ್ತಿನ ಮುಂದೆ ದಾಂಪತ್ಯವೂ ಬೋರು
ನೆಟ್ ಕೊರಿಯರ್‌ನವ ಹುಟ್ಟುಹಬ್ಬದ ಗುಲಾಬಿ ತಂದು ಕೊಡುವಾಗ
ಬಾಗಿಲ ಸಂದಿಯಲ್ಲಿ ನಿಂತು ಹೆಂಡತಿಯನ್ನು ನೋಡುವುದು
ಎ಼ಷ್ಟು ಚಂದ
ಬೇಗನೇ ಲಾಗ್ ಆನಾಗಿ ಅವಳ ಥ್ಯಾಂಕ್ಸ್‌ಗೆ
ಕಾಯುತ್ತ ಕೂರುವ ಆನಂದದಲ್ಲಿ
ಕೊಲ್ಲುತ್ತಲೇ ಇರು ಹಾಗೇ ಸುಮ್ಮನೆ
ಎಂಬ ಹುಡುಗಿಯಂತೆ ಅವಳು ಕಾಡಲು

ಅವಳ ರೂಮಲ್ಲಿ ಅವಳು ಯಾರನ್ನೋ ಲೈಕ್ ಮಾಡುತ್ತ
ತನ್ನ ರೂಮಲ್ಲಿ ಇವನು ಇನ್ನಾರೊಂದಿಗೋ ಷೇರ್ ಮಾಡುತ್ತ
ಬ್ಲಾಗಿನಲ್ಲಿ ಕಳೆದು ಚಾನೆಲ್‌ನಲ್ಲಿ ಎದ್ದು ಆಪ್‌ನಲ್ಲಿ ತಡಕಿ
ಇನ್ ಬಾಕ್ಸ್‌ನಲ್ಲಿ ಇಣುಕಿ ಕೊನೆಗೆ ಸೈನ್ ಔಟಾಗಿ

ಗಂಧ ತೀಡಿದವರಂತೆ ರಾತ್ರಿ ಮಂಚದ ಮೇಲೆ
ಎದುರು ಬದುರು ಕೂತು
ನೇರಾನೇರ ಮಾತನಾಡುವ ಸ್ಕಿಲ್‌ನ ತರಬೇತಿಗೆ
ನಾಳೆ ಜಾಯಿನ್ ಆಗಲು ತೀರ್ಮಾನಿಸುವಲ್ಲಿ

ಮಗೂಗೊಂದು ಸ್ಮಾರ್ಟ್ ಫೋನ್ ಬುಕ್ ಮಾಡಿ ಎಂದಳು
ಅವಳ ಹೊಟ್ಟೆಯಲ್ಲಿ ಮಗು ಕಾಲು ಆಡಿಸಿತು
ಎಂಥ ರೋಮಾಂಚನ
ತಕ್ಷಣ ಇದನ್ನು ಟ್ವೀಟ್ ಮಾಡಬೇಕು
ಇಬ್ಬರೂ ಎದ್ದರು
ಗುಡ್ ನೈಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT