ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಮಣ್ಣನ ಬೆಕ್ಕು

Last Updated 23 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಕಲ್ಲೂರು ಎಂಬ ಕಾಡಿನ ಊರಿನಲ್ಲಿ ತಿಮ್ಮಣ್ಣನೆಂಬ ಕೃಷಿಕನಿದ್ದ. ಅವನು ಎರಡೆಕರೆ ಗದ್ದೆಯಲ್ಲಿ ಸ್ವಲ್ಪ ತೋಟ ಮಾಡಿಕೊಂಡಿದ್ದ. ಒಂದು ಸಣ್ಣ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ.

ಗದ್ದೆಯಿದೆ ಎಂದ ಮೇಲೆ ದನಕರುಗಳನ್ನು ಸಾಕಿದ್ದ. ಮನೆಯಲ್ಲಿ ಇಲಿ ಜಿರಲೆಗಳ ಕಾಟಕ್ಕೆ ಬೇಸತ್ತ ತಿಮ್ಮಣ್ಣ ಬೆಕ್ಕೊಂದನ್ನು ಸಾಕಿದ್ದ.

ತಿಮ್ಮಣ್ಣ ಸಾಕಿದ ಬೆಕ್ಕು ಇಲಿಗಳನ್ನು ಹಿಡಿದು ತಿನ್ನುತ್ತಿತ್ತು. ಆದರೆ ಹೊಟ್ಟೆಗೆ ಸಾಕಾಗಲಾರದೇ ಮನೆಯಲ್ಲಿನ ತಿಂಡಿ ವಸ್ತುಗಳನ್ನು, ಹಾಲನ್ನು ಮನೆಯಲ್ಲಿ ಯಾರೂ ಇಲ್ಲದಾಗ, ರಾತ್ರಿ ಸಮಯದಲ್ಲಿ ಕದಿಯಲು ಶುರುಮಾಡಿತು. ದಿನಾಲು ತಿಂಡಿ-ಹಾಲು ಕದಿಯುವ ಬೆಕ್ಕಿನ ಬಗ್ಗೆ ತಿಮ್ಮಣ್ಣನಿಗೆ ಬೇಸರ ಮೂಡತೊಡಗಿತು.

ಏನಾದರೂ ಮಾಡಿ ಬೆಕ್ಕನ್ನು ಊರ ಹೊರಗೆ ಬಿಟ್ಟು ಬರಬೇಕೆಂದು ತಿಮ್ಮಣ್ಣ ಯೋಚಿಸಿ, ಊರ ಹೊರಗೆ ಬಿಟ್ಟುಬಂದ. ಹೀಗೆ ಮೂರ್ನಾಲ್ಕು ಬಾರಿ ಬೇರೆ ಬೇರೆ ಕಡೆ ಬಿಟ್ಟು ಬಂದರೂ ಬೆಕ್ಕು ಪುನಃ ಮನೆಗೆ ಬರುತ್ತಿತ್ತು. ಮತ್ತೆ ಕದಿಯಲು ತೊಡಗುತ್ತಿತ್ತು.

ಒಂದು ದಿನ ತಿಮ್ಮಣ್ಣ ಉಪಾಯದಿಂದ ಬೆಕ್ಕನ್ನು ಹಿಡಿದು ಚೀಲದಲ್ಲಿ ತುಂಬಿ ದೂರದ ಕಾಡಿಗೆ ನಡೆದ. ಸಂಜೆಯಾಯಿತು. ಕಾಡಿನಲ್ಲಿ ತುಂಬಾ ತುಂಬಾ ಒಳಗೆ ಸುಮಾರು ಕಿಲೋ ಮೀಟರ್ ದೂರದಲ್ಲಿ ಬಿಟ್ಟನು.

ತಿಮ್ಮಣ್ಣ ಎಷ್ಟು ದೂರ ಬಿಟ್ಟಿದ್ದನೆಂದರೆ ಕಾಡಿನಲ್ಲಿ ಕತ್ತಲು ಆವರಿಸುವುದಕ್ಕೆ ತೊಡಗಿದಂತಿತ್ತು. ಬೆಕ್ಕನ್ನು ಬಿಟ್ಟ ತಕ್ಷಣವೇ ಬೆಕ್ಕು ಸುಮ್ಮನೇ ಕುಳಿತು ಅಲ್ಲಿ ಇಲ್ಲಿ ವಾಸನೆ ಗ್ರಹಿಸುವುದಕ್ಕೆ ತೊಡಗಿತು.

ಬೆಕ್ಕನ್ನು ಬಿಟ್ಟ ತಿಮ್ಮಣ್ಣನಿಗೆ ತಾನು ಬಂದ ದಾರಿ ಮರೆತೇ ಹೋಗಿತ್ತು. ಅವನಿಗೆ ಒಂದು ಕ್ಷಣ ಏನು ಮಾಡಬೇಕೆಂದು ತೋಚಲೇ ಇಲ್ಲ. ಕೊನೆಗೆ ಆ ಬೆಕ್ಕು ಬಂದ ದಾರಿಯನ್ನು ಮೂಸುತ್ತ ಮೂಸುತ್ತ ದಾರಿಯೊಂದನ್ನು ಹುಡುಕಿ ಹೊರಟಿತು. ಆಶಾಕಿರಣವೊಂದು ಸಿಕ್ಕಿತೆಂಬಂತೆ ತಿಮ್ಮಣ್ಣ ಅದರ ಹಿಂದೆಯೇ ಬಂದನು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT