`ನೆಪೋಲಿಯನ್‌ನ ಚಿಕ್ಕ ತಮ್ಮ ಜೆರೋಂನ ಫೋಟೋ ನೋಟಿದಾಗ- ಅರೆ! ನಾನು ಚಕ್ರವರ್ತಿಯನ್ನು ಕಂಡ ಕಣ್ಣುಗಳನ್ನು ನೋಡುತ್ತಿದ್ದೇನಲ್ಲ ಎಂಬ ಅಚ್ಚರಿಯಾಯಿತು~ ಎಂದು ಬರೆಯುತ್ತಾರೆ ಫ್ರೆಂಚ್ ತತ್ವಜ್ಞಾನಿ ರೊಲಾಂಡ್ ಬಾರ್ಥಸ್ `ಕ್ಯಾಮೆರಾ ಲೂಸಿಡಾ~ ಎಂಬ ಪುಸ್ತಕದಲ್ಲಿ. ಇಂಥಹುದೇ ಅನುಭವ ಮಹಾತ್ಮ ಗಾಂಧೀಜಿಯನ್ನು ಕಂಡಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಕಂಡಾಗ ಉಂಟಾಗುತ್ತದೆ. ಈ ಅಪೂರ್ವ ಅನುಭಾವಿ, 96 ವರ್ಷಗಳ ಹಿರಿಯಜ್ಜ ಮಹಾತ್ಮ ಗಾಂಧೀಜಿಯವರನ್ನಷ್ಟೇ ಅಲ್ಲ- ರಮಣಮಹರ್ಷಿ, ಜಿಡ್ಡು ಕೃಷ್ಣಮೂರ್ತಿ ಹಾಗೂ ಕನ್ನಡದ ಹಿರಿಯ ಸಾಹಿತಿಗಳನ್ನು ಕಂಡವರು. ಇವರೊಂದಿಗಿನ ಅನುಭವವನ್ನು ನಮಗೆ ಕಣ್ಣಿಗೆ ಕಟ್ಟುವಂತೆ ವಿವರಿಸಬಲ್ಲರು ಕೂಡ.

ತ.ಸು.ಶಾಮರಾಯರು, `ಶಾಸ್ತ್ರಿಗಳು ಬಿಳಿಯ ಬಟ್ಟೆಗಳನ್ನು ಧರಿಸಿರುವ ಸನ್ಯಾಸಿ~ ಎಂದಿದ್ದಾರೆ. ತಲೆಗೆ ಬಿಳಿಯ ಬಟ್ಟೆಯನ್ನು ಕಟ್ಟಿಕೊಳ್ಳುವ ಇವರು ಕನ್ನಡದ ಮದರ್ ತೆರೆಸಾರಂತೆ ಕಾಣಿಸುತ್ತಾರೆ. `ನಾನು ಹಿಮಾಲಯಕ್ಕೆ ಹೋದಾಗ ಅಲ್ಲಿನ ಚಳಿಗೆ ತಲೆಗೆ ಬಟ್ಟೆ ಕಟ್ಟಲು ಪ್ರಾರಂಭಿಸಿದೆ. ಅದು ಹಾಗೆಯೇ ರೂಢಿಯಾಯಿತು ಅಷ್ಟೇ. ನಾನೆಂಥ ಸನ್ಯಾಸಿಯೂ ಅಲ್ಲ, ಸ್ವಾಮೀಜಿಯೂ ಅಲ್ಲ. ಮುಕುಂದೂರು ಸ್ವಾಮಿಗಳು ನಿಜವಾದ ಸನ್ಯಾಸಿಗಳು. ನಾನು ಅದೃಷ್ಟವಂತನಷ್ಟೇ. ಚಿಕ್ಕವಯಸ್ಸಿನಲ್ಲೇ ದೊಡ್ಡದೊಡ್ಡವರೆಲ್ಲ ಪರಿಚಯವಾದರು. ಗಾಂಧೀಜಿ, ರಮಣಮಹರ್ಷಿಗಳು, ನಿಟ್ಟೂರು ಶ್ರೀನಿವಾಸರಾಯರು, ಮುಕುಂದೂರು ಸ್ವಾಮಿಗಳು ಮುಂತಾದವರು. ನಾನೇನೂ ಅಲ್ಲ. ಹಾಗೆ ಹೇಳಿದರೆ ಅಹಂಕಾರದ ಮಾತಾಗುತ್ತದೆ~ ಎನ್ನುತ್ತಾರೆ ಶಾಸ್ತ್ರಿಗಳು.

ಇತ್ತೀಚೆಗೆ ಕೋಲಾರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿಯ ನಿವೃತ್ತ ಪ್ರೊಫೆಸರ್ ವೇಣುಗೋಪಾಲ್ ಅವರ ಮನೆಗೆ ಶಾಸ್ತ್ರಿಗಳು ಬಂದಿದ್ದರು. ಆಗ ಅವರ ನೆನಪಿನ ಅಕ್ಷಯ ಪಾತ್ರೆಯಿಂದ ಅನುಪಮ ಕಥಾ ಕುಸುಮಗಳೇ ಹೊರಬಿದ್ದವು.
ದೇವನೂರಿನಲ್ಲಿನ ರಾಘವಯ್ಯಂಗಾರ್, ಲಕ್ಷ್ಮೀಕಾಂತಸ್ವಾಮಿ ದೇವಾಲಯ, ಮಹಮ್ಮದ್ ಹಯಾತ್‌ಸಾಬ್, ಲಕ್ಷ್ಮೀಶನ ಜೈಮಿನಿ ಭಾರತ, ಲಕ್ಷ್ಮೀಶ ಕವಿಯ ಜಯಂತಿ, ಡಿ.ವಿ.ಜಿ, ಮಾಸ್ತಿ, ಬೇಂದ್ರೆ, ದೇವುಡು, ರಾಜರತ್ನಂ, ಸರೋಜಿನಿನಾಯ್ಡು, ವಿ.ಸೀ- ಹೀಗೆ `ಜ್ಞಾಪಕ ಚಿತ್ರಶಾಲೆ~ಯ ಮೆರವಣಿಗೆಯೇ ನಡೆಯಿತು.

`ಗಾಂಧೀಜಿ ಅಡುಗೆ, ಪಾತ್ರೆ ತೊಳೆಯುವುದು, ಕಸ ಗುಡಿಸುವುದು ಎಲ್ಲವನ್ನೂ ತಾವೇ ಮಾಡಿಕೊಳ್ಳುತ್ತಿದ್ದರು. ಇಂಥ ಕೆಲಸಗಳಿಗೆ ಪರರ ಅವಲಂಬನೆಯನ್ನು ವಿರೋಧಿಸುತ್ತಿದ್ದರು. ಇದನ್ನೇ ಅವರು ಸ್ವಾತಂತ್ರ್ಯ ಎಂದು ಕರೆದದ್ದು. ಆದರೆ ಈಗ ಹಳ್ಳಿಗಳಲ್ಲಿ ಬೇಸಾಯ ಮಾಡುವವರು ಕಡಿಮೆಯಾಗಿದ್ದಾರೆ. ರೈತರು ರಾಜಕೀಯ ಮುಖಂಡರ ಹಿಂದೆ ತಿರುಗುತ್ತಿದ್ದಾರೆ. ಹಳ್ಳಿಗಳಲ್ಲಿ ಪ್ರತಿಭೆಯಿದೆ. ರಾಜಕಾರಣಿಗಳು ಹಳ್ಳಿಗಳನ್ನು ನಾಶ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಜ್ಞಾನ, ಸಾಹಿತ್ಯ, ಚಿಂತನೆಗಳಲ್ಲಿ ಬಹಳಷ್ಟು ಬೆಳೆದ ದೇಶವಿದು. ಇಂದು ಕಟ್ಟಕಡೆಯ ದೇಶವಾಗಿದೆ~ ಎಂದು ವಿಷಾದಿಸಿದರು. ತಮ್ಮ ಮಾತಿಗೆ ಉದಾಹರಣೆ ಎನ್ನುವಂತೆ ತಮ್ಮದೇ ಒಂದು ಕವನವನ್ನು ಹೇಳಿದರು. ಆ ಕವಿತೆ-

ನಾವೇ ಮುಂದು

ವೇದ ಉಪನಿಷತ್ತುಗಳೆಲ್ಲ ನಮ್ಮದೇ
ರಾಮಾಯಣ ಭಾರತ ಭಗವದ್ಗೀತಾ ಪುರಾಣಗಳೆಲ್ಲ ನಮ್ಮದೇ
ವಸಿಷ್ಠ ವ್ಯಾಸ ವಿಶ್ವಾಮಿತ್ರ ದಾರ್ಶನಿಕರೆಲ್ಲ ನಮ್ಮವರೇ
ರಾಮಕೃಷ್ಣ ಬುದ್ಧ ಶಂಕರ ಬಸವ ನಮ್ಮವರೇ
ಲೋಕಕ್ಕೆಲ್ಲ ಕತ್ತಲು ಕವಿದಿದ್ದಾಗ ಬೆಳಕು ತೋರಿದವರಲ್ಲಿ ನಾವೇ ಮುಂದು
ನಮಗಿಂತ ಮುಂದಾರೂ ಇಲ್ಲ ನಾವೇ ಮುಂದು.
ಪಕ್ಕದಲ್ಲಿದ್ದವರು ಚೀಟಿ ಕಳಿಸಿ ಕೇಳಿದರು,
`ಅಯ್ಯಾ ಸ್ವಾಮಿ ಈ ಕಥೆಯೆಲ್ಲ ಹಿಂದಿನದ್ದಾಯಿತು, ಈಗಿನದ್ದು ಹೇಳು~
ಈಗಲೂ ಅಷ್ಟೇ ನಾವೇ ಮುಂದು.
ಜಾತಿ ಜಾತಿಗಳ ಜನ ಜನಾಂಗಗಳ ಕಿಚ್ಚನು ಹಚ್ಚಿ
ಕೇಕೆಯ ಹಾಕುತ ದೆವ್ವದ ಕುಣಿತವ ಕುಣಿಯುವುದರಲ್ಲೂ ನಾವೇ ಮುಂದು.
ಹೆಂಡದಂಗಡಿ ಕಸಾಯಿಖಾನೆ ಸಾಲಾಗಿರಿಸಿ
ಪಂಚತಾರೆಗಳಿಗೂ ಕಿಚ್ಚನು ಹಬ್ಬಿಸಿ
ರಂಕಲುರಾಟೆ ಆಡಿಸುವುದರಲ್ಲೂ ನಾವೇ ಮುಂದು.
ದೇಶವನ್ನೆಲ್ಲಾ ಲೂಟಿ ಮಾಡಿ ಲಾಟರಿ ಹಚ್ಚಿ
ದುಡಿಯದೆ ಪಡೆಯುವ ಐಷಾರಾಮಿ
ಭಂಡ ಜೀವನವ ಷಂಡದಿ ಬದುಕುವುದರಲ್ಲೂ ನಾವೇ ಮುಂದು.
ಗುಂಪು ಗುಂಪುಗಳ ಘರ್ಷಣೆ ನಡೆಸಿ
ಲಾಟಿ ಲೂಟಿ, ಚಾಟಿ ಏಟು, ದಂಗೆ ದರೋಡೆ, ಕೊಲೆ ಸುಲಿಗೆ
ಎಲ್ಲದರಲ್ಲೂ ನಾವೇ ಮುಂದು.
ಬೆಟ್ಟ ಗುಡ್ಡ, ಕಾಡು ಮೇಡು, ಕಲ್ಲು ಮುಳ್ಳು, ಮಣ್ಣು ಮರಳು
ಕಂಡ ಕಂಡದ್ದನ್ನು ಲೂಟಿ ಮಾಡಿ

ಜಂತರ್ ಮಂತರ್ ಜಾದು ಮಾಡಿ
ಕಂಬಿ ಮೇಲೆ ಅಂತರ್ ಪಲ್ಟಿ ಸರ್ಕಸ್ ಸೋಲಿಸಿ
ಕುಂತು ನಿಂತಲ್ಲೇ ಹಕ್ಕು ಚಲಾಯಿಸಿ ಪಕ್ಕಾ ಮಾಡುವುದರಲ್ಲೂ ನಾವೇ ಮುಂದು.
ಅಂದು ಇಂದು ಮುಂದು ಎಂದೂ ನಾವೇ ಮುಂದು.
ಆದರೂ ನೋಡಿ ಸೇರುವ ಮಂದಿ ನಮ್ಮನು ಕರೆವರು
`ಹಿಂದೂ~ ಎಂದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.